Friday, 20th September 2024

ಚಿನ್ನದ ಕಥೆಯೇ ಜಗತ್ತಿನ ಇತಿಹಾಸ

ಶಿಶಿರ ಕಾಲ

ಶಿಶಿರ‍್ ಹೆಗಡೆ ಶಿಕಾಗೋ

shishirh@gmail.com

ಚಿನ್ನ. ಜಗತ್ತಿನ ಎಲ್ಲ ಆರ್ಥಿಕ ಏರುಪೇರಿಗೆ, ಬಡತನ- ಶ್ರೀಮಂತಿಕೆಗೆ ಚಿನ್ನವೇ ಕಾರಣವೆನ್ನುವ ಮಾತಿದೆ. ಯಾವ ದೇಶದಲ್ಲಿ ಹೆಚ್ಚಿಗೆ ಚಿನ್ನವಿದೆಯೋ ಅದೇ ಶ್ರೀಮಂತ ಎನ್ನುವ ಅದೆಷ್ಟೋ ಸಿದ್ಧಾಂತಗಳಿವೆ.

ಯಾವುದೋ ಒಂದು ಭ್ರಷ್ಟ ವ್ಯಕ್ತಿಯ ಮೇಲೆ ದಾಳಿಯಾದಾಗ ಅಲ್ಲಿ ಅಷ್ಟು ಚಿನ್ನ ಸಿಕ್ಕಿತಂತೆ ಎನ್ನುವುದೇ ಅಲ್ಲಿನ ಹೈಲೈಟ್. ಅಲ್ಲಿ ಆ ವ್ಯಕ್ತಿಯ ಭ್ರಷ್ಟತೆಯನ್ನು ಅಳೆ
ಯುವುದೇ ಚಿನ್ನದ ತೂಕದ ಮೇಲೆ. ಎಲ್ಲ ತುಲಾಭಾರಕ್ಕಿಂತ ಚಿನ್ನದ ತುಲಾ ಭಾರ ಅತ್ಯಂತ ವಜ್ಜೆಯದು. ಹೆಂಡತಿಗೆ ಎಷ್ಟೇ ಪ್ರೀತಿ ತೋರಿಸಿದರೂ ಚಿನ್ನ ಎಷ್ಟು ಮಾಡಿಸಿದ್ದಾನೆ ಎನ್ನುವು ದಕ್ಕೆ ಒಂದು ಹೆಜ್ಜೆ ಹೆಚ್ಚಿಗೆ ತೂಕ. ಮದುವೆಯಲ್ಲಿ ಅಷ್ಟು ಚಿನ್ನ ಹಾಕಿದರಂತೆ ಎನ್ನುವ ಮಾತು ಇಡೀ ಮದುವೆಯ ಸಮಾರಂಭದ ಎಕನೊಮಿಕ್ಸ್ ಅನ್ನು ತೋರಿಸುತ್ತದೆ. ಹೀಗೆ ನಮ್ಮ ದೈನಂದಿನ ಜೀವನದಲ್ಲಿ ಚಿನ್ನವೆಂದರೆ ಎಲ್ಲಿಲ್ಲದ ಮಹತ್ವ. ಚಿನ್ನವೆಂದರೆ ಮೋಹ. ಹುಬ್ಬೇರುವುದು, ಹುಬ್ಬು ಗಂಟಿಕ್ಕುವುದು ಇವೆಲ್ಲವಕ್ಕೆ ಚಿನ್ನ ಕಾರಣ.

ಹೇಗೆ ಎಲ್ಲ ದುರಂತಕ್ಕಿಂತ ವಿಮಾನ ದುರಂತದ ಸುದ್ದಿಗೆ ಹೆಚ್ಚಿನ ಮೈಲೇಜ್ ಸಿಗುತ್ತದೆಯೋ ಹಾಗೇಯೆ ಎಲ್ಲ ದರೋಡೆಗಿಂತ ಚಿನ್ನದ ದರೋಡೆ ಎಲ್ಲಿಲ್ಲದ ಸುದ್ದಿ ಮಾಡುತ್ತದೆ. ಎಲ್ಲರಿಗೂ ಈ ಚಿನ್ನಕ್ಕೇಕೆ ಇಷ್ಟು ಕಿಮ್ಮತ್ತು ಎನ್ನುವ ಪ್ರಶ್ನೆ ಒಂದಿಂದು ಸಮಯದಲ್ಲಿ ನಮ್ಮಲ್ಲಿ ಪ್ರಶ್ನಾರ್ಥಕವಾಗಿ ಹುಟ್ಟಿಯೇ ಇರುತ್ತದೆ. ಅದಕ್ಕೆ ಅಷ್ಟು ಸುಲಭದಲ್ಲಿ ಸಿಗದ, ಅತ್ಯಂತ ಸುಂದರ ಲೋಹ, ಆ ಕಾರಣಕ್ಕೆ ಇಷ್ಟು ಬೆಲೆ, ಆ ಬೆಲೆಯಿಂದಾಗಿಯೇ ಈ ಲೋಹಕ್ಕೆ ಅಷ್ಟು ಮಹತ್ವದ ಸ್ಥಾನ ಎಂದು ಒಂದು ಸಾಮಾನ್ಯವಾದ ಉತ್ತರ.

