Monday, 30th December 2024

Srivathsa Joshi Column: ಏಳೇಳು ಜನ್ಮ ಅಂದರೆ ಹದಿನಾಲ್ಕು? 49? ಅಥವಾ ಬರೀ ಒಂದು ?

ತಿಳಿರುತೋರಣ

ಶ್ರೀವತ್ಸ ಜೋಶಿ

ಅಮಿತ ಹೇಳಿಕೆಗೆ ವಿಪಕ್ಷ ಕೆಂಡ’ ಎಂಬ ಬ್ಯಾನರ್ ಹೆಡ್ ಲೈನ್ ಅನ್ನು ಡಿಸೆಂಬರ್ ೧೯ರ ವಿಶ್ವವಾಣಿಯಲ್ಲಿ ನೀವು
ಗಮನಿಸಿರಬಹುದು. ಕಾಂಗ್ರೆಸ್‌ನವರ ಅಂಬೇಡ್ಕರ್ ಜಪ ವ್ಯಸನ ಕುರಿತಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡಿದ್ದಕ್ಕೆ ವಿರೋಧ ಪಕ್ಷಗಳು ವಿವಾದ ಸೃಷ್ಟಿಸಿರುವುದು. ಅಮಿತ್ ಶಾ ಹೇಳಿದ್ದೇನು? ಎಂಬುದು ಕೂಡ ಪತ್ರಿಕೆಯಲ್ಲಿ ಅಲ್ಲೇ ಪಕ್ಕದ ಬಾಕ್ಸ್ ಐಟಮ್‌ನಲ್ಲಿ ಪ್ರಕಟವಾಗಿದೆ.

“ಅಂಬೇಡ್ಕರ್ ಹೆಸರು ಹೇಳುವುದು ಈಗ ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ್ ಅಂಬೇಡ್ಕರ್ ಅಂಬೇ ಡ್ಕರ್… ಅದಕ್ಕಿಂತ, ಇಷ್ಟು ಸಲ ದೇವರ ನಾಮಸ್ಮರಣೆ ಮಾಡಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗಕ್ಕೆ ಹೋಗುತ್ತಿದ್ದರು…” ಅದೇ ಬಾಕ್ಸ್ ಐಟಮ್ ನಲ್ಲಿ ಕೆಳಗೆ “ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನ ದಡಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ಸಂಸತ್‌ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದಿದ್ದೀರಿ. ಆದರೆ ವಾಸ್ತವವಾಗಿ ನಿಮ್ಮ ಪಕ್ಷದವರು ಮೋದಿ.. ಮೋದಿ.. ಮೋದಿ.. ಎಂದು ಹೇಳುವುದು ಒಂದು ವ್ಯಸನ ಆಗಿದೆ.

ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರವಲ್ಲ ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು ಎಂದು ಸಿಎಂ ಸಿದ್ದರಾಮಯ್ಯ ಅಮಿತ್ ಶಾಗೆ ಬಹಿರಂಗ ಪತ್ರ ಬರೆದಿದ್ದಾರೆ” ಎಂದು ಕೂಡ ಇತ್ತು.

‘ತಿಳಿರುತೋರಣ’ ರಾಜಕೀಯ ವಿಶ್ಲೇಷಣೆಯ ಅಂಕಣವಲ್ಲ. ಹಾಗಾಗಿ ಈ ಘಟನೆಯಲ್ಲಿರಬಹುದಾದ ರಾಜಕೀಯ ವನ್ನು ಬದಿಗಿಟ್ಟು ಬೇರೆ ಕೆಲವು ಸ್ವಾರಸ್ಯಗಳನ್ನಷ್ಟೇ ಗಮನಿಸೋಣ. ಮೊದಲನೆಯದಾಗಿ, ಆ ಬ್ಯಾನರ್ ಹೆಡ್‌ಲೈನ್ ತುಂಬ ಚೆನ್ನಾಗಿದೆ. ‘ಅಮಿತ’ ಎಂಬ ಪದಕ್ಕೆ ಕೆಂಪು ಬಣ್ಣ ಕೊಡುವುದಕ್ಕಿಂತ ‘ಕೆಂಡ’ ಪದಕ್ಕೆ ಕೆಂಪು ಬಣ್ಣ ಇದ್ದಿದ್ದರೆ ಇನ್ನೂ ಪರಿಣಾಮಕಾರಿ ಆಗುತ್ತಿತ್ತೇನೋ. ಅಮಿತ್ ಶಾ ‘ಕಂಡದ್ದು ಕಂಡ್ಹಾಂಗೆ’ ಹೇಳಿದ್ದಕ್ಕೆ ಕಾಂಗ್ರೆಸ್‌ನವರು ‘ಕೆಂಡದಂಥ ಕ್ವಾಪ’ ಮಾಡ್ಕೊಂಡಿದ್ದು ಹೌದಾದ್ದರಿಂದ ಕೆಂಡ ಪರ್ಫೆಕ್ಟ್ ಪದ. ಆದರೆ ಅಮಿತ್ ಶಾ ಹೇಳಿಕೆಯಲ್ಲಿ ಬೇರೊಂದು ಐಬು ಇದೆ. ಅದೇ ದೋಷ ಸಿದ್ದರಾಮಯ್ಯರ ಪ್ರತಿಕ್ರಿಯೆಯಲ್ಲೂ ಇದೆ.

