Friday, 27th September 2024

Shashidhara Halady Column: ಗಡ್ಡೆ ಗೆಣಸುಗಳ ನಾಡಿನಲ್ಲಿ ಒಂದು ಸುತ್ತು

ಶಶಾಂಕಣ

ಶಶಿಧರ ಹಾಲಾಡಿ

ದಕ್ ಗೆಣಗು ಬೇಸಿ ಇಟ್ಟಿದ್ದೆ, ತಿನ್ನು’- ನಾವು ಸಂಜೆ ಶಾಲೆ ಮುಗಿಸಿಕೊಂಡು ಬಂದ ತಕ್ಷಣ ಅಮ್ಮಮ್ಮ ಹೇಳುತ್ತಿದ್ದರು. ‘ದಕ್ ಗೆಣಗು’ ಅಥವಾ ‘ದಕ್ ಗೆಣಸು’ ಒಂದು ಬಗೆಯ ಗಡ್ಡೆ. ಅರ್ಧದಿಂದ ಒಂದು ಇಂಚು ಅಗಲ, ಆರೆಂಟು ಇಂಚು ಉದ್ದ ಇರಬಹುದಾದ, ಹೇಳಿಕೊಳ್ಳುವಂಥ ವಿಶೇಷ ರುಚಿ ಇಲ್ಲದ ಒಂದು ಗಡ್ಡೆ. ಈಗ ಹೆಚ್ಚು ಪ್ರಚಲಿತದಲ್ಲಿರುವ ಸಿಹಿ ಗೆಣಸಿಗೆ ಸಂಬಂಧಿ ಅಲ್ಲದೇ ಇರುವ ಸಸ್ಯ. ಉಪ್ಪು ಹಾಕಿ ಬೇಯಿಸಿದರೆ, ತೀರಾ ಸಪ್ಪೆ ಅಲ್ಲದ ರುಚಿ. ಬೇಯಿಸಿ ದಾಗ, ಅದರ ಮೇಲಿನ ಸಿಪ್ಪೆಯನ್ನು ಕಿತ್ತರೆ, ಸುರುಳಿ ಸುರುಳಿಯಾಗಿ ಬಿಡಿಸಿಕೊಳ್ಳುತ್ತದೆ.

ಶಾಲೆ ಮುಗಿಸಿ, 3 ಕಿ.ಮೀ. ನಡೆದು ಮನೆಗೆ ಬಂದಾಗ ಹಸಿವಾಗಿರುತ್ತದೆ; ಆಗ, ತಿನ್ನಲಿಕ್ಕೆ ದಕ್ ಗೆಣಸಾದರೂ
ಪರವಾಗಿಲ್ಲ, ಸಿಹಿ ಗೆಣಸಾದರೂ ಪರವಾಗಿಲ್ಲ ಎಂಬ ಸ್ಥಿತಿ. ನಮ್ಮ ಹಳ್ಳಿಯಲ್ಲಿ ಒಂದು ಗಾದೆಯೇ ಇದೆ ‘ಮಕ್ಕಳ ಬಾಯಿಗೆ ದಕ್ ರುಚಿ’. ಇಲ್ಲಿ ದಕ್ ಎಂದರೆ, ಒಣಗಿದ ಕೋಲು ಅಥವಾ ಮರದ ರೆಂಬೆ ಎಂಬ ಅರ್ಥವಿದೆ. ದಕ್ ಎಂಬ ಪದದ ಮೂಲ ನನಗೆ ಸ್ಪಷ್ಟವಿಲ್ಲ. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಸಂಕ್ಷಿಪ್ತ ಕನ್ನಡ ನಿಘಂಟುವಿನಲ್ಲಿ, ‘ದಕ್ಕು’ ಎಂಬ ಪದಕ್ಕೆ ಎರಡನೆಯ ಅರ್ಥವಾಗಿ, ಮರದ ಶೂಲ, ಮುಳ್ಳು ಎಂಬ ಅರ್ಥವನ್ನೂ ನೀಡಿದ್ದಾರೆ. ಮರದ ಕೋಲಿನಂಥ ಗಡ್ಡೆಗೆ, ದಕ್ ಗೆಣಸು ಎಂದು ನಮ್ಮ ಹಳ್ಳಿಯವರು ಕರೆದಿರಬೇಕು. ಈಚಿನ ವರ್ಷಗಳಲ್ಲಿ ಈ ಗಡ್ಡೆ ಯನ್ನು ನಾನು ನೋಡಿಲ್ಲ.

