Tuesday, 26th November 2024

Thimmanna Bhagwat Column: ಆತ್ಮಹತ್ಯೆಗೆ ಪ್ರಚೋದನೆ ವಿಷಯದಲ್ಲಿ ಕಾನೂನಿನ ಚಿಂತನೆಯೇನು ?

ನ್ಯೂನ ಕಾನೂನು

ತಿಮ್ಮಣ್ಣ ಭಾಗ್ವತ್

ಆತ್ಮಹತ್ಯೆ ಎಂದರೆ ತನ್ನ ಸಾವನ್ನು ತಾನೇ ತಂದುಕೊಳ್ಳುವ ಉದ್ದೇಶಪೂರ್ವಕ ಕ್ರಿಯೆ. ತೀವ್ರವಾದ ಆಘಾತ,
ಪರಿಹಾರವಿಲ್ಲದ ಚಿಂತೆ, ಮಾನಸಿಕ ಖಿನ್ನತೆ ಅಥವಾ ಅಸ್ವಸ್ಥತೆ, ಅತಿಯಾದ ದುಶ್ಚಟಗಳು, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಅವಮಾನ ಮುಂತಾದ ಅನೇಕ ವಿಷಯಗಳು ವ್ಯಕ್ತಿಯೊಬ್ಬ ಅಂಥ ವಿಪರೀತ ಕ್ರಮ ಕೈಗೊಳ್ಳಲು ಕಾರಣವಾಗ ಬಹುದು. ಕೆಲವೊಮ್ಮೆ ಮಕ್ಕಳು ಕೂಡ ಸಣ್ಣ ಸಣ್ಣ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಕಂಡುಬರುತ್ತವೆ. ಭಾರತದಲ್ಲಿ ಆತ್ಮಹತ್ಯೆಯು ಕಾನೂನು ಪ್ರಕಾರ ಅಪರಾಧವಾಗುವುದಿಲ್ಲ.

ಆತ್ಮಹತ್ಯೆಗೆ ಯತ್ನ: ಭಾರತೀಯ ದಂಡ ಸಂಹಿತೆ 1860ರ 309ನೇ ಕಲಮಿನ ಪ್ರಕಾರ, ‘ಅತ್ಮಹತ್ಯೆಗೆ ಯತ್ನ’ ಅಪರಾಧವಾಗಿತ್ತು. ಆದರೆ 1987ರ ಮಾನಸಿಕ ಆರೋಗ್ಯ ಕಾಯ್ದೆಯ 115(1) ಕಲಮಿನ ಪ್ರಕಾರ ಅದನ್ನು ಅಪರಾಧ ವೆಂದು ಪರಿಗಣಿಸಲಾಗುವುದಿಲ್ಲ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಅಡಿಯಲ್ಲಿ ಐಪಿಸಿಯ ಕಲಮು 209ಕ್ಕೆ ಸಮನಾದ ಯಾವುದೇ ಕಲಮು ಇಲ್ಲವಾದರೂ, ಬಿಎನ್‌ಎಸ್ 226ರನ್ವಯ, ಯಾವುದೇ ವ್ಯಕ್ತಿ ಸಾರ್ವಜನಿಕ ಅಧಿಕಾರಿಯೊಬ್ಬರ ಕಾನೂನುಬದ್ಧ ಕಾರ್ಯನಿರ್ವಹಣೆಗೆ ತಡೆಯೊಡ್ಡುವ ಅಥವಾ ಹೀಗೇ ಮಾಡ ಬೇಕೆಂದು ಅವರನ್ನು ಒತ್ತಾಯಿಸುವ ಉದ್ದೇಶದಿಂದ ಆತ್ಮಹತ್ಯೆಗೆ ಯತ್ನಿಸುವುದು ಅಪರಾಧ.

