Friday, 20th September 2024

ಕ್ರೀಡಾ ಅವಘಡಗಳು ಸಂಭವಿಸುವುದು ಏಕೆ ? ಹೇಗೆ ?

ವೈದ್ಯ ವೈವಿಧ್ಯ

drhsmohan@gmail.com

ಅಥ್ಲೀಟ್‌ಗಳು ಒಳಗಾಗುವ ಪ್ರಮುಖ ಸಮಸ್ಯೆ ಎಂದರೆ ಪ್ರಯಾಸದ ಮೂಳೆ ಮುರಿತ. ಇಲ್ಲಿ ಕ್ರೀಡಾಪಟುಗಳು ಒಳಗಾಗುವ ಸಣ್ಣ ಸಣ್ಣ ತೊಂದರೆಗಳಿಂದ ವಿವಿಧ ಮೂಳೆಗಳು ಅಪೂರ್ಣವಾಗಿ ಮುರಿತಕ್ಕೆ ಒಳಗಾಗುತ್ತವೆ. ಪ್ರತಿಯೊಂದು ಸಣ್ಣ ಸಣ್ಣ ಮುರಿತವೂ ಸೇರಲ್ಪಟ್ಟು ಕೊನೆಗೆ ಅಂತಹವರು ಬಹಳಷ್ಟು ದೈಹಿಕ ತೊಂದರೆಗೆ ಒಳಗಾಗುತ್ತಾರೆ.

ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾರ ಕೈಗೆ ಆದ ಏಟಿನಿಂದ ಅವರು ಕೆಲವು ಪಂದ್ಯಗಳಿಂದ ಹೊರಗೆ ಉಳಿಯಬೇಕಿದೆ. -ಟ್ಬಾಲ್‌ನ ಖ್ಯಾತ ಆಟಗಾರ ಮೆಸ್ಸಿಗೆ ಆದ ಕಾಲಿನ ಸ್ನಾಯು ಸೆಳೆತದಿಂದ ಮುಂದಿನ ಒಂದೆರಡು ಪಂದ್ಯಗಳನ್ನು ಅವರು ಆಡಲಾರರು. ಈ ರೀತಿಯ ವರದಿಗಳನ್ನು ನೀವು ಪತ್ರಿಕೆಗಳಲ್ಲಿ ಓದುತ್ತಿರುತ್ತೀರಿ. ಆ ಸಂದರ್ಭದಲ್ಲಿ ಮೂಲತಃ ಆಯಾಯ
ಕ್ರೀಡೆಯಲ್ಲಿ ನುರಿತ ಆಟಗಾರರು ಹೀಗೆ ತೊಂದರೆಗೆ ಒಳಗಾಗುವುದು ಹೇಗೆ? ಏಕೆ? ಎಂಬ ಸಂಶಯ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.

ಹಾಗಾದರೆ ಈ ರೀತಿಯ ಅವಘಡಗಳು ಯಾವ ರೀತಿಯವು? ಹೇಗೆ ಉಂಟಾಗುತ್ತವೆ? ಎಂಬುದನ್ನು ವಿಶ್ಲೇಷಿಸೋಣ. ಯಾವುದೇ ಆಟ, ಓಟ, ಕ್ರೀಡೆಗಳ ಸಂದರ್ಭಗಳಲ್ಲಿ ಗಾಯಗಳು, ಹೊಡೆತಗಳು ಅವಘಡಗಳು ಆಗುವುದು ಸಹಜ ಮತ್ತು ಸ್ವಾಭಾವಿಕ. ಈ ರೀತಿಯ ಅವಘಡಗಳಿಗೆ ಮುಖ್ಯ ಕಾರಣ ಎಂದರೆ ಯಾವುದೇ ಕ್ರೀಡಾಪಟುವಾದರೂ ಬೇರೆ ಬೇರೆ ಸಂದರ್ಭ ಗಳಲ್ಲಿ ಬೇರೆ ಬೇರೆ ವಾತಾವರಣಗಳಲ್ಲಿ ಒಂದು ಕ್ರಮಬದ್ಧವಾದ ರೀತಿಯಲ್ಲಿ ತನ್ನ ದೇಹದ ನಾನಾ ಭಾಗಗಳ ಸ್ಥಿತಿ ಮತ್ತು ಚಲನೆಯನ್ನು ನಿಯಂತ್ರಿಸಲು ವಿಫಲನಾಗುತ್ತಾನೆ ಎಂಬುದೇ ಆಗಿದೆ.