ಗಡ್ಡೆ ಗೆಣಸುಗಳ ಮೂಲವನ್ನು ಅಗೆಯುತ್ತಾ ಹೋದರೆ, ಸಾಕಷ್ಟು ಸ್ವಾರಸ್ಯಕರ ವಿಚಾರಗಳು ನೆನಪಾಗುತ್ತವೆ,
ಮನದಾಳದಿಂದ ಎದ್ದು ಬರುತ್ತವೆ. ಮನುಷ್ಯನ ಇತಿಹಾಸವನ್ನು ಕೆದಕುತ್ತಾ ಹೋದರೆ, ಹಿಂದೆ ಆದಿಮಾನವನು ಗಡ್ಡೆ ಗೆಣಸುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಎನ್ನುತ್ತಾರೆ. ಆ ಪದ್ಧತಿಯ ಉಳಿಕೆಯಂಥ ಕೆಲವು ಆಹಾರಗಳು ನಮ್ಮ ಹಳ್ಳಿಯಲ್ಲಿದ್ದವು. ಈಚಿನ ವರ್ಷಗಳಲ್ಲಿ, ವಾಣಿಜ್ಯೀಕರಣ ಮತ್ತು ತರಕಾರಿಗಾಗಿ ಪೇಟೆಯ ಅಂಗಡಿಗಳ ಮೇಲಿನ ಅವಲಂಬನೆ ಜಾಸ್ತಿಯಾಗಿದ್ದರಿಂದಲೋ ಏನೋ, ಅವು ನಿಧಾನವಾಗಿ ಕಣ್ಮರೆಯಾಗಿವೆ. ಇತ್ತೀಚೆಗೆ ಸ್ನೇಹಿತರೊಬ್ಬರ ಮನೆಯಲ್ಲಿ ನೀಡಿದ ಸಿಹಿಗೆಣಸಿನ ಬೋಂಡಾ ತಿನ್ನುವಾಗ ಅನಿಸಿತು- ಈ ಬೋಂಡಾವು ಆಲೂಗಡ್ಡೆ ಬೋಂಡಾಕ್ಕಿಂತಲೂ ರುಚಿಯಾಗಿದೆ, ಅದೇಕೆ ನಮ್ಮ ರೆಸ್ಟೋರೆಂಟುಗಳು ಗೆಣಸಿನ ಬೋಂಡಾ
ತಯಾರಿಸಬಾರದು ಎಂದು. ಸಿಹಿ ಗೆಣಸಿನ ಬೋಂಡಾ ಜನಪ್ರಿಯಗೊಂಡರೆ, ನಮ್ಮ ನಾಡಿನ ಕೃಷಿಕರ ಒಂದು ಬೆಳೆಗೆ
ಬೆಂಬಲ ನೀಡಿದಂತೆಯೂ ಆಗುತ್ತದೆ.

ಕೆಲವು ದಶಕಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಸಿಹಿ ಗೆಣಸು ನಾನಾ ರೀತಿಯಲ್ಲಿ ಉದರ ಸೇರುತ್ತಿತ್ತು. ಬಡವರ ಬಂಧು ಈ ಗೆಣಸಿನ ಗಡ್ಡೆ ಎಂಬ ನುಡಿಗಟ್ಟು ಸಹ, ಗೆಣಸಿನ ಬಹೂಪಯೋಗಗಳನ್ನು ಬಿಂಬಿಸುತ್ತದೆ. ನಮ್ಮ ಮನೆಯಲ್ಲಿ
ಗೆಣಸನ್ನು ನಾನಾ ರೀತಿಯಲ್ಲಿ ಅಡುಗೆಗೆ, ತಿನ್ನಲು ಈ ಮುಂಚೆ ಬಳಸುತ್ತಿದ್ದುದುಂಟು- ಸಾಂಬಾರು, ಪಲ್ಯ, ಪೋಡಿ
(ಬೋಂಡ), ಒಗ್ಗರಣೆ, ಉಪ್ಪು ಹಾಕಿ ಬೇಯಿಸಿ ತಿನ್ನುವುದು- ಈ ರೀತಿ. ಅಷ್ಟೇಕೆ, ಸಿಹಿಗೆಣಸನ್ನು ಹಸಿಯಾಗಿ ತಿನ್ನಲೂ ಸಾಧ್ಯವಿದೆ!

