ಸಂಸ್ಮರಣೆ
ಶ್ರೀನಿವಾಸ ರಾಘವೇಂದ್ರ
ತಮ್ಮ ಜೀವಿತಾವಧಿಯುದ್ದಕ್ಕೂ, ಶೃಂಗೇರಿಯ ಶ್ರೀ ಶಾರದಾ ಪೀಠ ಸೇರಿದಂತೆ ಎಲ್ಲ ಮಠದ ಪೀಠಾಧಿಪತಿ ಗಳೊಂದಿಗೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡಿದ್ದ ಶ್ರೀ ವಿದ್ಯಾಪ್ರಸನ್ನರು ವಿವಾದಗಳಿಂದ ದೂರ ವಿರುತ್ತಿದ್ದರು, ನ್ಯಾಯಾಲಯದ ಮೆಟ್ಟಿಲನ್ನು ಎಂದಿಗೂ ಹತ್ತಲಿಲ್ಲ. ಆದರೆ ಅವರ ಕಾಲಘಟ್ಟದಲ್ಲಿ ಕೆಲವೊಂದು ಮಠಗಳ ನಡುವೆ ನಾನಾ ಕಾರಣಗಳಿಗಾಗಿ ವೈಮನಸ್ಯದ ಕಿಡಿ ಹೊತ್ತಿಕೊಂಡಿತು.
ಮಠ’ ಮತ್ತು ‘ಮತ’ಗಳ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದ, ಬ್ರಾಹ್ಮಣರ (ಮೊದಲಿಗೆ ಮಾಧ್ವರ) ಐಕಮತ್ಯದ ಸಹಬಾಳ್ವೆಗಾಗಿ ಇಂದಿನ ಸಮಾಜಕ್ಕೆ ಹೇಳಿಮಾಡಿಸಿದಂತಿದ್ದ ಸ್ವಾಮಿಗಳೊಬ್ಬರು, ಕಳೆದ ಶತಮಾನದ ಉತ್ತರಾರ್ಧದ ಮಧ್ಯದಲ್ಲಿ ನಮ್ಮೊಂದಿಗಿದ್ದರು! ಅವರು ಬಂದಿದ್ದ ಪೀಠ ಅಸಾಮಾನ್ಯ.
ವಿಜಯನಗರದ ಅರಸು ಕೃಷ್ಣದೇವರಾಯನ ಸಿಂಹಾಸನದಲ್ಲಿ, ಅವನ ಅಪೇಕ್ಷೆಯ ಮೇರೆಗೆ ಕೆಲಕಾಲ ಕುಳಿತು ಅವನಿಂದ ಸುವರ್ಣಾಭಿಷೇಕ ಗೌರವಕ್ಕೆ ಪಾತ್ರರಾಗಿದ್ದಲ್ಲದೆ, ಕಾಲಕಾಲಕ್ಕೆ ಸನಾತನಧರ್ಮ ರಕ್ಷಣೆ ನಿಮಿತ್ತ ಸಲಹೆ ನೀಡುತ್ತಾ ಆರು ಮಂದಿ ಅರಸರಿಗೆ ರಾಜಗುರುಗಳಾಗಿದ್ದವರ ಪೀಠವದು.
ಹಂಪೆಯಲ್ಲಿ ನೆಲೆಸುವುದಕ್ಕೆ ಮುನ್ನ ತಿರುಪತಿಯ ಶ್ರೀನಿವಾಸನ ಪೂಜಾ ಕೈಂಕರ್ಯವನ್ನು 12 ವರ್ಷ ನಡೆಸಿದವರು ಶ್ರೀ ವ್ಯಾಸರಾಜರು. ಶ್ರೀ ಮಧ್ವಾಚಾರ್ಯರ ನಂತರ ರಾಜೇಂದ್ರ ತೀರ್ಥರ ಪರಂಪರೆಯಲ್ಲಿ ಪೀಠಾಧಿಪತಿಯಾಗಿ ಬಂದವರು ಶ್ರೀ ವಿದ್ಯಾಪ್ರಸನ್ನ ತೀರ್ಥರು (1935ರಿಂದ 1969ರವರೆಗೆ). ಮೈಸೂರು ಜಿಲ್ಲೆಯ ಸೋಸಲೆ ಎಂಬ ಕುಗ್ರಾಮವನ್ನು ಕಾರ್ಯಕ್ಷೇತ್ರ ಮಾಡಿಕೊಂಡು, ಎಲೆಮರೆಯ ಕಾಯಂತಿದ್ದು ಸಾಹಿತ್ಯಕೃಷಿ ಮಾಡಿದವರು.
