Tuesday, 26th November 2024

Shashidhara Halady Column: ಕೆನಡಾಕ್ಕೆ ವಲಸೆ ಹೋದವರಿಗೆ ಗುಂಡೇಟಿನ ಸ್ವಾಗತ !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಸಾರ್ವಜನಿಕರ ನೆನಪು ಕಿರಿದಾದುದು ಎಂಬ ಮಾತಿದೆ. ಅದು ಕೆಲವೊಮ್ಮೆ ಸರಿ ಎನಿಸಲೂಬಹುದು! ಆದರೆ,
ನಮ್ಮ ಜನರ ಮೇಲೆ ನಡೆದ ದಬ್ಬಾಳಿಕೆ, ಶೋಷಣೆ, ಪಕ್ಷಪಾತ ನೀತಿ, ಹತ್ಯಾಕಾಂಡ ಇವುಗಳನ್ನೆಲ್ಲಾ ಹೇಗೆ ಮರೆಯು ವುದು? ಮರೆಯುವುದು ಸರಿಯೂ ಅಲ್ಲ. ಏಕೆಂದರೆ, ಇತಿಹಾಸವನ್ನು ಮರೆತವರು ದೇಶ ಕಟ್ಟುವುದನ್ನೇ ಮರೆತಾರು ಎಂಬ ಮಾತೂ ಇದೆ! ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಬ್ರಿಟಿಷರ ‘ಬಂದೂಕು ಪ್ರೇಮ’ ಮತ್ತು ಪಕ್ಷಪಾತ ನೀತಿಯ ಕುರಿತು ಮಾತು ಬಂದಾಗಲೆಲ್ಲಾ ‘ಕೋಮಗಾಟ ಮಾರು’ ಘಟನೆಯನ್ನು ನೆನಪಿಸಿಕೊಳ್ಳಲೇಬೇಕು.

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕಿಂತ ಐದು ವರ್ಷ ಮುಂಚೆ ಘಟಿಸಿದ ‘ಕೋಮಗಾಟ ಮಾರು’ ಹತ್ಯಾ ಕಾಂಡವು, ಇಪ್ಪತ್ತು ಜನ ಸಾಹಸಿ ಪಂಜಾಬಿಗಳ ದುರಂತ ಸಾವಿನೊಂದಿಗೆ ಅಂತ್ಯವಾಯಿತು. ಜಲಿಯನ್‌ವಾಲಾ ಬಾಗ್‌ನಲ್ಲಿ ಪಂಜಾಬ್ ಪ್ರಾಂತ್ಯದ ಜನರೇ ನೂರಾರು ಸಂಖ್ಯೆಯಲ್ಲಿ ಮೃತಪಟ್ಟರು; ಕೋಮಗಾಟ ಮಾರು ಹತ್ಯಾಕಾಂಡದಲ್ಲೂ ಮೃತಪಟ್ಟ ಹೆಚ್ಚಿನವರು ಪಂಜಾಬ್ ಮೂಲದವರು.

ಈ ಹತ್ಯಾಕಾಂಡವನ್ನು ಬ್ರಿಟಿಷರು ಮುಚ್ಚಿಟ್ಟಿದ್ದರು, ಸೆನ್ಸಾರ್ ಮಾಡಿದ್ದರು. ಆಗೆಲ್ಲಾ ಹಾಗೇ ತಾನೆ?
ಬ್ರಿಟಿಷರು ಅನುಮತಿ ನೀಡಿದ ಸುದ್ದಿಗಳು ಮಾತ್ರ ಹೊರಗೆ ಬರುತ್ತಿದ್ದವು. ತಾಯ್ನಾಡನ್ನು ಅರಸಿ ಬಂದ
ಆ ಜನರು ಒಮ್ಮಿಂದೊಮ್ಮೆಗೇ ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದರೂ, ಈ ಹತ್ಯಾಕಾಂಡಕ್ಕೆ ಒಂದು ಗೌರವಯುತ ಸ್ಮಾರಕ ನಿರ್ಮಾಣಗೊಳ್ಳಲು ಸುಮಾರು ನಾಲ್ಕು ದಶಕ ಕಾಯಬೇಕಾಯಿತು!

