Thursday, 19th September 2024

ಹಾಡುಗಳಿಗೆ ಜೀವ ತುಂಬುತ್ತಿದ್ದ ಎಸ್‌ಪಿಬಿ ಎಂಬ ಕೋಟಿಗೊಬ್ಬ

ಅಭಿವ್ಯಕ್ತಿ
ಶ್ರೀ ವರಸದ್ಯೋಜಾತ ಸ್ವಾಮೀಜಿ

ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನುಪಮವಾದುದು ಎನ್ನುವುದಕ್ಕಿಂತ ಲೂ ಗಾನ ವಿದ್ಯೆಯನ್ನು ಆಧಾರವಾಗಿಸಿಕೊಂಡು ಅವರ ಉಸಿರಿರುವವರೆಗೆ ಬಹುದೊಡ್ಡ ತಪಸ್ಸು ಮಾಡಿದವರು.

ಎಸ್.ಪಿ.ಬಿಯವರ ತಪಸ್ಸಿನ ಫಲವಾಗಿ ಇಡೀ ಭಾರತ ದೇಶದ ಉದ್ದಗಲಕ್ಕೂ ಇವರ ಜನಪ್ರಿಯತೆ ವಿಸ್ತಾರಗೊಂಡಿರುವುದು ಇವರ ಸಾಧನೆಗೆ ಒಂದು ಅದ್ಭುತ ಉದಾಹರಣೆ. 64 ವಿದ್ಯೆಗಳಲ್ಲಿ ಗಾನ ವಿದ್ಯೆಯು ಮಾತ್ರ ಸಕಲ ಜೀವರಾಶಿಗಳನ್ನು ತನ್ನತ್ತ ಸೆಳೆಯುವ ಮಾಂತ್ರಿಕ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲ ಸಕಲ ವಿದ್ಯೆೆಗಳು ಗಾನ ವಿದ್ಯೆಗೆ ಉಪವಿದ್ಯೆಗಳಾಗಿವೆ. ಉಳಿದೆಲ್ಲಾ ವಿದ್ಯೆಗಳು
ಏಕಮಾತ್ರ ಶಕ್ತಿಯನ್ನು ಹೊಂದಿವೆ. ಮೇಘ ರಾಗವಾಗಲಿ, ದೀಪ ರಾಗವಾಗಲಿ, ಸಾರಂಗ ರಾಗವಾಗಲಿ ಇವು ಗಾನ ವಿದ್ಯೆಯ ಬಹು ಶಕ್ತಿಯನ್ನು ಬಿಂಬಿಸುವ ಉದಾಹರಣೆಗಳಾಗಿವೆ.

ಮನಸ್ಸಿಗೆ ಆದ ಗಾಯ ವಾಸಿಯಾಗಲು ಮನಸ್ಸು ಬೇರೊಂದು ಕಡೆಗೆ ಆಕರ್ಷಿತಗೊಳ್ಳಬೇಕು. ನಮ್ಮ ಜೀವನದ ಜಂಜಾಟದಲ್ಲಿ ಮನುಷ್ಯ ಮಾತ್ರವಲ್ಲದೇ ಅನೇಕ ಜೀವರಾಶಿಗಳು ಕೂಡ ಅಪಾಯ ಹಾಗೂ ಆಪತ್ತುಗಳಿಂದ ಪಾರಾದಾಗಲೂ ಆ ಒಂದು ಕ್ಷಣ ವನ್ನು ಮರೆಯದೇ ಅವುಗಳ ದುಸ್ವಪ್ನವನ್ನು ಕಾಣುತ್ತಿರುತ್ತವೆ. ಅಂತಹ ಮನಸ್ಸುಗಳಿಗೆ ಗಾನ ವಿದ್ಯೆಯ ಇಂಪು ಸಂಪರ್ಕ ಗೊಂಡರೆ ಮತ್ತೆ ನವೋಲ್ಲಾಸಗೊಳ್ಳುತ್ತವೆ. ಅಂತಹ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ.

