Monday, 13th January 2025

ಟೋಕಿಯೋ ನಗರದ ಹಾದಿಯಲ್ಲಿದೆಯೇ ಬೆಂಗಳೂರು ?

ನಗರ ಸಂಚಾರ

ರಮಾನಂದ ಶರ್ಮಾ

ramanandsharma28@gmail.com

ಒಂದು ಮಾಧ್ಯಮ ವರದಿಯ ಪ್ರಕಾರ ಜಪಾನ್ ಸರಕಾರವು ಟೋಕಿಯೋ ಮೆಟ್ರೋಪೊಲಿಟನ್ ಪ್ರದೇಶದಿಂದ ಹೊರಹೋಗಿ ವಸತಿ ಮಾಡುವವರಿಗೆ (relocation) ಮನೆಯ ಪ್ರತಿ ಮಗುವಿಗೆ ಒಂದು ಮಿಲಿಯನ್ ಯೆನ್(೭೫೦೦ ಅಮೆರಿಕನ್ ಡಾಲರ್ ಅಥವಾ ೬ ಲಕ್ಷ ರು) ನೀಡುವುದಾಗಿ ಪ್ರಕಟಿಸಿದೆ. ಈ ಮೊದಲು ೩ ಲಕ್ಷ ಯೆನ್ ಇದ್ದದ್ದು, ಈಗ ಈ ಕೊಡುಗೆಯನ್ನು ಒಂದು ಮಿಲಿಯನ್‌ಗೆ ಏರಿಸಲಾಗಿದೆ.

ಅಂತೆಯೇ ಎರಡು ಮಕ್ಕಳಿರುವ ಒಂದು ಕುಟುಂಬವು ರಾಜಧಾನಿ ಟೋಕಿಯೋವನ್ನು ತೊರೆಯಲು ಮೂರು ಮಿಲಿಯನ್ ಯೆನ್ ಸಹಾಯಧನ ಪಡೆಯುತ್ತಿದೆ. ಜಪಾನ್ ಸರಕಾರವು ೨೦೨೭ರ ಹೊತ್ತಿಗೆ ೧೦ ಸಾವಿರ ಕುಟುಂಬವು ಟೋಕಿಯೋ ನಗರವನ್ನು ತೊರೆಯುವ ದೃಢ ನಿರೀಕ್ಷೆಯಲ್ಲಿ ಇದೆ. ಇಂಥ ಹಣಕಾಸು ಸೌಲಭ್ಯವನ್ನು ಟೋಕಿಯೋ ನಗರದ ೨೩ ಮುಖ್ಯವಾರ್ಡ್ ಗಳಲ್ಲಿ, ಕನಗ್ವಾ ಮತ್ತು ಸೈಟೋಮಾ -ಚಿಬೋ ನಗರಗಳಲ್ಲಿ ನೀಡಲಾಗುತ್ತಿದೆ. ನಗರಗಳಲ್ಲಿ ಜನಂಖ್ಯೆಯನ್ನು ನಿಯಂತ್ರಿಸಿ ನಗರಗಳನ್ನು ವಾಸ ಯೋಗ್ಯವಾಗಿ ಉಳಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂದು ಅಲ್ಲಿನ ಸರಕಾರ ಹೇಳಿದೆ.

ಮೇಲುನೋಟಕ್ಕೆ ಇದು ಟೋಕಿಯೋ ನಗರದ ಸಮಸ್ಯೆ ಎನಿಸಿದರೂ, ವಾಸ್ತವದಲ್ಲಿ ಜಾಗತಿಕ ಸಮಸ್ಯೆಯಾಗಿದೆ. ರಾಜಧಾನಿ ಇರುವ ಪ್ರತಿಯೊಂದೂ ನಗರದಲ್ಲಿ ಆಡಳಿತ ಕೇಂದ್ರ, ಉದ್ಯಮ, ಆರೋಗ್ಯ-ನ್ಯಾಯಾಂಗ ಸೇವೆ ಮತ್ತು ಶೈಕ್ಷಣಿಕ ಸೌಲಭ್ಯಗಳು ಕೇಂದ್ರೀಕೃತವಾಗಿರುತ್ತವೆ. ಇವು ಎಲ್ಲ ಒಂದೇ ಸ್ಥಳದಲ್ಲಿ ಇದ್ದರೆ, ನಗರಗಳು ಜನಸಂಖ್ಯೆಯ ಒತ್ತಡವನ್ನು ತಡೆಯಲಾರದೇ ನಿತ್ಯ ಜೀವನ ಅಸ್ತವ್ಯಸ್ತವಾಗುವುದು, ಬದುಕು ದುಸ್ತರವಾಗುವುದು ಖಚಿತ. ಪ್ರತಿಯೊಂದು ನಗರಕ್ಕೂ ತಡೆದುಕೊಳ್ಳುವ ಅಥವಾ ಧಾರಣ ಶಕ್ತಿ ಇರುತ್ತಿದ್ದು, ಆ ಮಿತಿ ಬಹುತೇಕ ಎಲ್ಲ ನಗರಗಳಲ್ಲಿ ದಾಟಿದೆ.