ಇದು ನಡೆದದ್ದು 1914ರ ಏಪ್ರಿಲ್‌ನ ನಂತರ. ಕೋಮಗಾಟ ಮಾರು ಎಂಬ ಹಡಗು, ಪಂಜಾಬಿನ ಪ್ರಯಾಣಿಕ ರೊಂದಿಗೆ ಏಪ್ರಿಲ್ 4ರಂದು ಹಾಂಗ್ ಕಾಂಗ್‌ನಿಂದ ಕೆನಡಾದತ್ತ ಹೊರಟಿತು. ಆಗ ಭಾರತ, ಹಾಂಗ್‌ಕಾಂಗ್, ಕೆನಡಾ ಎಲ್ಲವೂ ಬ್ರಿಟಿಷ್ ಸಾಮ್ರಾಜ್ಯದ ನಿಯಂತ್ರಣಕ್ಕೆ ಒಳಪಟ್ಟ ಪ್ರಾಂತ್ಯಗಳಾಗಿದ್ದವು. ಆದ್ದರಿಂದ, ತಾತ್ವಿಕವಾಗಿ ಬ್ರಿಟಿಷ್ ಸಾಮ್ರಾಜ್ಯದ ಪ್ರಜೆಗಳು ಪರಸ್ಪರರ ಪ್ರಾಂತ್ಯಗಳಿಗೆ ವಲಸೆ ಹೋಗಬಹುದಿತ್ತು. ಭಾರತದ ಪ್ರಜೆಗಳು ಕೆನಡಾಕ್ಕೆ ಹೋಗಲು ಯಾವುದೇ ತೊಡಕು ಇರಬಾರದು, ಇರಲಾರದು ಎಂಬ ಹಕ್ಕೊತ್ತಾಯದ ಹಿನ್ನೆಲೆ ಯಲ್ಲೂ ಈ ಹಡಗಿನ ಪಯಣ ಆರಂಭವಾಗಿತ್ತು.

ಪಂಜಾಬ್ ಪ್ರಾಂತ್ಯದ 337 ಸಿಖ್ಖರು, 27 ಮುಸ್ಲಿಮರು, 12 ಹಿಂದೂ ಜನರು ಹಡಗನ್ನೇರಿ ಕೆನಡಾಕ್ಕೆ ಹೊಟ್ಟೆಪಾಡಿ ಗಾಗಿ ಹೊರಟರು. ಹಾಂಗ್‌ಕಾಂಗ್ ನಲ್ಲಿ 165 ಜನ ಏರಿದರೆ, ಶಾಂಘೈನಲ್ಲಿ ಮತ್ತು ಯೋಕೋಹಾಮಾದಲ್ಲಿ ಇನ್ನಷ್ಟು ಜನ ಏರಿದರು. ಪಂಜಾಬಿನ ಶ್ರೀಮಂತ ವ್ಯವಹಾರಸ್ಥ ಗುರುದಿತ್ ಸಿಂಗ್ ಸಿರ್‌ಹಾಲಿ ಎಂಬಾತ ಈ ಪಯಣದ ರೂವಾರಿ. ಮಲೇಷ್ಯಾ, ಸಿಂಗಾಪುರ ಮೊದಲಾದ ಕಡೆ ಕಾಂಟ್ರಾಕ್ಟ್ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿದ್ದ ಆತ, ಕೆನಡಾಕ್ಕೆ ಹೋಗಲು ಸೂಕ್ತ ಹಡಗನ್ನು ಹುಡುಕಿದ. ಬ್ರಿಟಿಷ್ ಮಾಲೀಕತ್ವದ ಹಡಗುಗಳು ದೊರೆಯಲಿಲ್ಲ. ಜಪಾನ್ ಮಾಲೀಕತ್ವದ ‘ಕೋಮಗಾಟ ಮಾರು’ ಹಡಗನ್ನು ಬಾಡಿಗೆಗೆ ಗೊತ್ತುಮಾಡಿದ. ಪಂಜಾಬಿನ ಜನರನ್ನು ಕೆನಡಾಕ್ಕೆ ಹೋಗಲು ಆಹ್ವಾನಿಸಿ, ಅವರಿಂದ ಟಿಕೀಟು ಹಣವನ್ನು ಸಹ ಸಂಗ್ರಹಿಸಿದ. ಏಪ್ರಿಲ್ 1914ರಲ್ಲಿ ಹೊರಟ ಕೋಮಗಾಟ ಮಾರು, 23 ಮೇ 1914ರಂದು ಕೆನಡಾದ ವಾಂಕೋವರ್ ಬಂದರನ್ನು ಪ್ರವೇಶಿಸಿತು.

