Vishweshwar Bhat Column: ಜಪಾನಿನಲ್ಲಿ ಒಂಟಿತನ ನೀಗಿಸಿಕೊಳ್ಳಲು ಆಲಿಂಗನ ಕೆಫೆಗಳಿಗೆ ಹೋಗಬಹುದು !
ಅಷ್ಟಕ್ಕೂ ಸೊಯಿನಿಯಾ ಕೆಫೆ ಅಂದರೆ ಏನು? ಸೊಯಿನಿಯಾ ಕೆಫೆ ಎಂದರೆ ಗ್ರಾಹಕರು ಹಣ ಪಾವತಿಸಿ ಸುಂದರ, ಆಕರ್ಷಕ ಮಹಿಳೆಯರ ಜತೆಗೆ ಆಲಿಂಗನದಲ್ಲಿ ನಿದ್ರಿಸಬಹುದಾದ ಸ್ಥಳ. ಇದರಲ್ಲಿ ಯಾವುದೇ ರೀತಿಯ ಶಾರೀರಿಕ ಸಂಬಂಧ ಇರುವುದಿಲ್ಲ. ಮಹಿಳೆಯರ ಜತೆ ಅನುಚಿತ ವಾಗಿ ವರ್ತಿಸುವಂತಿಲ್ಲ

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಂಕಣ

ಇದೇ ಅಂತರಂಗ ಸುದ್ದಿ
ಜಪಾನಿನಲ್ಲಿ ಒಂದು ವಿಚಿತ್ರ ಸೇವೆ ಇದೆ. ಇದಕ್ಕೆ ‘ಸೊಯಿನಿಯಾ’ ಅಂತ ಕರೆಯುತ್ತಾರೆ. ಇದರ ಅರ್ಥ ‘ಆಲಿಂಗನ’ ಅಂತ. ಕೆಲವು ಕೆ-ಗಳಲ್ಲಿ ಗ್ರಾಹಕರಿಗೆ ಆಲಿಂಗನವನ್ನು ಒದಗಿಸಲಾಗುತ್ತದೆ. ಸೊಯಿನಿಯಾ ಕೆಫೆಗಳನ್ನು ‘ಒಟ್ಟಿಗೆ ನಿದ್ರೆ ಹಂಚಿಕೊಳ್ಳುವ ಸ್ಥಳ’ ಎಂದೂ ಹೇಳಬಹುದು. ಕೆಲವು ಕಡೆ ನಿದ್ರೆ ಮತ್ತು ಆಲಿಂಗನ ಸೇವೆ ನೀಡುವ ವಿಶಿಷ್ಟ ಕೆಫೆಗಳಿವೆ. ಇವನ್ನು ‘ಕಡ್ಲಿಂಗ್ ಕೆಫೆ’ ಅಥವಾ ‘ಸ್ಲೀಪಿಂಗ್ ಕೆಫೆ’ ಎಂದೂ ಕರೆಯುತ್ತಾರೆ. ಈ ದಿನಗಳಲ್ಲಿ ಸೊಯಿನಿಯಾ ಕೆಫೆ ಜಪಾನ್ ಯುವಕರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಏಕೆಂದರೆ ಅವರ ಜೀವನದಲ್ಲಿ ಒಂಟಿತನ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.
ಆ ಸೇವೆಯ ಹಿಂದಿನ ಮುಖ್ಯ ಉದ್ದೇಶ ಅಲೆಮಾರಿ ಜೀವನ ನಡೆಸುವವರಿಗೆ ಅಥವಾ ಏಕಾಂಗಿತನ ಅನುಭವಿ ಸುವವರಿಗೆ ಸಂಗಾತಿಯನ್ನು ಒದಗಿಸುವುದು. ಅಷ್ಟಕ್ಕೂ ಸೊಯಿನಿಯಾ ಕೆಫೆ ಅಂದರೆ ಏನು? ಸೊಯಿನಿಯಾ ಕೆಫೆ ಎಂದರೆ ಗ್ರಾಹಕರು ಹಣ ಪಾವತಿಸಿ ಸುಂದರ, ಆಕರ್ಷಕ ಮಹಿಳೆಯರ ಜತೆಗೆ ಆಲಿಂಗನದಲ್ಲಿ ನಿದ್ರಿಸಬಹುದಾದ ಸ್ಥಳ. ಇದರಲ್ಲಿ ಯಾವುದೇ ರೀತಿಯ ಶಾರೀರಿಕ ಸಂಬಂಧ ಇರುವುದಿಲ್ಲ. ಮಹಿಳೆಯರ ಜತೆ ಅನುಚಿತ ವಾಗಿ ವರ್ತಿಸುವಂತಿಲ್ಲ.
