ಶಿಶಿರಕಾಲ
ಶಿಶಿರ್ ಹೆಗಡೆ
shishirh@gmail.com
ದೇಶದ ಸಾಲ ತೀರಿಸಬೇಕೆಂದರೆ ಒಂದೋ ಖರ್ಚು ಕಡಿಮೆ ಮಾಡಿ, ಅಭಿವೃದ್ಧಿ ನಿಲ್ಲಿಸಿ ತೆರಿಗೆಯನ್ನು ಹೆಚ್ಚಿಸಬೇಕು, ಇಲ್ಲವೇ ಅಷ್ಟು ಪ್ರಮಾಣದಲ್ಲಿ ದೇಶದಲ್ಲಿ ನೈಸರ್ಗಿಕ ಸಂಪತ್ತು ಇರಬೇಕು, ಉತ್ಪಾದನೆ ಹೆಚ್ಚಬೇಕು. ಇಂದಿನ ರಾಜಕೀಯದಲ್ಲಿ ಯಾವುದೇ ದೇಶದ ಸರಕಾರ ಸಾಲ ತೀರಿಸಬೇಕೆಂದು ತೆರಿಗೆ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕುವಂತಿಲ್ಲ. ಹೆಚ್ಚಿಸಿದರೆ ಅದರ ನೇರ ಪರಿಣಾಮ ದೇಶದ ಉತ್ಪಾದನೆ- ಜಿಡಿಪಿಯ ಮೇಲೂ ಆಗುತ್ತದೆ. ಹೀಗೆ ಒಂದಕ್ಕೊಂದು ಕೊಂಡಿಯಾಗಿರುವುದರಿಂದ ಸಾಲ ಒಂದು ಹದದಲ್ಲಿರುವಂತೆ ಮಾತ್ರ ಎಲ್ಲ ಸರಕಾರಗಳು ನೋಡಿಕೊಳ್ಳುತ್ತವೆ.
ನ್ಯೂಯಾರ್ಕ್ ನಗರದ ಮ್ಯಾನ್ಹಟ್ಟನ್ನ ತೀರಾ ಜನನಿಬಿಡ ರಸ್ತೆಯೊಂದರಲ್ಲಿ ಈ ಡಿಜಿಟಲ್ ಗಡಿಯಾರವಿದೆ. ಅದನ್ನು ಕ್ಲಾಕ್ ಎಂದು ಕರೆದರೂ ಅದು ಸಮಯ ತೋರಿಸುವ ಗಡಿಯಾರವಲ್ಲ. ಅದೊಂದು ದೀರ್ಘ ಅಂಕಿ ಗಳಿರುವ ಸಂಖ್ಯೆಯ ಡಿಜಿಟಲ್ ಫಲಕ. ಆ ಫಲಕದಲ್ಲಿ ಸಂಖ್ಯೆ ಅತಿವೇಗದಲ್ಲಿ ಬದಲಾಗುತ್ತಲೇ ಇರುತ್ತದೆ, ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಅದೆಷ್ಟು ದೊಡ್ಡ ಸಂಖ್ಯೆ ಎಂದರೆ ಅದನ್ನು ಒಂದೇ ಜಪಾಟಿಗೆ ಬಿಡಿ, ಹತ್ತು, ನೂರು ಎಂದು ಲೆಕ್ಕಹಾಕುವುದು ಕಷ್ಟ. ಕೈಬೆರಳಷ್ಟೇ ಅಲ್ಲ ಕಾಲುಬೆರಳೂ ಕೂಡ ಲೆಕ್ಕಿಸುವಾಗ ಬೇಕಾಗುವಷ್ಟು ದೊಡ್ಡ, ಹದಿನಾಲ್ಕು ಅಂಕಿಗಳ ಸಂಖ್ಯೆ ಅದು. ಅದರ ಕೊನೆಯ ಆರು ಅಂಕಿಗಳು ಕಣ್ಣು ಮಿಟುಕಿಸುವುದರೊಳಗೆ ಬದಲಾಗಿ ರುತ್ತವೆ. ಇದು ಅಮೆರಿಕದ ಸಾಲವನ್ನು ತೋರಿಸುವ ಗಡಿಯಾರ- Debt Clock. ಈ ಡಿಜಿಟಲ್ ಫಲಕ ಆ ರಸ್ತೆಯಲ್ಲಿ 35 ವರ್ಷದಿಂದ ಇದೆ. ಅದರಲ್ಲಿರುವ ಸಂಖ್ಯೆಯೂ ಅಂದಿನಿಂದ ಇಂದಿನವರೆಗೂ ನಿರಂತರ ಹೆಚ್ಚುತ್ತಲೇ ಇದೆ. ಜಗತ್ತಿನ ಎಲ್ಲಾ ದೇಶಗಳದ್ದೂ ಸಾಲವಿದೆ.
