Saturday, 14th December 2024

ರಾಗ ಭಾವಗಳ ಸಲ್ಲಾಪದ ಎಸ್‌ಪಿಬಿ

ನೆನಪು
ತುರುವೇಕೆರೆ ಪ್ರಸಾದ್

ಎಸ್‌ಪಿಬಿ ಎಂದರೆ ತಟ್ಟನೆ ನೆನಪಾಗುವುದು ಎಪ್ಪತ್ತು ಮತ್ತು ತೊಂಭತ್ತರ ದಶಕದ ನಡುವಿನ ಸುವರ್ಣ ಕಾಲ, ಗೋಲ್ಡನ್ ಟೈಮ್. ಅಂದಿನ ಯುವಜನರ ಮನಸ್ಸನ್ನು ಅಕ್ಷರಶಃ ಆಕ್ರಮಿಸಿ, ಆವರಿಸಿಕೊಂಡು ಆಳಿದ ಮಹಾನ್ ಗಾಯಕರೆಂದರೆ ಅವರು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಾತ್ರ. ಸಿನಿಮಾ, ಸಂಗೀತದ ಯುಗದಲ್ಲಿ ಅದೊಂದು ಪರ್ವಕಾಲ ಎಂದೇ ಹೇಳಬಹುದು.

ತಮಿಳಿನಲ್ಲಿ ಸೌಂದರ ರಾಜನ್, ತೆಲುಗಿನಲ್ಲಿ ಘಂಟಸಾಲ, ಕನ್ನಡಲ್ಲಿ ಪಿ.ಬಿ.ಶ್ರೀನಿವಾಸ್ ಅಧಿಪತ್ಯ ಸ್ಥಾಪಿಸಿದ್ದ ಸಮಯದಲ್ಲಿ ಎಸ್.ಪಿ.ಬಿ ಮಾತ್ರ ಮೂರೂ ಭಾಷೆಗಳಲ್ಲಿ ತಮ್ಮ ಪ್ರತಿಭೆ ಮೆರದ ಸವ್ಯಸಾಚಿ! ಆ ಸಮಯದಲ್ಲಿ ಬಾಲು ಯುವಜನರ ಮನಸ್ಸನ್ನು ಸೂರೆಗೊಳ್ಳಲು ಸಾಕಷ್ಟು ಕಾರಣಗಳಿದ್ದವು. ಏಕತಾನತೆಯ ಒಂದು ಛಾಯೆಯಿಂದ ಯುವಜನರಿಗೆ ಬದಲಾವಣೆ ಬೇಕಿತ್ತು. ಅಂತದೊಂದು ಬದಲಾವಣೆಗೆ ಎಸ್‌ಪಿಬಿಯ ಸ್ವರವೈವಿಧ್ಯ ಪಕ್ಕಾ ಆಗಿದ್ದದ್ದು ಆ ಕಾಲಮಾನದ ಒಂದು ಪುಣ್ಯಶೇಷವೇ ಸರಿ.

ಹಾಗಾಗಿ ಎಸ್’ಪಿಬಿಯವರನ್ನು ಯುವ ಮನಸ್ಸುಗಳು ಬೇಷರತ್ತಾಗಿ ಒಪ್ಪಿ, ಅಪ್ಪಿಕೊಂಡು ಬಿಟ್ಟವು. ಇಂತಹ ವೈವಿಧ್ಯತೆಯನ್ನು
ಸುಲಭವಾಗಿ ಪಲ್ಲಟಗೊಳಿಸಲು ಬೇರೆ ಪ್ರಭಾವಿ ಮಾಧ್ಯಮಗಳು ಮತ್ತು ತಾಂತ್ರಿಕತೆ ಅಷ್ಟಾಗಿ ಅಭಿವೃದ್ಧಿ ಹೊಂದಿಲ್ಲದ್ದೂ ಒಂದು ವರವಾಗೇ ಪರಿಣಮಿಸಿತು ಎನ್ನಬೇಕು. ಎಸ್‌ಪಿಬಿಯವರು ಹಾಡಿದ ನಮ್ಮ ಒಂದು ಇಷ್ಟದ ಹಾಡನ್ನು ಮತ್ತೆ ಮತ್ತೆ ಕೇಳುವ ಸೌಲಭ್ಯವೂ ಇರಲಿಲ್ಲ.ಅಂತಹ ಹಾಡುಗಳಿಗಾಗಿ ತುಡಿಯುತ್ತಾ ರೇಡಿಯೋ ಮುಂದೆ ಕಾದು ಕೂರಬೇಕಿತ್ತು. ‘ಈ ದೇಶ ಚೆನ್ನ, ಈ ಮಣ್ಣು ಚಿನ್ನ’ (ಕಾವೇರಿ ಚಿತ್ರದ ಗೀತೆ) ಈ ಅದ್ಭುತ ಹಾಡನ್ನು ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮಕ್ಕೆ ಪದೇ ಪದೆ ಬರೆದು ಕೇಳಿದ್ದೆ. ಹೀಗಾಗಿ ಈ ಹಾಡುಗಳು ಮಾರ್ಜಿನಲ್ ಯುಟಿಲಿಟಿ ಕಳೆದುಕೊಂಡು ಹಳೆಯದಾಗಲೇ ಇಲ್ಲ. ನಿತ್ಯನೂತನವಾಗಿ ಕಾಡುತ್ತಿದ್ದವು.