ಆದರೆ, ಚಿನ್ನ ಹೇಳಿ ಕೇಳಿ ಒಂದು ಲೋಹ. ಈ ಲೋಹಕ್ಕೇ ಏಕೆ ಇಷ್ಟು ಬೆಲೆ? ಮನುಷ್ಯನ ಒಬ್ಸೇಷನ್, ಈ ಪರಿಯ ಗೀಳು ಈ ಲೋಹದ ಮೇಲೆಯೇ ಏಕೆ? ಉಳಿದೆಲ್ಲ ಲೋಹಕ್ಕಿಂತ ಇದೇ ಶ್ರೇಷ್ಠ, ಮೌಲ್ಯಯುತ ಏಕೆ? ಈ ಲೋಹಕ್ಕೆ ಸಿಕ್ಕ ಮಹತ್ವ ಇಂದು ನಿನ್ನೆಯದಲ್ಲ. ಇದು ರಾಜರ ಕಾಲಕ್ಕಿಂತ ಹಿಂದೆ ಹೋಗುವ ಇತಿಹಾಸ. ಹಾಗಂತ ಚಿನ್ನ ಮಾತ್ರ ಅತ್ಯಂತ ಸೀಮಿತತೆಯ ಲೋಹ ವೆಂದೇನ ಲ್ಲವಲ್ಲ. ಚಿನ್ನಕ್ಕಿಂತ ರೇರ್ ಮೆಟಲ್- ಅಪರೂಪದ ಲೋಹ ಬೇರಿನ್ನೊಂದು ಇಲ್ಲ ಎಂದಾದರೆ ಹೌದಾಗಿತ್ತು. ಆದರೆ, ಅದಕ್ಕಿಂತ ಕಡಿಮೆ ಪ್ರಮಾಣ ದಲ್ಲಿ ಭೂಮಿಯಲ್ಲಿ ಲಭ್ಯವಿರುವ ಲೋಹಗಳು ಹತ್ತಾರಿವೆ.

ಅದರಂತೆಯೇ ಅಷ್ಟೇ ಶುದ್ಧ ರೂಪದಲ್ಲಿ ಸಿಗುವ ಲೋಹ ಕೂಡ ಬೇರೆ ಬೇರೆ ಇವೆ. ಚಿನ್ನ ಒಂದು ಸೂಪರ್ ವಿದ್ಯುತ್ ವಾಹಕ ಹೌದು, ಆದರೆ ಅಷ್ಟೆಲ್ಲ ಒಳ್ಳೆಯ ವಿದ್ಯುದ್ವಹನಕ್ಕೆ ಚಿನ್ನವೇ ಆಗಬೇಕೆಂದೇನಿಲ್ಲವಲ್ಲ. ಇನ್ನು ಅದರ ಬಣ್ಣ ನಿಜವಾಗಿಯೂ ಚಿನ್ನದ ಬಣ್ಣ ಚೆಂದವೇ, ಆದರೆ ಅಂದ ಚಂದ ಎನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು. ಹಾಗೆ ನೋಡಿದರೆ ಚಿನ್ನದ ಬಣ್ಣಕ್ಕಿಂತ ತಾಮ್ರದ ಬಣ್ಣವೇ ಹೆಚ್ಚು ಚಂದ ಅನ್ನುವವರೂ ಇದ್ದಾರೆ.

ಅವರು ತಪ್ಪು, ಇವರು ಸರಿ ಎನ್ನುವಂತಿಲ್ಲ. ಸುಮಾರು ನಾಲ್ಕು ಸಾವಿರ ವರ್ಷದಿಂದ ಚಿನ್ನವೆಂದರೆ ಮನುಷ್ಯ ಸಮಾಜದಲ್ಲಿ ಹಣ, ಅಂತಸ್ತು, ಶ್ರೀಮಂತಿಕೆ, ಮೌಲ್ಯ. ಚಿನ್ನವನ್ನು ಮನುಷ್ಯ ಬಳಸಲು ಶುರುಮಾಡಿ ಸುಮಾರು ಆರು ಸಾವಿರ ವರ್ಷವಾಯಿತಂತೆ. ಅದಕ್ಕಿಂತ ಜಾಸ್ತಿ ಇತಿಹಾಸ ಚಿನ್ನಕ್ಕಿದ್ದರೂ ಇರಬಹುದು, ಆದರೆ ಅದೆಲ್ಲ ನಗಣ್ಯ. ಚಿನ್ನಕ್ಕೆ ಒಂದು ಗಣ್ಯತೆ ಎಂದು ಸಿಕ್ಕಿದ್ದು ಸುಮಾರು ನಾಲ್ಕು ಸಾವಿರ ವರ್ಷದ ಹಿಂದೆ. ಆದರೆ, ಚಿನ್ನ ನಿಜವಾಗಿಯೂ ಅಷ್ಟು ಸೀಮಿತವೇ?
ಅಥವಾ ಅದರ ಲಭ್ಯತೆ ಅಷ್ಟು ಸೀಮಿತವೇ? ಒಂದು ಕಾಲವಿತ್ತು- ಆಗ ಚಿನ್ನವೇ ಉಳಿದೆಲ್ಲ ಮನುಷ್ಯ ಹೊರತೆಗೆಯುವ ಲೋಹಕ್ಕಿಂತ ಅಪರೂಪದ ಲೋಹ ವಾಗಿತ್ತು.