ಜಗತ್ತಿನಲ್ಲಿ ಒಟ್ಟೂ 195 ದೇಶಗಳಿವೆ. ಆದರೆ ಪ್ರಪಂಚದಲ್ಲಿ ಸಾಲವಿರುವ ದೇಶಗಳ ಸಂಖ್ಯೆ ಎಷ್ಟೆಂದು ನೋಡಿದರೆ ಅದು 209! ದೇಶಗಳ ಸಂಖ್ಯೆಗಿಂತ ಸಾಲವಿರುವ ದೇಶಗಳ ಸಂಖ್ಯೆ ಹೆಚ್ಚಾಗುವುದಾದರೂ ಹೇಗೆ? ಅದಕ್ಕೊಂದು ಕಾರಣವಿದೆ. ಜಗತ್ತಿನಲ್ಲಿ ಹತ್ತೆಂಟು ದ್ವೀಪಗಳಿಗೆ ದೇಶವೆಂಬ ಮಾನ್ಯತೆ ಸಿಕ್ಕಿಲ್ಲದಿದ್ದರೂ ಅವು ಸ್ವತಂತ್ರ ದೇಶ ದಂತೆಯೇ ಆರ್ಥಿಕ ವ್ಯವಸ್ಥೆಯನ್ನು ಹೊಂದಿವೆ. ಅವುಗಳದೂ ಸಾಲಗಳಿವೆ. ಹಾಗಾಗಿ ಸಾಲದ ವಿಷಯದಲ್ಲಿ ಮಾತ್ರ ಅವುಗಳು ದೇಶಗಳೆಂದು ಉಳಿದ ದೊಡ್ಡ ದೇಶಗಳು ಒಪ್ಪುತ್ತವೆ. ‘ಆಟಕ್ಕುಂಟು, ಲೆಕ್ಕಕ್ಕಿಲ್ಲ’ ಎಂಬಂತೆ.
ಇಂದು ಪ್ರಶ್ನೆ ಮೂಡುತ್ತದೆ- ಜಗತ್ತಿನ ಎಲ್ಲಾ ದೇಶಗಳೂ ಸಾಲದಲ್ಲಿಯೇ ಇದ್ದರೆ ಅಂಥ ಸಾಲವನ್ನು ಕೊಡುವವರು
ಯಾರು? ದೇಶ ತಾನೇ ಸಾಲದಲ್ಲಿದ್ದರೂ ಇನ್ನೊಂದು ದೇಶಕ್ಕೆ ಸಾಲ ಕೊಡುವುದು ಹೇಗೆ, ಏಕೆ? ಇವೆಲ್ಲ ಪ್ರಶ್ನೆಗಳೂ ಸಹಜ. ಅಷ್ಟಕ್ಕೂ ಸಾಲವೆಂದರೆ ಏನು? ತನಗೆ ಬೇಕಾದ ಹಣವನ್ನು ಬಳಕೆಗೆ ಎರವಲು ಪಡೆಯುವುದು ಮತ್ತು
ನಂಬಿಕೆಯಿಂದ ಪಡೆದ ಹಣಕ್ಕೆ ಸಮಯಕ್ಕನುಗುಣವಾಗಿ ಇಂತಿಷ್ಟು ಎಂದು ಸೇರಿಸಿ ವಾಪಸ್ ಕೊಡುವುದು, ಅಲ್ಲವೇ? ಇದನ್ನೇ ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಸಾಲ ಕೊಡುವವನು ನಂಬಿಕೆಯಿಂದ ತನ್ನ ಹಣವನ್ನು ಇನ್ನೊಬ್ಬನಲ್ಲಿ ಕೊಟ್ಟಿಡುವುದು, ಹಣವನ್ನು ದುಡಿಯಲು ಬಿಡುವುದು.
ಹಾಗೆ ಕೊಡುವಾಗ ನಂಬಿಕೆ ಜೀವಂತವಾಗಿರುವವರೆಗೆ ಹಣ ಕೊಟ್ಟವನು ಒಂದು ರೀತಿಯಲ್ಲಿ ಸೇಫ್ ಡೆಪಾಸಿಟ್ ಮಾಡಿದಂತೆ. ಇಲ್ಲಿ ಒಬ್ಬ ಸಾಲ ಪಡೆದಿzನೆ ಎಂದರೆ ಆತ ನಂಬಿಕೆಗೆ ಯೋಗ್ಯವೆಂದಾಯಿತು. ಇಲ್ಲಿ ಮಲ್ಯ ಸಾಹೇಬ್ರ ನ್ನು ಈಗ ನೆನಪಿಸಿಕೊಳ್ಳಬಾರದು! ಎಂದರೆ ಹೆಚ್ಚು ಸಾಲ ಪಡೆದವನು ಹೆಚ್ಚಿಗೆ ಯೋಗ್ಯ ಎನ್ನುವುದಾ ಯಿತು. ಇಲ್ಲಿ ಕೇವಲ ಸಾಲದ ಮೊತ್ತವೇನೆಂದಷ್ಟೇ ಮಾಪಕವಾಗಿ ನೋಡುವಂತಿಲ್ಲ. ಗೂಡಂಗಡಿ ಯವನ ಸಾವಿರ ರುಪಾಯಿ ಸಾಲವನ್ನು, ಅಂಬಾನಿಯ ಸಾವಿರ ಕೋಟಿ ಸಾಲವನ್ನು ಒಟ್ಟಿಗೆ ತೂಗುವಂತಿಲ್ಲ. ಹಾಗೆ ಹೋಲಿಸಿದರೆ ಗೂಡಂಗಡಿ ಯವನೇ ಉತ್ತಮ ವ್ಯವಹಾರಸ್ಥ ಎಂದಂತಾಗುತ್ತದೆ. ಅಂತೆಯೇ ದೇಶಗಳ ಸಾಲ. ದೇಶದ ಸಾಲವೆಂದರೆ ಏನು? ದೇಶಗಳೇಕೆ ಸಾಲ ಮಾಡಬೇಕು? ಸುಮ್ಮನೆ ವಾರ್ಷಿಕ ಆದಾಯದಷ್ಟೇ ಖರ್ಚು ಮಾಡಿಕೊಳ್ಳು ವಂತೆ ಬಜೆಟ್ ಮಾಡಿದರಾಯಿತಲ್ಲ.