ಸಂಗೀತ ಎಂಬ ಮೂರಕ್ಷರದ ಪದವು ಗೀತೆಯೊಂದಿಗೆ ಸಂ ಎಂಬ ಸ್ವರ ಮಾಧುರ್ಯವು ಸಂಗಮಗೊಂಡು ರಚನೆಯಾಗಿದೆ. ಗೀತೆ ಎಂಬ ಉಚ್ಛಾರವು ಗಾನ ಲೋಕವನ್ನು ನಮಗೆ ಪರಿಚಯಿಸುತ್ತದೆ. ಸಪ್ತ ಸ್ವರಗಳಲ್ಲಿ ಮೊದಲನೆಯದಾದ ಅಕ್ಷರದ ಜತೆಗೆ ಅಮ್
ಎಂಬ ಅನುನಾಸಿಕವು ಸಂಗೀತ ಪದಕ್ಕೆ ಹೊಂದಿಕೊಂಡಿರುವುದರಿಂದ ಅಖಂಡ ಈ ಗಾನ ಲೋಕವು ಓಂಕಾರದ ಪ್ರತಿಬಿಂಬ ವಾಗಿದೆ. ಅಂತೆಯೇ ಹಾಡುವಾಗ ಗಾಯಕನು ಮಾಡುವ ಆಲಾಪ ಹಾಗೂ ಆರಂಭಕ್ಕೆ ಮಾಡುವ ಆಲಾಪವು ಓಂಕಾರದ ಭವ್ಯ ಶಕ್ತಿಯಿಂದ ಕೂಡಿರುತ್ತದೆ.

ಎಸ್.ಪಿ.ಬಿ ಅವರು ತಮ್ಮ ಮಾತೃ ಭಾಷೆ ತೆಲುಗಿನೊಂದಿಗೆ ಜನ್ಮತಃ ಹುಟ್ಟಿನ ನಂಟು ಇಟ್ಟುಕೊಂಡಿದ್ದರೂ ಆ ಮೂಲಕ
ಸಾಧನೆಗೆ ಇಳಿದು ಹಲವು ಭಾಷೆಗಳ ಹಿಡಿತ ಮಾತ್ರವಲ್ಲದೇ ಅವುಗಳ ಪ್ರಭುತ್ವವನ್ನು ಸಾಧಿಸಿದವರು. 16 ಭಾಷೆಗಳಲ್ಲಿ ಹಾಡಿ, ನಲಿದರೂ ಕೂಡ ಕನ್ನಡದ ಹಾಡುಗಳಲ್ಲಿ ಕನ್ನಡಿಗರು ಅವರಿಗೆ ಕೊಟ್ಟ ಪ್ರೀತಿ, ವಿಶ್ವಾಸ, ಗೌರವ ಇವುಗಳನ್ನು ಅವರು ಯಾವ ಭಾಗದಿಂದಲೂ ಕಂಡಿಲ್ಲ ಎಂದು ಮನದುಂಬಿ ಹೇಳಿದ್ದಾಾರೆ. ಹೀಗಾಗಿ ಕನ್ನಡ ನಾಡು ನುಡಿಯ ಗಾನ ವಿದ್ಯೆಯ ದತ್ತು ಪುತ್ರ ನಾದರೂ ಕನ್ನಡಾಂಬೆಗೆ ನಾನು ಹೆತ್ತ ಮಗನಂತೆ ಅಭಿಮಾನ ತಾಳುತ್ತೇನೆ ಎಂದು ನುಡಿದ ಅವರ ಅಭಿಮಾನದ ನುಡಿಗಳು ನಮ್ಮ ಶ್ರೇಷ್ಠ ಕನ್ನಡ ನಾಡು ನುಡಿಯ ಭವ್ಯತೆಯನ್ನು ಪರಿಚಯಿಸುತ್ತವೆ.

