ದಾರಿದೀಪ
ಸುರೇಂದ್ರ ಪೈ, ಭಟ್ಕಳ
ವಿದ್ಯಾರ್ಥಿಗಳು ದಸರಾ ರಜೆ ಮುಗಿಸಿ ಶೈಕ್ಷಣಿಕ ವರ್ಷದ ದ್ವಿತೀಯಾರ್ಧಕ್ಕೆ ಕಾಲಿಡುವುದೇ ತಡ, ವಾರ್ಷಿಕ ಪರೀಕ್ಷೆಗಾಗಿ ಸಕಲ ಸಿದ್ಧತೆಗಳು ಶುರುವಾಗುತ್ತವೆ. ಕಳೆದ ಬಾರಿಯ ಬೋರ್ಡ್ ಪರೀಕ್ಷಾ ಫಲಿತಾಂಶದಿಂದ ತೀರಾ ಮುಜುಗರಕ್ಕೆ ಒಳಗಾದ ಶಿಕ್ಷಣ ಇಲಾಖೆಯು ಈ ಬಾರಿ ಉತ್ತಮ ಫಲಿತಾಂಶಕ್ಕಾಗಿ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ. ಆದರೆ ಇವನ್ನು ಜಾರಿಗೊಳಿಸುವ ಭರದಲ್ಲಿ ಹಲವು ಅವೈಜ್ಞಾನಿಕ ಕಾರ್ಯತಂತ್ರಗಳ ಮೊರೆ ಹೊಕ್ಕಿದೆ. ಇನ್ನೊಂದೆಡೆ ಖಾಸಗಿ ಶಾಲೆಗಳು ಗುಣಮಟ್ಟದ ಫಲಿತಾಂಶಕ್ಕಾಗಿ, ಪ್ರತಿಭಾವಂತ ಮಕ್ಕಳ ಕ್ರಿಯಾಶೀಲ
ಪ್ರವೃತ್ತಿಯನ್ನು ಹತ್ತಿಕ್ಕುವಂಥ ಕ್ರಿಯಾಯೋಜನೆಯನ್ನು ಜಾರಿಗೊಳಿಸಿವೆ. ಇವುಗಳ ಬಗ್ಗೆ ಒಂದು ಸಮಗ್ರವಾದ ಅವಲೋಕನದ ಅವಶ್ಯಕತೆಯಿದೆ.
ಶಿಕ್ಷಣ ಇಲಾಖೆಯ ಪ್ರಕಾರ, ಆಯಾ ವರ್ಷದ ಜೂನ್ ನಿಂದ ಮುಂದಿನ ವರ್ಷದ ಮಾರ್ಚ್ ತನಕ 10 ತಿಂಗಳ ಶಾಲಾ ಅವಧಿ ನಡೆಯಬೇಕು. ಇವುಗಳ ಮಧ್ಯೆ ಏಪ್ರಿಲ್ -ಮೇ ಬೇಸಗೆ ರಜೆ ಮತ್ತು ಅಕ್ಟೋಬರ್‌ನ ದಸರಾ ರಜೆ ಪ್ರತ್ಯೇಕ. ಇದು ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯನ್ನು
ಆಧಾರವಾಗಿಟ್ಟುಕೊಂಡು ರೂಪಿಸಲಾಗಿರುವ ಪದ್ಧತಿ. ಆದರೆ ಇಂದಿನ ಶೈಕ್ಷಣಿಕ ವ್ಯವಸ್ಥೆಯನ್ನೊಮ್ಮೆ ಅವಲೋಕಿಸಿದರೆ, ಬಹುತೇಕ ಖಾಸಗಿ ಶಾಲೆಗಳಲ್ಲಿ 9ನೇ ತರಗತಿಯ ಪಾಠಗಳನ್ನು ಫೆಬ್ರವರಿಯಲ್ಲೇ ಮುಗಿಸಿ, ಇಲಾಖೆಗೆ ತಿಳಿಯದ ಹಾಗೆ ಒಳಗಿಂದೊಳಗೇ 10ನೇ ತರಗತಿಯನ್ನು ಪ್ರಾರಂಭಿಸಿರುತ್ತಾರೆ.
