ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

G Prathap Kodancha Column: ಮೈಕಾಸುರರು ಮತ್ತವರ ಪಡೆಗಳ ವಿಶ್ಲೇಷಕ ದಾಳಿಯನ್ನು ತಪ್ಪಿಸಿಕೊಳ್ಳುವುದೆಂತು ?

ಸೇನಾ ವ್ಯವಸ್ಥೆ, ಯುದ್ಧದ ಸಜ್ಜಿಕೆ ಮುಂತಾದವುಗಳ ಗಂಧ-ಗಾಳಿ ಇಲ್ಲದವರೂ ಸುದ್ದಿವಾಹಿನಿಗಳ ಸ್ಟುಡಿಯೋಗಳಲ್ಲಿ ಕೂತು ಮಾಡುವ ವಿಶ್ಲೇಷಣೆಗಳನ್ನು ಹಾಗೂ ತಂತ್ರಗಾರಿಕೆಯ ಒಳಸುಳಿಗಳ ವಿವರಣೆಗಳನ್ನು ಕೇಳಿದರಂತೂ ನಮ್ಮ ಸೇನೆಗಳ ದಂಡನಾಯಕರೇ ಹೀಗೆ ಕೂತು ಚರ್ಚಿಸು ತ್ತಿದ್ದಾ ರೇನೋ ಅನಿಸಿಬಿಡುತ್ತದೆ. ಸ್ಟುಡಿಯೋದಿಂದ ತಮ್ಮದೇ ಮನೆ ತಲುಪಲು ‘ಗೂಗಲ್ ಮ್ಯಾಪ್’ ಅನ್ನು ನೆಚ್ಚುವವರು ಕೂಡ, ಗಡಿಭಾಗದ ಭೂಪಟ ಸಹಿತ ಅಲ್ಲಿನ ಪ್ರತಿಯೊಂದು ಬಂಕರ್, ಸೇನಾಪಡೆಗಳ ಶಕ್ತಿಕೇಂದ್ರಗಳ ವಿವರವನ್ನು ಹಂಚಿಕೊಳ್ಳುವುದನ್ನು ಕೇಳಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ.

ಮೈಕಾಸುರರು ಮತ್ತವರ ಪಡೆಗಳ ವಿಶ್ಲೇಷಕ ದಾಳಿಯನ್ನು ತಪ್ಪಿಸಿಕೊಳ್ಳುವುದೆಂತು ?

Profile Ashok Nayak May 12, 2025 6:44 AM

ಸಿಂದೂರ ತಿಲಕ

ಜಿ.ಪ್ರತಾಪ್‌ ಕೊಡಂಚ

ಪ್ರತಿ ಬಾರಿ ಮಗುವನ್ನು ಚಿವುಟಿ, ಪೆಟ್ಟು ಬೀಳುತ್ತದೆ ಎಂದಾಕ್ಷಣ “ನಾನು ಚಿವುಟಿದ್ದಲ್ಲ, ಚಿವುಟಿ ದವರು ನನ್ನವರಲ್ಲ, ನಾನೇ ಚಿವುಟಿಸಿಕೊಂಡು ರಕ್ತ ಸುರಿಸುತ್ತಿದ್ದೇನೆ" ಎಂಬ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ, ಭಾರತದ ಸೇನಾಪಡೆ ಈ ಬಾರಿ ಸಶಕ್ತ ವಾಗಿಯೇ ಉತ್ತರಿಸಿದೆ, ಉತ್ತರಿಸುತ್ತಿದೆ. ಸೇನೆಗೆ ಶಕ್ತಿ ತುಂಬಿ, “ನಿಮ್ಮೊಂದಿಗೆ ನಾವಿದ್ದೇವೆ, ಅವಶ್ಯಕತೆಗೆ ತಕ್ಕಂತೆ ಮುನ್ನುಗ್ಗಿ" ಎಂಬ ಅಭಯದೊಂದಿಗೆ ಬೆನ್ನೆಲುಬಾಗಿ ನಿಂತ ಮೋದಿ ನೇತೃತ್ವದ ಭಾರತ ಸರಕಾರದ ಸ್ಥೈರ್ಯ ಮತ್ತು ದಿಟ್ಟ ನಿರ್ಧಾರಗಳು, ಸಂದಿಗ್ಧ ಸಮಯದಲ್ಲೂ ಭಾರತೀಯರ ಪಾಲಿಗೆ ಹೆಮ್ಮೆ ತಂದಿವೆ.

ಸರಕಾರ ಮತ್ತು ಸೇನೆಯ ನಿರ್ಧಾರಗಳಿಗೆ ತಮ್ಮ ಬೆಂಬಲವಿದೆಯೆಂದು ಘೋಷಿಸಿರುವ ಬಹುತೇಕ ವಿಪಕ್ಷ ನಾಯಕರ ನಡೆಯೂ ಅಭಿನಂದನಾರ್ಹವೇ. ಕರ್ನಾಟಕದಂಥ, ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಕೆಲವು ರಾಜ್ಯ ಸರಕಾರಗಳೂ ಭಾರತೀಯರ ಸುರಕ್ಷತೆಗಾಗಿ, ಭಾರತೀಯ ಸೇನೆಗೆ ಬಲನೀಡುವಂತೆ ಕೋರಿ ಗುಡಿ, ಮಸೀದಿ, ಚರ್ಚುಗಳಲ್ಲಿ ಪ್ರಾರ್ಥನೆಗೆ ಮುಂದಾಗಿದ್ದೂ ಪ್ರಶಂಸ ನೀಯವೇ.

ರಾಜಕೀಯದ ನಿಲುವುಗಳೇನೇ ಇದ್ದರೂ ದೇಶದ ಹಿತರಕ್ಷಣೆಯ ವಿಷಯದಲ್ಲಿ ನಾವೆಲ್ಲರೂ ಒಂದಾಗಿದ್ದು, ವಿವಿಧತೆಯಲ್ಲಿನ ಏಕತೆಯ ಭಾವ ಬಹುತೇಕ ಎಲ್ಲೆಡೆ ಗೋಚರಿಸುತ್ತಿದೆ. ಶಾಂತಿ ಮಂತ್ರದ ಆರಾಧಕರು (?) ಅಲ್ಲಲ್ಲಿ ಕಂಡುಬರುತ್ತಿದ್ದರೂ, ಅವರ ಉದ್ದೇಶ, ಆಸ್ಥೆಯ ಒಳಗುಟ್ಟು ಬಯಲಾಗಿದ್ದು ಬಿಟ್ಟರೆ ಬೇರಾವ ಪ್ರಭಾವ ಬೀರಿದ ಸೂಚನೆಗಳು ಸದ್ಯಕ್ಕಂತೂ ಕಾಣುತ್ತಿಲ್ಲ.

ಇದನ್ನೂ ಓದಿ: G Prathap Kodancha Column: ಜಾಗತೀಕರಣದ ಸಂಕವನ್ನು ಮುರಿಯಿತೇ ಸುಂಕದ ಸಮರ ?

ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆರಗಿ ಭಾರತೀಯ ಗೃಹಿಣಿಯರ ಸಿಂದೂರ ಅಳಿಸಿ ವಿಕೃತಿ ಮೆರೆದ ಭಯೋತ್ಪಾದಕ ಶಕ್ತಿಗಳಿಗೆ ಭಾರತ ಸರಕಾರವು ‘ಆಪರೇಷನ್ ಸಿಂದೂರ’ ಕಾರ್ಯಾ ಚರಣೆಯ ಮೂಲಕ ಸಮರ್ಪಕವಾಗಿಯೇ ಉತ್ತರಿಸಿದೆ. ಭಯೋತ್ಪಾದಕ ಕೇಂದ್ರಗಳನ್ನೇ ಗುರಿ ಯಾಗಿಸಿಕೊಂಡು ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಗುರಿಗೆ ಸನಿಹದಲ್ಲೇ ಇದ್ದ ಸಾರ್ವ ಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದೆ.

ತನ್ಮೂಲಕ ಜಾಗತಿಕ ವಲಯದಲ್ಲಿ ಅದು ಮೆಚ್ಚುಗೆಗೆ ಪಾತ್ರವಾಗಿದೆ. ಹೀನಕೃತ್ಯಕ್ಕೆ ಕಾರಣರಾದ ಉಗ್ರರ ನೆಲೆನಾಶದ ಕ್ರಮವನ್ನಷ್ಟೇ ತಾನು ಕೈಗೊಂಡಿರುವುದು ಎಂದು ಬಹಿರಂಗವಾಗಿ ಬಿಂಬಿಸಿ ರುವ ಭಾರತ, ತಾನು ಯುದ್ಧದಾಹಿ ಯಲ್ಲ, ಆದರೆ ಬೆನ್ನತ್ತಿದರೆ ಹುಟ್ಟಡಗಿಸದೆ ಬಿಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿಸಿದೆ.

ಅಮೆರಿಕ, ಇಂಗ್ಲೆಂಡ್, ಸೌದಿ ಅರೇಬಿಯಾ, ಯುಎಇ ಸಹಿತ ಹಲವು ರಾಷ್ಟ್ರಗಳ ಜತೆಗೆ ತನ್ನ ಕಾರ್ಯಾಚರಣೆಯ ಸಮರ್ಪಕ ಮಾಹಿತಿಯ ಸಹಿತ ಸಂವಹಿಸಿದ ಭಾರತದ ಪರಿ ಕೂಡ ನಮ್ಮ ವಿದೇಶಾಂಗ ಸಂಬಂಧಗಳ ಕ್ಷಮತೆಯನ್ನು ಪ್ರಚುರಪಡಿಸಿದೆ. ಅಮೆರಿಕ ಸೇರಿದಂತೆ ವಿಶ್ವದ ಕೆಲ ರಾಷ್ಟ್ರಗಳೇ ಗುರುತಿಸಿದ್ದ ಉಗ್ರರ ನೆಲೆಗಳು ಇವಾಗಿದ್ದರಿಂದಲೇ, ಭಾರತದ ಕಾರ್ಯಾಚರಣೆಯನ್ನು ಖಂಡಿಸುವ, ಭಾರತವನ್ನು ಸುಮ್ಮನಾಗಿಸುವ ಪ್ರಯತ್ನ ಜಾಗತಿಕ ವಲಯದಲ್ಲಿ ನಡೆಯಲಿಲ್ಲ.

ಇದು ಭಾರತದ ಮಟ್ಟಿಗೆ ಒಂದು ಹಂತದ ರಾಜತಾಂತ್ರಿಕ ಜಯವೆನಿಸುತ್ತದೆ. “ನಾನವನಲ್ಲ, ನಾನವ ನಲ್ಲ" ಎನ್ನುತ್ತಲೇ ಅಳಿದುಳಿದ ಶಕ್ತಿ ಬಳಸಿ ತನ್ನ ಇರುವಿಕೆ ತೋರಿಸಿಕೊಳ್ಳಲಿಕ್ಕಾಗಿಯೇ ಹೆಣಗು ತ್ತಿರುವ ಪಾಕಿಸ್ತಾನ ಸರಕಾರಕ್ಕೆ, ಅದರ ಸೈನ್ಯಕ್ಕೆ ಮತ್ತು ಭಯೋತ್ಪಾದಕ ಶಕ್ತಿಗಳಿಗೆ ಭಾರತವು ತಪರಾಕಿ ನೀಡಬಲ್ಲದು ಎಂಬ ಭರವಸೆ ನಿಚ್ಚಳವಾಗಿದೆ.

ಇಂಥ ಹಣಾಹಣಿಗಳಲ್ಲಿ ಜೀವಹಾನಿ, ಸ್ವತ್ತುನಷ್ಟಗಳು ಎರಡೂ ಕಡೆ ಸಂಭವಿಸುತ್ತವೆ; ಆದರೆ ಅವನ್ನು ಸಹಿಸಿ ಮುನ್ನುಗ್ಗುವ ಕ್ಷಮತೆಯು ಭಾರತಕ್ಕಿದ್ದಷ್ಟು ಸದ್ಯಕ್ಕೆ ಪಾಕಿಸ್ತಾನಕ್ಕಿಲ್ಲ. ಚೀನಾ, ಟರ್ಕಿಯನ್ನು ಬಿಟ್ಟರೆ ಜಗತ್ತಿನ ಬೇರಾವ ರಾಷ್ಟ್ರಗಳೂ ಪಾಕಿಸ್ತಾನದ ಬೆನ್ನಿಗೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಇವೆರಡೂ ರಾಷ್ಟ್ರಗಳಲ್ಲಿ ಆಂತರಿಕ ಸಮಸ್ಯೆಗಳೇ ಸಾಕಷ್ಟಿವೆ, ಹೀಗಾಗಿ ಯುದ್ಧ ನಡೆದರೆ ಅವೂ ನೇರಾನೇರ ಪಾಕ್‌ನ ಪರವಹಿಸಿ ಕಾದಾಡುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಭಾರತ ಸರಕಾರ, ಸೇನೆ, ವಿದೇಶಾಂಗ ಮತ್ತು ರಕ್ಷಣಾ ಇಲಾಖೆಗಳು ಸಮಯೋಚಿತವಾಗಿ ಜತೆಗೂಡಿ ಎದುರಾಗಬಹುದಾದ ಸವಾಲುಗಳಿಗೆ ಸನ್ನದ್ಧರಾಗುತ್ತಿರುವಂತೆಯೇ, ಸೇನೆಯಲ್ಲಿಲ್ಲದ ಅಸಂಖ್ಯಾತ ‘ರಕ್ಷಣಾ ಪರಿಣತರು’ ದೇಶಾದ್ಯಂತ ಹುಟ್ಟಿಕೊಂಡಿರುವುದು ಅಚ್ಚರಿಯ ಬೆಳವಣಿಗೆ! ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೈಕು ಮತ್ತು ಕ್ಯಾಮರಾಗಳೇ ಇಂಥವರ ಆಯುಧಗಳು! ಅದರಲ್ಲೂ ‘ಇಂಚಿಂಚಿನ ವಿವರ’, ‘ನಮ್ಮಲ್ಲೇ ಪ್ರಥಮ’, ‘ಎಕ್ಸ್‌ಕ್ಲೂಸಿವ್ ಮಾಹಿತಿ’, ‘ಬ್ರೇಕಿಂಗ್ ನ್ಯೂಸ್’ ಇತ್ಯಾದಿ ತಲೆಬರಹಗಳೊಂದಿಗೆ, ರಣಭಯಂಕರ ಶಂಖನಾದದ ಸಹಿತ ಹೊಮ್ಮುವ ವಿಶ್ಲೇಷಣೆಯನ್ನೊಮ್ಮೆ ವೀಕ್ಷಿಸಬೇಕು.

ರಕ್ಷಣಾ ಪರಿಕರಗಳು, ಕಾರ್ಯಾಚರಣೆ, ಯುದ್ಧನೀತಿ, ತಂತ್ರಗಾರಿಕೆಯ ಕುರಿತಾಗಿ ‘ನ್ಯೂಸ್’ ಚಾನಲ್‌ ಗಳ ‘ವ್ಯೂಸ್’ ವೀರರ ಪಡೆಯು ಕೆಲವೇ ದಿನಗಳಲ್ಲಿ ಕರಗತ ಮಾಡಿಕೊಂಡ ಅಪರಿಮಿತ ಪ್ರಾವೀಣ್ಯ ವನ್ನು ಕಂಡರೆ ಸೇನೆಯೇ ನಾಚಿಕೊಳ್ಳಬಹುದು! ಪಾಕಿಸ್ತಾನದ ಕೊರತೆ, ಭಾರತದ ಸಾಮರ್ಥ್ಯದ ಬಗೆಗಿನ ತಮ್ಮ ಇಂಥ ಜ್ಞಾನವನ್ನು ಅವರು ಸುದ್ದಿಪ್ರಸಾರ/ ಚರ್ಚಾಗೋಷ್ಠಿಗಳಲ್ಲಿ ಹಂಚಿಕೊಳ್ಳು ತ್ತಿರುವ ಪರಿ ನೋಡಿದರೆ, ಸೇನೆಯಲ್ಲಿನ ಪ್ರಮುಖ ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಇವರನ್ನೇ ಏಕೆ ನಿಯೋಜಿಸಬಾರದು ಎನಿಸಿಬಿಡುತ್ತದೆ.

ಕೆಲವರಂತೂ, ಶತ್ರುಪಡೆಯ ಯಾವ ಆಯುಧ ಎಲ್ಲಿಗೆ ಬಂದು ತಲುಪಲಿದೆ, ಅದನ್ನು ಹೊಡೆದುರುಳಿಸಲು ಯಾವ ಅಸ್ತ್ರ ವನ್ನು ಎಲ್ಲಿ ಬಳಸಬೇಕೆಂಬುದನ್ನು ಹೇಳಬಲ್ಲ ‘ಮೈಕಾಸುರ’ರು! ಮಾಧ್ಯಮಗಳು ಇವರ ಮುಂದೆ ಹಿಡಿಯುವ ಮೈಕುಗಳೇ ಇವರ ಪಾಶುಪತಾಸ್ತ್ರ!

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನ್ನಲಾಗುವ ಮಾಧ್ಯಮಗಳ ಸುದ್ದಿವೀರರ ಇಂಥ ಹಪಾಹಪಿ ಹೊಸದೇನಲ್ಲ. ಉಗ್ರರ ದಾಳಿಗೆ ತುತ್ತಾದವರ ಕುಟುಂಬಿಕರು, ಆ ಅಗಲಿಕೆಯ ಮೌನ ಶೋಕಾ ಚರಣೆಯಲ್ಲಿರುವಾಗಲೂ ಮೂತಿಗೆ ಮೈಕು ಹಿಡಿದು, “ಅವತ್ತೇ ನಾಯಿತು? ನಿಮಗೇನನ್ನಿಸಿತು?
ಎಂಥ ಪ್ರತೀಕಾರವನ್ನು ಬಯಸುತ್ತಿದ್ದೀರಿ?" ಎಂಬೆಲ್ಲ ಪ್ರಶ್ನೆಗಳಿಂದ ದಾಳಿ ಮಾಡುವವರಿವರು. ತಮ್ಮ ಮನೆಯಲ್ಲೇ ಹೀಗಾಗಿದ್ದರೆ ತಮ್ಮ ಉತ್ತರ ಏನಿರುತ್ತಿತ್ತು? ಎಂಬ ಆತ್ಮವಿಮರ್ಶೆಯನ್ನು ಕಿಂಚಿತ್ತೂ ಮಾಡಿಕೊಳ್ಳದೆ ಬ್ರೇಕಿಂಗ್ ನ್ಯೂಸ್‌ಗಾಗಿ ಹಪಹಪಿಸುವವರಿವರು.

ಸಮಯ-ಸಂದರ್ಭಕ್ಕೆ ತಕ್ಕ ಗಾಂಭೀರ್ಯವಿಲ್ಲದ ಇಂಥವರು ತಮ್ಮ ಹೊಣೆಯನ್ನು ಅರಿಯುವುದು ಯಾವಾಗ? ಎಲ್ಲೆಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂಬುದರಿಂದ ಹಿಡಿದು, ಯಾವ್ಯಾವ ಬಂಕರ್‌ ಗಳಲ್ಲಿ ನಮ್ಮ ಸೇನೆ ಸನ್ನದ್ಧವಾಗಿದೆ, ಅವರಲ್ಲಿರುವ ಆಯುಧಗಳ ಸಾಮರ್ಥ್ಯವೇನು ಎಂಬೆಲ್ಲಾ ಗೌಪ್ಯ ಮಾಹಿತಿಗಳನ್ನು ಹಂಚಿಕೊಳ್ಳುವ ಇವರಾರಿಗೂ, ಶತ್ರುಪಡೆಗಳಿಗೆ ತಾವೇ ಸೂಕ್ಷ್ಮ ಮಾಹಿತಿ ಗಳನ್ನು ಒದಗಿಸುತ್ತಿದ್ದೇವೆ ಎಂಬ ಪರಿವೆ ಇದ್ದಂತಿಲ್ಲ.

ಶತ್ರುಪಡೆಗಳು ನಯಾಪೈಸೆ ಖರ್ಚುಮಾಡದೆ ಇಂಥ ರಣತಂತ್ರದ ಮಾಹಿತಿಗಳನ್ನು ದಕ್ಕಿಸಿಕೊಂಡು ಬಿಡುತ್ತವೆ ಎನಿಸುವುದಿಲ್ಲವೇ? ‘ಆಪರೇಷನ್ ಸಿಂದೂರ್’ ಮಾಹಿತಿ ಹಂಚಿಕೊಂಡ ಸೇನಾಧಿಕಾರಿಗೆ ಕರ್ನಾಟಕದ ಜತೆಗಿರುವ ಸಂಬಂಧ ಹುಡುಕಿ, ಅವರ ಸಂಬಂಧಿಕರ ಪರಿಚಯ ಮಾಡಿಸಿದ ವಾಹಿನಿ ಗಳಿಗೆ, ಈ ನಡೆಯಿಂದಾಗಿ ಆ ಕುಟುಂಬಕ್ಕೆ ಅಪಾಯ ಒದಗಬಹುದು ಎಂಬ ಸೂಕ್ಷ್ಮತೆಯ ಅರಿವಾಗದಿದ್ದುದು ವಿಷಾದನೀಯ.

ಭಾರತ ಸರಕಾರ ಮತ್ತು ಸೇನೆ ವಿವರವಾಗಿ ಹೇಳಿಕೊಳ್ಳದಿದ್ದರೂ, ಯಾವ ಪ್ರದೇಶಗಳ ಮೇಲೆ ಯಾವ ಅಸ್ತ್ರಗಳ ದಾಳಿಯಾಗಿದೆ ಎಂಬುದನ್ನು ತೋರಿಸುವ ಭರದಲ್ಲಿ, ಶತ್ರುರಾಷ್ಟ್ರಗಳು ಬಳಸಿಕೊಳ್ಳು ವಂತಾಗುವಂಥ ಸೂಕ್ಷ್ಮ ಸಾಕ್ಷ್ಯಗಳನ್ನು ತಾವು ಒದಗಿಸುತ್ತಿದ್ದೇವೆ ಎಂಬ ಅರಿವು ಅವುಗಳಲ್ಲಿ ಇಲ್ಲದಿದ್ದುದು ದುರ್ದೈವ. ಹೇಳಿಕೇಳಿ ಇದು ತಂತ್ರಜ್ಞಾನ ಯುಗ. ಈ ಕಾಲಘಟ್ಟದ ಸೆಣಸಾಟಗಳಲ್ಲಿ ಸೂಕ್ಷ್ಮ ಮಾಹಿತಿಯ ಅನಾವರಣವೂ ಯುದ್ಧಭೂಮಿಕೆಯ ಪ್ರಮುಖ ಆಯಾಮವಾಗಿಬಿಡುತ್ತದೆ.

‘ನಾವು ಬಲಾಢ್ಯರು’ ಎಂದು ಕೊಚ್ಚಿಕೊಳ್ಳುವ ಭರದಲ್ಲಿ, ತಮ್ಮಲ್ಲೇ ಸಮಗ್ರ ಮಾಹಿತಿ ಇದೆಯೆಂದು ಖ್ಯಾತಿ ಗಳಿಸಿಕೊಳ್ಳುವ ಸ್ವಾರ್ಥದಲ್ಲಿ ಮಾಧ್ಯಮಗಳೇ ವಿರೋಧಿ ಪಡೆಗಳ ಕಣ್ಣು- ಕಿವಿಗಳಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ. “ಖಚಿತವಲ್ಲದ, ಖಾತ್ರಿಯಾಗದ ವಿದ್ಯಮಾನಗಳ ಪ್ರಕಟಣೆಯನ್ನಾಗಲೀ ವಿಶ್ಲೇಷಣೆಯನ್ನಾಗಲೀ ಮಾಡಬೇಡಿ" ಎಂಬುದಾಗಿ ಭಾರತ ಸರಕಾರ ಮತ್ತು ರಕ್ಷಣಾ ಇಲಾಖೆ ವಿನಂತಿಸಿಕೊಂಡರೂ, ‘ನಮ್ಮಲ್ಲೇ ಪ್ರಥಮ’ ಧಾಟಿಯ ದೃಶ್ಯಮಾಧ್ಯಮಗಳ ಭರಾಟೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ಇದು ಸಾಲದೆಂಬಂತೆ ಕೆಲ ಪತ್ರಿಕೆಗಳೂ ನಮ್ಮ ಹಾಗೂ ಪಾಕಿಸ್ತಾನದ ಸೇನಾಬಲ, ಶಸ್ತ್ರಾಸ್ತ್ರ ಸಂಗ್ರಹದ ಮಾಹಿತಿ, ಅವುಗಳ ಸಾಮರ್ಥ್ಯದ ಕುರಿತು ಸಚಿತ್ರ ವರದಿಗಳನ್ನು ಪ್ರಕಟಿಸುತ್ತಿವೆ. ಇದರ ಸತ್ಯಾಸತ್ಯತೆ ಪ್ರಶ್ನಾರ್ಹವೆನಿಸಿದರೂ, ಯುದ್ಧದ ಸನ್ನಿವೇಶದಲ್ಲಿ ಇಂಥ ವಿಷಯಗಳಿಗಿರುವ ಗೌಪ್ಯತೆಯ ಮಹತ್ವವೇ ಇವಕ್ಕೆ ಅರಿವಿಗೆ ಬಾರದಿರುವುದು ಅಪಾಯಕಾರಿಯಾಗಿದೆ.

ಸೇನಾ ವ್ಯವಸ್ಥೆ, ಯುದ್ಧದ ಸಜ್ಜಿಕೆ ಮುಂತಾದವುಗಳ ಗಂಧ-ಗಾಳಿ ಇಲ್ಲದವರೂ ಸುದ್ದಿವಾಹಿನಿಗಳ ಸ್ಟುಡಿಯೋಗಳಲ್ಲಿ ಕೂತು ಮಾಡುವ ವಿಶ್ಲೇಷಣೆಗಳನ್ನು ಹಾಗೂ ತಂತ್ರಗಾರಿಕೆಯ ಒಳಸುಳಿಗಳ ವಿವರಣೆಗಳನ್ನು ಕೇಳಿದರಂತೂ ನಮ್ಮ ಸೇನೆಗಳ ದಂಡನಾಯಕರೇ ಹೀಗೆ ಕೂತು ಚರ್ಚಿಸು ತ್ತಿದ್ದಾರೇನೋ ಅನಿಸಿಬಿಡುತ್ತದೆ. ಸ್ಟುಡಿಯೋದಿಂದ ತಮ್ಮದೇ ಮನೆ ತಲುಪಲು ‘ಗೂಗಲ್ ಮ್ಯಾಪ್’ ಅನ್ನು ನೆಚ್ಚುವವರು ಕೂಡ, ಗಡಿಭಾಗದ ಭೂಪಟ ಸಹಿತ ಅಲ್ಲಿನ ಪ್ರತಿಯೊಂದು ಬಂಕರ್, ಸೇನಾಪಡೆಗಳ ಶಕ್ತಿಕೇಂದ್ರಗಳ ವಿವರವನ್ನು ಹಂಚಿಕೊಳ್ಳುವುದನ್ನು ಕೇಳಿದಾಗ ನಿಜಕ್ಕೂ ಅಚ್ಚರಿ ಯಾಗುತ್ತದೆ.

ಗುಪ್ತಚರ ವ್ಯವಸ್ಥೆಗಳು ವರ್ಷಗಳಲ್ಲಿ ಸಂಗ್ರಹಿಸಲಾಗದ ಮಾಹಿತಿಗಳನ್ನು ಕಳೆದೊಂದು ವಾರದಲ್ಲಿ ಇವರೆಲ್ಲರೂ ಕರತಲಾಮಲಕ ಮಾಡಿಕೊಂಡಿರುವ ಪರಿಯಂತೂ ವಿಸ್ಮಯಕಾರಿ! ನಮ್ಮ ಸರಕಾರದ ಮತ್ತು ಸೈನ್ಯದ ತಪ್ಪು ನಡೆಗಳೇನು? ಸೈನಿಕರು ಎಲ್ಲಿ, ಹೇಗೆ ಮುನ್ನುಗ್ಗಬೇಕು? ಯಾವಾಗ ಯಾವ ಅಸ್ತ್ರ ಬಳಸಬೇಕು? ಎಂಬ ಹಂತಹಂತದ ವಿವರಣೆಗಳನ್ನು ಇವರು ಹಂಚಿಕೊಳ್ಳುವ ಪರಿಯನ್ನು ಭಯೋತ್ಪಾದಕರು ಮುಂಚೆಯೇ ನೋಡಿದ್ದಿದ್ದರೆ, ಪಹಲ್ಗಾಮ್ ಸಹಿತ ಇನ್ನಾವುದೇ ತಾಣದಲ್ಲಿ ಭಯೋತ್ಪಾದಕ ಚಟುವಟಿಕೆಯೇ ನಡೆಯದಂತೆ ತಡೆಯುವ ಸಾಮರ್ಥ್ಯ ಇವರಿಗಿರಬೇಕು ಎಂದು ಭಾವಿಸುತ್ತಿದ್ದರೇನೋ? ಯುದ್ಧೋನ್ಮಾದ ತರಿಸಿ ಬೇಳೆ ಬೇಯಿಸಿಕೊಳ್ಳುವುದಷ್ಟೇ ಅಲ್ಲದೆ, ತಮ್ಮೊಳ ಗಿನ ಭಿನ್ನಾಭಿಪ್ರಾಯಗಳನ್ನೂ ತೋರಿಸಿಕೊಂಡು ಗಂಟೆಗಟ್ಟಲೆ ಚರ್ಚಿಸುವ ನಮ್ಮೊಳಗಿನ ದ್ರೋಹಿ ಗಳಿಗೆ ವೇದಿಕೆ ಕಲ್ಪಿಸುವುದನ್ನು ಜವಾಬ್ದಾರಿಯುತ ಮಾಧ್ಯಮಗಳು ಇನ್ನಾದರೂ ನಿಲ್ಲಿಸಬೇಕು.

ಆಡಳಿತಾರೂಢ ಪಕ್ಷದ ಬಹುಪಾಲು ರಾಜಕೀಯ ವಿರೋಧಿಗಳೂ ಸದ್ಯ ಸರಕಾರದ ಮತ್ತು ಸೇನಾಪಡೆಗಳ ಬೆನ್ನಿಗೆ ನಿಂತಿದ್ದಾರೆ. ಇದನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಬದಲು, ಅಲ್ಲಲ್ಲಿ ಕಂಡುಬಂದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೇ ಪದೇಪದೆ ತೋರಿಸುವುದು ಖೇದಕಾರಿ ಬೆಳವಣಿಗೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ಶಾಂತಿಯ ಸಲಹೆ’ಯು ಪಾಕಿಸ್ತಾನದ ಮಾಧ್ಯಮ ಗಳಲ್ಲೂ ಚರ್ಚೆಯಾಗುವಂತೆ ಮಾಡಿದ ಕೀರ್ತಿ ಈ ಸುದ್ದಿವಾಹಿನಿಗಳಿಗೆ ಸಲ್ಲಬೇಕು.

ಇನ್ನು, ‘ಸರ್ವಪಕ್ಷದ ಸಭೆಯಲ್ಲಿ ಪ್ರಧಾನಿ ಇರಲಿಲ್ಲ’ ಎಂಬ ಕೆಲ ರಾಜಕೀಯ ವಿರೋಧಿಗಳ ಸಮಾಧಾನಕ್ಕೆ ಕೆಲ ಮಾಧ್ಯಮಗಳು ಒತ್ತು ಕೊಟ್ಟು ಬಿಂಬಿಸಿದವು. ಆದರೆ ವಿಪಕ್ಷ ಕಾಂಗ್ರೆಸ್‌ನ ಸಂಸದ ಶಶಿ ತರೂರ್ ಅವರು ಪಾಕ್ ಪಾಳಯದ ಭಯೋತ್ಪಾದಕ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ಕೊಟ್ಟ ಭಾರತ ಸರಕಾರ ಮತ್ತು ಸೇನಾಪಡೆಗಳನ್ನು ಸಮರ್ಥಿಸಿಕೊಂಡು ನೀಡಿದ ಸ್ಪಷ್ಟ ಹೇಳಿಕೆಗಳು ವಿದೇಶಿ ಮಾಧ್ಯಮಗಳಲ್ಲಿ ಕಂಡುಬಂದಷ್ಟು ಭಾರತೀಯ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಜನಜಾಗೃತಿ, ಸಮಾಜದ ರಕ್ಷಣೆಯ ಕುರಿತಂತೆ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು; ಅವು ಭಾರತ ಸರಕಾರ, ಸೇನಾಪಡೆಗಳು ಮತ್ತು ನಾಗರಿಕ ಸಮಾಜಗಳ ನಡುವಿನ ಸಂವಹನದ ಸೇತುವೆಯಂತೆ ನಡೆದುಕೊಳ್ಳಬೇಕು. ವೈರಿಪಡೆಗಳ ನೀಚತನ, ಸುಳ್ಳು ಸಂದೇಶಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ, ಭಾರತದ ನಡೆಗಳಿಗೆ ಜಗತ್ತಿನಾದ್ಯಂತ ಮನ್ನಣೆ ದೊರಕಿಸಬಲ್ಲ, ಸತ್ವಯುತ ನಿರೂಪಣೆಯನ್ನು ಸಮರ್ಥವಾಗಿ ಕಟ್ಟಿಕೊಡಬಲ್ಲ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇಲ್ಲವಾದಲ್ಲಿ ಇಂಥ ಮಾಧ್ಯಮಗಳಿದ್ದೂ ಪ್ರಯೋಜನವಿಲ್ಲ.

ಆದ್ದರಿಂದ, ನಮ್ಮ ಮಾಧ್ಯಮಗಳು ಇನ್ನಾದರೂ ಪ್ರಚಾರದ/ ಟಿಆರ್‌ಪಿಯ ಹಪಾಹಪಿ ಬಿಟ್ಟು, ವಿದೇಶಾಂಗ ಇಲಾಖೆ ಮತ್ತು ಸೇನಾಪಡೆಗಳ ಸುದ್ದಿಗೋಷ್ಠಿಗಳಲ್ಲಿ ಹಂಚಿಕೊಂಡ ಮಾಹಿತಿ ಗಳನ್ನಷ್ಟೇ ಬಿತ್ತರಿಸಿ, ಅವು ಜನಮನ ತಲುಪುವಂತೆ ನೋಡಿಕೊಳ್ಳಬೇಕು.

(ಲೇಖಕರು ಹವ್ಯಾಸಿ ಬರಹಗಾರರು)