Wednesday, 30th October 2024

Dr N Someswara Column: ಅವನಿಗೆ ಹುಚ್ಚು ಹಿಡಿಸಿ ಕೊಂದುಬಿಟ್ಟರು !

BMJ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ 

ಕಾಲ: ಕ್ರಿ.ಶ.೧೮೪೭. ದೇಶ: ಹಂಗರಿ ವೈದ್ಯಕೀಯ ಕ್ಷೇತ್ರದ ಮಹಾನ್ ನಿಯತಕಾಲಿಕಗಳಲ್ಲಿ ಒಂದು ಬ್ರಿಟಿಷ್ ಮೆಡಿಕಲ್ ಜರ್ನಲ್. ಇದು ತನ್ನ ೧೧,೩೦೦ ಓದುಗರಿಗೆ ಒಂದು ಪ್ರಶ್ನೆ
ಯನ್ನು ಹಾಕಿತು ((BMJ 2007; 334 doi: https://doi.org/10.1136/bmj.39097.611806.DB, Published 18 January 2007; Cite this as: BMJ 2007 ;334:111)). ಮನುಕುಲದ ಆರೋಗ್ಯ ಇತಿಹಾಸವನ್ನು ಬದಲಿಸಿದ ೧೫ ಸಂಶೋಧನೆಗಳ ಪಟ್ಟಿಯನ್ನು ಪ್ರಕಟಿಸಿತು. ಈ ೧೫ ಸಂಶೋಧನೆಗಳಲ್ಲಿ ಯಾವ ಒಂದು ಸಂಶೋಧನೆಯು, ಮನುಷ್ಯನ ಅತ್ಯಂತ ಪ್ರಮುಖ ಸಂಶೋಧನೆಯೆನಿಸಿಕೊಂಡು, ಇಂದಿಗೂ ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಕೇಳಿಕೊಂಡಿತು.

ಶೇ. ೧೫.೮ರಷ್ಟು ಓದುಗರು ಸ್ವಚ್ಛತೆ, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿಗೆ ಪ್ರಥಮ ಸ್ಥಾನವನ್ನು ನೀಡಿದರು. ಶೇ.೧೫ರಷ್ಟು ಜನರು ಪ್ರತಿಜೈವಿಕ ಔಷಧಗಳಿಗೆ ಎರಡನೆಯ ಸ್ಥಾನವನ್ನು ನೀಡಿದರೆ, ಶೇ.೧೪ರಷ್ಟು ಜನರು ಅರಿವಳಿಕೆಗೆ ಮೂರನೆಯ ಸ್ಥಾನವನ್ನು ನೀಡಿದರು. ಸ್ವಚ್ಛತೆ, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಬಹುಪಾಲು ಸೋಂಕುರೋಗಗಳನ್ನು ತಡೆ ಗಟ್ಟಿ, ಲಕ್ಷಾಂತರ ಜನರ ಸಾವುನೋವನ್ನು ತಪ್ಪಿಸಿದವು. ಈ ತಿಳಿವಳಿಕೆಯು ಬೆಳೆದ ಬಂದ ದಾರಿಯು ನಿಜಕ್ಕೂ ರೋಚಕವಾದದ್ದು ಹಾಗೂ ವಿಷಾದಭರಿತವಾದದ್ದು. ನಮ್ಮ ಆಧುನಿಕ
ವೈದ್ಯಕೀಯಕ್ಕೆ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದರ ಮಹತ್ವವು ಹೇಗೆ ತಿಳಿದುಬಂದಿತು ಎನ್ನುವುದನ್ನು ಮೊದಲು ಗಮನಿಸೋಣ.

೧೮ನೆಯ ಶತಮಾನದ ಆದಿಭಾಗ. ವೈದ್ಯರು ತಮ್ಮ ಕೈಗಳನ್ನು ತೊಳೆದುಕೊಳ್ಳುವುದು ತಪ್ಪು ಎಂದು ತಿಳಿದಿದ್ದರು! ಶಸ್ತ್ರವೈದ್ಯನು, ಶಸ್ತ್ರಚಿಕಿತ್ಸೆಯನ್ನು ಮಾಡಿದ ನಂತರ ತನ್ನ ರಕ್ತಸಿಕ್ತ ಕೈಗಳನ್ನು, ತಾನು ಹಾಕಿಕೊಂಡಿದ್ದ ಕೋಟಿಗೆ ಒರೆಸಿಕೊಳ್ಳುತ್ತಿದ್ದನು! ಯಾವ ವೈದ್ಯನ ಕೋಟು ಅತ್ಯಂತ ರಕ್ತಮಯವಾಗಿ ಕಾಣುವುದೋ, ಅವನೇ ಆ ಆಸ್ಪತ್ರೆಯ ಅತ್ಯಂತ ದೊಡ್ಡ ವೈದ್ಯ ಎಂದು ಜನಸಾಮಾನ್ಯರನ್ನು ಬಿಡಿ, ವೈದ್ಯಕೀಯ ಸಿಬ್ಬಂದಿಯೂ ಭಾವಿಸಿದ್ದರು!