ಆದರೆ, ಕಾಲಕ್ರಮೇಣ ಅದಕ್ಕಿಂತ ಅಪರೂಪದ ಲೋಹಗಳ ಪತ್ತೆಯಾಯಿತು. ಮನುಷ್ಯ ಅದನ್ನು ಭೂಮಿಯಿಂದ ಹೊರತೆಗೆಯಲು ಶುರುಮಾಡಿದ. ಆಗ ಚಿನ್ನದ ಬೆಲೆ ಬಿದ್ದು ಹೋಗುತ್ತದೆ- ಪ್ಲಾಟಿನಂ ಹೊಸ ಚಿನ್ನ ಎನ್ನುವ ಮಾತುಗಳು ಮುನ್ನೆಲೆಗೆ ಬಂದವು. ಆದರೆ, ಚಿನ್ನ ಇಂದಿಗೂ ಬೆಲೆ ಕಳೆದು ಕೊಂಡಿಲ್ಲ. ಚಿನ್ನಕ್ಕೆ ಚಿನ್ನವೇ ಸಾಟಿ. ಭೂಮಿಯ ಗರ್ಭದ ಲ್ಲಿರುವ ಎಲ್ಲ ಚಿನ್ನವನ್ನು ಹೊರತೆಗೆದರೆ ಇಡೀ ಭೂಮಿಗೆ ಸುಮಾರು ಹದಿಮೂರು ಇಂಚಿನ ಕವಚವನ್ನು ಮಾಡಿಸಿ ಹಾಕಬಹುದಂತೆ, ಅಷ್ಟು ಪ್ರಮಾಣದಲ್ಲಿದ್ದರೂ ಆ ಚಿನ್ನ ಸದ್ಯ ನಮಗೆಲ್ಲ ಅಲಭ್ಯ.

ಚಿನ್ನ- ಸುಂದರ, ಅತ್ಯಂತ ಅಪೇಕ್ಷಣೀಯ, ಮೌಲ್ಯ ಯುತ ಮತ್ತು ಇಂದಿಗೂ ಅಪರೂಪತೆಯನ್ನು ಕಾಪಾಡಿಕೊಂಡ ಒಂದು ಲೋಹ. ಚಿನ್ನದ ಮೋಹದ ಇತಿಹಾಸ
ಎನ್ನುವುದು ಅಷ್ಟು ಸಮಂಜಸವಾಗುವುದಿಲ್ಲ. ಇತಿಹಾಸ ಎಂದರೆ ಹಿಂದೆ ಹೀಗೆ ಇತ್ತು ಎಂದು. ಆದರೆ, ಚಿನ್ನದ ಮೋಹ ಇಂಗ್ಲಿಷಿನ ಪ್ರೆಸೆಂಟ್ ಫರ್ಫೆಕ್ಸ್ ಕಂಟಿನ್ಯು ಅಸ್ ಟೆನ್ಸ್. ಭೂತ – ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಕೂಡ ಇದರ ಮೋಹ ಕಡಿಮೆಯಾಗುವ ಯಾವುದೇ ಲಕ್ಷಣವಿಲ್ಲ. ಈ ಲೋಹದೆಡೆಗಿನ ಮೋಹ ಜಾಗತಿಕ ಕೂಡ ಹೌದು. ಜಗತ್ತಿನ ಯಾವುದೇ ಮೂಲೆಯ, ಭಾಷೆಯ ಜನರನ್ನೇ ತೆಗೆದು ಕೊಂಡರೂ ಚಿನ್ನಕ್ಕೆ ಅಷ್ಟೇ ಮಹತ್ವ ಮತ್ತು ಬೆಲೆ.

History of world is story of gold ಎನ್ನುವ ಮಾತಿದೆ. ಚಿನ್ನದ ಇತಿಹಾಸ, ಅದು ಮನುಷ್ಯ ಸಮಾಜದಲ್ಲಿ ಉಳಿದುಕೊಂಡು, ಮೌಲ್ಯವನ್ನು ಕಾಪಾಡಿ ಕೊಂಡು ಬಂದದ್ದು ನೋಡಿದರೆ ಈ ಮಾತನ್ನು ದೂಸ್ರಾ ಮಾತಿಲ್ಲದೆ ಒಪ್ಪಲೇಬೇಕು. ಮನುಷ್ಯನ ಚಿನ್ನದೆಡೆಗಿನ ಗೀಳು ನಮ್ಮ ಇತಿಹಾಸವನ್ನೇ ರೂಪಿಸಿದೆ. ನಾಗರಿಕತೆಯ ಹುಟ್ಟಿನ ಈ ಲೋಹದ ಮೋಹ ಕೂಡ ಹುಟ್ಟಿದ್ದು. ಅತ್ಯಂತ ಹಳೆಯ ಸಿಂಧೂ ನಾಗರಿಕತೆಯನ್ನೇ ತೆಗೆದುಕೊಳ್ಳಿ ಅಥವಾ ಈಜಿಪ್ಟ್ ನಾಗರಿಕತೆ ಯನ್ನೇ ತೆಗೆದು ಕೊಳ್ಳಿ, ಅಲ್ಲ ಚಿನ್ನವೆಂದರೆ ಎಲ್ಲಿಲ್ಲದ ಮೋಹ, ಚಿನ್ನವೆಂದರೆ ಅದೊಂದು ಶ್ರೇಷ್ಠತೆಯ ಸಂಕೇತ. ಈಜಿ ನಾಗರಿಕತೆಯಲ್ಲಿ ಚಿನ್ನವೆಂದರೆ ಅದು ಸೂರ್ಯನಿಂದ ಹುಟ್ಟಿದ್ದು ಎನ್ನುವ ನಂಬಿಕೆಯಿತ್ತು.

ಚಿನ್ನವೆಂದರೆ ಅವರಿಗೆ ದೇವರ ಮಾಂಸ ಮತ್ತು ಮೂಳೆ ಎಂದು. ನೈಲ್ ನದಿಯ ಅಕ್ಕ ಪಕ್ಕದಲ್ಲಿದ್ದ ಎಲ್ಲ ಪಂಗಡಗಳಲ್ಲಿ ಚಿನ್ನ ಎನ್ನುವುದು ದೇವರ ಇರುವಿಕೆಯ
ಪ್ರತೀಕ. ಈಜಿ ನಾಗರಿಕತೆಯಲ್ಲಿ ಯಾರ ನೆಲದಲ್ಲಿ ಚಿನ್ನದ ಇರುವು ಇದೆಯೋ ಅಲ್ಲಿ ದೈವತ್ವ ಹೆಚ್ಚಿದೆ ಎನ್ನುವ ನಂಬಿಕೆ ಇತ್ತು. ಅಂದ ಚಂದಕ್ಕಿಂತ ದೈವತ್ವದ ಕಾರಣದಿಂದಾಗಿ ಈಜಿನ ರಾಜರುಗಳು ಚಿನ್ನವನ್ನು ತಮ್ಮ ಅರಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಪಕ್ಕದ ಇನ್ನೊಂದು ರಾಜನಲ್ಲಿ ಹೆಚ್ಚಿಗೆ ಚಿನ್ನವಿದೆಯೆಂದರೆ ಉಳಿದ ರಾಜರು ಆ ಕಾರಣಕ್ಕಾಗಿಯೇ ಯುದ್ಧಕ್ಕೆ ನಿಲ್ಲುತ್ತಿರಲಿಲ್ಲ. ಅದಕ್ಕೆ ಅದೇ ಕಾರಣ – ಚಿನ್ನವಿರುವಲ್ಲಿ ಹೆಚ್ಚಿನ ದೈವತ್ವ ಎನ್ನುವ ನಂಬಿಕೆ.

ಈ ನಂಬಿಕೆಯ ಕಾರಣದಿಂದಾಗಿಯೇ ಅಲ್ಲಿನ ಮಮ್ಮಿಗಳ ಜೊತೆ ಕೂಡ ಚಿನ್ನವನ್ನು ಇಡಲಾಗುತ್ತಿತ್ತು. ಜನ್ಮಾಂತರದ ನಂಬಿಕೆಯಿದ್ದ ಈಜಿ ಜನರಲ್ಲಿ ನಂತರದ ಜೀವನದಲ್ಲಿ ಚಿನ್ನವನ್ನು ಜೊತೆ ಒಯ್ಯಬಹುದು ಎನ್ನುವ ನಂಬಿಕೆ. ಚಿನ್ನವೆಂದರೆ ಅಮರ – ಅಮರತ್ವಕ್ಕೆ ಚಿನ್ನವೇ ಸಾಥಿ. ಇದು ಈಜಿ ನಾಗರಿಕತೆಯ ಕಥೆಯಾದರೆ ಅತ್ತ ಸಂಬಂಧವೇ ಇಲ್ಲದ ದಕ್ಷಿಣ ಅಮೆರಿಕಾದ ಇಂದಿನ ಪೆರುವಿನ ಅಂದಿನ ಇಂಕಾ ನಾಗರಿಕತೆಯಲ್ಲೂ ಯಥಾವತ್ ಇಂಥದ್ದೇ ನಂಬಿಕೆಯಿತ್ತು. ಎಲ್ಲಿಯ ಈಜಿ
– ಎಲ್ಲಿಯ ದಕ್ಷಿಣ ಅಮೆರಿಕಾದ ಪೆರು. ಆ ನಾಗರಿಕತೆಯಲ್ಲಿ ಕೂಡ ಚಿನ್ನ ದೇವರ ಅಂಶ ಎನ್ನುವುದೇ ದಿಟ್ಟ ನಂಬಿಕೆಯಾಗಿತ್ತು. ಆ ಕಾರಣಕ್ಕೆ ಚಿನ್ನವನ್ನು ರಾಜರು ಗಳಷ್ಟೇ ಧರಿಸಬಹುದಿತ್ತು. ರಾಜರಲ್ಲದೇ ಬೇರೆಯವರು ಚಿನ್ನವನ್ನು ಮುಟ್ಟುವುದು ಕೂಡ ಅಪಾಯಕಾರಿ, ಒಮ್ಮೆ ಶುದ್ಧೀಕರಿಸಿದ ನಂತರ ಚಿನ್ನ ರಾಜರಲ್ಲದವರಿಗೆ ತಾಕಿದರೆ ಸಾವು ಬರುತ್ತದೆ ಎನ್ನುವುದು ಅಂದಿನ ನಂಬಿಕೆ. ಅಕ್ಕಸಾಲಿಗ ಕೂಡ ಚಿನ್ನವನ್ನು ಕೈಗವಸು ಹಾಕಿಯೇ ಮುಟ್ಟುತ್ತಿದ್ದ.

ಪ್ರಾಚೀನ ಗ್ರೀಸ್ ನಾಗರಿಕತೆಯಲ್ಲಿ ಚಿನ್ನವೆಂದರೆ ದೈವತ್ವ ಎನ್ನುವುದಕ್ಕಿಂತ ಸ್ವಲ್ಪ ವಿಭಿನ್ನ. ಚಿನ್ನವೆಂದರೆ ಅದು ಸ್ವರ್ಗದ ತುಂಡು. ಚಿನ್ನವೆಂದರೆ ದೇವರಲ್ಲ ಬದಲಿಗೆ ಆದರೆ ಸ್ವರ್ಗದ ವಸ್ತು ಎನ್ನುವ ಭಾವ ಹುಟ್ಟಿದಾಗಲೇ ಅದನ್ನು ಸ್ವಾಧೀನ ಪಡಿಸಿಕೊಳ್ಳುವ ಹಂಬಲಗಳೂ ಹುಟ್ಟಿಕೊಂಡದ್ದು. ಆ ಕಾಲದಲ್ಲಿ ಗ್ರೀಸ್ ಎಂದರೆ ಇಂದಿನ ಗ್ರೀಸ್ ನಂತಲ್ಲ. ಯಥೇಚ್ಛ ಆಹಾರದ ಲಭ್ಯತೆಯಿದ್ದ ಕಾಲ ಅದು. ಆಗ ಗ್ರೀಸ್ ನಲ್ಲಿ ಯಾರೂ ಹೆಚ್ಚಿನ ಶ್ರಮಪಡಬೇಕಾದದ್ದಿರಲಿಲ್ಲ. ನೆಲದಲ್ಲಿ ಹಣ್ಣು ತರಕಾರಿ ಯಥೇಚ್ಛ, ಕರಾವಳಿಯಂಚಿನಲ್ಲಿ ಯಥೇಚ್ಛ ಮೀನು – ಹೆಚ್ಚಿಗೆ ದೂರ ಸಮುದ್ರದೊಳಕ್ಕೆ ಹೊಕ್ಕ ಬೇಕೆಂದಿಲ್ಲ. ಅಲ್ಲಿ ಆಗ ಚಿನ್ನವೆಂದರೆ ವಿಶೇಷ ಆದರೆ ತುಟ್ಟಿಯಾಗಿರಲಿಲ್ಲ. ಗ್ರೀಸ್‌ನಲ್ಲಿ ದಿನಬಳಕೆಯ ವಸ್ತುಗಳನ್ನು ಚಿನ್ನದಲ್ಲಿಯೇ ಮಾಡುವ ಕಾಲವೊಂದಿತ್ತು.

ಭಾರತದಲ್ಲಿಯೂ ಒಂದು ಕಾಲದಲ್ಲಿ ಚಿನ್ನಕ್ಕೆ ಅಂಥದ್ದೇ ಸ್ಥಿತಿಯಿದ್ದದ್ದು ನಿಮಗೆ ಗೊತ್ತಿದ್ದದ್ದೇ. ಪಾಶ್ಚಾತ್ಯ ಇತಿಹಾಸಕಾರರ ಪ್ರಕಾರ ಸುಮಾರು ಎರಡೂವರೆ ಸಾವಿರ ವರ್ಷಗಳ ಮೊದಲು ಕಪ್ಪು ಸಮುದ್ರ ಮತ್ತು ಮೆಡಿಟರ್ರ‍ೇನಿಯನ್ ಸಮುದ್ರದ ಮಧ್ಯ ದಲ್ಲಿ ಸ್ಥಾಪಿತವಾದ ಲಿಡಿಯಾ ಸಾಮ್ರಾಜ್ಯ ಚಿನ್ನದ ಗಟ್ಟಿಗಳನ್ನು ಮೊದಲ ಬಾರಿ ನಾಣ್ಯಗಳಂತೆ ಬಳಸಿದ್ದು. ಆದರೆ ಅದೇ ಕಾಲದಲ್ಲಿ ಭಾರತದಲ್ಲಿ ಕೂಡ ಚಿನ್ನದ ಗಟ್ಟಿಗಳನ್ನು ವಹಿವಾಟಿಗೆ ಬಳಸಿದ ಕುರುಹುಗಳಿವೆ. ಅಲ್ಲಿಂದ ಇಲ್ಲಿಯವರೆಗೆ ಚಿನ್ನವೆಂದರೆ ಹಣ, ಸಂಪತ್ತು. ಈ ಕಾಲಘಟ್ಟದಲ್ಲಿಯೇ ಚಿನ್ನ ಶ್ರೇಷ್ಠ ಲೋಹದಿಂದ ಹಣವಾದದ್ದು. ಅದೇ ಸಮಯದಲ್ಲಿ ಮನುಷ್ಯನಲ್ಲಿ ಸ್ವಾಧೀನ ಮಾವ್ಭಾವ ಕೂಡ ಹೆಚ್ಚಿದ್ದು. ನೀವು ರುಪಾಯಿ ನೋಟನ್ನು ಸೂಕ್ಷ ವಾಗಿ ಗ್ರಹಿಸಿದ್ದಲ್ಲಿ I promise to pay the bearer the sum of ‰ rupees  ಎಂದು ಬರೆದು ಅದರ ಕೆಳಗೆ ರಿಸರ್ವ ಬ್ಯಾಂಕ್‌ನ ಗವರ್ನರ್ ಅವರ ಸಹಿ ಇರುತ್ತದೆ. ನೋಟು ಎಂದರೆ ಅಷ್ಟು ಹಣವನ್ನು ಸರಕಾರ ನೀಡಲು ಒಪ್ಪುತ್ತದೆ ಎನ್ನುವ ಒಡಂಬಡಿಕೆಯ ಪತ್ರ.

ಅಸಲಿಗೆ ನೋಟಿಗೆ ಸರಕಾ ರದ ಬೆಂಬಲವಿದ್ದರಷ್ಟೇ ಬೆಲೆ – ಅದಿಲ್ಲದಿದ್ದರೆ ಅದೊಂದು ಪೇಪರ್. ಆದರೆ, ಚಿನ್ನ ಹಾಗಲ್ಲ – ಚಿನ್ನಕ್ಕೇ ಬೆಲೆ ಅಲ್ಲಿ. ಅಲ್ಲಿ ಯಾರದೂ ಭರವಸೆ ಬೇಕಾಗಿಲ್ಲ. ಹೀಗೆ ಭರವಸೆಯ ಅವಶ್ಯಕತೆಯಿಲ್ಲದ ಹಣದ ಬಳಕೆ ಶುರುವಾಗಿದ್ದು ಆಗ. ಅಲ್ಲಿಂದಿಲ್ಲಿಯವರೆಗೂ ಚಿನ್ನಕ್ಕೆ ಚಿನ್ನವೇ ಸಾಟಿ. ಲಿಡಿಯಾ ಸಾಮ್ರಾಜ್ಯ ಅಥವಾ ಆ ಕಾಲಘಟ್ಟದ ಇತರ ರಾಜ್ಯಗಳಲ್ಲಿ ಬಳಸಲ್ಪಡುವ ನಾಣ್ಯಕ್ಕೆ ರಾಜ ಮುದ್ರೆ ಹಾಕುವ ಪದ್ಧತಿ ರೂಢಿಯಲ್ಲಿತ್ತು. ಈ ರಾಜ ಮುದ್ರೆ ಇದ್ದರೆ ಅದು
ಚಿನ್ನದ ತೂಕ ಮತ್ತು ಶುದ್ಧತೆಯ ಗ್ಯಾರಂಟಿ. ಇಂದಿನ ಹಾಲ್ಲ್ಮಾರ್ಕ್ ನಂತೆ. ಹಾಗಾಗಿ ಸಾಮಾನ್ಯ ಚಿನ್ನದ ಗಟ್ಟಿಗಿಂತ ರಾಜ ಮುದ್ರೆ ಇದ್ದ ಚಿನ್ನವೆಂದರೆ ಅದು ಪಕ್ಕಾ. ಆ ಕಾರಣಕ್ಕೆ ಬೆಲೆ ಸ್ಥಿರವಾಗಿಸಲು ರಾಜಮುದ್ರೆಯನ್ನು ಯಾರೂ ಫೇಕ್ ಮಾಡದಂತೆ ಮತ್ತು ಹಾಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ ಎನ್ನುವ ರೂಢಿ ಚಾಲ್ತಿಗೆ ಬಂತು. ಹೊಸ ಜಮಾನಾದ ನೋಟುಗಳು ನಂತರದಲ್ಲಿ ಅದನ್ನೇ ಚಿನ್ನಕ್ಕೆ ಬದಲು ಪೇಪರಿನ ಮೇಲೆ ಈ ರೀತಿ ಭರವಸೆ ನೀಡುವ ಪದ್ಧತಿ ರೂಪಗೊಂಡದ್ದು.

ಲಿಡಿಯಾದ ಅಂದಿನ ನಾಣ್ಯಗಳು ಬೆಳ್ಳಿಮಿಶ್ರಿತ ಚಿನ್ನವಾಗಿತ್ತು. ಈ ಬೆಳ್ಳಿ ಮಿಶ್ರಿತ ಚಿನ್ನ ಅಲ್ಲಿನ ನದಿಗಳಲ್ಲಿ ಸಹಜವಾಗಿ ಸಿಗುತ್ತಿತ್ತು. ಆ ಕಾರಣಕ್ಕೇ ಅದನ್ನೇ ನಾಣ್ಯ ವನ್ನಾಗಿ ಬಳಸಲು ಶುರುಮಾಡಿದ್ದು. ಆದರೆ ಈ ರೀತಿ ಸಹಜವಾಗಿ ಸಿಗುತ್ತಿದ್ದ ಮಿಶ್ರ ಚಿನ್ನದಲ್ಲಿ ಚಿನ್ನದ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುತ್ತಿತ್ತು. ಆ ಕಾರಣಕ್ಕೆ ಕ್ರಮೇಣ ನಾಣ್ಯದ ಬೆಲೆ ಕೂಡ ಸ್ಥಿರವಾಗಿರಲಿಲ್ಲ. ಹಾಗಾಗಿ ಶುದ್ಧ ಚಿನ್ನವನ್ನು ಬೆಳ್ಳಿಯಿಂದ ಪ್ರತ್ಯೇಕಿಸಿ ನಾಣ್ಯವನ್ನಾಗಿಸಿ ಬಳಸುವುದು ಲಿಡಿಯಾದ ರಾಜ ಕ್ರಿಸಸ್ ಸಮಯದಲ್ಲಿ ರೂಢಿಗೆ ಬಂತು.

ಇಂಗ್ಲಿಷಿನಲ್ಲಿ ಇಟಛಿoo ಎಂದರೆ ಶ್ರೀಮಂತ ಎನ್ನುವ ಅರ್ಥದಲ್ಲಿ ಇಂದಿಗೂ ಬಳಸಲು ಕಾರಣ ಇದೇ. ಸಂಪತ್ತು  ಎನ್ನುವ ಭಾವ ಜನರಲ್ಲಿ ಹುಟ್ಟಿದ ಸಮಯವೇ ಇದು. ಆದರೂ ಚಿನ್ನವೇ ಏಕೆ? ಬೇರೆ ಲೋಹವೇಕಲ್ಲ ಎನ್ನುವ ಪ್ರಶ್ನೆ ಹಾಗೆಯೇ ಉಳಿಯಿತು. ಪೆರಿಯೋಡಿಕ್ ಟೇಬಲ್ ನಲ್ಲಿರುವ ಎಲ್ಲ ಮೂಲಧಾತುಗಳ ಒಟ್ಟು ಸಂಖ್ಯೆ ೧೦೩. ಇಷ್ಟು ಧಾತುಗಳಲ್ಲಿ ಚಿನ್ನವೇ ಏಕೆ? ಈ ಮೂಲಧಾತುಗಳಲ್ಲಿ ಅನಿಲಗಳಾದ ಹೈಡ್ರೋಜನ್, ಆಮ್ಲಜನಕ ಇವೆಲ್ಲವನ್ನಂತೂ ಬಳಸುವಂತಿಲ್ಲ. ಅದು ಬಿಟ್ಟರೆ ಉಳಿದ ಐವತ್ತನಾಲ್ಕು ಧಾತು ಗಳು ಗಾಳಿ ಅಥವಾ ನೀರಿನ ಜೊತೆ ರಾಸಾಯನಿಕ ಕ್ರಿಯೆಯಿಂದ ಹಾಳಾಗುವಂಥವು. ಇನ್ನು ಉಳಿದ 45 ಧಾತುಗಳು ರೇಡಿಯೋ ಆಕ್ಟಿವ್. ಹಾಗಾಗಿ ಅದನ್ನು ಹಣವಾಗಿ ಬಳಸುವಂತಿಲ್ಲ. ಹೀಗೆ ಎಲ್ಲ ಸಲ್ಲದ ಮೂಲ ಧಾತುಗಳನ್ನು ಬದಿಗಿಟ್ಟರೆ ಕೊನೆಗೆ ಉಳಿಯುವುದು ಕೇವಲ ಐದು ಧಾತುಗಳು.

ಚಿನ್ನ, ಬೆಳ್ಳಿ, ರೇಡಿಯಮ, ಪ್ಲಾಟಿನಂ ಮತ್ತು ಪೊಲೆಡಿಯಮ. ರೋಡಿಯಮ್ ಮತ್ತು ಪೊಲೆಡಿಯಮ್ ಹದಿನೆಂಟನೇ ಶತಮಾನದ ವರೆಗೆ ಆವಿಷ್ಕಾರವೇ ಆಗಿರಲಿಲ್ಲ.
ಇನ್ನು ಪ್ಲಾಟಿನಂನ ಸಮಸ್ಯೆ ಎಂದರೆ ಅದನ್ನು ಕರಗಿಸಲು ಸುಮಾರು 3000’c ಉಷ್ಣತೆ ಬೇಕು. ಅಷ್ಟು ಉಷ್ಣತೆ ಸಾಧಿಸುವುದು ಹಿಂದಿನ ಕಾಲದಲ್ಲಿ ಸಾಧ್ಯವೇ ಇರಲಿಲ್ಲ. ಈ ಕಾರಣಕ್ಕೆ ಕೊನೆಗೆ ಉಳಿದುಕೊಂಡದ್ದು ಬರಿ ಬೆಳ್ಳಿ ಮತ್ತು ಚಿನ್ನ. ಇವೆರಡರಲ್ಲಿ ಅಪರೂಪದ ಲೋಹವೆಂದರೆ ಚಿನ್ನ. ಆ ಕಾರಣಕ್ಕೆ ಚಿನ್ನ ಈ ಪರಿಯ ಮಹತ್ವವನ್ನು ಆದಿ ಕಾಲದಲ್ಲಿ ಪಡೆದುಕೊಂಡದ್ದು.

ಅಲೆಕ್ಸಾಂಡರ್ ಈಜಿನಿಂದ ಭಾರತದವರೆಗೆ ಸಾಮ್ರಾಜ್ಯ ಸ್ಥಾಪಿಸಿದ್ದನಲ್ಲ- ಆಗ ಅಷ್ಟೂ ಜಾಗದಲ್ಲಿ ಒಂದೇ ಕರೆನ್ಸಿಯ ಬಳಕೆ ಚಾಲ್ತಿಯಲ್ಲಿತ್ತು. ಅಲ್ಲಿಂದ ಮುಂದೆ ಎಲ್ಲ ಕಡೆ ಚಿನ್ನದ ನಾಣ್ಯದ ಬಳಕೆ ಬೃಹತ್ ವಹಿವಾಟುಗಳಿಗೆ, ಅಂತಾರಾಷ್ಟ್ರೀಯ ಟ್ರೇಡ್ ಗೆ ಬಳಕೆಯಾಗಲು ಶುರುವಾಗಿದ್ದು. ಅಲ್ಲಿಂದಿನಲ್ಲಿಯವರೆಗೂ ಚಿನ್ನಕ್ಕಾಗಿಯೇ ಬಡಿದಾಡಿದ, ನೆಲಕಚ್ಚಿದ, ಸರ್ವನಾಶವಾದ ಅದೆಷ್ಟೋ ಸಾಮ್ರಾಜ್ಯಗಳು ಆಗಿ ಹೋಗಿವೆ. ವಿಜಯನಗರ ಸಾಮ್ರಾಜ್ಯ ಆದಿಯಾಗಿ ಬಹುತೇಕ ರಾಜ ಮನೆತನಗಳ ವೈಭವ, ಐಶ್ವರ್ಯ ಚಿನ್ನದಿಂದಲೇ ಮೊದಲಿಸುವುದಿದೆ.

ಬ್ರಿಟಿಷರು ಮತ್ತು ಇತರ ಯುರೋಪಿಯನ್ನರು ಕೊಳ್ಳೆ ಹೊಡೆದ ಚಿನ್ನಕ್ಕೆ ಲೆಕ್ಕವೇ ಇಲ್ಲ. ಇನ್ನು ನಾಗರಿಕತೆಯ ಬೆಳವಣಿಗೆಯಲ್ಲಿ, ಲಭ್ಯವಿರುವ ಇತಿಹಾಸದುದ್ದಕ್ಕೂ ಚಿನ್ನ ಎಲ್ಲ ಸಮಾಜದ, ಕಾಲಘಟ್ಟದ ಅವಿಭಾಜ್ಯ ಅಂಗವೇ ಆಗಿರುವುದು ಗಮನಾರ್ಹ. ಎಲ್ಲ ಇತಿಹಾಸವೂ ಚಿನ್ನದ ಸುತ್ತಲೇ ಒಂದಿಂದು ಕಾರಣಕ್ಕೆ ಗಿರಕಿ ಹೊಡೆಯುತ್ತದೆ. ಸ್ಥೂಲದೃಷ್ಟಿಯಿಂದ ನೋಡಿದರೆ ಚಿನ್ನವೆನ್ನುವ ಲೋಹದ ಅವಶ್ಯಕತೆಗಿಂತ ಅಲ್ಲ ಒಂದು ವಸ್ತು ವಿನಿಮಯಕ್ಕೆ ಬೇಕಿತ್ತು, ಅದು ಚಿನ್ನವಾಯಿತು
ಎನ್ನಬಹುದು.

ಚಿನ್ನವೆನ್ನುವ ಒಂದು ಲೋಹ ಜಗತ್ತನ್ನೇ ಇಷ್ಟು ಕಾಲ ಕಂಟ್ರೋಲ್ ಮಾಡಿದ ರೀತಿಯೇ ವಿಸ್ಮಯ. ಆರು ಸಾವಿರ ವರ್ಷದಿಂದ ಇಂದಿಗೂ ಚಿನ್ನವೆಂದರೆ ಅಷ್ಟೇ ಗೀಳು. ದಕ್ಷಿಣ ಆಫ್ರಿಕಾದ ಸಾವುಕಾ ಚಿನ್ನದ ಗಣಿ ನಾಲ್ಕು ಕಿಲೋಮೀಟರ್ ನೆಲದೊಳಕ್ಕಿದೆ. ಇಂದಿಗೂ ಇಲ್ಲಿ ನೆಲವನ್ನು ಇನ್ನಷ್ಟು ಆಳಕ್ಕೆ ಕೊರೆದು ಚಿನ್ನ ತೆಗೆಯಲಾಗುತ್ತದೆ. ಬಾವಿಯಲ್ಲಿ ಇಳಿದರೆ ತಂಪಿನ ಅನುಭವವಾಗುತ್ತದೆ – ಈ ಚಿನ್ನದ ಗಣಿ ಆ ತಂಪನ್ನು ಮೀರಿ ಭೂಮಿಯ ಅಂತರಾಳದ ಉಷ್ಣತೆಯಿಂದಾಗಿ ೫೫
ಡಿಗ್ರಿ ಸೆಲ್ಸಿಯಸ್. ಅಲ್ಲಿ ಬೃಹತ್ ಎಸಿ, ಕೃತಕ ಆಮ್ಲಜನಕ ಇಲ್ಲದೆ ಒಂದು ನಿಮಿಷ ಬದುಕುವುದೂ ಕಷ್ಟ.

ಇದು ಇಂದಿಗೂ ನಮ್ಮಲಿರುವ ಚಿನ್ನದ ಗೀಳಿಗೆ ಹಿಡಿದ ಕನ್ನಡಿಯಂತೆ ಕಾಣಿಸುತ್ತದೆ. ಯೂಟ್ಯೂಬ್‌ನಲ್ಲಿ GOLD : The story of man’s 6000 year obsession ಎನ್ನುವ ಒಂದು ಡಾಕ್ಯುಮೆಂಟರಿಯಿದೆ. ಈ ವಿಡಿಯೊ ಚಿನ್ನದ ಇತಿಹಾಸವೇ ಮನುಷ್ಯನ ಇತಿಹಾಸ ಎನ್ನುವುದನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸು ತ್ತದೆ. ಚಿನ್ನದ ಗೋಲ್ಡನ್ ಇತಿಹಾಸ ಮತ್ತು ಹೊಸ ಒಂದು ಜಗತ್ತು ನಿಮ್ಮೆದುರು ತೆರೆದುಕೊಳ್ಳುತ್ತದೆ. ಒಟ್ಟಾರೆ ಚಿನ್ನ ಕೇವಲ ಲೋಹವಾಗಿ, ಶೃಂಗಾರಕ್ಕೆ ಮಾತ್ರ ಸೀಮಿತವಾಗಿರದೆ ಇತಿಹಾಸದುದ್ದಕ್ಕೂ ತನ್ನ ಬೆಲೆಯನ್ನು ಕಾಪಾಡಿಕೊಂಡು ಬಂದಿರುವುದು, ಅದರ ಸುತ್ತಲೇ ಮನುಷ್ಯ ನಾಗರಿಕತೆಯ ಇತಿಹಾಸ ಬೆಳೆದದ್ದು ಅನನ್ಯವೇ ಸರಿ.