Friday, 22nd November 2024

ಕಥೆ ಹೆಣೆಯುವ ಮನಸ್ಸೆಂಬ ಮಾಯಾಂಗನೆ

ಕಥೆ ಹೇಳುವುದೆಂದರೆ ಮನಸ್ಸಿಗೆ ಇನ್ನಿಲ್ಲದ ಪ್ರೀತಿ. ನಿಜಾರ್ಥದಲ್ಲಿ ಕಥೆ ಹೇಳುವುದನ್ನು ಮನಸ್ಸು ಎಂದಿಗೂ ನಿಲ್ಲಿಸುವುದಿಲ್ಲ. ಪ್ರತಿದಿನ, ಪ್ರತಿಗಳಿಗೆಯೂ ಅದು ಕಥೆಯನ್ನು ನೇಯುತ್ತಲೆ ಇರುತ್ತದೆ. ನಾವು ಯಾರು?
ಹೇಗಿದ್ದೇವೆ? ಬದುಕಲ್ಲಿ ನಾವೇನು ಮಾಡಬೇಕು? ಬೇರೆಯವರು ನಮ್ಮ ಬಗ್ಗೆ ಏನು ತಿಳಿದಾರೋ? ಜಗತ್ತಿನ ಸಮಸ್ಯೆ ಏನು? ಭವಿಷ್ಯದಲ್ಲಿ ಏನಾಗುವುದು? ನಮ್ಮ ಹಿಂದಿನ ಬದುಕಲ್ಲಿ ಆದ ತಪ್ಪೇನು? ಹೀಗೆ ಆಕಾಶವಾಣಿ ರೇಡಿಯೋ ತರಹ ನಿಲ್ಲಿಸದೆ ಒಂದೇ ಸಮನೆ ಬಿತ್ತರಿಸುತ್ತದೆ ಕಥೆಗಳನ್ನು ಮನಸ್ಸು. ಸಮಸ್ಯೆ ಎಂದರೆ ಮನಸ್ಸು ಹೇಳುವ ಕಥೆಗಳಲ್ಲಿ ಹೆಚ್ಚಿನವು ಋಣಾತ್ಮಕವಾಗಿರುತ್ತವೆ. ಉದಾಹರಣೆಗೆ, ನಾನು ಯಾವುದಕ್ಕೂ ಪ್ರಯೋಜನವಿಲ್ಲ, ನಾನು ಮೂರ್ಖ, ನಾನು ದಪ್ಪಗಿದ್ದೇನೆ, ನನ್ನ ಬದುಕು ಅಸಹನೀಯವಾಗಿದೆ, ನನ್ನ ಭವಿಷ್ಯದ ಬಗೆಗೆ ಯಾವುದೇ ಆಶಾಭಾವವಿಲ್ಲ, ಯಾರೂ ನನ್ನನ್ನು ಇಷ್ಟಪಡುವುದಿಲ್ಲ, ನನ್ನಿಂದ ಇದನ್ನು ತಡೆಯಲು ಆಗುವುದಿಲ್ಲ, ನಾನು ಸಂತೋಷವಾಗಿರಲು ಸಾಧ್ಯವಾಗುತ್ತಿಲ್ಲ ಹೀಗೆ ಮನಸ್ಸು ಹೆಣೆಯುವ ಅನೇಕ ಕಥೆಗಳಲ್ಲಿ ಋಣಾತ್ಮಕತೆಯೇ ಹೆಚ್ಚು ತುಂಬಿರುತ್ತದೆ. ಇದನ್ನು ನಾವ್ಯಾರೂ ಅಪಸಾಮಾನ್ಯತೆಯೆಂದು ಪರಿಭಾವಿಸಬೇಕಿಲ್ಲ. ಸಂಶೋಧನೆಯೇ ಹೇಳುವಂತೆ ನಮ್ಮ ಮನಸ್ಸಿನ ಶೇ.೮೦ರಷ್ಟು ಆಲೋಚನೆಗಳು ಋಣಾತ್ಮಕ ಭಾವದಿಂದಲೇ ಕೂಡಿರುತ್ತವೆ. ಆದರೆ ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು, ಮನಸ್ಸಿನ ಈ ಕಥೆಗಳನ್ನು ವಾಸ್ತವದಲ್ಲಿ ನಾವು ನಿಜಾರ್ಥದಲ್ಲಿ ತೆಗೆದುಕೊಂಡು ಬಿಟ್ಟರೆ ಅನಗತ್ಯ ಆತಂಕ, ಉದ್ವಿಗ್ನತೆ, ಖಿನ್ನತೆ, ಅಭದ್ರತೆ, ಅಸ್ಥಿರತೆಗಳಲ್ಲೇ ಮುಳುಗಿ ಹೋಗಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ನಾವೆಲ್ಲ
ಮೈಗೂಡಿಸಿಕೊಳ್ಳುವ ಮಾನಸಿಕ ದಾರಿಗಳೆಂದರೆ ಮನಸ್ಸಿನ ಈ ಋಣಾತ್ಮಕ ಕಥೆಗಳನ್ನು ಕಿತ್ತೊಗೆಯಲು ಪ್ರಯತ್ನಿಸುವುದು:

  • ಕಥೆಗಳನ್ನು ಮತ್ತೆ ಗುರುತಿಸಿ ನೋಡಿ ಅದರೊಳಗಿನ ದೋಷವನ್ನು ಅಳಿಸಲು ಪ್ರಯತ್ನಿಸುವುದು.