ಶೇ.100 ಸಾಮರ್ಥ್ಯ ಅಗತ್ಯ: ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಸಾಮಾನ್ಯ ಮನುಷ್ಯ ನಿಗೆ ಅಪಘಾತ ಅಥವಾ ಅವಘಡ ಸಂಭವಿಸಿದಾಗ ಅಂತಹ ಆಘಾತಕ್ಕೆ ಒಳಗಾದ ಅಂಗ ಅಥವಾ ಭಾಗಗಳ ಮೊದಲಿನ ಕೆಲಸದ ಸಾಮರ್ಥ್ಯದ ಶೇ.75 – 80 ಮತ್ತೆ ಮರಳಿ ಬಂದರೆ ಅವನು ತೃಪ್ತನಾಗುತ್ತಾನೆ. ಆದರೆ ಅಥ್ಲೀಟ್‌ಗಳು ಮತ್ತು ಕ್ರೀಡಾಪಟುಗಳ ವಿಚಾರದಲ್ಲಿ ಶೇ.100 ಸಾಮರ್ಥ್ಯ ಹಿಂತಿರುಗಿ ಬರದಿದ್ದರೆ ಅವರು ತೃಪ್ತರಾಗುವುದಿಲ್ಲ. ಅಲ್ಲದೆ ಅವರಿಗೆ ತಮ್ಮ ಮೊದಲಿನ ಆಟ ಓಟಗಳಿಗೆ ಸಮಾಧಾನಕರವಾಗಿ ಹಿಂತಿರುಗಲೂ ಆಗುವುದಿಲ್ಲ.

ಇನ್ನೊಂದು ಪ್ರಮುಖ ವಿಚಾರವೆಂದರೆ ಉಚ್ಚಮಟ್ಟದ ಅಥ್ಲೀಟ್‌ಗಳಲ್ಲಿ ಕೊನೆಯಲ್ಲಿ ಇರುವ ವ್ಯತ್ಯಾಸ ಅತ್ಯಲ್ಪವಾಗಿದ್ದು ಅವರ ಸಾಮರ್ಥ್ಯದ ಶೇಕಡಾ ಅರ್ಧದ ಕೊರತೆಯೂ ಅವರಿಗೆ ನಿರ್ಣಾಯಕ ಹಂತದಲ್ಲಿ ಸೋಲನ್ನು ತಂದೊಡ್ಡಬಲ್ಲದು. ಹೀಗೆ ಅಥ್ಲೀಟ್‌ಗಳು ಮತ್ತು ಕ್ರೀಡಾಪಟುಗಳು ಒಳಗಾಗುವ ಅವಘಡಗಳನ್ನು ನಾವು ಮುಖ್ಯವಾಗಿ ಎರಡು ಪ್ರಭೇದಗಳಾಗಿ ಪರಿಗಣಿಸಬಹುದು.

೧.ದೇಹದ ಮೃದು ಅಂಗಾಂಶಗಳಿಗೆ ಘಾತವಾಗುವುದು. ೨.ಮೂಳೆ ಮತ್ತು ಕೀಲುಗಳಿಗೆ ಉಂಟಾಗುವ ಅಪಘಾತ.
ಈಗ ವಿವಿಧ ಕ್ರೀಡೆಗಳಲ್ಲಿ, ಆಟಗಳಲ್ಲಿ ಉಂಟಾಗುವ ಅಪಘಾತಗಳ ರೀತಿಯನ್ನು ಗಮನಿಸೋಣ.

