Sunday, 29th September 2024

Srivathsa joshi Column: ಮಾತ್ರೆಗಳ ಲೆಕ್ಕವನ್ನು ಮಾತ್ರೆಗಳ ಲೆಕ್ಕದಿಂದಲೇ ಬಿಡಿಸಿದವರು !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅರವಿಂದ ಸಿಗದಾಳು, ಮೇಲುಕೊಪ್ಪ- ಇವರ ಪತ್ರದಿಂದಲೇ ಆರಂಭಿಸೋಣ. ಇಲ್ಲ, ಲೇಖನದ ಆರಂಭಕ್ಕೆ ‘ಅ’ ಅಕ್ಷರ ಸರಿಯಾಗುತ್ತದೆ ಎಂಬ ಕಾರಣದಿಂದಲ್ಲ. ಹಾಗೆ ನೋಡಿದರೆ ನಾನಿಂದು ಯಾವ ಎರಡು ಪತ್ರಗಳನ್ನು ಹೈಲೈಟ್ ಮಾಡಬೇಕೆಂದಿದ್ದೇನೋ ಅವು ಅನುಕ್ರಮವಾಗಿ ಅರ್ಚನಾ ಹೆಬ್ಬಾರ್ ಮತ್ತು ಅಕ್ಷಯ ಮರಾಠೆ ಎಂಬ ಓದುಗರಿಂದ ಬಂದಂಥವು. ಎರಡೂ ‘ಅ’ ಅಕ್ಷರದಿಂದ ಆರಂಭವಾಗುವ ಹೆಸರುಗಳೇ. ಆದರೆ ಪೀಠಿಕೆಗೆ ಅರವಿಂದರ ಈ ಪತ್ರವೇ ಬಹುಯೋಗ್ಯ ಅನಿಸಿತು. ಕಳೆದ ವಾರದ ಅಂಕಣದಲ್ಲಿ ಕೇಳಿದ್ದ ಮಾತ್ರೆಗಳ ಜಾಣ್ಮೆಲೆಕ್ಕಕ್ಕೆ ಅವರು ಸರಿಯುತ್ತರ ಬರೆದ ತಮಾಷೆ ರೀತಿಯನ್ನು ಆನಂದಿಸಿ: “ವಾರ್ಧಕ್ಯದಲ್ಲಿ ಕೈ ನಡುಗುವಾಗ ಇಂಥ ಅಚಾತುರ್ಯ ಆಗುವುದು ಸಹಜ. ‘ಬಿ’ ವಿಟಮಿನ್‌ನ ಮಾತ್ರೆ ಬಾಟ್ಲಿಯಿಂದ ಒಂದರ ಬದಲಿಗೆ ಎರಡು ಬಿತ್ತು ಅಂತ ಡೋಂಟ್‌ವರಿ ಮಾಡ್ಕೋಬೇಡಿ!

ಇನ್ನೊಂದು ‘ಎ’ ವಿಟಮಿನ್ ಮಾತ್ರೆಯನ್ನು ಅಂಗೈಯಲ್ಲಿ ತೆಗೆದುಕೊಳ್ಳಿ. ಈಗ ನಿಮ್ಮ ಕೈಯಲ್ಲಿ ಎರಡು ವಿಟಮಿನ್ ‘ಎ’, ಎರಡು ವಿಟಮಿನ್ ‘ಬಿ’ ಮಾತ್ರೆಗ ಳಾಯ್ತು. ಅಂದರೆ ಮೂರು ಮಾತ್ರೆಗಳಿದ್ದುದು ನಾಲ್ಕಾಯ್ತು. ಭಾಮಿನಿ ಷಟ್ಪದಿ ಯಲ್ಲಿ ಮೊದಲು ಮೂರು ಇದ್ದ ಮಾತ್ರೆ ಎರಡನೆಯ ಪದಕ್ಕೆ ನಾಲ್ಕಾಗುವ ಹಾಗೆ! ಈಗ ನಿಮ್ಮ ಭಾಮಿನಿಯನ್ನು ಕರೆಯಿರಿ. ಭಾಮಿನಿ ಮನೆಯಲ್ಲಿ ಇಲ್ಲದಿದ್ರೆ ಹಿರೀಮಗಳು ಕುಸುಮಳನ್ನೋ, ಕೊನೆಯ ಮಗಳು ಪರಿವಧಿನಿಯನ್ನೋ ಕರೆದರೂ ಆದೀತು. ಒಟ್ಟಿನಲ್ಲಿ ಯಾರಾದರೂ ಒಬ್ಬರನ್ನು ಕರೆಯಿರಿ (ಮಗ ‘ಶರ’ತ್ ಅನು‘ಭೋಗ’ದಲ್ಲಿದ್ದ ಮನೆಯ ಲೀಸ್ ಅಗ್ರಿಮೆಂಟನ್ನು ರಿನ್ಯುಯಲ್ ಮಾಡುವುದಕ್ಕೆ ಹೋಗಿದ್ದಾನೆ ಅಂತ ಯಾರೋ ಹೇಳಿದ್ರಪ!). ಈಗ ಪ್ರತಿ ಮಾತ್ರೆ ಯನ್ನು ಎರಡು ಭಾಗಗಳಾಗಿ ಸಿಗಿದು, ಭಾಮಿನಿಯ ಎಡ ಕೈಯಲ್ಲಿ ಒಂದು ಭಾಗ, ಬಲ ಕೈಯಲ್ಲಿ ಒಂದು ಭಾಗ ಇಡುತ್ತಾ ಹೋಗಿ. ಶಬ್ದ ಆಗದಂತೆ, ಮಾತ್ರೆ ಅರ್ಧರ್ಧ ಮಾಡಿದ ಮೇಲೆ, ಎದುರಿನ ಅರ್ಧಾಂಗಿಯ ಎಡ ಕೈಯಲ್ಲಿ ಇರುವ ನಾಲ್ಕು ಅರ್ಧ ಗುಳಿಗೆಗಳನ್ನು ನುಂಗಿ ಅರ್ಧ ಲೋಟ ನೀರು ಕುಡಿಯಿರಿ. ಬಲಗೈಯಲ್ಲಿ ಉಳಿದಿರುವ ನಾಲ್ಕರ್ಧ ಮಾತ್ರೆಯನ್ನು ಒಂದು ಷಟ್ಪದಿ ಬರೆಯುವಷ್ಟು ಅಳತೆಯ ಶುದ್ಧ ಕಾಗದದಲ್ಲಿ ಸುತ್ತಿ ಇಟ್ಟು, ಮರುದಿನ ರಾತ್ರಿ ಮರೆಯದೇ, ಎಚ್ಚರಿಕೆಯಿಂದ ನುಂಗಿ ನೀರು ಕುಡಿದು ನಿರಾಳವಾಗಿ ನಿದ್ರಿಸಿ”.