  • ಕಥೆಯನ್ನು ಸಕಾರಾತ್ಮಕವಾಗಿ ಮತ್ತೆ ಬರೆಯಲು ಪ್ರಯತ್ನಿಸುವುದು.
  • ಕಥೆಯಿಂದ ನಮ್ಮನ್ನು ನಾವೇ ವಿಕರ್ಷಿಸಿಕೊಳ್ಳುವುದು.
  • ಕಥೆಯ ಜತೆಗೆ ಆ ಕಥೆ ಸರಿಯೋ ತಪ್ಪೋ ಎಂದು ವಾದ ಮಾಡುವುದು.

ಬದುಕಲ್ಲಿ ಒಮ್ಮೆಯಾದರೂ ನಮ್ಮ ಮನಸ್ಸು ಹೇಳಿರುವ ಋಣಾತ್ಮಕ ಕಥೆಗಳನ್ನು ಬದಲಾಯಿಸಲು ನಾವೆಲ್ಲ ಈ ಮೇಲಿನ ವಿಧಾನಗಳನ್ನು ಪ್ರಯತ್ನಿಸಿಯೇ ಇರುತ್ತೇವೆ. ಹೌದಲ್ಲವೇ? ಈ ತೆರನಾದ ತಂತ್ರಗಳ ಮೂಲಕ ಕಥೆಯನ್ನು ದೀರ್ಘಕಾಲದವರೆಗೆ ನಿಯಂತ್ರಿಸಲು ಸಾಧ್ಯವಿಲ್ಲ. ಹಾಗಾಗಿ ನಾವು ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಋಣಾತ್ಮಕ ಕಥೆಗಳೆಂದಿಗೂ ತಮ್ಮಷ್ಟಕ್ಕೆ ತಾವೇ ನಮಗೆ ಸಮಸ್ಯೆಯಾಗಿ ಕಾಡಿಲ್ಲ ಅಲ್ಲವೇ? ಅವುಗಳೊಂದಿಗೆ ನಾವು ಬೆಸೆದುಕೊಂಡಾಗಲಷ್ಟೇ, ಅವಕ್ಕೆ ನಾವು ಪ್ರತಿಕ್ರಿಯಿಸಿದಾಗಲಷ್ಟೇ, ಅವಕ್ಕೆ ನಮ್ಮ ಪೂರ್ಣಗಮನ ನೀಡಿದಾಗಲಷ್ಟೇ ಅವು ನಮಗೆ ಸಮಸ್ಯೆಗಳಾಗಿ ಮಾರ್ಪಾಡಾಗುವುದು. ಚಿಕ್ಕಂದಿನಿಂದ ‘ರಾಮ ಲಕ್ಷ್ಮಣ’ ಸಿನಿಮಾದ ಈ ಹಾಡನ್ನು ನಾವು ಕೇಳಿಯೇ ಬೆಳೆದಿದ್ದೀವಲ್ಲವೇ: ‘ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು’. ಇದನ್ನು ನಮ್ಮ ಮನಸ್ಸಿಗೂ ಅನ್ವಯಿಸಿಕೊಳ್ಳಬೇಕಿದೆ. ಪ್ರಸಿದ್ಧರ, ಜನಪ್ರಿಯ ತಾರೆಯರ ಅನೇಕ ವಿಷಯಗಳನ್ನು (ವೈಯಕ್ತಿಕ ವಿಚಾರಗಳನ್ನು ಒಳಗೊಂಡಂತೆ), ಅವರೆಡೆಗಿನ ಗಾಸಿಪ್‌ಗಳನ್ನು ನೋಡುತ್ತೇವೆ, ಕೇಳುತ್ತೇವೆ. ಅವುಗಳಲ್ಲಿ ಅನೇಕವು ನಮ್ಮನ್ನು ದಾರಿ ತಪ್ಪಿಸುವಂತಿರುತ್ತವೆ.