ಅಥ್ಲೀಟ್‌ಗಳಲ್ಲಿ ಉಂಟಾಗುವ ಮುಖ್ಯ ತೊಂದರೆಗಳು: ೧.ಮಾಂಸದ ಸೆಳೆತ ಅಥವಾ ಬಿಗಿತ. ೨.ಅಸ್ಥಿಬಂಧಕಗಳ (Ligaments) ಸೆಳೆತ. ೩.ಅಸ್ಥಿ ಬಂಧಕಗಳು ಛಿದ್ರವಾಗುವುದು. ೪.ಪ್ರಯಾಸದ ಮೂಳೆ ಮುರಿತ (Stress
fracture) ೫.ಮಾಂಸಗಳ ಉಳುಕು (cramps) ಇತ್ಯಾದಿ.

ಅಥ್ಲೀಟ್‌ಗಳಲ್ಲಿ ಬಹಳವಾದ ಚಲನೆಯಿಂದ ಮಾಂಸಗಳು ಮೂಳೆಗಳಿಗೆ ಜೋಡಣೆಯಾಗುವ ಸ್ಥಳದಲ್ಲಿ ಹಿಗ್ಗುವುದರಿಂದ ಮಾಂಸದ ಸೆಳೆತ ಉಂಟಾಗುತ್ತದೆ. ಉತ್ತಮ ಉದಾಹರಣೆಗಳೆಂದರೆ ಒಳಗಿನ ತೊಡೆಯ ಭಾಗದ ಮಾಂಸಗಳು ಮತ್ತು
ಮೊಳಕಾಲಿನ ಕೆಳಗೆ ಹಿಂಬದಿಯ ಕಾಲಿನ ಭಾಗದ ಮಾಂಸಗಳಲ್ಲಿ ಉಂಟಾಗುವ ಸೆಳೆತ. ಇದರ ಚಿಕಿತ್ಸೆ ಮುಖ್ಯವಾಗಿ ಫಿಸಿಯೋಥೆರಪಿ, ಮಂಜುಗಡ್ಡೆಯನ್ನು ಕಟ್ಟುವುದು, ಅರಿವಳಿಕೆಯ ಚುಚ್ಚುಮದ್ದು ಅಂತಹ ಭಾಗಗಳಿಗೆ ಅಗತ್ಯ ಬಿದ್ದಾಗ ಕೊಡುವುದು ಮತ್ತು ವಿಸ್ತರಣದ ವ್ಯಾಯಾಮಗಳು. ಇತ್ತೀಚಿಗೆ ಕೆಲವು ಹೊಸ ವಿಧಾನಗಳೂ ಬಂದಿವೆ. ಎತ್ತರ ಅಥವಾ ದೂರ ಜಿಗಿಯುವವರು ಮತ್ತು ಫುಟ್‌ಬಾಲ್ ಆಡುವವರಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆ ಎಂದರೆ ಅಸ್ಥಿಬಂಧಕಗಳ
ಸೆಳೆತ.

ದೇಹದ ಎಲ್ಲ ಕೀಲುಗಳಿಗೆ ಸಂಬಂಧಪಟ್ಟಂತೆ ಅಸ್ಥಿಬಂಧಕಗಳು ಇದ್ದರೂ ಈ ರೀತಿಯ ಸಮಸ್ಯೆಗೆ ಒಳಗಾಗುವುದು ಹೆಚ್ಚಾಗಿ ಮೊಳಕಾಲಿನ ಕೀಲಿನ ಅಸ್ಥಿಬಂಧಕಗಳು. ಇಲ್ಲಿ ಮುಖ್ಯವಾಗಿ ನಾಲ್ಕು ಅಸ್ಥಿಬಂಧಕಗಳಿವೆ. ಅವುಗಳೆಂದರೆ ತೊಡೆಯ ಭಾಗದ ಮೂಳೆ ಫೀರ್ಮನಿಂದ ಕಾಲಿನ ಭಾಗದ ಮೂಳೆಗಳಾದ ಟಿಬಿಯಾ ಮತ್ತು ಫಿಬುಲಾ ಗಳಿಗೆ ಜೋಡಣೆಯಾಗಿರುವ ಕೀಲಿನ ಒಳಭಾಗದ ಮತ್ತು ಹೊರಭಾಗದ ಅಸ್ಥಿಬಂಧಕಗಳು ಮತ್ತು ಈ ಮೂಳೆಗಳನ್ನು ಕೀಲಿನ ಒಳಗಡೆ ಬಂಧಿಸಿರುವ ಮುಂದಿನ ಮತ್ತು ಹಿಂದಿನ ಕ್ರುಷಿಯೇಟ್ ಅಸ್ಥಿಬಂಧಕಗಳು.