ಇನ್ನು, ಏಪ್ರಿಲ್-ಮೇ ತಿಂಗಳ ಸುಡುಬಿಸಿಲನ್ನೂ ಲೆಕ್ಕಿಸದೆ ಮತ್ತು ಅಕ್ಟೋಬರ್ ದಸರಾ ರಜೆಯಲ್ಲೂ ‘ವಿಶೇಷ ತರಗತಿ’ ಹೆಸರಲ್ಲಿ ನಿರಂತರವಾಗಿ ಪಾಠ ಮಾಡುತ್ತಾ, ಅಕ್ಟೋಬರ್ ಅಂತ್ಯದ ವೇಳೆಗೇ 10ನೇ ತರಗತಿಯ ಪಠ್ಯಕ್ರಮ ಮುಗಿಸುವವರೂ ಇದ್ದಾರೆ. ಇಲಾಖೆಯ ನಿಯಮಗಳಿಗೆ ಮತ್ತು ಮಗುವಿನ ಮಾನಸಿಕತೆಗೆ ವಿರುದ್ಧವಾಗಿರುವ ಪರಿಪಾಠವಿದು.
ಇಂಥ ಕ್ರಮದಿಂದಾಗಿಯೇ, ನಿಧಾನಗತಿಯಲ್ಲಿ ಕಲಿಯುವ ಮಕ್ಕಳಲ್ಲಿ ವಿಷಯದ ಗ್ರಹಿಕೆ ಪರಿಪೂರ್ಣವಾಗಿ ಆಗದೇ, ಕಲಿಕೆ ಕುಂಠಿತವಾಗು ತ್ತಿರುವುದು; ಇಲ್ಲಿ ಬೇಸಗೆ ರಜೆ ಮತ್ತು ದಸರಾ ರಜೆಗಳು ಕಡಿತಗೊಂಡಿರುತ್ತವೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇಷ್ಟಕ್ಕೇ ಸುಮ್ಮನಾಗದೆ, ಕಳೆದ ಕೆಲವು ವರ್ಷಗಳಿಂದ ಪಾಲಕರ ಅಪೇಕ್ಷೆಯಂತೆ ಸಂಜೆಯ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಅಂದರೆ, ಶಾಲೆ ಬಿಟ್ಟ ನಂತರ ಸುಮಾರು 4 ಗಂಟೆಯಿಂದ ರಾತ್ರಿ 7-8 ಗಂಟೆಯವರೆಗೂ ಪರೀಕ್ಷಾ ತಯಾರಿಯ ಹೆಸರಲ್ಲಿ ನಡೆಯುವ ವಿಶೇಷ ತರಗತಿಗಳು. ಅಲ್ಲಿಗೆ, ನಿತ್ಯವೂ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟ ಮಕ್ಕಳು ರಾತ್ರಿ 7-8ರವರೆಗೆ ಬರೋಬ್ಬರಿ 10-11 ಗಂಟೆಗಳ ಕಾಲ ಪಾಠ-ಪ್ರವಚನಗಳಿಗೆ ಒಡ್ಡಿಕೊಳ್ಳಬೇಕಾದ ನಿರ್ಬಂಧ!
ಇಷ್ಟು ಸುದೀರ್ಘ ಅವಧಿಯ ಪರೀಕ್ಷಾ ತಯಾರಿ ನಮ್ಮ ಮಕ್ಕಳಿಗೆ ನಿಜವಾಗಿಯೂ ಬೇಕೇ? ಮಾರ್ಚ್ ಕೊನೆಯ ವಾರದಲ್ಲಿ ಬರುವ ಬೋರ್ಡ್ ಪರೀಕ್ಷೆಯ ತಯಾರಿಗಾಗಿ, ನವೆಂಬರ್ ನಿಂದ ಬರೋಬ್ಬರಿ ೫ ತಿಂಗಳು ಲಭಿಸುತ್ತವೆ. ಈ ಸಮಯದಲ್ಲಿ ನಿತ್ಯವೂ 45 ನಿಮಿಷದ ಏಳು ಪೀರಿಯೆಡ್‌ಗಳಲ್ಲಿ, ಎಲ್ಲಾ ಕಲಿಕಾ ಹಂತದ ಮಕ್ಕಳನ್ನು ತಿದ್ದಿ ತೀಡಿ ಪರೀಕ್ಷೆಗೆ ಸಜ್ಜು ಗೊಳಿಸಲು ಶಿಕ್ಷಕರಿಗೆ ಸಾಕಾಷ್ಟು ಕಾಲಾವಕಾಶ ಲಭಿಸುತ್ತದೆ
