Saturday, 23rd November 2024

Shishir Hegde Column: ಭೂಗತರ ಸುರಂಗ- ಸುಲಭದಲ್ಲಾಗದು ಬಹಿರಂಗ

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳದಲ್ಲಿದ್ದರೂ ಹುಡುಕಿಕೊಂಡು ಬರುವೆ”- ಪೌರಾಣಿಕ ನಾಟಕಗಳಲ್ಲಿ, ಸಿನಿಮಾಗಳಲ್ಲಿ ಇದೊಂದು ಡೈಲಾಗ್ ಕೇಳಿರುತ್ತೀರಿ. ಭೂಲೋಕ, ಭುವರ್ಲೋಕ, ಮಹರ್ಲೋಕ, ಸತ್ಯಲೋಕ ಇತ್ಯಾದಿ ಮೇಲಿನ ಏಳು ಲೋಕಗಳಾದರೆ ಇವೆಲ್ಲ ಕೆಳಗಿನ ಲೋಕಗಳು. ಇಂಥ ಕೆಲವೊಂದಿಷ್ಟು ಪೌರಾಣಿಕ ಸಾಮ್ಯತೆಗಳು ಅಥವಾ ವೈರುಧ್ಯಗಳು ಅನ್ಯಪುರಾಣಗಳಲ್ಲಿಯೂ ಕಾಣಸಿಗುತ್ತವೆ.

ಗ್ರೀಕ್, ರೋಮನ್ ಪುರಾಣಗಳಲ್ಲಿ ಅಂಡರ್‌ವರ್ಲ್ಡ್- ಅಧೋಲೋಕದ ಕಲ್ಪನೆಗಳಿವೆ. ಟಾರ್ಟಾರಸ್ ಎಂದರೆ ಅದು ಕೆಟ್ಟವರನ್ನು ಶಿಕ್ಷಿಸಲಿಕ್ಕಿರುವ ಗ್ರೀಕರ ಭೂಗತ ಹಿಂಸಾಲೋಕ. ಈಜಿ ಪುರಾಣಗಳಲ್ಲಿ ಕೂಡ ‘ದಾಉತ್’ ಎಂದರೆ
ಕತ್ತಲೆಯ, ದುಷ್ಟರನ್ನು ಶಿಕ್ಷಿಸುವ ಘನಘೋರ ಲೋಕ. ಇಂಕಾ ಪುರಾಣಗಳಲ್ಲಿಯೂ ಇದೇ ಕಥೆ. ಮೂರು ಲೋಕ. ದೇವರಿರುವ ಮೇಲಿನ ಲೋಕ, ಮನುಷ್ಯ ಲೋಕ ಮತ್ತು ನೆಲದೊಳಕ್ಕೆ ಮರಣೋತ್ತರ ಶಿಕ್ಷಿಸುವ ಲೋಕ. ಚೀನಾದ
ಪುರಾಣಗಳಲ್ಲಿ ‘ದಿಯು’ ಎಂದರೆ ಹದಿನೆಂಟು ಸ್ತರಗಳಿರುವ ಅಂಥದ್ದೇ ನೆಲದೊಳಗಿನ ಲೋಕ. ಭಾರತೀಯ ಪುರಾಣಗಳ ನ್ನು ಹೊರತುಪಡಿಸಿ ಇನ್ನೆಲ್ಲ ಕಡೆ ನೆಲದೊಳಕ್ಕೆ ನರಕ ಸದೃಶ ಲೋಕದ ಇರುವಿಕೆಯ ನಂಬಿಕೆಯಿದೆ.

ಅಲ್ಲ ಭೂಗತ ಲೋಕದ ಆಳ್ವಿಕೆಗೆ ಯಮನಂಥ ರಾಜರುಗಳು ಇದ್ದಾರೆ. ಆದರೆ ಭಾರತೀಯ ಪುರಾಣಗಳಲ್ಲಿ ಬರುವ ಕೆಳಲೋಕಗಳು ಅಂಥವಲ್ಲ. ನಮ್ಮಲ್ಲಿನ ಕೆಳಲೋಕಗಳು ಸಮೃದ್ಧವಾದಂಥವು, ಶ್ರೀಮಂತವಾದಂಥವು, ಕೀಳಲ್ಲ. ಅರ್ಜುನನಿಗೇ ದಿವ್ಯಶಸವನ್ನು ಕೊಟ್ಟುಕಳುಹಿಸಿದ್ದಾರೆ ಎಂದರೆ ಅಲ್ಲಿನ ಶ್ರೀಮಂತಿಕೆಯನ್ನು ಅಂದಾಜಿಸಬೇಕು.