ಯಾವುದೇ ಸಾಧನೆ ಮಾಡಲು ಸಾಧಕನಿಗೆ ಉತ್ಸಾಹವೇ ಮುಖ್ಯ ಪ್ರೇರಕ ಶಕ್ತಿಯಾಗಿರುತ್ತದೆ. ಅಂತಹ ಪ್ರೇರಣೆಯು ಎಸ್.ಪಿ.ಬಿ
ಅವರಿಗೆ ಒಲಿದು, ಗಾನ ಸಾಧನೆಯಲ್ಲಿ ದೊರೆತು ಕನ್ನಡ ಭಾಷೆಯಲ್ಲಿ ಇನ್ನಷ್ಟು ಅಭಿವೃದ್ಧಿಗೊಂಡಿತು ಎಂದು ಹೇಳಿದರೆ ತಪ್ಪಗ ಲಾರದು. ಕನ್ನಡಿಗರ ಸ್ವಭಾವ ಕನ್ನಡ ಭಾಷೆಯಷ್ಟೇ ಪವಿತ್ರವಾದುದು. ಪರ ಭಾಷೆಯ ಸಾಧಕನು ತನ್ನ ಭಾಷೆಗೆ ಬಂದು ಸಾಧನೆ ಗಿಳಿದರೆ ಆ ಸಾಧಕನನ್ನು ತಮ್ಮವನೇ ಎಂದು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ, ಸ್ನೇಹ ಅಪ್ಪುಗೆಯ ಸಂಸ್ಕೃತಿಯುಳ್ಳವರು. ಹೀಗಾಗಿ ಎಸ್.ಪಿ.ಬಿಯವರಿಗೆ ಕನ್ನಡ ಕ್ಷೇತ್ರದಲ್ಲಿ ಸುಲಲಿತವಾಗಿ ಗಾನ ಹೊಳೆಯನ್ನು ಹರಿಸಲು ತೃಪ್ತಿದಾಯಕ ವಾತಾವರಣ ಸಿಕ್ಕಿತು. ಎಸ್.ಪಿ.ಬಿಯವರ ಇನ್ನೊಂದು ವೈಶಾಲ್ಯತೆ ಎಂದರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯಾವುದೇ ಕನ್ನಡಿಗರು ಅವರೆದುರು ಬಂದು ಕುಂತರೆ ಆತ ಎಷ್ಟೇ ಚಿಕ್ಕ ಸಾಧಕನಾಗಿದ್ದರೂ ಆತನನ್ನು ತಮ್ಮ ಸರಿ ಸಮಾನವಾದ ಸಾಧಕನೆಂದು ಗೌರವಿಸುತ್ತಿದ್ದರು. ಅವರ ಆ ಪ್ರೀತಿಯೂ ಚಿಕ್ಕ ಸಾಧಕನನ್ನು ಚೊಕ್ಕ ಸಾಧನೆಗಿಳಿಸಿ ಶ್ರೇಷ್ಠ ಸಾಧಕನನ್ನಾಗಿ ಮಾಡುವ ವಾತಾ ವರಣ ಸೃಷ್ಟಿಯಾಗು ತ್ತಿತ್ತು.

ಇದು ಎಸ್.ಪಿ.ಬಿಯವರ ವ್ಯಕ್ತಿತ್ವದ ಗುಣಗಳಲ್ಲಿ ವೈಶಾಲ್ಯತೆಗೊಂದು ಅದ್ಭುತ ಉದಾಹರಣೆ. ತಾವು ಬೆಳೆದು ಪರರನ್ನು
ಬೆಳೆಸುವ ಅವರ ಗುಣ ವೈಶಿಷ್ಟ್ಯತೆಯು ಅವರನ್ನ ಹದಿನಾರು ಭಾಷೆಗಳಲ್ಲಿ ದಿಗ್ವಿಜಯ ಸಾಧಿಸುವಂತೆ ಮಾಡಿತು. ಎಸ್.ಪಿ.ಬಿ ಯವರು 40 ಸಾವಿರ ಹಾಡುಗಳ ಸರದಾರ. ಯಾವ ಭಾಷೆಯಲ್ಲಿ ಗಾನ ಆರಂಭಿಸಿದರೂ ಆ ಭಾಷೆಯ ಮೂಲ ಹುಟ್ಟುಗಾರ ಎಂದು ಅನಿಸಿಕೊಳ್ಳುವಷ್ಟರ ಮಟ್ಟಿಗೆ ಆ ಭಾಷೆಯ ಹಾಡುಗಳಿಗೆ ಜೀವ ತುಂಬುತ್ತಿದ್ದರು. ಎಷ್ಟೋ ಗಾಯಕರನ್ನು ನೋಡಿದಾಗ ದಿನಕ್ಕೆ ಎರಡು ಮೂರು ಹಾಡುಗಳನ್ನು ಹಾಡಿ ಬಹಳ ಸಾಧನೆ ಮಾಡಿದೆ ಎಂದು ಹೆಮ್ಮೆ ಪಟ್ಟುಕೊಳ್ಳುವವರ ಮಧ್ಯೆ ಎಸ್.ಪಿ.ಬಿ ಯವರು ಒಂದೇ ದಿನದಲ್ಲಿ 17 ಹಾಡುಗಳನ್ನು ಹಾಡಿ ವಿಶ್ವ ದಾಖಲೆಯನ್ನೇ ನಿರ್ಮಿಸಿದರು.