ಎಂಬುದನ್ನು ಕೆಲವರು ಮನಗಾಣುತ್ತಿಲ್ಲವೇಕೆ? ಪಾಲಕರಾದ/ಶಿಕ್ಷಕರಾದ ನಾವೆಲ್ಲಾ ನಮ್ಮ ಬಾಲ್ಯವನ್ನು ಎಷ್ಟು ಚೆನ್ನಾಗಿ ಅನುಭವಿಸಿದೆವು. ರಜೆಯಲ್ಲಿ ಅಜ್ಜ-ಅಜ್ಜಿಯ ಮನೆಗೆ ಹೋಗಿ ಆಡುತ್ತಾ, ಕುಣಿಯುತ್ತಾ, ನಲಿಯುತ್ತಾ, ಕೆರೆಯಲ್ಲಿ ಈಜುತ್ತಾ ಕಳೆದ ದಿನಗಳವು. ಹೀಗೆ ಮಕ್ಕಳ ವಯೋ
ಸಹಜ ಮೋಜು ಮತ್ತು ತುಂಟಾಟಕ್ಕೆ ಆಸ್ಪದ ಕೊಡದೇ, ಬಾಲ್ಯವನ್ನು ಆಸ್ವಾದಿಸುವುದಕ್ಕೆ ಬಿಡದೇ, ನಾವು ಹೇಳಿದಂತೆ ಕೇಳಬೇಕೆಂಬ ಧೋರಣೆಯಿಂದ ಮಕ್ಕಳ ಸುಂದರ ಬಾಲ್ಯವನ್ನು ಕಸಿದುಕೊಂಡಾಗಿದೆ. ಇಷ್ಟು ಸಾಲದೆಂಬಂತೆ, ಮಕ್ಕಳ ಪ್ರೌಢಾವಸ್ಥೆಯಲ್ಲೂ ಅದೇ ಧೋರಣೆ ಯಿಟ್ಟುಕೊಂಡು ಅವರ ಸ್ವಾಭಾವಿಕ ಬೆಳವಣಿಗೆಗೆ ನಾವೇ ಅಡ್ಡಿಪಡಿಸುತ್ತಿದ್ದೇವೆ.
ನಮ್ಮ ಮಕ್ಕಳಿಗೆ ನಿಜಕ್ಕೂ ‘ಸಂಜೆಯ ತರಗತಿ’ಗಳು ಬೇಕಿವೆಯೇ? ಆ ಹಣೆಪಟ್ಟಿಯ ಜೈಲಿನಲ್ಲಿ ಮಕ್ಕಳು ಬಂದಿಯಾಗಬೇಕಿರುವ ಅವಶ್ಯಕತೆ ಇದೆಯೇ? ತಮ್ಮ ಶಾಲೆಗೆ ಶೇ.ನೂರರಷ್ಟು ಫಲಿತಾಂಶ ಬರಬೇಕು, ತಮ್ಮ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಪಡೆಯುವಂತಾಗಬೇಕು ಎಂಬ ಹಂಬಲ ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಇರುತ್ತದೆ. ಇದು ತಪ್ಪಲ್ಲ ಬಿಡಿ. ಆದರೆ ಇಲ್ಲೊಂದು ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಬೇಕು. ಒಂದು ತರಗತಿಯಲ್ಲಿ ಬುದ್ಧಿವಂತರು, ನಿಧಾನ ವಾಗಿ ಕಲಿಯುವವರು, ಮಧ್ಯಮ ಮಟ್ಟದವರು ಹೀಗೆ ಎಲ್ಲ ತೆರನಾದ ವಿದ್ಯಾರ್ಥಿಗಳೂ ಇರುತ್ತಾರೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಕುರಿತು ಹೆಚ್ಚುವರಿ ಗಮನದ/ಬೋಧನೆಯ ಅಗತ್ಯವಿದೆ ಎಂಬ ಗ್ರಹಿಕೆಯೇನೋ ಒಪ್ಪುವಂಥದ್ದೇ; ಆದರೆ ಶೇ.85-90ಕ್ಕಿಂತ ಹೆಚ್ಚು ಅಂಕ ಪಡೆವ ಸಾಮರ್ಥ್ಯವಿರುವ ಪ್ರತಿಭಾವಂತ ಮಕ್ಕಳಿಗೂ ‘ಸಂಜೆಯ ವಿಶೇಷ ತರಗತಿ’ಯೆಂಬ ನಿರ್ಬಂಧವೇಕೆ? ಎಂಬುದು ಅರ್ಥವಾಗದ ಪ್ರಶ್ನೆ.