ಹೊಸತಾಗಿ ಸಾಲ ಮಾಡುವುದು ನಿಲ್ಲಿಸಿಬಿಡಬಹುದಲ್ಲ? ಅದು ಅಸಾಧ್ಯವಾಗುವುದು ಈ ಕೆಲವು ಕಾರಣಗಳಿಂದ. ಮೊದಲನೆಯದಾಗಿ ಬದಲಾಗುವ ದೇಶದ ಜನಸಂಖ್ಯಾ ಅನುಪಾತ. ಎಲ್ಲಾ ದೇಶಗಳ ಸರಾಸರಿ ವಯಸ್ಸು ನಿರಂತರ ಹೆಚ್ಚುತ್ತಿದೆ. ಈ ಬಗ್ಗೆ ಈಗೆರಡು ವಾರದ ಹಿಂದೆ ಲೇಖನ ಬರೆದಿದ್ದೆ. ಒಂದು ದೇಶದಲ್ಲಿ ದುಡಿಯದೇ ಇರುವವರ, ವಿಶ್ರಾಂತರ ಪ್ರಮಾಣ ಹೆಚ್ಚಿದಷ್ಟು ಖರ್ಚು ಕೂಡ ಹೆಚ್ಚುತ್ತದೆ. ಅದನ್ನು ಸರಕಾರವೆಂಬ ವ್ಯವಸ್ಥೆಯೇ ಭರಿಸಬೇಕು. ಪಿಂಚಣಿ ಪಡೆಯುವವರ ಪ್ರಮಾಣ ಮತ್ತು ಸರಾಸರಿ ಆಯಸ್ಸು ಯಾವುದೇ ದೇಶಕ್ಕೆ ದೊಡ್ಡ ಖರ್ಚಿನ ಬಾಬ್ತು.
ಇದರ ಜತೆ ಎಲ್ಲಿಲ್ಲದ ಪ್ರಮಾಣದಲ್ಲಾಗುತ್ತಿರುವ ವಾತಾವರಣ ವೈಪರೀತ್ಯ, ನೈಸರ್ಗಿಕ ವಿಕೋಪಗಳು. ಅದೆಲ್ಲವನ್ನು ಮೀರುವ ಇನ್ನೊಂದು ಕಾರಣವೆಂದರೆ ಸದ್ಯದ ಬಹುತೇಕ ದೇಶಗಳ ರಾಜಕೀಯ- ಪ್ರಜಾಪ್ರಭುತ್ವ ವ್ಯವಸ್ಥೆ. ಪ್ರತಿ ಅಲ್ಪಕಾಲದ ಸರಕಾರಕ್ಕೂ ಪಡೆಯುವುದಕ್ಕಿಂತ ಕೊಡುವುದೇ ಜಾಸ್ತಿಯಾಗಿರಬೇಕಾದ ಅನಿವಾರ್ಯತೆ. ಇವಿಷ್ಟೇ ದೇಶಗಳು ಸಾಲ ಎತ್ತಲು ಸ್ಥೂಲ ಕಾರಣಗಳು. ಇದೇ ಕಾರಣಕ್ಕೆ ಪಾಕಿಸ್ತಾನದಂಥ ದೇಶವೂ ಸಾಲ ಮಾಡುತ್ತದೆ, ಅಮೆರಿಕದಂಥ ಶ್ರೀಮಂತ ದೇಶವೂ ಸಾಲ ಎತ್ತುತ್ತದೆ.