‘ಏಕ್ ದುಜೇ ಕೆ ಲಿಯೇ’ ಚಿತ್ರದ ಹಾಡುಗಳ ಮೂಲಕ ನಮ್ಮನ್ನು ಹಿಂದಿಯ ಸಮ್ಮೋಹಕ ಜಗತ್ತಿಗೆ ಕರೆದೊಯ್ದವರೂ ಅವರೇ! ಪವಡಿಸು ಪರಮಾತ್ಮ ಶ್ರೀ ವೆಂಕಟೇಶ, ಅಪರಾಧಿ ನಾನಲ್ಲ, ಅಪರಾಧ ಎನಗಲ್ಲ, ಎಲ್ಲಿರುವೆ ಮನವ ಕಾಡುವ ರೂಪಿಸಿಯೇ,
ನೀನಿರಲು ಜೊತೆಯಲ್ಲಿ, ಆಕಾಶ ದೀಪವು ನೀನು, ತಾಳಿ ಕಟ್ಟುವ ಶುಭ ವೇಳೆ, ಇದೇ ನಾಡು, ಇದೇ ಭಾಷೆ, ನಗುವ ನಯನ ಮಧುರ ಮೌನ, ಸ್ನೇಹದ ಕಡಲಲ್ಲಿ, ಗೀತಾಂಜಲಿ.. ಹೀಗೆ ಈ ಹಾಡುಗಳನ್ನು ಕೇಳಿದಷ್ಟೂ ಇನ್ನೊಮ್ಮೆ ಕೇಳಲು ಸಿಕ್ಕೀತೇ ಎಂಬ ತೀವ್ರ ಹಂಬಲ ಕಾಡುತ್ತಿತ್ತು. ಬಾಲು ದೈವ, ದೇಶ, ನಾಡು, ನುಡಿ, ಪ್ರೇಮ, ದುಃಖ,ಖುಷ್, ಜೋಷ್, ಹೀಗೆ ಯಾವುದೇ ಸ್ಥಾಯಿ ಅಥವಾ ಸಂಚಾರಿ ಭಾವವನ್ನು ಎದೆ ತುಂಬಿ, ನಮ್ಮ ಮನ ತುಂಬಿಸಿ ಹಾಡುತ್ತಿದ್ದರು. ಈ ನಿಟ್ಟಿನಲ್ಲಿ ಬಾಲು ಅವರಿಗೆ ಅವರೇ ಸಾಟಿ. ಇದರ ಜತೆಗೆ ಅಂದಿನ ದಿನಗಳಲ್ಲಿ ನಮ್ಮ ಮನರಂಜನೆಯ ಶಾಖೆಗಳು ಸಹ ಸೀಮಿತ ಪರಿಧಿಯನ್ನು ಹೊಂದಿದ್ದವು. ಈಗಿನಷ್ಟು ಹಿಂದಿ ಅಥವಾ ಪಾಶ್ಚಾತ್ಯ ಹಾಡುಗಳ ಪ್ರಭಾವ ಯುವ ಜನರ ಮೇಲಿರಲಿಲ್ಲ. ಹಾಗಾಗಿ ಬಾಲು ಮೂಲಕ ಸಂಗೀತ ನಿರ್ದೇಶಕರು ಮಾಡು ತ್ತಿದ್ದ ಯಾವುದೇ ಹೊಸ ಪ್ರಯೋಗ ತಟ್ಟನೆ ಯಶಸ್ವಿಯಾಗಿ ಅದು ಜನರ ಮನಸ್ಸಲ್ಲಿ ಅಚ್ಛಳಿಯದೆ ಬಹುಕಾಲ ನಿಂತು ಬಿಡು ತ್ತಿತ್ತು.