ಇವುಗಳಲ್ಲಿ ಮೊದಲು ತಿಳಿಸಿದ ಕೀಲಿನ ಒಳಭಾಗದ ಮತ್ತು ಹೊರಭಾಗದ ಅಸ್ಥಿಬಂಧಕಗಳು ಮುಖ್ಯವಾಗಿ ಒಳಗಾಗುತ್ತವೆ.
ಜಿಗಿಯುವಾಗ ಮತ್ತು ಫುಟ್‌ಬಾಲ್ ಆಡುವಾಗ ದೇಹವು ಎತ್ತರದಿಂದ ಕೆಳಗೆ ಬರುವಾಗ ಕಾಲು ನೆಲವನ್ನು ಸರ್ಶಿಸುವ ಸಮಯದಲ್ಲಿ ಯಾವಾಗಲೂ ಇರಬೇಕಾದ ಸಮಸ್ಥಿತಿ ಇರುವುದಿಲ್ಲ.

ಅಲ್ಲದೇ ಹೀಗೆ ಕಾಲು ವೇಗವನ್ನು ಹೆಚ್ಚು ಮಾಡಿದಾಗ ಮತ್ತು ಓಡುವಾಗ, ದಿಕ್ಕು ಬದಲಾಗುವಾಗ ಉಂಟಾಗುವ ಅತೀ ತೀವ್ರ ಬದಲಾವಣೆಯಿಂದ ಈ ರೀತಿಯ ಆಸ್ಥಿಬಂಧಕಗಳ ಸೆಳೆತ ಅಥವಾ ಬಿಗಿತ ಉಂಟಾಗುತ್ತವೆ. ಅಸ್ಥಿಬಂಧಕಗಳಿಗೆ ಸಂಪೂರ್ಣ
ವಿರಾಮ ಕೊಡುವುದು ಸರಿಯಾದ ಚಿಕಿತ್ಸೆ. ಈ ರೀತಿಯ ಆಘಾತ ಬಹಳ ವೇಗದಲ್ಲಿ ಆದಾಗ ಅಥವಾ ಹೆಚ್ಚಿನ ಪ್ರಮಾಣದಲ್ಲಿzಗ ಕೆಲವು ಸಂದರ್ಭಗಳಲ್ಲಿ ಅಸ್ಥಿಬಂಧಕಗಳು ಛಿದ್ರವಾಗುವ ಪರಿಸ್ಥಿತಿಯೂ ಒದಗುತ್ತದೆ.

ಇಂತಹ ಸಂದರ್ಭಗಳಲ್ಲಿ ಎಕ್ಸರೇ ಪ್ರಯೋಜನವಾಗುವುದಿಲ್ಲ. ಆರ್ಥ್ರೋಸ್ಕೋಪ್ ಉಪಕರಣ ಉತ್ತಮ. ಕೆಲವೊಮ್ಮೆ ಎಂಆರ್‌ಐ ಸ್ಕ್ಯಾನ್ ಬೇಕಾಗಬಹುದು. ಸಣ್ಣ ಪ್ರಮಾಣದ ಅಸ್ಥಿಬಂಧಕ ಛಿದ್ರವಾದರೆ ಅದನ್ನು ಸೂಕ್ತ ನೂಲೆಳೆಗಳಿಂದ ಹೊಲಿದು
ಸರಿಪಡಿಸಬಹುದು. ದೊಡ್ಡ ಪ್ರಮಾಣದ ಛಿದ್ರತೆ ಆದರೆ ಇಡೀ ಅಸ್ಥಿಬಂಧಕವನ್ನೇ ಪುರ್ನ ರಚಿಸುವ ಅನಿವಾರ್ಯತೆ ಒದಗುತ್ತದೆ.