ಆತ್ಮಹತ್ಯೆಗೆ ಪ್ರಚೋದನೆ: ಬಿಎನ್‌ಎಸ್ 2023ರ ಕಲಮು 108ರ (ಐಪಿಸಿ 306ರ) ಪ್ರಕಾರ, ಆತ್ಮಹತ್ಯೆಗೆ ಪ್ರಚೋದನೆ ಒಂದು ಗಂಭೀರ ಅಪರಾಧ. ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಅಂಥ ಆತ್ಮಹತ್ಯೆಯನ್ನು ಪ್ರಚೋದಿಸಿ ದವರಿಗೆ 10 ವರ್ಷದವರೆಗಿನ ಸಾದಾ ಅಥವಾ ಕಠಿಣ ಜೈಲುಶಿಕ್ಷೆ ಮತ್ತು ದಂಡ ಇವೆರಡನ್ನೂ ವಿಧಿಸಬಹುದು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಾಲಕ ಅಥವಾ ಬಾಲಕಿಯಾಗಿದ್ದರೆ ಅಥವಾ ಮಾನಸಿಕ ಅಸ್ವಸ್ಥರು ಅಥವಾ ಭ್ರಾಂತಿಯುಳ್ಳವರು ಆಗಿದ್ದರೆ, ಅಂಥ ಆತ್ಮಹತ್ಯೆಗೆ ಪ್ರಚೋದಿಸಿದ ವ್ಯಕ್ತಿಗೆ ಬಿಎನ್‌ಎಸ್ 107ನೇ ಕಲಮಿನ ಪ್ರಕಾರ ಮರಣದಂಡನೆ ಅಥವಾ ಆಜೀವ ಕಾರಾಗೃಹ ಅಥವಾ 10 ವರ್ಷದವರೆಗಿನ ಜೈಲುಶಿಕ್ಷೆ ಮತ್ತು ದಂಡ ವಿಧಿಸ ಬಹುದು. ಈ ಅಪರಾಧಗಳು ಗುರುತಿಸಬಹುದಾದ (ಕಾಗ್ನಿಜಬಲ್) ಮತ್ತು ಜಾಮೀನುರಹಿತ ಅಪರಾಧಗಳಾಗಿರುತ್ತವೆ. ಇಂಥ ಆಪಾದಿತರನ್ನು ಪೊಲೀಸರು ವಾರಂಟ್ ಇಲ್ಲದೆ ಬಂಧಿಸಬಹುದು.

ಐಪಿಸಿ ೩೦೬ನೇ ಕಲಮಿನ ಹಿನ್ನೆಲೆ: 1860ನೇ ಇಸವಿಯಲ್ಲಿ ಬ್ರಿಟಿಷರು ಭಾರತೀಯ ದಂಡ ಸಂಹಿತೆಯನ್ನು (ಐಪಿಸಿ) ಜಾರಿಗೆ ತಂದ ಸಂದರ್ಭದಲ್ಲಿ ಭಾರತದಲ್ಲಿ ‘ಸತೀ ಪದ್ಧತಿ’ ಇನ್ನೂ ಜೀವಂತವಿತ್ತು. ಮೂಲದಲ್ಲಿ ಪರಕೀಯ ದಾಳಿ ಯಿಂದ ಮಾನರಕ್ಷಣೆಗಾಗಿ ಅಥವಾ ಪತಿಭಕ್ತಿಯ ಪರಾಕಾಷ್ಠೆಯ ಪ್ರತೀಕವಾಗಿ ಸ್ವಯಂ ಇಚ್ಛೆಯಿಂದ ಅದು ನಡೆಯು ತ್ತಿದ್ದಿರಬಹುದಾದರೂ, ಕ್ರಮೇಣ ಸಾಮಾಜಿಕ ಅನಿಷ್ಟವಾಗಿ ಬೆಳೆದು, ಅದನ್ನು ಕೈಗೊಳ್ಳದವರು ಸಾಮಾಜಿಕ ವಾಗಿ ಅತೀವವಾದ ನಿಂದನೆ, ತುಚ್ಛೀಕರಣಗಳಿಗೆ ಒಳಗಾಗುವ ಸನ್ನಿವೇಶ ನಿರ್ಮಾಣವಾಯಿತು. ಅಂಥ ಪರಿಸ್ಥಿತಿಯಿಂದ ಒತ್ತಾಯಪೂರ್ವಕ ‘ಸತೀ’ ಪ್ರಕರಣಗಳು ನಡೆಯಲಾರಂಭಿಸಿದವು.

ಬಹುಶಃ 306ನೇ ಕಲಮಿನ ಅಳವಡಿಕೆಗೆ ಇದು ಹಿನ್ನೆಲೆಯಿರಬಹುದು. ಆತ್ಮಹತ್ಯೆ ಕೈಗೊಂಡ ವ್ಯಕ್ತಿಯ ಮೇಲೆ ಆಪಾದಿತರು ನಿರಂತರವಾಗಿ ನಡೆಸಿದ ದೌರ್ಜನ್ಯ, ದಬ್ಬಾಳಿಕೆ, ಆತ್ಮಗೌರವಕ್ಕೆ ಧಕ್ಕೆ ತರುವಂಥ ಹೀಯಾಳಿಕೆ, ಅವಮಾನ ಮುಂತಾದವುಗಳು ಅಂಥ ಆತ್ಮಹತ್ಯೆಯ ಹಿಂದಿನ ನೇರ ಕಾರಣಗಳಾಗಿದ್ದಾಗ, ಆತ್ಮಹತ್ಯೆಗೆ ಪ್ರಚೋದ ನೆಯ ಅಪರಾಧವು ಪರಿಗಣಿಸಲ್ಪಡುವುದು. ಉದಾಹರಣೆಗೆ, ವರದಕ್ಷಿಣೆಗಾಗಿ ಗಂಡ ಅಥವಾ ಅವನ ತಾಯಿ, ಇತರ ಸಂಬಂಧಗಳು ಸತತವಾಗಿ ನೀಡುವ ಅತೀವ ಕಿರುಕುಳ ಮತ್ತು ಕ್ರೂರ ಹಿಂಸೆಯು, ಆತ್ಮಹತ್ಯೆಗೆ ಮುಂದಾಗುವ ಅಂತಿಮ ನಿರ್ಧಾರಕ್ಕೆ ಮಹಿಳೆಯನ್ನು ನೂಕಿದರೆ, ಅಂಥ ಪ್ರಕರಣಗಳು ‘ಆತ್ಮಹತ್ಯೆಗೆ ಪ್ರಚೋದನೆ’ ಯ ಪರಿಧಿಯಲ್ಲಿ ಬರುತ್ತವೆ ಮತ್ತು ಬಿಎನ್‌ಎಸ್ 108ನೇ (ಐಪಿಸಿ 306) ಕಲಮಿನನ್ವಯ ಅಂಥವರು ಶಿಕ್ಷೆಗೆ ಗುರಿಯಾಗುತ್ತಾರೆ. ಇದು ಬಿಎನ್‌ಎಸ್‌ನ 85 ಮತ್ತು 86ನೇ ಕಲಮುಗಳ ಅಡಿಯಲ್ಲಿಯೂ (ಐಪಿಸಿ 498-ಎ) ಅಪರಾಧವಾಗುತ್ತದೆ. ಆದರೆ 108ರ ಅಡಿಯಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚು.

ಪ್ರವೀಣ ಪ್ರಧಾನ ವರ್ಸಸ್ ಉತ್ತರಾಂಚಲ (ಉತ್ತರಾಖಂಡ) ಸರಕಾರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾ ಲಯವು, “ಮೃತ ವ್ಯಕ್ತಿಯು ತನ್ನ ಮೇಲಧಿಕಾರಿಯಿಂದ ನಿರಂತರ ದಬ್ಬಾಳಿಕೆ ಮತ್ತು ಅವಮಾನಕ್ಕೆ ಒಳಗಾಗಿದ್ದಾರೆ. ಕಾನೂನಿಗೆ ವಿರುದ್ಧವಾದ ಬೇಡಿಕೆಗಳು, ದಿನಕ್ಕೆ 17 ತಾಸಿನವರೆಗು ಕೆಲಸ ಮಾಡಿಸಿಕೊಳ್ಳುವುದು, ಅಷ್ಟು ಕೆಲಸ ಮಾಡಿಸಿಯೂ ಅವಮಾನ ಮಾಡುವುದು, ರಾಜೀನಾಮೆ ನೀಡುವಂತೆ ನಿರಂತರವಾಗಿ ಒತ್ತಾಯ ಮಾಡುವುದು ಮುಂತಾದ ಸಂಗತಿಗಳು ಆಪಾದಿತರು ಮೃತನನ್ನು ಆತ್ಮಹತ್ಯೆಯಂಥ ವಿಪರೀತ ಕ್ರಮಕ್ಕೆ ದೂಡಿದರೆಂಬುದನ್ನು ಸೂಚಿಸುತ್ತವೆ” ಎಂದು ಅಭಿಪ್ರಾಯಪಟ್ಟಿತು.

ಕಾಯ್ದೆಯ ದುರುಪಯೋಗ ಮತ್ತು ಕಿರುಕುಳ ವಿವಿಧ ದೌರ್ಜನ್ಯಕ್ಕೆ ಒಳಗಾಗುವವರ ಹಿತರಕ್ಷಣೆಗಾಗಿರುವ, ಅಂಥ ಅಪರಾಧಗಳಿಗೆ ಪ್ರತಿಬಂಧಕವಾಗಿರುವ ಈ ಕಲಮುಗಳನ್ನು, ಬೆದರಿಸುವುದಕ್ಕೆ, ದ್ವೇಷಸಾಧನೆಗೆ ಮತ್ತು
ಪ್ರತೀ ಕಾರದ ಅಸ್ತ್ರವಾಗಿ ಬಳಸಲಾಗಿರುವ ಅನೇಕ ಪ್ರಕರಣಗಳು ಕಂಡುಬಂದಿವೆ. ದುರ್ವ್ಯಸನ, ಮಾನಸಿಕ ಅಸ್ವಸ್ಥತೆ, ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನೂ ಪ್ರಚೋದನೆಯ ಕಲಮುಗಳ ಅಡಿಯಲ್ಲಿ ತರುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಬಿಎನ್‌ಎಸ್‌ನ 108ನೇ ಕಲಮಿನ ಅಡಿ ಯಲ್ಲಿನ ಪ್ರಕರಣಗಳು ಗುರುತಿಸಲಾದ (ಕಾಗ್ನಿಜಬಲ್) ಮತ್ತು ಜಾಮೀನುರಹಿತ ಅಪರಾಧ ಗಳಾಗಿರುವುದರಿಂದ ಆಪಾದಿತರು ಬಂಧನಕ್ಕೆ ಒಳಗಾಗುತ್ತಾರೆ ಮತ್ತು ಸಾಕಷ್ಟು ಕಿರುಕುಳ ಅನುಭವಿಸಬೇಕಾಗುತ್ತದೆ.

ಸ್ವಾಮಿ ಪ್ರಹ್ಲಾದ ದಾಸ್ ವರ್ಸಸ್ ಮಧ್ಯಪ್ರದೇಶ ಸರಕಾರ ಮತ್ತು ಸಂಜಯ್‌ಸಿಂಗ್ ಸೆನಗಾರ್ ವರ್ಸಸ್ ಮಧ್ಯಪ್ರದೇಶ
ಸರಕಾರ ಪ್ರಕರಣಗಳಲ್ಲಿ, “ಆಪಾದಿತನು ಸಿಟ್ಟಿನ ಭರದಲ್ಲಿ ‘ಹೋಗಿ ಸಾಯಿ’ ಎಂದು ಉದ್ಗರಿಸಿದ ಒಂದು ಮಾತು ಆತ್ಮಹತ್ಯೆಗೆ ಪ್ರಚೋದನೆ ನೀಡಿತು ಎಂಬ ನಿರ್ಣಯಕ್ಕೆ ಬರುವುದು ಸರಿಯಲ್ಲ. ಆಪಾದಿತನಿಗೆ ಮೃತನನ್ನು ಆತ್ಮಹತ್ಯೆ ಗೆ ದೂಡಬೇಕೆಂಬ ಮಾನಸಿಕ ಇಚ್ಛೆ (‘”mens rea’) ಇತ್ತೆಂಬುದನ್ನು ಆ ಕ್ರಮವು ಸಾಬೀತುಪಡಿಸುವುದಿಲ್ಲ ಮತ್ತು ಆತ್ಮಹತ್ಯೆಯ ಪ್ರಚೋದನೆಗೆ ಇರಬೇಕಾದ ಮೂಲಭೂತ ಅಂಶಗಳು ಈ ಪ್ರಕರಣದಲ್ಲಿ ಇಲ್ಲ” ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಮಿಕ್ಕ ಒಂದಷ್ಟು ಪ್ರಕರಣಗಳಲ್ಲಿನ ನ್ಯಾಯಾಲಯದ ಅಭಿಪ್ರಾಯಗಳು ಹೀಗಿವೆ-

ಮದನ್‌ಮೋಹನ್ ಸಿಂಗ್ ವರ್ಸಸ್ ಗುಜರಾತ್ ಸರಕಾರ: ಕೇವಲ ಒಂದು ಘಟನೆಯ ಆಧಾರದಲ್ಲಿ ೩೦೬ನೇ ಕಲಮಿನ ಅಡಿಯಲ್ಲಿ ಆಪಾದನೆ ಮಾಡಲಾಗುವುದಿಲ್ಲ. ಮೃತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಯಾವುದಾದರೂ ರೀತಿಯಲ್ಲಿ ಆಪಾದಿತರು ಪ್ರಚೋದಿಸಿರಬೇಕಾಗುತ್ತದೆ. ಒಬ್ಬ ಮೇಲಧಿಕಾರಿ ತನ್ನ ಕೆಳಗಿನವರ ಕೆಲಸಗಳ ಕುರಿತು ಹೇಳುವುದೇ ಆತ್ಮಹತ್ಯೆಗೆ ಪ್ರಚೋದನೆಯೆಂದು ತಿಳಿಯುವುದಾದರೆ, ಮೇಲಧಿಕಾರಿಗಳ ಕಾರ್ಯನಿರ್ವಹಣೆಯೇ ಕಷ್ಟಸಾಧ್ಯವಾಗುತ್ತದೆ.

ಚಿತ್ರೇಶಕುಮಾರ್ ವರ್ಸಸ್ ದೆಹಲಿ ಸರಕಾರ: ಆತ್ಮಹತ್ಯೆ ಕೈಗೊಂಡ ವ್ಯಕ್ತಿಗೆ ಆಪಾದಿತರು ತಮ್ಮ ನಿರಂತರ ನಡವಳಿಕೆಯಿಂದಾಗಿ ಆತ್ಮಹತ್ಯೆಯ ವಿನಾ ಬೇರೆಯ ದಾರಿಯೇ ಇಲ್ಲದಂಥ ಸನ್ನಿವೇಶವನ್ನು ಸೃಷ್ಟಿಮಾಡಿದ್ದರೆ ಮಾತ್ರ ಅದನ್ನು ಪ್ರಚೋದನೆ ಎಂದು ಪರಿಗಣಿಸಬಹುದು.

ಕಾಮನ್ ಕಾಸ್ ವರ್ಸಸ್ ಭಾರತ ಸರಕಾರ, ಅರ್ಜುನನ್ ವರ್ಸಸ್ ಸ್ಟೇಟ್, ಉದೇ ಸಿಂಗ್ ವರ್ಸಸ್ ಹರಿಯಾಣ ಸರಕಾರ: ಯಾವುದೇ ಅಪರಾಧಕ್ಕೆ ಪ್ರಚೋದನೆಯ ಆರೋಪದಲ್ಲಿ ಆರೋಪಿಯು ಉದ್ದೇಶ ಪೂರ್ವಕವಾಗಿ ಅಂಥ ಆತ್ಮಹತ್ಯೆಗೆ ಪ್ರಚೋದಿಸುವ ಅಥವಾ ಸಹಾಯಕವಾಗುವ ಕ್ರಿಯೆ ಕೈಗೊಂಡಿರಬೇಕು. ಕೇವಲ ಕಿರುಕುಳ ಅಥವಾ ಬೈಗುಳದ ಆರೋಪಗಳು ‘ಆತ್ಮಹತ್ಯೆಗೆ ಪ್ರಚೋದನೆ’ಯನ್ನು ನಿರೂಪಿಸುವುದಿಲ್ಲ. ಆತ್ಮಹತ್ಯೆ ಕೈಗೊಂಡ ವ್ಯಕ್ತಿಯು ಅತಿಸೂಕ್ಷ್ಮ ಮನಸ್ಥಿತಿ ಹೊಂದಿದ್ದು, ಆಪಾದಿತರ ಮಾತುಗಳು ಸಾಮಾನ್ಯ ಸಂದರ್ಭ
ಗಳಲ್ಲಿ ಅಂಥ ಅತಿರೇಕದ ಪ್ರತಿಕ್ರಿಯೆಗೆ ಕಾರಣವಾಗುವಂತಿಲ್ಲದಿದ್ದಲ್ಲಿ, ಅಂಥ ಪ್ರಕರಣದಲ್ಲಿ ಪ್ರಚೋದನೆಯ
ಆರೋಪವನ್ನು ಪರಿಗಣಿಸುವುದು ಸಾಧುವಲ್ಲ.

ಅರ್ನಬ್ ಗೋಸ್ವಾಮಿ ಮತ್ತು ಇತರರು ವರ್ಸಸ್ ಮಹಾರಾಷ್ಟ್ರ ಸರಕಾರ: ಈ ಪ್ರಕರಣದಲ್ಲಿ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದಗಳಡಿಯಲ್ಲಿ ಬರಬೇಕಾದ ಹಣ ಬರದಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆಪಾದಿಸಿ, ರಿಪಬ್ಲಿಕ್ ಟಿವಿಯ ಮಾಲೀಕರಾದ ಅರ್ನಬ್ ಗೋಸ್ವಾಮಿಯವರ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 34ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಬಂಧಿಸಲಾಗಿತ್ತು.

ಜಾಮೀನಿಗಾಗಿ ಅವರು ಮಾಡಿದ್ದ ಮನವಿಯು ಹೈಕೋರ್ಟ್‌ನಲ್ಲಿ ತಿರಸ್ಕೃತವಾದ್ದರಿಂದ ಸುಪ್ರೀಂ ಕೋರ್ಟ್‌ಗೆ ಅವರು ಸಲ್ಲಿಸಿದ ಅಪೀಲಿನ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ದಾಖಲಿಸಿದ ಕೆಲವು ಅವಲೋಕನಗಳು ಈ ಮುಂದಿನಂತಿವೆ-

ಕ್ರಿಮಿನಲ್ ಕಾಯ್ದೆಗಳ ದುರುಪಯೋಗದಿಂದಾಗಿ ತಳಮಟ್ಟದಲ್ಲಿ ಅಂದರೆ ಜೈಲುಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಮನುಷ್ಯರ ಘನತೆಗೆ ಯಾವ ರಕ್ಷಣೆಯೂ ಇಲ್ಲದೆ ಉದ್ಭವಿಸುವ ಸಮಸ್ಯೆಗಳಿಗೆ ಕೆಳಹಂತದ ನ್ಯಾಯಾಲಯಗಳು ಸಕ್ರಿಯವಾಗಿ ಸ್ಪಂದಿಸಬೇಕು ಮತ್ತು ಆ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡ ಬೇಕು. ನಾಲ್ಕು ದಶಕಗಳಷ್ಟು ಹಿಂದೆಯೇ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಹೇಳಿದ ಮಾತುಗಳಿವು: “ನಮ್ಮ ಕ್ರಿಮಿನಲ್ ಕಾನೂನಿನ ವ್ಯವಸ್ಥೆಯಲ್ಲಿ ಜಾಮೀನು ಮಂಜೂರಾತಿಯು ಮೂಲಭೂತ ನಿಯಮವೇ ಹೊರತು ಜಾಮೀನು ನಿರಾಕರಣೆಯಲ್ಲ”.

ಜಾಮೀನು ನೀಡುವ ನಿಯಮಗಳನ್ನು ಕೆಳಹಂತದ ನ್ಯಾಯಾಲಯಗಳು ಸರಿಯಾಗಿ ಅನುಷ್ಠಾನಗೊಳಿಸದಿದ್ದರೆ,
ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ಗಳಿಗೆ ಅಪೀಲು ಮಾಡುವ ಸಾಮರ್ಥ್ಯವಿಲ್ಲದ ಜನಸಾಮಾನ್ಯರು ವಿಚಾರಣಾಧೀನ ಕೈದಿಗಳಾಗಿ ಕಷ್ಟ ಅನುಭವಿಸುತ್ತಾರೆ. ದನಿಯಿಲ್ಲದ ಲೆಕ್ಕವಿ ಲ್ಲದಷ್ಟು ಸಾಮಾನ್ಯರ ಹಿತರಕ್ಷಣೆಗಾಗಿ ನಾವು (ಸುಪ್ರೀಂ ಕೋರ್ಟ್) ಈ ನಿಯಮಗಳನ್ನು ಪದೇಪದೆ ಹೇಳುತ್ತಿದ್ದೇವೆ.

ಸಾಲವಸೂಲಿ ಕ್ರಮ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಶೈಲಾ ಸಿಂಗ್ ವರ್ಸಸ್ ಛತ್ತೀಸ್‌ಗಢ ಸರಕಾರ (ಸುಪ್ರೀಂ ಕೋರ್ಟ್), ಮಂಗಲಗೌರಿ ವರ್ಸಸ್ ಕರ್ನಾಟಕ ಸರ್ಕಾರ (ಕರ್ನಾಟಕ ಹೈಕೋರ್ಟ್), ರೋಹಿತ್ ನವನಾಥ
ನಲವಡೆ ವರ್ಸಸ್ ಮಹಾರಾಷ್ಟ್ರ ಸರಕಾರ (ಮುಂಬೈ ಹೈಕೋರ್ಟ್): ಬರಬೇಕಾದ ಹಣದ ವಸೂಲಿಗೆ ಕಾನೂನಿ ನನ್ವಯ ನೋಟಿಸ್ ನೀಡಿದರೆ ಅಥವಾ ಇನ್ನಿತರ ಕಾನೂನು ಕ್ರಮ ಕೈಗೊಂಡರೆ (ಅದರ ನಂತರ ಸಾಲಗಾರರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ) ಅದು ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ ಎಂದು ಕೋರ್ಟುಗಳು ಆದೇಶ ನೀಡಿವೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲಗಾರರ ವಿರುದ್ಧ ಕ್ರಮ ಕೈಗೊಳ್ಳಲು ಎದುರಾಗಬಹುದಾದ ಆತಂಕಗಳಿಗೆ ನ್ಯಾಯಾಲಯಗಳ ಈ ಆದೇಶಗಳು ಕೊಂಚ ನೆಮ್ಮದಿ ನೀಡುತ್ತವೆ ಎಂಬುದು ಗಮನಾರ್ಹ ಸಂಗತಿ.

ಸಾರ್ವಜನಿಕ ಹಿತಕ್ಕಾಗಿ ಇರುವ ಈ ಕಾನೂನು ಮತ್ತು ನಿಯಮಗಳ ಅನುಷ್ಠಾನವು, ಅವುಗಳ ಹಿಂದಿರುವ
ಉದ್ದೇಶಗಳಿಗೆ ಅನುಗುಣವಾಗಿ ನಡೆಯಬೇಕು. ಪೊಲೀಸ್ ಇಲಾಖೆ ಹಾಗೂ ಕೆಳಹಂತದ ಕೋರ್ಟುಗಳು ಇಂಥ
ಪ್ರಕರಣಗಳಲ್ಲಿ ಸಂವೇದನಾಶೀಲವಾಗಿ ವ್ಯವಹರಿಸಬೇಕು. ಜಾಮೀನು ಅರ್ಜಿ ಹಾಗೂ ನಕಲಿ ಪ್ರಕರಣಗಳ ರದ್ದತಿಗೆ
ಸಲ್ಲಿಸಲಾಗುವ ಅರ್ಜಿಗಳನ್ನು ತಾನು ವಿವಿಧ ಪ್ರಕರಣಗಳಲ್ಲಿ ನೀಡಿದ ಆದೇಶಗಳ ಹಿನ್ನೆಲೆಯಲ್ಲಿ ಪರಿಗಣಿಸ ಬೇಕೆಂಬುದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆಶಯ. ಕಾನೂನು ನ್ಯೂನವಲ್ಲದಿದ್ದರೂ, ಅನುಷ್ಠಾನದಲ್ಲಿ ನ್ಯೂನತೆ ಇದ್ದರೆ, ಅದರ ಪರಿಣಾಮ ಕೂಡ ಗಂಭೀರವಲ್ಲವೇ?

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ
ನಿವೃತ್ತ ಎಜಿಎಂ)

ಇದನ್ನೂ ಓದಿ: Thimmanna Bhagwat Column: ಕೌಟುಂಬಿಕ ದೌರ್ಜನ್ಯದ ವಿಭಿನ್ನ ಆಯಾಮಗಳು