Saturday, 7th September 2024

ನುಡಿದಂತೆ ನಡೆದ ಸಿದ್ಧರಾಮಯ್ಯ ಸರಕಾರ

-ಬಿ.ಎಸ್.ಶಿವಣ್ಣ ಮಳವಳ್ಳಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ೧೦೦ ದಿನಗಳ ಆಡಳಿತವನ್ನು ಪೂರ್ಣಗೊಳಿಸಿದೆ. ಈ ೧೦೦ ದಿನಗಳು ಐದು ವರ್ಷಾವಧಿಯ ಆಡಳಿತದ ವಿಮರ್ಶೆಗೆ ಅಳತೆಗೋಲು ಎಂದು ತಕ್ಷಣಕ್ಕೆ ನಿರ್ಧರಿಸಲು ಸಾಧ್ಯವಿಲ್ಲವಾದರೂ, ಆಡಳಿತದ ರಥ ಯಾವ ದಿಶೆಯಲ್ಲಿ ಸಾಗುತ್ತಿದೆ ಎಂದು ಸ್ಪಷ್ಟವಾಗಿ ಹೇಳಬಹುದು. ಸಿದ್ದರಾ ಮಯ್ಯನವರು ‘ನುಡಿದಂತೆ ನಡೆಯುತ್ತೇವೆ’ ಎಂಬ ತಮ್ಮ ಘೋಷವಾಕ್ಯಕ್ಕೆ ಅಕ್ಷರಶಃ ಬದ್ಧರಾಗಿ ನಡೆದುಕೊಂಡಿದ್ದಾರೆ. ಚುನಾವಣೆಗೆ ಮುನ್ನ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ‘ಅನ್ನಭಾಗ್ಯ’, ‘ಶಕ್ತಿ’, ‘ಗೃಹಲಕ್ಷ್ಮಿ’, ‘ಗೃಹಜ್ಯೋತಿ’, ‘ಯುವನಿಧಿ’ ಎಂಬ ೫ ‘ಗ್ಯಾರಂಟಿ’ ಯೋಜನೆಗಳ ಪೈಕಿ ನಾಲ್ಕು ಯಶಸ್ವಿಯಾಗಿ
ಅನುಷ್ಠಾನಗೊಂಡಿದ್ದು, ಬಡವರ ಬದುಕಿನಲ್ಲಿ ಇವು ಹೊಸ ಬೆಳಕನ್ನು ಮೂಡಿಸಿವೆ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಪಂಚ ಗ್ಯಾರಂಟಿಗಳ ಜಾರಿಗೆ ವಿಪಕ್ಷಗಳು ಪಟ್ಟುಹಿಡಿದವು. ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದರು. ಆದರೆ ಸಿದ್ದರಾಮಯ್ಯನವರು ತಮ್ಮ ಅಸಾಧಾರಣ ಆಡಳಿತಾನುಭವವನ್ನು ಒರೆಗೆ ಹಚ್ಚಿ, ‘ಗ್ಯಾರಂಟಿ’ಗಳನ್ನು ಜಾರಿಮಾಡಿ ತಾವೊಬ್ಬ ಬದ್ಧತೆಯ ರಾಜಕಾರಣಿ ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದ್ದಾರೆ. ಮಹಿಳೆಯರು ಶಿಕ್ಷಣ, ಉದ್ಯೋಗ ಸಂಬಂಧಿತ ಪ್ರಯಾಣಗಳಿಗೆ ಯಾರನ್ನೂ ನೆಚ್ಚದೆ
ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವಂತಾಗಲು ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯಡಿ ಇದುವರೆಗೆ ಕೆಎಸ್‌ಆರ್ ಟಿಸಿ ಮತ್ತು ಬಿಎಂಟಿಸಿಯಲ್ಲಿ ಒಟ್ಟು ೨೯೯,೯೪೬,೯೪೬ ಮಹಿಳೆಯರು ಪಯಣಿಸಿದ್ದಾರೆ.