ಇದನ್ನೂ ಓದಿ: Vishweshwar Bhat Column: ಅಪಾಯದಲ್ಲಿರುವ ವಿವಾಹ
ನೀವು ಬಯಸಿದ ಮಹಿಳೆಯ ಜತೆ ಗೌರವದಿಂದ ಮತ್ತು ಸಭ್ಯವಾಗಿ ವರ್ತಿಸಬೇಕು. ಆ ಸೇವೆಯ ಉದ್ದೇಶ ‘ಭಾವನಾತ್ಮಕ ಆರಾಮ ಮತ್ತು ಒಂಟಿತನ ನಿವಾರಣೆ’ ಬಯಸುವವರಿಗೆ ಆಲಿಂಗನ ನೀಡು ವುದು. ಈ ಕೆಫೆಗಳಲ್ಲಿ ಆಕರ್ಷಕ ಯುವತಿಯರು ‘ಸ್ಲೀಪ್ ಕಂಪಾನಿಯನ್‌ಗಳು’ ಆಗಿ ಕೆಲಸ ಮಾಡು ತ್ತಾರೆ. ಅವರು ಆಲಿಂಗನಕ್ಕೇ ಸಿಗುತ್ತಾರೆಂದು ಅವರ ಜತೆ ಅಸಭ್ಯವಾಗಿ ವರ್ತಿಸದಿರುವುದರಿಂದಲೇ ಈ ಕೆಫೆ ಘನತೆಯನ್ನು ಕಾಪಾಡಿಕೊಂಡಿದೆ.
ಇಲ್ಲದಿದ್ದರೆ ಇದು ವೇಶ್ಯಾವಾಟಿಕೆ ಎಂದು ಕರೆಯಿಸಿಕೊಳ್ಳುತ್ತಿತ್ತು. ಗ್ರಾಹಕರು ಒಂದು ಗಂಟೆ ಅಥವಾ ಹೆಚ್ಚು ಕಾಲ ಬಯಸಿದ ಮಹಿಳೆಯ ಜತೆ ಆಲಿಂಗಿಸಿ ನಿದ್ರಿಸಲು ಬುಕಿಂಗ್ ಮಾಡಬಹುದು. ಆ ಕೆಫೆ ಗಳಲ್ಲಿ ನೀವು ಬಯಸಿದ ಸುಂದರ ಯುವತಿಯ ಕೈ ಹಿಡಿದು ನಿದ್ರಿಸಬಹುದು, ತಲೆಯ ಮೇಲೆ ನೆತ್ತಿಯ ತುಳಿಯುವ ಸೇವೆ ಮಾಡಿಸಿಕೊಳ್ಳಬಹುದು, ಆಕೆಯಿಂದ ಪೋಲಿ ಮಾತುಗಳನ್ನು ಕೇಳಿಸಿ ಕೊಳ್ಳಬಹುದು, ಹಿತವಾಗಿ ಮಸಾಜ್ ಮಾಡಿಸಿಕೊಳ್ಳಬಹುದು ಇತ್ಯಾದಿ.
ಆಕೆಯ ಜತೆ ಇದ್ದಷ್ಟು ಹೊತ್ತು ಆಕೆ ಉತ್ತಮ ಸಂಗಾತಿಯಾಗಿರುತ್ತಾಳೆ. ಆದರೆ ಆಕೆಯನ್ನು ವೇಶ್ಯೆ ಎಂದು ಭಾವಿಸುವಂತಿಲ್ಲ ಮತ್ತು ಆ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತಿಲ್ಲ. ಸೊಯಿನಿಯಾ ಕೆಫೆ ಹುಟ್ಟಿಕೊಳ್ಳಲು ಆಧುನಿಕ ಜೀವನ ಶೈಲಿ, ಒಂಟಿತನ ಮತ್ತು ಮನುಷ್ಯ ಸಂಬಂಧದ ಕೊರತೆ ಕಾರಣ ಎಂದು ಹೇಳಬಹುದು.
ಜಪಾನಿನಲ್ಲಿ ಅನೇಕರು ತಮ್ಮ ವಿಲಕ್ಷಣ ಜೀವನ ಶೈಲಿಯಿಂದಾಗಿ ಒಂಟಿತನ ಅನುಭವಿಸುತ್ತಾರೆ. ಜಪಾನ್ ಅತಿ ಕಡಿಮೆ ಜನನ ಪ್ರಮಾಣ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಕುಟುಂಬ ಸಂಬಂಧಗಳ ಬಲಹೀನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂಥ ಪರಿಸ್ಥಿತಿಯಲ್ಲಿ, ಕೆಲವು ಮಂದಿ ಆಲಿಂಗನದ ಮೂಲಕ ಸಾಂತ್ವನ ಪಡೆಯಲು ಬಯಸುತ್ತಾರೆ.