ಪ್ರಯಾಸದ ಮೂಳೆ ಮುರಿತ: ಅಂತರ್ ವಿಶ್ವವಿದ್ಯಾಲಯದ ಸ್ಪರ್ಧೆಯಲ್ಲಿ ಸ್ಪಽಸಬೇಕಾಗಿದ್ದ ಯುವತಿಯೊಬ್ಬಳು ಕಾಲು
ಆಗಾಗ ನೋವಾಗುತ್ತದೆ, ಮೊದಲಿನ ಹಾಗೆ ಓಡಲಾಗುವುದಿಲ್ಲ ಎಂಬ ತೊಂದರೆಯನ್ನು ಬಹಳ ದಿವಸ ಅನುಭವಿಸಿದಳು. ಸೂಕ್ತ ವೈದ್ಯರು ಪರೀಕ್ಷೆ ಮಾಡಿದಾಗಲೂ ಅವಳ ತೊಂದರೆಯ ಮೂಲ ಕಾರಣ ಪತ್ತೆಯಾಗಲಿಲ್ಲ. ಆಗ ವಿಶೇಷ ಪ್ರೀತಿಯ
ಎಕ್ಸರೇಗಳನ್ನು ತೆಗೆದು ನೋಡಿದಾಗ ಅವಳ ಮೊಳಕಾಲಿನ ಕೆಳಗಿನ ಮೂಳೆಯಲ್ಲಿ ಪ್ರಯಾಸದ ಮೂಳೆ ಮುರಿತ ಉಂಟಾಗಿದೆ ಎಂಬ ಅಂಶ ವೈದ್ಯರಿಗೆ ತಿಳಿಯಿತು.

ಹೀಗೆ ಅಥ್ಲೀಟ್‌ಗಳು ಒಳಗಾಗುವ ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಪ್ರಯಾಸದ ಮೂಳೆ ಮುರಿತ. ಇಲ್ಲಿ ಕ್ರೀಡಾಪಟು ಗಳು ಒಳಗಾಗುವ ಸಣ್ಣ ಸಣ್ಣ ತೊಂದರೆಗಳಿಂದ ವಿವಿಧ ಮೂಳೆಗಳು ಅಪೂರ್ಣವಾಗಿ ಮುರಿತಕ್ಕೆ ಒಳಗಾಗುತ್ತವೆ. ಪ್ರತಿಯೊಂದು ಸಣ್ಣ ಸಣ್ಣ ಮುರಿತವೂ ಸೇರಲ್ಪಟ್ಟು ಕೊನೆಗೆ ಅಂತಹವರು ಬಹಳಷ್ಟು ದೈಹಿಕ ತೊಂದರೆಗೆ ಒಳಗಾಗುತ್ತಾರೆ. ಉದಾ: ಮೊಳಕಾಲಿನ ಕೆಳಗಿನ ಮೂಳೆ ಟಿಬಿಯದಲ್ಲೂ , ತೊಡೆಯ ಮೂಳೆ ಫೀಮರ್‌ನ ಕುತ್ತಿಗೆಯ ಭಾಗದಲ್ಲೂ ಮತ್ತು ಮುಂಗಾಲಿನ ಮೂಳೆಗಳೂ ಇದಕ್ಕೆ ಒಳಗಾಗುವ ಸಂಭವ ಜಾಸ್ತಿ. ಆ ರೀತಿ ಮುರಿತಕ್ಕೆ ಒಳಗಾದ ಮೂಳೆಗೆ ಸೂಕ್ತ ಗಾರ್ಡ್ ಕೊಡುವುದರಿಂದ ಚಿಕಿತ್ಸೆ ಮಾಡಬೇಕು ಎಂದು ತಜ್ಞರ ಅಭಿಪ್ರಾಯ.