ನಮ್ಮ ಈ ಲೋಕಗಳು ಭೌತಿಕವೋ, ಪಾರಮಾರ್ಥಿಕವೋ ಎಂಬ ಗೊಂದಲವನ್ನು ಪಾಶ್ಚಾತ್ಯರು ತಮ್ಮದರ ಜತೆ ಹೋಲಿಸಿಕೊಂಡು ಹುಟ್ಟುಹಾಕಿರುವುದಂತೂ ನಿಜ. ಇರಲಿ. ನಾನಿಂದು ಹೇಳಲು ಹೊರಟಿರುವುದು ಭೂಗತ-
ನೆಲದೊಳಗಿನ ಸುರಂಗಗಳ ಲೋಕದ ಬಗ್ಗೆ. ಮನುಷ್ಯಕೃತ ಭೂಗತ ಲೋಕದ ಬಗ್ಗೆ. ಸುರಂಗ ಎಂದ ತಕ್ಷಣಕ್ಕೆ ನೆನಪಾಗುವ ವ್ಯಕ್ತಿ ಹೂವಾಕಿನ್ ಗುಜ್ಮಾನ್ ಅಲಿಯಾಸ್ ಎಲ್‌-ಚಾಪೋ. ಮೆಕ್ಸಿಕೋದ ಸಿನಲೋವಾ ಪ್ರದೇಶದ ಡ್ರಗ್ ಲಾರ್ಡ್. ಮೆಕ್ಸಿಕೋ ಡ್ರಗ್ಸ್ ಮಾಫಿಯಾದ ಅನಭಿಷಿಕ್ತ ದೊರೆಯಾಗಿ ಬರೋಬ್ಬರಿ 40 ವರ್ಷ ಮೆರೆದ ವ್ಯಕ್ತಿ. ಇವನದು ಬಹುಕೋಟಿ ಡಾಲರ್‌ನ ವ್ಯವಸ್ಥಿತ ಡ್ರಗ್ಸ್ ವ್ಯವಹಾರ. ಅಮೆರಿಕದಿಂದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದವರೆಗೆ- ಸುಮಾರು‌ ‌16 ದೇಶಗಳಿಗೆ ಇವನ ಮಾಫಿಯಾ ನೇರ ಡ್ರಗ್ಸ್ ಕಳ್ಳಸಾಗಾಣಿಕೆ ಮಾಡುತ್ತಿತ್ತು. ಅಂತಾರಾಷ್ಟ್ರೀಯ ಜಾಲ ಅವನದು. ಮೆಕ್ಸಿಕೋದಲ್ಲಿ ಇದ್ದಷ್ಟೂ ದಿನ ಇವನದು ಸಮಾನಾಂತರ ಸರಕಾರ.

ಸುಮಾರು 35 ಸಾವಿರ ಜನರ ಸಾವಿಗೆ ಇವನು ಕಾರಣನಾಗಿದ್ದಾನೆ ಎಂದರೆ ಇವನ ಬರ್ಬರ ಇತಿಹಾಸವನ್ನು ಊಹಿಸಿಕೊಳ್ಳಬಹುದು. ಇಂಥವನನ್ನು ಮೆಕ್ಸಿಕೋ ಸರಕಾರ ಅದೇನೋ ಹರಸಾಹಸ ಮಾಡಿ 1993ರಲ್ಲಿ ಬಂಧಿಸಿ ಜೈಲಿಗೆ ಹಾಕಿತು. ಅಲ್ಲಿನ ಜೈಲಧಿಕಾರಿಗಳಿಗೆ ಹಣ ತಿನ್ನಿಸಿ, ತೊಳೆಯಲೊಯ್ಯುತ್ತಿದ್ದ ಬಟ್ಟೆಯ ರಾಶಿಯಲ್ಲಿ ಅವಿತು ಜೈಲಿಂದ ಪರಾರಿಯಾಗಿದ್ದ. 14 ವರ್ಷದ ನಂತರ 2014ರಲ್ಲಿ ಇವನನ್ನು ಮೆಕ್ಸಿಕೋದಲ್ಲಿ ಇನ್ನೊಮ್ಮೆ ಬಂಧಿಸಿ, ಅಲ್ಲಿನ ಅತಿಭದ್ರತೆಯ ಜೈಲಿನಲ್ಲಿರಿಸಲಾಯಿತು. ಅಂಥ ಜೈಲಿನಿಂದಲೇ ಎರಡನೇ ಬಾರಿ ಆತ ಎಸ್ಕೇಪ್ ಆಗಿದ್ದ.

ಅವನಿದ್ದದ್ದು ಒಂದು ಚಿಕ್ಕ ಸೆಲ್‌ನಲ್ಲಿ. ಅಲ್ಲಿದ್ದದ್ದು ಒಂದು ಹಾಸಿಗೆ ಹಾಕುವಷ್ಟು ಜಾಗ ಪಕ್ಕದಂದು ಚಿಕ್ಕ, ನಾಲ್ಕು
ಫ್ಲ್ಯಾಟಿನ ಅಡ್ಡ ಗೋಡೆ, ಅದರಾಚೆ ಒಂದು ಸ್ನಾನ-ಶೌಚಕ್ಕೆ ಜಾಗ. ಅವನು ಹಿಂದೊಮ್ಮೆ ಜೈಲಿನಿಂದ ತಪ್ಪಿಸಿ ಕೊಂಡದ್ದರಿಂದ ಅವನ ಮೇಲೆ 24 ಗಂಟೆ ನಿಗಾ ವಹಿಸಲೆಂದು ಜೈಲಿನ ಸೆಲ್ ನೊಳಗೆ ಸಿಸಿ ಟಿವಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಅವನ ಸೆಲ್ ಇದ್ದದ್ದು ಜೈಲಿನ ಮಧ್ಯಭಾಗದಲ್ಲಿ. ಅಂಥ ಜಾಗ ದಿಂದ ಆತ ಬಹಳ ರೋಚಕ ವಾಗಿ ತಪ್ಪಿಸಿಕೊಂಡಿದ್ದ. ಅವನಿದ್ದ ಜೈಲಿನ ಸುಮಾರು ಒಂದೂವರೆ ಕಿಲೋಮೀಟರ್ ದೂರದ ಖಾಲಿ ಜಾಗದಲ್ಲಿ ಮುರುಕು ಮನೆಯೊಂದಿತ್ತು. ಅಲ್ಲಿಂದ ಅವನ ಗ್ಯಾಂಗಿನವರು ಸುರಂಗವೊಂದನ್ನು ಕೊರೆದಿದ್ದರು. ಒಂದೂವರೆ ಕಿಲೋಮೀಟರ್ ಉದ್ದದ ಸುರಂಗ- ಅದು ಜೈಲಿನ ಅಕ್ಕಪಕ್ಕದಲ್ಲಿದ್ದ ಮನೆಗಳ ಅಡಿಯಲ್ಲಿ ಹಾದುಹೋಗಿತ್ತು. ಅದೊಂದು ಅತ್ಯಾಧುನಿಕ ಸುರಂಗ.