ಅಂದಿನ ದಿನಗಳಲ್ಲಿ ವೈದ್ಯರು ಮೂರು ರೀತಿಯ ಕೆಲಸಗಳಲ್ಲಿ ತೊಡಗುತ್ತಿದ್ದರು. ಅವೆಂದರೆ- ಸಂಶಯಾಸ್ಪದ ಸಾವಿಗೀಡಾದವರ ಶವವನ್ನು ವಿಚ್ಛೇದಿಸುತ್ತಿದ್ದರು; ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದರು; ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಈ ಮೂರೂ ಕೆಲಸವನ್ನು ಮಾಡುವಾಗ ಎಲ್ಲಿಯೂ ಅಪ್ಪಿತಪ್ಪಿಯೂ ಕೈಗಳನ್ನು ತೊಳೆಯುತ್ತಿರಲಿಲ್ಲ! ಜರ್ಮನಿಯ ವಿಯನ್ನ ಸಾರ್ವಜನಿಕ ಆಸ್ಪತ್ರೆ. ಅಲ್ಲಿ ಪ್ರಸೂತಿ ತಂತ್ರ ವಿಭಾಗದಲ್ಲಿ ಎರಡು ವಾರ್ಡುಗಳಿದ್ದವು. ಮೊದಲನೆಯ ವಾರ್ಡು ವೈದ್ಯವಿದ್ಯಾರ್ಥಿಗಳ ಹಾಗೂ
ಎರಡನೆಯ ವಾರ್ಡು ದಾದಿಯರ ಉಸ್ತುವಾರಿಯಲ್ಲಿತ್ತು. ೧೮೪೧-೪೬ರವರೆಗೆ, ಈ ವಾರ್ಡಿನಲ್ಲಿ ಬಾಣಂತಿ ಜ್ವರದಿಂದ ಸತ್ತವರ ಅಂಕಿ-ಸಂಖ್ಯೆಯು ಕೆಳಗಿನ ಪಟ್ಟಿಯಲ್ಲಿದೆ. ಈ ಪಟ್ಟಿಯನ್ನು ನೋಡುತ್ತಿದ್ದ ಹಾಗೆಯೇ, ಮೊದಲನೆಯ ವಾರ್ಡಿನಲ್ಲಿ ದಾಖಲಾಗುತ್ತಿದ್ದ ಬಾಣಂತಿಯರು ನಂಜಿಗೆ ತುತ್ತಾಗಿ ಹೆಚ್ಚು ಸಾಯುತ್ತಿದ್ದರು ಎನ್ನುವ ಅಂಶವು ಸ್ಪಷ್ಟವಾಗುತ್ತದೆ. ಆದರೆ ಯಾರೂ ಈ ಅಂಕಿ-ಸಂಖ್ಯೆಗಳನ್ನು ಹೋಲಿಸುವ, ಕಾರಣವನ್ನು ತಿಳಿಯುವ ಗೋಜಿಗೆ ಹೋಗಲೇ ಇಲ್ಲ. ಹಾಗಿರುವಾಗ ಪರಿಹಾರದ ಪ್ರಶ್ನೆಯು ಬರಲೇ ಇಲ್ಲ. ೧೮೪೭. ಈ ಆಸ್ಪತ್ರೆಯಲ್ಲಿ ಇಗ್ನಜ಼್ ಫಿಲಿಪ್ ಸೆಮ್ಮೆಲ್ ವೀಸ್ (೧೮೧೮-೧೮೬೫) ಎಂಬ ವೈದ್ಯನಿದ್ದ. ಈತನ ಗೆಳೆಯ ಜಾಕೋಬ್ ಕೊಲ್ಲೆಟ್‌ಷ್ಕ (೧೮೦೩-೧೮೪೭). ಒಂದು ದಿವಸ ಶವವಿಚ್ಛೇದನವನ್ನು ಮಾಡುತ್ತಿದ್ದಾಗ, ಅಕಸ್ಮಾತ್ ತನ್ನ ಬೆರಳಿಗೆ ಗಾಯ ಮಾಡಿಕೊಂಡ. ಈ ಗಾಯವು ನಂಜಾಯಿತು. ಕೆಲವು ದಿನಗಳಲ್ಲಿ ಈತನು ಮರಣಿಸಿದ. ಈತನ ಶವವಿಚ್ಛೇದನವನ್ನು ಸೆಮ್ಮೆಲ್‌ವೀಸ್ ಮಾಡಿದ.