ದೇಶಗಳು ಎತ್ತುವ ಸಾಲದಲ್ಲಿ ಎರಡು ನಮೂನೆ. ಆಂತರಿಕ ಸಾಲ ಮತ್ತು ಬಾಹ್ಯ ಸಾಲ. ದೇಶವೊಂದು ಅನ್ಯರಿಂದ ಹಣವನ್ನು ಸಾಲವಾಗಿ ಪಡೆಯುವುದು ಬಾಹ್ಯ ಸಾಲವಾದರೆ, ದೇಶ/ಸರಕಾರ ಅಲ್ಲಿನ ಜನರಿಂದ ಎತ್ತುವ ಆಂತರಿಕ ಸಾಲ ಇನ್ನೊಂದು. ನಾವು ಬ್ಯಾಂಕಿನಲ್ಲಿಟ್ಟ ಹಣ ಒಂದರ್ಥದಲ್ಲಿ ಸರಕಾರಕ್ಕೆ ನಾವೆ ಸಾಲ ಕೊಟ್ಟಂತೆ. ದೇಶ ಇನ್ನೊಂದು ದೇಶಕ್ಕೆ ಬಾಂಡ್ಗಳನ್ನು ಕೊಟ್ಟು, ಎಂದರೆ ಪತ್ರದಲ್ಲಿ ತಾನು ತೀರಿಸುತ್ತೇನೆ ಎಂದು ಬರೆದುಕೊಟ್ಟು ಪಡೆಯುವ ಸಾಲ ಬಾಹ್ಯಸಾಲ.
ಇವೆರಡರ ಒಟ್ಟು ಮೊತ್ತವೇ ದೇಶದ ಒಟ್ಟೂ ಸಾಲ. ಯಾವುದೇ ದೇಶಕ್ಕೆ ತೀರಿಸಲು ತಾಕತ್ತಿದೆ ಎಂದರೆ ಅದಕ್ಕೆ ಸಾಲ ಕೊಡಲು ದೇಶಗಳು ಸರತಿಯಲ್ಲಿ ನಿಲ್ಲುತ್ತವೆ. ಅದೇ ದೇಶ ಬಡವಾದರೆ ಸಾಲ ಕೊಡಲು ಉಳಿದ ದೇಶಗಳು ಹಿಂದೆ ಮುಂದೆ ನೋಡುತ್ತವೆ. ಆ ಕಾರಣಕ್ಕೇ ಅಮೆರಿಕದ ಬಾಂಡ್ಗಳನ್ನು ಉಳಿದ ದೇಶಗಳು ಲೈನ್ನಲ್ಲಿ ನಿಂತು ಖರೀದಿಸು ತ್ತವೆ. ಖರೀದಿಸುವುದು ಎಂದರೆ ಇದು ಅಮೆರಿಕಕ್ಕೆ ಸಾಲ ಕೊಡುವುದು. ಹೇಗೆ ಅಂಬಾನಿಗೆ ಸಾಲ ಕೊಡಲು ಬ್ಯಾಂಕ್ ಗಳು ಲೈನಿನಲ್ಲಿ ನಿಲ್ಲುತ್ತವೆಯೋ ಹಾಗೆ. ಮಲ್ಯಾಗೆ ಕೂಡ ಅಂದು ಆ ಕಾರಣಕ್ಕೆ ಪೈಪೋಟಿಯಲ್ಲಿ ನಿಂತು ಬ್ಯಾಂಕು ಗಳು ಸಾಲ ಕೊಟ್ಟಿದ್ದು. ದೇಶಗಳು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ (ಉದಾ: ಐಎಂಎಫ್) ಕೂಡ ಹಣವನ್ನು
ಪಡೆಯುತ್ತವೆ.
ಎಲ್ಲ ದೇಶದ ಸಾಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಅಮೆರಿಕದ ಸದ್ಯದ ಸಾಲವೆಷ್ಟು ಗೊತ್ತೇ?
ಬರೋಬ್ಬರಿ 36 ಟ್ರಿಲಿಯನ್! ಅದರಲ್ಲಿ 26 ಟ್ರಿಲಿಯನ್ ಮಾತ್ರ ಬಾಹ್ಯ ಸಾಲ. ಸರಾಸರಿ ಪ್ರತಿ ಅಮೆರಿಕನ್ ಮೇಲಿರುವ ಸಾಲ ಸುಮಾರು 80 ಲಕ್ಷ ರುಪಾಯಿ. ಅಮೆರಿಕದ ಜಿಡಿಪಿ 25 ಟ್ರಿಲಿಯನ್. ಬಹುತೇಕ ರಾಷ್ಟ್ರಗಳದ್ದು ಇದೇ ಕಥೆ.
ಜಿಡಿಪಿಗಿಂತ ಸಾಲವೇ ಜಾಸ್ತಿ. ಹಾಗಾದರೆ ಅಮೆರಿಕ, ಬ್ರಿಟನ್, ಭಾರತ, ಚೀನಾ ಮೊದಲಾದ ದೇಶಗಳಿಗೆ ಈ ಸಾಲ ವನ್ನು ತೀರಿಸಲು ಸಾಧ್ಯವೇ ಇಲ್ಲವೇ? ಜಿಡಿಪಿಯ ಜತೆ ರಾಷ್ಟ್ರೀಯ ಸಾಲವನ್ನು ಹೋಲಿಸಿ ನೋಡುವುದು ಸಮಂಜ ಸವೇ ಆದರೆ ಇಂದನ್ನು ಗ್ರಹಿಸಬೇಕು. ಜಿಡಿಪಿ ಎಂದರೆ ಒಂದು ದೇಶದ ಶ್ರೀಮಂತಿಕೆ ಅಥವಾ ದೇಶ ಹೊಂದಿದ ಹಣದ ಮೊತ್ತವಲ್ಲ.