ಸಂಜೆಯ ತರಗತಿಗಳಲ್ಲೂ ಮಕ್ಕಳಿಗೆ ಸ್ವ-ಅಧ್ಯಯನಕ್ಕೋ, ಓದಿಸುವುದಕ್ಕೋ, ಅವರ ಪ್ರಶ್ನೆಗಳಿಗೆ ವೈಯಕ್ತಿಕವಾಗಿ ಉತ್ತರಿಸುವುದಕ್ಕೋ ಅಥವಾ ಪರೀಕ್ಷೆ ನಡೆಸುವುದಕ್ಕೋ ಅನುವು ಮಾಡಿಕೊಡಲಾಗುತ್ತದೆ. ಇವುಗಳ ಹೊರತಾಗಿ ಅಲ್ಲಿ ಇನ್ನೇನೂ ಸಾಧ್ಯವಿಲ್ಲ. ಇವೆಲ್ಲವೂ ಕಲಿಕೆಯಲ್ಲಿ ತೀರಾ ಹಿಂದುಳಿದ ಮಕ್ಕಳಿಗೆ ಸೂಕ್ತ ಎನ್ನಬಹುದು. ಆದರೆ ಪ್ರತಿಭಾವಂತರನ್ನೂ ಇಂಥ ತರಗತಿಗಳಿಗೆ ಅಟ್ಟುವುದರಿಂದ ಅವರಿಗೆ ಆಗುವುದು ಯಾತನೆಯೇ ವಿನಾ ಬೇರೇನಲ್ಲ. ಜತೆಗೆ ಅವರ ಸಾಮರ್ಥ್ಯವೂ ಪೋಲಾಗುತ್ತದೆ. ಒಳ್ಳೆಯ ಫಲಿತಾಂಶ ದಕ್ಕಬೇಕೆಂಬ ಹಪಹಪಿಯಲ್ಲಿ, ಮಕ್ಕಳಿಗೆ ಹೊರೆಯಾಗುವ ಇಂಥ ಅವೈಜ್ಞಾನಿಕ ವಿಧಾನಕ್ಕೆ ನಾವು ಜೋತುಬೀಳುವುದು ಎಷ್ಟರ ಮಟ್ಟಿಗೆ ಸರಿ?
Practice makes man perfect ಎಂಬ ಮಾತಿದೆ, ನಿಜ. ಆದರೆ, ವಿಷಯದ ಗ್ರಹಿಕೆಯಾಗದ ಹೊರತು ಮಕ್ಕಳನ್ನು ನಿರಂತರವಾಗಿ ಪರೀಕ್ಷೆಗೆ ಒಡ್ಡುವುದರಿಂದ ಏನನ್ನು ಸಾಧಿಸಲು ಸಾಧ್ಯ? ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಬೇಕಾದರೆ ಮೊದಲು ಮಕ್ಕಳಿಗೆ ವಿಷಯದ ಮೇಲೆ
ಹಿಡಿತವಿರಬೇಕು. ಅದು ಇದ್ದಲ್ಲಿ, ನಿತ್ಯದ ಏಳು ಪೀರಿಯೆಡ್ ಗಳಲ್ಲೇ ಅವರಿಗೆ ಬೇಕಾದ ಪರೀಕ್ಷೆ ನಡೆಸಿದರೆ ಸಾಕಾಗುತ್ತದೆ. ಇನ್ನು ಬಹುತೇಕ ಕಡೆ, ಸಂಜೆಯ ವಿಶೇಷ ತರಗತಿಯ ವೇಳೆ ಯಾವುದೋ ಯುಟ್ಯೂಬ್ ವಿಡಿಯೋ ತೋರಿಸಿ ಸುಮ್ಮನಾಗುತ್ತಾರೆ. ಇದನ್ನು ತೋರಿಸಲು ಈ ತರಗತಿಗಳೇ ಆಗಬೇಕೇ? ಮಕ್ಕಳೇ ಮನೆಯಲ್ಲಿ ಇದನ್ನು ನೋಡಲು ಸಾಧ್ಯವಿಲ್ಲವೇ? ಗ್ರಾಮೀಣ ಪ್ರದೇಶದ ಬಹುತೇಕ ಪಾಲಕರು, ಗುಣಾತ್ಮಕ
ಶಿಕ್ಷಣದ ಹಂಬಲದೊಂದಿಗೆ ಮಕ್ಕಳನ್ನು ತಾಲೂಕು-ನಗರ ಪ್ರದೇಶದ ಶಾಲೆಗಳಿಗೆ ಸೇರಿಸಿರುತ್ತಾರೆ. ಅಂಥ ಮಕ್ಕಳು ಅಲ್ಲಿಗೆ ಹೋಗಿ ಬರಲು ಸರಕಾರಿ ಬಸ್ ಅನ್ನು ಅವಲಂಬಿಸಿರುತ್ತಾರೆ. ಇಂಥ ಬಸ್ಸುಗಳು ಸಂಜೆ 6 ಗಂಟೆಯೊಳಗೆ ಹೊರಡುವುದು ವಾಡಿಕೆ.
