Monday, 30th December 2024

ಅಂತರ್ಮುಖಿಗಳೆಂಬ ಮಾತಿರದ ಹೂಗಳು…

ಯಶೋ ಬೆಳಗು

ಯಶೋಮತಿ ಬೆಳಗೆರೆ

ಇತ್ತೀಚೆಗೊಮ್ಮೆ ಕಂಪ್ಯೂಟರಿನಲ್ಲಿ ತುಂಬಿ ಹೋಗಿರುವ ಫೈಲುಗಳನ್ನೆಲ್ಲ ಒಂದೊಂದಾಗಿ ನೋಡುತ್ತಾ, ಬೇಕಾದ್ದನ್ನೆಲ್ಲ ಒಂದು ಫೋಲ್ಡರ್ ಕ್ರಿಯೇಟ್ ಮಾಡಿ ಸೇವ್
ಮಾಡುತ್ತ ಬೇಡದ್ದನ್ನು ಡಿಲೀಟ್ ಮಾಡುತ್ತಾ ಕುಳಿತಿದ್ದೆ. ಅಷ್ಟರಲ್ಲೇ ಯಾರೋ ಬಾಗಿಲು ಬಡಿದ ಸದ್ದಾಯಿತು. ಹೋಗಿ ನೋಡಿದರೆ ಪರಿಚಿತ ಮುಖ ಮುಗುಳ್ನಕ್ಕಿತು.

‘Are you busy? ಅಂದಾಗ, ಅಂಥದ್ದೇನಿಲ್ಲ. I am just sorting out my computer files and folders ಅಂದೆ. ನಿಮಗೇನೂ ಅಭ್ಯಂತರವಿಲ್ಲ ಅಂದ್ರೆ ನಾನು ನಿಮ್ಮ ಜೊತೆ ಕೂರಬಹುದಾ?  I need some silent company. I will not disturb you…  ಅಂದು ಮಾತು ನಿಲ್ಲಿಸಿ ನನ್ನೆಡೆಗೆ ಉತ್ತರ ಕ್ಕಾಗಿ ನೋಡಿದರು. ಅದಕ್ಕೇನಂತೆ ಬನ್ನಿ ಎಂದು ಒಳಗೆ ಕರೆದು, ನನ್ನ ಕೆಲಸದಲ್ಲಿ ನಿರತಳಾದೆ. ಅವರು ತಾವು ತಂದಿದ್ದ ಪುಸ್ತಕದಲ್ಲಿ ತಲ್ಲೀನರಾದರು. ಮಾತೇ ಇರದೆ ಒಬ್ಬರಿಗೊಬ್ಬರು ಜತೆಯಾದ ಅನುಭವ ಒಂಥರಾ ಖುಷಿ ಕೊಟ್ಟಿತು. ನನ್ನ ಕೆಲಸವೆಲ್ಲ ಮುಗಿಯುತ್ತ ಬಂದಾಗ, ಏನಾದರೂ ಮಾತಾಡುವುದಿತ್ತಾ? ಎಂದು ಔಪಚಾರಿಕವಾಗಿ ವಿಚಾರಿಸಿದಾಗ, ಹಾಗೇನಿಲ್ಲ.

I just wanted your company. ಎಂದು ಹೇಳಿ ಪುಟಗಳಲ್ಲಿ ಲೀನವಾದರು. ತಮ್ಮ ಓದು ಮುಗಿಸಿ ಹೊರಡುವಾಗ, Thank you so much for the company. I value it. I don’t always like to talk but want to be in the presence of someone. ಎಂದು ಹೇಳುತ್ತಾ ಅದೇ ಮುಗುಳ್ನಗೆ ಯೊಂದಿಗೆ ನಡೆದು ಹೋದರು. ಯಾರೋ ಜತೆಗಿದ್ದಾರೆಂಬ ಭದ್ರತೆಯ ಭಾವವದು. ನಾವು ಮನೆಯ ಕೆಲಸ ಗಳಲ್ಲಿ ತೊಡಗಿಕೊಂಡಿರುವಾಗ ತುದಿಗಣ್ಣಲ್ಲೇ ಎಲ್ಲವನ್ನೂ ಗಮನಿಸುತ್ತಾ ಮಕ್ಕಳು ತಮ್ಮ ಪಾಡಿಗೆ ಆಡುತ್ತಲೋ, ಓದುತ್ತಲೋ, ಬರೆಯುತ್ತಲೋ ಅನುಭವಿಸುವ ಭದ್ರತೆಯ ಭಾವದಂತಹದು.