ಬದಲಿಗೆ ದೇಶ ಒಂದು ವರ್ಷದಲ್ಲಿ ತಯಾರಿಸಿದ ವಸ್ತುಗಳ ಮತ್ತು ಒದಗಿಸಿದ ಸೇವೆಗಳ ಬೆಲೆಯನ್ನು ಒಟ್ಟು ಮಾಡಿದರೆ ಅದು ಜಿಡಿಪಿ. ಸರಳವಾಗಿ ಹೇಳುವುದಾದರೆ ಅಮೆರಿಕ ದೇಶ ಒಂದೇ ವರ್ಷದಲ್ಲಿ 25 ಟ್ರಿಲಿಯನ್ ಡಾಲರ್ ಅನ್ನು ದುಡಿಯುತ್ತದೆ. ಇನ್ನೂ ಸರಳೀಕರಿಸುವುದಾದರೆ ಅಮೆರಿಕ ಒಂದೇ ಡಾಲರ್ ಅನ್ನು ಖರ್ಚು ಮಾಡದೇ ಸುಮಾರು ಹದಿನಾಲ್ಕು ತಿಂಗಳಿದ್ದುಬಿಟ್ಟರೆ ಮಿಕ್ಕುವ ಹಣದಲ್ಲಿ ತನ್ನ ಸಾಲವನ್ನೆಲ್ಲ ತೀರಿಸಿಬಿಡಬಹುದು. ಭಾರತದ 2024ರ ಜಿಡಿಪಿ 3.3 ಟ್ರಿಲಿಯನ್ ಡಾಲರ್. ಎಂದರೆ ಅಷ್ಟು ಹಣದ ಉತ್ಪನ್ನ ಭಾರತದಲ್ಲಿ ಹಿಂದಿನ ವರ್ಷ ತಯಾರಾ ಗಿದೆ ಎಂದರ್ಥ.
ಇನ್ನು ಭಾರತದ ಒಟ್ಟೂ ಸಾಲ 2.35 ಟ್ರಿಲಿಯನ್ ಡಾಲರ್. ಎಂದರೆ ಭಾರತ ಸರಕಾರ, ರಾಜ್ಯ ಸರಕಾರಗಳು ಎಲ್ಲ ಖರ್ಚು ನಿಲ್ಲಿಸಿಬಿಟ್ಟರೆ ಕೆಲವೇ ತಿಂಗಳುಗಳಲ್ಲಿ ತಮ್ಮೆಲ್ಲ ಸಾಲವನ್ನು ತೀರಿಸಿಬಿಡಬಹುದು. ಜಿಡಿಪಿ ಮತ್ತು ಸಾಲದ ಪ್ರಮಾಣವನ್ನೇ Debt to GDP Ratio ಎನ್ನುವುದು. ಇದು ದೇಶದ ಆರ್ಥಿಕ ಲೆಕ್ಕಾಚಾರದಲ್ಲಿ ಬಹುಮುಖ್ಯ ಆಯಾಮ. ಈ ಅನುಪಾತ ದೇಶದ ಆರ್ಥಿಕ ಸ್ಥಿತಿಯನ್ನು ಹೇಳುವುದಾದರೂ ‘ಇದುವೇ ಇದಮಿತ್ಥಮ್’ ಎನ್ನು ವಂತಿಲ್ಲ. ಇಡೀ ದೇಶದ ಆರ್ಥಿಕತೆಯನ್ನು ಇದೊಂದೇ ಮಾಪಕದಲ್ಲಿಟ್ಟು ಅಳೆಯುವುದು ಕೂಡ ಸಾಧುವಲ್ಲ. ಸಾಲದ ಮೊತ್ತ ದಿಂದಲೇ ದೇಶವನ್ನು ಅಳೆಯುವುದಾಗಿದ್ದರೆ ತನ್ನ ವಾರ್ಷಿಕ ಉತ್ಪಾದನೆಗಿಂದ ಎರಡೂವರೆ ಪಟ್ಟು ಸಾಲವನ್ನು ಜಪಾನ್ ಹೊಂದಿದೆ.
ಎಂದರೆ ಆ ದೇಶ ತನ್ನ ಸಾಲವನ್ನು ತೀರಿಸಲು ಎರಡೂವರೆ ವರ್ಷ ಉಪವಾಸವಿರಬೇಕು. ಆದರೆ ಜಪಾನ್ ಅಷ್ಟು ಚಿಕ್ಕದೇಶವಾದರೂ ಅದರ ಜಿಡಿಪಿ ಭಾರತಕ್ಕಿಂತ ಜಾಸ್ತಿ. ಹಾಗಾಗಿ ಸಲ ಹೆಚ್ಚಿದ್ದರೂ ಜಪಾನ್ ಆರ್ಥಿಕವಾಗಿ ನಮಗಿಂತ ಮುಂದೆ. ಅಮೆರಿಕ, ಜಪಾನ್, ಚೀನಾ, ಭಾರತ ಇವೆಲ್ಲ ಇಷ್ಟು ಉತ್ಪನ್ನವಿಟ್ಟುಕೊಂಡು ಅದೇಕೆ ಇನ್ನಷ್ಟು
ಸಾಲಮಾಡುತ್ತವೆ? ಸಾಧ್ಯವಿದ್ದರೂ ಈ ದೇಶಗಳು ಏಕಾಏಕಿ ಸಾಲ ತೀರಿಸುವುದಿಲ್ಲವೇಕೆ? ಯಾವುದಾದರೂ ಒಂದು ದೇಶ ಹೊಟ್ಟೆ ಬಟ್ಟೆ ಕಟ್ಟಿಟ್ಟು ತನ್ನೆಲ್ಲ ಸಾಲವನ್ನು ತೀರಿಸಿಬಿಟ್ಟರೆ ಒಮ್ಮಿಂದೊಮ್ಮೆಲೇ ಶ್ರೀಮಂತವೆನ್ನಿಸಿ ಕೊಂಡು ಬಿಡುತ್ತದೆಯೇ? ಆ ರೀತಿ ಸಾಲ ಮುಕ್ತವಾದ ದೇಶ ಇದೆಯೇ? ಅಮೆರಿಕದ ಏಳನೇ ಅಧ್ಯಕ್ಷ ಆಂಡ್ರೂ ಜಾಕ್ಸನ್ ‘ಸಾಲ ವೆಂದರೆ ಶೂಲ’ ಎನ್ನುವ ಮನೋಭಾವದವನಾಗಿದ್ದ. ಅವನ ಉದ್ದೇಶವಿದ್ದದ್ದೇ ಅಮೆರಿಕವನ್ನು ಸಾಲಮುಕ್ತ ವನ್ನಾಗಿಸಬೇಕು ಎಂದು. ಆಗ ಅಮೆರಿಕದ ಸರಕಾರಿ ಸ್ವಾಮ್ಯದಲ್ಲಿ ಯಥೇಚ್ಛ ಭೂಮಿಯಿತ್ತು.
ಅಧಿಕಾರ ವಹಿಸಿಕೊಂಡದ್ದೇ ತಡ, ಸರಕಾರದ ಬಹುದೊಡ್ಡ ಪಾಲಿನ ನೆಲವನ್ನೆಲ್ಲ ಇಲ್ಲಿನ ದೇಶವಾಸಿಗರಿಗೆ ಮಾರಿಬಿಟ್ಟ. ಇದರಿಂದ ಸರಕಾರಕ್ಕೆ ಎಷ್ಟು ಹಣ ಬಂತೆಂದರೆ ಅಮೆರಿಕದ ಸಾಲ 1835ರಲ್ಲಿ ಸಂಪೂರ್ಣ ಸೊನ್ನೆ ಯಾಗಿ ಬಿಟ್ಟಿತು. ಇದು ಆಗಿನ ಕಾಲಕ್ಕೆ ಬಹುಚರ್ಚಿತ ವಿಷಯ. ಒಂದು ದೇಶಕ್ಕೆ ಸಾಲವೇ ಇಲ್ಲವೆಂತೆಂದರೆ!! ಆತನ ಈ ಕಸರತ್ತಿನಿಂದ ಸಾಲ ತೀರಿ ಹಣ ಮಿಕ್ಕಿತ್ತು. ಅದನ್ನು ತನ್ನ ರಾಜ್ಯಗಳಿಗೆ ಹಂಚಿದ. ಆತನ ಈ ಎಲ್ಲ ಸರ್ಕಸ್ನಿಂದ ಅಂದು ಸಾಲ ಸೊನ್ನೆಯಾದದ್ದೇ ಹೊರತು ಅಂಥಾ ಹೇಳಿಕೊಳ್ಳುವ ಆರ್ಥಿಕ ಪವಾಡವೇನೂ ನಡೆಯಲಿಲ್ಲ. ಇಲ್ಲಿನ ರಾಜ್ಯಗಳು ಕೆಲವು ಕಾಲ ಟ್ಯಾP ಶೇಖರಿಸುವುದನ್ನು ನಿಲ್ಲಿಸಿದವು. ಸರಕಾರದ ಆದಾಯ ಕ್ರಮೇಣ ಕಡಿಮೆಯಾಯಿತು.