ಅವರ ದಾಖಲೆಯನ್ನು ಅನೇಕರು ಹೆಮ್ಮೆಯಿಂದ, ಮುಕ್ತ ಕಂಠದಿಂದ ಹೊಗಳಿದರು. ಆದರೆ ವೈದ್ಯರು ಮಾತ್ರ ಅವರಿಗೆ ಬೇರೊಂದು ರೀತಿಯ ಭಯದ ಸಲಹೆಯನ್ನೇ ನೀಡಿದರು. ನೀವು ಹಾಡುವಾಗ ಒಂದು ಬಿಳಿ ಕಾಗದವನ್ನು ನಿಮ್ಮ ಬಾಯಿ ಮುಂದೆ
ಹಿಡಿದುಕೊಂಡು ಹಾಡಿರಿ, ನಿಮ್ಮ ಕಂಠದಿಂದ ಹೊರಹೊಮ್ಮುವ ಗಾನದ ಜತೆಗೆ ರಕ್ತಕಣಗಳು ಕೂಡ ಎಷ್ಟು ಸಿಡಿದು ಬರುತ್ತವೆ
ಎಂಬುದನ್ನು ನೋಡಿರಿ ಎಂಬ ಸಲಹೆ ಬಂದಾಗ, ಎಸ್.ಪಿ.ಬಿಯವರು ‘ಸುಮ್ಮನಿದ್ದು ಸಾಯುವುದಕ್ಕಿಂತ, ಹಾಡಿ ನನ್ನ ಗಂಟಲಿಗೆ
ಕ್ಯಾನ್ಸ ತಂದುಕೊಳ್ಳುತ್ತೇನೆ’ ಎಂದು ವೈದ್ಯರೊಂದಿಗೆ ನಮ್ರ ಭಾವದಿಂದಲೇ ಸಮಾಲೋಚಿಸಿದಾಗ ಅವರ ಹಾಡಿನ ಸಾಧನೆ
ಅವರ ಪ್ರಾಣಕ್ಕಿಂತಲೂ ಮುಖ್ಯವೆಂಬುದು ಸ್ಪಷ್ಟವಾಗುತ್ತಿತ್ತು.

ಅಂದರೆ ಅವರ ಪ್ರಾಣಕ್ಕಿಂತಲೂ ಹೆಚ್ಚು ಅವರು ತಮ್ಮ ಗಾನ ವಿದ್ಯೆಗೆ ಮಹತ್ವ ಕೊಟ್ಟಿದ್ದರು. ಕನ್ನಡ, ತೆಲುಗು, ತಮಿಳು,
ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ ಶ್ರೇಷ್ಠ ಸಾಧನೆಗಾಗಿ ಪದ್ಮಭೂಷಣ, ಪದ್ಮಶ್ರೀ, ನಾಲ್ಕು ಭಾಷೆ ಗಳಲ್ಲಿ 6 ರಾಷ್ಟ್ರೀಯ ಪ್ರಶಸ್ತಿ ಪಡೆದ ಏಕೈಕ ಗಾಯಕರಾದ ಶ್ರೇಷ್ಠ ಸಾಧನೆ ಇವರದಾಗಿದೆ. ಹಲವು ವಿಶ್ವ ವಿದ್ಯಾಲಯಗಳು ಎಸ್.ಪಿ.ಬಿಯವರಿಗೆ ಗೌರವ ಡಾಕ್ಟರೇಟ್ ನೀಡಿ ತಮ್ಮ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಿಕೊಂಡಿವೆ.

ವಿಶ್ವವಿದ್ಯಾಲಯದಿಂದ ಕೆಲವರಿಗೆ ಗೌರವ ಹೆಚ್ಚಿದರೆ ಇನ್ನೂ ಕೆಲವು ಸಾಧಕರಿಂದ ವಿಶ್ವವಿದ್ಯಾಲಯಕ್ಕೇನೆ ಗೌರವ ಹೆಚ್ಚುತ್ತದೆ. ಗೌರವ ಡಾಕ್ಟರೇಟ್, ಪದ್ಮಭೂಷಣ, ಪದ್ಮಶ್ರೀ, ಪದವಿ – ಪ್ರಶಸ್ತಿಗಳನ್ನು ಎಸ್.ಪಿ.ಬಿ ಅವರು ಸ್ವೀಕರಿಸಿದ್ದರಿಂದ ಪ್ರಶಸ್ತಿಗಳ ಹಿರಿಮೆ
ಹೆಚ್ಚಿಸಿದ್ದಾರೆ. ಎಸ್.ಪಿ.ಬಿ ಹಾಡಲು ನಿಂತರೆ ಲೈವ್ ಕಾರ್ಯಕ್ರಮ ಅನಿಸುತ್ತಿರಲಿಲ್ಲ. ಬಹಿರಂಗ ಕಾರ್ಯಕ್ರಮಗಳಲ್ಲಿಯೂ
ಕೂಡ ರೆಕಾರ್ಡಿಂಗ್ ಮಾಡಿದಂತೆ ಹಾಡುತ್ತಿದ್ದುದುದು ಅವರ ಶಿಷ್ಟ ಗುಣ. ಎಸ್.ಪಿ.ಬಿಯವರು ಲೈವ್ ಹಾಡುತ್ತಿದ್ದರೆ ಸಾವಿರಾರು ಜನ ಮಂತ್ರ ಮುಗ್ಧರಾಗಿ ಕೇಳುತ್ತಿದ್ದರು. ಎಸ್.ಪಿ.ಬಿಯವರಿಗೆ ವಿಶೇಷವಾಗಿ ರೆಕಾರ್ಡಿಂಗ್ ಜಾಗಕ್ಕೆ ಹೋಗಿ ಹಾಡು ಹಾಡಿ, ರೆಕಾರ್ಡಿಂಗ್ ಮಾಡಬೇಕು ಎಂದು ಅನಿಸುತ್ತಿರಲಿಲ್ಲ. ಅಂದರೆ ಸಾವಿರಾರು ಜನರ ಮಧ್ಯೆಯೇ ಅಷ್ಟು ನಿಶಬ್ಧ ವಾತಾವರಣವನ್ನು ತಮ್ಮ ಹಾಡಿನ ಮೂಲಕ ಸೃಷ್ಟಿಸುವ ವಾತಾವರಣ ಎಸ್.ಪಿ.ಬಿಯವರಿಗೆ ಸಿದ್ಧಿಸಿದ ಕಲೆಯಾಗಿತ್ತು.

ಅದರೊಳಗೆ ಎಲ್ಲರ ಮನಸ್ಸನ್ನು ಸೆರೆಡಿಯ ಬಲ್ಲೆ ಎಂಬ ಆತ್ಮವಿಶ್ವಾಸ ಎಸ್ .ಪಿ.ಬಿಯವರದಾಗಿತ್ತು. ಯಾವ ರಂಗದ ಹಾಡು ಗಳನ್ನು ಹಾಡಲು ನಿಂತರೂ ಅವರ ಭಾವನೆ ರಂಗದಲ್ಲಿ ರಂಗೇರಿ ಬಿಡುತ್ತಿತ್ತು. ಭಾವ ಗೀತೆಗಳನ್ನು ಹಾಡಿದರೆ ಭರ್ತೃ ಹರಿಯ ನೀತಿ ಶತಕ ಮೈದಾಳಿ ನಿಲ್ಲುತ್ತಿತ್ತು. ಪ್ರೇಮ ಗೀತೆಗಳನ್ನು ಹಾಡಿದರೆ ಭತೃಹರಿಯ ಶೃಂಗಾರ ಶತಕ ನೃತ್ಯ ಮಾಡುತ್ತಿತ್ತು. ಭಕ್ತಿ ಗೀತೆಗಳನ್ನು ಹಾಡಲು ನಿಂತರೆ ವೈರಾಗ್ಯ ಶತಕ ನಭೋ ಮಂಡಲವನ್ನೇ ತುಂಬಿರುತ್ತಿತ್ತು. ಅಂತಹ ಭಾವನಾತ್ಮಕ ಹಾಡುಗಾರ ರಾದ ಎಸ್.ಪಿ.ಬಿಯವರು ಕೋಟಿಗೊಬ್ಬರು.