ಬಹಳ ಸಣ್ಣ ವಯಸ್ಸಿನಿಂದಲೂ ಅಂಥ ಭದ್ರತೆಯ ಭಾವಕ್ಕಾಗಿ ಚಡಪಡಿಸಿದವಳು ನಾನು. I am with you  ಅನ್ನುವ Secure Feeling ನೂರು ಯುದ್ಧ ಗೆಲ್ಲುವ ಶಕ್ತಿಯನ್ನು ತಂದೊಡ್ಡುತ್ತದೆ. ಅದೊಂದು ಪುಟ್ಟ ಬಾಡಿಗೆಯ ಅಂಗಡಿಗಾಗಿ ಹಠಕ್ಕೆ ಬಿದ್ದ ಅಪ್ಪ ಪಟ್ಟ ಕಷ್ಟವೆಲ್ಲ ಕಣ್ಮುಂದೆ ಹಾದು ಹೋಗುತ್ತದೆ. ಅದೆಷ್ಟು ವರ್ಷ ಕೋರ್ಟಿಗೆಂದು ಒಬ್ಬರೇ ಅಲೆದಾಡುವ ನಡುವೆ ನಮ್ಮ ಮನೆಯ ಸಂತೋಷವೆಲ್ಲ ಸೋರಿ ಹೋಗಿದ್ದು, ಕೊನೆಗೂ ಗೆಲುವು ಒಲಿದು ಬರುವಷ್ಟರಲ್ಲಿ ಮೈ ಯಲ್ಲಿನ ಶಕ್ತಿಯೆಲ್ಲ ಕರಗಿ ಹೋಗಿ ಮಾಡಿದ ಖರ್ಚಿಗೆ ಬದಲಾಗಿ ಗುಲಗಂಜಿ ಯಷ್ಟೂ ಮರಳಿ ಬಾರದೇ ಹೋಗಿದ್ದೆಲ್ಲವನ್ನೂ ಕಂಡವಳಿಗೆ ಅದೊಂದು ಬದುಕಿನ ಪಾಠವಾಗಿ ನನ್ನೊಂದಿಗೇ ಉಳಿದು ಹೋಗಿದೆ.

ಹೀಗಾಗಿ family is my first priority always. ಮಕ್ಕಳೊಂದಿಗೆ ಹಂಚಿಕೊಳ್ಳುವ ಪುಟ್ಟ ಪುಟ್ಟ ಸಂತೋಷಗಳೇ ಅವರ ನಾಳಿನ ಬದುಕಿಗೆ ನಾವು ಹಾಕಿ ಕೊಡುವ ಸ್ಟ್ರಾಂಗ್ ಪಿಲ್ಲರ್ಸ್. ಅಪ್ಪ ಎಂದೂ ಹೆಚ್ಚು ಮಾತನಾಡಿದವರೇ ಅಲ್ಲ. ಅವರ ಮಾತೇನಿದ್ದರೂ ಅವರ ಕೆಲಸದೊಂದಿಗೆ ಅಷ್ಟೆ. ಎಂದೂ ಅವರ ಭಾವನೆ ಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೇ ಇಲ್ಲ. ಅವರಿಗಿಂತ ಮುಂಚಿತವಾಗಿ ನಾವು ಶಾಲೆಗೆ ಹೋಗಿರುತ್ತಿದ್ದೆವು. ರಾತ್ರಿ ಅವರು ಮನೆಗೆ ಮರಳಿ ಬರುವಷ್ಟ ರಲ್ಲಿ ನಮಗೆಲ್ಲ ಗಾಢ ನಿದ್ರೆ. ಹೀಗಾಗಿ ಅಪ್ಪ ಮಾತಿಗೇ ಸಿಗುತ್ತಿರಲಿಲ್ಲ. ಹೆಚ್ಚಿನ ಸಮಯವೆಲ್ಲ ನಾನು ಅಪ್ಪ ತಂದು ಕೊಡುತ್ತಿದ್ದ ಕತೆ ಪುಸ್ತಕಗಳೊಂದಿಗೆ ಕಳೆದು ಹೋಗುತ್ತಿದ್ದೆ.

