Sunday, 22nd December 2024

Srivathsa Joshi Column: ಬಳ್ಳಿಯೇಕೆ ಮರವನ್ನು ಅಪ್ರದಕ್ಷಿಣಾಕಾರವಾಗಿ ಸುತ್ತುತ್ತದೆ ?

ತಿಳಿರು ತೋರಣ

ಶ್ರೀವತ್ಸ ಜೋಶಿ

ಸಾಮಾನ್ಯವಾಗಿ ಬಳ್ಳಿ ಮರವನ್ನು ತಬ್ಬಿಕೊಳ್ಳುವುದು, ಮರದ ಸುತ್ತ ಹಬ್ಬುವುದು, ಆಸರೆ ಪಡೆಯುವುದು ಅಂದಾಗೆಲ್ಲ ಹೆಣ್ಣು-ಗಂಡಿನ ಚಿತ್ರಣವೇ ಕಣ್ಮುಂದೆ ಬರುವುದು. ಅದರಲ್ಲೂ ಸಂಸ್ಕೃತ ಕವಿಗಳಿಗೆ ಕನ್ನಡ ಕವಿಗಳಿಗಿಂತಲೂ ಹೆಚ್ಚು ಅನುಕೂಲ, ಭಾಷೆಯಿಂದಾಗಿಯೇ. ಕನ್ನಡದಲ್ಲಿ ಮರವೂ ನಪುಂಸಕ ಲಿಂಗ, ಬಳ್ಳಿಯೂ ನಪುಂಸಕ ಲಿಂಗ. ‘ತರುವೂ ಲತೆಯೂ ಸೇರಿದ ಕಥೆಯೂ, ತನುವ ಬಳಸಿ ತೋಳಿನುಂಗುರ’ ಎಂದು ಹಾಡಬಹುದಾದರೂ ನಪುಂಸಕ ಲಿಂಗದಲ್ಲಿ ಚಿತ್ರಣ ಅಷ್ಟೊಂದು ಪರಿಣಾಮಕಾರಿ ಆಗುವುದಿಲ್ಲ.

‘ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮ ಪೇಕ್ಷತೇ| ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ||’ ಅಂತೊಂದು ಸುಭಾಷಿತವಿದೆ. ಇದರ ಮೊದಲ ಸಾಲು ಚಾಣಕ್ಯ ನೀತಿಯಲ್ಲೂ ಬರುತ್ತದೆ. ಭಾವಾರ್ಥ ಹೀಗಿದೆ: ಎಷ್ಟೇ ಅಮೂಲ್ಯವಾಗಿದ್ದರೂ ಮಾಣಿಕ್ಯಕ್ಕೆ ಹೆಚ್ಚಿನ ಶೋಭೆ ಬರುವುದು ಅದನ್ನು ಬಂಗಾರದೊಡನೆ ಜೋಡಿಸಿ
ಆಭರಣ ಮಾಡಿದಾಗಲೇ. ಅಂದರೆ ಮಾಣಿಕ್ಯಕ್ಕೆ ಚಿನ್ನದ ಆಶ್ರಯ ಬೇಕು.

ಅದೇ ರೀತಿಯಲ್ಲಿ ವಿದ್ವಾಂಸರಿಗೂ, ಹೆಣ್ಣಿಗೂ ಮತ್ತು ಬಳ್ಳಿಗೂ, ಇನ್ನೊಬ್ಬರ ಆಶ್ರಯ ಅಗತ್ಯ. ವಿದ್ವಾಂಸರಿಗೆ ರಾಜಾ
ಶ್ರಯ, ಹೆಣ್ಣಿಗೆ ಗಂಡಿನ ಆಶ್ರಯ, ಬಳ್ಳಿಗೆ ಮರದ ಆಶ್ರಯ- ಇವು ಲೋಕರೂಢಿ. ಅಪವಾದ ಇರುವುದಿಲ್ಲವೆಂದಲ್ಲ. ಈಗಿನ ಕಾಲದಲ್ಲಿ ಮಹಿಳೆ ಯಾರ ಹಂಗೂ ಇಲ್ಲದೇ ಸರ್ವಸ್ವತಂತ್ರಳಾಗಿ ಬದುಕಬಲ್ಲಳು ಎಂದು ಮಹಿಳಾವಾದಿಗಳು ಮೇಜು ಗುದ್ದುವುದು ಬೇಕಿಲ್ಲ. ಇಲ್ಲಿ ವಿಷಯ ಬಳ್ಳಿಯದು. ಅದನ್ನಷ್ಟೇ ಹಿಡಿದುಕೊಂಡು ಈ ವಿಚಾರಲಹರಿಯನ್ನು ವಿಸ್ತರಿಸೋಣ.

ಬಳ್ಳಿಯ ಬಳುಕು ಮತ್ತು ಬೆಡಗುಗಳಿಂದ ಬೆರಗಾಗದ ಕವಿಗಳಿರಲಿಕ್ಕಿಲ್ಲ ಪ್ರಪಂಚದ ಯಾವ ಭಾಷೆಯಲ್ಲೂ. ಬಳ್ಳಿಯು ಮರವನ್ನು ಆಶ್ರಯಿಸುವುದು, ಆಲಿಂಗಿಸುವುದು, ಆವರಿಸಿಕೊಳ್ಳುವುದು ಕವಿಗಳಿಗೆ ಸೃಷ್ಟಿಯ ಸುಂದರ ರೂಪಕವಾಗಿ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ‘ಅಂದು ನೀ ನನ್ನ ಅಪ್ಪಿಕೊಂಡಾಗ ಪ್ರಿಯೆ, ಮರದ ಸುತ್ತಲತೆ| ಭಯವಾಗುತ್ತದೆ ಇಂದು ನೋಡಿದರೆ ನಿನ್ನ ಸುತ್ತಳತೆ!’ ಎಂಬ ಡುಂಡಿರಾಜರ ಹಾಸ್ಯಚುಟುಕ ಸಹ ಅಷ್ಟೊಂದು ವರ್ಲ್ಡ್ ಫೇಮಸ್
ಆಗುವುದಕ್ಕೆ ಮರ-ಬಳ್ಳಿ ರೂಪಕವೇ ಕಾರಣ.