ಆದರೆ, ಕೆನಡಾದ ಅಧಿಕಾರಿಗಳು ಈ ಹಡಗಿನಲ್ಲಿ ಬಂದ ಪಂಜಾಬಿ ಜನರನ್ನು ಕೆಳಗಿಳಿಯಲು ಬಿಡಲೇ ಇಲ್ಲ. ಕೆನಡಾ ಪ್ರಾಂತ್ಯವು ಬ್ರಿಟಿಷ್ ಸಾಮ್ರಾಜ್ಯದ ಭಾಗವೇ ಆಗಿದ್ದರೂ, ಕೆಲಸ ಅರಸಿ ಬಂದವರು ಬ್ರಿಟಿಷ್ ಪ್ರಜೆಗಳೇ ಆಗಿದ್ದೂ, ಭಾರತದಿಂದ ಬರುವ ಜನರನ್ನು ಸ್ವೀಕರಿಸಬಾರದು ಎಂಬುದು ಕೆನಡಾದವರ ಆಗಿನ ನಿಲುವು. ಏಕೆಂದರೆ, ಕೆನಡಾ ವನ್ನು ಬಿಳಿಯ ಜನರಿಗಾಗಿ ಕಟ್ಟಿ ಬೆಳೆಸಬೇಕು ಎಂಬ ಒಳಸಂಚು. ಆ ರೀತಿ ಅಲ್ಲಿನ ಬಿಳಿಯ ಜನರು ಬಹಿರಂಗವಾಗಿ ಯೇ ಪ್ರಚಾರ ಮಾಡುತ್ತಿದ್ದರು. ಆ ಸಮಯದಲ್ಲಿ ಅಮೆರಿಕ ಅದಾಗಲೇ ಸ್ವತಂತ್ರ ರಾಷ್ಟ್ರವಾಗಿ, ವಲಸೆಯ ಕಾನೂನನ್ನು ರೂಪಿಸಿತ್ತು; ಭಾರತದವರು ಅಮೆರಿಕ ಪ್ರವೇಶಿಸುವುದು ಬಹು ಕಷ್ಟ ಎನಿಸಿತ್ತು. ಆದರೆ ಕೆನಡಾ ಪ್ರದೇಶವು ಬ್ರಿಟಿಷ್ ಸಾಮ್ರಾಜ್ಯದ ಭಾಗ. ಬ್ರಿಟಿಷ್ ಅಧೀನದಲ್ಲಿದ್ದ ಭಾರತದಿಂದ ತಾತ್ವಿಕವಾಗಿ ಕೆನಡಾಕ್ಕೆ ಹೋಗಲು ಯಾವುದೇ ತಕರಾರು, ವಿರೋಧ ಇರಬಾರದಿತ್ತು.

