Saturday, 11th January 2025

Surendra Pai Column: ವಿಶ್ವಕ್ಕೆ ವಿವೇಕದ ಆನಂದ ನೀಡಿದ ಧೀಮಂತ

ತನ್ನಿಮಿತ್ತ

ಸುರೇಂದ್ರ ಪೈ, ಭಟ್ಕಳ

ನಮ್ಮ ದೇಶದ ಬಗ್ಗೆ ನಮಗೆಲ್ಲರಿಗೂ ಒಂದು ಕನಸು, ಚಿತ್ರಣ ಇರುತ್ತವೆ. ಶತಮಾನಗಳಿಂದಲೂ ಪರಕೀಯರ ಆಕ್ರಮಣಕ್ಕೆ ಒಳಗಾಗಿ ಕಂಗೆಟ್ಟ ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿ, ಭಾರತದ ಭವ್ಯ ಪರಂಪರೆ, ಇತಿಹಾಸ, ಗತವೈಭವವನ್ನು ಮರುಕಳಿಸುವಂತೆ ಮಾಡುವುದು ಸುಲಭದ ಕೈಂಕರ್ಯವಲ್ಲ. ಭಾರತವೆಂದರೆ ಹಾವಾಡಿಗರ ನಾಡು, ಗೊಡ್ಡು ಸನ್ಯಾಸಿಗಳ ಬೀಡು, ಅನಾಗರಿಕತೆ ಮತ್ತು ಮೂಢನಂಬಿಕೆಗಳ ಕೊಂಪೆ ಎಂದೆಲ್ಲಾ ಅಂದು ಕೊಂಡಿದ್ದ ಪಾಶ್ಚಾತ್ಯರಿಗೆ ಭಾರತದ ಸನ್ಯಾಸಿಯೊಬ್ಬರು ಕಣ್ತೆರೆಸಿದರು.

‘ಭಾರತವು ಅನಾಗರಿಕರ ರಾಷ್ಟ್ರವಲ್ಲ, ಬದಲಿಗೆ ನಾಗರಿಕತೆ ಎಂದರೇನು ಎಂಬುದನ್ನು ಜಗತ್ತಿಗೇ ಕಲಿಸಿದ ರಾಷ್ಟ್ರ’ ಎಂದು ತಿಳಿಸಿ, ಜ್ಞಾನದೀಕ್ಷೆಯನ್ನು ನೀಡಿದ ಆ ಮಹಾನ್ ಸಂತರೇ ಸ್ವಾಮಿ ವಿವೇಕಾನಂದರು. ಇಂದು (ಜ.12) ಅವರ 163ನೇ ಜನ್ಮದಿನ. ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾದ ವಿವೇಕಾನಂದರಿಗೆ ನಮ್ಮ ತತ್ತ್ವಶಾಸದ ವೈಭವವನ್ನು ಜಗದಗಲಕ್ಕೂ ಸಾರಿದ ಕೀರ್ತಿಯಿದೆ. ವಿವೇಕಾನಂದ ಎಂಬ ಹೆಸರಲ್ಲೇ ‘ವಿವೇಕ’ ಅಥವಾ ‘ಜ್ಞಾನ’ದ ಪುಳಕವಿದೆ, ಶಕ್ತಿಯಿದೆ, ಸೆಳೆತವಿದೆ. ಇವರ ಒಂದೊಂದು ಮಾತೂ ಬದುಕಿನ ಪ್ರತಿಕ್ಷಣಕ್ಕೂ ಸ್ಪೂರ್ತಿ.

