Tuesday, 22nd October 2024

ಪ್ರವಾಸ ಮಾಡದವರು ಪ್ರವಾಸೋದ್ಯಮ ಮಂತ್ರಿಯಾದರೆ…

ವಿದೇಶವಾಸಿ

dhyapaa@gmail.com

ಪ್ರವಾಸದಲ್ಲಿರುವಾಗ ಪ್ರತಿಯೊಂದು ನಿಮಿಷವೂ ಮಹತ್ವದ್ದಾಗಿರುತ್ತದೆ. ಜತೆಗೆ ಪ್ರತಿಯೊಂದು ರುಪಾಯಿ ಕೂಡ. ಪ್ರವಾಸಿ ತಾಣದಲ್ಲಿ ನಾವು ಖರ್ಚು ಮಾಡುವ ಕಡೆಗಳಲ್ಲ ಖರ್ಚು ಮಾಡಲೇಬೇಕು. ಅದಕ್ಕೆ ಹಿಂದೆ-ಮುಂದೆ ನೋಡಬಾರದು, ಜಿವಡುತನ ತೋರಿಸಬಾರದು. ಅದರ ಅರ್ಥ ಚೌಕಾಸಿ ಮಾಡಬಾರದು ಎಂದಲ್ಲ. ಆದರೆ ದುಬಾರಿ ಎಂದು ನೋಡಬೇಕಾದ ಸ್ಥಳವನ್ನು ನೋಡದೆ ಹಿಂತಿರುಗಿದರೆ, ಪ್ರವಾಸಕ್ಕೆ ಅರ್ಥವೇನು?

ಕೆಲವು ವರ್ಷಗಳ ಹಿಂದಿನ ಮಾತು. ನಾನು ಕರ್ನಾಟಕದ ಪ್ರವಾಸೋದ್ಯಮ ಮಂತ್ರಿಯನ್ನು ಭೇಟಿಯಾಗಿದ್ದೆ ಕೆಲವು ಬಾರಿ ಶ್ರಮಪಟ್ಟ ನಂತರ ಅವರ ಭೇಟಿಯಾಗುವ ಅವಕಾಶ ನನಗೆ
ದೊರಕಿತ್ತು. ಆಗಷ್ಟೇ ನಾನು ವಿಯೆಟ್ನಾಮ್ ಪ್ರವಾಸ ಮುಗಿಸಿ ಹಿಂತಿರುಗಿದ್ದೆ. ಮಲೇಷ್ಯಾ, ಸಿಂಗಪುರ್, ವಿಯೆಟ್ನಾಮ್ ಇತ್ಯಾದಿ ಪೂರ್ವ ರಾಷ್ಟ್ರಗಳಾಗಲಿ, ಬಹುತೇಕ ಯುರೋಪ್ ರಾಷ್ಟ್ರ ಗಳಾಗಲಿ, ಅಮೆರಿಕ ಆಗಲಿ ಪ್ರವಾಸೋದ್ಯಮಕ್ಕೆ ಮಾಡಿಕೊಂಡ ತಯಾರಿ, ಪ್ರವಾಸೋದ್ಯಮಕ್ಕೆ ಅವರಲ್ಲಿರುವ ಪ್ರೀತಿ, ಆ ದೇಶಗಳು ಪ್ರವಾಸೋದ್ಯಮವನ್ನು ಮುನ್ನಡೆಸುತ್ತಿರುವ ರೀತಿ,
ಇದನ್ನೆಲ್ಲ ನಮ್ಮ ಮಂತ್ರಿಗಳಿಗೆ ಒಮ್ಮೆ ತಿಳಿಸಿಕೊಡಬೇಕು ಎಂಬ ಉದ್ದೇಶವಿತ್ತು.