ಆದರೆ, ಈ ಪದ್ಧತಿ ವ್ಯಾಪಕವಾಗಿ ಈಚೆಗೆ ಮುಂದುವರಿದಿಲ್ಲ ಎಂಬುದು ಬೇರೆ ಮಾತು; ಅದಕ್ಕೆ ನಾನಾ ಕಾರಣ ಗಳಿರಬಹುದು. ಚಳಿಗಾಲ ಕಳೆದ ನಂತರ, ನೀರಿನ ಆಶ್ರಯವಿಲ್ಲದೇ, ಮಕ್ಕಿ ಗದ್ದೆಯಲ್ಲಿ ಗೆಣಸಿನ ಕೃಷಿಯೂ ಅಂದಿನ ದಿನಗಳಲ್ಲಿ ಸಾಮಾನ್ಯ. ಇಬ್ಬನಿಯ ತಂಪನ್ನೇ ಕುಡಿದು ಬೆಳೆಯುತ್ತಿದ್ದ ಗೆಣಸಿನ ಗಿಡಗಳು, ಸಿಹಿ ಸಿಹಿಯಾದ ಗಡ್ಡೆ ಗಳನ್ನು ಕೊಡುತ್ತಿದ್ದವು. ಆ ಬೆಳೆಗೆ ಜಾಸ್ತಿ ಗೊಬ್ಬರವೂ ಬೇಡ, ಕ್ರಿಮಿನಾಶಕಗಳ ಸಿಂಪರಣೆಯೂ ಬೇಡ; ಕೆಲವು ಬಾರಿ ಕಾಡುಹಂದಿಗಳು ನೆಲವನ್ನು ಬಗೆದು ಗಡ್ಡೆಗಳನ್ನು ತಿಂದುಹಾಕುವ ಕಿರಿಕಿರಿ ಬಿಟ್ಟರೆ, ಗೆಣಸಿನ ಬೆಳೆಯು ಅತಿ ಕಡಿಮೆ ಖರ್ಚಿನ ಬೆಳೆ. ಗೆಣಸನ್ನು ಬೇಯಿಸಿ ತಯಾರಿಸಿದ ಹಪ್ಪಳವು ಒಂದು ಮಟ್ಟಕ್ಕೆ ಮಳೆಗಾಲದ ತಿಂಡಿಯೂ ಹೌದು. ಆ ಮೂಲಕ, ಬಹುದಿನಗಳ ತನಕ ಸಂಗ್ರಹಿಸಿಟ್ಟುಕೊಂಡು, ಉಪಯೋಗಿಸಬಹುದಾದ ಆಹಾರ. ಕೆಲವರು, ಮುಖ್ಯವಾಗಿ ಕೃಷಿ ಕಾರ್ಮಿಕರು ಗೆಣಸನ್ನು ಮಳೆಗಾಲದ ಉಪಯೋಗಕ್ಕೆಂದು ಬೇರೊಂದೇ ರೀತಿಯಲ್ಲಿ ಗ್ರಹಿಸಿಟ್ಟುಕೊಳ್ಳುತ್ತಿದ್ದರು.