1863ರ ಜನವರಿ 12ರಂದು ಕೋಲ್ಕತ್ತಾದ ಶ್ರೀಮಂತ ಬಂಗಾಳಿ ಕುಟುಂಬದಲ್ಲಿ ಜನಿಸಿದ ವಿವೇಕಾನಂದರ ಮೂಲ ಹೆಸರು- ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ. ಬಾಲ್ಯದಲ್ಲಿ ನರೇಂದ್ರ ಬಹಳ ತುಂಟನಾಗಿದ್ದು ವಿನೋದ-ಉಲ್ಲಾಸಗಳಲ್ಲಿ ಕಾಲ ಕಳೆಯುತ್ತಿದ್ದ. ಜತೆಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆಯೂ
ಅವನಿಗೆ ತೀವ್ರಾಸಕ್ತಿಯಿತ್ತು. ತಾಯಿ ಹೇಳುತ್ತಿದ್ದ ರಾಮಾಯಣ-ಮಹಾಭಾರತದ ಕಥೆಗಳು ನರೇಂದ್ರನ ಮನದ
ಮೇಲೆ ಅಚ್ಚಳಿಯದ ಪ್ರಭಾವ ಬೀರಿದವು. ದಿನಗಳೆದಂತೆ ಅಸೀಮ ಧೈರ್ಯ, ಬಡವರ ಬಗ್ಗೆ ಕನಿಕರ, ಪರಿವ್ರಾಜಕ ರನ್ನು ಕಂಡರೆ ಅಪಾರ ಆಕರ್ಷಣೆ ಈ ವಿಶೇಷ ಲಕ್ಷಣಗಳು ಅವನಲ್ಲಿ ಕಾಣಿಸಿಕೊಳ್ಳತೊಡಗಿದವು. ಯಾವುದೇ ಹೇಳಿಕೆಯನ್ನು ಹಾಗೇ ಒಪ್ಪದೆ, ಅದರ ಕುರಿತಾದ ಯುಕ್ತಿ-ಪ್ರಮಾಣಗಳ ಬಗ್ಗೆ ತಿಳಿಸುವಂತೆ ನರೇಂದ್ರ ಆಗ್ರಹಿಸುತ್ತಿದ್ದ.

ಪ್ರೌಢಹಂತಕ್ಕೆ ಬರುವಷ್ಟರಲ್ಲಿ ಕ್ರೀಡಾಪಟುವಿನ ಮೈಕಟ್ಟು, ಅನುರಣಿಸುವ ಧ್ವನಿ ಆತನದಾಯಿತು. ಕ್ರೀಡೆ, ತತ್ತ್ವಶಾಸ, ಸಂಗೀತ ವಿದ್ಯೆಗಳಲ್ಲಿ ಪ್ರಾವೀಣ್ಯ ಪಡೆದ. ಕಾಲೇಜು ಸೇರುವ ಹೊತ್ತಿಗೆ, ಪಾಶ್ಚಾತ್ಯ ಚಿಂತನೆಯನ್ನು ಅಭ್ಯಸಿಸಿ ಅದರ ಹಿರಿಮೆಯನ್ನೂ ಅರಿಯುವ ಅವಕಾಶ ಒದಗಿತು ಮತ್ತು ಇದು ನರೇಂದ್ರನಲ್ಲಿ ವಿಮರ್ಶಾತ್ಮಕ ಸ್ವಭಾವವು ನೆಲೆಗೊಳ್ಳಲು ಕಾರಣವಾಯಿತು. 19 ವರ್ಷದವರಿದ್ದಾಗಲೇ ತಾರ್ಕಿಕ ಶಕ್ತಿ, ತೀಕ್ಷ್ಣಬುದ್ಧಿ ಮತ್ತು ಕ್ಷಾತ್ರತೇಜವನ್ನು ಧರಿಸಿದ್ದ ವಿವೇಕಾನಂದರಿಗೆ ಪ್ರತಿಯೊಂದು ಪ್ರಶ್ನೆಗೂ ತಾರ್ಕಿಕ ಉತ್ತರವನ್ನು ನಿರೀಕ್ಷಿಸುವ ಹುಮ್ಮಸ್ಸಿತ್ತು. ‘ದೇವರು, ದೇವರು ಎಂದು ಹೇಳುತ್ತೀರಲ್ಲಾ, ಎಲ್ಲಿದ್ದಾನೆ ದೇವರು? ನನಗೆ ಪುರಾವೆ ಬೇಕು ತೋರಿಸಿ’
ಎಂದು ರಾಮಕೃಷ್ಣ ಪರಮಹಂಸರನ್ನು ಕೇಳಿ, ತಮ್ಮ ಕುತೂಹಲಕ್ಕೆ ಉತ್ತರ ದೊರೆತ ಬಳಿಕವೇ ಅವರನ್ನು ಗುರುಗಳೆಂದು ಸ್ವೀಕರಿಸಿ, ಪರಮಶಿಷ್ಯ ಎನಿಸಿಕೊಂಡವರು ವಿವೇಕಾನಂದರು.

