ಕ್ರೀಡಾಲೋಕ
ಸುರೇಂದ್ರ ಪೈ
ಪ್ರಪಂಚದ ಪ್ರತಿಯೊಂದು ದೇಶದ ಚಿತ್ತ ಸದ್ಯ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನತ್ತ ನೆಟ್ಟಿದೆ. ‘ಇಂದು ನಮ್ಮ ದೇಶಕ್ಕೆ ಯಾವ ಪದಕ ಬರಬಹುದು, ಯಾವ ಕ್ರೀಡಾಪಟು ಹೊಸ ದಾಖಲೆ ನಿರ್ಮಿಸಬಹುದು?’ ಎಂಬಿತ್ಯಾದಿ ಕುತೂಹಲಗಳು ಪ್ರತಿಯೊಬ್ಬರಲ್ಲೂ ಇವೆ. ವಿಶ್ವದ ಪ್ರತಿಷ್ಠಿತ ಕ್ರೀಡೋತ್ಸವ ಎಂದಾಗ ಇಂಥ ಕುತೂಹಲ, ತವಕ ಇರುವುದು ಸಹಜವೇ ಬಿಡಿ.
ಆದರೆ ಪ್ರಪಂಚದ ಸರಿಸುಮಾರು ೮೦೦ ಕೋಟಿ ಜನರಿಗೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಮಾತ್ರ ಕ್ರೀಡೆಗಿಂತಲೂ ಮುಖ್ಯವಾದ ಪಾಠವೊಂದನ್ನು ಹೇಳಿಕೊಟ್ಟಿದೆ.
ಯಾವ ದೇಶ ಎಷ್ಟು ಪದಕ ಗೆಲ್ಲುತ್ತದೆಯೋ ಗೊತ್ತಿಲ್ಲ; ಆದರೆ ಪ್ಯಾರಿಸ್ ಜನರು ಮಾತ್ರ ೬,೦೦೦ ವರ್ಷಗಳಿಗಿಂತಲೂ ಪುರಾತನವಾದ ತಮ್ಮ ‘ಸೀನ್’ ನದಿಯನ್ನು ಸ್ವಚ್ಛಗೊಳಿಸಿ ಜಗತ್ತಿ ಗೊಂದು ಸಂದೇಶ ನೀಡಿದ್ದಾರೆ. ಒಲಿಂಪಿಕ್ಸ್ ಪ್ರಾರಂಭಕ್ಕೂ ಮುನ್ನವೇ ತಮ್ಮ ಸಂಕಲ್ಪವನ್ನು ಪೂರೈಸಿದ ಅವರು, ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಆಕರ್ಷಣೆಗಳಿಂದಾಗಿ ಖ್ಯಾತವಾಗಿರುವ ಪ್ಯಾರಿಸ್‌ನಲ್ಲಿ ವಿಶ್ವಪ್ರಸಿದ್ಧ ಐಫೇಲ್ ಟವರ್, ಸರ್ವಶ್ರೇಷ್ಠ ಚಿತ್ರಕಲಾವಿದ ಲಿಯೊ ನಾರ್ಡೊ ಡಾ ವಿನ್ಸಿ ರಚಿಸಿದ ಮೊನಾಲಿಸಾ ಚಿತ್ರವಿರುವ ವಿಶ್ವದ ಅತಿದೊಡ್ಡ ಲೌವ್ರೆ ವಸ್ತು ಸಂಗ್ರಹಾಲಯ ಇವೆ. ನಗರದ ಹೃದಯಭಾಗದ ಮೂಲಕ ಹಾದುಹೋಗುವ ಸೀನ್ ನದಿಯು (ಉದ್ದ ೭೭೭ ಕಿ.ಮೀ.) ತನ್ನ ಸೇತುವೆಗಳು, ವಿಹಾರದೋಣಿಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಈ ನದಿ ಬಹಳ ಕಾಲದಿಂದ ಸಂಪೂರ್ಣವಾಗಿ ಮಲಿನಗೊಂಡಿತ್ತು. ಆದರೆ ಒಲಿಂಪಿಕ್ಸ್ ಉದ್ಘಾಟನೆಗೂ ಮುನ್ನವೇ ಅದು ಮಾಲಿನ್ಯ ಕಳೆದುಕೊಂಡು ಮರುಹುಟ್ಟು ಪಡೆದ ಕಥೆ ನಿಜಕ್ಕೂ ಅದ್ಭುತ.