ಡಾ. ರಾಜ್ ‘ಪಿ.ಬಿ. ಶ್ರೀನಿವಾಸ್ ನನ್ನ ಆತ್ಮ, ನಾನು ಶರೀರ’ ಎನ್ನುತ್ತಿದ್ದರು, ಇದೇ ಮಾತನ್ನು ರಾಜ್‌ಕಪೂರ್ ಮುಖೇಶ್ ಬಗ್ಗೆ ಹೇಳು ತ್ತಿದ್ದರು, ಆದರೆ ಬಾಲು ಸರ್ ವಿಷ್ಣು, ಅನಂತನಾಗ್, ಅಂಬರೀಶ್, ಕಮಲಹಾಸನ್, ಶಂಕರ್‌ನಾಗ್, ರಜನಿಕಾಂತ್‌ರಿಂದ ಹಿಡಿದು ಈಚಿನ ಯುವ ಕಲಾವಿದರ ಆತ್ಮ ಸಹ ಆಗಿದ್ದರು. ಮಿಮಿಕ್ರಿ ಮತ್ತು ಧ್ವನಿಬದಲಾವಣೆ ಮೂಲಕ ಕಲಾವಿದರೇ ಸಾಕ್ಷಾತ್ ಹಾಡು ತ್ತಿದ್ದಾರೇನೋ ಎಂಬಂತೆ ಮೋಡಿ ಮಾಡಿಬಿಡುತ್ತಿದ್ದರು. ಇದು ಬಹುಶಃ ಯಾವುದೇ ಗಾಯಕ ಸಾಧಿಸಲಾಗದ ಒಂದು ಅದ್ಭುತ ಯಶಸ್ಸು ಮತ್ತು ದೈವದತ್ತ ವರ ಅನಿಸುತ್ತದೆ. ಕೇವಲ ನಟರ ಆತ್ಮವಾಗಿದ್ದರೆ ಎಸ್‌ಪಿಬಿ ಇಷ್ಟು ಪ್ರಸಿದ್ಧಿ ಪಡೆಯುತ್ತಿರಲಿಲ್ಲ ವೇನೋ? ಆದರೆ ಎಸ್‌ಪಿಬಿ ದಶಕಗಳ ಕಾಲ ನಮ್ಮಂತಹ ಕೋಟ್ಯಂತರ ಯುವಜನತೆಯ ಆತ್ಮವೂ ಆಗಿಬಿಟ್ಟಿದ್ದರು.

ನಾವು ಗೊಣಗಿದ್ದು, ಪಲುಕಿದ್ದು, ಪಿಸುಗುಟ್ಟಿದ್ದು, ಎದೆತುಂಬಿ ಸಂಭ್ರಮಿಸಿದ್ದು, ಮನಬಿಚ್ಚಿ ನಕ್ಕಿದ್ದು, ಮುದುಡಿ ಬಿಕ್ಕಿ ಅತ್ತಿದ್ದು ಎಲ್ಲಕ್ಕೂ ಎಸ್‌ಪಿಬಿ ಧ್ವನಿ ಅಂತರಂಗದಲ್ಲೆಲ್ಲೋ ಬೆಚ್ಚನೆಯ ಭಾವದ ಸ್ಪರ್ಶ ನೀಡಿಬಿಡುತ್ತಿತ್ತು. ಹಾಗಾಗಿ ಎಸ್‌ಪಿಬಿ ನಮ್ಮೆದೆ ಗಳಲ್ಲಿ, ನಮ್ಮಾತ್ಮಗಳಲ್ಲಿ ಎಂದಿಗೂ ಅಮರರೇ! ಅವರಿಗೆ ಸದ್ಗತಿ ಸಿಗಲಿ.