ಕೆಲವೊಂದು ಅತಿ ವಿಜೃಂಭಿತವಾಗಿದ್ದರೆ, ಕೆಲವೊಂದು ಬೇಕಂತಲೇ ಸೃಷ್ಟಿಸಿದವಾಗಿರುತ್ತವೆ. ಕೆಲವು ತಾರೆಯರು ಈ ಗಾಸಿಪ್ಪಿನ ವಿಚಾರಗಳನ್ನು ಕೊಡವಿಕೊಂಡು ಮುನ್ನಡೆದುಬಿಡುತ್ತಾರೆ, ಇನ್ನೂ ಕೆಲವರು ನೊಂದುಕೊಳ್ಳುತ್ತಾರೆ. ಮತ್ತೊಂದಿಷ್ಟು ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸರಿಗೆ ದೂರು ನೀಡುತ್ತಾರೆ (ಇದಂತೂ ಬಹಳ ಒತ್ತಡಕಾರಿಯಾಗಿದ್ದು, ನಮ್ಮ ಸಮಯ ಮತ್ತು ಶಕ್ತಿಯನ್ನು ಇನ್ನಿಲ್ಲದಂತೆ ವ್ಯಯಿಸಿಬಿಡುತ್ತದೆ). ಯಾವುದಕ್ಕೂ ಅಂಟಿಕೊಳ್ಳದ ಭಾವ ನಮ್ಮಲ್ಲಿದ್ದರೆ ಮೊದಲ ವರ್ಗದ ತಾರೆಗಳಂತೆ ಕಥೆಗಳು ನಮ್ಮವೇ ಆಗಿದ್ದರೂ ಅವ್ಯಾವುದನ್ನೂ ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವಕ್ಕೆ ನಾವು ಹೆಚ್ಚಿನ ಗಮನ ನೀಡು ವುದಿಲ್ಲ, ನಮ್ಮ ಶಕ್ತಿ ಮತ್ತು ಸಮಯವನ್ನು ಹಾಳು ಗೆಡವಿಕೊಂಡು ಯಾರೋ ಸೃಷ್ಟಿಸಿದ ಗಾಸಿಪ್‌ಗಳಿಗಾಗಿ ಹೋರಾಟ ಮಾಡುವುದಿಲ್ಲ. ಮನಸ್ಸು ಹೆಣೆಯುವ ಕಥೆಗಳಿಗೂ ನಾವು ಮಾಡಬೇಕಾಗಿರುವುದು ಇದನ್ನೇ. ಯಾವುದನ್ನೂ ಬದಲಾಯಿಸಲು ಪ್ರಯತ್ನಿಸಬಾರದು, ತಡೆಯಲು ಹವಣಿಸಬಾರದು, ಮನಸ್ಸಿನ ಕಥೆಗಳಿಂದ ಬಿಡಿಸಿಕೊಂಡು ಹೊರಡಬಾರದು. ಅದು ನಮ್ಮ ಅಸಮರ್ಥತೆಯಾಗಿಬಿಡುತ್ತದೆ. ಬದಲಾಗಿ, ನಾವು ಸುಮ್ಮನೆ ಒಪ್ಪಿಕೊಳ್ಳಬೇಕು- ಹೌದು ಇದೊಂದು ಕಥೆಯಷ್ಟೇ ಎಂದು.