ಈ ಪರಿಸ್ಥಿತಿಗೆ ನಮ್ಮ ಕಣ್ಣೆದುರು ಕಾಣವ ಒಂದು ಜೀವಂತ ಉದಾಹರಣೆ ನಮ್ಮ ಬೆಂಗಳೂರು. ಇಂದು ಟೋಕಿಯೋದಲ್ಲಿ ನಗರವನ್ನು ಬದುಕಿಸಲು, ಉಳಿಸಲು ನಡೆಯುವ ಪ್ರಹಸನ ಇನ್ನು ನಾಲ್ಕಾರು ವರ್ಷದಲ್ಲಿ ಬೆಂಗಳೂರಿನಲ್ಲಿ ಬರಬಹುದೇನೋ ಎನ್ನುವ ಭಯ ಪ್ರeವಂತರಲ್ಲಿ, ಆಡಳಿತಗಾರರಲ್ಲಿ, ನಗರ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಲ್ಲಿ ಕಾಣುತ್ತಿದೆ. ಇಂದು ಟೋಕಿಯೋ ದತ್ತ ನೊಡಿ ನಗೆಯಾಡುವವರು ಸದ್ಯದಲ್ಲಿ ಬೆಂಗಳೂರಿನತ್ತ ನೋಡಿ ನಗೆಯಾಡುವ ದಿನಗಳು ದೂರವಿಲ್ಲ.

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ವಿದೇಶಿಗರೊಬ್ಬರ ಬಳಿ ಅಭಿಪ್ರಾಯದ ಕೇಳಿದಾಗ, A city of just population at this rate the day is not far away when you will have to sturggle for anything everything ಎಂದು ತಮ್ಮ ದೇಹವನ್ನು ಕೊಂಕಿಸಿ ಹೇಳಿದ್ದರು. ಬೆಂಗಳೂರಿನಲ್ಲಿ ಯಾವುದಾದರೂ ಎತ್ತರದ ಕಟ್ಟಡದ ಮೇಲೆ ನಿಂತು ಕೆಳಗೆ ಕಲ್ಲು ಒಗೆದರೆ ಅದು ನೆಲದ ಮೇಲೆ ಬೀಳದೆ ಯಾರಾದರೊಬ್ಬರ ತಲೆ ಮೇಲೆ ಬೀಳುತ್ತದೆ ಎನ್ನುವ ಜೋಕನ್ನು ಕೇಳಿದಾಗ ಆ ವಿದೇಶಿಗನ ಮಾತಿನ ಹಿಂದಿನ ಸತ್ಯದ ಅರಿವು ಆಗುತ್ತದೆ.

