ಪ್ರತಿಸ್ಪಂದನ
ಶಂಕರನಾರಾಯಣ ಭಟ್
‘ಸಂಪಾದಕರ ಸದ್ಯಶೋಧನೆ’ ವಿಭಾಗದಲ್ಲಿ ಪ್ರಕಟಗೊಂಡ ‘ಕಾಲ ಕೆಟ್ಟುಹೋಯ್ತು ಎಂಬ ವ್ಯಸನ’ ತುಣುಕು ಬರಹವು (ವಿಶ್ವವಾಣಿ ಆ.೧೯) ತುಸು ಆಳವಾಗಿ ಆಲೋಚಿಸುವಂತೆ ಮಾಡಿತು. ಈ ರೀತಿಯ ಹೇಳಿಕೆ ವಯಸ್ಸಾದವರ ಬಾಯಿಂದ ಬರುವಂಥದ್ದು ಎಂಬುದನ್ನು ಒಪ್ಪಿದರೂ, ಇದು ಅಸಹಾಯಕರ ಮಾತು ಎನ್ನಲಾಗದು.
ನಮಗೆ ವಯಸ್ಸಾದಂತೆ, ಅಂದರೆ ಕಾಲ ಗತಿಸಿದಂತೆ ನಮ್ಮ ವಿಚಾರ, ನಡೆ, ತಿಳಿವಳಿಕೆ ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಅದು ಸಹಜವೂ ಹೌದು. ‘ಅಪ್ಪ ನೆಟ್ಟ ಆಲದಮರಕ್ಕೇ ಜೋತುಬೀಳಬೇಕೆಂದಿಲ್ಲ’ ಎಂದು ಹೇಳುವುದು ಇದಕ್ಕೇ ಅಲ್ಲವೇ? ಅಂದು ಅದೇ ಸರಿಯಿತ್ತು. ಅದೇಕೆ ಸರಿಯಿತ್ತು ಎಂದರೆ, ಅಂದಿನ ಕಾಲಮಾನಕ್ಕೆ ಅದೇ ಹೊಂದಿಕೆ ಮತ್ತು ಒಪ್ಪಿಗೆ ಆಗುತ್ತಿತ್ತು. ಒಂದು ಸರಳ ಉದಾಹರಣೆಯನ್ನೇ ತೆಗೆದುಕೊಳ್ಳೋಣ- ಅಂದು ವಧುವಿಗೆ ವರನ ಅನ್ವೇಷಣೆಯು ಹಿರಿಯರಿಂದಲೇ ಆಗುತ್ತಿತ್ತು.
ಮಾತ್ರವಲ್ಲ, ತನ್ನ ಬಾಳಸಂಗಾತಿಯಾಗುವವನು ಯಾರು, ಹೇಗಿದ್ದಾನೆ? ಆತ ತನ್ನನ್ನು ಅರ್ಥಮಾಡಿಕೊಳ್ಳಬಲ್ಲನೇ ಅಥವಾ ತಾನು ಅವನೊಂದಿಗೆ ಸಂಸಾರ ನಡೆಸಬಹುದೇ? ಎಂಬಿತ್ಯಾದಿ ವಿಚಾರಗಳ ಪರಿಚಯವೇ ವಧುವಿಗೆ ಇರುತ್ತಿರಲಿಲ್ಲ. ಹಿರಿಯರ ಆಣತಿಯ ಮೇರೆಗೆ ಮದುವೆ ಕಾರ್ಯಕ್ರಮ ಮುಗಿದೇಹೋಗುತ್ತಿತ್ತು. ವಧು-ವರರು ಮದುವೆ ಮಂಟಪದಲ್ಲೇ ಒಬ್ಬರನ್ನೊಬ್ಬರು ಕದ್ದುಮುಚ್ಚಿ ನೋಡಿಕೊಳ್ಳಬೇಕಾಗುತ್ತಿತ್ತು! ಅಷ್ಟರ ಮಟ್ಟಿಗೆ ವಧುವನ್ನು ಕತ್ತಲೆಯಲ್ಲಿ ಇಡಲಾಗುತ್ತಿತ್ತು.
ಇದು ತೀರಾ ಅಸಮರ್ಪಕ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಹಾಗೆಂದ ಮಾತ್ರಕ್ಕೆ ಇಂದಿನ ಪದ್ಧತಿಯನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳ ಲಾದೀತೇ? ಸ್ವತಃ ಹೆಣ್ಣೇ ಹುಡುಕಿಕೊಂಡು ಹೋಗಿ ಮದುವೆ ಆದರೂ ಕೆಲವೇ ದಿನಗಳಲ್ಲಿ ಬೇರ್ಪಟ್ಟ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಒಬ್ಬರನ್ನೊಬ್ಬರು ಪ್ರೀತಿಸಿ, ವರ್ಷಗಟ್ಟಲೆ ಭೆಟ್ಟಿಯಾಗುತ್ತಿದ್ದರೂ, ಕೊನೆಯ ಕ್ಷಣದಲ್ಲಿ ಮದುವೆ ಮುರಿದು ಹೋಗುವ ಘಟನೆಗಳೂ ಸಾಕಷ್ಟಿವೆ. ಅಂದು ಒಮ್ಮೆ ‘ಗಂಡ-ಹೆಂಡತಿ’ ಅಂತ ನಾಲ್ಕು ಜನರ ಮಧ್ಯೆ ಇತ್ಯರ್ಥವಾಯಿ ತೆಂದರೆ, ಮುಂದಿನ ದಿನಗಳನ್ನು ಒಟ್ಟಿಗೆ ಸಾಗಿಸಲೇಬೇಕಿತ್ತು. ಅದೊಂದು ರೀತಿಯ ಶಾಶ್ವತ ಬಂಧನವೇ ವಿನಾ ಹುಡುಗಾಟವಾಗಿರಲಿಲ್ಲ.
ಹೊಂದಾಣಿಕೆ ಎಂಬುದೇ ಅಲ್ಲಿ ಮೂಲಮಂತ್ರ. ಉಸಿರಿರುವ ತನಕ ಒಟ್ಟಿಗೆ ಬಾಳ್ವೆ ಮಾಡಲು ಅದು ಕಾರಣವಾಗಿರುತ್ತಿತ್ತು. ಆದರೆ ಇಂದು ‘ಮದುವೆ’
ಎಂಬ ಪರಿಕಲ್ಪನೆಯೇ ತನ್ನ ಪಾವಿತ್ರ್ಯ ವನ್ನು ಕಳೆದುಕೊಂಡುಬಿಟ್ಟಿದೆ; ಇನ್ನು ಹೊಂದಾಣಿಕೆ ಎಂಬುದಂತೂ ಕೇವಲ ಒಂದು ಪದವಾಗಿ ಬಿಟ್ಟಿದೆ. ಯಾರು ಬೇಕಾದರೂ ತಮಗೆ ಇಷ್ಟಬಂದಂತೆ ವ್ಯವಹರಿಸ ಬಹುದು. ಕಾರಣ, ಎಲ್ಲರೂ ‘ಸುಶಿಕ್ಷಿತರು’! ಇದು ಕೇವಲ ಒಂದು ಉದಾಹರಣೆಯಷ್ಟೇ. ಇಂಥ ಸಾಕಷ್ಟು ಪ್ರಸಂಗಗಳು ದಿನನಿತ್ಯ ವರದಿಯಾಗುತ್ತಿವೆ. ಇಂಥವನ್ನು ಕಂಡ ಹಳೆಯ ಕಾಲದವರು/ ವಯೋವೃದ್ಧರು, ‘ನಮ್ಮ ಕಾಲದಲ್ಲಿ ಹೀಗೆ ಇರುತ್ತಿರಲಿಲ್ಲ, ಹಾಗೆ ಇರುತ್ತಿರಲಿಲ್ಲ’ ಎಂದರೆ ಅದು ಹಳಹಳಿಕೆ ಯಲ್ಲ, ಅದುವೇ ವಾಸ್ತವ ಅಥವಾ ಕಹಿಸತ್ಯ.
ವಯಸ್ಸಾದವರ ಇಂಥ ಮಾತುಗಳು ಕೆಲವೊಮ್ಮೆ ಇರಿಸುಮುರಿಸು ಉಂಟುಮಾಡುವಂತಿ ದ್ದರೂ, ಅವಕ್ಕೆ ಅರ್ಥವಿದೆ ಎಂಬುದನ್ನು ತಳ್ಳಿಹಾಕಲಾಗದು. ಇದೊಂದು ರೀತಿಯಲ್ಲಿ, ತಾವು ಹಿರಿಯರು, ಅನುಭವಸ್ಥರು ಎಂಬುದನ್ನು ತೋರ್ಪಡಿಸುವ ಕ್ರಮವೂ ಆಗಿದ್ದಿರಬಹುದು. ಆದರೂ ಅವರ ಮಾತು ಸರಿಯೇ!
(ಲೇಖಕರು ಹವ್ಯಾಸಿ ಬರಹಗಾರರು)