ಮನಸ್ಸಿನ ಕಥೆ ಇದು ಘಟನೆಯಲ್ಲ:
ಈಗ ನಾನು ಹೇಳುವ ಕಥೆಯನ್ನು ಹಾಗೆ ಊಹಿಸಿಕೊಳ್ಳಿ. ಪೊಲೀಸ್ ಅಧಿಕಾರಿಯೊಬ್ಬರು ಬ್ಯಾಂಕ್ ದರೋಡೆ ಮಾಡಿದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಗುಂಡು ಹಾರಿಸಿ ಹಿಡಿಯುತ್ತಾರೆ. ಮಾರನೆಯ ದಿನ ಈ ವಿಷಯವನ್ನು ನಾವೆಲ್ಲ ದಿನಪತ್ರಿಕೆಯಲ್ಲಿ ಓದುತ್ತೇವೆ. ಒಂದು ಪತ್ರಿಕೆಯವರು ಘಟನೆಯ ಹಿನ್ನೆಲೆಯನ್ನು ನಿಖರವಾಗಿ ವರದಿ ಮಾಡಿರುತ್ತಾರೆ ಮತ್ತು ಆ ವರದಿಯು ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ದರೋಡೆಕೋರನನ್ನು ಹಿಡಿದ ಪೊಲೀಸ್ ಅಧಿಕಾರಿಯ ಹೆಸರು, ಬ್ಯಾಂಕ್ ಇದ್ದ ಸ್ಥಳ, ಎಷ್ಟು ಬಾರಿ ಗುಂಡು ಹಾರಿಸಿದರು ಹೀಗೆ ಎಲ್ಲವುಗಳ ನಿಖರ ಮಾಹಿತಿಯನ್ನು ಆ ಪತ್ರಿಕೆಯು ನೀಡಿರುತ್ತದೆ. ಮತ್ತೊಂದು ಪತ್ರಿಕೆಯು ಇದೇ ಘಟನೆಯ ಕುರಿತಾಗಿ ಕಡಿಮೆ ನಿಖರತೆಯೊಂದಿಗೆ ವರದಿಯನ್ನು ಪ್ರಕಟಿಸಿರುತ್ತದೆ ಮತ್ತು ಆ ಪತ್ರಿಕೆಯು ಕೆಲವು ವಿಷಯಗಳನ್ನು ಅತಿ ವಿಜೃಂಭಿತವಾಗಿ ವರದಿಮಾಡಿರುತ್ತದೆ. ಅದು ಎಷ್ಟರ ಮಟ್ಟಿಗೆಂದರೆ, ಅದರಲ್ಲಿನ ವಾಸ್ತವಾಂಶಗಳೂ ಮಾಯವಾಗಿಬಿಟ್ಟಿರುತ್ತವೆ. ಇಲ್ಲಿ ಕಥೆಯು ಸಂಪೂರ್ಣ ನಿಖರವಾಗಿದೆಯೋ, ತಪ್ಪೋ ಅಥವಾ ದಾರಿ ತಪ್ಪಿಸುತ್ತಿದೆಯೋ ಗೊತ್ತಿಲ್ಲ.

ಆದರೆ ಅದೊಂದು ಕಥೆ ಅಷ್ಟೇ. ಕಥೆಯನ್ನು ನಾವು ಓದಬಹುದಷ್ಟೇ. ಘಟನೆ ನಡೆದ ಸಂದರ್ಭದಲ್ಲಿ ನಾವು ಆ ಸ್ಥಳದಲ್ಲಿ ಇರಲಿಲ್ಲ. ನಮ್ಮ ಕಣ್ಣೆದುರಿಗೆ ಗುಂಡು ಹಾರಿಲ್ಲ. ನಮ್ಮೆದುರಿಗೆ ಇರುವುದೆಲ್ಲವೂ ಪದಗಳಷ್ಟೇ. ಈ ಘಟನೆಯನ್ನು ವಿವರಿಸಲು ಸಾಧ್ಯವಾಗುವುದು ಆ ಹೊತ್ತು ಆ ಜಾಗದಲ್ಲಿ ಇದ್ದು ಘಟನೆಯನ್ನು ನೋಡಿದ ವ್ಯಕ್ತಿಗಳಷ್ಟೇ. ಘಟನೆಯನ್ನು ಎಷ್ಟೇ ವಿವರವಾಗಿ ನಾವು ಪತ್ರಿಕೆಯಲ್ಲಿ ಓದಿದರೂ ಅದು ನಿಜ ಘಟನೆಯಾಗಿಬಿಡುವುದಿಲ್ಲ. ಹೀಗೆ ದಿನಪತ್ರಿಕೆಯಲ್ಲಿನ ಅನೇಕ ವಿವರಗಳನ್ನು ನಾವು ನೋಡುತ್ತಾ, ಓದುತ್ತಾ ಹೋಗುತ್ತಿದ್ದಂತೆ ಅದರಿಂದ ತೆಗೆದುಕೊಳ್ಳುವುದು ಏನೂ ಇಲ್ಲವೆನಿಸಿದಾಗ ಪತ್ರಿಕೆ ಕೆಳಗಿಟ್ಟು ನಾವು ಎದ್ದು ನಡೆದುಬಿಡಬಹುದು. ಆದರೆ ಮನಸ್ಸಿನಲ್ಲಿ ಕಥೆಗಳು ತೆರೆದುಕೊಂಡಾಗ ಅಷ್ಟು ಸುಲಭವಾಗಿ ಕೊಡವಿಕೊಂಡು ಹೊರನಡೆಯಲಾಗುವುದಿಲ್ಲ. ಮನಸ್ಸು ನಮ್ಮ ಆಲೋಚನೆ, ಊಹೆ, ನೆನಪುಗಳನ್ನು ಬೆಸೆದುಕೊಂಡು ಕಥೆ ಹೆಣೆಯುತ್ತಲೇ ಇರುತ್ತದೆ. ಹೀಗೆ ಮನಸ್ಸು ಬೆಸೆದು ಹೆಣೆದ ಬಲೆಯೊಳಗೆ ನಮಗೆ ಗೊತ್ತಿಲ್ಲದೆ ಸಿಲುಕಿಬಿಡುತ್ತೇವೆ. ಹಾಗೂ ಇವೇ ಆಲೋಚನೆಗಳನ್ನು ಸತ್ಯವೆಂದು ನಂಬತೊಡಗುತ್ತೇವೆ.