ಆದರೆ, ಕೆನಡಾದ ಭೂಭಾಗವು ಬಿಳಿಯರಿಗೆ ಮಾತ್ರ ಮೀಸಲಿರಬೇಕೆಂದು ಬಯಸಿದ್ದ ಅಲ್ಲಿನ ಜನರು, ಭಾರತದ ಜನರನ್ನು ಹೊರಗಿಡಲು ಸುತ್ತು ಬಳಸಿನ ಕಾನೂನುಗಳನ್ನು, ಚಿತ್ರ-ವಿಚಿತ್ರ ನಿಯಮಗಳನ್ನು ಮಾಡಿಕೊಂಡಿದ್ದರು. ಅವುಗಳಲ್ಲಿ ಮುಖ್ಯವಾಗಿದ್ದೆಂದರೆ, ಕೆನಡಾಕ್ಕೆ ಬರುವವರು ತಮ್ಮ ಪ್ರದೇಶದಿಂದ ನೇರವಾಗಿ ಬರಬೇಕು, ಅಂದರೆ
ಬೇರೆ ಬೇರೆ ದೇಶಗಳಲ್ಲಿ, ಭೂಭಾಗಗಳಲ್ಲಿ ಲಂಗರು ಹಾಕಿದ ಹಡಗಿನಲ್ಲಿ ಬರುವಂತಿಲ್ಲ ಎಂಬ ನಿಯಮ. ಇದು ಸಹಜವಾಗಿ ಯುರೋಪಿನಿಂದ ಕೆನಡಾಕ್ಕೆ ಬರುವವರ ಪರವಾಗಿತ್ತು- ಅಟ್ಲಾಂಟಿಕ್ ಸಾಗರ ದಾಟಿ ನೇರವಾಗಿ ಕೆನಡಾ ತಲುಪಲು ಬಿಳಿಯರಿಗೆ ಇದರಿಂದ ಸಾಧ್ಯವಿತ್ತು. ಭಾರತದಂಥ ಸುದೂರ ವಸಾಹತಿನಿಂದ ಕೆನಡಾಕ್ಕೆ ನೇರವಾದ ಪಯಣ ದುಸ್ತರ. ಕೋಮಗಾಟ ಮಾರು ಹಡಗು, ಫಿಲಿಪೀನ್ಸ್, ಚೀನಾ, ಜಪಾನ್ ಮೊದಲಾದ ಪ್ರದೇಶಗಳ
ಬಂದರುಗಳಲ್ಲಿ ಜನರನ್ನು ಹತ್ತಿಸಿಕೊಂಡು ಬಂದದ್ದರಿಂದ, ಈ ಹಡಗಿನ ಜನರನ್ನು ತಾವು ಕೆಳಗಿಳಿಯಲು ಬಿಡುವುದಿಲ್ಲ ಎಂದು ಕೆನಡಾ ಬಿಗಿಪಟ್ಟು ಹಾಕಿತು. ಇನ್ನೊಂದು ನಿಯಮವನ್ನು ಸಹ ಅವರೇ ರೂಪಿಸಿದ್ದರು. ಏನೆಂದರೆ, ದಕ್ಷಿಣ ಏಷ್ಯಾದಿಂದ ಬರುವವರ ಬಳಿ ತಲಾ ಕನಿಷ್ಠ 200 ಡಾಲರ್ ಹಣ ಇರಬೇಕು ಎಂದು. 1914ರಲ್ಲಿ 200 ಡಾಲರ್ ಎಂದರೆ ಬಹುದೊಡ್ಡ ಮೊತ್ತ. ನೇರವಾಗಿ ನಿಷೇಧ ಹೇರಲಾಗದಿದ್ದರೂ, ಇಂಥ ನಿಯಮಗಳಿಂದ ಭಾರತದಿಂದ ಬರುವವರನ್ನು ತಡೆಯಬಹುದು ಎಂಬುದು ಕೆನಡಾದ ಹುನ್ನಾರ. ಬ್ರಿಟಿಷ್ ಸರಕಾರದ ಸಹಮತ ದೊಂದಿಗೇ ರೂಪಿಸಿದ್ದ ಒಳಸಂಚಿನ ಸ್ವರೂಪದ ಕಾನೂನು ಇದು.

ತನ್ನ ಊರಿನ ಮುನ್ನೂರಕ್ಕೂ ಹೆಚ್ಚು ಜನರನ್ನು ಕರೆತಂದಿದ್ದ ಗುರುದಿತ್ ಸಿಂಗ್‌ಗೆ ಈ ವಿಚಾರ, ಒಳಸಂಚು ತಿಳಿಯದಿದ್ದುದೇನಲ್ಲ. ಯುರೋಪಿನಿಂದ ಲಕ್ಷಗಟ್ಟಲೆ ಜನರು ಕೆನಡಾಕ್ಕೆ ವಲಸೆ ಬರುತ್ತಿದ್ದರೂ, ಭಾರತದವರನ್ನು ಅವರು ಯಶಸ್ವಿಯಾಗಿ ದೂರ ಇಟ್ಟ ವಿಚಾರವೂ ಅವನಿಗೆ ಗೊತ್ತಿತ್ತು. ಅದರೂ, ಕಾನೂನಿನ ಹೋರಾಟದ ಮೂಲಕ ತಾವು ಕೆನಡಾವನ್ನು ಪ್ರವೇಶಿಸಬಹುದು ಎಂಬ ಒಂದು ವಿಶ್ವಾಸ ಅವನಲ್ಲಿತ್ತು. ಭಾರತ ಮತ್ತು ಕೆನಡಾ ಇವೆರಡೂ ಪ್ರದೇಶಗಳು ಬ್ರಿಟಿಷ್ ಸಾಮ್ರಾಜ್ಯದ ಭಾಗಗಳಾಗಿದ್ದವು ತಾನೆ!

ಜತೆಗೆ, ಒಂದು ವರ್ಷ ಮುಂಚೆ, 1913ರಲ್ಲಿ 38 ಜನ ಪಂಜಾಬಿಗಳು ಕೆನಡಾವನ್ನು ಪ್ರವೇಶಿಸಲು ಅಲ್ಲಿನ ಕೋರ್ಟ್ ಸಹಾಯ ಮಾಡಿತ್ತು. ಈ 38 ಜನ ಕೆನಡಾವನ್ನು ಪ್ರವೇಶಿಸಿದಾಗ, ಮೊದಲಿಗೆ ಅಧಿಕಾರಿಗಳು ಅವರನ್ನು ತಡೆದಿದ್ದರು.
ಅವರು ಕೋರ್ಟ್ ಮೊರೆ ಹೋದರು. ಮಧ್ಯೆ ತಡೆ ಇಲ್ಲದೇ, ನೇರವಾಗಿ ಕೆನಡಾವನ್ನು ತಲುಪಬೇಕು ಎಂಬ ನಿಯಮ ಸರಿಯಲ್ಲ ಎಂದು ಅಲ್ಲಿನ ಓರ್ವ ನ್ಯಾಯಾಧೀಶ ಅಭಿಪ್ರಾಯ ಪಟ್ಟು, ಆ 38 ಜನ ಸಿಖ್ಖರಿಗೆ ಪ್ರವೇಶಿಸಲು ಅನುಮತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ತಮಗೂ ಪ್ರವೇಶ ಸಿಗಬಹುದು ಎಂಬುದು ಗುರುದೀತ್ ಸಿಂಗ್‌ನ ನಿರೀಕ್ಷೆ.

ಆದರೆ, ಈ ನಡುವೆ ಕೆನಡಾದ ಅಧಿಕಾರಿಗಳು ಭಾರತೀಯರ ವಿರುದ್ಧದ ಕಾನೂನುಗಳನ್ನು ಇನ್ನಷ್ಟು ಬಿಗಿ ಗೊಳಿಸಿದ್ದರು. ಜತೆಗೆ, ಈ ಹಡಗಿನಲ್ಲಿ ಬಂದಿರುವವರು ಗದರ್ ಚಳವಳಿಯ ಕಾರ್ಯಕರ್ತರು, ದಂಗೆ ಏಳುವವರು ಎಂದು ಅಲ್ಲಿನ ಮಾಧ್ಯಮಗಳು ವ್ಯಾಪಕವಾಗಿ ಪ್ರಚಾರ ಮಾಡಿದ್ದವು. ಆ ದಿನಗಳಲ್ಲಿ (1914೧೪), ಭಾರತದಲ್ಲಿ ಗದರ್ ಚಳವಳಿಯ ಹೋರಾಟಗಾರರು ಬ್ರಿಟಿಷರ ವಿರುದ್ಧ ತೀವ್ರ ಹೋರಾಟವನ್ನು ಚಾಲ್ತಿಯಲ್ಲಿಟ್ಟಿದ್ದರು. ತಾವೆಲ್ಲರೂ ಹಡಗಿನಿಂದ ಇಳಿಯಲು ನಿರ್ಬಂಧ ಇದ್ದರೂ, ಗುರುದೀತ್ ಸಿಂಗ್‌ನು ವಾಂಕೋವರ್ ನಗರದ ಕೆಲವು ವಕೀಲರನ್ನು ಸಂಪರ್ಕಿಸಿ, ಅಲ್ಲಿನ ಕೋರ್ಟ್‌ನಲ್ಲಿ ತಮಗೆ ಕೆನಡಾ ಪ್ರವೇಶಿಸಲು ಅವಕಾಶ ನೀಡಬೇಕೆಂದು ದಾವೆ ಹೂಡಿದ.

ಭಾರತ ಸಹ ಕೆನಡಾದ ರೀತಿಯೇ ಬ್ರಿಟಿಷ್ ಸಾಮ್ರಾಜ್ಯದ ಭಾಗ ಆಗಿರುವುದರಿಂದ, ತಮಗೆ ವಿವಿಧ ರೀತಿಯ
ನಿಯಂತ್ರಣ ಹೇರುವುದು ತಪ್ಪು ಎಂದು ಮನವಿ ಮಾಡಿದ. ಆದರೆ, ಭಾರತ ವಸಾಹತಿನಿಂದ ಹೊರಟ ನಂತರ, ಮಧ್ಯೆ ಎಲ್ಲೂ ನಿಲ್ಲದೇ ನೇರವಾಗಿ ಕೆನಡಾ ಪ್ರವೇಶಿಸಬೇಕು ಮತ್ತು ಪ್ರತಿ ಪ್ರಯಾಣಿಕನ ಬಳಿ 200 ಡಾಲರ್ ಇರಬೇಕು ಎಂಬ ನಿಯಮವನ್ನು ಮೀರುವಂತಿಲ್ಲ ಎಂದು ಅಲ್ಲಿನ ನ್ಯಾಯಾಲಯ ಅಭಿಪ್ರಾಯಪಟ್ಟು, ಇವರೆಲ್ಲರೂ ಕೂಡಲೇ ಭಾರತಕ್ಕೆ ಹಿಂದಿರುಗಬೇಕು ಎಂದು ಆದೇಶ ನೀಡಿತು. ಇಷ್ಟರಲ್ಲಾಗಲೇ ಹಲವು ವಾರಗಳು ಕಳೆದಿದ್ದವು.

ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಮನವಿ ಮಾಡಿಕೊಳ್ಳುವಷ್ಟು ತಾಳ್ಮೆ, ಚೈತನ್ಯ ಗುರುದೀತ್ ಸಿಂಗ್ ಮತ್ತು ಅವನ ಸಂಗಾತಿಗಳಿಗೆ ಇರಲಿಲ್ಲ. ಈ ನಡುವೆ ಕೋಮಗಾಟ ಮಾರು ಹಡಗಿನ ಕಪ್ತಾನ ಮತ್ತು ಪ್ರಯಾಣಿಕರ ನಡುವೆ ಮನಸ್ತಾಪ ಹುಟ್ಟಿ, ಎಲ್ಲರೂ ಕಪ್ತಾನನ ವಿರುದ್ಧ ಘೋಷಣೆ ಕೂಗಿದ್ದರು. ಇದನ್ನು ಗುರುತಿಸಿದ ಕೆನಡಾ ಮಾಧ್ಯಮವು, ಇವರೆಲ್ಲರೂ ದಂಗೆ ಎದ್ದು, ಚಳವಳಿ ನಡೆಸುತ್ತಿದ್ದಾರೆ ಮತ್ತು ಗದರ್ ಪಕ್ಷದವರು ಹಡಗಿನಲ್ಲಿದ್ದಾರೆಂದು ವರದಿ ಮಾಡಿತು. ಇದಕ್ಕೆ ಬ್ರಿಟಿಷ್ ಸರಕಾರದ ಒಳಸಂಚು ಸಹ ಕಾರಣ.

ಇಷ್ಟೂ ದಿನವೂ ವಾಂಕೋವರ್ ಬಂದರಿನಲ್ಲಿ, ಸಮುದ್ರದ ಮಧ್ಯೆ ಇದ್ದ ಪಯಣಿಗರು ಕಂಗೆಟ್ಟಿದ್ದರು. ಕೆನಡಾ ನ್ಯಾಯಾಲಯದ ಆದೇಶದಂತೆ ಅವರು ಭಾರತಕ್ಕೆ ವಾಪಸಾಗಬೇಕಾಯಿತು. ಕೆನಡಾ ತಲುಪಿ ಮೂರು ತಿಂಗಳುಗಳ ನಂತರ, ಜುಲೈ ೨೩ರಂದು, ಕೋಮಗಾಟ ಮಾರು ಹಡಗು ಭಾರತದತ್ತ ಹೊರಟಿತು. ಜಪಾನ್ ಮೂಲಕ ಬರುವಾಗ ಕೆಲವು ತಕರಾರುಗಳಿಗೆ ಸಿಲುಕಿ, ಸಾಕಷ್ಟು ವಿಳಂಬವಾಗಿ, ಸೆಪ್ಟೆಂಬರ್ 27, 1914ರಂದು ಕೊಲ್ಕೊತ್ತಾ ಹತ್ತಿರದ ಬುಡ್ಗೆ ಬುಡ್ಗೆ ಬಂದರನ್ನು ತಲುಪಿತು. ವಾಪಸಾಗುವಾಗ ನಡುವೆ ಜರ್ಮನಿಯ ಹಡಗೊಂದು ಎದುರಾದಾಗ, ಕುಶಲ ಸಮಾಚಾರವನ್ನು ಈ ಹಡಗಿನವರು ವಿನಿಮಯ ಮಾಡಿಕೊಂಡಿದ್ದರು. ಈ ನಡುವೆ ಮೊದಲನೆಯ ಮಹಾಯುದ್ಧ ಆರಂಭಗೊಂಡಿದ್ದು, ಬ್ರಿಟಿಷರು ಮತ್ತು ಜರ್ಮನರು ಬದ್ಧವೈರಿಗಳಾಗಿದ್ದರು. ಐದು ತಿಂಗಳು ಹಡಗಿನಲ್ಲಿದ್ದು, ಅನಿವಾರ್ಯವಾಗಿ ತಾಯ್ನಾಡಿಗೆ ವಾಪಸಾದ ಈ ಪಂಜಾಬಿಗಳನ್ನು ಬ್ರಿಟಿಷ್ ಸರಕಾರ ಸ್ವಾಗತಿಸಿದ್ದು ಗನ್‌ಬೋಟ್ ಮೂಲಕ. ಕೊಲ್ಕೊತ್ತಾದಲ್ಲಿ ಇಳಿಯಬೇಕೆಂದು ಬಯಸಿದ್ದ ಎಲ್ಲಾ ಪಂಜಾಬಿಗಳನ್ನೂ ಬಂಧನ ದಲ್ಲಿರಿಸುವ ಪ್ರಕ್ರಿಯೆಗೆ ಬ್ರಿಟಿಷರು ಮುಂದಾದರು.

ಇವರೆಲ್ಲರೂ ಕಾನೂನು ಮೀರಿ ಕೆನಡಾ ಪ್ರವೇಶಿಸಲು ಪ್ರಯತ್ನಿಸಿದ್ದಲ್ಲದೇ, ಅಪಾಯಕಾರಿ ರಾಜಕೀಯ ಹೋರಾಟ ಗಾರರು ಎಂದು ಬ್ರಿಟಿಷ್ ಸರಕಾರ ಪರಿಗಣಿಸಿತು. ಭಾರತದ ಕ್ರಾಂತಿಕಾರಿಗಳು ಈ ಜನರನ್ನು ದಂಗೆ ಏಳಲು ದುರುಪ ಯೋಗ ಮಾಡಿಕೊಳ್ಳುತ್ತಿದ್ದಾರೆಂದು ಸಹ ಬ್ರಿಟಿಷ್ ಸರಕಾರ ಘೋಷಿಸಿತು. ಹಡಗನ್ನು ತನ್ನ ವಶಕ್ಕೆ ಪಡೆದು,
ಗುರುಮೀತ್ ಸಿಂಗ್ ಮತ್ತು ಇತರ ಇಪ್ಪತ್ತು ಜನರನ್ನು ಬಂಧಿಸಲು ಬ್ರಿಟಿಷ್ ಪೊಲೀಸರು ಪ್ರಯತ್ನಿಸಿದರು. ಆದರೆ ಗುರುದೀತ್ ಸಿಂಗ್ ಮತ್ತು ಆತನ ಗೆಳೆಯರು ಪ್ರತಿರೋಧ ಒಡ್ಡಿದರು.

ಒಂದಿಬ್ಬರು ಪೊಲೀಸರಿಗೆ ಹೊಡೆತ ಬಿತ್ತು. ಇದೇ ನೆಪದಲ್ಲಿ ಬ್ರಿಟಿಷ್ ಪೊಲೀಸರು ಮನಬಂದಂತೆ ಗುಂಡು ಹಾರಿಸಿದರು. ಇನ್ನೇನು ಭಾರತದ ನೆಲದ ಮೇಲೆ ಇಳಿಯಬೇಕು ಎಂದುಕೊಂಡಿದ್ದ ಆ ಪಂಜಾಬಿಗಳಲ್ಲಿ ಸುಮಾರು ೨೬ ಜನ ಅಲ್ಲೇ ಹತರಾದರು. ಇತರರನ್ನು ಬಂಧಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸಿ ಪಂಜಾಬಿನ ಅವರವರ ಹಳ್ಳಿಗಳಿಗೆ ಕಳುಹಿಸಲಾಯಿತು. ಆದರೆ ಈ ಹತ್ಯಾಕಾಂಡವು ಬಹಳ ದಿನಗಳ ಕಾಲ ಪ್ರಚುರಗೊಳ್ಳಲಿಲ್ಲ; ಮೊದಲನೆಯ ಮಹಾಯುದ್ಧದ ನೆಪದಲ್ಲಿ ವಿಧಿಸಿದ ಸೆನ್ಸಾರ್ ನೀತಿಯಿಂದಾಗಿ, ಹಲವು ದಶಕಗಳ
ನಂತರವಷ್ಟೇ ಈ ಹತ್ಯಾಕಾಂಡದ ಗಂಭೀರತೆ ನಮ್ಮ ದೇಶದ ಜನರ ಗಮನಕ್ಕೆ ಬಂದಿತು.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, 1952 ರಲ್ಲಿ ಕೋಮಗಾಟ ಮಾರು ಘಟನೆಯಲ್ಲಿ ಮೃತರಾದ ಇಪ್ಪತ್ತು ಜನರನ್ನು ಹುತಾತ್ಮರೆಂದು ಪರಿಗ ಣಿಸಿ, ಬುಡ್ಗೆ ಬುಡ್ಗೆಯ ಬಳಿ ಸ್ಮಾರಕವೊಂದನ್ನು ನಿರ್ಮಿಸಿ, ಜವಾಹರಲಾಲ್ ನೆಹರೂ ಉದ್ಘಾಟಿಸಿದರು. ಅತ್ತ ಕೆನಡಾದಲ್ಲಿ, ನಂತರದ ದಶಕಗಳಲ್ಲಿ ಹೆಚ್ಚಿನ ಸಿಖ್ ಜನರು ನೆಲಸಿ, ಈ ಘಟನೆ ಯನ್ನು ನೆನಪಿಸಿಕೊಂಡರು. ಕೆನಡಾದ ಪ್ರಧಾನಮಂತ್ರಿಯು ಈ ಘಟನೆಯ ಕುರಿತು ತಪ್ಪೊಪ್ಪಿಗೆಯನ್ನು ನೀಡುವಂತೆ ಜನ ಒತ್ತಾಯಿಸಿ, ಯಶಸ್ವಿಯಾದರು. ಕೆನಡಾದಲ್ಲಿ ಈ ಘಟನೆಯನ್ನು ವ್ಯಾಪಕವಾಗಿ ನೆನಪಿಸಿಕೊಂಡು, ಸ್ಮಾರಕ ನಿರ್ಮಿಸಲಾಗಿದೆ.

ಭಾರತದಲ್ಲಿ ಕೊಲ್ಕೋತ್ತಾ ಬಂದರು ಪ್ರದೇಶದಲ್ಲಿ ಸ್ಮಾರಕ, ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದ್ದು, 26 ಜನ ಹುತಾತ್ಮರ ಹೆಸರನ್ನು ದಾಖಲಿಸಲಾಗಿದೆ. ಜಲಿಯನ್‌ವಾಲಾ ಬಾಗ್ ಘಟನೆಗಿಂತ ಐದು ವರ್ಷ ಮುಂಚೆ ನಡೆದ ಈ
ಘಟನೆಯು, ಬ್ರಿಟಿಷರ ದಬ್ಬಾಳಿಕೆಯ ನೀತಿ ಮತ್ತು ಕೊಲೆಗಡುಕ ಮನೋಭಾವವನ್ನು ಬಿಂಬಿಸುತ್ತಾ, ವಸಾಹತು ದಿನಗಳ ಕ್ರೂರ ಅಧ್ಯಾಯಗಳಲ್ಲಿ ಒಂದೆಂದು ದಾಖಲಾಗಿದೆ.

ಇದನ್ನೂ ಓದಿ: Shashidhara Halady Column: ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