ಅದೇ ರೀತಿ ಪದವಿನೋದ ಬೆರೆಸಿದ ಇನ್ನೊಂದು, ಟಿಪಿಕಲ್ ಡುಂಡಿರಾಜ್ ಛಾಪು: ‘ಹುಲುಸಾಗಿ ಬೆಳೆದಿದೆ ಕರಿ ಮೆಣಸಿನ ಬಳ್ಳಿ ಅಡಿಕೆ ಮರಕ್ಕೆ ಹಬ್ಬಿ| ಮೆಣಸಿನ ಬಳ್ಳಿ ಮಡದಿ, ಅಡಿಕೆ ಮರ Hubby!’ ಹಾಸ್ಯ ರಸದಲ್ಲಷ್ಟೇ ಅಲ್ಲ, ಬಳ್ಳಿಯ ಹಬ್ಬು-ತಬ್ಬುವಿಕೆಗಳು ಕರುಣರಸದಲ್ಲೂ ಕಾಣಿಸಬಲ್ಲವು. ಹೆಣ್ಣು-ಗಂಡು ಅಂತಲೇ ಆಗಬೇಕೆಂದಿಲ್ಲ, ತಂದೆ-ಮಗನ ಸಂಬಂಧಕ್ಕೂ ಹೊಂದಬಲ್ಲವು.

‘ಬಡವರ ಬಂಧು’ ಚಿತ್ರದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ..’ ಗೀತೆಯಲ್ಲಿ ‘ಬಳ್ಳಿಯಂತೆ ತಬ್ಬಿ ನಿನ್ನ ಆಸರೆಯಲಿ ಬೆಳೆದೆನು… ನನ್ನ ತಾಯಿಯ ಪಾದದಾಣೆ ಬೇರೆ ಏನನು ಅರಿಯೆನು ನೀನೇ ನನ್ನ ದೇವನು…’ ಚರಣವನ್ನು ನೀವು ನೆನಪಿಸಿಕೊಳ್ಳಬೇಕು. ತೆರೆಯ ಮೇಲೆ ಸಂಪತ್ ಮತ್ತು ಡಾ.ರಾಜ್ ಅಭಿನಯಕ್ಕೆ, ಆರ್ದ್ರತೆ ಯಲ್ಲಿ ಅದ್ದಿದ ಅಣ್ಣಾವ್ರ ಗಾಯನಕ್ಕೆ ನಿಮ್ಮ ಕಣ್ಣುಗಳು ಮಂಜಾಗಬೇಕು.

ಆದರೂ ಸಾಮಾನ್ಯವಾಗಿ ಬಳ್ಳಿ ಮರವನ್ನು ತಬ್ಬಿಕೊಳ್ಳುವುದು, ಮರದ ಸುತ್ತ ಹಬ್ಬುವುದು, ಮರದ ಆಸರೆ ಪಡೆಯುವುದು… ಅಂದಾಗೆಲ್ಲ ಹೆಣ್ಣು-ಗಂಡಿನ ಚಿತ್ರಣವೇ ಕಣ್ಮುಂದೆ ಬರುವುದು. ಅದರಲ್ಲೂ ಸಂಸ್ಕೃತ ಕವಿಗಳಿಗೆ ಕನ್ನಡ ಕವಿಗಳಿಗಿಂತಲೂ ಹೆಚ್ಚು ಅನುಕೂಲ, ಭಾಷೆಯಿಂದಾಗಿಯೇ. ಕನ್ನಡದಲ್ಲಿ ಮರವೂ ನಪುಂಸಕ ಲಿಂಗ, ಬಳ್ಳಿಯೂ ನಪುಂಸಕ ಲಿಂಗ. ‘ತರುವೂಲತೆಯೂ ಸೇರಿದ ಕಥೆಯೂ… ತನುವ ಬಳಸಿ ತೋಳಿ ನುಂಗುರ…’ ಎಂದು ಹಾಡಬಹುದಾದರೂ ನಪುಂಸಕ ಲಿಂಗದಲ್ಲಿ ಚಿತ್ರಣ ಅಷ್ಟೊಂದು ಪರಿಣಾಮಕಾರಿ ಆಗುವುದಿಲ್ಲ.

ಸಂಸ್ಕೃತದಲ್ಲಾದರೆ ಹಾಗಲ್ಲ. ತರು, ವೃಕ್ಷ, ದ್ರುಮ, ಪಾದಪ, ಶಾಖಿನ್ ಮುಂತಾಗಿ ಮರ ಎಂಬರ್ಥದ ಪದಗಳೆಲ್ಲ ಪುಲ್ಲಿಂಗ. ಲತಾ, ವಲ್ಲೀ, ವ್ರತತಿ, ಗುಲ್ಮಿನೀ ಮುಂತಾಗಿ ಬಳ್ಳಿ ಎಂಬರ್ಥದ ಪದಗಳೆಲ್ಲ ಸೀಲಿಂಗ. ಹಾಗಿರುವಾಗ ವ್ಯಾಸ-ಭಾಸ-ಕಾಳಿದಾಸ ಆದಿಯಾಗಿ ಸಂಸ್ಕೃತದ ಕವಿವರೇಣ್ಯರು ಬಳ್ಳಿಯನ್ನು ಪ್ರಿಯತಮೆಯೆಂದೂ ಮರವನ್ನು ಪ್ರಿಯಕರ ನೆಂದೂ ಬಣ್ಣಿಸದಿರುತ್ತಾರೆಯೇ? ಒಂದು ಸ್ಯಾಂಪಲ್ ನೋಡಿ, ಕಾಳಿದಾಸನ ಅಭಿಜ್ಞಾನ ಶಾಕುಂತಲಮ್
ನಾಟಕದಿಂದ: ‘ಕ್ಷಾಮಕ್ಷಾಮಕಪೋಲಮಾನನಮುರಃ ಕಾಠಿನ್ಯ ಮುಕ್ತಸ್ತನಂ| ಮಧ್ಯಃ ಕ್ಲಾನ್ತತರಃ ಪ್ರಕಾಮ ವಿನತಾವಂಸೌ ಛವಿಃ ಪಾಣ್ಡುರಾ| ಶೋಚ್ಯಾ ಚ ಪ್ರಿಯದರ್ಶನಾ ಚ ಮದನಕ್ಲಿಷ್ಟೇಯ ಮಾಲಕ್ಷ್ಯತೇ| ಪತ್ರಾಣಾಮಿವ ಶೋಷಣೇನ ಮರುತಾ ಸ್ಪೃಷ್ಟಾಲತಾ ಮಾಧವೀ||’ ಇವು ದುಷ್ಯಂತನ ಮಾತುಗಳು.

ಉದ್ಯಾನದಲ್ಲಿ ಸಖಿಯರೊಡನಿದ್ದ ಶಕುಂತಲೆಯನ್ನು ಕಂಡು ಸ್ವಗತ. “ಇವಳ ಕೆನ್ನೆಗಳು ಕೃಶವಾಗಿವೆ. ವಕ್ಷಸ್ಥಳವು ಸ್ತನಗಳ ಬಿಗಿತ ಕಳಕೊಂಡಿದೆ. ನಡುವು ಬಡವಾಗಿದೆ. ಬಾಹುಗಳೂ ವಿಪರೀತ ಕುಸಿದಿವೆ. ಮೈಯ ಕಾಂತಿಯೂ ಮಸುಕಾಗಿದೆ. ಪ್ರೇಮಜ್ವರದಿಂದ ಬಾಧಿತಳಾಗಿ ಒಮ್ಮೆ ಮುದ್ದಾಗಿಯೂ ಒಮ್ಮೆ ಮರುಗುವಂತೆಯೂ ಕಾಣುತ್ತಿದ್ದಾಳೆ,

ಗಾಳಿ ಸೋಕಿದಾಗ ಎಲೆಗಳೆಲ್ಲ ಪತರಗುಟ್ಟುವ ಮಾಧವೀ ಬಳ್ಳಿಯಂತೆ!” ಶಕುಂತಲೆ ಹಾಗೇಕೆ ಕಷ್ಟಪಡಬೇಕು, ವೃಕ್ಷದಂತಿರುವ ತನ್ನನ್ನು ತಬ್ಬಿಕೊಂಡು ಆಸರೆ ಪಡೆಯಬಾರದೇ ಎಂದು ದುಷ್ಯಂತನಿಗೆ ಆಸೆ. ಮಾಧವಿ, ಅತಿಮುಕ್ತಾ, ಮಾಲತಿ, ಪ್ರಿಯಂಗು ಇತ್ಯಾದಿ ಬಳ್ಳಿಗಳ ಹೆಸರುಗಳು. ವಸಂತ ಋತುವಿನಲ್ಲಿ ಮಾವಿನಮರಕ್ಕೆ ಸುತ್ತಿ
ಕೊಂಡರೆ ಬಂತಿದೋ ಶೃಂಗಾರಮಾಸ! ಅಶ್ವಘೋಷನ ‘ಸೌಂದರಾ ನಂದ’ ಕೃತಿಯಲ್ಲೂ ಇಂಥದೊಂದು ವರ್ಣನೆ ಬರುತ್ತದಂತೆ.

ನಾಯಕ ನಂದ ತನ್ನ ಪತ್ನಿ ಸುಂದರಿಯನ್ನು ತೊರೆದು ಬುದ್ಧನಲ್ಲಿ ವಿದ್ಯೆಗೆಂದು ಹೋಗುತ್ತಾನೆ. ವಸಂತ ಋತುವಿನ ಆಗಮನ ಆತನನ್ನು ಸಂಕಲ್ಪದಿಂದ ವಿಚಲಿತನನ್ನಾಗಿಸುತ್ತದೆ. ಪ್ರಕೃತಿಯಲ್ಲಿ ಎಲ್ಲೆಲ್ಲಿ ನೋಡಿದರೂ ಹೆಂಡತಿಯೇ ನೆನಪಾಗುತ್ತಾಳೆ. ಬೆಳ್ಳಗಿನ ಹೂವು ಆಕೆಯ ಮುಖವನ್ನು ನೆನಪಿಸುತ್ತದೆ. ಕೋಗಿಲೆಯ ಕಪ್ಪು ಬಣ್ಣ ಆಕೆಯ ಕಪ್ಪು ಕೇಶರಾಶಿಯನ್ನು ನೆನಪಿಸುತ್ತದೆ. ಮಾವಿನ ಮರಕ್ಕೆ ಸುತ್ತಿಕೊಂಡ ಅತಿಮುಕ್ತಾ ಬಳ್ಳಿಯನ್ನು ನೋಡಿದಾಗಂತೂ
ಅಳುವೇ ಬರುತ್ತದೆ. ‘ನನ್ನ ಸುಂದರಿಯು ಈರೀತಿ ನನ್ನನ್ನು ಯಾವಾಗ ತಬ್ಬಿಕೊಳ್ಳುವಳೋ…’ ಎಂದು ಹಾತೊರೆ ಯುತ್ತಾನೆ. ವೃಂದಾವನದಲ್ಲಿ ರಾಧಾ-ಕೃಷ್ಣರ ಕಣ್ಣಾಮುಚ್ಚಾಲೆ ಹುಸಿಮುನಿಸು ಪ್ರೀತಿಪರಾಕಾಷ್ಠೆಗಳನ್ನು ಬಣ್ಣಿಸುವಾಗಲೂ ಹೋಲಿಕೆಗೆ ಕವಿಗಳ ಮೊದಲ ಪ್ರಾಶಸ್ತ ತರು-ಲತೆಗಳಿಗೇ.

ವೃಂದಾವನದ ಉದ್ಯಾನ ದಲ್ಲಿರುವ ಬಳ್ಳಿಗಳೆಲ್ಲ ತಮ್ಮಲ್ಲಿ ಅರಳಿರುವ ಪುಷ್ಪಗಳೆಂಬ ನಗುವಿನಿಂದ, ಮೊಗ್ಗುಗಳೆಂಬ ಕುಚದ್ವಯದಿಂದ, ಚಿಗುರೆಲೆಗಳೆಂಬ ತುಟಿಗಳಿಂದ ಕೃಷ್ಣನನ್ನು ಸಂಪ್ರೀತಗೊಳಿಸುತ್ತವಂತೆ, ರಾಧೆಯ ಹಾಗೆಯೇ ತಮ್ಮನ್ನು ಪ್ರತಿಬಿಂಬಿಸುತ್ತ. ಹಾಗಿರುತ್ತದೆ- ‘ಸುಮ ಸುಂದರ ತರುಲತೆಗಳ ವೃಂದಾವನಲೀಲೆ… ಸುಪ್ರಬೋಧ
ಚಂದ್ರೋದಯ ರಾಗಾರುಣ ಜ್ವಾಲೆ!’ ಖುಷಿಯಿಂದ ಹುಚ್ಚೆದ್ದು ಸ್ವತಃ ಕೃಷ್ಣನೂ ‘ಬಲ್‌ಖಾತೀ ಬೇಲೇಂ ಮಸ್ತೀ ಮೇ ಖೇಲೇಂ… ಪೇಡೋಂಸೇ ಮಿಲ್ ಕೇ ಗಲೇ… ಹೇ ನೀಲೇ ಗಗನ್ ಕೇ ತಲೇ ಧರ್ತೀ ಕಾ ಪ್ಯಾರ್ ಪಲೇ…’ ಎಂದು ಹಿಂದೀ ಹಾಡು ಹಾಡುತ್ತ ನಲಿದಾಡಿಯಾನು!

ಕವಿಕಲ್ಪನೆ ಕಾಣುವ ಚೆಲುವಿನ ಜಾಲವು… ಭಾಷಾತೀತವಾದುದು. ಆದರೆ ಕಾವ್ಯಲೋಕವನ್ನು ಒಮ್ಮೆ ಅಲ್ಲಿಗೇ ಬಿಟ್ಟು ಈಗ ವಿಜ್ಞಾನಲೋಕವನ್ನು, ಅದರಲ್ಲೂ ಸಸ್ಯಶಾಸ್ತ್ರವನ್ನು ಪ್ರವೇಶಿಸೋಣ. ಆರ್ಟ್ಸ್ ವಿಭಾಗದ ಲಿಟರೇಚರ್ ಕ್ಲಾಸ್‌ನಿಂದ ಎದ್ದು ಬಂದು ಸೈನ್ಸ್ ವಿಭಾಗದಲ್ಲಿ ಬಾಟನಿ ಕ್ಲಾಸಿಗೆ ಎಂಟ್ರಿ ಅಂದ್ಕೊಳ್ಳಿ. ಬಳ್ಳಿಯು ಮರವನ್ನು ತಬ್ಬಿಕೊಳ್ಳುತ್ತದೆ, ಸುತ್ತುವರಿಯುತ್ತದೆ ಅಂತೆಲ್ಲ ಸಾಹಿತ್ಯಲೋಕವು ಕಲರ್-ಲ್ ಆಗಿ ಚಿತ್ರಿಸಿರುವುದೇನೋ ಹೌದು,

ಆದರೆ ಬಳ್ಳಿಯು ಮರವನ್ನು ಪ್ರದಕ್ಷಿಣಾಕಾರ ಸುತ್ತುತ್ತದೆಯೇ ಅಪ್ರದಕ್ಷಿಣಾಕಾರವಾಗಿಯೇ ಎಂಬ ವಿವರಣೆ ಯಾವ
ಸಾಹಿತ್ಯದಲ್ಲೂ ಇದ್ದಂತಿಲ್ಲ. ಅದೇನಿದ್ದರೂ ವಿಜ್ಞಾನದ ಕೆಲಸ. ಪ್ರಪಂಚದ ಅಷ್ಟೂ ಬಳ್ಳಿ ಪ್ರಭೇದಗಳ ಪೈಕಿ ಶೇ.೯೦ರಷ್ಟು ಬಳ್ಳಿಗಳು ಮರವನ್ನು(ಅಥವಾ ಯಾವುದೇ ಆಧಾರಸ್ತಂಭವನ್ನು) ಅಪ್ರದಕ್ಷಿಣಾಕಾರವಾಗಿ ಸುತ್ತುತ್ತವೆ ಎಂಬ ಸಂಗತಿ ನಿಮಗೆ ಗೊತ್ತಿತ್ತೇ? ನನಗೆ ಗೊತ್ತಿದೆಯೆಂದು ನಾನಿಲ್ಲಿ ಪೋಸು ಕೊಡಲಿಕ್ಕೆ ಖಂಡಿತ ಹೋಗಲಾರೆ. ಏಕೆಂದರೆ ಈ ಒಂದು ಸ್ವಾರಸ್ಯಕರ ಕೌತುಕವು ನನಗೂ ಮೊನ್ನೆಯಷ್ಟೇ ಗೊತ್ತಾದದ್ದು. ಊರಲ್ಲಿರುವ ನನ್ನ ಅಣ್ಣ ವಾಟ್ಸ್ಯಾಪ್‌ನಲ್ಲಿ ಒಂದು ಬಳ್ಳಿಯ ಚಿತ್ರ ಕಳುಹಿಸಿ “ನಾನು ಗಮನಿಸಿದಂತೆ ಬಳ್ಳಿಗಳ ಸ್ವಾಭಾವಿಕ ಬೆಳವಣಿಗೆಗೆ
ಅವಕಾಶವಿದ್ದರೆ ಅವು ಆಧಾರಸ್ತಂಭಕ್ಕೆ ಅಪ್ರದಕ್ಷಿಣಾಕಾರವಾಗಿಯೇ ಸುತ್ತುತ್ತವೆ. ಏಕೆ ಎಂದು ನನಗೂ ಗೊತ್ತಿಲ್ಲ, ಅಥವಾ ಎಲ್ಲ ಬಳ್ಳಿ ಗಳೂ ಹಾಗೆಯೇ ಇರುತ್ತವೆಯೇ ಎಂಬುದೂ ಗೊತ್ತಿಲ್ಲ.