300ಕ್ಕೂ ಹೆಚ್ಚು ದೇವರನಾಮಗಳನ್ನೂ, ಸಾಮಾಜಿಕ-ಪೌರಾಣಿಕ ನಾಟಕಗಳನ್ನೂ ರಚಿಸಿದವರು. ವಿದ್ಯಾಪ್ರಸನ್ನರ ಪೂರ್ವಾಶ್ರಮದ ಹೆಸರು ವೆಂಕಟನರಸಿಂಹ. ಖ್ಯಾತಿವೆತ್ತ ವಿದ್ವಾಂಸರಾಗಿದ್ದ ಅವರ ತಂದೆ ಅಹೋಬಲಾಚಾರ್ಯರು ‘ನಾಮಗಿರೀಶ’ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಮಗನಿಗೆ ಕಾವ್ಯ, ವ್ಯಾಕರಣ, ತರ್ಕಶಿಕ್ಷಣವನ್ನು ಅವರೇ ನೀಡಿದರು.
ಅಹೋಬಲಾಚಾರ್ಯರು ವ್ಯಾಸರಾಜ ಸಂಸ್ಥಾನಕ್ಕೆ ಸ್ವಾಮಿಗಳಾಗಬೇಕಾಗಿ ಬಂತು. ಆಗ ಅವರ ಹೆಸರು ‘ವಿದ್ಯಾ ರತ್ನಾಕರ ತೀರ್ಥರು’ ಎಂದಾಯಿತು. ಒಂದು ಕಾಲಕ್ಕೆ ವೈದಿಕ ಮನೆತನಗಳಲ್ಲಿ ಇಂಗ್ಲಿಷ್ ಶಬ್ದ ಕೇಳಿದರೆ ಸ್ನಾನ ಮಾಡಿ ಶುದ್ಧರಾಗುವ ಪರಿಪಾಠವಿತ್ತು. ಆದರೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ವೈದಿಕರ ಮನೆಯ
ಹಿಂಬಾಗಿಲಿನಿಂದ ಇಂಗ್ಲಿಷ್ ಪ್ರವೇಶ ಆಗಿಬಿಡುತ್ತಿತ್ತು!
ವೆಂಕಟನರಸಿಂಹರ ಮನೆಯಲ್ಲೂ ಅದೇ ಪರಿಸ್ಥಿತಿ. ತಂದೆಗೋ, ಮಗನಿಗೆ ಪಾರಂಪರಿಕ ವೇದವಿದ್ಯೆ ಕೊಡಿಸುವ ಇಚ್ಛೆ, ಆದರೆ ತಾಯಿಗೆ ಇಂಗ್ಲಿಷ್ ವ್ಯಾಮೋಹ! ಸ್ವಾಮಿಗಳಿಗೆ (ಅಂದರೆ ಪೂರ್ವಾಶ್ರಮದ ತಂದೆಗೆ) ತಿಳಿಯದಂತೆ ವೆಂಕಟನರಸಿಂಹ ನನ್ನು ಗುಟ್ಟಾಗಿ ಶಾಲೆಗೆ ಸೇರಿಸಿದ್ದಾಯಿತು. ಆದರೆ ಆತ ಅಪ್ಪನ ಭಯದಿಂದಾಗಿ ಶಾಲೆಗೆ ಹೋಗಲಿಲ್ಲ. ಹೀಗಾಗಿ, ಸಂಬಂಧಿಯಾಗಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣರಾಯರು ವೆಂಕಟನರಸಿಂಹನಿಗೆ ಮನೆಯಲ್ಲೇ ಇಂಗ್ಲಿಷ್ ಇತ್ಯಾದಿಯನ್ನು ಗೋಪ್ಯವಾಗಿ ಬೋಽಸಿದರು. ಮುಂದೊಂದು ದಿನ ಕೃಷ್ಣರಾಯರಿಂದ ಒಂದು ಎಡವಟ್ಟಾಯಿತು. ತಮ್ಮ ತರಬೇತಿಯಿಂದಾಗಿ ಶಿಷ್ಯನು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತಾಡುವುದು ಶ್ರೀಗಳಿಗೆ ಗೊತ್ತಾದರೆ ಸಂತೋಷಪಟ್ಟಾರು ಎಂದು ಭಾವಿಸಿ, “ವೆಂಕಟನರಸಿಂಹ ಷೇಕ್ಸ್‌ಪಿಯರ್ ನಾಟಕದ
ಒಂದೆರಡು ದೃಶ್ಯವನ್ನು ಅಭಿನಯಿಸುತ್ತಾನೆ” ಎಂದು ತಿಳಿಸಿ ಶ್ರೀಗಳ ಅಪ್ಪಣೆ ಪಡೆದುಕೊಂಡರು.
ಪೂರ್ವಾಶ್ರಮದ ಮಗ ತಮ್ಮೆದುರು ಅಭಿನಯಪೂರ್ವಕವಾಗಿ ಇಂಗ್ಲಿಷ್ ಮಾತಾಡಿದ್ದನ್ನು ಕಂಡು ಕಿಡಿಕಿಡಿಯಾದ ಶ್ರೀಗಳಿಗೆ ಆತ ‘ಅಸಾಂಪ್ರದಾಯಿಕ ಶಿಕ್ಷಣ’ ಪಡೆದಿರುವುದು ಗೊತ್ತಾಯಿತು. ಆದರೆ ಅವರು ಏನೂ ಮಾಡುವಂತಿರ ಲಿಲ್ಲ. ಕೆಲ ಕಾಲದಲ್ಲಿ ವಿದ್ಯಾರತ್ನಾಕರ ತೀರ್ಥರು ದೇಹಾಲಸ್ಯದಿಂದಾಗಿ ಹರಿಪಾದ ಸೇರಿದರು. ಶಿಕ್ಷಣದ ಸಲುವಾಗಿ ತಾಯಿ ಮಗನನ್ನು ಮೈಸೂರಿಗೆ ಕರೆತಂದರು. ತೀಕ್ಷ್ಣಮತಿ ವೆಂಕಟನರಸಿಂಹ ಲೋಯರ್ ಸೆಕೆಂಡರಿ ಮತ್ತು ಮೆಟ್ರಿಕ್ಯುಲೇಷನ್‌ನಲ್ಲಿ ಉತ್ತೀರ್ಣನಾದ.
ತರುವಾಯದಲ್ಲಿ ಬೆಂಗಳೂರಿನಲ್ಲಿ ಬಿ.ಎ ಪದವಿ, ಮದ್ರಾಸಿನಲ್ಲಿ ಬಿ.ಎಲ್ ಪದವಿ ಪಡೆದು ಮೈಸೂರಿಗೆ ಮರಳಿ ವಕೀಲಿಕೆ ಆರಂಭಿಸಿದ ವೆಂಕಟನರಸಿಂಹಾಚಾರ್ಯರು, ಕನ್ನಡ- ಇಂಗ್ಲಿಷ್‌ನಲ್ಲಿದ್ದ ಪ್ರಭುತ್ವದಿಂದಾಗಿ ಜನಪ್ರಿಯ ರಾದರು. ವಕೀಲಿ ವೃತ್ತಿ ಯಶಸ್ವಿಯಾಯಿತು. ಆಗ ಶ್ರೀ ವಿದ್ಯಾವಾರಿಧಿ ತೀರ್ಥರು ಪೀಠವನ್ನು ಅಲಂಕರಿಸಿದ್ದರು. ವೆಂಕಟನರಸಿಂಹಾಚಾರ್ಯರು ವೃತ್ತಿಯೊಂದಿಗೆ ಮಠದ ಆಡಳಿತ ಮತ್ತು ಕಾನೂನು ವ್ಯವಹಾರಗಳನ್ನು ನೋಡಿ ಕೊಳ್ಳುತ್ತಿದ್ದರು, ಮಠದ ವತಿಯಿಂದಲೂ ಅವರಿಗೆ ಶಾಸಪಾಠ ನಡೆಯುತ್ತಿತ್ತು.
1935ರಲ್ಲಿ ಶ್ರೀಗಳಿಗೆ ದೇಹಾಲಸ್ಯವಾದಾಗ ವೆಂಕಟನರಸಿಂಹಾಚಾರ್ಯರನ್ನು ಉತ್ತರಾಧಿಕಾರಿಯನ್ನಾಗಿಸುವ ಇಚ್ಛೆ ವ್ಯಕ್ತಪಡಿಸಿದರು. ಅಷ್ಟೊತ್ತಿಗೆ ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದ ವೆಂಕಟನರಸಿಂಹಾಚಾರ್ಯರು ಸನ್ಯಾಸಕ್ಕೆ ಒಪ್ಪಲಾಗದೆ ಮಾನಸಿಕ ತೊಳಲಾಟಕ್ಕೆ ಸಿಲುಕಿದರು. ಕೊನೆಗೆ ಗೆದ್ದಿದ್ದು ಕರ್ತವ್ಯಪ್ರಜ್ಞೆಯೇ. ಗುರುವಿನ ಆಶಯದಂತೆ ‘ಕಪ್ಪುಕೋಟು’ ಕಳಚಿ ‘ಕಾವಿವಸ’ ಧರಿಸಿ ಶ್ರೀ ವಿದ್ಯಾಪ್ರಸನ್ನ ತೀರ್ಥರೆಂದು ಪಟ್ಟಾಭಿಷಿಕ್ತರಾದರು. ಮುಂದೆ ಶ್ರೀ ವಿದ್ಯಾವಾರಿಧಿಗಳು ದೇಹತ್ಯಾಗ ಮಾಡಿದರು. ಆನುವಂಶಿಕವಾಗಿ ತಂದೆಯಿಂದ ಕವಿತ್ವ ಶಕ್ತಿಯನ್ನು ಪಡೆದಿದ್ದ ವಿದ್ಯಾಪ್ರಸನ್ನರು ದೇವರನಾಮಗಳ ರಚನೆಗೆ ತಮ್ಮನ್ನು ಅರ್ಪಿಸಿಕೊಂಡರು.
“ಅವರಿಗೆ ಸಾಹಿತ್ಯ ರಚನೆಗೆ ಸಮಯ ಎಲ್ಲಿಂದ ಸಿಗುತ್ತಿತ್ತು?” ಎಂದು ಈಗಿನ ಕೆಲವರು ಅನುಮಾನಿಸಬಹುದು. ವಾಸ್ತವವೆಂದರೆ, ಮಠಕ್ಕೆ ಸೇರಿದ್ದ ಹೊಲಗದ್ದೆಗಳಲ್ಲಿ ಬೆಳೆದ ದವಸ-ಧಾನ್ಯಗಳನ್ನು ರೈತರು ಪ್ರಾಮಾಣಿಕವಾಗಿ
ಮಠಕ್ಕೆ ತಂದೊಪ್ಪಿಸುತ್ತಿದ್ದ ಕಾಲ ಅದಾಗಿತ್ತು; ಹೀಗಾಗಿ ಸ್ವಾಮಿಗಳಿಗೆ ಊರೂರು ಸಂಚಾರ ಅನಿವಾರ್ಯ ವಾಗಿರಲಿಲ್ಲ.
ಮುದ್ರಾಧಾರಣೆ, ತೀರ್ಥ-ಫಲಮಂತ್ರಾಕ್ಷತೆಗಾಗಿ ಆಗಮಿಸ ಬೇಕೆಂಬ ಒತ್ತಡವೂ ಭಕ್ತರಿಂದ ಬರುತ್ತಿರಲಿಲ್ಲ. ಹೀಗಾಗಿ
ಪ್ರಶಾಂತ ವಾತಾವರಣದಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ವಿದ್ಯಾಪ್ರಸನ್ನರು 300ಕ್ಕೂ ಹೆಚ್ಚು ದೇವರ ನಾಮಗಳನ್ನು, ಒಂದಿಷ್ಟು ನಾಟಕಗಳನ್ನೂ ರಚಿಸಿದರು. ದ್ವಾಪರದಲ್ಲಿ ಜರಾಸಂಧಾದಿ ದುಷ್ಟರನ್ನು ಶ್ರೀಕೃಷ್ಣನು ದಮನಿಸಿ, ಅವರು ದೋಚಿದ್ದ ಸಂಪತ್ತನ್ನು ಮರುವಶ ಮಾಡಿಕೊಂಡು ದ್ವಾರಕೆಯನ್ನು ತುಂಬಿಸಿದ್ದನ್ನು ಪುರಾಣಗಳು ಹೇಳುತ್ತವೆ. ಅಂತೆಯೇ, ಮಠದಿಂದ ಕೈತಪ್ಪಿಹೋಗಿದ್ದ ನೀರಾವರಿ ಆಧರಿತ ಜಮೀನುಗಳು ಶ್ರೀಕೃಷ್ಣೋಪಾಸಕರಾಗಿದ್ದ ಶ್ರೀಗಳ ಮುಖಪ್ರಸನ್ನತೆಯಿಂದಾಗಿ ಮಠಕ್ಕೆ ವಾಪಸು ಬಂದವು.
ಅನಿವಾರ್ಯವಿದ್ದಲ್ಲಿ ಮಾತ್ರವೇ ಪರವೂರಿಗೆ ಸಂಚಾರಕ್ಕೆ ತೆರಳುತ್ತಿದ್ದ ವಿದ್ಯಾಪ್ರಸನ್ನರು, ಅದಿಲ್ಲದಿದ್ದಲ್ಲಿ ಸೋಸಲೆ
ಗ್ರಾಮದ ಮಠದಲ್ಲೇ ಇರುತ್ತಿದ್ದರು. ತಾವಿರುವಷ್ಟು ಕಾಲವೂ ಊರ ಜನರಿಗೆ ಅನ್ನದಾನ ಮಾಡಿದ ಕೀರ್ತಿ ಶ್ರೀಗಳದ್ದು, ಹೀಗಾಗಿ ಊರವರಿಗೆ ಒಲೆಹಚ್ಚುವ ಪ್ರಸಂಗ ಬರುತ್ತಿರಲಿಲ್ಲ. 1954ರಲ್ಲಿ ‘ಚಂದ್ರಿಕಾ ಗುರುಕುಲ’ವನ್ನು ಸ್ಥಾಪಿಸಿದ ಶ್ರೀಗಳು, ವೈದಿಕ ವಿದ್ಯೆಯ ಜತೆಗೆ ವಿಜ್ಞಾನ-ಗಣಿತ-ಇಂಗ್ಲಿಷ್‌ನಂಥ ಲೌಕಿಕ ವಿದ್ಯೆಗಳನ್ನೂ ವಿದ್ಯಾರ್ಥಿ ಗಳಿಗೆ ಶಾಲಾ ಶಿಕ್ಷಕರಂತೆ ಬೋಧಿಸಿದರು. ಶ್ರೀಮಠದಲ್ಲಿ ಗ್ರಂಥಭಂಡಾರ ಸ್ಥಾಪಿಸಿ ಪ್ರಾಚೀನ ಹಸ್ತಪ್ರತಿಗಳನ್ನು ಸಂಗ್ರಹಿಸಿದರು, ‘ಭಾಷ್ಯ ದೀಪಿಕಾ’ ಗ್ರಂಥವನ್ನು ಪ್ರಕಟಿಸಿದರು, ಚೌಕಸಂದ್ರದಲ್ಲಿ ವಿದ್ಯಾರ್ಥಿ ನಿಲಯವನ್ನು ತೆರೆದರು.
ಬ್ರಾಹ್ಮಣರನ್ನು ಸಂಘಟಿಸುವ ಮಹದಾಶಯವನ್ನು ಹೊಂದಿದ್ದ ಶ್ರೀಗಳ ಕನ್ನಡ-ಇಂಗ್ಲಿಷ್ ಉಪನ್ಯಾಸಗಳನ್ನು
ಕೇಳಿದ್ದ ಉಡುಪಿಯ ಶ್ರೀ ಪೇಜಾವರ ಮಠದ ಅಂದಿನ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ‘ಅಖಿಲ ಭಾರತ
ಮಾಧ್ವ ಮಹಾಮಂಡಳ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅದರ ಸಂರಕ್ಷಕರಾಗುವಂತೆ ವಿದ್ಯಾಪ್ರಸನ್ನರನ್ನು ಒಪ್ಪಿಸಿ ಕಾರ್ಯಪ್ರವೃತ್ತರಾದರು. ತತ್ತ್ವಜ್ಞಾನ ಸಮ್ಮೇಳನದಲ್ಲಿ ಅವರು ಕೊಟ್ಟ ಕರೆ ಈಗಲೂ ಸ್ಪೂರ್ತಿಯ ಸೆಲೆ ಯೆನಿಸಿದೆ. “ಮಾಧ್ವ ಸಮಾಜದಲ್ಲಿ ಅನೇಕ ಮಠಮಾನ್ಯಗಳಿದ್ದರೂ ‘ಉತ್ತರಾದಿ’, ‘ವ್ಯಾಸರಾಜ’ ಮತ್ತು ‘ರಾಘವೇಂದ್ರ’ ಎಂಬ ಘಟ್ಟದ ಮೇಲಿನ ಮೂರು ಮಠಗಳು ಮತ್ತು ಘಟ್ಟದ ಕೆಳಗಿನ ಉಡುಪಿಯ ಎಂಟು ಮಠಗಳು ಸೇರಿ ಒಟ್ಟು ಹನ್ನೊಂದು ‘ಅಸ್ತಿತ್ವ’ಗಳಿವೆ.
ಈ ‘ಹನ್ನೊಂದು’ ಒಂದು ಕ್ರಿಕೆಟ್ ತಂಡವಿದ್ದಂತೆ, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಸನಾತನ ಧರ್ಮದ
ವಿರೋಧಿಗಳ ವಿರುದ್ಧ ಜಯಗಳಿಸಬೇಕು; ಈ ಜಯವು ಇಡೀ ತಂಡಕ್ಕೆ ಸೇರಿದ್ದು, ವೈಯಕ್ತಿಕವಾದದ್ದಲ್ಲ” ಎಂದು ಒಂದು ಸಂದರ್ಭದಲ್ಲಿ ಶ್ರೀ ವಿದ್ಯಾಪ್ರಸನ್ನರು ಹೇಳಿದ್ದನ್ನು ಸಮಾಜದ ಹಿರಿಯರು ಇಂದಿಗೂ ನೆನೆಯುತ್ತಾರೆ.
ಶ್ರೀ ವಿದ್ಯಾಪ್ರಸನ್ನರು ತಮ್ಮ ಜೀವಿತಾವಽಯುದ್ದಕ್ಕೂ ಶೃಂಗೇರಿಯ ಶ್ರೀ ಶಾರದಾ ಪೀಠ ಸೇರಿದಂತೆ ಎಲ್ಲ ಮಠದ
ಪೀಠಾಧಿಪತಿಗಳೊಂದಿಗೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡಿದ್ದರು. ಅವರು ವಿವಾದಗಳಿಂದ ದೂರ ವಿರುತ್ತಿದ್ದರು, ನ್ಯಾಯಾಲಯದ ಮೆಟ್ಟಿಲನ್ನು ಎಂದಿಗೂ ಹತ್ತಲಿಲ್ಲ.
ಆದರೆ ಅವರ ಕಾಲಘಟ್ಟದಲ್ಲಿ ಕೆಲವೊಂದು ಮಠಗಳ ನಡುವೆ ನಾನಾ ಕಾರಣಗಳಿಗಾಗಿ ವೈಮನಸ್ಯದ ಕಿಡಿ ಹೊತ್ತಿಕೊಂಡಿತು. “ನಮ್ಮ ಮಠವೇ ಶ್ರೇಷ್ಠ, ಉಳಿದವು ನಿಕೃಷ್ಟ” ಎಂಬ ಭಾವನೆಯು ಮಠಗಳ ಶಿಷ್ಯರುಗಳಲ್ಲಿ ಬೆಳೆಯಲು ಶುರುವಾಯಿತು. ಇದನ್ನು ಹೀಗೇ ಬಿಟ್ಟರೆ ಮುಂದೆ ಶಮನಮಾಡುವುದು ದುಸ್ಸಾಧ್ಯ ಎಂದರಿತ ಶ್ರೀ ವಿದ್ಯಾಪ್ರಸನ್ನರು ಇಂಥ ಎಲ್ಲರನ್ನೂ ಮೈಸೂರಿನ ಒಂದು ಬಹಿರಂಗ ಸಭೆಯಲ್ಲಿ ಕೂರಿಸಿ ಸೌಹಾರ್ದ ಮೂಡಿಸಲು ಯತ್ನಿಸಿದರು. ಮಠದ ಪ್ರತಿಷ್ಠೆಗಳನ್ನು ಬದಿಗೆ ಸರಿಸಿ ಸೌಹಾರ್ದದಿಂದ ಬದುಕುವ ಸಲುವಾಗಿ ಕಳಕಳಿಯ
ದೇವರನಾಮವೊಂದನ್ನು ರಚಿಸಿ ಪ್ರಸಿದ್ಧಿಪಡಿಸಿದರು.