ಸೊಯಿನಿಯಾ ಕೆಫೆ 2012ರ ಸಮಯದಲ್ಲಿ ಟೋಕಿಯೊ ನಗರದಲ್ಲಿ ಆರಂಭವಾಯಿತು. ಇದರ ಮೂಲ ಉದ್ದೇಶವೇ ಜನರ ಒಂಟಿತನವನ್ನು ಕಡಿಮೆ ಮಾಡುವುದು ಮತ್ತು ದೈನಂದಿನ ಒತ್ತಡ ಗಳಿಂದ ಅವರಿಗೆ ಆರಾಮ ನೀಡುವುದು. ಜಪಾನಿನಲ್ಲಿ ಈ ರೀತಿಯ ಸೇವೆಗಳ ಅಗತ್ಯವಿರುವುದಕ್ಕೆ ಹಲವು ಪ್ರಮುಖ ಸಾಮಾಜಿಕ ಕಾರಣಗಳಿವೆ. ಜಪಾನ್ ವಿಶ್ವದಲ್ಲಿಯೇ ಹೆಚ್ಚು ಕೆಲಸದ ಹೊರೆ ಹೊತ್ತ ದೇಶಗಳಲ್ಲಿ ಒಂದಾಗಿದೆ.
16-18 ಗಂಟೆಗಳ ಸುದೀರ್ಘ ಕೆಲಸದ ಅವಧಿ, ಕಡಿಮೆ ರಜೆಗಳು ಮತ್ತು ವ್ಯಾಪಕ ಒತ್ತಡದ ಕಾರಣ ದಿಂದ ಜನರು ನೆಮ್ಮದಿಯ ಕ್ಷಣಗಳನ್ನು ಹುಡುಕುತ್ತಾರೆ. ಈ ಸಂದರ್ಭದಲ್ಲಿ ಸೊಯಿನಿಯಾ ಕೆಫೆ ಅವರನ್ನು ಭಾವನಾತ್ಮಕವಾಗಿ ರುಶಕ್ತಿ ಪಡೆಯಲು ಸಹಾಯಮಾಡುತ್ತದೆ. ಜಪಾನಿನಲ್ಲಿ ಈ ದಿನ ಗಳಲ್ಲಿ ಅಲ್ಲಿನ ಯುವಜನತೆ ದೀರ್ಘಕಾಲೀನ ಸಂಬಂಧಗಳನ್ನು ಹೊಂದಲು ಕಡಿಮೆ ಆಸಕ್ತಿ ತೋರಿಸುತ್ತಿದ್ದಾರೆ.
ಈ ಸಮಯದಲ್ಲಿ, ಸೊಯಿನಿಯಾ ಸೇವೆ ಭಾವನಾತ್ಮಕವಾಗಿ ಆರಾಮ ಮತ್ತು ಬೌದ್ಧಿಕ ನೆಮ್ಮದಿ ನೀಡುತ್ತದೆ. ಜಪಾನಿನಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಟುಂಬ ವ್ಯವಸ್ಥೆ ದುರ್ಬಲವಾಗುತ್ತಿದೆ. ನಗರದ ಬಹುತೇಕ ಜನರು ತಮ್ಮ ವೃತ್ತಿಜೀವನದ ಒತ್ತಡದಲ್ಲಿ ಒಂಟಿಯಾಗಿ ಬದುಕುತ್ತಿದ್ದಾರೆ. ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಸಮಯ ಕಳೆಯುವ ಅವಕಾಶ ವಿಲ್ಲದ ಕಾರಣ, ಇಂಥ ಸೇವೆಗಳು ಜನಪ್ರಿಯವಾಗುತ್ತಿವೆ.
ಹಾಗಂತ ಇದನ್ನು ಎಲ್ಲರೂ ಒಪ್ಪಿಕೊಂಡಿzರೆ ಎಂದೇನೂ ಇಲ್ಲ. ಇದನ್ನು ವಿರೋಧಿಸುವವರೂ ಇದ್ದಾರೆ. ಇದೊಂದು ಅನೈತಿಕ ವ್ಯವಹಾರ ಮತ್ತು ವೇಶ್ಯಾವಾಟಿಕೆಯನ್ನು ಪ್ರೇರೇಪಿಸುವ ವೃತ್ತಿ ಎಂದೂ ಜರೆದವರಿದ್ದಾರೆ. ಇದು ಕೌಟುಂಬಿಕ ವ್ಯವಸ್ಥೆ ಶಿಥಿಲವಾಗಲು ಕಾರಣವಾಗುತ್ತಿದೆ ಎಂದೂ ಅಭಿಪ್ರಾಯಪಡುವವರಿದ್ದಾರೆ. ಇದು ಭಾವನಾತ್ಮಕ ಒತ್ತಡವನ್ನು ತಾತ್ಕಾಲಿಕವಾಗಿ ನಿವಾರಿಸುತ್ತದೆ ಆದರೆ ಶಾಶ್ವತ ಪರಿಹಾರ ನೀಡುವುದಿಲ್ಲ ಎನ್ನುವವರೂ ಇದ್ದಾರೆ.
ಆದರೆ ಇದು ಕ್ಯಾಬರೆ ಮತ್ತು ವೇಶ್ಯಾವಾಟಿಕೆ ಕೇಂದ್ರಗಳಂತೆ ವಿಕೃತಗೊಂಡಿಲ್ಲ ಎನ್ನುವುದು ಅಷ್ಟೇ ನಿಜ. ಅದಕ್ಕೆ ಕಾರಣ, ಆ ಕೆಫೆಗಳು ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿರುವುದು. ಹೀಗಾಗಿ ಇದು ವಿಕೃತಿಯ ಸ್ವರೂಪವನ್ನು ಪಡೆದಿಲ್ಲ. ಆದರೆ ಇದು ಸಂಬಂಧಗಳ ಪ್ರಾಮುಖ್ಯದ ಕೊರತೆಯ ಹೆಗ್ಗು ರುತಾಗಿರುವುದು ನಿಜ. ಇದನ್ನು ಭಾವನಾತ್ಮಕ ಬೆಂಬಲ ವ್ಯವಸ್ಥೆಯ ಒಂದು ಭಾಗವಾಗಿ ನೋಡ ಲಾಗುತ್ತಿದೆ. ಇದು ಒಂಟಿತನ, ಒತ್ತಡ ಮತ್ತು ಕ್ಷಣಿಕ ನೆಮ್ಮದಿ ನೀಡುವ ಒಂದು ಪ್ರಯತ್ನವಷ್ಟೇ. ಹೀಗಾಗಿ ಇಂದಿಗೂ ಈ ಕೆಫೆಗಳು ತಮ್ಮ ಪಾವಿತ್ರ್ಯವನ್ನು ಕಾಪಾಡಿಕೊಂಡಿವೆ. ಇಂಥದ್ದೊಂದು ಕೆಫೆ ಇದೆ ಎಂಬುದು ಗೊತ್ತಾಗಿದ್ದು ಜಪಾನಿನಿಂದ ವಾಪಸ್ ಆದ ನಂತರವೇ! ಭಾರತದನಾದರೂ ಈ ಕೆಫೆಗಳು ಜಾರಿಗೆ ಬಂದರೆ ಏನಾಗಬಹುದು? ಊಹಿಸುವುದೂ ಕಷ್ಟ.
ಇನ್ನಷ್ಟು ಕೊಡಬೇಕೆನ್ನುವ ಹಪಾಹಪಿ!
ಜಪಾನಿನಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಅದಕ್ಕೆ ಅವರು ‘ಓಮೋಟೆನಾಶಿ’ ಅಂತಾರೆ. ಹಾಗಂದರೆ, ಒಂದು ಸೇವೆಯನ್ನು ನಿರೀಕ್ಷೆಗಿಂತ ಹೆಚ್ಚು ಉತ್ತಮ ವಾಗಿ ನೀಡುವುದು ಎಂದರ್ಥ. ಗ್ರಾಹಕರು ಅಪೇಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂತೃಪ್ತಿಯನ್ನು ನೀಡು ವುದು. ಇದನ್ನು ಇನ್ನಷ್ಟು, ಮತ್ತ ಷ್ಟು ಸತ್ಕಾರ ಮಾಡುವ ಹಪಾಹಪಿ ಗುಣ ಎನ್ನಬಹುದು.
ಉದಾಹರಣೆಗೆ, ಸಾಮಾನ್ಯವಾಗಿ ಊಟವಾದ ಬಳಿಕ ಐಸ್ ಕ್ರೀಮ್ ನೀಡುವುದು ಸಹಜ. ಆದರೆ ಓಮೋಟೆನಾಶಿಯನ್ವಯ ಉಚಿತವಾಗಿ ಮತ್ತೆ ಎರಡು ಬಗೆಯ ಐಸ್ ಕ್ರೀಮ, ಸಿಹಿ ತಿಂಡಿ, ವೀಳ್ಯ ಮತ್ತು ಕೊನೆಯಲ್ಲಿ ಸಣ್ಣ ಉಡುಗೊರೆ ನೀಡುವುದು. ಗ್ರಾಹಕರು ನಿರೀಕ್ಷಿಸದೇ ಇರುವ ಅಚ್ಚರಿ ಯನ್ನು ನೀಡುವುದು ಈ ಸಂಸ್ಕೃತಿಯ ಉದ್ದೇಶ.
ಒಮ್ಮೆ ಭಾರತದ ಗ್ರಾಹಕರೊಬ್ಬರು ಹೋಟೆಲಿಗೆ ಹೋಗಿದ್ದರು. ಅವರ ಬಳಿ ಸ್ಥಳೀಯ ಕರೆನ್ಸಿ (ಯೆನ್) ಇರಲಿಲ್ಲ. ತಾವು ಡಾಲರ್ ನೀಡುವುದಾಗಿ ಹೇಳಿದರು. “ಇಲ್ಲ, ನಾವು ಡಾಲರ್ ಸ್ವೀಕರಿಸು ವುದಿಲ್ಲ" ಎಂದು ಹೋಟೆಲಿನವ ಹೇಳಿದ. ಅವರು ಅರ್ಧ ಊಟ ಮಾಡಿದ್ದರು. ಫಜೀತಿ ಆಯ್ತಲ್ಲ ಎಂದು ಅವರು ಅಂದುಕೊಂಡು, ಎಟಿಎಂ ಕೇಂದ್ರದಿಂದ ಹಣ ತೆಗೆಯಲು ಅಲ್ಲಿಂದ ಹೊರಡುವವ ರಿದ್ದರು.
ಆಗ ಮ್ಯಾನೇಜರ್ ಬಂದು, “ನೀವು ಮೊದಲು ಊಟಮಾಡಿ. ನಂತರ ಎಟಿಎಂಗೆ ಹೋಗುವಿರಂತೆ" ಎಂದು ಹೇಳಿದ. “ಒಂದು ವೇಳೆ ನಾನು ಎಟಿಎಂಗೆ ಹಣ ತರಲು ಹೋದವನು ವಾಪಸ್ ಬರದಿದ್ದರೆ ಏನು ಮಾಡ್ತೀರಿ?" ಎಂದು ಕೇಳಿದಾಗ, “ಹಾಗೆ ಯಾರೂ ಮಾಡುವುದಿಲ್ಲ. ಅದರಿಂದ ನಮ್ಮ ಗ್ರಾಹಕ ರಿಗೆ ಸಮಾಧಾನ ಸಿಗುವಂತಿದ್ದರೆ, ಸಿಗಲಿ. ನಮಗೂ ಸಂತೋಷವೇ" ಎಂದು ಹೇಳಿದನಂತೆ.
ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವುದು, ಹೋಗುವಾಗ ಉಡುಗೊರೆ ನೀಡಿ ಬೀಳ್ಕೊಡುವುದು ಸಾಮಾನ್ಯ. ಆದರೆ ಜಪಾನಿಯರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅತಿಥಿ ಸತ್ಕಾರ ಮಾಡು ತ್ತಾರೆ. ಅದಕ್ಕೆ ಕಾರಣ ಅವರ ಸಂಸ್ಕಾರದಲ್ಲಿ ಬಂದಿರುವ ಓಮೋಟೆನಾಶಿ. ಇದು ಸತ್ಕಾರ ಮತ್ತು ಸೇವಾ ಮನೋಭಾವಕ್ಕೆ ಬರೆಯುವ ವಿಶೇಷ ಭಾಷ್ಯ. ಅತಿಥಿಗಳು ನಿರೀಕ್ಷಿಸದೇ ಇರುವುದನ್ನು ನೀಡು ವುದು, ಆ ಮೂಲಕ ಅವರನ್ನು ಸಂಪ್ರೀತಗೊಳಿಸುವುದು ಅವರ ಸಂಪ್ರದಾಯದಲ್ಲಿ ಹಾಸು ಹೊಕ್ಕಾಗಿದೆ.
ಕಾಫಿಗೆ ದೈವೀಶಕ್ತಿ ನೀಡಿದವ!
“ನೀವು ಜಪಾನಿನಲ್ಲಿ ಕಾಫಿ ಕುಡಿಯುವಾಗ ‘ಡೈಬೊ ಕಟ್ಸುಜಿ’ ಎಂಬಾತನ ಹೆಸರನ್ನು ಕೇಳಿರುತ್ತೀರಿ" ಎಂದು ಸ್ನೇಹಿತರೊಬ್ಬರು ಹೇಳಿದರು. ಅದಕ್ಕೆ ನಾನು, “ಇಲ್ಲ, ಕೇಳಿಲ್ಲ. ಏನು ವಿಶೇಷ?" ಎಂದು ಕೇಳಿದೆ.
“ಅಲ್ಲ ಸ್ವಾಮಿ, ಜಪಾನಿನಲ್ಲಿ ನೀವು ಕಾಫಿ ಕುಡಿದಿರುತ್ತೀರಿ. ಆದರೆ ಆತನ ಹೆಸರನ್ನು ಕೇಳಿಲ್ಲವಾ?" ಎಂದು ಮತ್ತೆ ಕೇಳಿದರು. “ಆತ ಟೋಕಿಯೋದ ಐಕಾನಿಕ್ ಕಾಫಿ ಮಾಸ್ಟರ್. ಕಾಫಿ ತಯಾರಿಸುವ ಶೈಲಿಗೆ, ಹಳೆಯ ಜಪಾನಿನ ತತ್ವಶಾಸದ ಸ್ಪರ್ಶ ನೀಡಿದ ಮಾಂತ್ರಿಕ" ಎಂದು ಬಣ್ಣಿಸಿದರು. “ಮೊದ ಲೇ ಈ ಸಂಗತಿಯನ್ನು ಹೇಳಿದ್ದರೆ, ಆತನ ಬಗ್ಗೆ ಮತ್ತಷ್ಟು ವಿಷಯವನ್ನು ತಿಳಿದುಕೊಳ್ಳುತ್ತಿದ್ದೆ" ಎಂದು ಹೇಳಿದೆ.
ಡೈಬೊ ಕಟ್ಸುಜಿ ಜಪಾನಿನ ಪ್ರಸಿದ್ಧ ಹ್ಯಾಂಡ್-ಡ್ರಿಪ್ ಕಾಫಿ ಮಾಸ್ಟರ್‌ಗಳಲ್ಲಿ ಒಬ್ಬ. ಆತ ‘ಡೈಬೊ ಕಾಫಿ’ ಎಂಬ ಟೋಕಿಯೊದ ಶ್ರೇಷ್ಠ ಕಾಫಿ ಶಾಪ್ ಅನ್ನು ನಡೆಸುತ್ತಿದ್ದ. ಆ ಕಾಫಿ ಹೌಸ್ ತನ್ನ ಶಾಂತ, ತಪಸ್ಸಿನಂತೆ ಶ್ರದ್ಧೆಯಿಂದ ಕಾಫಿ ತಯಾರಿಸುವ ವಿಧಾನದಿಂದ ಪ್ರಖ್ಯಾತವಾಗಿತ್ತು. ಅದು ಕಾಫಿ ತಯಾರಿಕೆಯಲ್ಲಿ ಟೋಕಿಯೋ ನಗರಕ್ಕೆ ವಿಶೇಷ ಮಹತ್ವ ಮತ್ತು ಸಾಂಸ್ಕೃತಿಕ ಹೆಗ್ಗುರುತನ್ನು ತಂದುಕೊಟ್ಟಿತ್ತು.
1975ರಲ್ಲಿ ಡೈಬೊ ಕಟ್ಸುಜಿ ಟೋಕಿಯೋ ನಗರದಲ್ಲಿ ‘ಡೈಬೊ ಕಾಫಿ ಶಾಪ್’ ಅನ್ನು ಪ್ರಾರಂಭಿಸಿದ. ಅದು ಟೋಕಿಯೋದ ಐಷಾರಾಮಿ ಪ್ರದೇಶದಲ್ಲಿ 38 ವರ್ಷಗಳ ಕಾಲ ನಡೆದುಕೊಂಡು ಬಂದಿತು. ಡೈಬೊ ಕಟ್ಸುಜಿ ಈ ಜಗತ್ತು ಕಂಡ ಹ್ಯಾಂಡ್-ಡ್ರಿಪ್ (Hand-Drip) ಕಾಫಿ ತಯಾರಿಸುವ ಒಬ್ಬ ಶ್ರೇಷ್ಠ ಪಂಡಿತ. ಪ್ರತಿ ಕಪ್ ಕಾಫಿಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ತಯಾರಿಸುತ್ತಿದ್ದ, ಅದನ್ನು ತಪಸ್ಸಿನಂತೆ ನೋಡಿಕೊಳ್ಳುತ್ತಿದ್ದ.
ನನ್ನ ಸ್ನೇಹಿತರು ಆತನನ್ನು ಬಣ್ಣಿಸಿದ ರೀತಿ ನನಗೆ ಇಷ್ಟವಾಯಿತು ಮತ್ತು ಡೈಬೊ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿತು. “ಡೈಬೊ ಕಟ್ಸುಜಿಯು ಕಾಫಿ ತಯಾರಿಕೆಯನ್ನು ಶಿಲ್ಪಕಲೆ ಎಂದು ಪರಿಗಣಿಸುತ್ತಿದ್ದ" ಎಂದು ಹೇಳಿದ್ದು ಆತನ ಬಗ್ಗೆ ಮತ್ತಷ್ಟು ಆಸಕ್ತಿ ಮೂಡುವಂತೆ ಮಾಡಿತು. ಆತ ಪ್ರತಿ ಕಪ್ ಕಾಫಿಯನ್ನು ಸಂಪೂರ್ಣ ಶ್ರದ್ಧೆಯಿಂದ ತಯಾರಿಸುತ್ತಿದ್ದ.
ಉಳಿತಾಯಕ್ಕಾಗಿ ವೇಗದ ಪ್ರಕ್ರಿಯೆಗಳನ್ನು ಅನುಸರಿಸುವ ಬದಲು, ತಾಳ್ಮೆ, ಕೌಶಲ ಮತ್ತು ಮಾನ ಸಿಕ ಶಾಂತತೆಯೊಂದಿಗೆ ಕಾಫಿ ಸಿದ್ಧಪಡಿಸುತ್ತಿದ್ದ. ಆತನ ಕಾಫಿ ಶಾಪ್ ಎಲ್ಲ ವರ್ಗದ ಕಾಫಿ ಪ್ರಿಯರಿಗೆ ಶ್ರದ್ಧಾಸ್ಥಳವಾಗಿತ್ತು.
ಆತ ಕಾಫಿ ತಯಾರಿಕೆಯನ್ನು ಧ್ಯಾನಕ್ಕೆ ಸಮ ಎಂದು ಹೇಳುತ್ತಿದ್ದ. “ಕಾಫಿ ಪೇಯವಲ್ಲ, ಅದು ಮಾನ ಸಿಕ ಸ್ಥಿತಿ" ಎಂದು ಹೇಳುತ್ತಿದ್ದ. ಅವಸರದಲ್ಲಿದ್ದವರಿಗೆ ಆತ ಕಾಫಿ ಕೊಡುತ್ತಿರಲಿಲ್ಲ. ಕನಿಷ್ಠ 20 ನಿಮಿಷ ಕಾಯಲು ಸಿದ್ಧರಿದ್ದರೆ ಮಾತ್ರ ಆತ ಕಾಫಿ ತಯಾರಿಸಲು ಮುಂದಾಗುತ್ತಿದ್ದ. ಆತನ ದೃಷ್ಟಿ ಯಲ್ಲಿ ಕಾಫಿ ತಯಾರಿಕೆ ಗಂಭೀರ ಕಾಯಕವಾಗಿತ್ತು. ಆತನ ಕಾಫಿ ಶಾಪ್ ಒಂದು ಶಾಂತ ಮತ್ತು ಸೂಕ್ಷ್ಮ ಸಂವೇದನೆ ಆವರಿಸಿದ, ವಿಚಿತ್ರ ಗುಂಗು ಹತ್ತಿಸುವ ಜಾಗವಾಗಿತ್ತು.
ಯಾರೂ ಅಲ್ಲಿಗೆ ಕಾಫಿ ಕುಡಿಯಲು ಹೋಗುತ್ತಿದ್ದೇವೆ ಎಂದು ಭಾವಿಸುತ್ತಿರಲಿಲ್ಲ. ಒಂದು ವಿಶೇಷ ಅನುಭೂತಿಯನ್ನು ಸವಿಯಲು ಹೋಗುತ್ತಿದ್ದೇವೆ ಎಂದು ತಿಳಿಯುತ್ತಿದ್ದರು. ಕಾಫಿ ಗ್ರಾಹಕರು ಅಚಲವಾಗಿ ನೋಡುತ್ತಾ ಕಾಫಿ ತಯಾರಿಸುವುದನ್ನು ಸಂತಸದಿಂದ ಅನುಭವಿಸುತ್ತಿದ್ದರು. ಆತನ ಶಾಪ್‌ನಲ್ಲಿ ನಿಶ್ಶಬ್ದ ಆವರಿಸಿರುತ್ತಿತ್ತು. ಕಾಫಿಯ ಸುಗಂಧ ಸುತ್ತಲೂ ಹರಡಿ ಮಾದಕ ವಾತಾವರಣ ನಿರ್ಮಾಣವಾಗಿರುತ್ತಿತ್ತು. ಕಾಫಿ ತಯಾರಿಸುವ ಶಬ್ದದ ಹೊರತಾಗಿ ಮತ್ತೇನೂ ಕೇಳಿಸುತ್ತಿರಲಿಲ್ಲ.
ಪ್ರತಿ ಕಾಫಿ ಕಪ್ ಸಿದ್ಧಪಡಿಸಲು ಕಡಿಮೆ ವೇಳೆ ತೆಗೆದುಕೊಳ್ಳುವ ಯಂತ್ರಗಳ ಬದಲು ಆತ ಕೈಯಿಂದ ಕಾಫಿ ತಯಾರಿಸುತ್ತಿದ್ದ. ಪ್ರತಿ ಕಪ್‌ಗಾಗಿ ಕಾಫಿ ಬೀ ಅನ್ನು ನಿಖರವಾದ ಅಳತೆಯಂತೆ ಕಬ್ಬಿಣದ ಪಾತ್ರೆಯಲ್ಲಿ ಹುರಿದು, ತಕ್ಷಣವೇ ಗ್ರೈಂಡ್ ಮಾಡಿ, ಬಿಸಿ ನೀರಿನೊಂದಿಗೆ ನಿಧಾನವಾಗಿ ಹದ ಮಾಡಿ ತಯಾರಿಸುತ್ತಿದ್ದ. ಇದರಿಂದ ಕಾಫಿಗೆ ವಿಶಿಷ್ಟವಾದ ಸುವಾಸನೆ ಮತ್ತು ಸಾಂದ್ರತೆ ಬರುತ್ತಿತ್ತು. ಕಾಫಿ ತಯಾರಿಕೆ ಒಂದು ಮಹಾನ್ ಕಲೆ ಎಂಬುದನ್ನು ಡೈಬೊ ಕಟ್ಸುಜಿ ಮಾರ್ಗದರ್ಶಕ ತತ್ವ ವನ್ನಾಗಿ ಮಾಡಿಕೊಂಡಿದ್ದ. ಕಾಫಿ ಬಣ್ಣ, ಘಮ ಮತ್ತು ರುಚಿಯ ಉತ್ಕೃಷ್ಟತೆಯನ್ನು ಸಾಧಿಸಲು ಅಪಾರ ವಾಗಿ ಶ್ರಮಿಸುತ್ತಿದ್ದ. ಕಾಫಿಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬುದು ಆತನ ಅನುಭವ ವಷ್ಟೇ ಅಲ್ಲ, ನಂಬಿಕೆಯೂ ಆಗಿತ್ತು.
“ಕಾಫಿ ಅಂದ್ರೆ ಜೀವನ ವಿಧಾನ" ಎಂದು ಆತ ಹೇಳುತ್ತಿದ್ದ. “ಕಾಫಿಯಿಲ್ಲದ ದಿನ ಸೂರ್ಯನಿಲ್ಲದ ದಿನದಂತೆ" ಎಂಬುದು ಆತನ ತತ್ವದರ್ಶನವಾಗಿತ್ತು. ಕಾಫಿಯ ಮೂಲಕ ಯಾರ ಜೀವನದದರೂ ಪ್ರವೇಶ ಪಡೆಯಬಹುದು ಎಂಬುದು ಆತನ ಪ್ರತಿಪಾದನೆಯಾಗಿತ್ತು. ಡೈಬೊ ಕಟ್ಸುಜಿಯಂಥ ವ್ಯಕ್ತಿಗಳ ಶ್ರಮದಿಂದ ಜಪಾನಿನಲ್ಲಿ ಕಾಫಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿತು. ಇಂದಿಗೂ ಜಪಾನ್‌ನಲ್ಲಿ ಹಲವಾರು ಕಾಫಿ ಅಂಗಡಿಗಳು ಈ ಪರಂಪರೆಯನ್ನು ಅನುಸರಿಸುತ್ತಿವೆ. ಡೈಬೊ ಶೈಲಿ ‘ಕಾಫಿ ತಯಾರಿಸುವುದು ಒಂದು ಅಪೂರ್ವ ಕಲೆ’ ಎಂಬ ಸಂದೇಶವನ್ನು ಜಪಾನಿನ ಯುವ ಪೀಳಿಗೆಗೆ ಮತ್ತು ಹತ್ತಾರು ತಲೆಮಾರುಗಳಿಗೆ ಸಾರಿತು.
2013ರಲ್ಲಿ ಡೈಬೊ ಕಾಫಿ ಶಾಪ್ ಇದ್ದ ಕಟ್ಟಡವನ್ನು ನೆಲಸಮಗೊಳಿಸಿ, ಹೊಸ ವಾಣಿಜ್ಯ ಸೌಧ ನಿರ್ಮಿಸಲು ನಿರ್ಧರಿಸಿದ್ದರಿಂದ ಅದನ್ನು ಶಾಶ್ವತವಾಗಿ ಮುಚ್ಚಲಾಯಿತು. ಅದರಿಂದಾಗಿ, ಡೈಬೊ ಸಾಂಪ್ರದಾಯಿಕ ಕಾಫಿ ತಯಾರಿಕೆಯೂ ಅಂತ್ಯ ಕಂಡಿತು. ಆದರೆ ಡೈಬೊ ಕಾಫಿ ಪರಂಪರೆ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ನೆಲೆಯೂರಿತು.
ಕೊನೆಯ ದಿನದ ಕಾಫಿಗಾಗಿ ಸಾವಿರಾರು ಜನ ಹಾಜರಿದ್ದರು. ಆದರೆ ಡೈಬೊ ಅಂದು ಸಹ ಅದೇ ಧ್ಯಾನಸ್ಥ ಮನಸ್ಸಿನಲ್ಲಿಯೇ ಕಾಫಿ ತಯಾರಿಸಿ ಗ್ರಾಹಕರಿಗೆ ನೀಡಿದ್ದನ್ನು ಇಂದಿಗೂ ನೆನಪಿಸಿಕೊಳ್ಳು ತ್ತಾರೆ. ಆತನಿಂದ ಪ್ರೇರಣೆ ಪಡೆದ ಆತನ ಶಿಷ್ಯರು ಮತ್ತು ಅಭಿಮಾನಿಗಳು ಈಗಲೂ ಶುದ್ಧ, ಶಾಂತ ಮನಸ್ಸಿನಿಂದ ತಯಾರಿಸಿದ ಆ ಕಾಫಿ ತಯಾರಿಕೆಯ ಪರಂಪರೆಯನ್ನು ಮುಂದುವರಿಸುತ್ತಿzರೆ.
ಡೈಬೊ ಕಟ್ಸುಜಿ ಕೇವಲ ಒಬ್ಬ ಕಾಫಿ ತಯಾರಕನಲ್ಲ. ಆತ ಕಾಫಿಗೆ ದೈವೀಶಕ್ತಿಯನ್ನು ತುಂಬಿದ ಪವಾಡ ಪುರುಷ. ಆತನ ತಾತ್ವಿಕ, ಶಾಂತ ಮತ್ತು ಶ್ರದ್ಧೆಯಿಂದ ಕೂಡಿದ ಕಾಫಿ ತಯಾರಿಕೆಯ ವಿಧಾನ ಜಪಾನಿನ ಅಪ್ಪಟ ಕಾಫಿ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಹಬೆಯಾಡುತ್ತದೆ.