ಸೂಕ್ಷ್ಮವಾಗಿ ಗಮನಿಸಿದಿರಾ? ಇದರಲ್ಲಿ ಜಾಣ್ಮೆಲೆಕ್ಕಕ್ಕೆ ಪಕ್ಕಾ ಪರ್ಫೆಕ್ಟ್ ಉತ್ತರವಂತೂ ಇದ್ದೇಇದೆ; ಜತೆಯಲ್ಲೇ ಕನ್ನಡದ ಆರು ಷಟ್ಪದಿ ಧಗಳ- ಶರ, ಕುಸುಮ, ಭೋಗ, ಭಾಮಿನಿ, ಪರಿವಧಿನಿ ಮತ್ತು ವಾರ್ಧಕ- ಹೆಸರುಗಳೂ ಅಡಕವಾಗಿವೆ! ಕಳೆದ ವಾರದ ಅಂಕಣದಲ್ಲಿ ಬರೆದಿದ್ದಂತೆ ಅವು ಇನ್ನೊಂದು ಅರ್ಥದಲ್ಲಿ ಮಾತ್ರೆಗಳ ಲೆಕ್ಕಾಚಾರ ದವೇ ತಾನೆ? ಹಾಗೆ ಎಲ್ಲ ಮಾತ್ರೆಗಳನ್ನೂ ಸಮನ್ವಯಗೊಳಿಸಿ ನವಿರು ಹಾಸ್ಯದ ಸಕ್ಕರೆ ಲೇಪ ಕೊಟ್ಟು ಪ್ರಸ್ತುತ ಪಡಿಸಿದ ರೀತಿಯಂತೂ ‘ಭಲೇ!’ ಎನ್ನುವಂತಿದೆ.

ಆದ್ದರಿಂದಲೇ ಇದನ್ನು ಪೀಠಿಕೆಗೆ ಆಯ್ದುಕೊಂಡೆ. ಆದರೆ ಇನ್ನೂ ಹೆಚ್ಚು ಭಲೇ ಎನಿಸುವ ಎರಡು ಪತ್ರಗಳಿವೆ, ಇನ್ನೊಂಚೂರು ಬಿಲ್ಡಪ್ ಕೊಟ್ಟು ಅವುಗಳನ್ನು ಆಮೇಲೆ ನೋಡೋಣ. ಮೊದಲಿಗೆ ಸರಿಯುತ್ತರ ಬರೆದು ತಿಳಿಸಿದವರೆಲ್ಲರ ಹೆಸರುಗಳು ಇಲ್ಲಿ ದಾಖಲಾಗಬೇಕು. ಇದು ನಿಮಗೆ ರೇಡಿಯೊದಲ್ಲಿ ಮೆಚ್ಚಿನ ಚಿತ್ರಗೀತೆ ಪ್ರಸಾರಕ್ಕೆ
ಕೋರಿಕೆ ಸಲ್ಲಿಸಿದವರ ಪಟ್ಟಿಯಂತೆ, ವಿವಿಧಭಾರತಿಯಲ್ಲಿ ಕೇಳಿಬರುವ ‘ಝುಮ್ರಿತಲೈಯಾ ಸೇ…’ ಯಾದಿಯಂತೆ ಕಂಡುಬಂದರೂ ಪರವಾಗಿಲ್ಲ. ಹೊನ್ನಾವರದಿಂದ ಮಂಜುನಾಥ ಭಟ್, ಮೈಸೂರಿನಿಂದ ರಕ್ಷಿತ್ ಕುಮಾರ್, ಬೆಂಗಳೂರಿನಿಂದ ಗಣೇಶ ರೆಡ್ಡಿ, ನಗರದಿಂದ ಅಶ್ವಿನಿ ವಿಜಯ್ ಶೇಟ್, ವರ್ಜೀನಿಯಾ (ಅಮೆರಿಕ)ದಿಂದ ನಳಿನಿ ಮಯ್ಯ, ಬೆಂಗಳೂರಿನಿಂದ ಇಂದಿರಾ ಜಾನಕಿ, ಮಂಗಳೂರಿನಿಂದ ಜ್ಯೋತಿ ರಾಜೇಶ್, ಮುಂಬೈನಿಂದ ಪುರುಷೋ ತ್ತಮ ಜೋಶಿ, ಬೆಂಗಳೂರಿನಿಂದ ಕೇಶವಮೂರ್ತಿ ಕುಲಕರ್ಣಿ, ಪುತ್ತೂರಿನಿಂದ ರೇವತಿ ಯು.ಎಂ, ಶಿವಮೊಗ್ಗದಿಂದ ರಾಧಾಮಣಿ ಮತ್ತು ಪ್ರಣತಿ (ಅಮ್ಮ-ಮಗಳು), ಬೆಂಗಳೂರಿನಿಂದ ಸೀತಾ ವ್ಯಾಸಮುದ್ರಿ, ಬಳ್ಳಾರಿಯಿಂದ ಶ್ರೀನಿವಾಸ ದೇವಳೇ, ಮುಂಬೈನಿಂದ ಉಮಾ ರಾವ್, ಬೆಂಗಳೂರಿನಿಂದ ಅಶೋಕ ಎಚ್.ಎಸ್, ಪುರುಷೋತ್ತಮ ಭಟ್ಟ ಪೆಲ್ತಾಜೆ, ಮೈಸೂರಿ ನಿಂದ ನಾಗೇಂದ್ರ ಮತ್ತು ಚಿತ್ರದುರ್ಗದಿಂದ ಡಾ. ಅಜೇಯ ಶರ್ಮ(ತಂದೆ ಡಾ. ಉಮೇಶ ಬಾಬು ಮೂಲಕ). ಮಾತ್ರೆಗಳ ಲೆಕ್ಕಕ್ಕೆ ಸರಿಯುತ್ತರ ಕಂಡುಕೊಂಡ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಇನ್ನು, ಉತ್ತರ ಕಂಡುಕೊಳ್ಳಲಾಗಲಿಲ್ಲ ಎಂಬುದನ್ನೂ ರಂಜನೀಯವಾಗಿ ಬರೆದ ಒಂದಿಬ್ಬರ ಪ್ರತಿಕ್ರಿಯೆಗಳು: “ಗುಳಿಗೆ ರಸಘಳಿಗೆ ಹರಟೆ ಮತ್ತೊಂದು ಲೆಕ್ಕ ಮಿದುಳಿಗೆ ಎಂಬ ಲೇಖನ ಓದುತ್ತಾ ಸಾಗುವಾಗ ಎಂದಿನಂತೆಯೇ ನಗು ತರಿಸಿತು. ಕೊನೆಯಲ್ಲಿ ಪ್ರಶ್ನೆಯೊಂದನ್ನು ನೀಡಿ ಆ ನಗೆಯ ಹಾದಿಯಲ್ಲಿ ರಸ್ತೆ ಉಬ್ಬು ಸೃಜಿಸಿದಿರಿ. ಆ ರಸ್ತೆ ಉಬ್ಬನ್ನು ದಾಟುವುದು ಹೇಗೆ ಎಂಬ ಚಿಂತೆಯಲ್ಲೇ ನಾನೊಂದು ಗುಳಿಗೆ ನುಂಗಿದ್ದಾಯ್ತು!

ಮುಂದಿನ ಅಂಕಣದಲ್ಲಿ ಆ ಉಬ್ಬನ್ನು ತಾವೇ ದಾಟಿಸುವಿರಿ ಎಂಬ ನಂಬಿಕೆ ನನ್ನದು. ಅನ್ಯ ಓದುಗರು ತಾವೇ ದಾಟಿದ್ದರೆ ಅವರಿಗೆ ನನ್ನ ಅಭಿನಂದನೆಗಳು”- ಪತ್ತಂಗಿ ಎಸ್.ಮುರಳಿ, ಬೆಂಗಳೂರು ಮತ್ತು, “ನಿಮ್ಮ ಪ್ರಶ್ನೆಯನ್ನು ಕುರಿತು ಮೂರು ದಿನಗಳಿಂದ ಯೋಚಿಸುತ್ತಿದ್ದೇನೆ. ಪರಿಣಾಮವಾಗಿ ನನ್ನ ತಲೆಯ ಮೇಲಿನ ಕೂದಲುಗಳ ಸಂಖ್ಯೆ
ದಿನೇ ದಿನೆ ಕಡಿಮೆ ಆಗುತ್ತಿದೆ. ಆದ್ದರಿಂದ, ಕೂದಲುಗಳ ಹಿತದೃಷ್ಟಿಯಿಂದ ಯೋಚಿಸುವುದನ್ನು ನಿಲ್ಲಿಸುತ್ತಿದ್ದೇನೆ ಮತ್ತು ಪ್ರಶ್ನೆಯನ್ನು ಕೇಳಿದವರಿಗೆ ಗೌರವಪೂರ್ವಕವಾಗಿ ಮರಳಿಸುತ್ತಿದ್ದೇನೆ. ಉತ್ತರದ ನಿರೀಕ್ಷೆಯಲ್ಲಿ, ನಿಮ್ಮ ದಡ್ಡ ಶಿಷ್ಯ”- ಭಾವುರಾವ್ ಕುಲಕರ್ಣಿ, ಸಿಂಧನೂರು. ಹಾಗೆಯೇ, ಜಾಣ್ಮೆಲೆಕ್ಕದ ಪ್ರಸ್ತಾವವೇ ಇಲ್ಲದಿದ್ದರೂ ಪ್ರತಿಕ್ರಿಯೆ ಯಲ್ಲಿ ಏನೋ ಒಂದು ಸ್ವಾರಸ್ಯಕರ ಮಾಹಿತಿಯನ್ನೋ ಮಂದಹಾಸ ತರಿಸುವ ಮಾತನ್ನೋ ಹಂಚಿಕೊಂಡವರು: “ನಂಜನಗೂಡು ಗುಂಡ್ಲು ಪಂಡಿತರಿಂದ ತಯಾರಾಗುತ್ತಿದ್ದ ಒಂದು ಗುಳಿಗೆಯ ಹೆಸರು ಶ್ರೀಕರ ಸುಖಕರ ಭೇದಿ ಮಾತ್ರೆ ಅಂತ ಇರುತ್ತಿತ್ತು!”- ಡಾ.ಎಸ್ .ನರಸಿಂಹನ್, ವಿರಾಜಪೇಟೆ; “ಹರಪನಹಳ್ಳಿ ಗುಳಿಗೆ ಒಂದೇ ಘಳಿಗೆ ಅಂತ ನಮ್ಮಕಡೆಯ ಗಾದೆಮಾತು.

ಗುಳಿಗೆ ಜಾಸ್ತಿ ಆದರೆ ಇದೇ ಆಗುವುದು”- ರಮೇಶ ತಾಡಪತ್ರಿ; “ಮನುಷ್ಯನಿಗೆ ಮಾತ್ರೆ ತಿನ್ನಬೇಕಾದ ಪರಿಸ್ಥಿತಿ ಬರುವುದನ್ನೇ ಗುಳಿಕ ಕಾಲ ಎನ್ನಬಹುದು, ಅದೂ ಅತಿಯಾದಾಗ ಬರುವುದು ಯಮಗಂಡ ಕಾಲವೋ ಏನೋ!”- ಅನ್ನಪೂರ್ಣಾ ದೈತೋಟ; “ಗುಳಿಗೆ ಪುರಾಣ ವನ್ನೋದುವಾಗ ಬೀಚಿಯವರ ವಿಡಂಬನಾತ್ಮಕ ಬರಹಗಳ ‘ಮಾತ್ರೆಗಳು’ ಪುಸ್ತಕ ನೆನಪಾಯಿತು” ಎಂದು ಬರೆದ ಆರ್.ಮೂರ್ತಿ (ಮೈಸೂರು), ಮಂಗಲಾ ಗುಂಡಪ್ಪ (ಬೆಂಗಳೂರು) ಮತ್ತು ವೀಣಾ ಹೆಗಡೆ (ಶಿರಸಿ) ಇವರ ಪ್ರತಿಕ್ರಿಯೆಗಳೂ ಇವರೆಲ್ಲರ ಓದಿನ ವಿಸ್ತಾರ-ವೈವಿಧ್ಯಗಳ ಮೆಚ್ಚುಗೆಗಾಗಿ ಉಲ್ಲೇಖಾರ್ಹವೇ.

ಪುಣೆಯಿಂದ ಶ್ರೇಯಾ ಆಪ್ಟೆ ಅವರ ಪ್ರತಿಕ್ರಿಯೆ ಇನ್ನೊಂದು ತೆರನಾದ ತಮಾಷೆಯದು. ಅಗ್ದೀ ಉತ್ತರಕರ್ನಾಟಕ ಭಾಷೆಯಲ್ಲಿ ಬರವಣಿಗೆ: “ಸರ್ರ… ನೀವು ಗುಳಿಗಿ ವಿಷಯದಾಗ ಇಷ್ಟೆಲ್ಲಾ ಬರದೀರ್ರಿ… ಆದ್ರ ಜಳಕದ ಗುಳಿಗಿ ಬಗ್ಗೆ ಏನೂ ಹೇಳಲೇ ಇಲ್ರೀಪಾ… ಹಾಂಗ್ ಹೆಂಗ್ ಆದೀತ್ರೀಪಾ… ನಾನೂ ಲಗ್ನಾ ಮಾಡ್ಕೊಂಡು ಗಂಡನ ಮನೀಗೆ ಬಂದಾಗ ನನಗೂ ಗಂಡನ ಕಡೆಯಿಂದ ಗೊತ್ತಾಗಿದ್ದು ನೋಡ್ರಿ, ಹಿಂಗ ಒಂದು ಜಳಕದ ಗುಳಿಗಿ ಅಂತಿರತದ ಅಂತ… ಸಣ್ಣ ಹುಡುಗೂರು ಜಳಕ ಮಾಡಲಿಕ್ಕೆ ಬ್ಯಾಸರ ಆದ್ ದಿನ, ‘ಅವ್ವ ನಾನಿವತ್ತು ಜಳಕದ್ ಗುಳಿಗಿ ತೊಗೊಂಡ್ಬಿಡ್ತೀ ನವ್ವ, ಜಳಕ ಮಾಡಂಗಿಲ್ಲ’ ಅಂತ ಓಡಿ ಹೋಗೋರಂತ. ಅಂದ್ರೆ ಏನಂತ ಅವತ್ತು ಜಳಕಕ್ಕ ಸುಟ್ಟಿ. ಬರೇ ಆಡೋದು ಒಂದೇ.

ನಮ್ ಮನ್ಯಾಗ ನನ್ ಗಂಡಾನೂ ಇಷ್ಟು ದೊಡ್ಡವನಾದ್ರೂ ರವಿವಾರ ಬಂತಂದ್ರ ಮುಂಜಾನೆ ಜಳಕದ್ ಗುಳಿಗಿ, ಸಂಜೀಮುಂದ ಜಳಕ… ಇದೇ ಪದ್ಧತಿ ಇನ್ನೂ ತನ ನಡದೇತಿ ನೋಡ್ರಿಪಾ… ಮೊದ ಮೊದಲು ಎಲ್ಲಾ ಹೇಳಿ ಹೇಳಿ
ನನಗೂ ಬ್ಯಾಸರ ಆತು. ಈಗ ಬಿಟ್ಬಿಟ್ಟಿನಿ ‘ನೋಡ್ರಿಪ ಏನಾರಾ ಮಾಡಿಕೋರಿ’ ಅಂತೀನಿ. ಇಷ್ಟಕ್ಕೂ ಈ ಜಳಕದ ಗುಳಿಗಿ ಅಂದ್ರೆ ಏನು ಅಂತ ಕೇಳ್ತೀರೇನು… ಅದು ನಾವು ಸಣ್ಣವರಿದ್ದಾಗ ತಿಂತಿದ್ವಲ್ಲ ಶುಂಠಿ ಪೆಪ್ಪರಮಿಂಟ… ಅದ… ರೀಪಾ!”.

“ಅಜ್ಜನಿಗೆ ಊಟದ ಬಳಿಕ ಮಾತ್ರೆ, ಜತೆಗೆ ಬಿಸಿನೀರಿನ ಲೋಟ ತಂದುಕೊಡುವ ಜಾಣ ಮೊಮ್ಮಕ್ಕಳ ಚಿತ್ರಣ ಸಿಗಬೇಕಾದರೆ ನೀವು ಯಾವುದಾದರೂ ಅವಿಭಕ್ತ ಕುಟುಂಬಕ್ಕೆ ಭೇಟಿ ಕೊಡಬೇಕು” ಎಂದು ಅಂಕಣದಲ್ಲಿದ್ದ ವಾಕ್ಯವನ್ನು ರಿಲೇಟ್ ಮಾಡಿಕೊಳ್ಳುತ್ತ “ನನ್ನ ತಮ್ಮನ ಮಗ ಧ್ರುವ ಎರಡು ವರ್ಷದವನು, ಗುಳಿಗೆ ಅನ್ನಲು ಬಾರದೆ ಗುಗ್ಗಳಿ ಎನ್ನುತ್ತಾನೆ. ನಾಷ್ಟಾ ಆದ ಮೇಲೆ ತನ್ನ ಅಜ್ಜ (ನನ್ನ ಅಪ್ಪ)ನಿಗೆ ಗುಗ್ಗಳಿ ತಗೋ ಅಂತ ಹೇಳುತ್ತಾನೆ”
ಎಂದು ಬರೆದಿದ್ದಾರೆ ಹುಬ್ಬಳ್ಳಿಯಿಂದ ವಾಣಿ ಹುಗ್ಗಿ. ಅಂತೆಯೇ ಪುತ್ತೂರಿನಿಂದ ಎ.ಪಿ ಉಮಾಶಂಕರಿ: “ನನ್ನ ಮಗಳು ಸುಮಾರು ಮೂರು ವರುಷದವಳಿದ್ದಾಗ ತನ್ನ ಅಜ್ಜನಿಗೆ ಮಾತ್ರೆ ಕೊಡುವ ಅವಳ ಚುರುಕುತನ, ಜವಾಬ್ದಾರಿ ತನ್ನದೇ ಎನ್ನುವ ನಡೆಯೇ ಕಣ್ಣಿಗೆ ಕಟ್ಟಿತು.

ಚಂದ್ರಪ್ರಭಾ ವಟಿ, ಯೋಗರಾಜ ಗುಗ್ಗುಳು ಎಂದೇನೋ ಮಾತ್ರೆಯ ಹೆಸರು ಮಾವನವರು ಹೇಳುತ್ತಿದ್ದ ನೆನಪು. ಅದನ್ನು ಗುದ್ದಿ ಪುಡಿ ಮಾಡಿ ತಿನ್ನಲು ಇದ್ದದ್ದು. ಅಜ್ಜನ ಬೆಳಗ್ಗಿನ ತಿಂಡಿ ಆಗುವುದನ್ನೇ ಕಾಯುತ್ತಾ ಕುಟ್ಟಾಣಿ ತಂದು ಇಟ್ಟು, ಅಜ್ಜನ ಮಾತ್ರೆ ಗುದ್ದಬೇಕಷ್ಟೆ, ಗುದ್ದುವ ಮಾತ್ರೆ ಗುದ್ದಬೇಕಷ್ಟೆ. ರಾಗವಾಗಿ ಹೇಳುತ್ತಾ ಅಜ್ಜ ಅದನ್ನು ಪುಡಿ ಮಾಡುವಾಗ ತಾನೂ ಕೈಡಿದು ತನ್ನಿಂದಲೇ ಆಗಬೇಕಷ್ಟೇ ಎನ್ನುವಂತೆ ಮಾಡುತ್ತಿದ್ದುದು ಎಲ್ಲರಿಗೂ ನಗು ತರಿಸುತ್ತಿತ್ತು. ಮಕ್ಕಳಾಟ ಎಷ್ಟು ಚಂದ ಬಂದು ನೋಡಬಾರದೇ ಎನ್ನುವಂತೆ ಕಾಣುತ್ತಿತ್ತು. ಹೆತ್ತವರಿಗೆ…ಮುದ್ದು ಎಂಬ ಮಾತು ಇರುವುದು ಹೌದಾದರೂ”.

ಹಾಗೆಯೇ, ಅಲೋಪತಿ ಮಾತ್ರೆಗಳ ‘ನ್’ ಕಾರಾಂತ ಹೆಸರುಗಳನ್ನು ತಮಿಳು ನಾಮಧೇಯಗಳಿಗೆ ಹೋಲಿಸಿದ್ದನ್ನು ಡೋಂಕಾಸ್ಟರ್ (ಯುನೈಟೆಡ್ ಕಿಂಗ್‌ಡಮ್)ದಲ್ಲಿರುವ ಡಾ.ಶ್ರೀವತ್ಸ ದೇಸಾಯಿ ವಿಶೇಷವಾಗಿ ಗಮನಿಸಿದ್ದಾರೆ, ರಿಲೇಟ್ ಮಾಡ್ಕೊಂಡಿದ್ದಾರೆ. ಅವರೆನ್ನುತ್ತಾರೆ: “ತಮಿಳರ ‘ಅನ್’ ಕಾರ (ಅಹಂಕಾರ ಅಲ್ಲದಿದ್ದರೂ) ನನಗೂ ತೊಂದರೆ ಕೊಟ್ಟಿದೆ. ನಾನು ತಮಿಳು ನಾಡಿನ ಊಟಿಯಲ್ಲಿ ಜೀವನದ ಪ್ರಥಮ 12 ವರ್ಷ ಕಳೆದೆ. ಶಾಲೆ ಶುರುವಾದದ್ದೂ ಅಲ್ಲಿಯೇ. ನಮ್ಮನ್ನು ಯಾರು ಶಾಲೆಗೆ ಕರೆದುಕೊಂಡು ಹೋಗಿ ಹೆಸರುಹಚ್ಚಿದರೋ ನಮ್ಮ ತಂದೆ
ಯಂತೂ ಅಲ್ಲ. ಇಲ್ಲದಿದ್ದರೆ ನಾವು ಮೂವರು ಅಣ್ಣತಮ್ಮಂದಿರು (ಆನಂದ, ವಸಂತ, ಶ್ರೀವತ್ಸ) ಅನುಕ್ರಮವಾಗಿ ಆನಂದನ್, ವಸಂತನ್, ಶ್ರೀವತ್ಸನ್ ಆಗುತ್ತಿರಲಿಲ್ಲ. ತಮಿಳು ಶಾಲೆಯಲ್ಲಿ ಅವರು ಟಾಕು-ಮಸಿಯಲ್ಲಿ ನಮ್ಮ ಹೆಸರನ್ನು ನೋಂದಾಯಿಸಿಕೊಂಡದ್ದು ಹೇಗೋ ಏನೋ! ಕೊನೆಯ ಅಕ್ಷರಗಳೆಲ್ಲ ತಿರುಚಿಕೊಂಡು ‘ಅನ್’ ಆಗಿವೆಯೆಂದು ನಮಗೆ ಗೊತ್ತಾದದ್ದು ಧಾರವಾಡಕ್ಕೆ ಉಳಿದ ಅರ್ಧ ಶಿಕ್ಷಣಕ್ಕೆ ಬಂದಾಗ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್‌ನಲ್ಲಿ ನೋಡಿಯೇ! ಅದರಲ್ಲೂ ನನ್ನ ಹೆಸರು ಶ್ರೀವತ್ಸನ್ ಅಂತ! ಅಯ್ಯೋ ಗ್ರಹಚಾರವೇ! ನನಗೆ ಬರ್ತ್ ಸರ್ಟಿಫಿಕೇಟಿಲ್ಲದೆ ಪರದಾಡಿದೆ. ಸ್ಕೂಲ್ ಲೀವಿಂಗ್ ಸರ್ಟಿಫಿಕೇಟೇ ಗತಿ.

ಅದರಲ್ಲಿ ಜನ್ಮದಿನಾಂಕ ಸರಿಯಿತ್ತು. ಹೆಸರು ತಪ್ಪಾಗಿತ್ತು. ಯಾವುದೇ ಬದಲಾವಣೆ ಮಾಡುವುದಕ್ಕೆ- ಒಂದು ಚುಕ್ಕಿ
ತೆಗೆಯುವುದಿರಲಿ, ಗೆರೆ ಸೇರಿಸುವುದಿರಲಿ, ಯಾವುದಕ್ಕೂ- ತನಗೆ ಅಧಿಕಾರವಿಲ್ಲ ಅಂತ ನಮ್ಮ ಹಠಮಾರಿ ಹೆಡ್‌ ಮಾಸ್ಟರ್! ನಮ್ಮ ತಂದೆಗೋ ಯಾವುದಕ್ಕೂ ಸಮಯವಿಲ್ಲ, ಲೇಖನ ಬರೆಯೋದು ಬಿಟ್ಟು. ಒಂದು ಅಂಕಣ ಬರೆಯುತ್ತಿದ್ದರು, ಊಟಿಗೆ ಮೊದಲು ಮದ್ರಾಸ್‌ದಲ್ಲಿದ್ದಾಗ- ನರವಾಹನಪುರಿಯಿಂದ ಅಂತ. ಆಮೇಲೆ ನಿಂತು ಹೋಯಿತು ನಾಮ್ ಔರ್ ನಿಶಾನ್ ಇಲ್ಲದಂತೆ (ಆನಂದರಾಮರ ಗುಳಿಗೆ ಕಾಲಂ ಮುಚ್ಚಿದಂತೆ)! ಕೊನೆಗೆ ಪುಸಲಾಯಿಸಿ ಅವರನ್ನು ಗಾಡಿ ಮಾಡಿ (ಟಾಂಗಾ, ಮದ್ರಾಸದಂತೆ ನರವಾಹನ ಅಲ್ಲ, ನರ ಎಳೆಯುವ ರಿಕ್ಷಾ) ತಹಸೀಲದಾರ ಆಫೀಸಿಗೆ ಎಳೆದುಕೊಂಡು ಹೋಗಿ ಅಫಿಡವಿಟ್ ಸಲ್ಲಿಸಿ, ಪಾಸ್‌ಪೋರ್ಟ್ ಮಾಡಿಸಿ ಫಾರಿನ್‌ಗೆ ಬಂದೆ!

ನನಗೆ ತಮಿಳು ಕೊಟ್ಟ ತ್ರಾಸು ಇದು. ಆ ದೇ.ಭ.ಮಾಸ್ತರರ ಆನೆಸ್ಟಿ ಅನ್ನುವ ‘ಬೇನೆ’ಗೆ ಒಂದು ಗುಳಿಗೆ ಇದ್ದಿದ್ದರೆ ಸುಲಭವಾಗುತ್ತಿತ್ತು. ಲಂಚವನ್ನೂ ತೆಗೆದುಕೊಳ್ಳುತ್ತಿದ್ದಿಲ್ಲ ಆಗಿನ ಕಾಲದ ಗಾಂಧಿಯನ್ ಹೆಡ್‌ಮಾಸ್ಟರ್!”. ಸರಿ, ಈಗ ನಾವು ಮತ್ತೊಮ್ಮೆ ಮಾತ್ರೆಗಳ ಜಾಣ್ಮೆಲೆಕ್ಕಕ್ಕೆ ಮರಳೋಣ. ಸರಿಯುತ್ತರ ಏನೆಂದು ನಿಮಗೆ ಈ ಅಂಕಣದ ಆರಂಭ
ದಲ್ಲಿಯೇ ಗೊತ್ತಾಗಿದೆ. ಜತೆಗೆ ಕನ್ನಡ ಷಟ್ಪದಿಗಳ ಉಲ್ಲೇಖವೂ ಬಂದಿದೆ. ಅಂಥದೊಂದು ಷಟ್ಪದಿಯಲ್ಲೇ ಜಾಣ್ಮೆಲೆ ಕ್ಕದ ಸರಿಯುತ್ತರ ಬರೆದರೆ ಹೇಗಿರುತ್ತದೆ? ಮಾತ್ರೆಗಳ ಲೆಕ್ಕವನ್ನು ಮಾತ್ರೆಗಳ ಲೆಕ್ಕದಿಂದಲೇ ಬಿಡಿಸಿದಂತಾಗುತ್ತದೆ! ಅದನ್ನೇ ಮಾಡಿದ್ದಾರೆ ಬೆಂಗಳೂರಿನ (ಮೂಲತಃ ಹೊನ್ನಾವರದ) ಅರ್ಚನಾ ಹೆಬ್ಬಾರ್.

ಛಂದೋಬದ್ಧ ಪದ್ಯಗಳನ್ನು ಹೊಸೆಯುವುದು ಇವರಿಗೆ ನೀರು ಕುಡಿದಷ್ಟು- ಅಲ್ಲ, ಹತ್ತಿಯಿಂದ ಬತ್ತಿ ಹೊಸೆದಷ್ಟು ಸುಲಭ. ಮಾತ್ರೆಗಳ ಜಾಣ್ಮೆಲೆಕ್ಕಕ್ಕೆ ಮಗ ಸರಿಯುತ್ತರ ಹೇಳಿದನಂತೆ, ಅದನ್ನಿವರು ಮೂರು-ನಾಲ್ಕರಂತೆ ಮಾತ್ರೆಗಳ ಲೆಕ್ಕ ಹಾಕಿ ಚಂದದ ಭಾಮಿನೀ ಷಟ್ಪದಿಯಲ್ಲಿ ನಿರೂಪಿಸಿದ್ದಾರೆ, ಹೀಗೆ: ‘ಸರಳವಿದೆಯೆಂದೀಗ ಮಗ ತಾ-| ನೊರೆದ ನನ್ನೀ ಪ್ರಶ್ನೆಗುತ್ತರ| ತೆರೆದು ವಿಟಮಿನ್ನೇಯ ಡಬ್ಬಿಯ ಮಾತ್ರೆಯಿನ್ನೊಂದೇ| ಕರದೊಳಗೆ ತೆಗೆಯುತ್ತ ಸೇರಿಸಿ| ಸರಿಯ ಭಾಗವ ಮಾಡಿ ನಾಲ್ಕನು| ಸರಸಿ ನಾಲ್ಕರ್ಧಗಳ ನಾಳೆಗೆ ತಿಂದು ನಾಲ್ಕರ್ಧ||’. ಇದನ್ನು ಚಪ್ಪರಿಸುವಷ್ಟರಲ್ಲಿ ಬೆಂಗಳೂರಿನಿಂದಲೇ ಅಕ್ಷಯ ಮರಾಠೆಯವರು ತಾವೇನೂ ಕಮ್ಮಿಯಿಲ್ಲವೆಂದು ಮಾತ್ರೆಗಳ ಎರಡು ಸ್ಟ್ರಿಪ್ಸ್ ಕಳಿಸಿ
ದರು, ಎರಡು ಭೋಗ ಷಟ್ಪದಿಗಳ ರೂಪದಲ್ಲಿ. ಭೋಗ ಷಟ್ಪದಿ ಅಂದ್ರೆ ಗೊತ್ತಲ್ಲ, ‘ತಿರುಕನೋರ್ವನೂರ ಮುಂದೆ’ ಪದ್ಯದಂತೆ ಹಾಡಲಿಕ್ಕಾಗುವಂಥದು: “ಆರು ಭಾಗಗಳನು ಮಾಡಿ| ಮೂರು ಮಾತ್ರೆಗಳನು ಭರದಿ| ಬೇರೆಬೇರೆ ಗುಂಪುಗಳಲಿ ಪಾಲುಮಾಡಿರಿ| ಆರಿಸಿಟ್ಟ ಬಾಟ್ಲಿಯಿಂದ| ಸೇರಿಸೆರಡು ಭಾಗಗಳನು| ದಾರಿಯರ್ಧ ನಡೆದೆವೆಂದು ನೀವು ತಿಳಿಯಿರಿ ||೧|| ಬದುಕು ಚೆಂದವಾಗಲಿಕ್ಕೆ| ಮೊದಲ ದಿನದ ಸಂಜೆಯಲ್ಲಿ| ಮೊದಲ ಗುಂಪಿನಿಂದ ನಾಕು
ಮಾತ್ರೆ ತಿನ್ನಿರಿ| ಚದುರತನದಿ ಯೋಚಿಸಲ್ಕೆ| ಕೆದರಿಹೋದ ಚಣವು ಕೂಡ| ಮುದವ ಕೊಡುವ ಜಾಣ್ಮೆಲೆಕ್ಕ ವಾಯಿತೆನ್ನಿರಿ ||೨||”. ಛಂದಸ್ಸನ್ನು ಪಾಲಿಸುತ್ತ ಬರೆದ ಪದ್ಯಗಳಿಗಿರುವ ಇಂಥ ಸಹಜಸೌಂದರ್ಯ, ಗೇಯತೆ, ಬಾಳ್ವಿಕೆಗಳು ಈಗಿನ ಕಾಲದ ಮುಕ್ತಛಂದದ (ಎಮ್ಮೆ ಉಚ್ಚೆಹೊಯ್ದಂತೆ ಎಂದು ಹೋಲಿಸಬಹುದಾದ) ಕತೆಗಳಿಗೆ ಇರುವುದಿಲ್ಲ ಎಂದು ಅವನ್ನು ಕೆತ್ತುವವರಿಗೆ ಅದೇಕೆ ಅರ್ಥವಾಗುವುದಿಲ್ಲವೋ?

ಛಂದೋಬದ್ಧ ಪದ್ಯಕೃಷಿಯ ಇನ್ನೊಬ್ಬ ರೈತ ಬೆಂಗಳೂರಿನ ಮೃತ್ಯುಂಜಯ ತೇಜಸ್ವಿ. ಇವರು ಜಾಣ್ಮೆಲೆಕ್ಕಕ್ಕೆ ಸರಿಯುತ್ತರವನ್ನೇನೋ ಸಾದಾ ಗದ್ಯದಲ್ಲೇ ಬರೆದು ಕಳಿಸಿದ್ದಾರೆ, ಆದರೆ ಮಾತ್ರೆಗಳ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಛಂದದ ಪದ್ಯದಲ್ಲಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಮಾತ್ರೆಗಳ ಒಂದು ಸ್ಟ್ರಿಪ್‌ನಲ್ಲಿ 10 ಮಾತ್ರೆಗಳಿರುವುದೇಕೆ? ಎಂಬ ಕುತೂಹಲಕಾರಿ ಪ್ರಶ್ನೆಗೆ ಒಂದು ತಮಾಷೆ ಕಲ್ಪನೆಯ ಉತ್ತರ. ಪಂಚಚಾಮರ ವೃತ್ತ
ಛಂದಸ್ಸಿನಲ್ಲಿ ಶುದ್ಧ ಕನ್ನಡದಲ್ಲಿ ನಿರೂಪಣೆ. ಇದನ್ನು ‘ಮುದಾಕರಾತ್ತ ಮೋದಕಂ ಸದಾ ವಿಮುಕ್ತಿಸಾಧಕಂ…’ ಸ್ತೋತ್ರದಂತೆ ಹಾಡಿಕೊಳ್ಳಲಿಕ್ಕೂ ಆಗುತ್ತದೆ. ‘ರಾವಣನಿಗೆ ತಲೆನೋವು’ ಎಂದು ಶೀರ್ಷಿಕೆ. ಪದ್ಯ ಹೀಗಿದೆ: ‘ತಮಾಷೆಯೊಂದ ಬೆಜ್ಜನೊಬ್ಬ ಪೇಳ್ದ ಗೊತ್ತೆ ತಮ್ಮನೇ| ಬೆಮರ್ದ ಮಂಡೆ ನೋಯಲೊಮ್ಮೆ ಲಂಕೆ ಯಾಳ್ವ ರಾವಣ| ಗಮಾರನೊಬ್ಬನಾಗವಂಗೆ ಹತ್ತು ಮಾತ್ರೆ ಕೊಟ್ಟನೈ| ಸುಮಾರಿಗಂದಿನಿಂದ ಬಂತು ಹತ್ತು ಮಾತ್ರೆ ಪೊಟ್ಟಣ||’. ಇದರ ಪ್ರತಿಸಾಲಿನಲ್ಲೂ ಲಘು-ಗುರು-ಲಘು-ಗುರು… ಮಾತ್ರೆಗಳ ಆವರ್ತನ. ಬೆಜ್ಜ ಅಂದರೆ ವೈದ್ಯ, ಡಾಕ್ಟರ್.

ಕ್ರಿಯೇಟಿವಿಟಿ ಎಂದರೆ ಇದು! ನನಗಿಂಥವು ತುಂಬ ಇಷ್ಟ. 2016 ಜನವರಿ 17ರಂದು ‘ತಿಳಿರುತೋರಣ’ ಅಂಕಣದ ಮೊತ್ತ ಮೊದಲ ಕಂತಿನಲ್ಲಿ ಹೀಗೆ ಬರೆದಿದ್ದೆ: “ನನ್ನದೊಂದು ಅಚಲ ವಿಶ್ವಾಸ ಏನೆಂದರೆ, ಈ ಪ್ರಪಂಚದಲ್ಲಿ ಪ್ರತಿಯೊಬ್ಬರಲ್ಲೂ ಏನೋ ಒಂದು ಪ್ರತಿಭೆ ಇರುತ್ತದೆ, ಯಾವುದೋ ವಿಷಯದ ತಿಳಿವಳಿಕೆ ಇರುತ್ತದೆ. ಏನನ್ನೋ ಸಾಧಿಸುವ ಪ್ರಚ್ಛನ್ನ ಶಕ್ತಿ ಇರುತ್ತದೆ. ಅದು ಪ್ರಕಟವಾಗಲಿಕ್ಕೆ ಅವಕಾಶ ಸಿಗಬೇಕು ಅಷ್ಟೇ. ಅಂತೆಯೇ, ನನ್ನ ಬರಹವನ್ನು ಓದುವವರಿಗೆ ನನಗಿಂತ ಹೆಚ್ಚು ಜ್ಞಾನಾನುಭವ ಇರುತ್ತದೆ. ನಾನು ಪ್ರಸ್ತಾವಿಸುವ ವಿಚಾರಗಳಿಗೆ ಸಂಬಂಧಿಸಿದಂತೆ ಪೂರಕ ಮಾಹಿತಿಯನ್ನು, ತಮ್ಮತಮ್ಮ ಅನುಭವದ ಬುತ್ತಿಯಿಂದ ರುಚಿವರ್ಧಕವನ್ನು ಒದಗಿಸುವ ಶಕ್ತಿ-ಆಸಕ್ತಿಗಳು ಇರುತ್ತವೆ.

ಇದು ನನ್ನ ದೃಢವಾದ ನಂಬಿಕೆ. ಹಾಗಾಗಿ ಈ ಅಂಕಣವೂ ದ್ವಿಮುಖಸಂಚಾರದ ರಸ್ತೆಯಾದರೆ ನನಗೆ ತುಂಬ ಖುಷಿ. ನಿಮ್ಮ ಪ್ರತಿಕ್ರಿಯೆಗಳನ್ನು, ನೀವು ಒದಗಿಸುವ ಪೂರಕ ಅಂಶಗಳನ್ನು ನಾನು ತುಂಬುಹೃದಯದಿಂದ ಸ್ವಾಗತಿಸು ತ್ತೇನೆ, ಅಳವಡಿಸಿಕೊಳ್ಳುತ್ತೇನೆ. ಒಂದೊಂದನ್ನೂ ಚಿಗುರೆಲೆ ಹಸುರೆಲೆ ಎಂದುಕೊಂಡು ತೋರಣ ಕಟ್ಟಲು ಬಳಸುತ್ತೇನೆ”. ಇಂದು ‘ತಿಳಿರುತೋರಣ’ ಅಂಕಣದ 450ನೆಯ ಕಂತಿನಲ್ಲಿ ಇದನ್ನು ಸೋದಾಹರಣವಾಗಿ ಶತ ಪ್ರತಿಶತ ಸಾಬೀತುಪಡಿಸಿರುವುದಕ್ಕೆ ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಅಕ್ಷರಪ್ರೀತಿ, ಓದಿನ ಆಸಕ್ತಿ ಮತ್ತು ಪ್ರತಿಕ್ರಿಯೆ
ಬರೆದುಕಳುಹಿಸುವ ಉತ್ಸಾಹಗಳು ಹೀಗೆಯೇ ಇರಲಿ.

ಇದನ್ನೂ ಓದಿ: Srivathsajoshi Column: ಸೆಲೆಬ್ರಿಟಿಗಳ ಸರಳತನ, ಸಜ್ಜನಿಕೆ ಅರಿವಾದಾಗಿನ ಆನಂದ