ಅದನ್ನು ತೋಡುವಾಗ ಒಳಗೆ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗಿತ್ತು. ಆಮ್ಲಜನಕ ಪೂರೈಕೆಯ ವ್ಯವಸ್ಥೆಯೂ ಇತ್ತು. ರೈಲುಹಳಿಯ ರೀತಿಯ ಚಿಕ್ಕ ಹಳಿಯನ್ನು ಅಷ್ಟೂ ಉದ್ದಕ್ಕೆ ಹಾಕಲಾಗಿತ್ತು. ಮೋಟಾರ್ ಬೈಕಿನ ಚಕ್ರವನ್ನು ಆ ಹಳಿಗೆ ಅಳವಡಿಸಲಾಗಿತ್ತು. ಟಾಯ್ಲೆಟ್‌ನಿಂದ ಕೆಳಕ್ಕಿಳಿದ ಎಲ್ ಚಾಪೋ ಅಲ್ಲಿದ್ದ ಬೈಕನ್ನು ಏರಿ ಪರಾರಿ ಯಾಗಿದ್ದ. ಆ ಸುರಂಗ ಸುಮಾರು ಒಂದೂವರೆ ಕಿಲೋಮೀಟರ್ ಉದ್ದದಲ್ಲಿ- ಕೊನೆ ಯಲ್ಲಿ ಚಿಕ್ಕದಾಗಿ ತೆರೆದು ಕೊಂಡದ್ದು ಎಲ್ ಚಾಪೋ ಇದ್ದ ಜೈಲಿನ ಪಾಯಿಖಾನೆಯಲ್ಲಿ. ಅದೇನು ಸುಲಭದ ಸುರಂಗದ ಕೆಲಸವಲ್ಲ. ಅಷ್ಟುದ್ದದ ಸುರಂಗ ಮಾರ್ಗ- ಕರಾರುವಾಕ್ಕಾಗಿ ಅವನಿದ್ದ ಸೆಲ್ಲಿನಲ್ಲಿಯೇ, ಪಾಯಿಖಾನೆಯಲ್ಲಿಯೇ ತೆರೆದು ಕೊಳ್ಳಬೇಕು. ಒಂದೇ ಒಂದು ಇಂಚು ಆಚೀಚೆ ಆದರೆ ಇನ್ನೆಲ್ಲಿಯೋ ತೆರೆದುಕೊಂಡು- ಜೈಲಿನ ನೆಲ ಕುಸಿದು ಎಡವಟ್ಟಾಗಬಹುದು. ಅಷ್ಟೇ ಅಲ್ಲ, ಈ ಸುರಂಗ ನೆಲದೊಳಕ್ಕೆ ಸುಮಾರು 35 ಫೀಟು ಕೆಳಕ್ಕೆ.

ಇದ್ಯಾವುದಕ್ಕೂ ಯಾವುದೇ ಭಾರಿ ಯಂತ್ರೋಪಕರಣ ಬಳಸುವಂತಿಲ್ಲ. ಶಬ್ದವಾದರೆ, ನೆಲ ಕಂಪಿಸಿದರೆ ಜೈಲಿನ ಅಲಾರಂಗಳು ಬೊಬ್ಬೆಹೊಯ್ದುಕೊಳ್ಳುತ್ತವೆ. ಬಹುಶಃ ಮನುಷ್ಯ ಇತಿಹಾಸದಲ್ಲಿನ ಅತ್ಯಂತ ರೋಚಕ, ಕೆಲವೇ ಕೆಲವು ಗ್ರೇಟ್ ಎಸ್ಕೇಪ್‌ಗಳಲ್ಲಿ ಇದಕ್ಕೆ ಮೊದಲ ಸ್ಥಾನ. 2014ರಲ್ಲಿ ಅವನು ಈ ರೀತಿ ಸುರಂಗದ ಮೂಲಕ
ತಪ್ಪಿಸಿ ಕೊಂಡಾಗ ಇಡೀ ಮೆಕ್ಸಿಕೋ ಸರಕಾರ ಅಮೆರಿಕ ಮತ್ತಿತರ ದೇಶಗಳ ಎದುರು ತಲೆತಗ್ಗಿಸಬೇಕಾಯಿತು.