ಅದನ್ನು ಯಾರೂ ಗಮನಿಸಿರುವಂತಿಲ್ಲ. ಒಂದಕ್ಕಿಂತ ಹೆಚ್ಚು ಜನ್ಮಗಳಿದ್ದರೆ ಪ್ರತಿ ಜನ್ಮದಲ್ಲೂ ಸ್ವರ್ಗಕ್ಕೆ ಹೋಗು ತ್ತಾರೆ ಎನ್ನುವುದು ಹೇಗೆ ಸಾಧ್ಯ? ನರಕಕ್ಕೆ ಹೋದವರು ಮಾತ್ರ ಮತ್ತೆಮತ್ತೆ ಹುಟ್ಟಿಬಂದು ಸ್ವರ್ಗ (ಮೋಕ್ಷ) ಪ್ರಾಪ್ತಿಗಾಗಿ ಹಾತೊರೆಯುತ್ತಾರೆ. ಸ್ವರ್ಗಕ್ಕೆ ಹೋದವರು ಒಮ್ಮೆ ಅಲ್ಲಿ ತಲುಪಿದರೆ(ಮೋಕ್ಷ ಸಿಕ್ಕಿದರೆ) ಮತ್ತೆ ಜನ್ಮವೆತ್ತುವ ಪ್ರಶ್ನೆಯೇ ಇಲ್ಲ. ಇವೆಲ್ಲ ಬರೀ ನಂಬಿಕೆಗಳು, ಹೋಗಿಬಂದವರು ಹೇಳಿದ್ದಲ್ಲ ಎನ್ನುವುದನ್ನು ಒಪ್ಪೋಣ; ಆದರೂ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ‘ಮಾಮುಪೇತ್ಯತು ಕೌಂತೇಯ ಪುನರ್ಜನ್ಮ ನ ವಿದ್ಯತೇ’ ಎಂದಿರುವುದರಿಂದ ಒಮ್ಮೆ ಸ್ವರ್ಗಪ್ರಾಪ್ತಿಯಾದರೆ ಅದೇ ಪರ್ಮನೆಂಟ್ ರೆಸಿಡೆನ್ಸಿ, ಅಲ್ಲಿಯದೇ ಪೌರತ್ವ.

ಹೋಗಲಿ, ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು ಎಂದುಕೊಂಡು ಸ್ವರ್ಗ-ನರಕಗಳ ವಿಚಾರವನ್ನು
ಒತ್ತಟ್ಟಿಗಿಡೋಣ. ಸಿದ್ದರಾಮಯ್ಯರಂಥ ಸಿದ್ದರಾಮಯ್ಯರೂ ದೇವರ ನಾಮಸ್ಮರಣೆ, ಪುನರ್ಜನ್ಮ, ಸ್ವರ್ಗಪ್ರಾಪ್ತಿಯ ವಿಚಾರ ಮಾತಾಡಿದರಲ್ಲ ಎಂದು ಖುಷಿಪಡೋಣ. ಆದರೆ ಅಮಿತ್ ಶಾ ಹೇಳಿಕೆಯಲ್ಲಿ (ಕನಿಷ್ಠ ಅದರ ಕನ್ನಡ ಅನುವಾದದಲ್ಲಿ) ಇನ್ನೂ ಒಂದು ಗಮನಾರ್ಹ ಅಂಶ ಇದೆ. ರಾಜ್ಯಸಭೆಯಲ್ಲಿ ಅಮಿತ್ ಶಾ ಮಾತನಾಡಿದ್ದರ ಒರಿಜಿನಲ್ ವಿಡಿಯೊ ತುಣುಕನ್ನು ನಾನು ಯುಟ್ಯೂಬಲ್ಲಿ ನೋಡಿದ್ದೇನೆ. ಅವರು ಹೇಳಿದ್ದು “ಸಾತ್ ಜನ್ಮೋಂ ತಕ್ ಸ್ವರ್ಗ ಮಿಲ್ತಾ ಥಾ…” ಎಂದು.

ಕನ್ನಡದಲ್ಲಿ ‘ಏಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು’ ಎಂದಿರಬೇಕಿತ್ತು. ಆದರೆ ‘ಏಳೇಳು ಜನ್ಮಕ್ಕೂ…’ ಅಂತ ಇದೆ. ಕನ್ನಡ ದ್ದೊಂದು ಅನನ್ಯ ವೈಶಿಷ್ಟ್ಯವದು! ಏಳು ಜನ್ಮ ಎನ್ನುವ ಬದಲಿಗೆ ಏಳೇಳು ಜನ್ಮ ಎಂಬ ಪದಪುಂಜ. ಅದನ್ನೇ ನಾನು ಇಂದಿನ ಅಂಕಣದ ತಲೆಬರಹದಲ್ಲಿ “ಏಳೇಳು ಅಂದರೆ ಏಳು ಕೂಡಿಸು ಏಳು? ಅಥವಾ ಏಳು ಗುಣಿಸು ಏಳು? ಅಥವಾ ಏಳು ಭಾಗಿಸು ಏಳು?” ಎಂದು ಪ್ರಶ್ನಿಸುತ್ತ ತರ್ಲೆಬರಹವಾಗಿಸಿದ್ದು. ಏಳರ ಘಾತ ಏಳು = ೮,23,543 ಎಂದು ಕೂಡ ಒಮ್ಮೆ ಯೋಚಿಸಿದ್ದೆ, ತಲೆಬರಹದಲ್ಲಿ ಅಷ್ಟಕ್ಕೆ ಜಾಗವಿರುವುದಿಲ್ಲ, ಅಷ್ಟು ಜನ್ಮಗಳನ್ನು ಯಾರೂ
ಅನುಭವಿಸುವುದೂ ಬೇಡ ಎಂದುಕೊಂಡು ಸೇರಿಸಲಿಲ್ಲ.