ಜಾಕೋಬನ ದೇಹದಲ್ಲಿ ರೂಪುಗೊಂಡಿದ್ದ ಬದಲಾವಣೆಗಳು, ಬಾಣಂತಿ ನಂಜಿನಿಂದ ಸತ್ತ ಮಹಿಳೆಯರ ಒಡಲಿನಲ್ಲಿ ರೂಪುಗೊಂಡಿದ್ದ ಬದಲಾವಣೆಗಳಂತೆಯೇ ಇದ್ದವು! ಇದನ್ನು ನೋಡಿದ
ಕೂಡಲೇ ಸೆಮ್ಮೆಲ್‌ವೀಸ್‌ನ ಮನಸ್ಸಿನಲ್ಲಿ, ಶವವಿಚ್ಛೇದನಕ್ಕೂ ಹಾಗೂ ಬಾಣಂತಿಜ್ವರಕ್ಕೂ ಏನಾದರೂ ಸಂಬಂಧವಿರಬಹುದೆ ಎಂಬ ಅನುಮಾನವು ಮೂಡಿತು! ಆಗ ಆತನು ಆಸ್ಪತ್ರೆಯ ಹಿಂದಿನ ದಾಖಲೆಗಳನ್ನು ತರಿಸಿ, ಬಾಣಂತಿಜ್ವರ ದಿಂದ ಮೃತರಾದವರ ಅಂಕಿ-ಸಂಖ್ಯೆಗಳನ್ನು ಪಟ್ಟಿಮಾಡಿದ. ಮೊದಲ ವಾರ್ಡಿನಲ್ಲಿ ಸಾವಿನ ಪ್ರಮಾಣ ಸರಾಸರಿ ಶೇ.೧೦ರಷ್ಟಿದ್ದರೆ, ಎರಡನೆಯ ವಾರ್ಡಿನಲ್ಲಿ ಸರಾಸರಿ ಶೇ.೪ರಷ್ಟಿತ್ತು. ಬಾಣಂತಿಯರು ತಮ್ಮನ್ನು ಮೊದಲನೆಯ ವಾರ್ಡಿಗೆ ದಾಖಲಿಸಬೇಡಿ ಎಂದು ವೈದ್ಯರ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತಿದ್ದರು. ಅನೇಕ ಸಲ ಬೇಕೆಂದೇ ಆಸ್ಪತ್ರೆಗೆ ಬರುವ ಮಾರ್ಗದಲ್ಲಿ ಹೆರಿಗೆಯನ್ನು ಮುಗಿಸಿಕೊಂಡು, ಕೇವಲ ಆರೈಕೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಸೆಮ್ಮೆಲ್‌ವೀಸ್ ಇಂಥ ತಾಯಂದಿರನ್ನು ಗಮನಿಸಿದ.

ಬೀದಿಯಲ್ಲಿ ಮಗುವನ್ನು ಹೆತ್ತವರಲ್ಲಿ ಸಾವು ಅಧಿಕವಾಗಿರಬೇಕಿತ್ತು. ಆದರೆ ವಾಸ್ತವವು ಭಿನ್ನವಾಗಿತ್ತು. ಮೊದಲನೆಯ ವಾರ್ಡಿನಲ್ಲಿ ಮಗುವಿಗೆ ಜನ್ಮವಿತ್ತ ತಾಯಂದಿರೇ ಹೆಚ್ಚು ಮರಣವನ್ನಪ್ಪು ತ್ತಿದ್ದರು. ಸೆಮ್ಮೆಲ್‌ವೀಸ್ ತರ್ಕಬದ್ಧವಾಗಿ ಯೋಚಿಸಿ, ಈ ಕೆಳಗಿನ ತೀರ್ಮಾನಕ್ಕೆ ಬಂದ. (ಎರಡು ವಾರ್ಡುಗಳಲ್ಲಿ ಬಾಣಂತಿಜ್ವರದಿಂದ ಸತ್ತವರ ಪ್ರಮಾಣ: ೧೮೪೧-೪೬ರವರೆಗೆ) ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಶವವಿಚ್ಛೇದನವನ್ನು ಮಾಡಿ, ಅದೇ ಕೈಗಳಿಂದ ಹೆರಿಗೆಯನ್ನು ಮಾಡಿಸುತ್ತಿದ್ದರು! ಶವದಲ್ಲಿದ್ದ ಬ್ಯಾಕ್ಟೀರಿಯಾದಿಗಳು ಈ ವೈದ್ಯ ವಿದ್ಯಾರ್ಥಿಗಳ ಕೈಗಳ ಮೂಲಕ ಬಾಣಂತಿಯರ ಒಡಲನ್ನು ಸೇರುತ್ತಿದ್ದವು. ನಂಜನ್ನು ಉಂಟುಮಾಡುತ್ತಿದ್ದವು. ಅವರು ಸಾಯುತ್ತಿದ್ದರು. ಬಾಣಂತಿಯರ ಸಾವಿಗೆ ವೈದ್ಯ ವಿದ್ಯಾರ್ಥಿಗಳು ನೇರವಾಗಿ ಕಾರಣವಾಗುತ್ತಿದ್ದರು. ಎರಡನೆಯ ವಾರ್ಡಿನಲ್ಲಿದ್ದ ಮಹಿಳೆಯರ ಹೆರಿಗೆಯನ್ನು ದಾದಿಯರು ಮಾಡಿಸುತ್ತಿದ್ದರು. ದಾದಿಯರು ಶವವಿಚ್ಛೇದನದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅವರ ಕೈಗಳು ಹೆಚ್ಚೂಕಡಿಮೆ ಶುದ್ಧವಾಗಿರು ತ್ತಿದ್ದವು. ಎರಡನೆಯ ವಾರ್ಡಿನೊಳಗೆ ವೈದ್ಯ ವಿದ್ಯಾರ್ಥಿಗಳಿಗೆ ಪ್ರವೇಶವಿರಲಿಲ್ಲ. ಹಾಗಾಗಿ ಅಲ್ಲಿ ಬಾಣಂತಿನಂಜು ಕಡಿಮೆ ಪ್ರಮಾಣದಲ್ಲಿತ್ತು!

ಅಂದಿನ ದಿನಗಳಲ್ಲಿ ಸೂಕ್ಷ್ಮಜೀವಿಗಳು ರೋಗಜನಕಗಳಾಗಬಹುದು ಎಂಬ ಅರಿವು ಯಾರಿಗೂ ಇರಲಿಲ್ಲ. ಆದರೆ ಸೆಮ್ಮೆಲ್‌ವೀಸ್, ವೈದ್ಯವಿದ್ಯಾರ್ಥಿಗಳು ಶವಗಳಿಂದ ಯಾವುದೋ ‘ಸೋಂಕು ಕಣ’ಗಳನ್ನು ಬಾಣಂತಿಯರಿಗೆ ವರ್ಗಾಯಿಸುತ್ತಿದ್ದಾರೆಂದು ಲೆಕ್ಕ ಹಾಕಿದ. ಕೂಡಲೇ ಒಂದು ಹೊಸ ನಿಯಮವನ್ನು ಜಾರಿಗೆ ತಂದ. ಹೆರಿಗೆಯನ್ನು ಮಾಡಿಸುವ ಪ್ರತಿಯೋರ್ವ ವೈದ್ಯ
ಹಾಗೂ ವೈದ್ಯ ವಿದ್ಯಾರ್ಥಿಯು ತನ್ನ ಕೈಗಳನ್ನು ಕ್ಲೋರಿನ್ ಯುಕ್ತ ಸುಣ್ಣದ ನೀರಿನಿಂದ (ಕ್ಯಾಲ್ಷಿಯಂ ಹೈಪೋಕ್ಲೋರೈಟ್) ತೊಳೆದುಕೊಂಡ ಮೇಲೆಯೇ ಹೆರಿಗೆಯನ್ನು ಮಾಡಿಸಬೇಕೆಂದ. ಇಗ್ನಜ಼್ ಸೆಮ್ಮೆಲ್‌ವೀಸನ ಸಲಹೆಯನ್ನು ಆತನ ಸಹೋದ್ಯೋಗಿಗಳು ಉಗ್ರವಾಗಿ ಪ್ರತಿಭಟಿಸಿದರು.