ಅಮೆರಿಕ ಅದೆಷ್ಟು ಗರಂ ಆಗಿತ್ತು ಎಂದರೆ ಮುಂದಿನ ಒಂದೇ ವರ್ಷದಲ್ಲಿ ಅವನನ್ನು ಪುನಃ ಬಂಧಿಸಿ ಅಮೆರಿಕಕ್ಕೆ ಗಡಿಪಾರು ಮಾಡಲಾಯಿತು. ಸದ್ಯ ಎಲ್-ಚಾಪೋನನ್ನು ಅಮೆರಿಕದ ಅತ್ಯಂತ ಸುರಕ್ಷಿತ ಜೈಲಾದ ಕೊಲರಾಡೋದ ವಿಶೇಷ ಜೈಲಿನಲ್ಲಿ ಇರಿಸಲಾಗಿದೆ. ಈಗ ಅವನದ್ದು ಏಕಾಂತವಾಸ- ಸಾಯುವಲ್ಲಿಯವರೆಗೆ. ಅವನನ್ನು ಈ ಜೈಲಿನಲ್ಲಿ‌ ಡಲು ಕಾರಣವಿದೆ. ಇದು ‘ಸುರಂಗ-ಪ್ರೂಫ್’ ಜೈಲು. ಎಲ್-ಚಾಪೋ ಸುರಂಗದಲ್ಲಿ ತಪ್ಪಿಸಿಕೊಂಡದ್ದಕ್ಕಿಂತ ಪಲಾಯನಕ್ಕೆ ತಯಾರಾದ ಸುರಂಗ, ಅದರ ಆಧುನಿಕತೆ ಮತ್ತು ಕರಾರುವಾಕ್ಕುತನ‌ ಜಗತ್ತಿನ ಸುದ್ದಿಮಾಧ್ಯಮಗಳಲ್ಲ ಸಂಚಲನ ಮೂಡಿಸಿತ್ತು.

ಮೆಕ್ಸಿಕೋದ ಡ್ರಗ್ಸ್ ಮಾಫಿಯಾಗಳಿಗೆ ಸುರಂಗ ತೊಡುವುದು ಹೊಸತಲ್ಲ. ಅಮೆರಿಕದ ಮೆಕ್ಸಿಕೋ ಗಡಿಯ ಉದ್ದ ಸುಮಾರು 3 ಸಾವಿರ ಕಿಲೋಮೀಟರ್. ಇದು‌ ಭಾರತ-ಪಾಕಿಸ್ತಾನದ ಭೂಗಡಿಗಿಂತ ಸುಮಾರು ಆರುನೂರು
ಕಿಲೋ ಮೀಟರ್ ಜಾಸ್ತಿ. ಇಷ್ಟುದ್ದದ ಗಡಿಯನ್ನು ನಿರ್ವಹಿಸುವುದು ಅಮೆರಿಕಕ್ಕೆ ದೊಡ್ಡ ತಲೆನೋವು. ಅತ್ತಕಡೆ
ಮೆಕ್ಸಿಕೋದ ಗಡಿಗುಂಟದ ಜಿಗಳೆಲ್ಲ ನಡೆಯುವುದೇ ಡ್ರ‌ಗ್ಸ್‌ ಹಣ ಮತ್ತು ವ್ಯವಹಾರದಿಂದ. ಅಲ್ಲ ಅಸಂಖ್ಯ ಸುರಂಗಗಳಿವೆ. ಆ ಸುರಂಗಗಳ ಮೂಲಕ ಅತ್ತಕಡೆಯಿಂದ ಡ್ರಗ್ಸ್‌ ಅಮೆರಿಕದ ಒಳಕ್ಕೆ ಬರುತ್ತದೆ; ಜತೆಯಂದಿಷ್ಟು ಜನ
ನುಸುಳುಕೋರರು ಅಮೆರಿಕವನ್ನು ಹೊಕ್ಕುವುದು ಕೂಡ ಈ ಸುರಂಗಗಳ ಮೂಲಕ. ಸುರಂಗಗಳ ಯಜಮಾನರಿಗೆ
ಇಂತಿಷ್ಟು ಎಂದು ಕೊಟ್ಟರೆ ಅವನ್ನು ಬಳಸಬಹುದು.

ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಹಲವಾರು ಊರುಗಳಿವೆ. ಅಲ್ಲಿನ ಮನೆಗಳು ಗಡಿಗೋಡೆಯ ಪಕ್ಕದಲ್ಲಿಯೇ ಇವೆ. ಈ
ಸುರಂಗಗಳು ಮೆಕ್ಸಿಕೋದ ಮನೆಯ ಕೋಣೆಯಿಂದ ಇನ್ನೊಂದು ಕಡೆ ಅಮೆರಿಕದ ನೆಲದ, ಯಾವುದೊ
ಮನೆಯಲ್ಲಿ ಬಾಯಿ ತೆರೆದುಕೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಒಂದರಿಂದ ಎರಡು, ಹೆಚ್ಚೆಂದರೆ ಮೂರರಿಂದ
ನಾಲ್ಕು ಕಿಲೋಮೀಟರ್. ಆದರೆ ಅವೆಲ್ಲವೂ ಅಷ್ಟೇ ಉತ್ಕೃಷ್ಟ ಮಟ್ಟದವು. ಅಷ್ಟೇ ನಿಖರ, ಸಯ್ಯಳತೆಯವು. ಈಗಾಗಲೇ ಅಮೆರಿಕ ಇಂಥ ಸುಮಾರು ನಾಲ್ಕು ನೂರು ಸುರಂಗಗಳನ್ನು ಕಂಡುಹಿಡಿದು ಧ್ವಂಸ ಮಾಡಿದೆ. ಒಂದು ಅಂದಾಜಿನ ಪ್ರಕಾರ ಇವತ್ತಿಗೂ ಸುಮಾರು ನೂರು ಸುರಂಗಗಳು ಅಲ್ಲಿವೆ, ಬಳಕೆಯಲ್ಲಿ. ಅಮೆರಿಕದ ಸುದ್ದಿವಾಹಿನಿ ಗಳು ವಾರಕ್ಕೊಮ್ಮೆಯಾದರೂ ಈ ಸುರಂಗಗಳ ಬಗ್ಗೆ ಸುದ್ದಿಮಾಡುತ್ತವೆ. ಅಮೆರಿಕಕ್ಕೆ ಇದೆಷ್ಟು ದೊಡ್ಡ ಸಮಸ್ಯೆಯೆಂದರೆ ಇದನ್ನು ನಿಲ್ಲಿಸಲು ಆಯಕಟ್ಟಿನ ಪ್ರದೇಶಗಳಲ್ಲಿ ರೇಡಾರ್ ಬಳಸಲಾಗುತ್ತದೆ. ಆದರೆ ಎಷ್ಟೆಂದು ಕಾಯುವುದು, ಎಷ್ಟೆಂದು ಹುಡುಕುವುದು!? ಅಷ್ಟು ನೈಪುಣ್ಯದ ಟನಲ್ ತೊಡುವುದೆಂದರೆ ಅದು ‘ಎಂಜಿನಿಯರಿಂಗ್ ಮಾರ್ವೆಲ್’.