ವಿಷಯ ಏನೂಂದ್ರೆ, ಕನ್ನಡದಲ್ಲಿ ‘ಏಳು ಜನ್ಮ’ ಎನ್ನುವುದನ್ನೇ ಹೆಚ್ಚು ಪರಿಣಾಮಕಾರಿಯಾಗಿ, ಒತ್ತಿಹೇಳುವ ರೀತಿ ಯಲ್ಲಿ ‘ಏಳೇಳು ಜನ್ಮ’ ಎನ್ನುತ್ತೇವೆ. ಆಡುಮಾತಿನಲ್ಲಿ, ಕಥೆ-ಕವಿತೆಗಳಲ್ಲಿ, ಚಿತ್ರಗೀತೆಗಳಲ್ಲೂ ವ್ಯಾಪಕವಾಗಿ ಈ ಪದಪುಂಜದ ಬಳಕೆಯಾಗಿದೆ, 12ನೆಯ ಶತಮಾನದಷ್ಟು ಹಿಂದಿನಿಂದಲೂ. “ಅಯ್ಯಾ ಏಳೇಳು ಜನ್ಮದಲ್ಲಿ ಶಿವಭಕ್ತ ನಾಗಿ ಬಾರದಿರ್ದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ… ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ…” ಎಂದು ಬಸವಣ್ಣನವರ ಒಂದು ವಚನದಲ್ಲಿ ಬರುತ್ತದೆ. ಒಂದೊಂದು ಜನ್ಮದಲ್ಲೂ ತನ್ನ ಹೆಸರು ಏನಿರುತ್ತದೆಂದು- ಶಿಲಾದ, ಸ್ಕಂದ, ನೀಲಲೋಹಿತ, ಮನೋಹರ, ಕಾಲಲೋಚನ, ವೃಷಭ, ಮತ್ತು ಬಸವದಣ್ಣಾಯಕ- ಎಂಬ ಪಟ್ಟಿಯನ್ನೂ ಬಸವಣ್ಣ ಕೊಟ್ಟಿದ್ದಾರೆ!

ಏಳೇಳು ಜನ್ಮ ಎಂದು ಬರುವ ಕನ್ನಡ ಚಿತ್ರಗೀತೆಗಳದೂ ಪಟ್ಟಿ ಮಾಡಬಹುದು. ನೆಚ್ಚಿನ ಒಂದೆರಡನ್ನಷ್ಟೇ ಉಲ್ಲೇಖಿಸಿ ಉಳಿದುವನ್ನು ನಿಮಗೆ ಬಿಡುತ್ತೇನೆ. ಮೊದಲನೆಯದು ‘ತಿರುಗುಬಾಣ’ ಚಿತ್ರದಲ್ಲಿ ಎಸ್ಪಿಬಿ ನಟಿಸಿ ಹಾಡಿದ ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ…’ ಅದರ ಕೊನೆ ಚರಣದಲ್ಲಿ ‘ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ… ಏನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿಯುವೆ…’ ಎಂದು ಬರುತ್ತದೆ. ಇನ್ನೊಂದು ಕೂಡ ಎಸ್ಪಿಬಿಯವರೇ ಹಾಡಿದ್ದು, ‘ಸೀತಾ’ ಚಿತ್ರಕ್ಕಾಗಿ ‘ಮದುವೆಯ ಈ ಬಂಧ ಅನುರಾಗದ ಅನುಬಂಧ ಏಳೇಳು ಜನುಮದಲೂ ತೀರದ ಸಂಬಂಧ…’ ಬಹುಮಟ್ಟಿಗೆ ಏಳೇಳು ಜನ್ಮದ ಮಾತು ಬರುವುದು ಗಂಡು-ಹೆಣ್ಣಿನ ಸಂಬಂಧಕ್ಕೇ.

ಈ ಏಳು ಜನ್ಮದ ಕಾನ್ಸೆಪ್ಟ್ ಎಲ್ಲಿಂದ ಬಂದದ್ದು, ಅದರಲ್ಲೂ ಕನ್ನಡದಲ್ಲಿ ‘ಏಳೇಳು ಜನ್ಮ’ ಎಂಬ ಬಳಕೆ ಹೇಗೆ ಹುಟ್ಟಿಕೊಂಡದ್ದು ಎಂದು ಒಮ್ಮೆ ‘ಇಗೋ ಕನ್ನಡ’ ಅಂಕಣದಲ್ಲಿ ಓದುಗರೊಬ್ಬರು ಪ್ರೊ.ಜಿ.ವೆಂಕಟಸುಬ್ಬಯ್ಯ ನವರನ್ನು ಕೇಳಿದ್ದರು. “ನನಗೂ ಅದು ಸ್ಪಷ್ಟವಾಗಿ ಗೊತ್ತಿಲ್ಲ, ಪ್ರಜಾವಾಣಿಯ ಓದುಗರಾರಾದರೂ ತಿಳಿಸಿದರೆ ಅವರಿಗೆ ಏಳೇಳು ಜನ್ಮದಲ್ಲೂ ಕೃತಜ್ಞನಾಗಿರುತ್ತೇನೆ” ಎಂದು ಜಿ.ವಿ. ಉತ್ತರಿಸಿದ್ದರು. ಪುಸ್ತಕರೂಪದಲ್ಲಿ ಬಂದ ‘ಇಗೋ ಕನ್ನಡ’ದಿಂದ ಆ ಟಿಪ್ಪಣಿಯನ್ನು ಯಥಾವತ್ತಾಗಿ ಇಲ್ಲಿ ದಾಖಲಿಸುತ್ತಿದ್ದೇನೆ: “ಏಳೇಳು ಜನ್ಮ ಎಂಬ ಶಬ್ದ ಪುಂಜದ ಬಗ್ಗೆ ನಾನು ಅನೇಕ ದಿನಗಳಿಂದ ಆಲೋಚನೆ ಮಾಡುತ್ತಿದ್ದೇನೆ. ಈ ಸಂಖ್ಯೆಗೆ ಬಂದಿರುವ ಪ್ರಾಧಾನ್ಯವು ಎಲ್ಲಿಂದ ಬಂದಿದೆ ಎಂಬ ಬಗ್ಗೆ ನನಗೆ ಉತ್ತರವು ಸಿಕ್ಕಿಲ್ಲ. ಸಂಸ್ಕೃತದಲ್ಲಿ ಸಪ್ತ ಎಂಬ ಸಂಖ್ಯೆಯೇನೋ ಬಹು ಕಡೆಗಳಲ್ಲಿ ಪ್ರಯೋಗವಾಗುತ್ತದೆ.

ಸಪ್ತ ನದಿಗಳು, ಸಪ್ತ ಸಮುದ್ರಗಳು, ಸಪ್ತ ಋಷಿಗಳು, ಸಪ್ತ ಲೋಕಗಳು, ಸಪ್ತ ಪರ್ವತಗಳು, ಸಪ್ತಾಶ್ವ, ಸಪ್ತಜಿಹ್ವೆ, ಸಪ್ತ ತಂತು ಇತ್ಯಾದಿ. ಆದರೆ ಅಲ್ಲಿಯೂ ಸಪ್ತ ಜನ್ಮ ಎಂಬ ಶಬ್ದಪ್ರಚಾರದಲ್ಲಿಲ್ಲ. ಜಯವಿಜಯರಿಗೆ ಸಂಬಂಧಿಸಿದ ಕಥೆಗಳಲ್ಲಿ ಅವರು ಮೂರು ಜನ್ಮಗಳಲ್ಲಿ ರಾಕ್ಷಸರಾಗಿದ್ದು ಮತ್ತೆ ವಿಷ್ಣುವಿನ ಬಳಿ ಸೇರಿಕೊಂಡರು ಎಂಬ ಕಥೆ ಇದೆ. ಹರಿಕಥೆಯ ದಾಸರುಗಳು ಈ ಕಥೆಯನ್ನು ಉಪಕಥೆಯಾಗಿ ದೊಡ್ಡದು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ನಾನು ಕೇಳಿದ ಒಂದು ವಿವರ ಹೀಗಿದೆ: ನಾರಾಯಣನನ್ನು ಕಾಣಲು ಬಂದಾಗ ಸನಂದನಾದಿಗಳನ್ನು ದ್ವಾರಪಾಲಕರಾದ ಜಯವಿಜಯರು ತಡೆದರು. ಅವರು ಕೋಪಗೊಂಡು ದ್ವಾರಪಾಲಕರಿಗೆ ರಾಕ್ಷಸರಾಗಿ ಭೂಮಿಯಲ್ಲಿ ಹುಟ್ಟಿರಿ ಎಂದು ಶಾಪ ಕೊಟ್ಟರು. ಆಗ ಪಶ್ಚಾತ್ತಾಪಪಟ್ಟ ಜಯವಿಜಯರನ್ನು ನಾರಾಯಣನು ಸಮಾಧಾನಪಡಿಸಿ ‘ಋಷಿಗಳ ಶಾಪವು ಎಂದೂ ನಿಷಲವಾಗುವುದಿಲ್ಲ.

ನೀವು ನನ್ನ ಭಕ್ತರಾಗಿದ್ದು ಏಳು ಜನ್ಮಗಳನ್ನು ಕಳೆದು ನನ್ನ ಬಳಿಗೆ ಹಿಂದಿರುಗುತ್ತೀರೋ ಅಥವಾ ನನ್ನ ಶತ್ರು ಗಳಾಗಿದ್ದು ಮೂರು ಜನ್ಮಗಳ ಬಳಿಕ ಹಿಂದಿರುಗುತ್ತೀರೋ?’ ಎಂದು ಕೇಳಿದನಂತೆ. ಅವರು ‘ನಾವು ಶತ್ರುಗಳಾದರೂ ಚಿಂತೆಯಿಲ್ಲ. ಮೂರು ಜನ್ಮಗಳೇ ಸಾಕು. ಹಿಂದಿರುಗುತ್ತೇವೆ’ ಎಂದರಂತೆ. ಹೀಗೆ ಜಯವಿಜಯರು ಮೂರು ಜನ್ಮ ಗಳಲ್ಲಿ ವಿಷ್ಣುದ್ವೇಷಿ ರಾಕ್ಷಸರಾಗಿದ್ದು ಮತ್ತೆ ವೈಕುಂಠವನ್ನು ಸೇರಿದರು ಎಂಬುದು ನಾನು ಕೇಳಿದ ಕಥೆ. ಆದರೆ ಈ ಕಥೆಗೆ ಭಾಗವತದಲ್ಲಿ ಆಧಾರವಿಲ್ಲ. ಇತರ ಕಡೆ ಆಧಾರವಿರುವುದು ನನ್ನ ವಾಚನದಲ್ಲಿ ದೊರಕಿಲ್ಲ. ತಿಳಿದವರು ಈ ಏಳೇಳು ಜನ್ಮದ ಕಥೆಯನ್ನು ನನಗೆ ತಿಳಿಸಿದರೆ ನಾನು ಏಳೇಳು ಜನ್ಮ ಅವರಿಗೆ ಕೃತಜ್ಞನಾಗಿರುತ್ತೇನೆ. ಅಲ್ಲಿಯವರೆಗೆ, ಏಳು ಎಂಬ ಸಂಖ್ಯೆಗೆ ಇರುವ ಪ್ರಾಧಾನ್ಯ ಹೆಚ್ಚು ಎಂಬುದನ್ನು ಗಮನಿಸಿ ಕನ್ನಡದಲ್ಲಿ ಏಳೇಳು ಅಂತ ಮಾಡಿ ಕೊಂಡಿರಬಹುದು ಎಂದುಕೊಳ್ಳುತ್ತೇನೆ”.

ವೆಂಕಟಸುಬ್ಬಯ್ಯನವರಂಥ ಪ್ರಾಜ್ಞರೇ ಗೊತ್ತಿಲ್ಲವೆಂದು ಕೈಚೆಲ್ಲಿದ ಮೇಲೆ ನಮ್ಮಂಥ ಪಾಮರರ ಪಾಡೇನು? ಆದರೂ
ನಾನು ಪ್ರೊ.ಟಿ.ವಿ.ವೆಂಕಟಾಚಲ ಶಾಸೀಯವರ ‘ಶ್ರೀವತ್ಸ ನಿಘಂಟು’ವನ್ನೊಮ್ಮೆ ತೆರೆದು ನೋಡಿದೆ. ಅದರಲ್ಲೂ ಬೇರೆ ಸುಮಾರೆಲ್ಲ ವಿಷಯಗಳ ೭ರ ಪಟ್ಟಿಗಳಿವೆಯೇ ಹೊರತು ಸಪ್ತಜನ್ಮ ಎನ್ನುವುದೇನಿಲ್ಲ. ವಿಶ್ವ ಹಿಂದೂ ಪರಿಷತ್‌ನವರು ತುಂಬ ಹಿಂದೆ ಪ್ರಾತಃಸ್ಮರಣಮ್ ಎಂಬೊಂದು ಪುಟ್ಟ ಪುಸ್ತಕ ಪ್ರಕಟಿಸಿದ್ದರು. ಚಿಕ್ಕಂದಿನಲ್ಲಿ ಅದರಿಂದ ಕೆಲವು ಶ್ಲೋಕಗಳನ್ನು (ಹಿರಿಯರ ಒತ್ತಾಯಕ್ಕೆ ಮಣಿದು ಅರೆಮನಸ್ಸಿನಿಂದ) ಹೇಳುವ ಕ್ರಮವಿತ್ತು.

ಅದರಲ್ಲೊಂದು ‘ಸಪ್ತಾರ್ಣವಾಃ ಸಪ್ತ ಕುಲಾಚಲಾಶ್ಚ ಸಪ್ತರ್ಷಯೋ ದ್ವೀಪವನಾನಿ ಸಪ್ತ| ಭೂರಾದಿ ಕೃತ್ವಾ ಭುವನಾನಿ ಸಪ್ತ ಕುರ್ವಂತು ಸರ್ವೇ ಮಮ ಸುಪ್ರಭಾತಮ್||’ ಎಂಬ ಶ್ಲೋಕ ನೆನಪಿದೆ. ಏಳು ಸಮುದ್ರಗಳು, ಏಳು ಪರ್ವತಗಳು, ಏಳು ಋಷಿಗಳು, ಏಳು ದ್ವೀಪಗಳು, ಏಳು ಭುವನಗಳು ಅಂತೆಲ್ಲ ಉಲ್ಲೇಖ ಅದರಲ್ಲಿದೆಯೇ ಹೊರತು ಏಳು ಜನ್ಮಗಳ ಸುದ್ದಿಯಿಲ್ಲ. ‘ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್… ಎಂದು ಆರಂಭವಾಗಿ ೧೨ ಜ್ಯೋತಿರ್ಲಿಂಗಗಳನ್ನು ಹೆಸರಿಸುವ ಸ್ತೋತ್ರದಲ್ಲೂ ಕೊನೆಗೆ ‘ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ| ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ||’ ಎಂದೇನೋ ಇದೆ. ಅದೇನಿದ್ದರೂ ಆಮಿಷದ ನುಡಿ ಅಷ್ಟೇ. ಸಪ್ತ ಜನ್ಮಗಳ ವಿವರಗಳಿಲ್ಲ. ಅಲ್ಲದೇ ಕನ್ನಡದಲ್ಲಷ್ಟೇ ಬಳಕೆಯಲ್ಲಿರುವ ‘ಏಳೇಳು ಜನ್ಮ’ದ ಬಗ್ಗೆ ಸಂಸ್ಕೃತ ಶ್ಲೋಕಗಳಲ್ಲಿ ಹುಡುಕಿ ಪ್ರಯೋಜನವಿಲ್ಲ.

ಕೊನೆಗೂ ‘ಇಗೋ ಕನ್ನಡ’ದಲ್ಲೇ ಉತ್ತರ ಸಿಕ್ಕಿತು! ಪುಸ್ತಕದ ಪ್ರಸ್ತಾವನೆಯಲ್ಲಿ ವೆಂಕಟಸುಬ್ಬಯ್ಯನವರು ಹೀಗೆ ಬರೆದಿದ್ದಾರೆ: “ಏಳೇಳು ಜನ್ಮಗಳು ಎಂಬುದರ ಬಗ್ಗೆ ನಾನು ಅಂಕಣದಲ್ಲಿ ಬರೆದಿದ್ದ ಅಭಿಪ್ರಾಯವನ್ನು ಆಧರಿಸಿ ಓದುಗರೊಬ್ಬರು ಬರೆದ ಪತ್ರದಲ್ಲಿ ಸ್ವಾರಸ್ಯವಾದ ವಿಷಯವು ಅಡಗಿರುವುದರಿಂದ ಅದನ್ನು ಇಲ್ಲಿ ಗಮನಕ್ಕೆ ತರುತ್ತಿದ್ದೇನೆ. ಪತ್ರ ಹೀಗಿದೆ: ‘ಏಳೇಳು ಜನ್ಮದ ಕಥೆ ಏನೆಂದು ತಿಳಿಯಬಯಸಿದ್ದೀರಷ್ಟೆ? ನಾನೂ ಆ ಬಗ್ಗೆ ಸಾಕಷ್ಟು ಆಲೋಚಿಸಿದ್ದು ಹಾಗೂ ಸಮಾಲೋಚಿಸಿದ್ದು ತತಲವಾದ ನನ್ನ ಅಭಿಪ್ರಾಯ ಹೀಗಿದೆ: ಸಪ್ತ ದ್ವೀಪಗಳು, ಸಪ್ತ
ಧಾತುಗಳು, ಸಪ್ತ ನರಕಗಳು, ಸಪ್ತ ಮಾತೃಕೆಯರು, ಸಪ್ತ ಮಾರುತಗಳು, ಸಪ್ತರ್ಷಿಗಳು, ಸಪ್ತ ಲೋಕಗಳು, ಸಪ್ತ
ವರ್ಣಗಳು, ಸಪ್ತ ಸ್ವರಗಳು, ಸಪ್ತ ಸಮುದ್ರಗಳು, ಸಪ್ತಾಶ್ವಗಳು… ಈ ರೀತಿ ಏಳರ ಹಿರಿಮೆ ಕಂಡ ನಮ್ಮ ಜನಪದವು ಯಾವ ಆಧಾರದ ಬಗ್ಗೆಯೂ ಚಿಂತೆ ಮಾಡದೆ ಇನ್ನಷ್ಟು ಏಳರ ವರ್ಗಗಳನ್ನು ಸೃಷ್ಟಿಸಿತು.

ಏಳು ಹೆಡೆಗಳ ಸರ್ಪ, ಏಳು ಸುತ್ತಿನ ಕೋಟೆ, ಏಳು ಜನ್ಮ… ಹೀಗೆ. ಏಳು ಸಮುದ್ರದಾಚೆ ಇರುವ ರಾಕ್ಷಸ, ಅವನ ಏಳು ಸುತ್ತಿನ ಕೋಟೆಯೊಳಗೆ ಬಂಧಿತಳಾದ ರಾಜಕುಮಾರಿ, ಏಳು ಹೆಡೆಯ ಸರ್ಪದ ಕಾವಲಲ್ಲಿರುವ ಮಾಣಿಕ್ಯ, ಋಷಿಯ ಶಾಪದಿಂದ ಏಳು ಜನ್ಮ ಕಳೆದು ಕೀಳು ಜನ್ಮವೆತ್ತಿದ ರಾಕ್ಷಸನ ಶಾಪವಿಮೋಚನೆ, ಏಳು ಹಗಲು ಏಳು ರಾತ್ರಿ ಏಳು ಕುದುರೆಯ ಮೇಲೆ ಪ್ರಯಾಣಮಾಡಿ ರಾಜಕುಮಾರನು ಬಂಽತಳಾದ ರಾಜಕುಮಾರಿಯನ್ನು ಬಂಧಮುಕ್ತಗೊಳಿಸಿ ಮದುವೆಯಾಗುವುದು- ಈ ರೀತಿ ಮನೋರಂಜನೆಗಾಗಿ ನಮ್ಮ ಪೂರ್ವಿಕರು ಸೃಷ್ಟಿಸಿದ ಕಥೆಗಳಲ್ಲಿ, ಅಂಥ ಕಥೆ ಗಳಾಗಿ ರೂಪು ತಳೆದ ಅನೇಕ ಏಳುಗಳಲ್ಲೊಂದು ಈ ಜನ್ಮ. ಇದನ್ನೇ ಒತ್ತಿ ಹೇಳಲು ಏಳೇಳು ಜನ್ಮವಾಯಿತು.

ಏಳು ಹೆಡೆಗಳ ಸರ್ಪ, ಏಳು ಸಮುದ್ರ, ಏಳು ಸುತ್ತಿನ ಕೋಟೆಗಳಂತೆ ಘನಗಂಭೀರಘೋರವಾಗಲು ಏಳು ಜನ್ಮವು ಏಳೇಳು ಜನ್ಮವಾಯಿತು. ಅಂದು ಆ ರಾಕ್ಷಸನಿಗೆ ಏಳು ಜನ್ಮ ಕಳೆದು ಕೀಳು ಜನ್ಮವೆತ್ತಿದಾಕ್ಷಣ ಮೋಕ್ಷ ದೊರೆತರೆ ಇಂದು ನಮ್ಮ ಜನಗಳಿಗೆ ಏಳೇಳು ಜನ್ಮ ಕಳೆದರೂ ಬುದ್ಧಿ ಬರುವುದಿಲ್ಲ! ಹೌದು, ಅಂದಹಾಗೆ ತಾವು ನನಗೆ ಏಳೇಳು ಜನ್ಮ ಕೃತಜ್ಞನಾಗಿರುವುದು ಸಾಧ್ಯವೇ? ಈ ಜನ್ಮವೇ ತಮ್ಮ ಪಾಲಿನ ಕಡೆಯ ಜನ್ಮವಾಗಿದ್ದರೆ?’- ವಿಶ್ವಾಸದಿಂದ ಬರೆದ ಈ ಆತ್ಮೀಯವಾದ ಪತ್ರದಲ್ಲಿ ತಾತ್ತ್ವಿಕ ಚಿಂತನೆಯೂ ಅಡಗಿರುವುದರಿಂದ ಅದನ್ನು ಇಲ್ಲಿ ಮುದ್ರಿಸಲಾಗಿದೆ. ನಿಜವಾಗಿ ಈ ಸಪ್ತ ಶಬ್ದಕ್ಕೆ ಇರುವ ಪ್ರಾಧಾನ್ಯ ಮತ್ತು ಗೌರವ ನಮ್ಮ ಜನತೆಯಲ್ಲಿ ಅತ್ಯಪೂರ್ವವಾದುದು. ಸಪ್ತ ಕಪಾಲ, ಸಪ್ತಕುಮಾರಿಕಾವದಾನ, ಸಪ್ತಕೋಣ, ಸಪ್ತಗಂಗಾ, ಸಪ್ತಚಕ್ರ, ಸಪ್ತಚ್ಛಂದ, ಸಪ್ತಪದಿ, ಸಪ್ತರಶ್ಮಿ, ಸಪ್ತವ್ಯಸನ ಇತ್ಯಾದಿ. ಹೀಗಿರುವುದರಿಂದ ಮೇಲಿನ ಸಪ್ತದಲ್ಲಿರುವ ಚಿಂತನದ ಅಂಶಕ್ಕೆ ಅಧಿಕವಾದ ಬೆಲೆ ಬರುತ್ತದೆ.

ಈ ಬಗ್ಗೆ ನಿರ್ಮಮತೆಯಿಂದ ಆಲೋಚಿಸಬೇಕಾದದ್ದು ವಿದ್ವಾಂಸರಿಗೆ ಬಿಟ್ಟಿರುವ ವಿಷಯ.” ಓದುಗರು ಜ್ಞಾನಿ ಗಳಿರುತ್ತಾರೆ, ಜಾಣರಿರುತ್ತಾರೆ, ನಾವು ಊಹಿಸಿದ ಚೌಕಟ್ಟಿನಿಂದ ಹೊರಗೆಯೂ ಯೋಚಿಸಬಲ್ಲವರಿರುತ್ತಾರೆ ಎನ್ನುವುದನ್ನು ನಾನೂ ಯಾವತ್ತಿಗೂ ಅನುಮೋದಿಸುತ್ತೇನೆ. ‘ತಿಳಿರುತೋರಣ’ ಅಂಕಣ ನಿಂತಿರುವುದೇ ಅಂಥ ದೊಂದು ಅಡಿಪಾಯದ ಮೇಲೆ. ಕಳೆದವಾರದ ಅಂಕಣದಲ್ಲಿ ಮರವನ್ನು ಸುತ್ತುವ ಬಳ್ಳಿಗಳ ಬಗ್ಗೆ ಬರೆಯುತ್ತ
ಕೊನೆಯಲ್ಲೊಂದು ಜಾಣ್ಮೆಲೆಕ್ಕವನ್ನೂ ಸೇರಿಸಿದ್ದೆನಷ್ಟೆ? ನಾನಾದರೋ ಅದನ್ನು ಯಾವುದೋ ಜಾಲತಾಣದಿಂದ
ಎರವಲು ಪಡೆದಿದ್ದೆ ಮತ್ತು ಅಲ್ಲಿ ಅದರ ಉತ್ತರ ಸಹ ಗಣಿತ ಸಮೀಕರಣಗಳ ಮೂಲಕವಷ್ಟೇ ಪ್ರಸ್ತುತಪಡಿಸಿದ್ದಿತ್ತು.

ಅದನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಹೇಗೆ ಬರೆಯುವುದಪ್ಪಾ ಎಂದು ಸಣ್ಣದೊಂದು ಹಿಂಜರಿತವೂ ನನ್ನಲ್ಲಿ ತುಂಬಿತ್ತು. ಆದರೆ ಕಳೆದವಾರದ ಅಂಕಣ ಪ್ರಕಟವಾಗಿ ಒಂದೆರಡು ಗಂಟೆಗಳೊಳಗೇ ಬೆಂಗಳೂರಿನಿಂದ ರೇಖಾ ಬಿ.ಎಸ್. ಅವರಿಂದ ಚಿತ್ರಸಮೇತ ಸರಿಯುತ್ತರ ಬಂತು! ಜಾಣ್ಮೆಲೆಕ್ಕಕ್ಕೆ ಉತ್ತರವನ್ನು ಅವರು ಕಂಡು ಕೊಂಡರು ಎನ್ನುವುದಕ್ಕಿಂತಲೂ ಆ ಪ್ರಕ್ರಿಯೆಯನ್ನವರು ಎಷ್ಟು ಆನಂದಿಸಿದರೆಂದು ಅವರ ಸಂದೇಶದಲ್ಲಿ, ಜತೆಯಲ್ಲಿರುವ ಚಿತ್ರದಲ್ಲಿ, ಸೌಟಿನಲ್ಲೂ ಮೂಡಿಸಿರುವ ಸ್ಮೈಲಿಯಲ್ಲಿ ಗೊತ್ತಾಗುತ್ತದೆ: “ನಾನು ಮೊದಲು ಬಳ್ಳಿಗಳ ಚಿತ್ರ ಬರೆದೆ. ಬೇರೆಬೇರೆ ಪರ್ಮ್ಯುಟೇಷನ್ಸ್/ ಕಾಂಬಿನೇಷನ್ಸ್ ಪ್ರಯತ್ನಿಸಿದೆ. ಯಾಕೋ ಸರಿಹೋಗಲಿಲ್ಲ. ಆಮೇಲೆ ನೋಡಿದರೆ, ನೀವು ಕೊಟ್ಟ ಲೆಕ್ಕದಲ್ಲೇ ಒಂದು ಸಿಂಪಲ್ ಸುಳಿವು ಇತ್ತು, ಅದನ್ನೇ ಅನುಸರಿಸಿದೆ.

ಇವತ್ತು ಬೆಳಗ್ಗೆಯೇ ಸ್ವಲ್ಪ ಮೆಣಸಿನಪುಡಿ ಹುಳಿಪುಡಿಗಳನ್ನು ಮಾಡಲಿಕ್ಕೆಂದು ಮೆಣಸಿನಕಾಯಿ ಹುರಿಯುವುದಕ್ಕೆ ಮರದ ಸೌಟು ತೆಗೆದಿದ್ದೆ, ಅದು ಈ ರೀತಿ ಉಪಯೋಗಕ್ಕೆ ಬಂತು. ಯಾವ ಮರದ ಕೊಂಬೆಯನ್ನು ಕಡಿದು
ಮಾಡಿದ ಸೌಟೋ ಏನೋ ಇದು. ಈಗ ಮಾಧವಿ-ಮಾಲತಿಗಳಿಂದ ಸುತ್ತಿಸಿಕೊಂಡು ಒಳಗೊಳಗೇ ಖುಷಿಪಡ್ತಿದೆ ಅನ್ನಿಸಿತು. ಏಕೆಂದರೆ ಇದರ ಹಣೆಬರಹದಲ್ಲಿ ಬಾಣಲೆಗೆ ಬಿದ್ದು ಖಾರ ಮೆತ್ತಿಕೊಳ್ಳುವುದಷ್ಟೇ ಇದ್ದದ್ದು. ಮಾಲತಿ
ಮತ್ತು ಮಾಧವಿ ಒಟ್ಟು ೭ ಬಾರಿ ಪರಸ್ಪರ ಮುಖಾಮುಖಿ ಆಗುತ್ತಾರೆಂದು ಕಂಡುಕೊಂಡೆ. ಡಿಸೆಂಬರ್ ೨೨ರಂದು ಗಣಿತಜ್ಞ ಎಸ್.ರಾಮಾನುಜನ್ ಅವರ ಹುಟ್ಟುಹಬ್ಬದ ದಿನ, ಅವರಿಗೆ ಕಷ್ಟಕೊಡದೆ ಲೆಕ್ಕ ಸರಿಯಾಗಿಯೇ ಮಾಡಿದ್ದೇನೆಂಬ ಹೆಮ್ಮೆಯಿದೆ.

ಅಂದಹಾಗೆ ನಾನು ಇದುವರೆಗೆ ಬಳ್ಳಿಗಳ ಸುತ್ತುವಿಕೆಯ ಬಗ್ಗೆ ಗಮನವೇ ಕೊಟ್ಟಿರಲಿಲ್ಲ. ಮನೆಯ ಕೈತೋಟಕ್ಕೆ ಹೋಗಿ ನೋಡಿದೆ, ನಮ್ಮ ಮನೆಯಲ್ಲಿ ಇರೋ ಬಳ್ಳಿಗಳು ಕೆಲವು ಪ್ರದಕ್ಷಿಣಾಕಾರವಾಗಿವೆ! ವೀಳ್ಯದೆಲೆ, ಇನ್ನೊಂದು ಆಲಂಕಾರಿಕ ಬಳ್ಳಿ (ಸಸ್ಯಶಾಸ್ತ್ರೀ ಯ ಹೆಸರೆಲ್ಲ ನೆನಪಿಗೆ ಬರುತ್ತಿಲ್ಲ). ಆದರೆ ಮಲ್ಲಿಗೆ ಬಳ್ಳಿ ಕೆಳಗಿನಿಂದ ಮೇಲೆ ನೇರಕ್ಕೆ ಹೋಗಿ ದಾಸವಾಳದ ಗಿಡಕ್ಕೆ ಹಬ್ಬಿ ಅದನ್ನು ಎಡ ಬಲ ಎರಡು ಕಡೆಯಿಂದಲೂ ತಬ್ಬಿ ‘ಬಾಹುಬಂಧನ ಚುಂಬನ’ ಮಾಡಿ ದಾಸವಾಳದ ಗಿಡವನ್ನು ಕಂಗೆಡಿಸಿದೆ ಎಂಬೊಂದು ಗುಮಾನಿ ಇದೆ!”

ರೇಖಾ ಅವರಂತೆಯೇ ‘ನೋಡಿ ತಿಳಿ ಮಾಡಿ ಕಲಿ’ ಮೂಲಕ ಸರಿಯುತ್ತರ ಕಂಡುಕೊಂಡ ಇನ್ನಿಬ್ಬರು ಓದುಗರು
ಬೆಂಗಳೂರಿನಿಂದ ಸೀತಾ ವ್ಯಾಸಮುದ್ರಿ(ಎರಡು ಹುರಿಗಳನ್ನು ಒಂದು ಬಾಟಲಿಗೆ ಪ್ರದಕ್ಷಿಣವಾಗಿ ಒಂದನ್ನು, ಅಪ್ರದಕ್ಷಿಣವಾಗಿ ಇನ್ನೊಂದನ್ನು ಸುತ್ತುತ್ತ ಪ್ರಯೋಗ ಮಾಡಿ ಕಂಡುಕೊಂಡೆ ಎಂದು ಬರೆದು ಆ ಬಗ್ಗೆ ಒಂದು ಕವಿತೆಯನ್ನೂ ಹೆಣೆದವರು), ಮತ್ತು ಪುತ್ತೂರಿನಿಂದ ರೇವತಿ ಯು.ಎಂ(ಕೋಲಿಗೆ ಬಳ್ಳಿ ಸುತ್ತಿ ನೋಡಿದೆ ಎಂದು ಬರೆದವರು). ಬಳ್ಳಿಗಳ ಲೆಕ್ಕ ಬಿಡಿಸುವುದರಲ್ಲಿ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ! ಎನ್ನಲೇಬೇಕಾಗಿದೆ. ಹೊಸ ಕ್ಯಾಲೆಂಡರ್
ವರ್ಷಾರಂಭದ ಸಂದರ್ಭದಲ್ಲಿ ಓದುಗಮಿತ್ರರೆಲ್ಲರಿಗೂ ಇಪ್ಪತ್ತುಇಪ್ಪತ್ತೈದರ ಲೆಕ್ಕದಲ್ಲಿ ಶುಭಾಶಯಗಳು.

ಇದನ್ನೂ ಓದಿ: SrivathsaJoshi Column: ರಾಘವೇಂದ್ರ ಭಟ್ಟರ ಖಜಾನೆಯಿಂದ ಮತ್ತಷ್ಟು ರಸಪ್ರಸಂಗಗಳು