‘ಜಡತನ’ ಎಂಬ ಬಳ್ಳಿಯಿಂದ ಬಂಧಿಸಲ್ಪಟ್ಟು ಲೋಕದ ಪರಿವೆಯೇ ಇಲ್ಲದೆ ನಿದ್ರೆಗೆ ಜಾರಿದಂತಿದ್ದವರನ್ನೆಲ್ಲಾ
‘ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ’ ಎಂಬ ಕರೆಯ ಮೂಲಕ ಬಡಿದೆಬ್ಬಿಸಿದ ವಿವೇಕಾನಂದರ ವ್ಯಕ್ತಿತ್ವದಲ್ಲಿ ಅದೇನೋ ಚುಂಬಕಶಕ್ತಿಯಿತ್ತು. ಹೀಗಾಗಿ ಸಾವಿರ ನದಿಗಳು ಹರಿದು ಕಡಲು ಸೇರುವಂತೆ, ಸಹಸ್ರ ಸಹಸ್ರ ಸಂಖ್ಯೆಯ ಜನರಲ್ಲಿ ‘ವಿವೇಕಾನಂದ’ ಎಂಬ ಮಹಾನ್ ಕಡಲನ್ನು ಸೇರುವ ಬಯಕೆ ಪುಟಿಯಲು ಶುರು ವಾಯಿತು. ದಿನಗಳೆದಂತೆ ಅಧ್ಯಾತ್ಮದತ್ತ ಹೆಚ್ಚೆಚ್ಚು ಒಲವು ಬೆಳೆಸಿಕೊಂಡ ವಿವೇಕಾನಂದರು ಲೌಕಿಕ ಸುಖಗಳನ್ನು ತ್ಯಜಿಸಿ ಸನ್ಯಾಸಿಯಾದರು.

ಭಾರತೀಯ ವೇದಾಂತ ಮತ್ತು ಯೋಗದ ತತ್ತ್ವಚಿಂತನೆಗಳನ್ನು ಜಗತ್ತಿಗೆ ಪರಿಚಯಿಸಲು ಸಂಕಲ್ಪಿಸಿದ ವಿವೇಕಾ ನಂದರು, 1893ರಲ್ಲಿ ಅಮೆರಿಕದ ಶಿಕಾಗೊದಲ್ಲಿ ನಡೆದ ‘ವಿಶ್ವ ಧರ್ಮ ಸಮ್ಮೇಳನ’ದಲ್ಲೂ ಪಾಲ್ಗೊಂಡರು. ಅಲ್ಲಿ ಅವರು ಮಾಡಿದ ಭಾಷಣ ಇಂದಿಗೂ ಪ್ರಸಿದ್ಧ. ಅದರಲ್ಲೂ ಅವರು ಆರಂಭದಲ್ಲಿ ಉದ್ಗರಿಸಿದ, ‘ಅಮೆರಿಕದ ನನ್ನ ಸೋದರ-ಸೋದರಿಯರೇ…’ ಎಂಬ ಸಾಲು ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ನಾಟಕೀಯತೆ ಇಲ್ಲದ ಆ ಸರಳ ಶಬ್ದಗಳಿಗೆ ಇಡೀ ಅಮೆರಿಕವೇ ತಲೆದೂಗಿತು.