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಮಾಸಿಕ ಬಸ್ ಪಾಸ್ ಖರೀದಿಗೆ ೧,೨೦೦ ರು. ಕೊಡಬೇಕಿತ್ತು. ಆದರೆ ‘ಶಕ್ತಿ’ ಯೋಜನೆಯ ಜಾರಿಯ ನಂತರ ಈ ವೆಚ್ಚ ಉಳಿತಾಯವಾಗಿದ್ದು, ಪ್ರತಿದಿನ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಇದು ಆರ್ಥಿಕ ಅನುಕೂಲ ಕಲ್ಪಿಸಿದೆ ಹಾಗೂ ಉಳಿತಾಯದ ಹಣವನ್ನು ಅವರು ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚಿನ ನಿಭಾವಣೆಗೆ ಬಳಸಿಕೊಳ್ಳಲು ಸಾಧ್ಯವಾಗಿದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ.
ಇನ್ನು, ಮೈಸೂರಿನಲ್ಲಿ ಲೋಕಾರ್ಪಣೆಗೊಂಡ ಗೃಹಲಕ್ಷ್ಮಿ ಯೋಜನೆ ಇಡೀ ದೇಶದಲ್ಲೇ ಒಂದು ಮಾದರಿ ಕಾರ್ಯಕ್ರಮ. ೧.೧೦ ಕೋಟಿಗೂ ಹೆಚ್ಚಿನ ಫಲಾನುಭವಿಗಳ ಖಾತೆಗೆ ಏಕಕಾಲಕ್ಕೆ ತಲಾ ೨,೦೦೦ ರುಪಾಯಿಯನ್ನು ಜಮಾಮಾಡುವ  ಇಂಥ ಕ್ರಾಂತಿಕಾರಿ-ಕಲ್ಯಾಣ ಯೋಜನೆಯನ್ನು ಇದುವರೆಗೂ ಯಾವುದೇ ರಾಜ್ಯ ಸರಕಾರವೂ ಜಾರಿಮಾಡಿದ ಉದಾಹರಣೆಯಿಲ್ಲ. ವಾರ್ಷಿಕ ೩೨ ಸಾವಿರ ಕೋಟಿ ರು.ಗೂ ಹೆಚ್ಚು
ಖರ್ಚಾಗುವ ಇಂಥ ಯೋಜನೆಯನ್ನು, ಅಧಿಕಾರಕ್ಕೆ ಬಂದ ೧೦೦ ದಿನಗಳಲ್ಲಿ ಯಾವುದಾದರೂ ಸರಕಾರ ಜಾರಿಗೆ ತರಲಾದೀತೇ? ಸಿದ್ದರಾಮಯ್ಯನವರ ಸರಕಾರವು ಆರ್ಥಿಕ ತಜ್ಞರ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುತ್ತಲೇ, ಹಾಲಿ ಇರುವ ಯೋಜನೆಗಳನ್ನು ಮುಂದುವರಿಸುತ್ತಲೇ ಇದನ್ನು ಜಾರಿಮಾಡಿದೆ.