ನನ್ನದೇ ಆದಂಥ ಕಲ್ಪನಾ ಲೋಕ ಸೃಷ್ಟಿಸಿಕೊಂಡು ಅದರೊಡನೆ ಖುಷಿ ಖುಷಿಯಾಗಿದ್ದುಬಿಡುತ್ತಿದ್ದೆ. ಹೀಗಾಗಿ ನಾನೂ ಸಹ ಅಪ್ಪನಂತೆಯೇ ಮೌನವಾಗಿದ್ದು ಬಿಡುವುದು ಅಭ್ಯಾಸವಾಗಿ ಹೋಯಿತು. ಆದರೆ ನಮ್ಮಲ್ಲಿ ಮೌನವನ್ನು ತಪ್ಪಾಗಿ ಗ್ರಹಿಸಿದವರೇ ಹೆಚ್ಚು. ಬಹಳಷ್ಟು ಸಲ ಮಾತಿನಷ್ಟೇ ಮೌನ ಕೂಡ ಪ್ರಬಲ ವಾದದ್ದು ಎಂಬುದನ್ನು ನಾವು ಅರಿಯದೇ ಹೋಗುತ್ತೇವೆ. ಸಾಮಾನ್ಯವಾಗಿ ಮೌನವನ್ನು ಇಷ್ಟಪಡುವವರು ಹೆಚ್ಚಾಗಿ ಅಂತರ್ಮುಖಿಗಳಾಗಿರುತ್ತಾರೆ. ಅವರು ಬಂಗಾರದಂಥವರು. ಸಂಭಾಷಣೆಯೆಲ್ಲ ಮೌನದಲ್ಲೇ. ಭಾವನೆಗಳೆಲ್ಲ ಮನದಾಳದಲ್ಲೇ… ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಕಷ್ಟ.

ಎಲ್ಲರೊಂದಿಗೆ ಬೆರೆಯುವ ಸಮಾಜಮುಖಿಗಳಲ್ಲ ಅವರು. ಸಂತೆಯೊಳಗಿದ್ದೂ ಆಂತರ್ಯದಲ್ಲಿ ಹೆಚ್ಚೆಚ್ಚು ಬೆಳೆಯುತ್ತಾ ಹೋಗುವ ಅಂತರ್ಮುಖಿಗಳು. ಸ್ನೇಹ, ಮಾತುಗಳೆಲ್ಲ ತಮ್ಮೊಂದಿಗೆ ಸರಿ ಹೊಂದುವಂಥವರೊಂದಿಗೆ ಮಾತ್ರ. ಯಾವುದೇ ಒಂದು ವಿಷಯವನ್ನು ಗಹನವಾಗಿ ಅಭ್ಯಸಿಸುವ ಗುಣವಿರುವವರು. ಮಲ್ಲಿಗೆ ಯರಳಿದಂತೆ ಮಾತು. ಉತ್ತಮ ಕೇಳುಗರು. ಏಕಾಗ್ರಚಿತ್ತರು. ತಮ್ಮ ಭಾವನೆಗಳನ್ನು ತೋರ್ಪಡಿಸಿಕೊಳ್ಳುವುದಿಲ್ಲ ಅಂದ ಮಾತ್ರಕ್ಕೇ ಅವರು ನಿರ್ಭಾವುಕ ರೆಂದೇನಲ್ಲ. ದುಡುಕಿ ನಿರ್ಧಾರಕ್ಕೆ ಬರುವವರಲ್ಲ. ಪ್ರತಿಯೊಂದನ್ನೂ ಅಳೆದೂ ತೂಗಿ ಪ್ರತಿಕ್ರಿಯಿಸುವಂಥವರು. ಪ್ರತಿ ಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಗಮನಿ ಸುವಂಥವರು. ಉತ್ತಮ ಚಿಂತಕರು.