ಹಾಗೆಯೇ ರಾಜ್ಯಗಳಿಗೆ ಕೊಟ್ಟ ಹಣ ಖಾಲಿಯಾದವು. ನಂತರ ಬಂದ ಅಧ್ಯಕ್ಷರಿಗೆ ಆದಾಯ ತೆರಿಗೆ ವಿಧಿಸುವುದು ಕಷ್ಟವಾಯಿತು. ಅಲ್ಲದೇ ಇದರಿಂದ ಜನರ ಬಳಿ ಹಣ ಹೆಚ್ಚಿದವು. ಜನರಲ್ಲಿ ಹಣ ಹೆಚ್ಚಿದಂತೆ ವಸ್ತುಗಳು ದುಬಾರಿ ಯಾದವು. ಇದೆಲ್ಲ ಒಂದು ದೊಡ್ಡ ಆರ್ಥಿಕ ದೊಂಬರಾಟಕ್ಕೆ, ನಂತರದಲ್ಲಿ ರಿಸೆಶನ್ಗೆ ಕಾರಣವಾಯಿತು. ಅಲ್ಲದೇ ದೇಶದ ಉತ್ಪಾದನೆ ಕಡಿಮೆಯಾಯಿತು ಕೂಡ. ಅಂದಿನಿಂದ ಮುಂದೆ ಇಂಥದ್ದೊಂದು ಕೆಲಸಕ್ಕೆ ಬೇರಿನ್ಯಾರೂ ಕೈ ಹಾಕಲಿಲ್ಲ. ದೇಶದ ಸಾಲ ತೀರಿಸಬೇಕೆಂದರೆ ಒಂದೋ ಖರ್ಚು ಕಡಿಮೆ ಮಾಡಿ, ಅಭಿವೃದ್ಧಿ ನಿಲ್ಲಿಸಿ ತೆರಿಗೆಯನ್ನು ಹೆಚ್ಚಿಸಬೇಕು, ಇಲ್ಲವೇ ಅಷ್ಟು ಪ್ರಮಾಣದಲ್ಲಿ ದೇಶದಲ್ಲಿ ನೈಸರ್ಗಿಕ ಸಂಪತ್ತು ಇರಬೇಕು, ಉತ್ಪಾದನೆ ಹೆಚ್ಚಬೇಕು. ಇಂದಿನ ರಾಜಕೀಯದಲ್ಲಿ ಯಾವುದೇ ದೇಶದ ಅಧ್ಯಕ್ಷ, ಪ್ರಧಾನಿ ಸಾಲ ತೀರಿಸಬೇಕೆಂದು ತೆರಿಗೆ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕುವಂತಿಲ್ಲ.
ತೆರಿಗೆ ಹೆಚ್ಚಿಸಿದರೆ ಅದರ ನೇರ ಪರಿಣಾಮ ದೇಶದ ಉತ್ಪಾದನೆ- ಜಿಡಿಪಿಯ ಮೇಲೆ ಕೂಡ ಆಗುತ್ತದೆ. ಹೀಗೆ ಒಂದಕ್ಕೊಂದು ಕೊಂಡಿಯಾಗಿರುವುದರಿಂದ ಸಾಲ ಒಂದು ಹದದಲ್ಲಿರುವಂತೆ ಮಾತ್ರ ಎಲ್ಲ ಸರಕಾರಗಳು ನೋಡಿಕೊಳ್ಳುತ್ತವೆ. ಸಾಲ ತೀರಿದರೆ ಒಳ್ಳೆಯದೇ. ಆದರೆ ಅದಕ್ಕಿಂತ ಹೆಚ್ಚಾಗಿ ದೇಶದ ಉತ್ಪಾದನೆ ಸಾಲದ ಪ್ರಮಾಣಕ್ಕನುಗುಣ ವಾಗಿ ಏರುತ್ತಿದ್ದರೆ ಅದು ಸದೃಢತೆಯೆನ್ನಿಸಿಕೊಳ್ಳುತ್ತದೆ. ಸಾಲ ತೀರಿಸಲಷ್ಟೇ ಹೊರಟುಬಿಟ್ಟರೆ ಉತ್ಪಾದನೆ ಕಡಿಮೆಯಾಗುತ್ತದೆ. ಆಗ ಅದೆಲ್ಲದರ ಪರಿಣಾಮ ಸಾಲ ಹೊಂದಿರುವುದಕ್ಕಿಂತ ಭೀಕರವಾಗುತ್ತದೆ. ಈ ಕಾರಣಕ್ಕೆ ಸಾಲ ತೀರಿಸುವುದು ಅಂದುಕೊಂಡಷ್ಟು ಮುಖ್ಯವಾಗುವುದಿಲ್ಲ.