ಹೀಗೆ ಲಕ್ಷಾಂತರ ಜನರ ಮನಗೆದ್ದ ವಿವೇಕಾನಂದರು, ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವನ್ನೇ ಶಾಶ್ವತ
ವಾಗಿ ಬದಲಾಯಿಸಿದರು ಎಂದರೆ ಅತಿಶಯೋಕ್ತಿಯಲ್ಲ. ಯುವಜನರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ವಿವೇಕಾ ನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಇದೇ ಕಾರಣಕ್ಕೆ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಯುವದಿನ’ವಾಗಿಯೂ ಆಚರಿಸಲಾಗುತ್ತದೆ. ರಾಷ್ಟ್ರಪ್ರೇಮ, ಭಾರತೀಯ ಸಂಸ್ಕೃತಿಯ ಅಪಾರ ಜ್ಞಾನವನ್ನು ಹೊಂದಿದ್ದ ವಿವೇಕಾನಂದರು ದೇಶದ ಮೂಲೆಮೂಲೆಗೂ ಸಂಚರಿಸಿ ಎಲ್ಲರಲ್ಲೂ ಸ್ಪೂರ್ತಿ ತುಂಬಿದರು. “ಕೇವಲ ಗಡ್ಡ-ಮೀಸೆ ಮೂಡಿಬಿಟ್ಟರೆ ಯುವಕರಾಗಿಬಿಡುವುದಿಲ್ಲ; ಜತೆಗೆ ಅಪಾರ ಜ್ಞಾನವನ್ನೂ ಸಂಪಾದಿಸಿ, ರಾಷ್ಟ್ರ ಹಿತಕ್ಕೋಸ್ಕರ ಸಮಯವನ್ನು ಮೀಸಲಿಟ್ಟು, ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.

ವ್ಯವಸ್ಥೆಯೊಂದನ್ನು ಸರಿದಾರಿಯಲ್ಲಿ ಕೊಂಡೊಯ್ಯುವತ್ತ, ಒಂದೊಮ್ಮೆ ವ್ಯವಸ್ಥೆ ಸರಿಯಿಲ್ಲದಿದ್ದರೆ ಯಾರಿಗೂ ಅಸಮಾಧಾನವಾಗದಂತೆ ಅದನ್ನು ವಿರೋಧಿಸಿ, ಸಮರ್ಥವಾಗಿ ಸರಿಪಡಿಸುವಂಥ ಸಾಮರ್ಥ್ಯವನ್ನು ಮೈಗೂಡಿಸಿ ಕೊಂಡು, ಎಂಥ ಸಂದರ್ಭವೇ ಬಂದರೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೇ ಬದುಕುವವನೇ ನಿಜವಾದ ಯುವಕ” ಎನ್ನುವ ಮೂಲಕ ವಿವೇಕಾನಂದರು ಸತ್ಯ ಮತ್ತು ಕರ್ತವ್ಯಪ್ರಜ್ಞೆಯ ಸಂದೇಶವನ್ನು ಸಾರಿದರು. “ನಿಜವಾದ ಬದ್ಧತೆಯುಳ್ಳ ನೂರು ಮಂದಿ ಯುವಕರನ್ನು ನನಗೆ ಕೊಡಿ, ನಾನು ಈ ದೇಶದ ದೆಸೆಯನ್ನೇ ಸಂಪೂರ್ಣ ಬದಲಾಯಿಸುತ್ತೇನೆ. ಪಠ್ಯಪುಸ್ತಕದಲ್ಲಿ ಇರುವುದಷ್ಟೇ ಜ್ಞಾನವಲ್ಲ,