ಬೇಸಗೆಯಲ್ಲಿ ಗೆಣಸಿನ ಬೆಳೆ ಬಂದಾಗ, ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಆಗ ಸಾಕಷ್ಟು ಗೆಣಸನ್ನು ಸಂಗ್ರಹಿಸಿ,
ಸಣ್ಣದಾಗಿ ಕತ್ತರಿಸಿ, ಬೇಯಿಸಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಡಬ್ಬಿಯಲ್ಲಿ ತುಂಬಿಡುವ ಪದ್ಧತಿ. ಮಳೆಗಾಲದಲ್ಲಿ ಕೂಲಿ ಸಿಗದೇ ಇದ್ದಾಗ, ಊಟ ತಿಂಡಿಗೆ ಕಷ್ಟವಿದ್ದಾಗ, ಈ ರೀತಿ ಒಣಗಿಸಿಟ್ಟ ಗೆಣಸಿನ ಚೂರುಗಳನ್ನು ಬೇಯಿಸಿ, ಒಂದು ಹೊತ್ತಿನ ಊಟದ ಬದಲಿಗೆ ತಿನ್ನುವ ಪದ್ಧತಿ. ಈಗ, ಸರಕಾರವು ರಿಯಾಯತಿ ದರದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಮೊದಲಾದ ಪರಿಕರಗಳನ್ನು ನೀಡಲು ಆರಂಭಿಸಿದ ನಂತರ, ಈ ಕಷ್ಟಕರ ಆಹಾರವನ್ನು ಬಳಸುವ ಪದ್ಧತಿ ಮರೆಯಾಗಿದೆ.

ಹೆಚ್ಚು ಜನಪ್ರಿಯವಾಗಿರುವ, ಈಗ ಸೂಪರ್ ಮಾರ್ಕೆಟ್ ನಲ್ಲೂ ಖರೀದಿಗೆ ದೊರಕುವ ಸಿಹಿಗೆಣಸು, ಇಂದಿಗೂ ಹಲವರ ಆಹಾರ, ತಿನಿಸಾಗಿ ಉಳಿದುಕೊಂಡಿದೆ. ನಮ್ಮ ಹಳ್ಳಿಯಲ್ಲಿ ಇದರ ಜತೆಗೇ ಇನ್ನೂ ಹಲವು ಪ್ರಭೇದಗಳ ಗೆಣಸುಗಳು, ಗಡ್ಡೆಗಳು ಬೆಳೆಯುತ್ತಿದ್ದವು. ಅವುಗಳ ಪೈಕಿ ತೀರಾ ವಿಚಿತ್ರ ಸ್ವರೂಪದ ಗೆಣಸು ಎಂದರೆ, ಹೆಗ್ಗೆಣಸು ಅಥವಾ ಹೆಡಿಗೆ ಗೆಣಸು. ಇದರ ಗಡ್ಡೆಯು ಒಂದು ಹೆಡಿಗೆಯಷ್ಟು (ಬುಟ್ಟಿ) ಗಾತ್ರದ್ದು, ಹತ್ತಾರು ಕಿಲೋ ತೂಗು ವಂಥದ್ದು.

ಆದ್ದರಿಂದಲೇ ‘ಹೆಡಿಗೆ ಗೆಣಸು’ ಎಂಬ ಹೆಸರು! ಮರದ ಮೇಲೆ ಉದ್ದಕ್ಕೂ ಹಬ್ಬಿಕೊಂಡು ಹೋಗುವ ಅದರ ಬಳ್ಳಿಯ ಗಾತ್ರವನ್ನು ಕಂಡರೇ ಊಹಿಸಬಹುದು, ಇದೊಂದು ವನ್ಯ ಪ್ರಭೇದದ ಸಸ್ಯ ಎಂದು. ನೆಲದಾಳದಲ್ಲಿ ಇದರ ಗಡ್ಡೆಯು ಬೆಳೆದು ದೊಡ್ಡದಾಗಲು ಒಂದು ವರ್ಷದ ಕಾಲಾವಕಾಶವೇ ಬೇಕು ಎನಿಸುತ್ತದೆ; ಇದನ್ನು ಕತ್ತರಿಸಿ, ಸಾಂಬಾರು, ಪಲ್ಯ ಮಾಡಬಹುದು. ರುಚಿ ಮಾತ್ರ ಅಷ್ಟಕ್ಕಷ್ಟೆ, ಅತ್ತ ಸಿಹಿಯೂ ಇಲ್ಲ, ಇತ್ತ ಬೇರಾವ ಹೇಳಿಕೊಳ್ಳ ಬಹುದಾದ ರುಚಿಯೂ ಇಲ್ಲ. ಬೇಯಿಸಿ ತಿಂದರೆ, ಹೊಟ್ಟೆ ತುಂಬುತ್ತದೆ, ಅಷ್ಟೆ. ಒಂದು ಹೆಡಿಗೆ ಗೆಣಸನ್ನು ಕತ್ತರಿಸಿದರೆ, ಅಕ್ಕಪಕ್ಕದ ನಾಲ್ಕಾರು ಮನೆಗಳವರು ಹಂಚಿ ತಿನ್ನಬಹುದು!