ಮೊದಲು ತಿಳಿಸಿದ ಯುವತಿಗೆ ಆದ ಹಾಗೆ ಮೊಳಕಾಲಿನ ಕೆಳಗಿನ ಮೂಳೆಗೆ ಆದರೆ ಷಿನ್ ಗಾರ್ಡ್ ಕೊಡಬೇಕು. ಅಲ್ಲದೆ ಅಂತಹವರು ಬಹಳ ನಿಧಾನವಾಗಿ ಮೊದಲಿನ ಚಟುವಟಿಕೆಗೆ ಹಿಂತಿರುಗುವಂತೆ ನೋಡಿಕೊಳ್ಳಬೇಕು. ಬಹಳ ದೂರ ಓಡುವ ಅಥ್ಲೀಟ್‌ಗಳು ಆಗಾಗ ತಮ್ಮ ತೊಡೆಯ ಭಾಗದಲ್ಲಿ ಅಸ್ಪಷ್ಟ ನೋವು ಬರುತ್ತದೆ, ಓಡಾಡುವಾಗ ಮಾತ್ರ ನೋವು ಇರುತ್ತದೆ. ಉಳಿದ ಸಮಯದಲ್ಲಿ ಇರುವುದಿಲ್ಲ ಎಂದು ವೈದ್ಯರಲ್ಲಿ ಬರುತ್ತಾರೆ. ಅವರಿಗೆ ಹೀಗಾಗಲು ಕಾರಣ ಎಂದರೆ ಅವರ ಮಾಂಸಖಂಡಗಳು ಒಂದು ರೀತಿಯ ಉಳುಕಿಗೆ ಒಳಗಾಗಿ ಅವು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವ ಶಕ್ತಿಯನ್ನು ಕಳೆದು ಕೊಳ್ಳುತ್ತವೆ. ಇಲ್ಲಿ ಮೂಲ ತೊಂದರೆ ಅಂದರೆ ಈ ರೀತಿಯ ಓಟಗಾರರು ಅತಿಯಾಗಿ ಬೆವರುವುದರಿಂದ ಅವರ ಬೆವರಿನಲ್ಲಿ ಲವಣದ ಪ್ರಮಾಣವು ಬಹಳವಾಗಿ ನಷ್ಟವಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಈಜುಗಾರರಲ್ಲಿ ಅವರು ತಮ್ಮ ವ್ಯಾಪ್ತಿಯ ಅರ್ಧ ದೂರದಲ್ಲಿ ಇದ್ದಾಗ ಹೀಗಾದರೆ ಅವರು ಮರಣ ಹೊಂದ ಬೇಕಾದ ದುರಂತ ಪರಿಸ್ಥಿತಿ ಒದಗುತ್ತದೆ.  ಇದರ ಚಿಕಿತ್ಸೆ ಎಂದರೆ ಇಲ್ಲೇ ಅನ್ನಾಂಗ ಕೊಡುವುದು. ಅಂತಹವರು ಆಗಾಗ ಉಪ್ಪು ಮತ್ತು ಲಿಂಬೆ ರಸ ಹೀರುವುದು ಅಗತ್ಯ.

ಕ್ರಿಕೆಟ್ ಅವಘಡಗಳು: ಕ್ರಿಕೆಟ್‌ನಲ್ಲಿ ಅವಘಡಗಳ ಬಗ್ಗೆ ಮಾತನಾಡುವಾಗ ಈ ರೀತಿಯ ಬಹಳ ಹಿಂದಿನ ಎರಡು
ಸಂದರ್ಭಗಳು ನೆನಪಾಗುತ್ತವೆ. ೧೯೬೦ರ ದಶಕದ ಪೂರ್ವಾರ್ಧದಲ್ಲಿ ವೆಸ್ಟ್ ಇಂಡೀಸಿನ ಪ್ರವಾಸದಲ್ಲಿ ಭಾರತದ ಆಗಿನ ಕ್ಯಾಪ್ಟನ್ ನಾರಿ ಕಂಟ್ರಾಕ್ಟರ್‌ಗೆ ಚೆಂಡಿನಿಂದ ತಲೆಗೆ ಬಿದ್ದ ತೀವ್ರ ಏಟಿನಿಂದ ಮೆದುಳಿನ ಹೊರಗಿನ ಪದರುಗಳಲ್ಲಿ ರಕ್ತಸ್ರಾವ
ಆಯಿತು. ಅವರಿಗೆ ತಕ್ಷಣ ಲಭಿಸಿದ ಸೂಕ್ತ ಚಿಕಿತ್ಸೆಯಿಂದ ಅವರ ಜೀವ ಉಳಿಯಿತು.