ಅದರ ಜತೆಜತೆಗೆ ನಾವು ಸಂಪಾದಿ ಸಬೇಕಾಗಿರುವುದು ಲೋಕಜ್ಞಾನವನ್ನು. ಸಾಮಾನ್ಯಜ್ಞಾನ ಮತ್ತು ಲೋಕ ಜ್ಞಾನಗಳಿಲ್ಲದೆ ಕನಸಿನ ಭಾರತವನ್ನು ನಿರ್ಮಿಸಲಾಗದು” ಎಂದಿದ್ದರು ವಿವೇಕಾನಂದರು. ಆದರೆ, ಅವರು ಅಂದು ತಮ್ಮ ‘ಧ್ಯಾನಸ್ಥ’ ಕಂಗಳಲ್ಲಿ ಕಂಡ ಭಾರತವು ಇಂದು ನಮ್ಮ ಮುಂದಿದೆಯೇ ಎಂಬುದರ ಬಗ್ಗೆ ಆಲೋಚಿಸ ಬೇಕಾದ ಅನಿವಾರ್ಯತೆ ನಮಗೆ ಒದಗಿದೆ. ಯುವಜನರು ವಿವೇಕಾನಂದರ ಕನಸಿನ ಕೂಸುಗಳಾಗಿದ್ದರು.
ಯುವಜನರೆಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಆದರೆ ಇಂದಿನ ಯುವಜನರ
ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿದರೆ, ಭವ್ಯಭಾರತವನ್ನು ಕಟ್ಟುವ ಕನಸನ್ನು ಕೈಬಿಡಬೇಕಾದೀತೇ? ಎನಿಸುತ್ತದೆ.

ಏಕೆಂದರೆ, ಇಂದಿನ ಯುವಜನರಲ್ಲಿ ಹೆಚ್ಚಿನವರು ವಿವೇಕಾನಂದರ ಆಶಯಕ್ಕೆ ವಿರುದ್ಧವಾಗಿಯೇ ಬದುಕುತ್ತಿದ್ದಾರೆ.
ತಂಬಾಕು, ಗುಟ್ಕಾ, ಮದ್ಯ, ಸಿಗರೇಟು ಮುಂತಾದ ಮಾದಕ ವಸ್ತುಗಳಲ್ಲೇ ಪರಮಸುಖವನ್ನು ಕಂಡುಕೊಳ್ಳಲು ಹಾತೊರೆಯುತ್ತಾ, ಕ್ರೋಧ-ಅಸೂಯೆ-ಜಾತಿ ವೈಷಮ್ಯದ ಸುಳಿಯಲ್ಲೇ ಸಿಲುಕಿ ಸಾಮಾಜಿಕ ಸ್ವಾಸ್ಥ್ಯವು ಹದಗೆಡಲು
ಕಾರಣರಾಗುತ್ತಿದ್ದಾರೆ. ಬಾಹ್ಯಾಕರ್ಷಣೆಗಳಿಗೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ, ಮಾನವೀಯ
ಮೌಲ್ಯಗಳಿಗೆ ಬೆಲೆಕೊಡದೆ, ಕ್ಷಣಿಕ ಸುಖಕ್ಕಾಗಿ ಜೀವನವನ್ನೇ ಬಲಿಕೊಡುತ್ತಿದ್ದಾರೆ.

ಹಾಗಾದರೆ, ವಿವೇಕಾನಂದರ ಕನಸು ಕೇವಲ ಕನಸಾಗಿಯೇ ಉಳಿಯಬೇಕೇ? ಖಂಡಿತ ಇಲ್ಲ. ಯುವವನಸ್ಸುಗಳಲ್ಲಿ ಸೀಮೋಲ್ಲಂಘನದ ತವಕ ಹೆಚ್ಚಾಗಬೇಕು, ‘ನಮ್ಮಿಂದಲೂ ಏನಾದರೂ ಸಾಧನೆ ಸಾಧ್ಯವಿದೆ’ ಎಂಬ ಆತ್ಮವಿಶ್ವಾಸ ಉದ್ದೀಪನಗೊಳ್ಳಬೇಕು. ಸ್ವಾರ್ಥವನ್ನು ಬಿಟ್ಟು ಸಮಾಜದ ಕಡೆಗೆ ಲಕ್ಷ್ಯವನ್ನಿಡಬೇಕು. ಆಗ ಮಾತ್ರವೇ
ವಿವೇಕಾನಂದರ ಕನಸು ನನಸಾಗಲು ಸಾಧ್ಯ.