ಚುನಾವಣಾ ಪ್ರಣಾಳಿಕೆಯಲ್ಲಿನ ವಾಗ್ದಾನ ಕೇವಲ ಮತಸೆಳೆಯುವ ಗಿಮಿಕ್ ಎಂಬ ಆರೋಪವನ್ನು ಅದು ತನ್ಮೂಲಕ ಸುಳ್ಳುಮಾಡಿ, ಶತದಿನದ ಸಂಭ್ರಮಕ್ಕೆ ವಿಶ್ವಾಸದ ಗರಿ ನೀಡಿದೆ ಎನ್ನಲಡ್ಡಿಯಿಲ್ಲ. ಇದೇ ರೀತಿ, ಪ್ರತಿ ಮನೆ-ಮನವನ್ನು ಬೆಳಗುತ್ತಿರುವ ‘ಗೃಹಜ್ಯೋತಿ’ ಸರಕಾರದ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ. ಇದರ ಲಾಭ ಪಡೆಯಲಿಚ್ಛಿಸುವ -ಲಾನುಭವಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳ
ಬೇಕಿದ್ದು, ಮಾಸಿಕ ಗರಿಷ್ಠ ೨೦೦ ಯುನಿಟ್‌ವರೆಗಿನ ವಿದ್ಯುತ್ ಬಳಕೆ ಮಿತಿಯಲ್ಲಿ, ಮಾಸಿಕ ಸರಾಸರಿ ವಿದ್ಯುತ್ ಬಳಕೆಯ ಯುನಿಟ್‌ಗಳ ಮೇಲೆ ಶೇ.೧೦ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಗ್ರಾಹಕರು ಅರ್ಹರಿರುತ್ತಾರೆ. ಈ ಯೋಜನೆಯಡಿ ನೋಂದಾಯಿಸಿಕೊಂಡವರಿಗೆ ಆಗಸ್ಟ್ ೧ರಿಂದ ಶೂನ್ಯ ಬಿಲ್ ವಿತರಿಸಲಾಗುತ್ತಿದ್ದು, ನೋಂದಣಿ ಬಾಕಿಯಿರುವವರು ತಮ್ಮ ಆಧಾರ್ ಕಾರ್ಡ್, ಗ್ರಾಹಕರ ಐಡಿ ಮಾಹಿತಿಯನ್ನು ಗ್ರಾಮ-ಒನ್, ಕರ್ನಾಟಕ-ಒನ್, ವಿದ್ಯುತ್ ಸರಬರಾಜು ಕಂಪನಿಗಳ ಗೃಹಜ್ಯೋತಿ ನೋಂದಣಿ ಕೌಂಟರ್‌ಗಳಲ್ಲಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಹಸಿವುಮುಕ್ತ ಕರ್ನಾಟಕದ ಕನಸು ಕಂಡಿದ್ದ ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಲೇ, ಅಶಕ್ತರು ನೆಮ್ಮದಿಯ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಾಗಲೆಂದು ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಮಾಡಿದ್ದರು. ರಾಜ್ಯದಲ್ಲಿರುವ ‘ಅಂತ್ಯೋದಯ’ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ೫ ಕೆ.ಜಿ. ಆಹಾರಧಾನ್ಯಕ್ಕೆ ರಾಜ್ಯ ಸರಕಾರದ ವತಿಯಿಂದ ಹೆಚ್ಚುವರಿಯಾಗಿ ೫ ಕೆ.ಜಿ. ಸೇರಿಸಿ ಪ್ರತಿ ತಿಂಗಳೂ ತಲಾ ೧೦ ಕೆ.ಜಿ. ಧಾನ್ಯವನ್ನು ಉಚಿತವಾಗಿ ನೀಡುವುದು ಈ ಯೋಜನೆಯ ಧ್ಯೇಯ. ರಾಜ್ಯ ಸರಕಾರ ಈ ಯೋಜನೆಯ ಜಾರಿಗೆ ಮುಂದಾದಾಗ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಕುತ್ಸಿತ ಮನಸ್ಸಿನಿಂದ ಅಡ್ಡಗಾಲು ಹಾಕಿದರು.