ನೀನು ಸ್ವಲ್ಪ ಸಂಶೋಧನೆ ಮಾಡಿ ‘ತಿಳಿರುತೋರಣ’ದಲ್ಲೊಂದು ಲೇಖನ ಬರೆದರೆ ಚೆನ್ನಾಗಿರುತ್ತದೆ. ಈ ವಿಚಾರದ ಮೇಲೆ ಬೆಳಕು ಚೆಲ್ಲಿದರೆ ಇನ್ನಷ್ಟು ಜನರಿಗೆ ತಿಳಿದುಕೊಳ್ಳುವುದಕ್ಕಾಗುತ್ತದೆ” ಎಂದು ಕರೆ ಮಾಡಿ ಹೇಳಿದಾಗಲೇ. ಆಮೇಲೆ ಸಸ್ಯಶಾಸ ವಿಷಯದ ಕೆಲವು ಅಧಿಕೃತ ಜಾಲತಾಣಗಳನ್ನು ಮಥಿಸಿದಾಗ, ವಿಜ್ಞಾನಪತ್ರಿಕೆಗಳ ಪುಟಗಳನ್ನು ತಿರುವಿದಾಗ, ಬಹುತೇಕ ಬಳ್ಳಿಗಳೆಲ್ಲ ಅಪ್ರದಕ್ಷಿಣಾ ಕಾರವಾಗಿಯೇ ಸುತ್ತುತ್ತವೆ ಎಂಬ ವಿಚಾರ ತಿಳಿದುಬಂತು.

ಲಂಡನ್‌ನಿಂದ ಪ್ರಕಟವಾಗುವ ‘ನ್ಯೂ ಸೈಂಟಿಸ್ಟ್’ ವಿಜ್ಞಾನ ಪತ್ರಿಕೆಯ ಜಾಲತಾಣದಲ್ಲಿ ಸ್ಪಷ್ಟವಾದ ಮಾಹಿತಿ ಇದೆ. “ನಮ್ಮ ಹೂತೋಟದಲ್ಲಿರುವ ಮಾರ್ನಿಂಗ್ ಗ್ಲೋರಿ ಬಳ್ಳಿಯು ಸ್ತಂಭಕ್ಕೆ ಪ್ರದಕ್ಷಿಣಾಕಾರ ಸುತ್ತುವುದೆಂದು ಗಮನಿಸಿದೆ. ತುಸು ವಿಚಿತ್ರ ವೆನಿಸಿತು. ಬೇರೆ ಎಲ್ಲ ಬಳ್ಳಿಗಳೂ ಹೀಗೆಯೇ ಸುತ್ತುತ್ತವೆಯೇ? ಹೌದಾದರೆ ಏಕೆ?” ಎಂದು ಓದುಗರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಉತ್ತರ ರೂಪದಲ್ಲಿ ಈ ಮಾಹಿತಿ ಇದೆ. “Morning glory, Honeysuckle ರೀತಿಯ ಕೆಲವು ಬಳ್ಳಿಗಳು ಮಾತ್ರ ಪ್ರದಕ್ಷಿಣಾ ಕಾರ ಸುತ್ತುತ್ತವೆ. ಆದರೆ Bindweed, Convolvulus ಮುಂತಾದ ಹಲವು ಪ್ರಭೇದ ಗಳು ಅಪ್ರದಕ್ಷಿಣಾಕಾರವಾಗಿಯೇ ಸುತ್ತುತ್ತವೆ.

ಇಲ್ಲಿ ಪ್ರದಕ್ಷಿಣ-ಅಪ್ರದಕ್ಷಿಣ ಎನ್ನುತ್ತಿರುವುದು ಸೂರ್ಯನನ್ನು ದಿಟ್ಟಿಸುವ ಬಳ್ಳಿಯ ಕೆಳಭಾಗದಿಂದ ನೋಡಿದರೆ
ಹೇಗೆ ಕಾಣುತ್ತದೆಯೋ ಆ ರೀತಿ. ನಮ್ಮ ದೃಷ್ಟಿಪಾತಳಿಗೂ ಹಾಗೆಯೇ ಕಾಣುವುದು. ಬಳ್ಳಿಯು ಮೇಲೇರುವುದು
ಸೂರ್ಯನ ಬೆಳಕಿಗಾಗಿ ಹೌದಾದರೂ ಚಲನೆಯ ದಿಕ್ಕನ್ನು ನಿರ್ಧರಿಸುವುದು ಬಳ್ಳಿಗೆ ಸಾಪೇಕ್ಷವಾಗಿ ಸೂರ್ಯನ ಸ್ಥಾನ ಅಲ್ಲ. ಆದ್ದರಿಂದ, ಭೂಮಿಯ ಉತ್ತರ ಗೋಲಾರ್ಧದಲ್ಲಿ ಅಪ್ರದಕ್ಷಿಣಾಕಾರ ಸುತ್ತುವ ಬಳ್ಳಿಗಳು ದಕ್ಷಿಣ ಗೋಲಾರ್ಧದಲ್ಲಿ ಪ್ರದಕ್ಷಿಣಾಕಾರ ವಾಗಿ ಸುತ್ತುತ್ತವೆನ್ನುವುದು ನಿಜವಲ್ಲ.

ಅಲ್ಲಿಯೂ ಅವು ಅಪ್ರದಕ್ಷಿಣಾಕಾರವಾಗಿಯೇ ಸುತ್ತುತ್ತವೆ. ಉತ್ತರ-ದಕ್ಷಿಣ ಗೋಲಾರ್ಧಗಳಲ್ಲಿ ಗಾಳಿ ವಿರುದ್ಧ ದಿಕ್ಕಿನಲ್ಲಿ ಚಲಿಸುವುದನ್ನು ವಿವರಿಸುವ ಕೋರಿಯೊಲಿಸ್ ಎಫೆಕ್ಟ್‌ಗೂ ಬಳ್ಳಿಗಳ ಚಲನೆಗೂ ಸಂಬಂಧವಿಲ್ಲ.

ಇದೇನಿದ್ದರೂ ಬಳ್ಳಿ ಯಾವ ಪ್ರಭೇದಕ್ಕೆ ಸೇರಿದೆ ಮತ್ತು ಅದರ ವಂಶವಾಹಿನಿ ಹೇಗಿದೆ ಎನ್ನುವುದನ್ನಷ್ಟೇ ಅವಲಂಬಿ
ಸಿದೆ. ಜಪಾನ್‌ನ ಸಸ್ಯಶಾಸಜ್ಞ ತಕಾಶಿ ಹಾಶಿಮೊಟೊ ೨೦೦೨ರಲ್ಲಿ ಒಂದು ನಿರ್ದಿಷ್ಟ ಪ್ರಭೇದದ ಬಳ್ಳಿಯನ್ನು ಹುಟ್ಟಿ ನಿಂದ ಪೂರ್ಣ ಬೆಳವಣಿಗೆಯ ತನಕ ಅಧ್ಯಯನ ನಡೆಸಿ ವಂಶವಾಹಿ ರೂಪಾಂತರ (mutation) ಹಂತದಲ್ಲಿ ಬಳ್ಳಿಯ ಸುತ್ತುವಿಕೆ ಪ್ರದಕ್ಷಿಣವೋ ಅಪ್ರದಕ್ಷಿಣವೋ ಅಂತ ನಿರ್ಧಾರವಾಗುತ್ತದೆ ಎಂದು ಸಾಬೀತುಪಡಿಸಿದ್ದಾರೆ. ಸಹಜ ಬೆಳವಣಿಗೆಗೆ ಅನುಕೂಲವಿದ್ದರೆ ಬಳ್ಳಿ ಆ ಆರಂಭಿಕ ದಿಸೆಯಲ್ಲೇ ಸುತ್ತುವಿಕೆ ಮುಂದುವರಿಸುತ್ತದೆ.

ಏನಾದರೂ ಅಡೆತಡೆಗಳು ಬಂದರೆ ದಿಸೆಯನ್ನು ಬದಲಾಯಿಸಲೂ ಬಹುದು ಅಥವಾ ಅಂಥ ಅಡೆತಡೆಯು ಕೆಲವೊಮ್ಮೆ ಬಳ್ಳಿಗೆ ಮಾರಣಾಂತಿಕವೂ ಆಗಬಹುದು”. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಯಾವುದೇ ಬಳ್ಳಿಯಾದರೂ ನೇರವಾಗಿ ಹಬ್ಬದೆ ಸುರುಳಿ ಸುತ್ತಿಯೇ ಬೆಳೆಯುವುದೇಕೆ? ಇದಕ್ಕೆ ಕಾರಣ ಮರಕ್ಕೆ ಅಥವಾ ಯಾವುದೇ ಆಧಾರ ಸ್ತಂಭಕ್ಕೆ ತಾಗಿಕೊಂಡಿರುವ ಬಳ್ಳಿಯ ಭಾಗದ ಜೀವಕೋಶಗಳಿಗಿಂತ, ಹೊರಭಾಗದ (ಮರಕ್ಕೆ ತಾಗಿಕೊಂಡಿರದ) ಜೀವಕೋಶಗಳು ಹೆಚ್ಚು ವೇಗವಾಗಿ ಬೆಳೆಯುವುದು. ಈ ಅಸಮತೋಲಿತ ಬೆಳವಣಿಗೆಯು
ಬಳ್ಳಿ ಮರವನ್ನು ಸುತ್ತುವಂತೆ ಮಾಡುತ್ತದೆ. ಒಟ್ಟಾರೆಯಾಗಿ ಶೇ.90ರಷ್ಟು ಬಳ್ಳಿ ಪ್ರಭೇದಗಳು ಅಪ್ರದಕ್ಷಿಣಾಕಾರ ಸುತ್ತುವವೇ ಇರುವುದು. ಎಲ್ಲೋ ಕೆಲವೊಂದು ಮಾತ್ರ ಪ್ರದಕ್ಷಿಣಾಕಾರ ಸುತ್ತುವವೂ ಕಂಡುಬರುತ್ತದೆ.

Bengal clock vine ಎಂಬ ಹೆಸರಿನ ಹೂಬಳ್ಳಿ ಅಂಥದೊಂದು. ಅದರ ಹೆಸರೇ ಸೂಚಿಸುವಂತೆ, ಗಡಿಯಾರದ ಮುಳ್ಳುಗಳಂತೆ ಪ್ರದಕ್ಷಿಣಾಕಾರದಲ್ಲಿ ಸುತ್ತುತ್ತದೆ. Thunbergia Grandiflora ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಈ ಬಳ್ಳಿಯಲ್ಲಿ ನಸುನೇರಳೆ ಬಣ್ಣದ ದೊಡ್ಡ ಗಾತ್ರದ ಹೂವು ಅರಳುತ್ತವೆ. ಚೈನಾ, ನೇಪಾಳ, ಮ್ಯಾನ್ಮಾರ್, ಬಾಂಗ್ಲಾ ಮತ್ತು ಭಾರತ ದೇಶಗಳಲ್ಲಿ ವಿಪುಲವಾಗಿ ಇದು ಕಾಣಿಸಿಕೊಳ್ಳುತ್ತದೆ. ಮೈಸೂರು ನಗರದ ಸೌಂದರ್ಯ ವರ್ಧನೆ ಯಲ್ಲಿ ಈ ಬಳ್ಳಿಯ ಪಾತ್ರವೂ ಇದೆಯೆಂದು ‘ಸ್ಟಾರ್ ಆಫ್ ಮೈಸೂರು’ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನ ತಿಳಿಸುತ್ತಿದೆ.‌

ಬಳ್ಳಿಯ ಸುತ್ತುವಿಕೆ ಪ್ರದಕ್ಷಿಣ-ಅಪ್ರದಕ್ಷಿಣ ಅರ್ಥ ಮಾಡಿಕೊಳ್ಳುವುದು ಕಷ್ಟವಾದರೆ, ಭೌತಶಾಸ್ತ್ರದಲ್ಲಿ ವಿದ್ಯು ತ್ಕಾಂತೀಯ ಕ್ಷೇತ್ರದಲ್ಲಿ ಬಳಕೆಯಾಗುವ ‘ಬಲಗೈ ಹೆಬ್ಬೆರಳ ನಿಯಮ’ ರೀತಿಯಿಂದಲೂ ಅರ್ಥೈಸುವು ದಕ್ಕಾಗುತ್ತದೆ. ಬಲಗೈಯ ಹೆಬ್ಬೆರಳನ್ನು ಮೇಲಕ್ಕೆತ್ತಿ ಉಳಿದ ನಾಲ್ಕೂ ಬೆರಳುಗಳನ್ನು ಒಳಗೆ ಮಡಚಿಕೊಂಡರೆ, ಹೆಬ್ಬೆರಳು ವಿದ್ಯುತ್ ಹರಿಯುವ ದಿಕ್ಕನ್ನೂ, ಮಡಚಿರುವ ನಾಲ್ಕು ಬೆರಳುಗಳು ವಿದ್ಯುತ್‌ವಾಹಕದ ಸುತ್ತ ಉಂಟಾಗುವ ಕಾಂತಕ್ಷೇತ್ರದ ದಿಕ್ಕನ್ನೂ ಸೂಚಿಸುತ್ತವೆ- ಎಂಬುದೇ ಆ ನಿಯಮ.

ಈ ಭಂಗಿಯಲ್ಲಿ ನಾಲ್ಕೂ ಬೆರಳುಗಳು ಅಪ್ರದಕ್ಷಿಣಾಕಾರದಲ್ಲೇ ಮಡಚಿರುತ್ತವೆ ತಾನೆ? ಅದೇ ರೀತಿ ಯಾವುದೇ ಬಳ್ಳಿಯು ಸೂರ್ಯನತ್ತ ಮೇಲೇರುವಾಗ ಅದರ ಸುತ್ತುವಿಕೆಯೂ ಅಪ್ರದಕ್ಷಿಣಾಕಾರವಾಗಿಯೇ ಇರುತ್ತದೆ. ಆ-ಕೋರ್ಸ್, ಯಾವುದೇ ಬಳ್ಳಿ ಎಂದರೆ ತಪ್ಪಾಗುತ್ತದೆ. ಮಾಮೂಲಿಯಾದ, ಸಾಮಾನ್ಯವಾದ, ಶೇ.೯೦ ಬಳ್ಳಿಗಳಿಗೆ ಈ ನಿಯಮ ಸರಿಹೊಂದು ತ್ತದೆ. ಅವುಗಳನ್ನೆಲ್ಲ ‘ವಿದ್ಯುಲ್ಲತಾ’ ಎಂದು ಕರೆಯಲಿಕ್ಕಡ್ಡಿಯಿಲ್ಲ.

ಉಳಿದ ಶೇ.೧೦ ಬಳ್ಳಿಗಳ ವಿಚಾರದಲ್ಲಿ ಉಲ್ಟಾ ಅಷ್ಟೇ. ಸಮುದ್ರದಲ್ಲಿ ಸಿಗುವ ಶಂಖ ಮತ್ತಿತರ ಚಿಪ್ಪುಗಳ ಸುರುಳಿ ರಚನೆಯಂತೆಯೇ ಇದು ಕೂಡ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಊದಲಿಕ್ಕೆ ಬಳಕೆಯಾಗುವ ಶಂಖ ‘ಎಡಮುರಿ’ ಆಗಿರುತ್ತದೆ. ಅಪರೂಪಕ್ಕೆ ಒಮ್ಮೊಮ್ಮೆ ‘ಬಲಮುರಿ’ ಶಂಖ ಸಿಗುತ್ತದೆ. ದೇವರಿಗೆ ಅಭಿಷೇಕ ಮಾಡಲಿಕ್ಕೆ ಬಲಮುರಿ ಶಂಖ ಒಳ್ಳೆಯದು ಎನ್ನುತ್ತಾರೆ.

ಹಾಗೆಯೇ, ಸೊಂಡಿಲನ್ನು ಎಡಗಡೆಗೆ ತಿರುಗಿಸಿದ ‘ಎಡಮುರಿ’ ಗಣೇಶನೇ ಹೆಚ್ಚಾಗಿ ಕಂಡುಬರುವುದು. ಅಪರೂಪಕ್ಕೆ ಕೆಲವೆಡೆ ‘ಬಲಮುರಿ’ ಗಣೇಶ ದೇವಸ್ಥಾನಗಳು ಇರುತ್ತವೆ.

ಬೇರೆಲ್ಲ ಏಕೆ, ಮನುಷ್ಯರಲ್ಲೇ ಈ ತೆರನಾದ ಭಿನ್ನತೆ ಇಲ್ಲವೇ? ಸಾಮಾನ್ಯವಾಗಿ ಎಲ್ಲರೂ ಬಲಗೈ ಪ್ರಧಾನವಾಗುಳ್ಳ ವರು. ಕೆಲವರು ಮಾತ್ರ ಎಡಚರು ಇರುತ್ತಾರೆ. ಇಲ್ಲೂ ಬಳ್ಳಿಗಳಂತೆಯೇ ಅನುಪಾತ. ಪ್ರಪಂಚದ ಒಟ್ಟು ಜನ ಸಂಖ್ಯೆಯ ಸುಮಾರು ಶೇ.೯೦ ರಷ್ಟು ಜನ ಬಲಗೈಯವರು. ಉಳಿದವರು ಎಡಚರು. ಅಮೆರಿಕದ ಇದುವರೆಗಿನ ೪೬ ಮಂದಿ ರಾಷ್ಟ್ರಾಧ್ಯಕ್ಷರ ಪೈಕಿ ಒಟ್ಟು ಎಂಟು ಮಂದಿ ಎಡಚರು: ಜೇಮ್ಸ್ ಗ್ಯಾರ್‌ಫೀಲ್ಡ್, ಹೆನ್ರಿ ಟ್ರೂಮನ್, ಹರ್ಬರ್ಟ್ ಹೂವರ್, ಜೆರಾಲ್ಡ್ ಫೋರ್ಡ್, ರೊನಾಲ್ಡ್ ರೇಗನ್, ಜಾರ್ಜ್ ಎಚ್.ಡಬ್ಲ್ಯು. ಬುಷ್, ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ. ಇವರ ಪಟ್ಟಿಗೆ ಸೇರಿಸಬಹುದಾದ ಇನ್ನಿಬ್ಬರೆಂದರೆ ಥಾಮಸ್ ಜೆಫರ್ಸನ್ ಮತ್ತು ವುಡ್ರೋ ವಿಲ್ಸನ್. ಇವರಿಬ್ಬರು ಬಲಗೈಯವರಾಗಿದ್ದರೂ ಯಾವುದೋ ಕಾರಣದಿಂದ ಬಲಗೈಗೆ ಶಾಶ್ವತ ಪೆಟ್ಟಾದ ಮೇಲೆ ಎಡಗೈ ಯಿಂದ ಬರೆಯಬಲ್ಲವರಾಗಿದ್ದರಂತೆ.

ಅದಕ್ಕಿಂತಲೂ ಸ್ವಾರಸ್ಯವೆಂದರೆ ಜೇಮ್ಸ್ ಗ್ಯಾರ್‌ಫೀಲ್ಡ್‌ರ ಸಾಮರ್ಥ್ಯ. ಆತ ಎರಡೂ ಕೈಗಳಿಂದ ಬರೆಯಬಲ್ಲವ ರಾಗಿದ್ದರು, ಅದೂ ಒಂದು ಕೈಯಿಂದ ಲ್ಯಾಟಿನ್ ಭಾಷೆಯಲ್ಲಿ ಮತ್ತು ಇನ್ನೊಂದು ಕೈಯಿಂದ ಗ್ರೀಕ್ ಭಾಷೆಯಲ್ಲಿ! ಬಳ್ಳಿಗಳ ಲೋಕದಲ್ಲಿ ಮುಳ್ಳುಸೌತೆಯ ಬಳ್ಳಿಯೂ ಹಾಗೆಯೇ ಅಂತೆ. ಅದು ಪ್ರದಕ್ಷಿಣಾಕಾರವೂ ಸುತ್ತಬಲ್ಲದು, ಅಪ್ರದಕ್ಷಿಣಾಕಾರವಾಗಿಯೂ ಸುತ್ತಬಲ್ಲದು. ‘ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮೃತಾತ್’ ಎಂದು ಮೃತ್ಯುಂಜಯ ಮಹಾಮಂತ್ರದಲ್ಲಿ ಮುಳ್ಳುಸೌತೆ ಬಳ್ಳಿ ಇರುವುದಕ್ಕೂ ಈ ರೀತಿಯ ಸವ್ಯಸಾಚಿತನಕ್ಕೂ ಸಂಬಂಧವಿರಲಿಕ್ಕಿಲ್ಲವೆನ್ನಿ.

ಸರಿ, ಬಳ್ಳಿಯ ಸುತ್ತುವಿಕೆ ನೆಪದಲ್ಲಿ ಇಷ್ಟೆಲ್ಲ ಸುತ್ತಾಡಿದೆವು. ಕೊನೆಗೊಂದು ಜಾಣ್ಮೆಲೆಕ್ಕದ ರೂಪದಲ್ಲಿ ಗಣಿತವನ್ನೂ ಎದುರು ಗೊಳ್ಳದಿದ್ದರೆ ಹೇಗೆ? ಇಲ್ಲಿದೆ ನೋಡಿ ಬಳ್ಳಿಗಳ ಸುತ್ತುವಿಕೆಯ ಸುತ್ತವೇ ಹೆಣೆದ ಒಂದು ಲೆಕ್ಕ. ಮಾಧವಿ ಮತ್ತು ಮಾಲತಿ ಎಂಬ ಎರಡು ಬಳ್ಳಿಗಳು ಒಂದು ಮರದ ಉದ್ದನೆಯ ಕಾಂಡವನ್ನು ಸುತ್ತುತ್ತಿವೆ (‘ಪಟ್ಟಣಕ್ಕೆ ಬಂದ ಪತ್ನಿಯರು’ ಸಿನಿಮಾದಲ್ಲಿದ್ದಂತೆ ಮರಕ್ಕೆ ಇಬ್ಬರು ಹೆಂಡತಿಯರೇ? ಗಂಗೆ-ಗೌರಿಯರನ್ನು ನಿಭಾಯಿಸಬೇಕಾದ ಶಿವನಂತೆ ಆ ಮರದ ಪಾಡೇ? ಅಂತೆಲ್ಲ ಯೋಚನೆಗಿಳಿಯಬೇಡಿ).

ಮಾಧವಿಯು ಮರಕ್ಕೆ ಅಪ್ರದಕ್ಷಿಣಾಕಾರವಾಗಿಯೂ, ಮಾಲತಿಯು ಪ್ರದಕ್ಷಿಣಾಕಾರದಲ್ಲೂ ಸುತ್ತುತ್ತಿವೆ. ಮರದ ಬುಡದಲ್ಲಿ ಎರಡೂ ಬಳ್ಳಿಗಳೂ ಒಟ್ಟಿಗೇ ಬೆಳವಣಿಗೆ ಆರಂಭಿಸಿದ್ದಾದರೂ ಮರದ ಮೊದಲ ರೆಂಬೆ ಮೂಡುವಲ್ಲಿ ವರೆಗಿನ ಸ್ತಂಭದಂಥ ಕಾಂಡವನ್ನು ಮಾಧವಿ ಐದು ಸಲ ಸುತ್ತಿದ್ದರೆ ಮಾಲತಿ ಮೂರು ಸುತ್ತುಗಳನ್ನು ಪೂರ್ಣ ಗೊಳಿಸಿದೆ. ನೀವೀಗ ಉತ್ತರಿಸ ಬೇಕಾದ್ದು: ಮಾಧವಿ ಮತ್ತು ಮಾಲತಿ, ಮರದ ಬುಡದ ಬಿಂದು ಮತ್ತು ರೆಂಬೆ ಮೂಡುವಲ್ಲಿಯ ಬಿಂದುಗಳನ್ನು ಹೊರತುಪಡಿಸಿ ಎಷ್ಟು ಸಲ ಪರಸ್ಪರ ಮುಖಾಮುಖಿಯಾಗುತ್ತವೆ?

ಇದನ್ನೂ ಓದಿ: SrivathsaJoshi Column: ರಾಘವೇಂದ್ರ ಭಟ್ಟರ ಖಜಾನೆಯಿಂದ ಮತ್ತಷ್ಟು ರಸಪ್ರಸಂಗಗಳು