ಇಂಥದೇ ಇನ್ನೊಂದು ಸಂದರ್ಭ ೭೦ರ ದಶಕದಲ್ಲಿ ನ್ಯೂಜಿಲೆಂಡಿನಲ್ಲಿ ಅದೇ ದೇಶದ ಇವಾನ್ ಚಾಟ್ ಫೀಲ್ಡ್ ರಿಗೆ ಹೊಡೆತ ಬಿದ್ದಾಗ ಹಿಂದಿನ ಪರಿಸ್ಥಿತಿ ಪುನರಾವರ್ತನೆಯಾಯಿತು. ಆಗ ಇಂಗ್ಲೆಂಡಿನ ಫಿಸಿಯೋ ಥೆರಪಿಸ್ಟರ ಸೂಕ್ತ ಸಮಯ ಪ್ರಜ್ಞೆಯ ಚಿಕಿತ್ಸೆ ಚಾಟ್ ಫೀಲ್ಡರಿಗೆ ಲಭ್ಯ ಇಲ್ಲದಿದ್ದರೆ ಕ್ರಿಕೆಟ್ ಮೈದಾನದಲ್ಲಿಯೇ ಅವರು ಕೊನೆ ಉಸಿರೆಳೆಯುವ ದುರ್ದೈವ
ಉಂಟಾಗುತ್ತಿತ್ತು.

ಹೀಗೆ ಕ್ರಿಕೆಟ್ ಆಟಗಾರರು – ಚೆಂಡು ಅತಿ ಯಾದ ವೇಗದಿಂದ ದೇಹದ ರಕ್ಷಿಸಲ್ಪಡದ ಸ್ಥಳಗಳಿಗೆ ತಗುಲಿದಾಗ ನಾನಾ ಅವಘಡಗಳನ್ನು ಎದುರಿಸುತ್ತಾರೆ. ವೇಗದ ಬೌಲರುಗಳಲ್ಲಿ ಹೆಚ್ಚು ಕಾಣಿಸುವ ಇನ್ನೊಂದು ಅಂದರೆ ಬೆನ್ನು ಮತ್ತು ಸೊಂಟದ ಭಾಗದಲ್ಲಿ ಉಂಟಾಗುವ ನೋವು. ಇದಕ್ಕೆ ವಿಶೇಷ ರೀತಿಯ ವ್ಯಾಯಾಮಗಳು ಅವರಿಗೆ ಅತಿ ಅವಶ್ಯಕ. ಅಲ್ಲದೆ ಕೈಯ ಸಣ್ಣ ಸಣ್ಣ ಮೂಳೆಗಳು ಮುರಿಯಬಹುದು. ಹಾಗೆಯೇ ನಾನಾ ಮಾಂಸಗಳ ಸ್ನಾಯುಗಳ ಸೋಂಕಿನಿಂದ ಕಂಕುಳಿನ ಭಾಗದಲ್ಲಿ ಅಸ್ಪಷ್ಟವಾದ ನೋವು ಬರಬಹುದು.

ಫುಟ್ಬಾಲ್ ಆಟಗಾರರಲ್ಲಿ ಹೆಚ್ಚಿನ ಸಂದರ್ಭದಲ್ಲಿ ಅಥ್ಲೀಟ್‌ಗಳಿಗೆ ಉಂಟಾಗುವ ನಾನಾ ತೊಂದರೆಗಳೇ ಉಂಟಾಗುತ್ತವೆ. ಅಷ್ಟೇ ಅಲ್ಲದೆ ಇವರಲ್ಲಿ ಮತ್ತು ಕ್ರಿಕೆಟ್ ಆಟಗಾರರಲ್ಲಿ ಸಹಿತ ಒಂದು ವಿಶೇಷ ರೀತಿಯ ಅವಘಡ ಸಂಭವಿಸುತ್ತದೆ. ಮೊಳಕಾಲಿನ ಕೀಲಿನ ಎರಡು ಮೂಳೆಗಳ ಮಧ್ಯೆ ನಾನಾ ಆಘಾತಗಳನ್ನು ಹೀರಿಕೊಳ್ಳಲೋಸುಗ ಮೃದುವಾದ ಅಂಗಾಂಶ
(ಕಾರ್ಟಿಲೇಜ) ಇರುತ್ತದೆ. ಈ ಅಂಗಾಂಶದಲ್ಲಿ ಒಳ ಭಾಗದ ಅಂಗಾಂಶವು ನಾನಾ ತಿರುಗಣೆ ರೀತಿಯ ಚಲನೆಯಿಂದ ವಿಶೇಷ ರೀತಿಯ ಆಘಾತಕ್ಕೆ ಒಳಗಾಗುತ್ತದೆ. ಆರ್ಥ್ರೋಸ್ಕೋಪ್‌ನಲ್ಲಿ ಸಾಮಾನ್ಯವಾಗಿ ಇದು ಪತ್ತೆಯಾಗುತ್ತದೆ.