ನೆಲದೊಳಕ್ಕೆ ತೋಡುವ ವಿಶೇಷ ನೈಪುಣ್ಯವುಳ್ಳ ಕೆಲಸದವರು ಅದಕ್ಕೆ ಬೇಕು. ಎರಡು ಕಿಲೋಮೀಟರ್ ಉದ್ದದ ಸುರಂಗವು ಬೇಕಾದ ಒಂದು ಚದರಡಿಯ ಅಳತೆಯಲ್ಲಿ ಹೇಳಿದಲ್ಲಿ ತೆರೆದುಕೊಳ್ಳಬೇಕು ಎಂದರೆ ಆ ಇಡೀ ಜಾಗದ ಸರ್ವೆ, ಅಲ್ಲಿನ ಮಣ್ಣಿನ ಗುಣ, ಕಲ್ಲು ಇತ್ಯಾದಿಯೆಲ್ಲದರ ಅರಿವಿರಬೇಕು. ಬೆಂಗಳೂರಿನ ಮೆಟ್ರೋ ಸುರಂಗ ತೋಡಿದಂತೆ ಯಂತ್ರಗಳನ್ನು ಬಳಸುವಂತಿಲ್ಲ.

ಒಂದು ಕಿಲೋಮೀಟರ್ ಉದ್ದದ ಸುರಂಗ ಎಂದುಕೊಳ್ಳಿ, ಅದನ್ನು ತೋಡುವಾಗ ಅದೆಷ್ಟು ಸರಿಯಳತೆಯಿರಬೇಕು
ಎಂದರೆ ಒಂದೇ ಒಂದು ಡಿಗ್ರಿ ಕೋನ ವ್ಯತ್ಯಾಸವಾದರೆ ತಲುಪಬೇಕಾದ ಜಾಗಕ್ಕಿಂತ ಸುಮಾರು ಹದಿನೇಳು ಮೀಟರ್
ಬೇರೆಡೆ ಸುರಂಗ ಮುಟ್ಟುತ್ತದೆ. ನೆಲದೊಳಕ್ಕೆ ಜಿಪಿಎಸ್ ಕೆಲಸಮಾಡುವುದಿಲ್ಲ. ಸುರಂಗ ಸರಿಯಾದ ಮಾರ್ಗದಲ್ಲಿ
ನಿರ್ಮಾಣವಾಗುತ್ತಿದೆಯೇ ಎಂದು ತಿಳಿಯಲು ಇದೆಲ್ಲವನ್ನೂ ಬಹಿರಂಗವಾಗಿ ಪರೀಕ್ಷಿಸುವಂತಿಲ್ಲ. ಏಕೆಂದರೆ, ಇದೆಲ್ಲವೂ ‘ಕಳ್ಳವಂತಿಕೆಯ’ ಕೆಲಸ! ಅಂತೆಯೇ ಇದೆಲ್ಲವನ್ನೂ ಮಾಡುವುದು ‘ಎಲ್ ಆಂಡ್ ಟಿ’ಯಂಥ ಯಾವುದೋ ಮಲ್ಟಿನ್ಯಾಷನಲ್ ಕಂಪನಿಯಲ್ಲ, ಈ ಕಸರತ್ತು ಮಾಡುವುದು ಕಳ್ಳಕಾರರು! ಅಂತೆಯೇ ಗೌಪ್ಯತೆಯೂ ಅಷ್ಟೇ ಮಹತ್ವದ್ದು. ಅದೆಲ್ಲದಕ್ಕಿಂತ ದೊಡ್ಡ ಕಷ್ಟವೆಂದರೆ ಅಷ್ಟು ತೋಡಿದ ಸುರಂಗದ ಮಣ್ಣನ್ನು ಕಾಣದಂತೆ ಎಲ್ಲಿ ಹಾಕುವುದು? ಉತ್ತರ ಕೊರಿಯಾ ಎಂಥ ದೇಶ ಎಂಬುದರ ಅಂದಾಜು ನಿಮಗಿರಬಹುದು. ಕಿಮ್ ಜಾಂಗ್ ಉನ್ ಈ ದೇಶವನ್ನು ಜಗತ್ತಿನಿಂದ ಪ್ರತ್ಯೇಕಿಸಿಟ್ಟಿದ್ದಾನೆ.

ಅಲ್ಲಿ ಇಂಟರ್ನೆಟ್, ವಾಕ್ ಸ್ವಾತಂತ್ರ್ಯ ಎಲ್ಲವೂ ನಿರ್ಬಂಧಿತ. 70ರ ದಶಕದಲ್ಲಿ ಉತ್ತರ ಕೊರಿಯಾ ದೇಶವು ದಕ್ಷಿಣ ಕೊರಿಯಾದೊಳಕ್ಕೆ ನುಗ್ಗಲು, ದಾಳಿ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಸುರಂಗಗಳನ್ನು ಕೊರೆದಿತ್ತು. ಅವುಗಳಲ್ಲಿ ಹೆಚ್ಚಿನವು ಇಂದು ಮುಚ್ಚಿವೆ. ಆದರೆ ಈ ಸುರಂಗ ಕೊರೆಯುವ ಉತ್ತರ ಕೊರಿಯಾದ ಚಾಳಿ ಮಾತ್ರ ಇಂದಿಗೂ ನಿಂತಿಲ್ಲ. ಕಿಮ್‌ಗೆ ಅಮೆರಿಕವನ್ನು ಕಂಡರಾಗುವುದಿಲ್ಲ. ಅಮೆರಿಕದ ಯಾವುದೇ ವಸ್ತು ಉತ್ತರ ಕೊರಿಯಾದಲ್ಲಿ ನಿಷಿದ್ಧ. ಆದರೆ ಉತ್ತರ ಕೊರಿಯಾದವರಿಗೆ ಅಮೆರಿಕನ್ ವಸ್ತುಗಳೆಂದರೆ ಎಲ್ಲಿಲ್ಲದ ಆಸೆ. ಅದರಲ್ಲಿಯೂ ‘ಕೆಎಫ್‌ ಸಿ’ಯ ಕರಿದ ಚಿಕನ್ ಎಂದರೆ ಕೇಳಲೇಬೇಡಿ! ಇಂದು ಉತ್ತರ ಕೊರಿಯಾದ ಸುರಂಗಗಳು ಬಳಸಲ್ಪಡುವುದು ಇಂಥ ಕೆಲವು ವಸ್ತುಗಳನ್ನು ಸ್ಮಗಲ್ ಮಾಡಲು. ಕೆಲವು ತಿಂಗಳ ಹಿಂದೆ ಒಂದು ವರದಿ ಬಂದಿತ್ತು, ಅದೇನೆಂದರೆ, ಉತ್ತರ ಕೊರಿಯಾ ದಲ್ಲಿ ಒಂದು ದಿನ ಮುಂಚೆ ಕೆಎಫ್‌ ಸಿ ಚಿಕನ್ ಬೇಕೆಂದರೆ ಆರ್ಡರ್ ಮಾಡಬೇಕಂತೆ. ಮಾರನೆಯ ದಿನ ದಕ್ಷಿಣ ಕೊರಿಯಾದಿಂದ ಕರಿದ ಚಿಕನ್ ಸುರಂಗದ ಮೂಲಕ ಸರಬರಾಜಾಗುತ್ತದಂತೆ.

ಜಗತ್ತಿನ ಬಹುತೇಕ ಪುರಾಣಗಳಲ್ಲಿ ಹೇಗೆ ನೆಲದಾಳದ ಲೋಕದ ನಂಬಿಕೆಯಿದೆಯೋ ಅಲ್ಲ ಮಾರ್ಗಗಳೆಂದರೆ
ಸುರಂಗಗಳೇ ಅಲ್ಲವೇ? ನೆಲದೊಳಕ್ಕೆ ಸುರಂಗ ತೋಡುವುದು ಬಹುತೇಕ ನಾಗರಿಕತೆಗಳ ಭಾಗವೇ ಆಗಿದೆ. ನಗರ ನೈರ್ಮಲ್ಯಕ್ಕೆಂದು ಸುರಂಗಗಳು ಮೆಸಪಟೋಮಿಯಾ ಕಾಲದಲ್ಲಿಯೇ ಇತ್ತು. ನಮ್ಮಲ್ಲಿಯೂ ಕೋಟೆಗಳಲ್ಲಿ ಗುಪ್ತ ಸುರಂಗ ಮಾರ್ಗಗಳಿರುತ್ತಿದ್ದವು. ರೋಮನ್ನರು ಸುರಂಗ ನಿರ್ಮಾಣದಲ್ಲಿ ಪ್ರವೀಣರಾಗಿದ್ದರು. ರಕ್ಷಣೆಗೆ, ಸಾಗಾಣಿಕೆಗೆ ಅವನ್ನು ನಿರ್ಮಿಸಿಕೊಂಡಿದ್ದರು. ಚೀನಾದ ಮಹಾಗೋಡೆಯ ಕೆಳಗೆ ಇತ್ತ ಲಿಂದ ಅತ್ತಲಿಗೆ ಹಲವಾರು ಸುರಂಗ ಗಳನ್ನು ರಕ್ಷಣೆಗೆ-ಪ್ರತಿದಾಳಿಗೆ ಕೊರೆಯಲಾಗಿದೆ. ಅವು ಇಂದಿಗೂ ಇವೆ. ಲಂಡನ್ನಿನ ಥೇಮ್ಸ ನದಿಯ ಕೆಳಗೆ ಸುರಂಗ ವನ್ನು 1843ರಲ್ಲಿ ನಿರ್ಮಿಸಲಾಗಿತ್ತು.