ಕೇಂದ್ರ ಸ್ವಾಮ್ಯದ ಸಂಸ್ಥೆಗಳಿಂದ ಅಕ್ಕಿ ಕೊಡುವುದಕ್ಕೆ ಅವಕಾಶವಿದ್ದರೂ ನಿರಾಕರಿಸಿದರು. ರಾಜ್ಯ ಸರಕಾರ ಮುಕ್ತ ಮಾರುಕಟ್ಟೆಯಿಂದ ಖರೀದಿಸಿ ವಿತ್ತೀಯ ಸಮಸ್ಯೆ ಅನುಭವಿಸಲಿ ಎಂದು ಸಲ್ಲದ ಸಬೂಬು ನೀಡಿದರು. ಆದರೆ ಕೊಟ್ಟ ಮಾತನ್ನು ನಡೆಸಲೆಂದು ಖುದ್ದು ಮನವಿಪತ್ರ ಬರೆಯುವ ಮೂಲಕ ಸಿದ್ದರಾಮಯ್ಯ ಕೇಂದ್ರದ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ, ಅಗತ್ಯದ ಧಾನ್ಯವನ್ನು
ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಟೆಂಡರ್ ಕರೆದು, ಖರೀದಿ ಪ್ರಕ್ರಿಯೆ ಪೂರ್ಣಗೊಂಡು, ಧಾನ್ಯ ಸರಬರಾಜು ಆಗುವವರೆಗೆ ರಾಜ್ಯದಲ್ಲಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳೂ ೫ ಕೆ.ಜಿ. ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ೩೪ ರುಪಾಯಿಯಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತಿದ್ದು, ಈ ಪ್ರಕ್ರಿಯೆ ರಾಜ್ಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಇಷ್ಟು ಮಾತ್ರವಲ್ಲದೆ, ತನ್ನ ಮೊದಲ ಆವೃತ್ತಿಯ ಸಂದರ್ಭದಲ್ಲಿ ಜಾರಿಮಾಡಿದ್ದ ‘ಇಂದಿರಾ ಕ್ಯಾಂಟೀನ್’ ಯೋಜನೆಗೆ ಸಿದ್ದರಾಮಯ್ಯ ಸರಕಾರ, ತನ್ನ ೨ನೇ ಆವೃತ್ತಿಯಲ್ಲಿ ೩ ತಿಂಗಳು ಪೂರೈಸುವುದಕ್ಕೆ ಮುನ್ನವೇ ಮತ್ತೆ ಚಾಲನೆ ನೀಡಿದೆ. ಹಿಂದಿನ ಲೋಪದೋಷಗಳನ್ನು ಸರಿಪಡಿಸಿ ಕ್ಯಾಂಟೀನ್‌ನಲ್ಲಿ ಬಗೆಬಗೆಯ ಖಾದ್ಯ, ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡುವ ಮೂಲಕ ಬಡವರಿಗೆ ಮತ್ತು ಶ್ರಮಿಕ ವರ್ಗಕ್ಕೆ ಸಿದ್ದರಾಮಯ್ಯ ಆಸರೆಯಾಗಿ ನಿಂತಿದ್ದಾರೆ. ಕಳೆದ ೨ ದಶಕದಲ್ಲಿ ದೇಶದ ಯಾವುದೇ ಮುಖ್ಯಮಂತ್ರಿಯೂ ಇಷ್ಟೊಂದು ಬದ್ಧತೆಯಿಂದ ಆಡಳಿತ ನಡೆಸಿದ, ಕೊಟ್ಟ ಮಾತಿನಂತೆ ನಡೆದುಕೊಂಡ ಮತ್ತೊಂದು ಉದಾಹರಣೆ ಸಿಗಲಾರದು.

ಹೀಗಾಗಿ ೧೦೦ ದಿನಗಳ ಅವಧಿಯಲ್ಲಿ ಸಿದ್ದರಾಮಯ್ಯನವರು ಮಾದರಿ ಆಡಳಿತವನ್ನೇ ನೀಡಿದ್ದಾರೆ ಎನ್ನಲಡ್ಡಿಯಿಲ್ಲ. ಇನ್ನು ಆಡಳಿತದಲ್ಲಿ ಭ್ರಷ್ಟಾಚಾರ ತಡೆಯುವ ವಿಷಯದಲ್ಲೂ ಸಿದ್ದರಾಮಯ್ಯ ವಿಶೇಷ ಆಸ್ಥೆ ವಹಿಸಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ವರ್ಗಾವಣೆ ದಂಧೆಗೆ ನಿಯಂತ್ರಣ ಹೇರಲಾಗಿದೆ. ಅದೇ ರೀತಿ, ಹಿಂದಿನ ಸರಕಾರದ ಅವಧಿಯಲ್ಲಿ ನಡೆಯಿತೆನ್ನಲಾದ ೪೦ ಪರ್ಸೆಂಟ್ ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ನಡೆಯಿತೆನ್ನಲಾದ ಹಗರಣ ಹಾಗೂ ಖರೀದಿ ಅವ್ಯವಹಾರದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿದೆ. ಆ ಮೂಲಕವೂ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಮುಂದಿನ ೫ ವರ್ಷಗಳಲ್ಲಿ ‘ಕಲ್ಯಾಣ ಕರ್ನಾಟಕ’ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಡುತ್ತಿದೆ. ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಮರಾಜ್ಯದ ಕನಸು ನನಸಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.
(ಲೇಖಕರು ಲೋಹಿಯ ವಿಚಾರ ವೇದಿಕೆ ಅಧ್ಯಕ್ಷರು)

Leave a Reply

Your email address will not be published. Required fields are marked *

error: Content is protected !!