‘ಮಠ’ದ ಭಾವನೆಗಿಂತ ‘ಮತ’ದ ಭಾವನೆಗೆ ಬೆಲೆ ಕೊಡಬೇಕೆಂದು ಈ ಗೀತೆಯಲ್ಲಿ ಅವರು ಪ್ರತಿಪಾದಿಸಿದ್ದರು. ಈ ಗೀತೆಯನ್ನು ಕೇಳುತ್ತಿದ್ದರೆ, ದ್ವೇಷಾಗ್ನಿಯಿಂದ ಪ್ರಕ್ಷುಬ್ಧಗೊಂಡ ಮನಸ್ಸಿನ ಬಿಗುವು ಕಡಿಮೆಯಾಗಿ ಪ್ರಸನ್ನತೆಯತ್ತ ಅದು ಸಾಗುತ್ತದೆ. ಎಡೆಬಿಡದ ತಮ್ಮ ಸಮಾಜಮುಖಿ ಕಾರ್ಯಚಟುವಟಿಕೆಗ ಳಿಂದಾಗಿ ದೀರ್ಘಕಾಲ ಅಸ್ವಸ್ಥರಾಗಿದ್ದ ಶ್ರೀ ವಿದ್ಯಾಪ್ರಸನ್ನರು, ಶ್ರೀ ವಿದ್ಯಾಪಯೋನಿಧಿ ತೀರ್ಥರಿಗೆ ಆಶ್ರಮವನ್ನು ಹಸ್ತಾಂತರಿಸಿದರು.
“ಮಾಸಾನಾಂ ಮಾರ್ಗಶೀರ್ಷೋಸ್ಮಿ” ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿಕೊಂಡಿದ್ದಾನೆ; ಈ ಮಾಸದಲ್ಲಿ ತನ್ನ ಸಾನ್ನಿಧ್ಯವನ್ನು ಹೆಚ್ಚಾಗಿ ಇರಿಸಿದ್ದೇನೆ ಎಂದು ಹೇಳಿಕೊಂಡಿರುವ ಕೃಷ್ಣ ಅದನ್ನು ಜಗತ್ತಿಗೆ ತೋರಿಸಿ ಕೊಡಲೋ ಎಂಬಂತೆ ಮಾಗಶೀರ್ಷ ಹುಣ್ಣಿಮೆಯಂದು (1969ರ ಡಿಸೆಂಬರ್ 23ರಂದು), ತನ್ನನ್ನು 34 ವರ್ಷ ಅಖಂಡವಾಗಿ ಪೂಜಿಸಿದ ಶ್ರೀ ವಿದ್ಯಾಪ್ರಸನ್ನ ತೀರ್ಥರನ್ನು ತನ್ನ ಲೋಕಕ್ಕೆ ಕರೆಸಿಕೊಂಡ. ಆದರೆ, ಶಕಪುರುಷ ರೆನಿಸಿದ ಶ್ರೀ ವಿದ್ಯಾಪ್ರಸನ್ನರು ಈಗಲೂ ನಮ್ಮ ನಡುವೆಯೇ ಇದ್ದಾರೆ, ತಮ್ಮ ಕೃತಿಗಳನ್ನು ಹಾಡಿ ಸಂತೋಷಿಸುವ ಭಕ್ತಜನರ ಹೃದಯಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ.
(ಲೇಖಕರು ಹವ್ಯಾಸಿ ಬರಹಗಾರರು)#kannada news