ಹಾಕಿ ಆಟಗಾರರಲ್ಲಿ ಕಂಡು ಬರುವ ವಿಶೇಷ ಅವಘಡ ಎಂದರೆ ಮೊಳಕಾಲಿನ ಕೆಳಗೆ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವುದು. ಏಕೆಂದರೆ ಆಟದ ಚೆಂಡು ಮತ್ತು ಎದುರಾಳಿಯ ದಾಂಡು ಈ ಎರಡರಿಂದಲೂ ಆ ಭಾಗಕ್ಕೆ ಮತ್ತೆ ಮತ್ತೆ ಬೀಳುವ ಏಟು.
ಇನ್ನುಳಿದ ಆಟಗಳಾದ ಟೆನಿಸ್, ಬ್ಯಾಡ್ಮಿಂಟನ್ ಗಳಲ್ಲಿ ಭುಜದ ಕೀಲಿನಲ್ಲಿ ತೊಂದರೆ ಉಂಟಾಗಬಹುದು. ಉಳಿದಂತೆ ಮೇಲೆ ತಿಳಿಸಿದ ಯಾವುದೂ ಕಾಣಿಸಿಕೊಳ್ಳಬಹುದು.

ಟೆನಿಸ್ ಮೊಳಕೈ: ಈ ಅವಘಡದ ಹೆಸರು ಸೂಚಿಸುವಂತೆ ಟೆನಿಸ್ ಆಟಗಾರರಲ್ಲಿ ಮಾತ್ರ ಸಂಭವಿಸುವ ಅವಘಡವಲ್ಲ.
ಆಟಗಾರರಲ್ಲಿ ಅಲ್ಲದೆ ಯಾರಲ್ಲಿಯೂ ಸಂಭವಿಸಬಹುದು. ಹೆಚ್ಚಾಗಿ ಬಟ್ಟೆ ಒಗೆಯುವಾಗ ಬಹಳ ನೋವು ಬರುವುದು, ಮೊಳಕೈ ಯನ್ನು ಆಡಿಸಿದಾಗ ನೋವಾಗುವುದು ಎಂದು ಕಾಣಿಸುವ ಈ ತೊಂದರೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ
ಹೆಚ್ಚು ಕಂಡುಬರುತ್ತದೆ. ಇದರಲ್ಲಿ ರಾತ್ರಿ ನೋವು ಬಹಳ. ಒಂದೇ ಸಮನಾದ ಘರ್ಷಣೆಯಿಂದ ಮೊಳಕೈಯಿನ ಭಾಗದ ಸ್ನಾಯುಗಳಿಗೆ ಒಂದು ರೀತಿಯ ಸೋಂಕು ಉಂಟಾಗುತ್ತದೆ. ಅಲ್ಲದೆ ಅಲ್ಲಿಯ ಒಂದು ನರ ಈ ಸ್ನಾಯುಗಳ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತದೆ. ಈ ಎಲ್ಲ ಕಾರಣದಿಂದ ನೋವು ಬಹಳ. ಲೇಖನದ ಸ್ಥಳದ ಪರಿಮಿತಿಯಲ್ಲಿ ಮುಖ್ಯವಾದ ಕೆಲವು ಇವು.
ಕ್ರೀಡಾಪಟುಗಳು ತಮ್ಮ ದೈಹಿಕ ತೊಂದರೆಗಳನ್ನು ಉಪೇಕ್ಷಿಸದೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆಗೊಳಪಡಬೇಕು.