Saturday, 23rd November 2024

ಚಿತ್ರಮಂದಿರ ಖಾಲಿ ಇದೆ !

ತುಂಟರಗಾಳಿ

ಸಿನಿಗನ್ನಡ

ಚಿತ್ರಮಂದಿರ ತುಂಬಿದೆ ಅಥವಾ ಹೌಸ್ ಫುಲ್, ಇದು ಸಾಮಾನ್ಯವಾಗಿ ಚಿತ್ರರಂಗದವರಿಗೆ ಖುಷಿ ಕೊಡುವ ಬೋರ್ಡ್. ಆದರೆ
ಇತ್ತೀಚೆಗೆ ಈ ರೀತಿಯ ಬೋರ್ಡುಗಳು ಬೋರ್ಡಿಗೇ ಇಲ್ಲದಂತಾಗಿವೆ. ಎಲ್ಲಾ ಕೆಲವು ಸ್ಟಾರ್‌ಗಳ ಸಿನಿಮಾಗೆ ಮೊದಲೆರಡು ದಿನ ಇಂಥ ಬೋರ್ಡ್ ಬೀಳಬಹುದೇನೋ ಅಷ್ಟೇ. ಇದಕ್ಕೆ ಕಾರಣ ಏನು ಅಂತ ಉತ್ತರ ಹೇಳೋದು ಕಷ್ಟ.

ಒಂದು ಬಿಡುಗಡೆ ಆಗುತ್ತಿರುವ ಚಿತ್ರಗಳ ಸಂಖ್ಯೆ ಮಿತಿಮೀರುತ್ತಿದ್ದು, ವಾರಕ್ಕೆ ಏಳೆಂಟು ಸಿನಿಮಾಗಳನ್ನು ಬಿಡುಗಡೆ ಮಾಡಿ, ಅದ್ಯಾವ ಮುಖ ಇಟ್ಕೊಂಡು ನಮ್ಮ ಸಿನಿಮಾಗೆ ಬನ್ನಿ ಅಂತ ಜನರನ್ನ ಕರೆಯೋಕೆ ಆಗುತ್ತೆ ಹೇಳಿ. ಅದರಲ್ಲೂ ಈ ದುಬಾರಿ ದುನಿಯಾದಲ್ಲಿ ಒಂದ್ ಫ್ಯಾಮಿಲಿ ಒಂದ್ ಸಿನಿಮಾ ನೋಡಬೇಕು ಅಂದರೆ ಸಾವಿರಾರು ರುಪಾಯಿ ಖರ್ಚು ಮಾಡಬೇಕಾಗುತ್ತೆ. ಹಾಗಾಗಿ ಸಾಮಾನ್ಯ ಪ್ರೇಕ್ಷಕ, ಒಂದು ಚಿತ್ರದ ಬಗ್ಗೆ ತುಂಬಾ ಒಳ್ಳೆ ಒಪೀನಿಯನ್ ಬಂದರೆ ಮಾತ್ರ ಥಿಯೇಟರ್ ಕಡೆ ಮುಖ ಹಾಕುತ್ತಾನೆ.

ಇನ್ನು, ಜನ ಬರಲ್ಲ ಅಂತ ಚಿತ್ರಮಂದಿರಗಳಿಂದ ಬೇಗನೆ ಸಿನಿಮಾಗಳನ್ನ ತೆಗೀತಾರೆ. ಆದರೆ, ನಾವ್ ನೋಡಬೇಕು ಅಂದ್ರೆ ಆಗ್ಲೇ ಥಿಯೇಟರ್ ನಿಂದ ತೆಗೆದುಬಿಟ್ಟಿದ್ದಾರೆ ಅಂತಾರೆ ಜನ. ಇದೊಂಥರಾ, ಮದ್ವೆ ಆಗದೆ ಹುಚ್ಚು ಬಿಡಲ್ಲ, ಹುಚ್ಚು ಬಿಡದೆ ಮದುವೆ ಆಗಲ್ಲ ಅನ್ನೋ ಥರ. ಇದರ ಜೊತೆಗೆ, ಚಿತ್ರಮಂದಿರಕ್ಕಂತೂ ಜನ ಬರಲಿಲ್ಲ ಅಂತ ಸಿನಿಮಾದವರು ಸಿನಿಮಾ ರಿಲೀಸಾಗಿ ತಿಂಗಳಾಗುವ ಮೊದಲೇ ಓಟಿಟಿಗೆ ಸಿನಿಮಾ ಬಿಡ್ತಾರೆ.

ಅಯ್ಯೋ, ರಿಲೀಸಾಗಿ ತಿಂಗಳಿಗೆ ಮುಂಚೆ ಓಟಿಟಿಗೆ ಬರುತ್ತೆ, ಇಲ್ಲೇ ನೋಡೋಣ ಬಿಡು, ಥಿಯೇಟರ್‌ಗೆ ಯಾಕ್ ಹೋಗೋದು ಅಂತ ಜನನೂ ಫಿಕ್ಸ್ ಆಗಿಬಿಟ್ಟಿದ್ದಾರೆ. ಹಾಗಾಗಿ ಈಗೀಗ ಕೇವಲ ಅಭಿಮಾನಿ ದೇವರುಗಳು ಮಾತ್ರ ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಇದ್ರೆ ಮಾತ್ರ ಮೊದಲ ದಿನ ಥಿಯೇಟರ್ ಕಡೆ ತಲೆ ಹಾಕೋದು ಅನ್ನೋ ಥರ ಆಗಿದೆ. ಉಳಿದವರ ಪಾಲಿಗಂತೂ ಮನೆಯೇ ಚಿತ್ರಾಲಯ.

ಲೂಸ್ ಟಾಕ್
ವಾಟಾಳ್ ನಾಗರಾಜ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ನೀವು ಆವಾಗವಾಗ ಕರ್ನಾಟಕ ಬಂದ್ ಮಾಡ್ತೀನಿ ಅಂತ ಹೇಳಿ ವಾಪಸ್ ತಗೊತೀರಲ್ಲ, ಯಾಕೆ ?
-ಅದ್ ಬಂದು..
ಸಾರ್, ಬಂದ್ ಕ್ಯಾನ್ಸಲ್ ಆದ್ಮೇಲೆ, ಇನ್ನೇನ್ ಬಂದು?
-ರೀ, ಪೂರ್ತಿ ಹೇಳೋವರೆಗೂ ಕೇಳ್ರಿ, ಅದ್ ಬಂದು, ದೊಡ್ಡ ದೊಡ್ಡವರೆ ಅವರು ಬಂದು, ಬಂದ್ ಮಾಡಬೇಡಿ ಅಂತ
ಕೇಳ್ಕೊತಾರೆ. ಹಂಗಾಗಿ ಸುಮ್ಮನಾಗಬೇಕಾಗುತ್ತೆ.

ಸರಿ, ವಾಟಾಳ್ ನಾಗರಾಜ್ ಅವರು ಎಲ್ಲರನ್ನೂ ಬೈತಾರೆ ಅನ್ನೋ ಮಾತಿದೆಯಲ್ಲ, ಅದಕ್ಕೆ ಏನ್ ಹೇಳ್ತೀರಿ? 
-ನೋಡ್ರೀ, ನಂದು, ಬೈಯ್ಯೋದ್ರಲ್ಲಿ ಎತ್ತಿದ ಕೈ. ಅದಕ್ಕೇ ಹಾಗಂತಾರೆ ಅಷ್ಟೇ.

ಸರ್, ಎತ್ತಿದ ಕೈ ಅಂದ್ರೆ ಅದು ಹೊಡೆಯೋದ್ರಲ್ಲಿ ಅಲ್ವಾ, ಬಯ್ಯೋದ್ರಲ್ಲಿ ಹೆಂಗಾಗುತ್ತೆ.

-ರೀ, ನೀವ್ ಹಿಂಗೆ ಮಾತ್ ಮಾತಿಗೂ ಲಾಜಿಕ್ ಮಾತಾಡಿದ್ರೆ, ನಾನ್ ಸುಮ್ನೆ ಇರಲ್ಲ. ನಿಮ್ಮ ಬಾಯಿ ಬಂದ್ ಮಾಡಬೇಕು ಅಂತ ಒತ್ತಾಯಿಸಿ ಬಂದ್ ಮಾಡಿಸ್ತೀನಿ ಅಷ್ಟೇ.

ಹಂಗಾದ್ರೆ ನೀವು ಮಾತಾಡೋದ್ರಲ್ಲಿ ಫೇಮಸ್ ಅಂತ ನಿಮ್ಮ ಹೆಸರನ್ನ ಯೋಗಿ ಆದಿತ್ಯನಾಥ್ ಅವ್ರು ವಾಚಾಳ್ ನಾಗರಾಜ್ ಅಂತ ಬದಲಾಯಿಸಿಬಿಡ್ತಾರೆ ಅಷ್ಟೇ..
-ಹಂಗೆ ನನ್ ಸುದ್ದಿಗ್ ಬಂದ್ರೆ, ಆ ಯೋಗಿ ಹೆಸರನ್ನೇ ಲೂಸ್ ಮಾದ ಅಂತ ಬದಲಾಯಿಸ್ಬಿಡ್ತೀನಿ ಅಷ್ಟೇ. ಇಲ್ಲಿಗೆ ನಿಮ್ ಇಂಟರ್‌ವ್ಯೂ ಬಂದ್.. ಹೋಗ್ರೀ ಸಾಕು.

ನೆಟ್ ಪಿಕ್ಸ್

ಮಧ್ಯರಾತ್ರಿ ಖೇಮು ಆಟೋ ಓಡಿಸಿಕೊಂಡು ಮನೆಗೆ ಹೋಗುತ್ತಿದ್ದ. ದಾರಿಯಲ್ಲಿ ಒಬ್ಬ ಹೆಂಗಸು ನಿಂತ್ಕೊಂಡು ಕೈ ತೋರಿಸಿ ಅಡ್ಡ ಹಾಕಿದಳು. ಹೆಣ್ಣುಮಗಳು ಅಂತ ಗಾಡಿ ನಿಲ್ಲಿಸಿದ ಖೇಮು. ಅವಳ ಮುಖ ಯಾಕೋ ತಚುಂಬಾ ಗಂಭೀರವಾಗಿತ್ತು. ಅಲ್ಲದೆ, ಕಂಪ್ಲೀಟ್ ವೈಟ್ ಸೀರೆ ಹಾಕಿಕೊಂಡಿದ್ದಳು. ಮೈಮೇಲೆ ಒಂದೂ ಆಭರಣ ಇರಲಿಲ್ಲ. ಈ ರೋಡಲ್ಲಿ ದೆವ್ವಗಳ ಕಾಟ ಅಂತ ಗೊತ್ತಿದ್ರೂ ಯಾಕಪ್ಪಾ ನಿಲ್ಲಿಸಿದೆ ಅಂತ ಒಳಗೊಳಗೇ ಹೆದರಿಕೊಂಡ ಖೇಮು. ಆದರೆ ಆ ಹೆಣ್ಣು ಅಣ್ಣಾ ತುಂಬಾ ತಡ ಆಗಿದೆ ಕರ್ಕೊಂಡ್ ಹೋಗಿ ಅಂದಾಗ, ಇಲ್ಲ ಅನ್ನೋಕಾಗದೆ ಕೂರಿಸಿಕೊಂಡ. ಹಿಂದೆ ಕೂತಿರೋದು ದೆವ್ವ ಅನ್ನೋ ಭಯದ ಗಾಡಿ ಓಡಿಸುತ್ತಿದ್ದ ಖೇಮು. ತಗ್ಗು ದಿನ್ನೆ, ಹಂಪ್‌ಗಳ ಮೇಲೂ ಅವನಿಗೆ ಗಮನ ಇರಲಿಲ್ಲ.

ಬೇಗ ಮನೆಗೆ ತಲುಪಿದರೆ ಸಾಕು ಅಂತ ಸ್ಪೀಡಾಗಿ ಹೋಗುತ್ತಿದ್ದ ಖೇಮು. ಸ್ವಲ್ಪ ದೂರ ಹೋದ ಮೇಲೆ ಸುಮ್ಮನೆ ಅನುಮಾನ ದಿಂದ ಹಿಂದೆ ತಿರುಗಿ ನೋಡಿದರೆ, ಹುಡುಗಿಯ ಮುಖದಲ್ಲಿ ಒಂದಿಷ್ಟು ಕೆಂಪನೆ ಬಣ್ಣ ಕಾಣುತ್ತಿತ್ತು. ಅದು ರಕ್ತ ಅಂತ
ಗೊತ್ತಾಯಿತು ಖೇಮುಗೆ. ಮತ್ತೆ ಮುಂದೆ ಹೋಗಿ, ಮತ್ತೆ ತಿರುಗಿ ನೋಡಿದ. ಹೀಗೆ ಪ್ರತಿ ಸಾರಿ ತಿರುಗಿ ನೋಡಿದಾಗಲೂ ಆಕೆಯ ಮುಖದ ಮೇಲಿನ ರಕ್ತ ಜಾಸ್ತಿ ಆಗ್ತಾ ಬಂತು. ಖೇಮುಗೆ ಹಾರ್ಟ್ ಅಟ್ಯಾಕ್ ಆಗೋದೊಂದ್ ಬಾಕಿ. ಕೊನೆಗೆ ಆಕೆಯ
ಮುಖ ಸಂಪೂರ್ಣ ರಕ್ತ ಆಗಿದ್ದನ್ನು ನೋಡಿ, ಥಟ್ಟನೆ ಆಟೋ ನಿಲ್ಲಿಸಿ, ದಯವಿಟ್ಟು ನನ್ನ ಬಿಟ್ಟು ಬಿಡು, ನನಗೆ ಹೆಂಡ್ತಿ ಮಕ್ಳಿದ್ದಾರೆ. ಅಂದ. ಅದಕ್ಕೆ ಆಕೆ ಗಂಭೀರವಾಗಿ ಸ್ವಲ್ಪ ಸಿಟ್ಟಿನಿಂದಲೇ ಹೇಳಿದಳು, ‘ಅಯ್ಯೋ, ನಿನ್ ಮುಖ ಮುಚ್ಚಾ, ಅವಾಗಿಂದ ಅಷ್ಟೊಂದ್ ಸ್ಪೀಡಾಗಿ ಓಡಿಸ್ತಾ ಇದೀಯಾ.

ಹಂಪ್, ತಗ್ಗು ಬಂದಾಗ ಸಡನ್ ಆಗಿ ಬ್ರೇಕ್ ಹಾಕ್ತೀಯಾ, ಪ್ರತಿ ಸಾರಿ ನೀನು ಬ್ರೇಕ್ ಹಾಕಿದಾಗಲೂ ನನ್ನ ಮುಖ ಮುಂದಿನ ಮೆಟಲ್ ಬಾರ್‌ಗೆ ಹೊಡೆದುಕೊಂಡು ಹಿಂಗೆ ರಕ್ತ ಬರ್ತಾ ಇದೆ. ಬೇಗ ಆಸ್ಪತ್ರೆಗೆ ಕರ್ಕೊಂಡ್ ಹೋಗು’

ಲೈನ್ ಮ್ಯಾನ್

ಉತ್ತರ ಪ್ರದೇಶದಲ್ಲಿ ಅಷ್ಟೊಂದ್ ಸಮಸ್ಯೆ ಇದ್ರೂ, ‘ರಾಜ್ಯ ಅಭಿವೃದ್ಧಿ ವಿಷಯದಲ್ಲಿ ಮೇಲೆ’ ಹೋಗ್ತಾ ಇದೆ ಅಂತ ಯೋಗಿ ಹೇಳಿದ್ಯಾಕೆ

-ಯಾಕಂದ್ರೆ, ಅದರ ಹೆಸರೇ ‘UP’

‘ಇಸ್ಪೀಟ್ ಕಾರ್ಡ್’ಗಳನ್ನು ರಾಶಿ ಹಾಕಿ, ಅದರಲ್ಲಿ ಒಂದನ್ನು ಎತ್ತಿಕೋ ಅಂತ ಹೇಳೋದು

-‘ಎಲೆ’ಕ್ಷನ್

ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವವನು
-‘ರೋಲ್’ ಮಾಡೆಲ್
ಕೈ ನಡುಗುವ ಖಾಯಿಲೆ ಇರೋನ ಸಮಸ್ಯೆ
-ಯಾರ ಜೊತೆಗಾದ್ರೂ ಹ್ಯಾಂಡ್ ‘ಶೇಕ್’ ಮಾಡೋದು ಕಷ್ಟ
ಅನುಮಾನದ ಆಧಾರದ ಮೇಲೆ ಮಾಡಿದ ವರದಿ
-Whether ರಿಪೋರ್ಟ್
ಕನ್ನಡಿಗರು ವಿಶಾಲ ಹೃದಯದವರಾಗಿರೋದು ತಪ್ಪೇ
-ಯಾಕಂದ್ರೆ ಹಾರ್ಟ್ ಎನ್ ಲಾರ್ಜ್ ಆದ್ರೆ ಯಾರಿಗಾದ್ರೂ ಕಷ್ಟನೇ..
ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಸಂಘದ ಹೆಸರು
-ಅಖಿಲ ಕರ್ನಾಟಕ ನಿಖಿಲ ಅಭಿಮಾನಿಗಳ ಸಂಘ
ಇನ್ನೊಬ್ಬರನ್ನ ಕನ್ವಿ ಮಾಡೋ ಕೆಲಸಕ್ಕೆ ಬಹುಮಾನ ಕೊಟ್ಟರೆ ಅದಕ್ಕೆ ಏನಂತಾರೆ?
-ಸಮಾಧಾನಕರ ಬಹುಮಾನ
ಮುದುಕ ಮುದುಕಿಯರು ತಮ್ಮ ಯೌವನದ ಸೌಂದರ್ಯವನ್ನು ನೆನಪಿಸಿಕೊಳ್ಳೋದು ಹೇಗೆ ?
-‘ಅಂದ’ ಕಾಲತ್ತಿಲ್ ನಾನೂ ಸುಂದರವಾಗಿದ್ದೆ.
ಡೊಳ್ಳು ಹೊಟ್ಟೆಯ ರಾಜಕಾರಣಿಗಳು ಹೊಟ್ಟೆಗೇನ್ ತಿಂತಾರೆ ?

-’ಓಟ್ಸ್’