ನಾವು ಆಲೋಚಿಸುತ್ತಿರುವುದು ನಡೆದೇಹೋಯಿತು ಎಂಬಂತೆ, ಇವೇ ಆಲೋಚನೆಗಳು ಸತ್ಯವೆಂದು ನಂಬುತ್ತೇವೆ, ಇವೇ ಆಲೋಚನೆಗಳು ಬಹಳ ಗಂಭೀರವೆಂದು ಅವುಗಳಿಗೆ ಪೂರ್ಣ ಗಮನ ಹಾಗೂ ಪ್ರಾಮುಖ್ಯವನ್ನು ನೀಡುತ್ತೇವೆ. ಆಲೋಚನೆಗಳು ನೀಡುವ ಆದೇಶಗಳನ್ನು ಶಿರಸಾವಹಿಸಿ ಪಾಲಿಸುತ್ತೇವೆ. ಈ ಆಲೋಚನೆಗಳಲ್ಲಿ ಕೆಲವೊಂದು ನಮ್ಮನ್ನು ಭಯಪಡಿಸುತ್ತಲೇ ಇರುತ್ತವೆ, ಅವುಗಳಿಂದ ನಾವು ಮತ್ತಷ್ಟು ಮಗದಷ್ಟು ವಿಚಲಿತರಾಗಿ ಆತಂಕಕ್ಕೊಳಗಾಗುತ್ತೇವೆ.  ಹೀಗೆ ಕಾಡುವ ಮನಸ್ಸಿನ ಕಥೆಗಳು, ಆಲೋಚನೆಗಳು ನಮ್ಮನ್ನು ಆತಂಕಕ್ಕೂ, ಒತ್ತಡಕ್ಕೂ ಒಳಪಡಿಸುತ್ತವೆ. ಆಗೆಲ್ಲ ನಮಗೆ ನಾವೇ ಹೇಳಿಕೊಳ್ಳಬೇಕಿರುವುದು, ಈಗ ನನ್ನ ಮನಸ್ಸು ನನಗೆ ಹೇಳುತ್ತಿರುವ ಕಥೆ ಏನು? ಅದು ಸಕಾರಾತ್ಮಕ ಕಥೆಯೋ, ಋಣಾತ್ಮಕವೋ ಗಮನಿಸೋಣ, ಗೊಂದಲಕ್ಕೀಡು ಮಾಡುವಂತಿದ್ದರೆ ಅದನ್ನು ಶಮನಗೊಳಿಸಲು ಪ್ರಯತ್ನಿಸಬೇಕು. ಇಲ್ಲಿ ಒಂದು ಮಾತು ನೆನಪಿರಲಿ, ಮನಸ್ಸಿನ ಎಲ್ಲಾ ಕಥೆಗಳನ್ನು ಅಷ್ಟು ಸುಲಭವಾಗಿ ಶಮನಗೊಳಿಸಲು ಸಾಧ್ಯವಿಲ್ಲ. ಶಮನಗೊಳಿಸುವ ಪ್ರಕ್ರಿಯೆ ಅದೊಂದು ಕೌಶಲ, ಅದು ನಿರಂತರ ಅಭ್ಯಾಸದಿಂದ ಬರುವಂಥದ್ದು.
(ಬರಹದ ಮಿಕ್ಕ ಭಾಗ ಮುಂದಿನ ವಾರದ ಅಂಕಣದಲ್ಲಿ)