ವಿವೇಕಾನಂದರು ದೇಹತ್ಯಾಗ ಮಾಡುವ ಸಂದರ್ಭ ಬಂದಾಗ ಶಿಷ್ಯರೊಬ್ಬರು, “ಸ್ವಾಮೀಜಿ, ನೀವು ಹೋಗಲೇ
ಬೇಕೇ?” ಎಂದು ಕೇಳಿದಾಗ ವಿವೇಕಾನಂದರು, “ಹೌದು, ದೊಡ್ಡ ಮರದ ನೆರಳಿನಲ್ಲಿ ಇತರ ಗಿಡಗಳು ಬೆಳೆಯ ಲಾರವು. ಚಿಕ್ಕವರು ಬೆಳೆಯಲು ಅವಕಾಶ ಮಾಡಿಕೊಡುವುದಕ್ಕಾಗಿ ನಾನು ಹೋಗಲೇಬೇಕು” ಎಂದು ಉತ್ತರಿಸಿ ದರಂತೆ! ಸ್ವಾಮಿ ವಿವೇಕಾನಂದರು ಒಂದು ಶತಮಾನಕ್ಕೂ ಹಿಂದಿನಿಂದಲೂ ಒಂದು ಮಹಾನ್ ಪ್ರೇರಣೆಯಾಗಿ ಉಳಿದಿದ್ದೇಕೆ ಎಂಬುದನ್ನು ನಿದರ್ಶಿಸುವ ಇಂಥ ಅನೇಕ ಘಟನೆಗಳು ಅಧ್ಯಯನಕ್ಕೆ ಲಭ್ಯವಿವೆ. ಅವನ್ನು ಗ್ರಹಿಸಿ, ಮೈಗೂಡಿಸಿಕೊಂಡು, ಕಾರ್ಯರೂಪಕ್ಕೆ ತರುವ ಇಚ್ಛಾಶಕ್ತಿ ನಮ್ಮದಾಗಬೇಕಷ್ಟೇ.

‘ವಿವೇಕ’ ಎಂದರೆ ಜ್ಞಾನ, ಗ್ರಹಣಶಕ್ತಿ. ಜ್ಞಾನದಿಂದ ಉಂಟಾಗುವ ಸಂತಸವೇ ಆನಂದ. ಅದೇ ‘ವಿವೇಕಾನಂದ’.
ನಾವು ಗ್ರಹಿಸುವುದು ಮಾತ್ರವೇ ನಮ್ಮ ಪಾಲಿಗೆ ಅಸ್ತಿತ್ವದಲ್ಲಿರುತ್ತದೆ ಎಂಬುದನ್ನು ಅರಿಯುವುದು ಸಾರ್ವಕಾಲಿಕ
ಸತ್ಯದರ್ಶನ. ಈ ಸೃಷ್ಟಿಯ ಪ್ರತಿಯೊಂದರಲ್ಲೂ ಸಕಾರಾತ್ಮಕ ಶಕ್ತಿಯನ್ನು ಹೆಕ್ಕಿ ತೆಗೆಯುವ ಇಚ್ಛಾಶಕ್ತಿಯಿದ್ದ ಸ್ವಾಮಿ ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸುತ್ತಾ, ಅವನ್ನು ಮುಂದಿನ ತಲೆಮಾರಿಗೂ ಹಸ್ತಾಂತರಿಸುತ್ತಾ, ಭವ್ಯಭಾರತವನ್ನು ಕಟ್ಟುವತ್ತ ಸಾಗೋಣ…

ಇದನ್ನೂ ಓದಿ: Surendra Pai Column: ಎಲ್ಲಿಗೆ ಹೋದವು ಕಾಗೆಗಳು ?

Leave a Reply

Your email address will not be published. Required fields are marked *