ಆದರೆ ಸೆಮ್ಮೆಲ್‌ವೀಸ್ ಇದಕ್ಕೆ ಸೊಪ್ಪು ಹಾಕಲಿಲ್ಲ. ನೋಡ ನೋಡುತ್ತಿರುವಂತೆಯೇ ಶೇ.೧೦.೦ರಷ್ಟಿದ್ದ ಬಾಣಂತಿ ನಂಜಿನ ಮರಣದ ಪ್ರಮಾಣ ಶೇ.೨.೩೮ಕ್ಕೆ ಇಳಿಯಿತು. ೧೮೪೮ರ
ವರ್ಷ, ಹೆರಿಗೆಯಲ್ಲಿ ಉಪಯೋಗಿಸುವ ಉಪಕರಣ ಗಳನ್ನೂ ಕ್ಲೋರಿನ್‌ಯುಕ್ತ ಸುಣ್ಣದ ನೀರಿನಲ್ಲಿ ತೊಳೆಯಬೇಕು ಎಂದು ಸೆಮ್ಮೆಲ್‌ವೀಸ್ ಸೂಚಿಸಿದನು. ಇದರಿಂದ ಬಾಣಂತಿಯರ ಸಾವಿನ ಪ್ರಮಾಣ ಮತ್ತಷ್ಟು ಕಡಿಮೆಯಾಯಿತು! ಮುಂದಿನ ದಿನಗಳಲ್ಲಿ ಲೂಯಿ ಪ್ಯಾಶ್ಚರ್ ನಮ್ಮ ಬರಿಗಣ್ಣಿಗೆ ಕಾಣದ ಅದೃಶ್ಯ ಲೋಕದ ಅಗೋಚರ ಜೀವಿಗಳನ್ನು ಕಂಡುಹಿಡಿದ. ಜೋಸೆ- ಲಿಸ್ಟರ್ ಕಾರ್ಬಾಲಿಕ್ ಆಸಿಡ್ ಮೂಲಕ ಶಸಚಿಕಿತ್ಸೆಗಳಲ್ಲಿ ನಂಜುರಾಹಿತ್ಯದ ಮಹತ್ವವನ್ನು ಎತ್ತಿಹೇಳಿದ.

ಇವೆರಡರ ಪರಿವೆಯಿಲ್ಲದೆಯೇ ಕೈಗಳನ್ನು ತೊಳೆಯಬೇಕಾದ ಮಹತ್ವವನ್ನು ಸೆಮ್ಮೆಲ್‌ವೀಸ್ ಹೇಳಿದ್ದ! ಆದರೆ ಅವನು ಬದುಕಿದ್ದಾಗ, ಅವನಿಗೆ ಯಾವುದೇ ಸನ್ಮಾನ ದೊರೆಯಲಿಲ್ಲ. ಬದಲಿಗೆ ಕೇವಲ ನೋವು, ಅವಮಾನ, ಹಿಂಸೆಗಳು ಮಾತ್ರ ದೊರೆತವು. ಸೆಮ್ಮೆಲ್‌ವೀಸನಿಗೆ ಶತ್ರುಗಳು ಸಾಕಷ್ಟಿದ್ದರು. ಜತೆಗೆ ಸೆಮ್ಮೆಲ್ ವೀಸನ ರಾಜಕೀಯ ಒಲವು ಆಳುವ ಪಕ್ಷಕ್ಕಿಂತ ಬೇರೆ ಪಕ್ಷದ
ಕಡೆಗಿತ್ತು. ೧೮೬೫ರಲ್ಲಿ ಸೆಮ್ಮೆಲ್‌ವೀಸ್‌ನ ಶತ್ರುಗಳು ಸೆಮ್ಮೆಲ್ ವೀಸ್‌ನಿಗೆ ಹುಚ್ಚು ಹಿಡಿದಿದೆಯೆಂದು ಹುಚ್ಚಾಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವನಿಗೆ ನೀಡಿದ ಹಿಂಸೆಯ ಫಲವಾಗಿ ಆತ ಸದ್ದಿಲ್ಲದ ಹಾಗೆ ಜೀವವನ್ನು ಬಿಟ್ಟ!