ಆದರೆ ಎಲ್ಲಿಲ್ಲದ ಪ್ರಮಾಣದಲ್ಲಿ ಸುರಂಗಗಳನ್ನು ತೋಡಿದ್ದು ವಿಶ್ವಯುದ್ಧದ ಸಮಯ ದಲ್ಲಿ. ಯುರೋಪಿನಲ್ಲಿ ಯುದ್ಧ ಸಮಯದಲ್ಲಿ ಏನಿಲ್ಲವೆಂದರೂ ಐದಾರು ಸಾವಿರ ಕಿಲೋಮೀಟರಿನಷ್ಟು ಸುರಂಗಗಳನ್ನು ಮಾಡಿಕೊಳ್ಳ ಲಾಗಿತ್ತು. ಭಾರತ-ಪಾಕಿಸ್ತಾನ ನಡುವೆಯೂ ಆಗೀಗ ಸುರಂಗಗಳು ಸಿಗುವುದಿದೆ. ಸುರಂಗಗಳಲ್ಲಿಯೇ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡವರು ಹಮಾಸ್ ಉಗ್ರರು. ಆರು ನೂರರಿಂದ ಒಂದು ಸಾವಿರ ಕಿಲೋಮೀಟರ್ ಉದ್ದದ, ಒಂದಕ್ಕೊಂದು ಸಂಧಿಸುವ ಅನನ್ಯ ಸುರಂಗ ವ್ಯವಸ್ಥೆ ಅವರದ್ದು.

ಇಸ್ರೇಲ್ ದಾಳಿ ಆರಂಭವಾದಂದಿನಿಂದ ಪ್ರತಿದಿನ ಗಾಜಾದಲ್ಲಿ ಸುರಂಗಗಳು ಸಿಕ್ಕುತ್ತಲೇ ಇವೆ. ಹಮಾಸ್ ಸುರಂಗ ಗಳೆಂದರೆ ಕೇವಲ ಒಬ್ಬ ಮನುಷ್ಯ ಅಥವಾ ಇಬ್ಬರು ಜತೆಯಲ್ಲಿ ಸಾಗುವಷ್ಟು ಅಳತೆಯ, ಇಲಿ ಬಿಲದಂಥ ಸುರಂಗವೆಂಬ ಕಲ್ಪನೆ ಬೇಡ. ಹಿಂದಿನ ವಾರವಷ್ಟೇ ಗಾಜಾಪಟ್ಟಿಯಲ್ಲಿ ಸಿಕ್ಕ ಬೃಹತ್ ಸುರಂಗ ಮಾರ್ಗ ಅದೆಷ್ಟು ವ್ಯವಸ್ಥಿತವೆಂದರೆ ಒಳಕ್ಕೆ ನೂರು ಕಿಲೋಮೀಟರ್ ಉದ್ದದವರೆಗೆ ವಿದ್ಯುತ್ ಸಂಪರ್ಕ, ಬೆಳಕು ಮತ್ತು ಉಸಿರಾಟಕ್ಕೆ ಗಾಳಿಯ ಪೂರೈಕೆಯಿದೆ. ಅದೆಷ್ಟು ಅಗಲವೆಂದರೆ ಎರಡು ಲಾರಿಗಳು ಆಚೀಚೆ ಹಾಯಬಹುದು, ಹತ್ತು ಫೀಟ್ ಎತ್ತರ. ಅಲ್ಲಿ ಅವರು ಮಾಡಿಕೊಂಡಿರುವುದು ಸಾವಿರ ಕಿಲೋಮೀಟರ್ ಉದ್ದದ ಸುರಂಗ- ಆ ಗಾಜಾಪಟ್ಟಿ ಇರುವುದೇ ಗರಿಷ್ಠ ಹನ್ನೆರಡು ಕಿಲೋಮೀಟರ್ ಅಗಲ ಮತ್ತು 41 ಕಿಲೋಮೀಟರ್ ಉದ್ದ. ಈ ಸುರಂಗಗಳು ಲೆಬನಾನ್ ಮತ್ತು ಈಜಿ ದೇಶಗಳಿಗೂ ಸಾಗಿದೆ. ಇಸ್ರೇಲಿನೊಳಕ್ಕೆ ಕೂಡ ಈ ವ್ಯವಸ್ಥೆ ಬಾಯಿತೆರೆದುಕೊಂಡದ್ದು ಸಿಕ್ಕಿದೆ. 365 ಚದರ ಕಿ.ಮೀ. ಜಾಗದಲ್ಲಿ ಸಾವಿರ ಕಿ.ಮೀ. ಸುರಂಗವೆಂದರೆ ಅದೆಂಥ ವ್ಯವಸ್ಥೆ ಅಂದಾಜಿಸಿಕೊಳ್ಳಿ.