ಈಗ ಕೊನೆಯಲ್ಲಿ ಭಾರತದ ಸಾಲದ ಬಗ್ಗೆ ಸ್ವಲ್ಪ ವಿವರ ತಿಳಿಯೋಣ. ನಮ್ಮದು ಜಿಡಿಪಿ- ವಾರ್ಷಿಕ ಆದಾಯದಲ್ಲಿ
ಐದನೇ ಸ್ಥಾನ. ಸಾಲದಲ್ಲಿ 25ನೇ ಸ್ಥಾನ. ದೇಶದ ಒಟ್ಟೂ ಆಸ್ತಿಗೆ ಹೋಲಿಸಿದರೆ ನಮ್ಮ ಸಾಲ ಸರಿಸುಮಾರು ಆಸ್ತಿಯ 4 ಪರ್ಸೆಂಟ್. ಇದು ಉಳಿದ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆ. ನಮಗಿಂತ 150 ದೇಶಗಳು ಇದಕ್ಕಿಂತ ಜಾಸ್ತಿ
ಅನುಪಾತದಲ್ಲಿ ಸಾಲ ಹೊಂದಿವೆ. ಭಾರತದ ಆರ್ಥಿಕತೆಯ ಧನಾತ್ಮಕ ಅಂಶವೇನೆಂದರೆ, ಉಳಿದzಲ್ಲ ಆಂತರಿಕ ಸಾಲ. ಎಂದರೆ ಸರಕಾರ ದೇಶದ ಒಳಗೆ, ಜನರಲ್ಲಿ ಮಾಡಿದ ಸಾಲ. ಭಾರತದ ಬಾಹ್ಯ ಸಾಲ 682 ಬಿಲಿಯನ್ ಡಾಲರ್. ಅದರಲ್ಲಿ ಸುಮಾರು 150 ಬಿಲಿಯನ್ ಡಾಲರ್ ಮಾತ್ರ ವಿದೇಶ, ದ್ವಿಪಕ್ಷೀಯ ಸಂಬಂಧವುಳ್ಳ ದೇಶಗಳು, ಐಎಂಎಫ್ ಮೊದಲಾದವುಗಳಿಂದ ತಂದ ಸಾಲದ ಹಣ. ಅದು ಬಿಟ್ಟರೆ ಭಾರತ ಸರಕಾರದ ಬಾಹ್ಯ ಸಾಲದಲ್ಲಿ ಸುಮಾರು ಶೇ.25ರಷ್ಟು ಸಾಲ ಅಸಲಿಗೆ ನಮ್ಮವರದೇ ಹಣ. ಅದು ಎನ್ಆರ್ಐಗಳು ದೇಶದಲ್ಲಿ ಡೆಪಾಸಿಟ್ ಇಟ್ಟ- ಪರೋಕ್ಷ ವಾಗಿ ಸರಕಾರಕ್ಕೆ ಕೊಟ್ಟ ಸಾಲ. ಭಾರತದ ಅರ್ಥಿಕತೆಗೆ ಎನ್ಆರ್ಐಗಳ ಕೊಡುಗೆ ಬಹುಮಹತ್ವದ್ದು.
ಒಟ್ಟಾರೆ ಭಾರತದ ಸಾಲ ಆತಂಕವೆನ್ನಿಸುವ ಮಟ್ಟಿಗೆ ಸದ್ಯಕ್ಕಿಲ್ಲ. ಸಾಲ ಸಾಕಷ್ಟಿದೆ, ವ್ಯಯದ ದೊಡ್ಡ ಪ್ರಮಾಣದ
ಮೊತ್ತ ಬಡ್ಡಿಗೆ ಸಂದಾಯವಾಗುತ್ತದೆ ಎಲ್ಲವೂ ನಿಜ. ಆದರೆ ಹೋಲಿಕೆಯಲ್ಲಿ ನಾವು ನೂರೈವತ್ತು ದೇಶಗಳಿಗಿಂತ ಉತ್ತಮ. ಹಾಗಂತ ಇನ್ನಷ್ಟು ಸಾಲ ಮಾಡಿಕೊಳ್ಳಬೇಕೆಂದಲ್ಲ. ಸಾಲ ತಗ್ಗದಿದ್ದರೂ ಹಿಗ್ಗಬಾರದು. ದೇಶದ ಗಟ್ಟಿತನ
ಜೀವಂತವಿರಲು ಉತ್ಪಾದನೆ ಹೆಚ್ಚುತ್ತಲೇ ಹೋಗಬೇಕು- ಅದಕ್ಕೆ ತಕ್ಷಣಕ್ಕೆ ಬೇಕಾದ ಸಾಲವನ್ನು ಪಡೆಯಲೇಬೇಕು.
ಅದೇ ಆತ್ಮನಿರ್ಭರತೆಗೆ ಮಾರ್ಗ. ಸಾಲಮುಕ್ತವಾಗುವುದೇ ಆತ್ಮನಿರ್ಭರತೆಯೆಂದರೆ ಅದು ಅರ್ಧಸತ್ಯ. ಸಾಲವೆನ್ನು ವುದು ಶೂಲವಲ್ಲ, ಬದಲಿಗೆ ಸಮತೋಲನದ ಆರ್ಥಿಕತೆಯಲ್ಲಿ ಅವಶ್ಯಕತೆ ಎನ್ನುವುದು ಇಲ್ಲಿನ ಆಂತರ್ಯ. ಇದೆಲ್ಲವನ್ನು ತಿಳಿದಾಗ ದೇಶದ ಸಾಲ ಅಷ್ಟಿದೆಯಂತೆ-ಇಷ್ಟಿದೆಯಂತೆ- ಹೆಚ್ಚಿತಂತೆ ಎಂಬಿತ್ಯಾದಿ ರಾಜಕೀಯ ನಿರೂಪಣೆಗಳು ಸರಿಯಾಗಿ ಅರ್ಥವಾಗುತ್ತವೆ. ಯಾವುದೇ ಸಾಲವಾಗಲಿ, ಅದು ಕೇಳುವ ಬಡ್ಡಿಗಿಂತ ಹೆಚ್ಚು ಉತ್ಪಾದನೆಗೆ ಕಾರಣವಾಗುತ್ತಿದೆ ಎಂದಾದಲ್ಲಿ ಆ ಸಾಲ ಒಳ್ಳೆಯದೇ.
ಇದನ್ನೂ ಓದಿ: Shishir Hegde Column: ನಂಬಿಕೆ- ಎರಡು ಕಥೆಗಳು