ಹೀಗಿರುವಾಗ ರಾತ್ರಿ 7-8 ಗಂಟೆವರೆಗೆ ವಿಶೇಷ ತರಗತಿ ಮಾಡಿದರೆ, ಮಕ್ಕಳು ಖಾಸಗಿ ವಾಹನದಲ್ಲೋ ಅಥವಾ ಯಾರದ್ದಾದರೂ ಬೈಕ್‌ನಲ್ಲೋ ಮನೆಗೆ ತಲುಪ ಬೇಕಾಗುತ್ತದೆ. ಅಷ್ಟರಲ್ಲಿ ರಾತ್ರಿ 9-10 ಗಂಟೆಯಾದರೆ, ದೈಹಿಕ-ಮಾನಸಿಕ ಬಳಲಿಕೆಯಿಂದಾಗಿ ಊಟದ ನಂತರ ನಿದ್ರೆಗೆ ಜಾರುತ್ತಾರೆಯೇ ವಿನಾ ಇನ್ನೇನೂ ಮಾಡಲಾಗದು. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಮಾನಸಿಕ ಒತ್ತಡ ಉಂಟಾಗ ದಿರುತ್ತದೆಯೇ? ಎಲ್ಲಕ್ಕೂ ಮಿಗಿಲಾಗಿ, ಇಂದಿನ ಬಹುತೇಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಘಟ್ಟದಲ್ಲೇ, ಪ್ರವೇಶ ಪರೀಕ್ಷೆಯ ಹೆಸರಲ್ಲಿ ಹೆಚ್ಚು ಅಂಕ ಗಳಿಸುವ ಮಕ್ಕಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ (10ನೇ ತರಗತಿಯಲ್ಲಿ ಅವರು ಹೆಚ್ಚು ಅಂಕ ಗಳೊಂದಿಗೆ ಉತ್ತೀರ್ಣರಾಗಿ, ಶಾಲೆಗೆ 100% ಫಲಿತಾಂಶ ಬರಬೇಕಲ್ಲ, ಅದಕ್ಕೆ!). ಹೀಗಿರುವಾಗ ಅವರಿಗೇಕೆ ಸಂಜೆಯ ವಿಶೇಷ ತರಗತಿ? ಇದಕ್ಕೆಲ್ಲ ಬಹುಪಾಲು ಕಾರಣ ಪಾಲಕರೇ. ಅವರಿಗೆ ಸಂಜೆ ವೇಳೆ ಮನೆಯಲ್ಲಿ ಮಕ್ಕಳನ್ನು ನಿಭಾಯಿಸಲು, ಮೊಬೈಲ್‌ನಿಂದ ದೂರವಿರಿಸಲು ಸಾಧ್ಯವಾಗುತ್ತಿಲ್ಲ.