ಎಸ್.ಪಿ.ಬಿಯವರು 50 ವರುಷಗಳ ನಿರಂತರ ನಿಲ್ಲದ ಗಾಯನ, ಗಂಧರ್ವ ಎಂಬ ಪದವೇ ಸರ್ವ ಕಲೆಗಳ ಸಾಗರ. ಅಂದರೆ ಒಂದೇ ಕಲೆಯಲ್ಲಿ ಸರ್ವ ಕಲೆಯನ್ನು ಕಾಣುವ ಏಕೈಕ ಗಂಧರ್ವ ಲೋಕವೆಂದರೆ ಅದು ಸಂಗೀತ. ಅವರು ಬಾಲಕರಾಗಿ ಹಾಡುತ್ತಿದ್ದರು, ಯುವಕರ ಧ್ವನಿಯಲ್ಲಿ ಹಾಡುತ್ತಿದ್ದರು, ವೃದ್ಧರ ಧ್ವನಿಯಲ್ಲಿಯೂ ಹಾಡುತ್ತಿದ್ದರು, ಆಗ ತಾನೇ ಹುಟ್ಟಿದ ಮಗುನ ಧ್ವನಿಯನ್ನು ತಮ್ಮ ಗಂಟಲಿನಲ್ಲಿಯೇ ಕ್ರಿಯಾತ್ಮಕಗೊಳಿಸುವ ಕಲೆ ಅವರದಾಗಿತ್ತು. ಹೆಣ್ಣಿನ ಧ್ವನಿಯಲ್ಲಿ ಹಾಡಲು ನಿಂತರೆ ಹೆಣ್ಣಿನ ಧ್ವನಿಯೇ ನಾಚುತ್ತಿತ್ತು. ಅಂತಹ ಬಹುಮುಖ ಧ್ವನಿಗೆ ಏಕ ಧ್ವನಿಯನ್ನು ನಿಮಿತ್ಯ ಮಾಡಿದ ಸಾಧಕರಲ್ಲಿ ಇವರು ಒಬ್ಬರು. ನಾಸಿಕದ ಮೂಲಕ ಹಾಡುವ ಕಲೆಯೂ ಇವರಿಗೆ ಕರಗತವಾಗಿತ್ತು.

ಬಾಯಿ ತೆರೆಯದೇ ಗಂಟಲು ಹಾಗೂ ನಾಸಿಕ ಮಧ್ಯೆ ಆಲಾಪ ಮಾಡಲು ನಿಂತರೆ ನಮ್ಮ ಕಣ್ಣೆದುರಿಗೆ ಅವರು ನಿಂತು ಆಲಾಪ ಮಾಡುತ್ತಿದ್ದರೂ ಈ ಆಲಾಪ ಯಾರದೆಂದು ಸುತ್ತಲೂ ನೋಡುವ ವಾತಾವರಣವನ್ನು ಸೃಷ್ಟಿಸುತ್ತಿದ್ದರು. ಆಕಾಶವಾಣಿ ಎಂಬುದು ನಮ್ಮ ಕಣ್ಣೆೆದುರಿಗೆ ವ್ಯಕ್ತಿ ಇಲ್ಲದ ಕೇವಲ ಧ್ವನಿ ಮಾತ್ರ. ನಮ್ಮ ಕಿವಿಗೆ ಕೇಳುವಂತೆ ನಮ್ಮೆದುರಿಗೆ ನಿಂತೇ ಆಲಾಪ ಮಾಡಿ ಆಕಾಶವಾಣಿಗೆ ಸೆಡ್ಡು ಹೊಡೆಯುವ ಕಲೆಗಾರನೀತ. ಎಸ್.ಪಿ.ಬಿಗೆ ಎಸ್.ಪಿ.ಬಿನೇ ಸರಿ ಸಾಟಿಯಾಗಿ ನಿಲ್ಲುತ್ತಾರೆ.

