ಚರ್ಚಾ ವೇದಿಕೆ
ಸುರೇಂದ್ರ ಪೈ, ಭಟ್ಕಳ
ವಿಶ್ವ ಆರೋಗ್ಯ ಸಂಸ್ಥೆಯು ಸಂಶೋಧನೆಗಾಗಿ ಬಳಸಿದ ಅಡಕೆಯ ಸ್ಯಾಂಪಲ್ ಅನ್ನು ಎಲ್ಲಿಂದ ಹಾಗೂ ಯಾರಿಂದ ಸಂಗ್ರಹಿಸಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಗುಟ್ಕಾ ಪ್ಯಾಕೆಟ್‌ನಿಂದ ಪಡೆದು ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಿ ವರದಿ ನೀಡಿದ್ದಾದರೆ, ಅಂಥ ವರದಿಯು ಮಾನ್ಯವಾಗುವುದಿಲ್ಲ. ಹಾಗಾಗಿ ಎಲ್ಲಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ ಎಂಬುದೇ ಇಲ್ಲಿ ಮಹತ್ವದ ಅಂಶವಾಗುತ್ತದೆ.
ಕಳೆದ ಹಲವು ವರ್ಷಗಳಿಂದ, ನಮ್ಮ ಮಲೆನಾಡಿನ ಅಡಕೆಯು ವಿಶ್ವ ಮಟ್ಟದಲ್ಲಿ ಸುದ್ದಿಯಲ್ಲಿದೆ. ಅಡಕೆ ತಿಂದರೆ ಬಾಯಿಯ ಕ್ಯಾನ್ಸರ್ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯವರು ಹೇಳುತ್ತಲೇ ಬಂದಿದ್ದಾರೆ. 2024ರ
ಅಕ್ಟೋಬರ್ 9ರಂದು ಬಿಡುಗಡೆಯಾದ ‘ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆಂಡ್ ಕ್ಯಾನ್ಸರ್’
ವರದಿಯಲ್ಲಿ ಅಡಕೆ ಕ್ಯಾನ್ಸರ್‌ಕಾರಕ ಎಂದು ಹೇಳಲಾಗಿದೆ.
‘ದಿ ಲ್ಯಾನ್ಸೆಟ್ ಆಂಕಾಲಜಿ’ ಎಂಬ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿದ್ದೇ ತಡ, ಅಡಕೆ ಎಲ್ಲರ
ಬಾಯಲ್ಲೂ ಓಡಾಡತೊಡಗಿತು! ಇದೇನೂ ಹೊಸತಲ್ಲ. ‘ಅಡಕೆ ಆರೋಗ್ಯಕ್ಕೆ ಹಾನಿಕಾರಕ’ ಎಂದು ಈ ಹಿಂದೆಯೂ ಬಿಂಬಿಸಿ ಜಾಗತಿಕವಾಗಿ ನಿಷೇಧಿಸುವ ಪ್ರಯತ್ನಗಳು ನಡೆದಿದ್ದಿದೆ. ಅಡಕೆಯೊಂದಿಗೆ ಇತರ ಹಾನಿಕಾರಕ ರಾಸಾಯ ನಿಕಗಳನ್ನು ಬೆರೆಸಿ ಸೇವಿಸುವುದರಿಂದ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸಿ ಬಳಸುವುದರಿಂದ ಕ್ಯಾನ್ಸರ್ ಬರಬಹುದೇನೋ. ಹಾಗಾಗಿ ವೀಳ್ಯದೊಂದಿಗೆ ಅಡಕೆಯನ್ನು ತಿಂದುಬಿಟ್ಟರೆ ಬಾಯಿಯ ಕ್ಯಾನ್ಸರ್ ಬರುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ.
ಮುಖ್ಯವಾಗಿ, ವಿಶ್ವ ಆರೋಗ್ಯ ಸಂಸ್ಥೆಯು ಸಂಶೋಧನೆಗಾಗಿ ಬಳಸಿದ ಅಡಕೆಯ ಸ್ಯಾಂಪಲ್ ಅನ್ನು ಎಲ್ಲಿಂದ ಹಾಗೂ ಯಾರಿಂದ ಸಂಗ್ರಹಿಸಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಗುಟ್ಕಾ ಪ್ಯಾಕೆಟ್‌ನಿಂದ ಪಡೆದು ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಿ ವರದಿ ನೀಡಿದ್ದಾದರೆ, ಅಂಥ ವರದಿಯು ಮಾನ್ಯವಾಗುವುದಿಲ್ಲ. ಹಾಗಾಗಿ ಎಲ್ಲಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ ಎಂಬುದೇ ಇಲ್ಲಿ ಮಹತ್ವದ ಅಂಶವಾಗುತ್ತದೆ. ಜತೆಗೆ, ಅದನ್ನು ಎಷ್ಟು ವರ್ಷಗಳ ಕಾಲ ‘ಕ್ಲಿನಿಕಲ್ ಟ್ರಯಲ್’ ಮಾದರಿಯಲ್ಲಿ ಅಧ್ಯಯನ ಮಾಡಿದ ನಂತರ ‘ಇದು ಕ್ಯಾನ್ಸರ್‌ಕಾರಕ’ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂಬುದನ್ನು ಬಹಿರಂಗ ಪಡಿಸದೇ, ಏಕಾಏಕಿ ‘ಅಡಕೆ ಕ್ಯಾನ್ಸರ್‌ಕಾರಕ’ ಎಂದರೆ ಹೇಗಾದೀತು?
ಅಡಕೆ ಕ್ಯಾನ್ಸರ್‌ಕಾರಕವೇ ಎಂಬುದನ್ನು ತಿಳಿಯಲು 2012ರಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ
ನಡೆಯುತ್ತಿದ್ದು, ‘ಅಡಕೆಯು ಆರೋಗ್ಯದಾಯಕ’ ಎಂಬ ವರದಿಯನ್ನು ಸಲ್ಲಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಕುಮಾರಿ ಮತ್ತು ಇತರರು 1974ರಲ್ಲಿ ಅಧ್ಯಯನ ನಡೆಸಿ, ‘ತಂಬಾಕುರಹಿತ ಅಡಕೆ ಮತ್ತು
ವೀಳ್ಯದೆಲೆಯ ಸೇವನೆಯಿಂದ ಯಾವುದೇ ಟ್ಯೂಮರ್ ಉಂಟಾಗಿರುವುದಕ್ಕೆ ಸಾಕ್ಷಿ ಇಲ್ಲ; ಬದಲಾಗಿ ಟ್ಯೂಮರ್‌ಗಳ
ಬೆಳವಣಿಗೆಯನ್ನು ತಡೆಯುವಲ್ಲಿ ಅದು ಯಶಸ್ವಿಯಾಗಿರುವುದು ಕಂಡುಬಂದಿದೆ’ ಎಂದು ವರದಿ ನೀಡಿದ್ದರು.
ಅಟ್ಲಾಂಟದಲ್ಲಿನ ‘ವಿನ್‌ಶಿಪ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಆಫ್ ಎಮೆರಾಯ್ ಯುನಿವರ್ಸಿಟಿ’ಯ 25 ಮಂದಿಯ
ತಂಡವು 2016ರಲ್ಲಿ ಅಧ್ಯಯನ ನಡೆಸಿ, “ಅಡಕೆಯಿಂದ ತೆಗೆದ ಸಾರವು ‘ಹೆಪಟೋ ಸೆಲ್ಯುಲರ್ ಕ್ಯಾನ್ಸರ್’ ಸಂಬಂಧಿತ ಟ್ಯೂಮರ್ ಬೆಳವಣಿಗೆಯನ್ನು ತಡೆಯುವ ಗುಣವನ್ನು ಹೊಂದಿದೆ” ಎಂದು ವರದಿ ನೀಡಿದೆ.
2022ರಲ್ಲಿ ನಿಟ್ಟೆ ವಿಶ್ವವಿದ್ಯಾಲಯವೂ ಸಂಶೋಧನೆ ನಡೆಸಿ ‘ಅಡಕೆ ಕ್ಯಾನ್ಸರ್ ಕಾರಕವಲ್ಲ’ ಎಂಬ ವಾದವನ್ನು ಪುಷ್ಟೀಕರಿಸಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ನಮ್ಮಲ್ಲಿ ‘ಐಸಿಎಂಆರ್’, ‘ಐಸಿಎಆರ್ ಮೈಸೂರು’ ಅಥವಾ ಭಾರತೀಯ ವಿಜ್ಞಾನ ಸಂಸ್ಥೆಗಳಿವೆ. ಈ ಯಾವಕ್ಕೂ ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಕಂಡುಬಂದಿಲ್ಲ; ಬದಲಾಗಿ ಅಡಕೆಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿಯಿದೆ ಎಂಬುದನ್ನು ಹಲವು ಸಂಸ್ಥೆಗಳು ಪತ್ತೆ ಹಚ್ಚಿವೆ.
ಸೈಟಾಕ್ಸನ್ ಬಯೋಸಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ನ ಪ್ರಯೋಗಾಲಯದಲ್ಲಿ ನೆಕ್ಸ್‌ಜೆನ್ ಸಂಸ್ಥೆಯು ನಡೆಸಿದ
ಸಂಶೋಧನೆಯಲ್ಲಿ, ‘ಪರಿಶುದ್ಧ ಅಡಕೆಯ ಹಾಲನ್ನು ವಿವಿಧ ಹಂತದ ಪ್ರಯೋಗಗಳಿಗೆ ಒಳಪಡಿಸಿದಾಗ, ಆಂಟಿ
ಆಕ್ಸಿಡೆಂಟ್, ಆಂಟಿ ಡಯಾಬಿಟಿಕ್ ವೈಶಿಷ್ಟ್ಯಗಳು ಮಾತ್ರವಲ್ಲದೆ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರ ನಿರೋಧಕ,
ಉರಿಯೂತ ನಿರೋಧಕ, ಗಾಯವನ್ನು ವಾಸಿಮಾಡುವ ಸೈಟೋಟಾಕ್ಸಿಕ್ ಅಂಶಗಳು/ಜೀವಶಾಸ್ತ್ರೀಯ ಚಟು ವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿವೆ’ ಎಂಬ ಅಂಶವು ಗೊತ್ತಾಗಿದೆ.
ಕ್ಯಾನ್ಸರ್ ಬರಲು ಕಾರಣ ‘ಕಾರ್ಸಿನೋಜೆನ್’ ಅಂಶ; ಇದು ಆನುವಂಶಿಕವಾಗಿಯೂ ಬರುವ ಸಾಧ್ಯತೆಯಿದೆ.
ಕಾರ್ಸಿನೋಜೆನ್ ಅಂಶವು ವ್ಯಕ್ತಿಯ ಡಿಎನ್‌ಎಯನ್ನು ಬದಲಾಯಿಸಿದಾಗ, ಸಾಮಾನ್ಯ ಜೀವಕೋಶಗಳನ್ನು
ಕ್ಯಾನ್ಸರ್ ಕೋಶಗಳಾಗಿ ಪರಿವರ್ತಿಸುವ ಸರಣಿ ಕ್ರಿಯೆಯನ್ನು ಅದು ಪ್ರಚೋದಿಸುತ್ತದೆ. ಆದರೆ ಅಡಕೆಯಲ್ಲಿ
‘ಕಾರ್ಸಿನೋಜೆನ್’ ಅಂಶವಿದೆಯೇ ಎಂಬುದಕ್ಕೆ ಆಧಾರವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ನಿರಂತರ ವರದಿಗಳ ಬಳಿಕ ಎಚ್ಚೆತ್ತ ಕೇಂದ್ರ ಸರಕಾರವು ಈಗ, ಕೇವಲ ಅಡಕೆ ಕ್ಯಾನ್ಸರ್ ಕಾರಕವೇ ಎಂಬುದರ ಅಧ್ಯಯನ ನಡೆಸಲು ಮುಂದಾಗಿದೆ; ಕಾಸರಗೋಡಿನ ‘ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್’ (ಐಸಿಎಆರ್) ಮತ್ತು ‘ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್’ ಇವುಗಳ ಜಂಟಿ ಸಹಯೋಗದಲ್ಲಿ 3 ವರ್ಷಗಳ ಅಧ್ಯಯನ ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರ ಇದಕ್ಕಾಗಿ 10 ಕೋಟಿ ರುಪಾಯಿಗಳನ್ನು ತೆಗೆದಿರಿಸಿದೆ.
‘ಏಮ್ಸ್’ನಂಥ ದೇಶದ ಪ್ರತಿಷ್ಠಿತ 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು ಈ ಅಧ್ಯಯನಕ್ಕೆ ಕೈ ಜೋಡಿಸಲಿವೆ. ಅಡಕೆಯನ್ನು ತಿನ್ನುವುದರಿಂದ ಹಲ್ಲುಗಳ ಕ್ಯಾನ್ಸರ್ ಸಂಭವಿಸುವುದೇ ಎಂಬ ಬಗ್ಗೆಯೂ ಅಧ್ಯಯನ ನಡೆಯಲಿದೆ.
ಆದರೆ, ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು. ಹೆಚ್ಚಿನ ಇಳುವರಿ ಪಡೆಯಲೆಂದು ರೈತರು ತಮ್ಮ ಬೆಳೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಈ ಪರಿಪಾಠದಿಂದಾಗಿ ಬೆಳೆಯು ತನ್ನ ಮೂಲಸತ್ವವನ್ನು ಕಳೆದುಕೊಂಡು ವಿಷಯುಕ್ತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಿಂತ ಮುಖ್ಯವಾಗಿ, ರೈತರಿಂದ ಬೆಳೆಯನ್ನು ಖರೀದಿಸುವ ಕಂಪನಿಗಳು, ಅವನ್ನು ಬಳಸಿಕೊಂಡು ತಾವು ತಯಾರಿಸುವ ವೈವಿಧ್ಯಮಯ ಆಹಾರೋತ್ಪನ್ನಗಳ ಉತ್ಪಾದನಾ ಹಂತದಿಂದ ಮೊದಲ್ಗೊಂಡು ಪ್ಯಾಕೇಜ್ ಹಂತದವರೆಗೆ, ಅವುಗಳ ಸಂರಕ್ಷಣೆಗಾಗಿ ಬಳಸುವ ರಾಸಾಯನಿಕಗಳಿಂದಾಗಿ ಆಹಾರವು ವಿಷಮಯವಾಗುವ ಸಾಧ್ಯತೆಯೇ ಹೆಚ್ಚು. ಇದಕ್ಕೆ ತಾಜಾ ಉದಾಹರಣೆ, ಭಾರತದ ಬಹುಬೇಡಿಕೆಯ ಎರಡು ಮಸಾಲ ಕಂಪನಿಗಳ ಉತ್ಪನ್ನಗಳಲ್ಲಿ (ಗರಂ ಮಸಾಲ, ಚಾಟ್ ಮಸಾಲ ಇತ್ಯಾದಿ) ‘ಎಥಿಲೀನ್ ಆಕ್ಸೈಡ್’ ಅಂಶವು ಪತ್ತೆಯಾಗಿದ್ದು. ಇದು ಕ್ಯಾನ್ಸರ್‌ಗೆ ಕಾರಣ ವಾಗುತ್ತದೆ ಎಂದು ಹಲವು ದೇಶಗಳು ಈ ಉತ್ಪನ್ನಗಳಿಗೆ ನಿಷೇಧ ಹೇರಿದವು ಎಂಬುದು ಗಮನಾರ್ಹ.
ರೈತರು ಬಳಸುವ ಕ್ರಿಮಿನಾಶಕಗಳಿಂದ ಹಿಡಿದು, ನಾವು ನಿತ್ಯವೂ ಬಳಸುವ ಬಹುತೇಕ ಆಹಾರ ಪದಾರ್ಥಗಳಲ್ಲಿ
ಹಾನಿಕಾರಕ ಅಂಶಗಳಿವೆ. ನಾವು ಸೇವಿಸುವ ಗಾಳಿ, ಕುಡಿಯುವ ನೀರು ಹೀಗೆ ಎಲ್ಲವೂ ಇಂದು ಕಲುಷಿತವಾಗಿವೆ.
ಒಟ್ಟಾರೆಯಾಗಿ, ಮನುಷ್ಯನ ಆಹಾರ ಸಂಸ್ಕೃತಿಯೇ ಇಂದು ಕಲಬೆರಕೆಯಾಗಿದೆ ಎಂದರೆ ತಪ್ಪಾಗಲಾರದು. ಪ್ರಕೃತಿಯಿಂದ ದೊರೆಯುವ ‘ಸಹಜ-ಸ್ವರೂಪದ’ ಉತ್ಪನ್ನಗಳು ರೋಗವನ್ನು ಉಂಟುಮಾಡಲಾರವು; ಆದರೆ ಮನುಷ್ಯನು ಅವಧಿಗೂ ಮುನ್ನ ಮತ್ತು ಹೆಚ್ಚೆಚ್ಚು -ಸಲನ್ನು ಪಡೆಯುವ ದುರಾಸೆಯಿಂದಾಗಿ ಭೂಮಿಗೆ ವಿವಿಧ ರೂಪಗಳಲ್ಲಿ ವಿಷವನ್ನು ಉಣಿಸುತ್ತಿದ್ದಾನೆ. ಅವೆಲ್ಲವೂ ಒಂದಲ್ಲಾ ಒಂದು ರೂಪದಲ್ಲಿ/ ಸಮಯದಲ್ಲಿ ಮನುಷ್ಯನ ದೇಹವನ್ನು ಪ್ರವೇಶಿಸಿ, ನಿಧಾನವಾಗಿ ಕ್ಯಾನ್ಸರ್‌ನಂಥ ರೋಗಕ್ಕೆ ಕಾರಣವಾಗುತ್ತಿವೆ.
‘ಹಸಿರುಕ್ರಾಂತಿ’ಗೆ ಹೆಸರುವಾಸಿಯಾಗಿರುವ ಪಂಜಾಬ್‌ನಲ್ಲಿ ಕ್ಯಾನ್ಸರ್ ರೋಗಿಗಳ ಪ್ರಕರಣ ಹೆಚ್ಚಾಗಿ ವರದಿ ಯಾಗಿರುವುದು ಇದಕ್ಕೊಂದು ನಿದರ್ಶನ. ಮನುಷ್ಯರು ಸೇವಿಸುವ ಆಹಾರ ಪದಾರ್ಥಗಳು ಮಾತ್ರವಲ್ಲದೆ ಸಾಕುಪ್ರಾಣಿಗಳಿಗೆ, ದನ-ಕರುಗಳಿಗೆ ಉಣಿಸುವ ಪಶು-ಆಹಾರಗಳು, ಹುಲ್ಲು/ ಮೇವು ಸಹ ವಿಷಮಯವಾಗು ತ್ತಿರುವುದರಿಂದ ಅವು ಕೂಡ ರೋಗಕ್ಕೆ ತುತ್ತಾಗುತ್ತಿವೆ. ಅವುಗಳ ಹಾಲು ಕುಡಿಯುವ ನಾವೂ ಪರೋಕ್ಷವಾಗಿ ವಿಷವನ್ನೇ ಸೇವಿಸುತ್ತಿದ್ದೇವೆ.
‘ಅಡಕೆಗೆ ಹೋದ ಮಾನ, ಆನೆ ಕೊಟ್ಟರೂ ಬಾರದು’ ಎಂಬುದೊಂದು ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ವಿಶ್ವ
ಆರೋಗ್ಯ ಸಂಸ್ಥೆಯು ಈ ಮಾತನ್ನು ಮತ್ತೊಂದು ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಅಂದರೆ, ಅಡಕೆಯ
ವಿಷಯದಲ್ಲಿ ರಾಜಕೀಯ ಮಾಡಿ, ಭಾರತದ ಈ ದೇಶೀಯ ಬೆಳೆಯ ಮೌಲ್ಯವು ಕುಸಿಯುವಂತೆ ಮಾಡುವ ಮೊದಲು, ಕ್ಯಾನ್ಸರ್ ಎಲ್ಲಿಂದ ಬರುತ್ತದೆ ಎಂಬುದನ್ನು ಅದು ಕಂಡುಕೊಂಡು ಸ್ಪಷ್ಟಪಡಿಸಬೇಕಿದೆ. ಒಂದು ವೇಳೆ, ಅಡಕೆ ಸೇವನೆಯಿಂದಲೇ ಕ್ಯಾನ್ಸರ್ ಬರುತ್ತದೆ ಎನ್ನುವುದಾಗಿದ್ದರೆ, ಹಲವು ದಶಕಗಳಿಂದಲೂ ತಾಂಬೂಲದ ರೂಪದಲ್ಲಿ ಅಡಕೆಯನ್ನು ನಿರಂತರವಾಗಿ ಬಳಸುತ್ತಾ ಬಂದಿರುವ ಮಲೆನಾಡು ಪ್ರದೇಶದ ಶೇ.50ಕ್ಕೂ ಹೆಚ್ಚು ಜನರಲ್ಲಿ ಕ್ಯಾನ್ಸರ್ ಕಾರಕ ಅಂಶ ಕಾಣಿಸಿಕೊಳ್ಳಬೇಕಿತ್ತಲ್ಲವೇ? ಹಾಗಿದ್ದರೆ ಅವರಿಗೇಕೆ ಅದು ಅಮರಿಕೊಳ್ಳಲಿಲ್ಲ? ಇಂಥ ಪ್ರಶ್ನೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಉತ್ತರ ನೀಡಬೇಕಿದೆ.
ಜಗತ್ತಿನಲ್ಲೇ ಅತಿಹೆಚ್ಚು ಮಾಲಿನ್ಯವನ್ನು ಹೊರಸೂಸುವ ದೇಶಗಳಲ್ಲಿ ಅಮೆರಿಕ ಪ್ರಸ್ತುತ ಅಗ್ರಸ್ಥಾನವನ್ನು ಪಡೆದಿದೆ.
ವಾತಾವರಣದೊಳಗೆ ಹಾನಿಕಾರಕ ಅನಿಲಗಳನ್ನು ಬಿಡುಗಡೆಗೊಳಿಸಿ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವು ದರ ಜತೆಗೆ, ಗಾಳಿಯ ಮೂಲಕ ‘ಮಾಲಿನ್ಯದ ಕ್ಯಾನ್ಸರ್’ ಜಗತ್ತಿಗೇ ಹಬ್ಬುವಂತೆ ಮಾಡುತ್ತಿದೆ ಅಮೆರಿಕ. ಇದನ್ನು ನಾವೇಕೆ ಪ್ರಶ್ನಿಸುತ್ತಿಲ್ಲ? ಭಾರತದ ಪ್ರಾಚೀನ ಆಹಾರ/ಔಷಧ ಪದ್ಧತಿಗಳ ಮೇಲೆ ಪೇಟೆಂಟ್ ಪಡೆಯುವಾಗ ಇಲ್ಲದ ಆರೋಪಗಳು ಈಗ ಕೇಳಿಬರಲು ಕಾರಣವೇನು? ಇಂಥ ಹತ್ತಾರು ಪ್ರಶ್ನೆಗಳಿಗೆ ಸಂಬಂಧಪಟ್ಟವರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಉತ್ತರವನ್ನು ನೀಡಬೇಕಿದೆ.
ಅತಿಯಾದರೆ ಅಮೃತವೂ ವಿಷವೇ. ಹಾಗಾಗಿ ನಾವು ಮೊದಲು ಪರಿಸರವನ್ನು ಉಳಿಸಬೇಕು. ಸ್ವಾಭಾವಿಕ,
ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಪರಿಸರ-ವಿರೋಧಿ ಕೃಷಿಯನ್ನು ಕೈಬಿಡಬೇಕು. ಅತಿಯಾಸೆಗೆ ಶರಣಾದರೆ ಎಲ್ಲವೂ ನಮ್ಮ ಕೈಮೀರಿ ಹೋಗುತ್ತದೆ ಎಂಬ ಅಪ್ರಿಯ ಸತ್ಯವನ್ನು ಇನ್ನಾದರೂ ಅರಿಯಬೇಕು.
(ಲೇಖಕರು ಶಿಕ್ಷಕರು)
ಇದನ್ನೂ ಓದಿ: Surendra Pai, Bhatkal: ಹಲಸಿನ ಎಲೆಯ ಕಟ್ಟೆ ಕಡುಬು