ತಮ್ಮ ಕೆಲಸವನ್ನು ನಿಭಾಯಿಸಬೇಕಾದ ಅನಿವಾರ್ಯತೆಯಿಂದಾಗಿ ಅವರಿಂದ ಮಕ್ಕಳಿಗೆ ಸಮಯ ನೀಡಲಾಗುತ್ತಿಲ್ಲ. ಅದಕ್ಕಾಗಿ ಅರ್ಧವರ್ಷ ಟ್ಯೂಷನ್‌ಗೆ, ಇನ್ನರ್ಧ ವರ್ಷ ಸಂಜೆಯ ವಿಶೇಷ ತರಗತಿಗೆ ಮೊರೆಹೋಗುತ್ತಾರೆ. ಇನ್ನು, ಹೆಚ್ಚುಹೊತ್ತು ಶಾಲೆಯಲ್ಲಿ ಕಳೆದರೆ ಹೆಚ್ಚು ಅಂಕ
ಬರುತ್ತದೆ ಎಂಬ ತಪ್ಪುಕಲ್ಪನೆಯಿದೆ ಕೆಲವರಲ್ಲಿ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ಖಾಸಗಿ ಶಾಲೆಯವರು ಪ್ರತ್ಯೇಕವಾದ ‘ಈವ್ನಿಂಗ್ ಕ್ಲಾಸ್ ಶುಲ್ಕ’ವನ್ನು ವಿಧಿಸುತ್ತಾರೆ. ಪಾಲಕರಿಗೆ, ‘ನಮ್ಮ ಮಕ್ಕಳು ಕಲಿಯಲಿ ಬಿಡಲಿ, ನೋಡಿಕೊಳ್ಳಲು ಶಿಕ್ಷಕರೆಂಬ ಕಾವಲುಗಾರರೊಬ್ಬರು ಇದ್ದಾರಲ್ಲ’
ಎಂಬ ನೆಮ್ಮದಿಯ ಜತೆಗೆ, ಒಂದೊಮ್ಮೆ ಅಂಕಗಳು ಕಡಿಮೆ ಬಂದರೆ, “ಅಲ್ರೀ, ಸಾವಿರಾರು ರುಪಾಯಿ ಶುಲ್ಕ ಕಟ್ಟಿದ್ದೇವೆ, ಬೆಳಗ್ಗೆ 9ರಿಂದ ರಾತ್ರಿ ೮ರವರೆಗೆ ಮಕ್ಕಳು ನಿಮ್ಮ ಬಳಿಯೇ ಇರುತ್ತಾರೆ, ನೀವೇನು ಮಾಡಿದ್ರಿ?” ಎಂದು ಶಾಲೆಯ ವರನ್ನೇ ರಾಜಾರೋಷವಾಗಿ ಪ್ರಶ್ನಿಸುವ ಅವಕಾಶ ಸಿಕ್ಕಂತಾಗುತ್ತದೆ.
ಹೀಗಾಗಿ ಅವರು, ಸಂಜೆ ತರಗತಿಯ ಶುಲ್ಕವನ್ನು ಕಟ್ಟುತ್ತಲೇ ತಮ್ಮ ಜವಾಬ್ದಾರಿಯನ್ನು ಶಾಲಾ ಶಿಕ್ಷಕರ ಮೇಲೆ ಹಾಕಿ ಕೈತೊಳೆದುಕೊಳ್ಳುತ್ತಾರೆ.
ಒಟ್ಟಿನಲ್ಲಿ, ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೆಯೇ ಕೇವಲ ಫಲಿತಾಂಶದ ದೃಷ್ಟಿಯಿಂದ ಅನಗತ್ಯ- ಅವೈಜ್ಞಾನಿಕ ಕಾರ್ಯತಂತ್ರ ಗಳನ್ನು ಅಳವಡಿಸಿಕೊಳ್ಳುತ್ತಾ, ಮಕ್ಕಳ ನೈಜ ಕಲಿಕೆಗೆ ಅವಕಾಶ ನೀಡದೇ, ಅವರಲ್ಲಿನ ಕ್ರಿಯಾಶೀಲತೆಯೇ ಕುಸಿಯುವಂತೆ ಮಾಡುತ್ತಿರುವ ಇಂದಿನ ಪ್ರೌಢಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಬೇಕಿದೆ. ‘ಪರೀಕ್ಷೆಗಾಗಿ ಮಾತ್ರ ಕಲಿಕೆ’ ಎಂಬ ಧೋರಣೆಯ ಬದಲಿಗೆ, ‘ಜೀವನಕ್ಕಾಗಿ ಕಲಿಕೆ’ ಎಂಬ ತತ್ವವನ್ನು ಒಳಗೊಂಡಿರುವ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಿದೆ.
(ಶಿಕ್ಷಕರು, ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Surendra Pai, Bhatkal: ಹಲಸಿನ ಎಲೆಯ ಕಟ್ಟೆ ಕಡುಬು