ಕಾಸ್ಮೋಪೊಲಿಟನ್, ಮೆಟ್ರೋಪಾಲಿಟನ್, ಉದ್ಯಾನ ನಗರ, ಪಿಂಚಣಿಗರ ಸ್ವರ್ಗ, ಸಿನೆಮಾ ಮಂದಿರಗಳ ನಗರ, ಸಿಲಿಕಾನ್ ವ್ಯಾಲಿ, ಬಾರ್‌ಗಳ ಬೀಡು ಎಂದೆಲ್ಲ ಹಣೆಪಟ್ಟಿ ಕಟ್ಟಿಕೊಂಡಿರುವ ಬೆಂಗಳೂರಿನ ವಿಸ್ತೀರ್ಣ ಸುಮಾರು ೭೪೦ ಚ. ಕಿ.ಮೀ ಆಗಿದ್ದು ಅದರ ಜನಸಂಖ್ಯೆ ೧.೨೦ ಕೋಟಿ. ಈ ನಗರದಲ್ಲಿ ೧.೦೪ ಕೋಟಿ ವಾಹನಗಳು ಇವೆಯಂತೆ. ಇವುಗಳಲ್ಲಿ ಸುಮಾರು ೫೦ ಲಕ್ಷ ದ್ವಿ ಚ  ವಾಹನಗಳು. ಅವು ಹೊರ ಸೂಸುವ ಹೊಗೆಯಿಂದಾಗುವ ಪರಿಸರ ಮಾಲಿನ್ಯ ಬೇರೆ ಮಾತು. ಬೆಂಗಳೂರಿನ ನೀರಿನ ಅವಶ್ಯಕತೆಯ ಶೆ. ೬೦ರಷ್ಟು ಕಾವೇರಿ ನದಿಯಿಂದ ಪೂರೈಕೆ ಆಗುತ್ತದೆ.

ಕಾವೇರಿಯಿಂದ ೨೩.೧೦ ಟಿಎಮ್‌ಸಿ ನೀರು ಪೂರೈಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿದಿನ ೧೪೦೦ ಮಿಲಿಯನ್ ಲೀಟರ್
ನೀರು ಬಳಕೆಯಾಗುತ್ತದೆ. ಕಾವೇರಿ ನೀರು ೯೫ ಕಿಮಿ ದೂರದಿಂದ ಪಂಪ್ ಆಗುತ್ತಿರುವುದು ಇನ್ನೊಂದು ವಿಶೇಷ. ಇದನ್ನು ಬಿಟ್ಟರೆ ಬೆಂಗಳೂರಿಗೆ ಬೇರೆ ನದಿ ನೀರಿನ ಮೂಲ ಇಲ್ಲ. ಬೆಂಗಳೂರಿಗರ ತಲಾ ನೀರಿನ ಬಳಕೆ ಸುಮಾರು ೧೦೦-೧೨೫ ಲೀಟರ್‌ಗಳು. ಬೆಂಗಳೂರಿನಲ್ಲಿ ಸಣ್ಣದು ಮತ್ತು ದೊಡ್ಡದು ಎಲ್ಲ ಸೇರಿ ಸುಮಾರು ೭೫ಸಾವಿರ ವಸತಿ ಸಮುಚ್ಚಯಗಳು ಇದ್ದು, ಮನೆಗಳ ಸಂಖ್ಯೆ ೨೩,೯೩,೮೪೫ ಗಳು. ನಿರ್ಮಾಣದ ಬೇರೆ ಬೇರೆ ಹಂತದಲ್ಲಿರುವ ಮನೆಗಳು ಮತ್ತು ಸಮುಚ್ಚಯಗಳು ಬೇರೆ. ಸುಮಾರು ೭೨೦೦೦
ಫ್ಲ್ಯಾಟ್‌ಗಳು ಮಾರಾಟಕ್ಕಾಗಿ ಕಾದು ಕುಳಿತಿವೆಯಂತೆ.

ಹಾಗೆಯೇ ೧೬ ವಿಶ್ವ ವಿದ್ಯಾಲಯಗಳು, ೭೩೩ ಕಾಲೇಜುಗಳು(?) ಮತ್ತು ಖಾಸಗಿ ಮತ್ತು ಸರಕಾರಿ ಶಾಲೆಗಳು ಸೇರಿ ಸುಮಾರು ೪೮೦೦ ಶಾಲೆಗಳ ಇವೆಯಂತೆ. ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುವ ಈ ನಗರದಲ್ಲಿ ೧೬ ಟೆಕ್‌ಪಾಕ್ ಗಳು, ೬೭ ಸಾವಿರ ನೋಂದಾ ಯಿತ ಕಂಪನಿಗಳು ಮತ್ತು ೧೨೦೦ ಪೂರ್ಣಾವಧಿ ಕೆಲಸ ಮಾಡುವ ಟೆಕ್ ಕಂಪನಿಗಳು ಇದ್ದು, ನೇರ ಮತ್ತು ಪರೋಕ್ಷ ವಾಗಿ ೧.೫೦ ಮಿಲಿಯನ್ ಜನರು ಇವುಗಳಲ್ಲಿ ಕೆಲಸ ಮಾಡುತ್ತಾರೆ. ಇದಕ್ಕೆ ಹೊರತಾಗಿ ಬೇರೆ ದೊಡ್ಡ ಮತ್ತು ಸಣ್ಣ – ಮಧ್ಯಮ ಮತ್ತು ದೊಡ್ಡ ಉದ್ಯಮಗಳು ಉದ್ಯಮಗಳು ಬೇರೆ. ಬೆಂಗಳೂರು ಇತ್ತೀಚೆಗೆ ಜಗತ್ ಪ್ರಸಿದ್ಧ ಆರೋಗ್ಯ ಸೇವಾ ಕೇಂದ್ರ ವಾಗಿದ್ದು, ನೂರಾರು ಜಾಗತಿಕ ದರ್ಜೆ ಆಸ್ಪತ್ರೆಗಳು ಮತ್ತು ಸಾವಿರಾರು ಉತ್ತಮ ಆಸ್ಪತ್ರೆಗಳಿಂದ ಹೆಲ್ತ ಟೂರಿಸಂ ಕೇಂದ್ರ ವಾಗುತ್ತಿದೆ.

ಹಾಗೆಯೇ ಸುತ್ತಲಿನ ಆರು ರಾಜ್ಯಗಳಿಂದ ಮತ್ತು ಉತ್ತರದ ರಾಜ್ಯಗಳಿಂದಲೂ ಉದ್ಯೋಗ, ಶಿಕ್ಷಣ ಮತ್ತ ಬಿಜಿನೆಸ್ ಅರಸಿ ಲಕ್ಷಾಂತರ ಜನರು ಬೆಂಗಳೂರಿಗೆ ದಾಂಗುಡಿ ಇಡುತ್ತಿದ್ದಾರೆ. ಅಂತೆಯೆ ನೆಮ್ಮದಿಯ ಜೀವನಕ್ಕೆ ಬೇಕಾದ ಸೌಲಭ್ಯಗಳ ಕೊರತೆ ದಿನೇ ದಿನೆ ಹೆಚ್ಚಾಗುತ್ತಿದೆ. ಬೇಡಿಕೆಯ ಮಟ್ಟದಲ್ಲಿ ಸೌಲಭ್ಯಗಳು ಹೆಚ್ಚುತ್ತಿಲ್ಲ ಅಥವಾ ಹೆಚ್ಚಲು ಅವಕಾಶವಿರುವುದಿಲ್ಲ. ನಗರ ಲಂಗು
ಲಗಾಮು ಇಲ್ಲದೆ ಬೆಳೆಯುತ್ತಿದೆ. ಇದು ಇಷ್ಟು ವೇಗವಾಗಿ ಮತ್ತು ವಿಸ್ತಾರವಾಗಿ ಬೆಳೆಯುತ್ತಿದೆ ಎಂದರೆ, ನಗರದ ಗಡಿ ಗುರುತಿಸು ವುದೇ ಕಷ್ಟವಾಗುತ್ತಿದೆ.

ಹತ್ತಿರದ ನಗರಗಳು ಬೆಂಗಳೂರಿಗೆ ಬಹುತೇಕ ಕೂಡಿವೆ. ಹತ್ತಿರದ ನಗರಗಳು- ಪಟ್ಟಣಗಳು ಎಲ್ಲಿಂದ ಆರಂಭವಾಗುತ್ತವೆ ಮತ್ತು
ಬೆಂಗಳೂರು ನಗರ ಎಲ್ಲಿ ಮುಗಿಯುತ್ತದೆ ಎನ್ನುವುದು ಗೊಂದಲಕಾರಿಯಾಗಿದೆಯಂತೆ. ಈ ಹತಾಶ ಸ್ಥಿತಿಗೆ ಆಭಿವೃದ್ಧಿ ಮತ್ತು ಬೆಳವಣಿಗೆಯ ಪರಿಕಲ್ಪನೆ ಇಲ್ಲದ, ಕೇವಲ ಇಂದು -ನಾಳೆಯ ಬಗೆಗೆ ಚಿಂತಿಸುವ, ನಾಳೆಯಿಂದಾಚೆಯ ಬದುಕನ್ನು ಗಂಭಿರವಾಗಿ
ಚಿಂತಿಸದ ಮತ್ತು ವಿಕೇಂದ್ರಿಕರಣದ ಮಹತ್ವವನ್ನು ತಿಳಿಯದ ನೌಕರಶಾಹಿ ಮತ್ತು ರಾಜಕಾರಿಣಿಗಳು ಎಂದು ಧಾರಾಳವಾಗಿ ಕೇಳಿಬರುತ್ತಿದೆ. ಅವರ ಯೋಚನಾ ಲಹರಿ ಇಂದು ಮತ್ತು ನಾಳೆಯನ್ನು ದಾಟಿ ಮುಂದೆ ಹೋಗುವುದಿಲ್ಲ. ಅದರ ಪರಿಣಾಮವೇ ಇಂದಿನ ಬೆಂಗಳೂರಿನ ಪರಿ ಸ್ಥಿತಿಗೆ ಕಾರಣ ಎನ್ನುವ ನಗರ ಬದುಕಿನ ಪರಿಣಿತರ ಅಭಿಪ್ರಾಯವನ್ನು ಸಾರಾಸಗಟಾಗಿ ತಿರಸ್ಕರಿಸಲು ಸಾದ್ಯವಿಲ್ಲ.

ಒಂದು ಮೇಲು ಸೇತುವೆಯನ್ನೋ, ಕೆಳ ಸೇತುವೆಯನ್ನೋ ನಿರ್ಮಿಸಿ ೫-೬ ವರ್ಷಗಳಲ್ಲಿ ಅದನ್ನು ಒಡೆದು ಬೇರೆ ನಿರ್ಮಿಸುವ ಉದಾಹರಣೆಗಳು ಬೆಂಗಳೂರಿನಲ್ಲಿ ಇದೆ. ಒಂದು ಹೊಸ ರಸ್ತೆ ನಿರ್ಮಿಸುವಾಗ ಇಂದಿನ ಅಗತ್ಯವನ್ನಷ್ಟೇ ಪರಿಗಣಿಸುತ್ತಾರೆ ವಿನಾ ಮುಂದಿನ ದಿನಗಳಲ್ಲಿನ ಸಾಂಧ್ರತೆ, ದಟ್ಟಣೆ ಮತ್ತು ಟ್ರಾಫಿಕ್ ಬಗೆಗೆ ಯೋಚನಾ ಲಹರಿ ಹರಿಯುವುದಿಲ್ಲ. ಹಾಗೆಯೇ ನಗರದ ಅಭಿವೃದ್ಧಿಗಾಗಿ ಇರುವ ಬೇರೆ- ಬೇರೆ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಬೆಂಗಳೂರಿನ ನಾಗರಿಕ ಸಮಸ್ಯೆಗಳ ಹಿಂದಿನ
ಇನ್ನೊಂದು ಕಾರಣ. ನಗರ ಸಭೆ ರಸ್ತೆ ನಿರ್ಮಿಸಿ ಮುಗಿಸಿದಂತೆ ಜಲಮಂಡಳಿ ನೀರಿನ ಪೈಪ್‌ಗಾಗಿಯೋ ಒಳಚರಂಡಿಗಾಗಿಯೋ ರಸ್ತೆ ಅಗೆಯುವುದು, ನೆಲದೊಳಗೆ ಕೇಬಲ್ ಹಾಕಲು ಟೆಲಿಫೋನ್ ಇಲಾಖೆಗಳು, ಖಾಸಗಿ ಮೊಬೈಲ್ ಕಂಪನಿಗಳು ದಾಂಗುಡಿ ಇಡುವುದು ತೀರಾ ಸಾಮಾನ್ಯ ದೃಶ್ಯ.

ಹಾಗೆಯೇ ರಸ್ತೆ, ನೀರು ಸರಬರಾಜು, ಗ್ಯಾಸ್ ಪೂರೈಕೆ, ಭೂಗತ ವಿದ್ಯುತ್ ಕೇಬಲ್ ಯೋಜನೆ, ಒಳಚರಂಡಿ ಯೋಜನೆಗಳು, ಮೆಟ್ರೋ ಮತ್ತು ಉಪನಗರ ರೈಲು ಕಾಮಗಾರಿಗಳು ಸಮಯ ಪರಿಮಿತಿಯೊಳಗೆ ಮುಗಿಯದಿರುವುದು ಬೆಂಗಳೂರಿಗರಿಗೆ ಇನ್ನೊಂದು ಸಂಕಷ್ಟವಾಗಿ ಪರಿಣಮಿಸಿದೆ. ನಗರದಲ್ಲಿ ಅಡ್ಡಾಡುವವರು ಈ ಬಗೆಗೆ ಶಾಪ ಹಾಕುವ ದೃಶ್ಯಾವಳಿ ಎಲ್ಲ ಕಡೆ ಕಾಣುತ್ತದೆ.

ರಾಜ್ಯದಲ್ಲಿ ಸಾಫ್ಟ್ ವೇರ್ ಉದ್ಯಮ ಸ್ಥಾಪಿತವಾಗಲಿ ಮತ್ತು ತನ್ಮೂಲಕ ಕನ್ನಡಿಗರಿಗೆ ಉದ್ಯೋಗ ಅವಕಾಶ ದೊರಕಲಿ ಎಂದು ರಾಜ್ಯ ಸರಕಾರ ಆ ಉದ್ಯಮಕ್ಕೆ ಹಲವು ರಿಯಾಯಿತಿ ಗಳನ್ನು ನೀಡಿದೆಯಂತೆ. ಅದರೆ, ಇದು ಬೆಂಗಳೂರಿನಲ್ಲಿ ಕೇಂದ್ರೀಕೃತ ವಾಯಿತೇ ವಿನಾ ಸಮಗ್ರ ಕರ್ನಾಟಕಕ್ಕೆ ಪಸರಿಸಿಲ್ಲ. ಇಂಥ ವಿನಾಯಿತಿಯನ್ನು ನೀಡುವಾಗ ಕರ್ನಾಟಕದಲ್ಲಿನ ಇತರ ದೊಡ್ಡ ನಗರಗಳನ್ನೂ ಗಮನದಲ್ಲಿ ಇಟ್ಟು ವಿನಾಯಿತಿ ನೀಡಿದ್ದರೆ, ಬೆಂಗಳೂರಿನಲ್ಲಿ ಇಂಥ ಒತ್ತಡನಿರ್ಮಾಣವಾಗುತ್ತಿರಲಿಲ್ಲ.

ಬೆಂಗಳೂರಿನ ಜನಸಂಖ್ಯೆಯಲ್ಲಿ ೧.೫೦ ಮಿಲಿಯನ್ ಟೆಕ್ಕಿಗಳು ಇzರೆ ಎನ್ನುವುದು ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಈ ಉದ್ಯಮ ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಮೈಸೂರು, ಮಂಗಳೂರು, ಶಿರ್ಸಿ-ಕಾರವಾರಗಳಂಥ ನಗರಗಳಿಗೂ ಹಬ್ಬಿದ್ದರೆ, ಒಂದು ಕಲ್ಲಿಗೆ ಎರಡು ಮಾವಿನಕಾಯಿ ಎನ್ನುವಂತೆ ಈ ನಗರಗಳ ಅಭಿವೃದ್ಧಿಯ ಜತೆಗೆ ಬೆಂಗಳೂರಿನ ಒತ್ತಡವನ್ನು
ಕಡಿಮೆ ಮಾಡಬಹುದಿತ್ತು. ಇಂದು ಬೆಂಗಳೂರು ಎಷ್ಟು ಬೆಳೆದಿದೆ ಎಂದರೆ, ಇಲ್ಲಿ ಪ್ರತಿದಿನ ೫ಸಾವಿರ ಟನ್ ತ್ಯಾಜ್ಯ ಉತ್ಪತ್ತಿ ಯಾಗುತ್ತಿದ್ದು ಅದನ್ನು ವಿಲೇವಾರಿ ಮಾಡಲು ಸ್ಥಳ ಸಿಗದಂತಾಗಿದೆ. ನಗರದೊಳಗೆ ಸ್ಥಳ ಇಲ್ಲ ಮತ್ತು ನಗರದ ಹೊರಗೆ ವಿಲೇವಾರಿ ಮಾಡುವಂತಿಲ್ಲ. ಬೆಂಗಳೂರು, ನಗರ ದಿಂದ ಹೊರ ಹೋಗುವ ಎಲ್ಲ ರಸ್ತೆಗಳಲ್ಲಿ ೪೦-೫೦ ಕಿಮೀ ದೂರ ಇರುವ ನಗರಗಳವರೆಗೂ ವಿಸ್ತರಿಸಿದೆ. ನಗರದ ತ್ಯಾಜ್ಯವನ್ನು ಹತ್ತಿರದ ಹಳ್ಳಿಯಲ್ಲಿ ಹಾಕಲು ಬಿಡುವುದಿಲ್ಲ.

ಇದು ಮಾನವೀಯ ಸಮಸ್ಯೆಯಾಗಿದ್ದು, ಅವರನ್ನು ದೂಷಿಸುವಂತಿಲ್ಲ. ವಿಪರ್ಯಾಸವೆಂದರೆ ಇದ್ದ ಮಕ್ಕಳಿಗೆ ಹೊಟ್ಟೆಗಿಲ್ಲ ಇನ್ನೊಂದು ಕೊಡು ಶಿವಾ ಎನ್ನುವಂತೆ ೨೦೦೮ರಲ್ಲಿ ಬೆಂಗಳೂರು ಸುತ್ತಮುತ್ತಲಿನ ೧೧೦ ಹಳ್ಳಿಗಳನ್ನು ಬಿಬಿಎಮ್‌ಪಿಗೆ
ಸೇರಿಸಲಾಗಿದ್ದು ಸಮಸ್ಯೆ ಇನ್ನೊಂದು ತಿರುವನ್ನು ಪಡೆದಿದೆ. ಎಲ್ಲವೂ ಬೆಂಗಳೂರಿನಲ್ಲಿಯೇ ಇರಬೇಕು, ಎಲ್ಲವೂ ಇಲ್ಲಿಯೇ ಆಗಬೇಕು ಎನ್ನುವ ಕೆಲವು ರಾಜಕಾರಣಿಗಳ ಮತ್ತು ಆಡಳಿತ ವರ್ಗದ ತಂತ್ರಗಾರಿಕೆಯಿಂದ ಇಂದು ಬೆಂಗಳೂರು ಬಳಲುತ್ತಿದೆ. ಹುಬ್ಬಳ್ಳಿ- ಧಾರವಾಡದಲ್ಲಿ ರುತ್ಯ ರೈಲು ವಲಯ, ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆದ ಹೋರಾಟ, ಸುದೀರ್ಘ ಸಂಘರ್ಷ ವನ್ನು ಉತ್ತರ ಕರ್ನಾಟಕದವರರ ನೆನಪಿನಿಂದ ಹೊರಹೋಗುವುದಿಲ್ಲ.

ಒಲ್ಲದ ಮದುವೆಗೆ ವಿಘ್ನಗಳು ಹಲವು ಎನ್ನುವಂತೆ, ಸಾವಿರಾರು ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಿಸಿದ, ಬೆಳಗಾವಿ ಸುವರ್ಣ ಸೌಧಕ್ಕೆ ಬೆಂಗಳೂರಿನ ವಿಧಾನ ಸೌಧದಿಂದ ಕಚೇರಿಗಳು ಸ್ಥಳಾಂತರವಾಗಲೇ ಇಲ್ಲ. ಆಡಳಿತಗಾರರು ಮತ್ತು ರಾಜಕಾರಣಿಗಳಲ್ಲಿ ದೂರದೃಷ್ಟಿಯ ಅಭಾವ ಬೆಂಗಳೂರಿನ ಬದುಕನ್ನು ಹೈರಾಣಾಗಿಸುತ್ತಿದೆ ಎನ್ನುವ ಹಳೆ ತಲೆಮಾರಿನವರ ತರಾಟೆಯಲ್ಲಿ ಅರ್ಥವಿದೆ.

Read E-Paper click here