೨೦೧೭ರ ಸೆಪ್ಟೆಂಬರ್ ೧೩ ಪ್ಯಾರಿಸ್ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿತ್ತು. ಅಂದು ಪೆರುವಿನ ಲಿಮಾದಲ್ಲಿ ನಡೆದ ೧೩೧ನೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)
ಸಭೆಯಲ್ಲಿ ೨೦೨೪ರ ಬೇಸಿಗೆ ಒಲಿಂಪಿಕ್ಸ್‌ಗೆ ಪ್ಯಾರಿಸ್ ಅನ್ನು ಆತಿಥೇಯ ನಗರವನ್ನಾಗಿ ಆಯ್ಕೆಮಾಡಲಾಯಿತು. ಆ ಕ್ಷಣವೇ, ಶತಮಾನಗಳಿಂದ ಕೊಳಕಾಗಿ ಹರಿಯುತ್ತಿದ್ದ ಪ್ಯಾರಿಸ್
ನ ಸೀನ್ ನದಿಯ ಶುದ್ಧೀಕರಣಕ್ಕೆ ಸಂಕಲ್ಪಿಸಲಾಯಿತು.
೧೯೦೦ರ ವರ್ಷದ ಬೇಸಿಗೆ ಒಲಿಂಪಿಕ್ಸ್‌ನ ಆತಿಥ್ಯವನ್ನು ವಹಿಸಿಕೊಂಡಾಗ ಇದೇ ನದಿಯಲ್ಲಿ ರೋಯಿಂಗ್, ಈಜು ಮತ್ತು ವಾಟರ್‌ಪೋಲೋ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಂತರ ೧೯೨೩ರವರೆಗೂ ಈ ನದಿಯಲ್ಲಿ ಸಾರ್ವಜನಿಕವಾಗಿ ಈಜಲು ಅವಕಾಶವಿತ್ತು. ಆದರೆ ನದಿಯು ಮಲಿನವಾದ ಕಾರಣದಿಂದ ೧೯೨೩ರ ಜುಲೈ ೧೭ರಿಂದ ಇದಕ್ಕೆ ನಿಷೇಧ ಹೇರಲಾಯಿತು. ಹೀಗಾಗಿ, ೧೯೨೪ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಿಕೊಂಡರೂ, ಈ ನದಿಯಲ್ಲಿ ಯಾವುದೇ ಸ್ಪರ್ಧೆ ನಡೆಯಲಿಲ್ಲ. ಅದಾದ ೧೦೦ ವರ್ಷಗಳ ಬಳಿಕ ೩ನೇ ಬಾರಿಗೆ ಒಲಿಂಪಿಕ್ಸ್ ಆತಿಥ್ಯವನ್ನು ವಹಿಸಿಕೊಂಡ ಕ್ಷಣದಲ್ಲೇ ನದಿಯ ಶುದ್ಧೀಕರಣ ಮಾತ್ರವಲ್ಲ, ಟ್ರಯಾಥ್ಲಾನ್‌ನಂಥ ಕೆಲ ಈಜುಸ್ಪರ್ಧೆಗಳನ್ನೂ ನಡೆಸಲು ಪ್ಯಾರಿಸ್ ಸಂಕಲ್ಪಿಸಿ ನದಿಯ ಮರುಹುಟ್ಟಿಗೆ ನಾಂದಿ ಹಾಡಿತು.
ನದಿಗಳು ಮನುಕುಲದ ಜೀವನಾಡಿಗಳು. ಪ್ರಪಂಚದ ಬಹುತೇಕ ಎಲ್ಲಾ ನಾಗರಿಕತೆಗಳು ನದೀತೀರದಲ್ಲೇ ಜನಿಸಿದ್ದು. ಭಾರತದಲ್ಲಿ ಸಾಕಷ್ಟು ನದಿಗಳು ಹುಟ್ಟಿ ಹರಿದರೂ, ನಗರವೊಂದರ ಮೂಲಕ ಅವು ಹರಿದುಹೋಗುವ ನಿದರ್ಶನಗಳು ವಿರಳವೇ. ಆದರೆ ಪ್ಯಾರಿಸ್‌ನಲ್ಲಿ ಹಾಗಲ್ಲ, ಸೀನ್ ನದಿಯು ಈ ನಗರದ ಹೃದಯಭಾಗದಲ್ಲಿ ಹಾದುಹೋಗುತ್ತದೆ. ನಗರದ ತ್ಯಾಜ್ಯ ನೀರು ಮತ್ತು ಮಳೆನೀರು ಒಂದೇ ಪೈಪ್ ಮೂಲಕ ಹರಿಯುತ್ತವೆ. ಭಾರಿ ಮಳೆಯಾದಾಗ, ಸಂಸ್ಕರಿಸದ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಬದಲಾಗಿ ನದಿಗೆ ಹರಿಯುತ್ತಿತ್ತು. ಜತೆಗೆ, ೧೯ನೇ ಶತಮಾನದಲ್ಲಿ ಕಾರ್ಖಾನೆ ಮತ್ತು ಮಾನವ ತ್ಯಾಜ್ಯದ ಒಳಚರಂಡಿ ನೀರನ್ನು ಸೀನ್ ನದಿಗೆ ಹೆಚ್ಚಾಗಿ ಬಿಡಲಾಗುತ್ತಿತ್ತು. ಸಾಲದೆಂಬಂತೆ, ಆ ಶತಮಾನದ ದ್ವಿತೀಯಾರ್ಧದಲ್ಲಿ ಅಭಿವೃದ್ಧಿಪಡಿಸಲಾದ ಹೊಸ ಒಳಚರಂಡಿ ವ್ಯವಸ್ಥೆಯು ಈ ನದಿಯ ಆರೋಗ್ಯಕ್ಕೆ ಮತ್ತಷ್ಟು ಮಾರಕವಾಗಿ ಬ್ಯಾಕ್ಟೀರಿಯಾದಂಥ ಪರಾವಲಂಬಿ ಜೀವಿಗಳು ಹೆಚ್ಚಾಗತೊಡಗಿದವು. ನದಿಯು ಪಾಚಿಗಟ್ಟಿ, ನೀರಿನ ಮೇಲೆ ಬೆಳ್ಳನೆಯ ಕಲುಷಿತ ನೊರೆ ತೇಲಾಡತೊಡಗಿತು. ನೋಡನೋಡುತ್ತಿದ್ದಂತೆ ನದಿಯ ಬಣ್ಣವೇ ಬದಲಾಗಿ ಅಸಂಖ್ಯಾತ ಜಲಚರಗಳು, ಮೀನಿನ ವಿವಿಧ ಪ್ರಭೇದಗಳು ಅಸುನೀಗಿದವು.
ನದಿಯಲ್ಲಿ ಈಜುವುದಿರಲಿ, ಅದರ ಬಳಿ ಹೋಗುವುದೂ ದುಸ್ತರವಾಯಿತು. ಇದು ಸೀನ್ ನದಿಯ ಅಸಹನೀಯ ಫ್ಲ್ಯಾಷ್‌ಬ್ಯಾಕ್! ಇಂಥ ದುರ್ವಾಸನೆಯ ನದಿಯನ್ನು ಒಲಿಂಪಿಕ್ಸ್‌ನಂಥ
ಪ್ರತಿಷ್ಠಿತ ಕ್ರೀಡಾಸ್ಪರ್ಧೆಗೆಂದು ಶುದ್ಧೀಕರಿಸಿ ಕ್ರೀಡೆಗಳನ್ನು ಆಯೋಜಿಸುವುದು ಸುಲಭದ ತುತ್ತಾಗಿರಲಿಲ್ಲ. ಕಾರಣ ಪ್ಯಾರಿಸ್ ಸರಕಾರ ಮತ್ತು ಜನರ ಮುಂದಿದ್ದುದು ೭ ವರ್ಷಗಳು ಮಾತ್ರ. ಆದರೆ ಸಂಕಲ್ಪ ದೃಢವಾಗಿತ್ತು. ಆಸ್ಟರ್ಲಿಟ್ಜ್ ರೈಲು ನಿಲ್ದಾಣದ ಪಕ್ಕದಲ್ಲಿ ಹೆಚ್ಚುವರಿ ಮಳೆನೀರನ್ನು ಸಂಗ್ರಹಿಸುವ ಮತ್ತು ಸೀನ್ ನದಿಗೆ ಪ್ರವೇಶಿಸುವ ತ್ಯಾಜ್ಯನೀರನ್ನು ನಿಲ್ಲಿಸುವ
ಉದ್ದೇಶದಿಂದ ೫೦,೦೦೦ ಘನಮೀಟರ್‌ಗಳಷ್ಟು ದೈತ್ಯಗಾತ್ರದ ಭೂಗತ ತೊಟ್ಟಿಯನ್ನು ನಿರ್ಮಿಸಲಾಯಿತು. ಇದಕ್ಕೆ ೨೦ ಒಲಿಂಪಿಕ್ ಈಜುಕೊಳಗಳಿಗೆ ಸಮನಾದ ಕೊಳಕುನೀರನ್ನು
ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿತ್ತು. ಇಲ್ಲಿ ನೀರನ್ನು ಸಂಸ್ಕರಿಸಿದ ಬಳಿಕ ನದಿಗೆ ಬಿಡುವ ವ್ಯವಸ್ಥೆ ಮಾಡಲಾಯಿತು.
ಇದರೊಂದಿಗೆ ಒಳಚರಂಡಿ ಸಂಸ್ಕರಣೆಯ ಕೂಲಂಕಷ ಪರೀಕ್ಷೆಗೆ ೮.೮ ಕಿ.ಮೀ. ಉದ್ದದ ‘ಸೂಪರ್-ಚರಂಡಿ’ಯನ್ನೂ ನಿರ್ಮಿಸಲಾಯಿತು. ಕನಿಷ್ಠ ೧೦,೦೦೦ ಗ್ರಾಮೀಣ ಕುಟುಂಬಗಳು ಮತ್ತು
ಹೌಸ್‌ಬೋಟ್ ಮಾಲೀಕರು ಶೌಚಾಲಯದ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುವುದನ್ನು ನಿಲ್ಲಿಸಲು, ಅದನ್ನು ಒಳಚರಂಡಿ ವ್ಯವಸ್ಥೆಗೆ ಬಿಡುವಂತೆ ಉತ್ತೇಜಿಸಲು ಅವರಿಗೆ ಹಣಕಾಸಿನ ಪ್ರೋತ್ಸಾಹ ನೀಡಲಾಯಿತು ಮತ್ತು ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಲಾಯಿತು. ಇನ್ನೇನು ಒಲಿಂಪಿಕ್ಸ್ ದಿನ ಹತ್ತಿರ ಬರುತ್ತಿದೆ ಎನ್ನುವಾಗಲೇ ಸೀನ್ ನದಿ ಸಂಪೂರ್ಣ ಮಾಲಿನ್ಯ ಮುಕ್ತವಾಗಿ ಮರುಹುಟ್ಟು ಪಡೆಯಿತು. ಜತೆಗೆ ವಿವಿಧ ಕ್ರೀಡೆಗಳ ಆಯೋಜನೆಗೂ ಸಜ್ಜಾಯಿತು.
ಸ್ಥಿತಿಗತಿಯನ್ನು ಸ್ವತಃ ಪರೀಕ್ಷಿಸಲು ಇಚ್ಛಿಸಿದ ಪ್ಯಾರಿಸ್‌ನ ಮೇಯರ್, ಸೀನ್ ನದಿಯಲ್ಲಿ ಜುಲೈ ೧೭ರಂದು ೧೦೦ ಮೀ.ವರೆಗೆ ಈಜಿ, ನದಿಯು ಪರಿಶುದ್ಧವಾಗಿದೆ ಎಂದು ಸಾರಿದರು. ಮಾಲಿನ್ಯ ಮರೆಯಾಗಿದ್ದಕ್ಕೆ ನದಿಯಲ್ಲಿ ಈಗ ೩೫ಕ್ಕೂ ಹೆಚ್ಚು ಮೀನಿನ ಪ್ರಭೇದಗಳು ಕಂಡುಬಂದಿವೆ. ಇದು ಪ್ಯಾರಿಸ್ ಸರಕಾರ ಮತ್ತು ಜನರ ಪರಿಶ್ರಮಕ್ಕೆ ಸಿಕ್ಕ ಫಲವೆಂದರೆ ಅತಿಶಯೋಕ್ತಿಯಲ್ಲ. ಈ ಯೋಜನೆಗಾಗಿ ಬರೋಬ್ಬರಿ ೧೨೪ ಸಾವಿರ ಕೋಟಿ ರುಪಾಯಿಗಳನ್ನು ವಿನಿಯೋಗಿಸಲಾಯಿತು ಎಂಬುದು ಗಮನಾರ್ಹ.
ಒಲಿಂಪಿಕ್ಸ್‌ನ ಉದ್ಘಾಟನೆಯನ್ನು ಕ್ರೀಡಾಂಗಣದಲ್ಲಿ ನಡೆಸುವುದು ವಾಡಿಕೆ. ಆದರೆ ಈ ಬಾರಿ ಸೀನ್ ನದಿಯಲ್ಲಿ ಕ್ರೀಡಾಪಟುಗಳು ವಿಹರಿಸುವುದಕ್ಕೆ ಅನುವು ಮಾಡಿಕೊಡುವ ಮೂಲಕ ಒಲಿಂಪಿಕ್ಸ್‌ಗೆ ಚಾಲನೆ ನೀಡಲಾಯಿತು. ಒಂದು ಶತಮಾನ ಕಾಲ ಹದಗೆಟ್ಟಿದ್ದ ಸೀನ್ ನದಿಯಲ್ಲಿ, ೨೦೬ ದೇಶಗಳ ಸುಮಾರು ೬,೮೦೦ ಕ್ರೀಡಾಪಟುಗಳು ನೂರಾರು ದೋಣಿಗಳನ್ನೇರಿ ತಮ್ಮ ದೇಶದ ಬಾವುಟಗಳನ್ನು ಹಾರಿಸುತ್ತಾ ವಿಹರಿಸಿದ ಅಮೋಘ ದೃಶ್ಯವನ್ನು ೩ ಲಕ್ಷಕ್ಕೂ ಹೆಚ್ಚು ಮಂದಿ ಸೇತುವೆಯ ಮೇಲಿನಿಂದ ಹಾಗೂ ನಗರದ ತುಂಬೆಲ್ಲಾ ನಿಂತು ಕಣ್ತುಂಬಿಕೊಂಡಿದ್ದು ಅನುಪಮ ಗಳಿಗೆಯೆನ್ನಬೇಕು.
ನದಿಯೊಂದನ್ನು ಶುಚಿಗೊಳಿಸುವುದು ಸುಲಭದ ಕೆಲಸವಲ್ಲ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬರುವ ವಿವಿಧ ದೇಶಗಳ ಕ್ರೀಡಾಪಟುಗಳಿಗೆಂದೋ ಅಥವಾ ವೀಕ್ಷಣೆಗೆ ಬರುವ ಕ್ರೀಡಾಪ್ರೇಮಿ ಗಳಿಗೆಂದೋ ಪ್ಯಾರಿಸ್‌ನಲ್ಲಿ ಹೀಗೆ ಸೀನ್ ನದಿಯನ್ನು ಸ್ವಚ್ಛಗೊಳಿಸಲಿಲ್ಲ; ಬದಲಾಗಿ, ನದಿಗಿರುವ ಮಹತ್ವವನ್ನು ಹಾಗೂ ಅದು ಜನಜೀವನದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಅರಿತು ಮರುಜೀವ ನೀಡಲಾಯಿತು. ನದಿಯ ಶುದ್ಧೀಕರಣದ ನೆಪದಲ್ಲಿ ಪ್ಯಾರಿಸ್ ಸರಕಾರವು ಯಾವುದೇ ಭಾವನಾತ್ಮಕ ರಾಜಕೀಯದ ನಾಟಕವಾಡಲಿಲ್ಲ. ಸರಕಾರದೊಂದಿಗೆ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಿ ಸಮಾನ ಮನಸ್ಸಿನಿಂದ ಪಣತೊಟ್ಟು ದುಡಿದರು ಎಂಬುದಿಲ್ಲಿ ಉಲ್ಲೇಖನೀಯ. ಸೀನ್ ನದಿಯ ಈಗಿನ ವೈಭವವನ್ನು ಕಣ್ತುಂಬಿಕೊಳ್ಳಲು ಮತ್ತು ಈ ಸಾಧನೆಯ ಹಿಂದಿರುವ ಪರಿಶ್ರಮವನ್ನು ಅರಿಯಲು ಬಹುತೇಕ ದೇಶಗಳು ಅಧ್ಯಯನ ತಂಡವನ್ನು ಪ್ಯಾರಿಸ್‌ಗೆ ಕಳಿಸುತ್ತಿರುವುದು ಈ ಮಾತಿಗೆ ಪುಷ್ಟಿನೀಡುತ್ತದೆ.
ಭಾರತವು ಸಹ ಸಾಕಷ್ಟು ಅಂತಾರಾಷ್ಟ್ರೀಯ ಸಮಾವೇಶಗಳು, ಕ್ರೀಡೆಗಳ ಆತಿಥ್ಯವನ್ನು ವಹಿಸಿದೆ. ಆದರೆ ನಮ್ಮಲ್ಲಿನ ನದಿಯಿರಲಿ, ಯಾವ ಬೀದಿ-ರಸ್ತೆಗಳೂ ಶಾಶ್ವತವಾಗಿ
ಶುಚಿಯಾಗಿಲ್ಲ. ಉದಾಹರಣೆಗೆ, ಭಾರತದಲ್ಲಿ ೨೦೧೦ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ದೆಹಲಿಯ ಸೌಂದರ್ಯವನ್ನು ಹೆಚ್ಚಿಸಲು ಬರೋಬ್ಬರಿ ೭೦,೬೦೮ ಕೋಟಿ
ರುಪಾಯಿಗಳನ್ನು ಖರ್ಚುಮಾಡಲಾಯಿತು. ಇದು ಆ ಕ್ರೀಡಾಕೂಟದ ಅಂದಾಜು ಮೂಲವೆಚ್ಚಕ್ಕಿಂತ ೧೧೪ ಪಟ್ಟು ಹೆಚ್ಚು ಮೊತ್ತವಾಗಿತ್ತು ಹಾಗೂ ಪ್ರತಿವರ್ಷ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ಗೆ ಸರಕಾರವು ಮಾಡುವ ವೆಚ್ಚದ ನಾಲ್ಕು ಪಟ್ಟು ಹೆಚ್ಚಿನ ಮೊತ್ತವಾಗಿತ್ತು. ಆದರೆ ಕ್ರೀಡಾಕೂಟದ ಬಳಿಕ ಮತ್ತದೇ ಕೊಳಕು, ಗಲೀಜು!
ಕೇವಲ ವಿದೇಶಿ ಗಣ್ಯರು ಬರುವ ದಾರಿಯುದ್ದಕ್ಕೂ ರತ್ನಗಂಬಳಿಯನ್ನು ಹಾಸುವ, ನಮ್ಮಲ್ಲಿರುವ ಕೊಳಕು, ಬಡತನವನ್ನು ಮರೆಮಾಚಲು ಜಗಮಗಿಸುವ ವರ್ಣರಂಜಿತ ದೀಪಗಳಿಂದ, ಕಾರಂಜಿಗಳಿಂದ ರಸ್ತೆಗಳನ್ನು ಅಲಂಕರಿಸುವ, ಕೊಳೆಗೇರಿಗಳ ಸುತ್ತಲೂ ಹಸಿರು ಪರದೆಗಳನ್ನು ಕಟ್ಟುವ, ರಸ್ತೆಗಳ ಪಕ್ಕ ಬಿದ್ದಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡುವ ನಾಟಕಗಳು
ನಡೆಯುತ್ತವೆ. ‘ನಮಾಮಿ ಗಂಗೆ’ ಯೋಜನೆ ಶುರುವಾಗಿ ೧೦ ವರ್ಷ ಕಳೆದು, ಕೋಟ್ಯಂತರ ಹಣ ಖರ್ಚಾಗಿದ್ದರೂ ಗಂಗೆಯ ಮಾಲಿನ್ಯ ನಿಂತಿಲ್ಲ. ಇದರಲ್ಲಿ ಜನರ ಪಾಲೂ ಇದೆ. ಹೀಗೆ ಮಾಡುವುದರಿಂದ ಹಣವನ್ನಷ್ಟೇ ಪೋಲುಮಾಡುತ್ತೇವೆಯೇ ಹೊರತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಿಲ್ಲ.
ನಾವು ನದಿಗಳನ್ನು ದೇವತೆಗಳಿಗೆ ಹೋಲಿಸುತ್ತೇವೆ, ಧಾರ್ಮಿಕ ಭಾವನೆಯಿಂದ ಪೂಜಿಸುತ್ತೇವೆ. ಆದರೆ, ನದಿಯನ್ನು ಸ್ವಚ್ಛಮಾಡುವ ಗೋಜಿಗೆ ಹೋಗುವವರು ನಮ್ಮಲ್ಲಿ ವಿರಳ. ನದಿಯನ್ನು ಮಲಿನಗೊಳಿಸುವಲ್ಲಿ ನಾವು ಮುಂದು. ನಮ್ಮಲ್ಲಿ ನದಿಗಳ ಹೆಸರಿನಲ್ಲಿ ನಿರಂತರವಾಗಿ ರಾಜಕೀಯ ನಾಟಕಗಳು ನಡೆಯುತ್ತವೆಯೇ ಹೊರತು, ಅವನ್ನು ಸ್ವಚ್ಛಗೊಳಿಸುವ ದೃಢಸಂಕಲ್ಪ ಹೊಮ್ಮುವುದಿಲ್ಲ. ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ನೆಪದಲ್ಲಿ ಸೀನ್ ನದಿಯ ಮಾಲಿನ್ಯವನ್ನು ಕಿತ್ತೊಗೆದು ಮರುಹುಟ್ಟು ನೀಡಿದ ಘಟನೆ ನಮಗೆ ಮೇಲ್ಪಂಕ್ತಿಯಾಗಲಿ. ಜಾತ್ರೆ, ಹಬ್ಬ, ರಾಷ್ಟ್ರೀಯ ದಿನಾಚರಣೆಯ ನೆಪದಲ್ಲಿ ನಮ್ಮೂರ ಕೆರೆ, ನದಿಗಳ ಮಾಲಿನ್ಯವನ್ನು ತೊಡೆದು ಅವುಗಳಿಗೆ ಮರುಹುಟ್ಟು ನೀಡಲು ಇನ್ನಾದರೂ ಕಟಿಬದ್ಧರಾಗೋಣ.
(ಲೇಖಕರು ಶಿಕ್ಷಕರು)