ದಕ್ ಗೆಣಸು, ಕೋಲು ಗೆಣಸು, ಮರಗೆಣಸು ಮೊದಲಾದ ಹಲವು ಪ್ರಭೇದದ ಗೆಣಸುಗಳು, ಗಡ್ಡೆಗಳು ನಮ್ಮ ಹಳ್ಳಿಯಲ್ಲಿವೆ. ಗಡ್ಡೆಗಳನ್ನು ಹೆಸರಿಸುವಾಗ, ಅವು ಗೆಣಸಿನ ಸಂಬಂಧಿ ಅಲ್ಲದಿದ್ದರೂ, ಗೆಣಸು ಎಂದು ಕರೆಯುವ ರೂಢಿ. ಕರಾವಳಿಯ ದಕ್ಷಿಣ ಭಾಗ ಮತ್ತು ಕೇರಳದಲ್ಲಿ ಮರಗೆಣಸನ್ನು ವ್ಯಾಪಕವಾಗಿ ಕೃಷಿ ಮಾಡುವ ಪದ್ಧತಿ ಈಗಲೂ ಇದೆ. ಈ ನಿಟ್ಟಿನಲ್ಲಿ ಮರಗೆಣಸು ಒಂದು ವಾಣಿಜ್ಯಕ ಬೆಳೆಯಾಗಿ ರೂಪುಗೊಂಡಿದೆ;

ಇತರ ಗಡ್ಡೆಗಳೂ ಇಂಥ ವಾಣಿಜ್ಯಕ ಬೆಳೆಯ ಖದರು ಬೆಳೆಸಿಕೊಂಡರೆ, ನಮ್ಮ ಕೃಷಿಕರಿಗೆ ಉಪಆದಾಯವಾದೀತು. ದಕ್ಷಿಣ ಅಮೆರಿಕ ಮೂಲದ ಮರಗೆಣಸು (ಟಾಪಿಯೋಕಾ) ಒಂದು ಉತ್ತಮ ಆಹಾರ ಮೂಲವಾಗಿದ್ದು, ಕೆಲವು ದೇಶಗಳಲ್ಲಿ ಬ್ರೆಡ್ ತಯಾರಿಗೂ ಬಳಸಲಾಗುತ್ತದೆ. ಜಾನುವಾರುಗಳ ಆಹಾರವಾಗಿಯೂ ಇದರ ಉಪಯೋಗವಿದೆ. ಕಡಿಮೆ ಮಳೆಯಲ್ಲಿ, ಗುಡ್ಡಗಾಡು ಪ್ರದೇಶದಲ್ಲಿ ಬೆಳೆಯುವ ಮರಗೆಣಸು, ಆಫ್ರಿಕಾದ ಹಲವು ದೇಶಗಳಲ್ಲಿ ಒಂದು ಪ್ರಮುಖ ಆಹಾರಮೂಲ ಎನಿಸಿದೆ.

ನಮ್ಮ ಹಳ್ಳಿಯವರು ಅಡುಗೆಗೆ ಬಳಸುವ ಗಡ್ಡೆಗಳಲ್ಲಿ ಕೆಸುವಿನ ಗಡ್ಡೆಗಳು ಮುಂಚೂಣಿಯಲ್ಲಿವೆ. ಇದರಲ್ಲಿ ಹಲವು
ಪ್ರಭೇದಗಳು- ಕಾಡು ಕೆಸ, ಕರಿ ಕೆಸ, ಕೋಲು ಕೆಸ, ಗೋವೆ ಕೆಸ ಇತ್ಯಾದಿ. ಇವುಗಳ ಪೈಕಿ ಗೋವೆ ಕೆಸದ ಗಡ್ಡೆಯು ನಿಜಕ್ಕೂ ರುಚಿಕರ. ದೊಡ್ಡ ದೊಡ್ಡ ಎಲೆ ಬಿಡುವ ಈ ಕೆಸುವಿನ ಗಡ್ಡೆಯೂ ದೊಡ್ಡದು; ನಾಲ್ಕಾರು ಇಂಚು ದಪ್ಪ, ಒಂದೆರಡು ಅಡಿ ಉದ್ದ ಬೆಳೆಯುವ ಗೋವೆಕೆಸದ ಗಡ್ಡೆಯು, ಈಗ ಅಂಗಡಿಗಳಲ್ಲಿ ದೊರಕುವ ಯಾವುದೇ ತರಕಾರಿ ಗೂ, ರುಚಿಯಲ್ಲಿ ಪೈಪೋಟಿ ನೀಡಬಲ್ಲದು. ಇದನ್ನು ಕತ್ತರಿಸಿ ತಯಾರಿಸಿದ ಸಾಂಬಾರು, ಆಲೂಗಡ್ಡೆಯ ಸಾಂಬಾರಿಗೆ ಸ್ಪರ್ಧೆ ನೀಡಬಲ್ಲದು! ಮೆದುವಾಗಿ ಬೇಯುವ ರುಚಿಕರ ಗಡ್ಡೆ ಗೋವೆ ಕೆಸ. ಉದ್ದಕ್ಕೆ ಮಡಿ ಮಾಡಿ, ಗೊಬ್ಬರ ಹಾಕಿ ಇದನ್ನು ನಮ್ಮ ಹಳ್ಳಿಯವರು ಬೆಳೆಯುತ್ತಾರೆ.

ಅದೇಕೆ ಇನ್ನೂ ಈ ತರಕಾರಿಯು, ವಾಣಿಜ್ಯಕವಾಗಿ ನಮ್ಮ ರಾಜ್ಯದಾದ್ಯಂತ ಹಬ್ಬಲಿಲ್ಲವೋ, ಅಚ್ಚರಿಯಾಗುತ್ತದೆ. ಈ ಗಿಡದ ಎಲೆಯಿಂದ ರುಚಿಕರ ಪತ್ರೊಡೆಯನ್ನೂ ತಯಾರಿಸಲು ಸಾಧ್ಯ. ಗೋವೆ ಕೆಸವು ಒಂದು ರೀತಿಯಲ್ಲಿ ಹೈಬ್ರಿಡ್ ಸ್ವರೂಪ ಎಂದು ಗುರುತಿಸಿಕೊಂಡರೆ, ಅದರ ನಾಟಿ ಪ್ರಭೇದಗಳು ನಮ್ಮೂರಿನ ಮೂಲೆ ಮೂಲೆಯಲ್ಲಿ ಬೆಳೆಯುತ್ತವೆ! ಜೂನ್ ತಿಂಗಳಿನಲ್ಲಿ ಒಂದೆರಡು ವಾರ ಚೆನ್ನಾಗಿ ಮಳೆ ಬಂದ ತಕ್ಷಣ, ಗದ್ದೆಯಂಚಿನಲ್ಲಿ, ತೋಡಿನಂಚಿನಲ್ಲಿ, ತೋಟದ ಮೂಲೆ ಮೂಲೆಗಳಲ್ಲಿ, ಅಂಗಳದ ಬದಿಯಲ್ಲಿ ತನ್ನಷ್ಟಕ್ಕೆ ತಾನೇ ಬೆಳೆಯುವ ಕಾಟು ಕೆಸ ಮತ್ತು ಕರಿ ಕೆಸವು, ಬಹು ಬೇಗನೆ ಬೆಳೆಯುವ ಸಸ್ಯ. ಹೆಚ್ಚು ನೀರಿನ ಅಂಶವಿರುವ ಜಾಗ ಸಿಕ್ಕರೆ ಸಾಕು, ಕಳೆ ಗಿಡದ ರೀತಿ ತನ್ನಷ್ಟಕ್ಕೆ ತಾನೇ ಬೆಳೆಯುತ್ತಾ, ಹರಡುತ್ತಾ ಹೋಗುತ್ತದೆ. ಇದಕ್ಕೆ ಪ್ರತ್ಯೇಕ ಗೊಬ್ಬರ ಹಾಕ ಬೇಕಿಲ್ಲ, ನೀರುಣಿಸ ಬೇಕಿಲ್ಲ.

ಇದರ ಗಡ್ಡೆಯನ್ನು ಬಳಸಿ, ಸಾಂಬಾರ್, ಚಟ್ನಿ ಮಾಡಬಹುದು; ಗೋವೆ ಕೆಸಕ್ಕೆ ಹೋಲಿಸಿದರೆ, ತುಂಬಾ ಚಿಕ್ಕ ಗಾತ್ರದ ಈ ಗಡ್ಡೆಗಳು, ರುಚಿಯಲ್ಲಿ ಗೋವೆ ಕೆಸದ ಗಡ್ಡೆಯ ಸಮಾನಕ್ಕೆ ಬರಲಾರವು. ತಿಂದು ಅಭ್ಯಾಸ ಇಲ್ಲದವರಿಗೆ, ಕಾಟು ಕೆಸದ, ಕರಿಕೆಸದ ಗಡ್ಡೆಯ ಸಾಂಬಾರ್ ತಿಂದರೆ, ಬಾಯಲ್ಲಿ ತುರಿಕೆ, ನವೆ ಬಂದರೂ ಬರಬಹುದು! ತುಸು ಕಪ್ಪು ಬಣ್ಣದ ದಂಟು ಹೊಂದಿರುವ ಕಾಡು ಕೆಸದ ಗಡ್ಡೆ, ರುಚಿ ಜಾಸ್ತಿ, ಬಾಯಿ ತುರಿಕೆ ಕಡಿಮೆ. ಈ ಗಿಡದ ಎಲೆಗಳಿಂದ ಚಟ್ನಿ, ದೋಸೆ, ದಂಟುಗಳಿಂದ ಸಾಂಬಾರ್ ತಯಾರಿಸಬಹುದು. ಮಲೆನಾಡು, ಕರಾವಳಿಯವರಿಗೆ, ಮಳೆಗಾಲದಲ್ಲಿ
ತರಕಾರಿಯಾಗಿ ನಾನಾ ರೀತಿಯಲ್ಲಿ ಒದಗಿ ಬರುವ, ಸುಲಭವಾಗಿ ಕೈಗೆ ಸಿಗುವ ಕಾಟು ಕೆಸವು ಕಬ್ಬಿಣದ ಅಂಶವನ್ನು
ಹೊಂದಿದೆ.

ನಮ್ಮ ಹಳ್ಳಿಯ ನೆಲದಲ್ಲಿ ದೊರಕುವ ಇನ್ನೊಂದು ಗಡ್ಡೆಯೆಂದರೆ ಮರಸಣಿಗೆ ಗಡ್ಡೆ. ಕೆಸುವನ್ನು ಹೋಲುವ ಎಲೆ,
ಆದರೆ ಎರಡರಿಂದ ನಾಲ್ಕು ಅಡಿ ಉದ್ದದ ಎಲೆ! ಮಳೆ ಬಂದಾಗ, ತುರ್ತು ಸನ್ನಿವೇಶದಲ್ಲಿ ಕೊಡೆಯಾಗಿ ಬಳಸ ಬಲ್ಲಷ್ಟು ದೊಡ್ಡ ಎಲೆ. ಆ ಗಿಡದ ಬುಡವನ್ನು ಅಗೆದರೆ ದೊರೆಯುವ ಒಂದೆರಡು ಅಡಿ ಉದ್ದದ ಗಡ್ಡೆಯಿಂದ ಮುಖ್ಯವಾಗಿ ಪಲ್ಯ ಮತ್ತು ಸಾಂಬಾರು ತಯಾರಿಸಬಹುದು. ಇದರ ಚಟ್ನಿಯನ್ನೂ ತಯಾರಿಸುವುದುಂಟು. ನೆಲದಲ್ಲಿ ಸಿಗುವ ಇನ್ನೊಂದು ರುಚಿಕರ ಗಡ್ಡೆಯೆಂದರೆ ಸುವರ್ಣ ಗಡ್ಡೆ- ಇದು ವಾಣಿಜ್ಯಕವಾಗಿ ಸಾಕಷ್ಟು ಪ್ರಚಾರಗೊಂಡಿದೆ, ಎಲ್ಲರಿಗೂ ಪರಿಚಿತ.

ಸುವರ್ಣ ಗಡ್ಡೆಯ ದೂರದ ಸಂಬಂಧಿ ಎನಿಸುವ ಗಡ್ಡೆಯೊಂದು ನಮ್ಮೂರಿನ ಕಾಡು ಪ್ರದೇಶದಲ್ಲಿ, ಗುಡ್ಡಗಳಲ್ಲಿ
ತನ್ನಷ್ಟಕ್ಕೆ ತಾನು ಬೆಳೆಯುತ್ತದೆ. ಮಳೆ ಬಂದ ಕೂಡಲೆ ನೆಲದಿಂದ ಮೇಲಕ್ಕೆ ಬರುವ ಅದರ ಎಲೆಗಳು ಸುವರ್ಣ ಗಿಡದ ಎಲೆಗಳನ್ನೇ ಹೋಲುತ್ತವೆ. ಅದರ ಬುಡವನ್ನು ಅಗೆದಾಗ ದೊರಕುವ ಗಡ್ಡೆಗಳ ಗಾತ್ರ ಮಾತ್ರ ಚಿಕ್ಕದು- ಒಂದು ಮುಷ್ಟಿಯಿಂದ ಎರಡು ಮುಷ್ಟಿಯಷ್ಟು ಗಾತ್ರದ ಗಡ್ಡೆಗಳು. ಇದನ್ನು ಹಬೆಯಲ್ಲಿ ಬೇಯಿಸಿ, ಕಡುಬು ಮಾಡುವ ಪದ್ಧತಿ ನಮ್ಮ ಹಳ್ಳಿಯಲ್ಲಿದೆ. ಜತೆಗೆ, ಆಸಾಡಿ (ಆಷಾಢ) ತಿಂಗಳಲ್ಲಿ ನಡೆಯುವ ಆಸಾಡಿ ಹಬ್ಬದ ಆಚರಣೆಗೆ ಕ್ಯಾನಿಗೆಂಡೆಯ ಕಡುಬು ಅತ್ಯಗತ್ಯ.

ಪುರಾತನ ಕಾಲದಿಂದಲೂ ಮಾನವನ ಹೊಟ್ಟೆಯ ಹಸಿವು ತಣಿಸಿದ ಗಡ್ಡೆ ಇದಾಗಿರಬಹುದು, ಆದ್ದರಿಂದಲೇ ಹಬ್ಬದ
ಆಚರಣೆಯ ಭಾಗವಾಗಿ ಇಂದಿಗೂ ನಮ್ಮೂರಿನ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಮನುಷ್ಯನು ಹಿಂದೆ ಗಡ್ಡೆ ಗೆಣಸುಗಳನ್ನು ತಿಂದು ಜೀವಿಸುತ್ತಿದ್ದುದರ ನೆನಪುಗಳಾಗಿ ಈ ರೀತಿಯ ಹಲವು ಗಡ್ಡೆಗಳು ಇಂದಿಗೂ ನಮ್ಮ ಆಹಾರದ ಮೆನುವಿನಲ್ಲಿ ಉಳಿದುಕೊಂಡು ಬಂದಿರಬೇಕು, ಅಲ್ಲವೇ!

ಇದನ್ನೂ ಓದಿ: Shashidhara Halady Column: ಹಳ್ಳಿಯ ಹಸುಗೂಸಿನ ಹೊಟ್ಟೆ ತಂಪು !