ವಿಚಾರ ವಂತರು, ಕವಿಗಳು, ಬರಹಗಾರರು. ಚಿತ್ರಕಾರರು, ಸಂಗೀತಗಾರರು. ಸಂಶೋಧಕರು. ವಿಜ್ಞಾನಿಗಳೆಲ್ಲ ಸಾಮಾನ್ಯವಾಗಿ ಅಂತರ್ಮುಖಿಗಳಾಗಿರುತ್ತಾರೆ.
ಎದುರಾಗುವ ಸಮಸ್ಯೆಗಳಿಗೆ ತಮ್ಮೊಳಗೇ ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವಂಥವರು. ಅನಗತ್ಯವಾದ-ವಿವಾದಗಳಿಂದ ಸದಾ ದೂರ. ಸಣ್ಣ
ಅವಮಾನಗಳಿಗೂ ಬಹಳ ನೊಂದುಕೊಳ್ಳುವಂಥ ಇವರು ಮಾನಸಿಕವಾಗಿ ಬಹಳ ಸೂಕ್ಷ್ಮ ಜೀವಿಗಳು. ಅವರೊಂದಿಗೆ ವ್ಯವಹರಿಸುವುದೆಂದರೆ ಸೂಜಿಯ
ಮೇಲಿನ ನಡಿಗೆಯಿದ್ದಂತೆ. ಅವರು ನೀರೊಳಗೆ ಈಜಾಡುವ ಸದ್ದಿಲ್ಲದ ಮೀನುಗಳಂತೆ ತಮ್ಮ ಪಾಡಿಗೆ ತಾವು ಪುಸ್ತಕಗಳನ್ನು ಓದುತ್ತಲೋ, ಹಾಡುಗಳನ್ನು
ಕೇಳುತ್ತಲೋ, ಸಿನಿಮಾಗಳನ್ನು ನೋಡುತ್ತಲೋ ತಮ್ಮ ಸಮಯವನ್ನು ಕಳೆಯಲಿಚ್ಚಿಸುತ್ತಾರೆ. ತಮ್ಮ ಸುತ್ತ ಹೆಚ್ಚು ಜನ ಸೇರಿದರೆ ಅವರಿಗೆ ಕಿರಿಕಿರಿಯಾಗ ತೊಡಗುತ್ತದೆ. ಯಾವಾಗ ಇವರೆಲ್ಲರಿಂದ ಕಳಚಿಕೊಂಡು ಓಡಿಹೋಗೋಣ ಎಂದು ಕಾಯುತ್ತಿರುತ್ತಾರೆ.