ನೆಲದೊಳಕ್ಕೆ ಒಂದೋ ಎರಡೋ ಕಿಲೋಮೀಟರ್ ಸುರಂಗ ತೊಡುವುದೇ ದೊಡ್ಡ ವಿಷಯ. ಅದಕ್ಕೆ ಎಲ್ಲಿಲ್ಲದ
ನಿಖರತೆ ಬೇಕು, ನೆಲದ ಗುಣಲಕ್ಷಣ ತಿಳಿದಿರಬೇಕು, ತೋಡಿದ ಸುರಂಗ ಕುಸಿದು ಬೀಳದಂತೆ ಅದಕ್ಕೆ ಆಲಂಬನ
ಕೊಡಬೇಕು, ತೋಡುವಾಗ ಮತ್ತು ನಂತರ ಉಸಿರಾಡಲಿಕ್ಕೆ ಗಾಳಿ ಹಾಯುವ ವ್ಯವಸ್ಥೆ ಆಗಬೇಕು, ವಿದ್ಯುತ್, ಬೆಳಕು
ಬೇಕು. ಅಲ್ಲಿಯೇ ವಾಸಿಸಲು ಯೋಗ್ಯವಾಗುವಂಥ ಕೋಣೆ, ಪಾಯಿಖಾನೆ, ಅಡುಗೆಮನೆ ಹೀಗೆ ಎಲ್ಲ ವ್ಯವಸ್ಥೆಯನ್ನೂ
ಮಾಡಿಕೊಂಡಿzರೆ. ಒಂದೆರಡಲ್ಲ- ನೂರಾರು. ಅಂಥ ಸುರಂಗವನ್ನು ಕಲ್ಲಿರಲಿ, ಮಣ್ಣಿರಲಿ- ಎಲ್ಲವನ್ನೂ ಕೈಗುದ್ದಲಿ ಯಿಂದಲೇ ಭೇದಿಸಬೇಕು. ಅಷ್ಟೇ ಅಲ್ಲ, ಇದೆಲ್ಲವೂ ಗೌಪ್ಯವಾಗಿ ಇಸ್ರೇಲಿಗೆ ತಿಳಿಯದಂತೆ ನಡೆಯಬೇಕು.

ಇಸ್ರೇಲಿನ ಬೇಹುಗಾರಿಕೆ ವ್ಯವಸ್ಥೆಗೆ ಜಗತ್ತಿನಲ್ಲಿಯೇ ಅತ್ಯುತ್ಕೃಷ್ಟ ಎಂಬ ಅಗ್ಗಳಿಕೆ ಇದೆ. ಹಾಗಿದ್ದಾಗಿಯೂ ಈ
ಸುರಂಗ ವ್ಯವಸ್ಥೆಗಳು ಆಸ್ಪತ್ರೆಗಳ, ಶಾಲೆಗಳ, ಮಸೀದಿಗಳ ಕೆಳಗೆ ನಿಖರ ಜಗದಲ್ಲಿ ಬಾಯಿತೆರೆದುಕೊಳ್ಳುತ್ತವೆ. ಸಾವಿರ
ಕಿಲೋಮೀಟರ್ ಉದ್ದದ ಸುರಂಗವನ್ನು ದೈಹಿಕ ಶ್ರಮದಿಂದಲೇ ಕೊರೆಯಬೇಕೆಂದರೆ ಅಷ್ಟು ಜನರಿಗೆ ವಿಷಯ ತಿಳಿ
ದಂತಾಯಿತು. ಅಲ್ಲದೇ ಅಷ್ಟೊಂದು ಪ್ರಮಾಣದಲ್ಲಿ, ಬೃಹತ್ ಸುರಂಗಗಳನ್ನು ಕೊರೆಯುವಾಗ ಅಲ್ಲಿನ ಮಣ್ಣನ್ನು
ಹೊರಹಾಕಬೇಕಾಯಿತು. ಇವ್ಯಾವುದೂ ಮೊಸಾದ್‌ನಂಥ ಇಸ್ರೇಲಿನ ಬೇಹುಗಾರಿಕೆ ವ್ಯವಸ್ಥೆಗೆ ತಿಳಿಯಲಿಲ್ಲ ಎಂಬುದನ್ನು ನಂಬಲಿಕ್ಕಾಗುವುದಿಲ್ಲ. ಹಮಾಸ್-ಗಾಜಾ ಮಂದಿಯ ಸುರಂಗ ತೊಡುವ ಚಾಳಿ ಇಂದು ನಿನ್ನೆಯ ದಲ್ಲ.

ಈಜಿ -ಗಾಜಾ ನಡುವಿನ ಸುರಂಗಗಳು ಎಲ್ಲರಿಗೂ ಬಹುಕಾಲದಿಂದ ತಿಳಿದಿದ್ದ ವಿಷಯ. ಹಾಗಂತ ಇಸ್ರೇಲ್ ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂರುವ ದೇಶವೇನಲ್ಲ. ಹಾಗಿದ್ದರೆ ಅದು ತಿಳಿದೂ ಕಡೆಗಣಿಸಿ ಸುಮ್ಮ ನಾಯಿತೇ? ಇದು ಬಗೆಹರಿಯುವುದಿಲ್ಲ. ಇಂಥ ಕಂಡು ಕೇಳರಿಯದ ಸುರಂಗ ವ್ಯವಸ್ಥೆಯಿಂದ, ಪಾತಾಳಗರಡಿ ಯನ್ನು ಬಳಸಿ ಮೇಲಕ್ಕೆತ್ತುವಂತೆ ಹಮಾಸ್ ಭಯೋತ್ಪಾದಕರನ್ನು ಇಸ್ರೇಲ್ ಮೇಲಕ್ಕೆತ್ತಿ ಸ್ವಚ್ಛತಾಕಾರ್ಯ ನಡೆಸುತ್ತಿದೆ ಎಂಬುದೇ ಸಮಾಧಾನ.

ಇದನ್ನೂ ಓದಿ: Shishir Hegde Column: ನಂಬಿಕೆ- ಎರಡು ಕಥೆಗಳು