ಎಸ್.ಪಿ.ಬಿಯವರು ಮುಂದಿನ ಜನ್ಮವೊಂದಿದ್ದರೆ ಅದು ಕನ್ನಡಿಗನಾಗಿ ಹುಟ್ಟುವಂತೆ ಭಗವಂತನಲ್ಲಿ ಪ್ರಾರ್ಥಿಸಿದ ಭಾವ ಏನು ಇದೆಯಲ್ಲಾಾ ಆ ಭಾವನೆ ಕನ್ನಡಿಗರು ಬೆಲೆ ಕಟ್ಟಲಾರದ ಪ್ರೀತಿ, ಪ್ರೇಮ, ವಿಶ್ವಾಸದ ವಿನಿಮಯವಾಗಿತ್ತು. ಕನ್ನಡ ಒಂದನ್ನು ಹೊರತುಪಡಿಸಿ, ಎಲ್ಲಾ ಭಾಗದವರು ಇವರೊಂದಿಗೆ ವ್ಯವಹಾರಿಕವಾಗಿ ಮಾತ್ರ ನಡೆದುಕೊಂಡರು. ಅದರೆ ಕನ್ನಡಿಗರು ಮಾತ್ರ ಎಸ್.ಪಿ.ಬಿಯವರನ್ನು ಮನೆಯ ಮಗನಂತೆ ಕಂಡರು. ಹೀಗಾಗಿ ಎಸ್.ಪಿ.ಬಿಯವರು ನಿರ್ಭಯವಾಗಿ ಕನ್ನಡಿಗರನ್ನು ಮುಕ್ತ ಕಂಠ ದಿಂದ ಗುಣಗಾನ ಮಾಡಿದರು. ಕನ್ನಡಕ್ಕೂ ಹಾಗೂ ಕನ್ನಡಿಗರಿಗೂ ಅವರು ಕೊಟ್ಟ ಗೌರವ, ಪ್ರೀತಿ, ವಿಶ್ವಾಸದಿಂದ ತುಂಬಿತ್ತು.

ಸಾಧನೆ ಎಂಬುದು ಯಾರೊಬ್ಬರ ಸ್ವತ್ತಲ್ಲ, ಅದು ಸಾಧಕನ ಸ್ವತ್ತು. ಇಂತಹ ಉದಾಹರಣೆಗಳು ನಮಗೆ ಬೇಕಾದಷ್ಟು ಸಿಗುತ್ತವೆ. ಎಸ್.ಪಿ.ಬಿಯವರು ಪರಭಾಷಿಕ ವ್ಯಕ್ತಿಯಾಗಿದ್ದರೂ ತನ್ನ ಸಾಧನೆಯ ಮೂಲಕ ಸಾಹಸದ ಏಣಿಯನ್ನು ಏರಿ ಕನ್ನಡಿಗರ ಮನ ಗೆದ್ದರು ಮತ್ತು ತಾವೇ ಕನ್ನಡಿಗರಾದರು! ಕೇವಲ ಕನ್ನಡಿಗರಾಗಲಿಲ್ಲ ತಮ್ಮ ಗಾನ ಕಲೆಯನ್ನೇ ಕನ್ನಡೀಕರಣಗೊಳಿಸಿದರು. ಮನುಷ್ಯನ ಭಾವನೆಯೂ ಸದ್ಭಾವನೆಯಿಂದ ಕೂಡಿದ್ದರೆ ಆ ಸಂಕಲ್ಪ ಕ್ರಿಯಾತ್ಮಕಗೊಳ್ಳುತ್ತದೆ. ಹೀಗಾಗಿ ಎಸ್.ಪಿ.ಬಿಯವರು ಸಂಕಲ್ಪಪೂರ್ವಕವಾಗಿ ‘ಮರು ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟುತ್ತೇನೆ’ ಎಂದು ಭಾವಿಸಿದುದರ ಪರಿಣಾಮವಾಗಿ,
ಕನ್ನಡ ಕುವರನಾಗಿ, ಹುಟ್ಟಿ ಬರಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ.