Friday, 20th September 2024

‘ಥಾಟ್ಸ್ ಆನ್ ಪಾಕಿಸ್ತಾನ್’ ಮತ್ತು ಪ್ರಸ್ತುತ ಭಾರತ

ಅವಲೋಕನ

ಕುಮಾರ್ ಶೇಣಿ

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಹಲವು ಸನ್ನಿವೇಶಗಳನ್ನು ಗಮನಿಸಿದಾಗ, ಹಲವರು ಇತಿಹಾಸದ ಅವಲೋಕನ ಮಾಡಿ ಕೊಳ್ಳುವ ಅಗತ್ಯವಿದೆ ಎಂದು ಆಗಾಗ ಅನಿಸುತ್ತಿರುತ್ತದೆ. ಸ್ವಾತಂತ್ರ್ಯ ಗಳಿಸಿ ಏಳು ದಶಕಗಳು ಕಳೆದರೂ ಇಂದಿಗೂ ಭಾರತ ಎದುರಿಸುತ್ತಿರುವ ಹಲವು ಸಮಸ್ಯೆಗಳ ಮೂಲ ಸ್ವಾತಂತ್ರ್ಯ ಪೂರ್ವದಿಂದಲೇ ಹುಟ್ಟಿಕೊಂಡಿದ್ದು ಎಂಬುದು ಅಚ್ಚರಿಯ ವಿಚಾರ ವಾದರೂ ಅದು ಸತ್ಯ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಹೋರಾಟದಿಂದ ಆರಂಭವಾಗಿ ಇತ್ತೀಚಿನ ಬೆಂಗಳೂರಿನಲ್ಲಿ ನಡೆದ ಗಲಭೆ ಯನ್ನು ಗಮನಿಸಿದಾಗಲೆಲ್ಲಾ ಭಾರತದ ರಾಜಕೀಯ ನಾಯಕರು ಹಾದಿ ತಪ್ಪಿದ್ದೆಲ್ಲಿ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಈ ಕುರಿತಾದ ಚರ್ಚೆಗಳು ಉಂಟಾದಾಗಲೆಲ್ಲಾ ಪ್ರಸ್ತಾಪವಾಗುವ ಪುಸ್ತಕವೇ 1940ರಲ್ಲಿ ಪ್ರಕಟವಾದ ಅಂಬೇಡ್ಕರ್ ಅವರ ಥಾಟ್ಸ್ ಆನ್ ಪಾಕಿಸ್ತಾನ್. 1930ರ ನಂತರ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕು ಬೇರೊಂದು ಹಾದಿಯಲ್ಲಿ ಸಾಗುತ್ತದೆ ಎಂಬುದು ನಾವೆಲ್ಲರೂ ಗಮನಿಸಬೇಕಾದ ವಿಚಾರ. ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟದ ನೇತಾರ ಎಂದೇ ಗುರುತಿಸಿಕೊಂಡಿದ್ದ ಗಾಂಧೀಜಿ, ನೆಹರು ಮತ್ತು ಜಿನ್ನಾ ಹೋರಾಟದ ಮುಖ್ಯವಾಹಿನಿಯಲ್ಲಿ ಇದ್ದರಾದರೂ ಜಿನ್ನಾರ ಮಾತುಗಳಿಗೆ ಹೆಚ್ಚಿನ ಮಹತ್ವವಿತ್ತು ಎಂದು ಹಲವು ವಿಚಾರಗಳನ್ನು ಗಮನಿಸಿದಾಗ ತಿಳಿದು ಬರುತ್ತದೆ. ಇವುಗಳಲ್ಲಿ ಒಂದು ಜಿನ್ನಾರ ದ್ವಿರಾಷ್ಟ್ರ ಸಿದ್ದಾಂತ.

ಮುಸ್ಲಿಂ ಕೆಂದ್ರೀತ ವಾದ ಹೊಸದೊಂದು ರಾಷ್ಟ್ರ ನಿರ್ಮಾಣವಾಗಬೇಕು ಎಂಬ ಜಿನ್ನಾರ ವಾದಕ್ಕೆ ಗಾಂಧಿಯಿಂದ ವಿರೋಧ
ವ್ಯಕ್ತವಾದರೂ ಅದು ದ್ವಿರಾಷ್ಟ್ರ ಸಿದ್ದಾಂತಕ್ಕೆ ಯಾವುದೇ ಪರಿಣಾಮ ಉಂಟುಮಾಡಲಿಲ್ಲ. ಇದೆಲ್ಲವನ್ನೂ ಗಮನಿಸಿಕೊಂಡು ಅಂಬೇಡ್ಕರ್ ಅವರು ಬರೆಯುವ ಪುಸ್ತಕವೇ ಥಾಟ್ಸ್ ಆನ್ ಪಾಕಿಸ್ತಾನ್. ಅಂಬೇಡ್ಕರ್ ಅವರು ದ್ವಿರಾಷ್ಟ್ರ ಸಿದ್ದಾಂತಕ್ಕೆ ಬೆಂಬಲ ನೀಡುತ್ತಾ ಅದಕ್ಕಾಗಿ ಹಲವು ಕಾರಣಗಳನ್ನು ನೀಡುತ್ತಾರೆ.  ಸಾವರ್ಕರ್ ಮತ್ತು ಅಂಬೇಡ್ಕರ್ ಅವರ ರಾಷ್ಟ್ರೀಯತೆಯ ಪರಿ ಕಲ್ಪನೆಯನ್ನು ಮುಸಲ್ಮಾನರು ಒಪ್ಪಿಕೊಳ್ಳುವುದಿಲ್ಲ ಎಂಬುದು ಅಂಬೇಡ್ಕರ್ ಅವರಿಗೆ ಅದಾಗಲೇ ತಿಳಿದಿತ್ತು.

ರಾಷ್ಟ್ರ ಮತ್ತು ಧರ್ಮ ಎಂಬ ಎರಡು ವಿಚಾರಗಳು ಬಂದಾಗ ಮುಸಲ್ಮಾನರು ಮೊದಲಿಗೇ ಧರ್ಮದ ಆದೇಶವನ್ನು ಪಾಲಿಸುತ್ತಾರೆ ಎಂಬ ಮಾತನ್ನು ಅಂಬೇಡ್ಕರ್ ಹೇಳುತ್ತಾರೆ. ಸಾವರ್ಕರ್ ಅವರ, ಭರತ ಭೂಮಿಯನ್ನು ಪವಿತ್ರ ಭೂಮಿಯೆಂದು ಪರಿಗಣಿಸ ಬೇಕು ಎಂಬ ಮಾತನ್ನು ಅವರು ಒಪ್ಪಿಕೊಳ್ಳುತ್ತಾರೆ ಎಂಬ ಯಾವ ನಂಬಿಕೆಯು ಅಂಬೇಡ್ಕರ್ ಅವರಿಗೆ ಇರಲಿಲ್ಲ. ಮುಸ್ಲಿಂ ಲೀಗ್‌ನ ದ್ವಿರಾಷ್ಟ್ರ ಸಿದ್ದಾಂತವು ಧರ್ಮ ಕೇಂದ್ರಿತವಾಗಿರುವುದರಿಂದ ಹೊಸದೊಂದು ರಾಷ್ಟ್ರವು ಸೃಷ್ಟಿಯಾದರೆ ಅದು ಧರ್ಮದ ಆಧಾರಿತವೇ ಆಗಿರುತ್ತದೆ ಎಂಬುದನ್ನು ಆಲೋಚಿಸಲು ಹಲವು ಕಾಂಗ್ರೆಸ್‌ನ ನಾಯಕರೇ ಸೋತುಹೋದರು. ಆದರೆ ಅದನ್ನು
ಅರಿಯುವಲ್ಲಿ ಅಂಬೇಡ್ಕರ್ ಸಫಲವಾಗಿದ್ದರು.

ಜತೆಗೆ ಅದಕ್ಕಾಗಿಯೇ ಜನಸಂಖ್ಯಾ ವಿನಿಮಯ ನೀತಿಯ ಪ್ರಸ್ತಾವನೆ ಮಾಡಿದ್ದರು ಕೂಡ. ಒಂದು ವೇಳೆ ಭಾರತ ಧರ್ಮಾಧಾರಿತ ವಾಗಿ ವಿಭಜನೆಯಾದಲ್ಲಿ ಹಿಂದೂ ಮತ್ತು ಮುಸ್ಲಿಂ ಜನರನ್ನು ವಿನಿಮಯ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಮುಂದೊಮ್ಮೆ ಕೋಮು ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದು ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಮುಂದೊಂದು ದಿನ ಅದು ನಿಜವಾಯಿತು ಕೂಡ.

ಇದಲ್ಲದೇ ಅಂಬೇಡ್ಕರ್ ಅವರು ಸೈಮನ್ ವರದಿಯ ಪ್ರಸ್ತಾವನೆಯನ್ನು ಇಲ್ಲಿ ಮಾಡುತ್ತಾರೆ. ಸೈಮನ್ ವರದಿಯ ಪ್ರಕಾರ ಸೈನ್ಯಕ್ಕೆ ಸೇರುವವರ ಪಟ್ಟಿಯಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆ. ಇದು ಕೂಡ ಮುಂದೊಂದು ದಿನ ದುರಂತಕ್ಕೆ ಕಾರಣ ವಾಗಬಹುದು ಎಂಬುದನ್ನು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಇದೆಲ್ಲವನ್ನು ಸೇರಿಸಿಕೊಂಡು ಅಂಬೇಡ್ಕರ್ ಹೇಳುವ ನೀತಿಯೇ ದ್ವಿರಾಷ್ಟ್ರ ಸಿದ್ದಾಂತ ಮತ್ತು ಜನಸಂಖ್ಯಾ ವಿನಿಮಯ ನೀತಿ.

ಅಂಬೇಡ್ಕರ್ ಅವರು ಇಷ್ಟೆಲ್ಲಾ ಹೇಳಿದ್ದರೂ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್‌ನ ನಾಯಕರು ಹಾದಿ ತಪ್ಪಿದ್ದೆಲ್ಲಿ ಎಂಬುದು ನಾವೆಲ್ಲರೂ ಆಲೋಚಿಸಬೇಕಾದ ವಿಚಾರ. ವಿಭಜನೆಗೂ ಮೊದಲು ಜನಸಂಖ್ಯೆ ವಿನಿಮಯವಾಗದಿದ್ದರೆ ಮುಂದೆ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂಬ ಅಂಬೇಡ್ಕರ್ ಅವರ ಎಚ್ಚರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು ಕೂಡ. ಇದರ ಪರಿಣಾ ಮವೇ 1947ರಲ್ಲಿ ನಡೆದ ಹಿಂದೂಗಳ ಭೀಕರ ಹತ್ಯಾಕಾಂಡ ಮತ್ತು ನಂತರ ಪಾಕ್‌ನಲ್ಲಿ ನಡೆದ ಇಸ್ಲಾಮೀಕರಣ.

ಅಂಬೇಡ್ಕರ್ ಅವರ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕದಲ್ಲಿ ಇದ್ದ ಎಚ್ಚರಿಕೆಯ ಕರೆಗಂಟೆಯನ್ನು ಕಾಂಗ್ರೆಸ್‌ನ ನಾಯಕರು ಪೂರ್ಣವಾಗಿ ಕಡೆಗಣಿಸಿದ್ದಕ್ಕೆ ಹಲವು ಉದಾಹರಣೆಗಳು ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಮತ್ತು ನಂತರದ ಸಮಯದಲ್ಲಿ ಭಾರತದಲ್ಲಿ ಕಾಣಸಿಗುತ್ತದೆ ಧರ್ಮಾಧಾರಿತವಾಗಿ ಪಾಕಿಸ್ತಾನ ನಿರ್ಮಾಣವಾಗಿದ್ದರೂ ಅದನ್ನು ಸೆಕ್ಯುಲರ್ ರಾಷ್ಟ್ರ ಎಂದು ಘೋಷಿಸಿದ್ದು ಜಿನ್ನಾರ ಮೂರ್ಖತನವೇ.

ಅದನ್ನು ಪಾಕ್‌ನ ಧಾರ್ಮಿಕ ಮುಖಂಡರು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ವಿಚಾರವು ಜಿನ್ನಾರಿಗೆ ಅರ್ಥವಾಗಲಿಲ್ಲವೇ? ಪಾಕ್‌ನ ರಾಜಕೀಯದಿಂದ ಜಿನ್ನಾ ಕೆಲವೇ ಸಮಯದಲ್ಲಿ ಮರೆಯಾಗಿದ್ದು ಮತ್ತು 1956ರಲ್ಲಿ ಪಾಕ್ ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದು ಇವೆಲ್ಲವೂ ಪಾಕ್ ಧಾರ್ಮಿಕ ಮೂಲಭೂತವಾದದತ್ತ ಸಾಗಿದ್ದಕ್ಕೆ ಉದಾಹರಣೆಗಳೇ. ಇನ್ನೊಂದೆಡೆ ಭಾರತವೂ ಕೂಡ ಸೆಕ್ಯುಲರ್ ರಾಷ್ಟ್ರ ಎಂಬ ಮೂರ್ಖತನದ ಹಾದಿ ಹಿಡಿದದ್ದು ಅಚ್ಚರಿಯ ವಿಚಾರ. ಆದರೆ ಇಲ್ಲಿ ಆಡಳಿತದ ನಿಯಂತ್ರಣ ಯಾವುದೇ ಧಾರ್ಮಿಕ ಮುಖಂಡರ ಕೈಯಲ್ಲಿ ಇರದಿದ್ದರೂ, ರಾಜಕೀಯ ಮುಖಂಡರೇ ಓಲೈಕೆಗೆ ಇಳಿದರು. ಇದು ಮುಂದೆ ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಪದವನ್ನು ಸೇರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿತು. ಇಂದು ಭಾರತದ ಹಲವು ಸಮಸ್ಯೆಗಳಿಗೆ ಇದು ಎಡೆಮಾಡಿಕೊಡುತ್ತಿದೆ ಎಂಬುದು ನಾವೆಲ್ಲರೂ ಗಮನಿಸುತ್ತಿರುವ ಸತ್ಯ.

ಅಂಬೇಡ್ಕರ್ ಅವರ ಮಾತುಗಳನ್ನು ಕಾಂಗ್ರೆಸ್ ಅಂದು ಪಾಲಿಸುತ್ತಿದ್ದರೆ ಇಂದು ಈ ಸಮಸ್ಯೆಗಳು ಇರುತ್ತಿರಲಿಲ್ಲ ಎಂಬುದಂತೂ ನಿಜ. ಪ್ರಸ್ತುತ ಭಾರತದಲ್ಲಿ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕದ ಕುರಿತ ಚರ್ಚೆ ಹಲವು ಕಾರಣಗಳಿಗಾಗಿ ಬಹಳ ಮಹತ್ವ ಎನಿಸಿ ಕೊಳ್ಳುತ್ತದೆ. ಮೊದಲನೆಯದಾಗಿ ಧರ್ಮಾಧಾರಿತ ವಾದ ದ್ವಿರಾಷ್ಟ್ರ ಸಿದ್ದಾಂತದ ಮೇಲೆ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ನಿರ್ಮಾಣವಾದ ಮೇಲೆ ನಂತರ ಎರಡೂ ರಾಷ್ಟ್ರಗಳು ಸೆಕ್ಯುಲರ್ ಎಂದೂ ಘೋಷಿಸಿಕೊಳ್ಳುವ ಅಗತ್ಯ ಏನಿತ್ತು? ಇಸ್ಲಾಂ ಕೇಂದ್ರೀತವಾಗಿ ಪಾಕಿಸ್ತಾನ ನಿರ್ಮಾಣವಾದ ಮೇಲೆ ಅಂಬೇಡ್ಕರ್ ಅವರ ಹೇಳಿಕೆಯಂತೆ ಜನಸಂಖ್ಯೆ ವಿನಿಮಯ ಮಾಡಿಕೊಳ್ಳ ಬಹುದಿತ್ತು ಅಲ್ಲವೇ? ಅಂಬೇಡ್ಕರ್ ಅವರಿಗೆ 1940ರಲ್ಲಿ ಅರಿವಾದ ಸತ್ಯ, ಉಳಿದ ಕಾಂಗ್ರೆಸ್ ನಾಯಕರುಗಳಿಗೆ 1947ರವರೆಗೆ ಅರಿವಾಗಲಿಲ್ಲ ಎಂಬುದು ಮೂರ್ಖತನದ ವಿಚಾರವಲ್ಲವೇ? 1956ರಲ್ಲಿ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರ ಎಂದು ತನ್ನನ್ನು ಘೋಷಿಸಿಕೊಂಡ ಮೇಲಾದರೂ, ಭಾರತ ಹಿಂದೂ ರಾಷ್ಟ್ರ ಎಂದು ಘೋಷಿಸಿಕೊಳ್ಳಬಹುದಿತ್ತು ಅಲ್ಲವೇ? ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಭಾರತದಲ್ಲಿ ಪ್ರತಿಭಟನೆಯ ಪರ್ವವೊಂದು ಆರಂಭವಾದಾಗ ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅನಿವಾರ್ಯತೆ ಉಂಟಾಯಿತು.

ಇಸ್ಲಾಮಿಕ್ ರಾಷ್ಟ್ರವೆಂದೇ ಗುರುತಿಸಿಕೊಂಡಿರುವ ಪಾಕಿಸ್ತಾನ ಮತ್ತು ಇತರ ನೆರೆಯ ರಾಷ್ಟ್ರಗಳಿಂದ ಬರುತ್ತಿರುವ ಹಿಂದೂ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆಯ ವಿರುದ್ಧವಾಗಿ ಭಾರತದಲ್ಲಿ ಹೋರಾಟವೊಂದು ಆರಂಭವಾಗಿದೆ ಎಂದರೆ ಯಾವ ರೀತಿಯ ಸೆಕ್ಯುಲರಿಸಂ ಭಾರತದಲ್ಲಿ ನಿರ್ಮಾಣವಾಗಿದೆ ಎಂಬುದು ನಾವೆಲ್ಲರೂ ಆಲೋಚಿಸಬೇಕಾದ ವಿಚಾರವಲ್ಲವೇ? ಅಂಬೇಡ್ಕರ್ ಅವರ ಮಾತುಗಳನ್ನು ಕೇಳಿದ್ದರೆ ಇಂದು ಈ ಪರಿಸ್ಥಿತಿಯನ್ನು ಎದುರಿಸುವ ಅನಿವಾರ್ಯತೆ ನಿರ್ಮಾಣವಾಗುತ್ತಿತ್ತೇ? ಮತ್ತೊಂದು ಪ್ರಮುಖ ವಿಚಾರವೆಂದರೆ ಅಲ್ಲಲ್ಲಿ, ಆಗಾಗ ನಡೆಯುತ್ತಿರುವ ಕೋಮುಗಲಭೆಗಳು. ಅಲ್ಪಸಂಖ್ಯಾತರು ಎನಿಸಿ ಕೊಂಡವರು ಅಭದ್ರತೆ ಮತ್ತು ಅಸಹಿಷ್ಣುತೆಯ ಹೆಸರು ಹೇಳಿಕೊಂಡು ನಡೆಸುತ್ತಿರುವ ಗಲಭೆಗಳಿಗೆ ಹೊಣೆ ಯಾರು? ಇಂತಹದೇ ವಿಚಾರದಲ್ಲಿ ಪಾಕ್‌ನಲ್ಲಿ ಹಿಂದೂ ಅಲ್ಪಸಂಖ್ಯಾತರು ಗಲಭೆ ನಡೆಸಿದರೆ ಏನಾಗುತ್ತದೆ ಎಂಬುದನ್ನು ಇದೇ ಅಲ್ಪಸಂಖ್ಯಾತರು ಆಲೋಚಿಸಬೇಕು.

ಸೆಕ್ಯುಲರ್ ಎಂಬ ಪದ ಭಾರತದ ಪಾಲಿಗೆ ವರ ಎಂಬುದಕ್ಕಿಂತ ಶಾಪವಾಗಿದ್ದೇ ಹೆಚ್ಚು ಎನಿಸುತ್ತದೆ ಅಲ್ಲವೇ. ಹೀಗೆ ಪ್ರಸ್ತುತ ಭಾರತದಲ್ಲಿ ಅಂಬೇಡ್ಕರ್ ಅವರ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕವನ್ನೊಮ್ಮೆ ಅವಲೋಕಿಸಿದರೆ, ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಆದರೆ ಅವೆಲ್ಲವೂ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್‌ನ ನಾಯಕರಿಗೆ ಅರ್ಥವಾಗಲಿಲ್ಲ ಎಂದರೆ ಯಾರನ್ನು ದೂರಬೇಕು. ಬ್ರಿಟಿಷರಿಂದ ಅಧಿಕಾರ ಪಡೆಯುವುದಷ್ಟೇ ಅವರಿಗೆ ಮುಖ್ಯವಾಯಿತೇ? ಅಂಬೇಡ್ಕರ್ ಅವರ ಆಲೋಚನೆಗಳಿಗೆ ಒಂದಿಷ್ಟು ಮನ್ನಣೆ ಕೊಟ್ಟಿದ್ದರೆ ಸ್ವತಂತ್ರ ಭಾರತದ ದಿಕ್ಕೇ ಬದಲಾಗುತ್ತಿತ್ತು ಎನಿಸುವುದಿಲ್ಲವೇ? ಅಂಬೇಡ್ಕರ್
ಅವರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿರುವವರು ಇದಕ್ಕೆಲ್ಲಾ ಉತ್ತರಿಸಬೇಕಷ್ಟೇ.