ತಮ್ಮದೇ ಲೋಕ ಸೃಷ್ಟಿಸಿಕೊಂಡು ಅದರಲ್ಲಿ ನೆಮ್ಮದಿಯಾಗಿ ಇದ್ದುಬಿಡುವಂಥವರು. ಅವರನ್ನು ಅರ್ಥ ಮಾಡಿಕೊಳ್ಳಲು ಅವರಂತೆಯೇ ಅರ್ಥ ಮಾಡಿಕೊಳ್ಳುವ ಮನಸ್ಸಿನವರಿಂದ ಮಾತ್ರ ಸಾಧ್ಯ. ಉಳಿದಂತೆ ಸಾಮಾನ್ಯ ಜನರ ದೃಷ್ಟಿಯಲ್ಲಿ ಅವರು ಮಾತೇ ಆಡದ ಮೂದೇವಿಗಳು, ದಡ್ಡ ಶಿಖಾಮಣಿಗಳು ಅನ್ನುವ ಮೂದಲಿಕೆಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಸಣ್ಣ ವಯಸ್ಸಿನಿಂದಲೇ ಅವರು ಗುಂಪಿನಿಂದ ದೂರವಾಗಿ ಒಂಟೊಂಟಿಯಾಗಿ ಬೆಳೆದುಬಿಟ್ಟಿರುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಉಪಚಾರದ ಮಾತುಗಳನ್ನಾಡುವುದಿರಲಿ, ಅಪರಿಚಿತರು ಮನೆಗೆ ಬಂದ ಕೂಡಲೇ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಒಳ ನಡೆದು ಕೋಣೆ ಸೇರಿಕೊಂಡು ಬಿಡುತ್ತಾರೆ.

ಇದರಿಂದ ಮನೆಯ ಜನರಿಗೆ ಮುಜುಗರ. ಯಾಕೆ ಇವರು ಹೀಗೆ ಅನ್ನುವ ಆತಂಕದಿಂದ ಅದನ್ನು ಸರಿಪಡಿಸುವ ಭ್ರಮೆಯಲ್ಲಿ ಬಂದವರೆದುರಿಗೇ ಏನೋ ನೋಡಿ ನಮ್ಮ ಹಣೇಬರಹ. ಯಾವಾಗ್ಲೂ ಹೀಗೇ. ಒಂದು ಮಾತೂ ಆಡಲ್ಲ. ಎಂದು ಕಂಪ್ಲೇಂಟಿನ ಸುರಿಮಳೆಯೇ ಸುರಿಸಿಬಿಡುವ ಮನೆಯವರು ಅವರಲ್ಲಿ ಒಂದು
ರೀತಿಯ ಕೀಳರಿಮೆಯನ್ನು ಬೆಳೆಸಿಕೊಳ್ಳಲು ಪರೋಕ್ಷವಾಗಿ ಕಾರಣರಾಗಿ ಬಿಡುತ್ತಾರೆ. ಅಂತರ್ಮುಖಿ ಸ್ವಭಾವ ಕೂಡ ಬೇರೆಲ್ಲ ಮನುಜ ಸ್ವಭಾವಗಳಂತೆ ಒಂದು ಸಹಜವಾದ ಸ್ವಭಾವ. ಅದಕ್ಕೆ ಕೀಳರಿಮೆಯ ಲೇಪ ಹಚ್ಚುವ ಅಗತ್ಯವಿಲ್ಲ. ಹೊರ ನೋಟಕ್ಕೆ ಕೀಳರಿಮೆ ಹಾಗೂ ಅಂತರ್ಮುಖಿಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡರೂ ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿರುವುದನ್ನು ನಾವು ಗಮನಿಸಿರುವುದೇ ಇಲ್ಲ.

ಕೀಳರಿಮೆಯೆಂಬುದು ಒಂದು ದೌರ್ಬಲ್ಯವಾದರೆ ಅಂತರ್ಮುಖೀ ಸ್ವಭಾವ ಶಕ್ತಿಯ ಸ್ವರೂಪವಾಗಿದೆ. ಹುಟ್ಟಿದ ಮಗು ಬೆಳೆಯುತ್ತ ಬೆಳೆಯುತ್ತ ತನಗೆ ಸಿಗುವ
ಪ್ರಶಂಸೆ ಹಾಗೂ ತಿರಸ್ಕಾರಗಳಿಂದ ತನ್ನ ಸ್ವಭಾವವನ್ನು ರೂಪಿಸಿಕೊಳ್ಳುತ್ತಾ ಹೋಗುತ್ತದೆ. ಹಾಗೆಯೇ ತನಗೇ ಅರಿಯದೆ ತನ್ನನ್ನು ಇತರರೊಂದಿಗೆ ಹೋಲಿಸಿ ಕೊಳ್ಳುತ್ತಾ ತನ್ನಲ್ಲಿಲ್ಲದ ಗುಣಗಳ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಎಲ್ಲರಿಂದ ಎಲ್ಲದರಿಂದ ಹಿಂದುಳಿಯುತ್ತಾ ಹೋಗುತ್ತದೆ. ಕ್ರಮೇಣ ಒಂಟಿತನದ ಗೂಡಿನಲ್ಲಿ ಬೆಳೆಯುತ್ತಾ ಡೀಪ್ ಡಿಪ್ರೆಶನ್ ಗೆ ಹೋಗುವ ಹಾಗೂ ದುಶ್ಚಟಗಳಿಗೆ ಒಳಗಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ.

ಒಂದು ಪುಟ್ಟ ಪ್ರಶಂಸೆ ಮಗುವಿನಲ್ಲಿ ಬಹಳ ದೊಡ್ಡ confidence ಮೂಡಿಸಬಲ್ಲದು. ಶಾಲೆ ಮುಗಿಸಿ ಓಡೋಡುತ್ತ ಬರುವ ಮಗುವಿನ ಪ್ರತಿ ಮಾತಿಗೂ ಕಿವಿ ಯಾಗುವ ಬದಲಿಗೆ ಮಾಡೋ ಕೆಲಸ ಇನ್ನೂ ರಾಶಿ ಬಿದ್ದಿದೆ. ನಿಂದೇನು? ಸ್ಕೂಲು ಮುಗೀತಾ? ಸರಿ, home work ಎಲ್ಲ ಮುಗಿಸಿಕೋ ಹೋಗು ಎನ್ನುತ್ತ ಅವರ ಭಾವನೆಗಳಿಗೆ ತಣ್ಣೀರೆರೆಚಬೇಡಿ. ಒಂದು ಹತ್ತು ನಿಮಿಷ ಅವರ ಮಾತನ್ನು ಆಲಿಸಿ ನೋಡಿ. ಅದೆಷ್ಟು ಸಂತೋಷ ಗೊಳ್ಳುತ್ತದೆ ಮಗು ಎಂದು. ಪ್ರತಿ ಮಾತಿಗೂ ನಿನ್ನಿಂದೇನಾಗತ್ತೆ? ನೀನೊಂದು ದೊಡ್ಡ failure ಇಷ್ಟೇ ನಿನ್ನ ಲೈ-. ನಾಲ್ಕು ದನಾನೋ ಕುರೀನೋ ತಂದುಕೊಡ್ತೀನಿ ಮೇಯಿಸಿಕೊಂಡಿರೋಕ್ಕೇ ಲಾಯಕ್ಕು, ನಿನಗ್ಯಾಕೆ ಬೇಕು ಓದು ಬರಹ? ಅಂತೆಲ್ಲ ಪದೇಪದೆ ಹೀಯಾಳಿಸುತ್ತಿದ್ದರೆ ಜಗತ್ತನ್ನೇ ಅರಿಯದ ಮಕ್ಕಳು ಅದೆಲ್ಲ ನಿಜವೇನೋ ಅಂದುಕೊಂಡು ನನ್ನಿಂದೇನೂ ಸಾಧ್ಯವೇ ಇಲ್ಲ ಅನ್ನುವ ತೀರ್ಮಾನಕ್ಕೆ ಬಂದುಬಿಡುತ್ತಾರೆ.

ಅದಕ್ಕೆ ಬದಲಾಗಿ ಏನೋ ಮಗು, ಲೆಕ್ಕದಲ್ಲಿ ಇಷ್ಟೊಂದು ಮಾರ್ಕು ತಂದು ಬಿಟ್ಟಿದೀಯ? ನನಗಂತೂ ಲೆಕ್ಕವೇ ಅರ್ಥವಾಗುತ್ತಿರಲಿಲ್ಲ ನಿನ್ನ ವಯಸ್ಸಿನಲ್ಲಿರುವಾಗ…
ಅದೆಷ್ಟು ಚೆಂದದ ಇಂಗ್ಲಿಷ್ ಮಾತಾಡ್ತೀಯ. ಈಗಲೂ ಸರಿಯಾಗಿ ಇಂಗ್ಲಿಷ್ ಮಾತಾಡೋಕೆ ಬರಲ್ಲಪ್ಪ ನನಗೆ ಅಂತ ಪುಟ್ಟ ಪುಟ್ಟ ಮಾತುಗಳಲ್ಲೇ ಅವರಿಗೆ ಹೊಗಳಿಕೆಯ ಬಹುಮಾನ ಕೊಡುತ್ತಿದ್ದರೆ ಅವರಲ್ಲಿ confidence ಹೆಚ್ಚಾಗಿ ಇನ್ನೂ ಒಂದು ಹೆಜ್ಜೆ ಮುಂದಿಡಲು ತವಕಿಸುವಂತಾಗುತ್ತದೆ. ಇಂದಿನ ಸ್ವಾರ್ಥ ಯುಗ ದಲ್ಲಿ ಯಾರಿಗೂ ಮತ್ತೊಬ್ಬರ ಬಗ್ಗೆ ಕಾಳಜಿ ವಹಿಸುವಷ್ಟು ಸಮಯವಿಲ್ಲ. ಎಲ್ಲರೂ ತಮ್ಮದೇ ಬದುಕಿನ ಜಂಜಾಟಗಳಲ್ಲಿ ತೇಲಿ ಮುಳುಗುತ್ತಿರುತ್ತಾರೆ. ಬೆಂಕಿ ಪೊಟ್ಟಣಗಳಂತೆ ಒಂದರ ಮೇಲೊಂದು ಮನೆಗಳು ಎದ್ದು ನಿಲ್ಲುತ್ತಿದ್ದರೂ, ಪಕ್ಕದ ಮನೆಯಲ್ಲಿರುವವರು ಯಾರು ಎಂಬುದೇ ತಿಳಿಯದಂತಾಗಿದ್ದೇವೆ. ಸಂಬಂಧ ಗಳು ಜಾಳು ಜಾಳಾಗಿವೆ.

ಮಕ್ಕಳು ರಸ್ತೆಗಿಳಿಯಲು ಹೆದರಿಕೆಯಾಗುವಷ್ಟು ವಾಹನಗಳ ದಟ್ಟಣೆಯಿದೆ. ಎಲ್ಲರ ಕೈಗಳಿಗೂ ಮೊಬೈಲು ಬಂದಿದೆ. ಮಾತೆಲ್ಲ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮೂಲಕವೇ. ಸಾಲದ್ದಕ್ಕೆ ಕರೋನಾ ಬಂದು ಶಾಲೆಗಳು, ಶಿಕ್ಷಕರು, ಸ್ನೇಹಿತರು, ಸಿನೆಮಾ, ಶಾಪಿಂಗ್ ಎಲ್ಲವೂ ಮೊಬೈಲೆಂಬ ಕಿಟಕಿಯ
ಮೂಲಕವೇ ಕಾಣುವಂತಾಗಿ, ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರೂ, ಎಷ್ಟೋಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ… ಎಂದು ಹುಡುಕಾಡುವಂತಾಗಿದೆ.
ಎಲ್ಲವನ್ನೂ ಮೌನವಾಗಿ ನೋಡುತ್ತಾ ಮೂಡಲಿ ಒಂದು ಭರವಸೆಯ ಬೆಳದಿಂಗಳ ನಗೆಮಲ್ಲಿಗೆ….