ಮಂತ್ರಿಗಳು ಅವರ ಕಚೇರಿಯಲ್ಲಿ ಭೇಟಿಗೆ ಅವಕಾಶವನ್ನೂ ಮಾಡಿಕೊಟ್ಟಿದ್ದರು. ನಾನು ಒಳಗೆ ಹೋಗುತ್ತಿದ್ದಂತೆ ಅವರ ಕಾರ್ಯದರ್ಶಿ ಗೌರವದೊಂದಿಗೆ ನನ್ನನ್ನು ಸ್ವಾಗತಿಸಿ, ಅತಿಥಿ ಸತ್ಕಾರ
ಮಾಡಿ ಕೂರಿಸಿದರು. ಲಘು ಉಪಾಹಾರದೊಂದಿಗೆ ಬಿಸಿಬಿಸಿ ಕಾಫಿಯ ಉಪಚಾರವೂ ಆಯಿತು. ನಾನು ಕಾಫಿ ಮುಗಿಸುವಷ್ಟರಲ್ಲಿ ಮಂತ್ರಿಗಳೂ ಬಂದರು. ನಮ್ಮ ಮಾತುಕತೆ ಆರಂಭ ವಾಯಿತು. ಒಂದೆರಡು ನಿಮಿಷದ ಕುಶಲೋಪರಿಯ ನಂತರ, ನೇರವಾಗಿ ನಾನು ವಿಷಯವನ್ನು ಆರಂಭಿಸಿದೆ. ವಿದೇಶ ದಲ್ಲಿ ಇರುವಂತೆಯೇ ನಮ್ಮ ದೇಶದಲ್ಲಿ ಕೂಡ ಪ್ರವಾಸಿಗರಿಗಾಗಿ ಬಸ್ಸಿನ ವ್ಯವಸ್ಥೆಯನ್ನು ಒದಗಿಸಿಕೊಡಬೇಕು. ಅದರಲ್ಲೂ ‘ಹೊಹೊ’- Hop on Hop of- ಬಸ್‌ನ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ, ಬಹುತೇಕ ದೇಶಗಳಲ್ಲಿ ಈ ವ್ಯವಸ್ಥೆ ಇದೆ, ಅದರಿಂದ ಆ ದೇಶದ ಪ್ರವಾಸೋದ್ಯಮಕ್ಕೆ ಪುಷ್ಟಿ ಸಿಕ್ಕಿದೆ, ಆ ದೇಶಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹೇಗೆ ಸಫಲವಾಗಿವೆ ಎಂದು ನಾಲ್ಕರಿಂದ ಐದು ನಿಮಿಷದವರೆಗೆ ಮಾತನಾಡಿದ್ದೆ. ಇನ್ನೂ ಒಂದಿಷ್ಟು ವಿಷಯ ಹೇಳುವುದು ಬಾಕಿ ಇತ್ತು. ಅಷ್ಟರಲ್ಲಿ ಮಂತ್ರಿಗಳು, ‘ಇದು ನಮ್ಮಲ್ಲಿ ಹೊಸತೇನಲ್ಲ, ನಮ್ಮಲ್ಲಿಯೂ ಈ ಪ್ರಯೋಗ ಈಗಾಗಲೇ ಆಗಿಹೋಗಿದೆ,
ಅದರಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ, ಅದು ವಿದೇಶಗಳಲ್ಲಿ ಯಶಸ್ವಿಯಾಗಬಹುದು ಆದರೆ ನಮ್ಮಂಥ ದೇಶದಲ್ಲಿ ಕಷ್ಟ’ ಎಂದರು.

‘ಆದರೆ, ಮುಂಬೈ ಮತ್ತು ದಿಲ್ಲಿಯಂಥ ನಗರಗಳಲ್ಲಿ ಇಂದಿಗೂ ಆ ವ್ಯವಸ್ಥೆ ಇದೆಯಲ್ಲ, ಹಾಗೆಯೇ ಕರ್ನಾಟಕದ ಬೆಂಗಳೂರು ಅಥವಾ ಮೈಸೂರಿನಲ್ಲಿಯೂ ಮಾಡಬಹುದಲ್ಲ, ಭಾರತದಲ್ಲಿ ಅದು ಸಾಧ್ಯವೇ ಇಲ್ಲ ಎನ್ನುವುದು ಅಷ್ಟು ಸಮಂಜಸವಾದ ಉತ್ತರವಾಗಲಾರದೇನೋ’ ಎಂದೆ. ‘ಇಲ್ಲ, ನಾವು ಈಗಾಗಲೇ ಪ್ರಯತ್ನಿಸಿ ಅದು ವಿಫಲವಾಗಿ, ಆ ಸೌಕರ್ಯವನ್ನು ನಿಲ್ಲಿಸಿದ್ದೇವೆ’ ಎಂದರು.

ಅಲ್ಲಿಂದ ಚರ್ಚೆ ಬೇರೆ ಕಡೆ ತಿರುಗಿತು. ಮಂತ್ರಿಗಳಿಗೆ ಈ ವಿಷಯದಲ್ಲಿ ಉತ್ಸಾಹ ಇಲ್ಲ ಎಂದು ನನಗೂ  ಅರ್ಥವಾಗಿತ್ತು. ಮತ್ತೆ ಈ ವಿಷಯ ಮುಂದುವರಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ನನಗೂ ಮನವರಿಕೆಯಾದದ್ದರಿಂದ, ಮತ್ತೊಂದು ಐದು ನಿಮಿಷ ಬೇರೆ ವಿಷಯಗಳನ್ನು ಮಾತನಾಡಿ ಅಲ್ಲಿಂದ ಹೊರಬಂದಿದ್ದೆ. ಮೊನ್ನೆ ಮೊನ್ನೆಯಷ್ಟೇ ಗುಜರಾತ್ ಪ್ರವಾಸ ಮುಗಿಸಿ ಬಂದ ನಂತರ ಸರ್ದಾರ್ ಪಟೇಲ್ ಅವರ ಪ್ರತಿಮೆ ಮತ್ತು ಕೇವಡಿಯಾ ಎಂಬ ಗ್ರಾಮ ‘ಏಕತಾ ನಗರ’ ಆಗಿ ಹೇಗೆ ಪರಿವರ್ತನೆಗೊಂಡಿತು, ಪ್ರವಾಸೋದ್ಯಮ ಅಲ್ಲಿ ಹೇಗೆ ಬೆಳೆಯಿತು ಎನ್ನುವುದರ ಕುರಿತು ಅಂಕಣ ಬರೆದಿದ್ದೆ.

ಅದಕ್ಕೆ ಪ್ರತಿಕ್ರಿಯಿಸಿದ ಕೆಲವು ಓದುಗರು ತಮ್ಮ ಅಭಿಪ್ರಾಯ ತಿಳಿಸಿದ್ದರು. ಅದರಲ್ಲಿ ಕೆಲವರು ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರು- ಮೈಸೂರಿನಂಥ ನಗರಗಳಲ್ಲಿ ಪ್ರವಾಸೋದ್ಯಮವನ್ನು
ಹೇಗೆ ಬೆಳೆಸಬಹುದು ಎನ್ನುವ ಕುರಿತಾಗಿಯೂ ಕೇಳಿದ್ದರು. ಆಗ ಪ್ರವಾಸೋದ್ಯಮ ಮಂತ್ರಿಯೊಂದಿಗಿನ ನನ್ನ ಸಂಭಾಷಣೆ ಮತ್ತು ಚರ್ಚೆ ಪುನಃ ನೆನಪಾಯಿತು. ಇರಲಿ ಬಿಡಿ, ಪ್ರವಾಸೋದ್ಯಮ ಎಂದರೆ ಅದು ಒಬ್ಬರೋ-ಇಬ್ಬರೋ ಸೇರಿ ಮಾಡುವಂಥ ಕೆಲಸವಲ್ಲ. ಆ ರೀತಿಯ ಒಂದು ವ್ಯವಸ್ಥೆಯೇ ರೂಪುಗೊಳ್ಳಬೇಕು. ಅದಕ್ಕೆ ಪ್ರವಾಸೋದ್ಯಮ ಇಲಾಖೆ, ಸರಕಾರ, ಪ್ರವಾಸಿಗರು, ಎಲ್ಲರ ಸಹಕಾರವೂ ಬೇಕು. ಅಂದರೆ ಮಾತ್ರ ಅದು ಉದ್ಯಮವಾಗಿ ಬೆಳೆಯುತ್ತದೆ. ಇಲ್ಲವಾದರೆ ಅದೊಂದು ಪ್ರವಾಸಿ ತಾಣವಾಗಿಯೋ, ಪ್ರವಾಸಿ ಸ್ಥಳವಾಗಿಯೋ, ಪ್ರವಾಸಿ ಕ್ಷೇತ್ರವಾಗಿಯೋ
ಉಳಿಯುತ್ತದೆಯೇ ವಿನಾ ಉದ್ಯಮವಾಗಿ ಬೆಳೆಯುವುದಿಲ್ಲ.

‘ಹೊಹೊ’ (Hop on Hop off) ಬಸ್ ಕುರಿತು ಸಂಕ್ಷಿಪ್ತವಾಗಿ ಹೇಳುವುದಾದರೆ, ಇದೊಂದು ರೀತಿಯಲ್ಲಿ ಸಿಟಿಬಸ್ ಇದ್ದಹಾಗೆ. ಪ್ರತಿ ಹದಿನೈದು ನಿಮಿಷಕ್ಕೋ, ಮೂವತ್ತು ನಿಮಿಷಕ್ಕೋ ಅಥವಾ ಒಂದು ಗಂಟೆಗೋ ಒಂದರ ಹಿಂದೆ ಒಂದು ಬಸ್ ಬರುತ್ತಲೇ ಇರುತ್ತದೆ. ಬೆಳಗ್ಗಿನಿಂದ ರಾತ್ರಿವರೆಗೂ ಈ ಬಸ್ ಸೌಕರ್ಯ ನಿರಂತರವಾಗಿರುತ್ತದೆ. ಡಬಲ್ ಡೆಕ್ಕರ್ ಅಥವಾ ಎರಡು
ಅಂತಸ್ತಿನ ಈ ಬಸ್‌ನಲ್ಲಿ, ಎರಡನೆಯ ಅಂತಸ್ತಿನಲ್ಲಿ ಚಾವಣಿ ಇರುವುದಿಲ್ಲ. ಆದರೆ ಆಸನದ ವ್ಯವಸ್ಥೆ ಇರುತ್ತದೆ. ಆದಷ್ಟು ಊರು ನೋಡಲು ಅನುಕೂಲವಾಗಲಿ ಎಂದು ಮಾಡಿರುವಂಥ ವ್ಯವಸ್ಥೆ ಇದು. ಮಳೆಗೆ, ಬಿಸಿಲಿಗೆ ರಕ್ಷಣೆ ಹೇಗೆ ಎಂದರೆ ಏನೂ ಇಲ್ಲ. ಅದು ಆಗಸಕ್ಕೆ, ಗಾಳಿಗೆ, ಅಂದಿನ ವಾತಾವರಣಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿರುತ್ತದೆ.

ಹಾಗಂತ ಪ್ರವಾಸಿಗರು ಮಳೆ-ಬಿಸಿಲಿಗೆ ಟೊಪ್ಪಿ, ಕೊಡೆ ಬಳಸಬಹುದು. ಮಳೆಗಾಲದಲ್ಲಿ ರೈನ್ ಕೋಟ್ ತೊಟ್ಟು ಹೋಗಬಹುದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ದೇಶಗಳಲ್ಲಿ ಮಳೆಗಾಲ ದಲ್ಲಿ ಈ ‘ಹೊಹೊ’ ಬಸ್‌ನ ರೈನ್ ಕೋಟ್, ಟೊಪ್ಪಿ ಕೊಡುತ್ತಾರೆ. ಅಲ್ಲಿಗೆ, ಅದರ ಕುರಿತಾಗಿಯೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂದಿಲ್ಲ. ಈ ಬಸ್ ಮುಂಜಾನೆ ಒಂದು ತಾಣದಿಂದ ಹೊರಟರೆ, ಆ ನಗರದ ಎಲ್ಲ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಹತ್ತಿರ ಹೋಗಿ ಒಂದು ಕ್ಷಣ ನಿಂತು, ಪ್ರವಾಸಿಗರನ್ನು ಇಳಿಸಿ ಅಥವಾ ಹತ್ತಿಸಿಕೊಂಡು ಮುಂದುವರಿಯುತ್ತದೆ. ಟೂರ್ ಬಸ್‌ನಂತೆ ಒಂದು ತಾಣದಲ್ಲಿ ಅರ್ಧ- ಮುಕ್ಕಾಲು ಗಂಟೆಯೋ, ಒಂದು-ಎರಡು ಗಂಟೆಯೋ ನಿಂತು ಜನರೆಲ್ಲ ಹಿಂತಿರುಗಿ ಬರುವವರೆಗೆ ಕಾಯುವುದಿಲ್ಲ. ಪ್ರವಾಸಿಗರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು, ಇಷ್ಟೇ ಈ ಬಸ್‌ನ ಕೆಲಸ. ಬಸ್‌ನೊಂದಿಗೆ ಇರುವ ಗೈಡ್ ಕೂಡ ಎಲ್ಲಿಯೂ ಇಳಿಯುವುದಿಲ್ಲ, ಜನರೊಂದಿಗೆ ಹೋಗುವುದಿಲ್ಲ. ಒಂದು ಪ್ರವಾಸಿ ತಾಣದಲ್ಲಿ ಬಸ್ ನಿಂತಾಗ, ಒಂದೆರಡು ಸಾಲಿನಲ್ಲಿ ಆ ಪ್ರವಾಸಿ ತಾಣದ ವಿಶೇಷತೆ ಅಥವಾ ಆ ಕ್ಷೇತ್ರದ ಮಹತ್ವವನ್ನು ಒಂದೆರಡು ವಾಕ್ಯದಲ್ಲಿ ಹೇಳಿ ಮುಗಿಸುತ್ತಾನೆ. ಅದರಿಂದ ಪ್ರವಾಸಿಗರು ಆ ತಾಣವನ್ನು ನೋಡಬೇಕೋ ಬೇಡವೋ ಎಂದು ನಿರ್ಧರಿಸಲು ಅನುಕೂಲವಾಗುತ್ತದೆ.

‘ಹೊಹೊ’ ಬಸ್ ಹೊರಡುವ ಸ್ಥಳದಲ್ಲಿ ಪ್ರವಾಸಿಗರಿಗಾಗಿ ಮಾಹಿತಿ ಕೇಂದ್ರ ಇರುತ್ತದೆ. ಆ ಕೇಂದ್ರದಲ್ಲಿ ಬಸ್ ಹೊರಡುವ ಸಮಯ, ದರ, ಮಾರ್ಗಸೂಚಿ, ಭೇಟಿ ನೀಡುವ ತಾಣಗಳ ಪುಟ್ಟ ಮಾಹಿತಿ ಎಲ್ಲವೂ ಇರುತ್ತವೆ. ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ವಿವರಿಸಲು ಜನರೂ ಇರುತ್ತಾರೆ. ವಿಯೆಟ್ನಾಮ್‌ನ ಹನೋಯ್ ನಗರದಲ್ಲಂತೂ ಒಂದು ವರ್ತುಲದಲ್ಲಿ
ನಾಲ್ಕು ಮಾಹಿತಿ ಕೇಂದ್ರಗಳಿದ್ದುದನ್ನು ನಾನು ಕಂಡಿದ್ದೇನೆ. ನಾನು ಯಾವುದೇ ನಗರಕ್ಕೆ ಹೋದರೂ, ಮೊದಲು ಈ ‘ಹೊಹೊ’ ಬಸ್ ಏರಿ ಒಂದು ಸುತ್ತು ತಿರುಗುತ್ತೇನೆ. ಯಾವ ತಾಣ ದಲ್ಲಿಯೂ ಇಳಿಯುವುದಿಲ್ಲ. ಹಾಗೆ ತಿರುಗುವಾಗ ನನಗೆ ನೋಡಬೇಕಾದ ತಾಣ ಮತ್ತು ಅಲ್ಲಿ ನಾನು ಕಳೆಯಬಹುದಾದ ಸಮಯವನ್ನು ಗುರುತಿಸಿಕೊಳ್ಳುತ್ತೇನೆ. ಎರಡನೇ ಸುತ್ತಿನಲ್ಲಿ ಪುನಃ ಅದೇ ಬಸ್ಸಿನಲ್ಲಿ ಹೋಗಿ, ನಾನು ನೋಡಬೇಕಾದ ತಾಣದಲ್ಲಿ ಇಳಿದು, ಮನಸೋ ಇಚ್ಛೆ ಸಮಯವನ್ನು ಕಳೆದು, ಹಿಂದೆ ಬರುವ ‘ಹೊಹೊ’ ಬಸ್ ಏರಿ ಮುಂದಿನ ತಾಣಕ್ಕೆ ಹೋಗುತ್ತೇನೆ. ಮತ್ತೆ ಅಲ್ಲಿ ಇಳಿದು, ನೋಡಿ, ಇನ್ನೊಂದು ಬಸ್ ಏರುತ್ತೇನೆ.

ಹೀಗೆ ಒಂದು ಇಡೀ ದಿನದಲ್ಲಿ, ಎಷ್ಟು ತಾಣಗಳನ್ನು ನೋಡಲು ಸಾಧ್ಯವೋ ಅದನ್ನೆಲ್ಲ ‘ಹೊಹೊ’ ಬಸ್‌ನಲ್ಲಿಯೇ ಪ್ರಯಾಣಿಸಿ ನೋಡುತ್ತೇನೆ. ಬಹುತೇಕ ಪ್ರವಾಸಿಗರು ಮಾಡುವುದು
ಇದನ್ನೇ. ಇದರಿಂದ ಆಗುವ ಅತಿದೊಡ್ಡ ಪ್ರಯೋಜನವನ್ನು ಹೇಳಿಬಿಡುತ್ತೇನೆ. ನಾವು ಒಂದು ನಗರ ವೀಕ್ಷಣೆಗೆ ಅಥವಾ ಪ್ರವಾಸಿತಾಣಕ್ಕೆ ಹೋದಾಗ ಭೌಗೋಳಿಕವಾಗಿ ಅಲ್ಲಿಯ ನಕ್ಷೆ ನಮಗೆ ತಿಳಿದಿರುವುದಿಲ್ಲ. ಒಂದು ತಾಣವನ್ನು ನೋಡಿ ಅದರ ಪಕ್ಕದಲ್ಲಿದ್ದದ್ದನ್ನೇ ಬಿಟ್ಟು ನಾವು ಮತ್ತೆ ಹೋಗಿ, ಪುನಃ ಮೊದಲು ನೋಡಿದ ಜಾಗದ ಪಕ್ಕದ ತಾಣಕ್ಕೆ ಬರುವುದಿದೆ. ಇದರಿಂದ ಸಾಕಷ್ಟು ಸಮಯ ವ್ಯಯವಾಗುತ್ತದೆ. ವಾಸದಲ್ಲಿರುವಾಗ ಪ್ರತಿಯೊಂದು ನಿಮಿಷವೂ ಮಹತ್ವದ್ದಾಗಿರುತ್ತದೆ. ಜತೆಗೆ ಪ್ರತಿಯೊಂದು ರುಪಾಯಿ ಕೂಡ. ಪ್ರವಾಸಿ ತಾಣದಲ್ಲಿ ನಾವು ಖರ್ಚು ಮಾಡುವ
ಕಡೆಗಳಲ್ಲ ಖರ್ಚು ಮಾಡಲೇಬೇಕು. ಅದಕ್ಕೆ ಹಿಂದೆ-ಮುಂದೆ ನೋಡಬಾರದು, ಜಿವಡುತನ ತೋರಿಸಬಾರದು. ಅದರ ಅರ್ಥ ಚೌಕಾಸಿ ಮಾಡಬಾರದು ಎಂದಲ್ಲ. ಆದರೆ ದುಬಾರಿ ಎಂದು ನೋಡಬೇಕಾದ ಸ್ಥಳವನ್ನು ನೋಡದೆ ಹಿಂತಿರುಗಿ ಬಂದರೆ, ಪ್ರವಾಸಕ್ಕೆ ಯಾವ ಪುರುಷಾರ್ಥ ಲಭಿಸಿದಂತಾಯಿತು? ಮೊದಲು ಒಂದು ಸುತ್ತು ‘ಹೊಹೊ’ ಬಸ್‌ನಲ್ಲಿ ಪ್ರಯಾಣಿಸುವುದರಿಂದ, ಆ ನಗರದ ಒಂದು ನಕ್ಷೆ ನಮ್ಮ ಮನಃಪಟಲದಲ್ಲಿ ಮೂಡುತ್ತದೆ. ಆ ನಗರದ ಮೋಟಾ-ಮೋಟಿ ಚಿತ್ರಣ ನಮಗೆ ಸಿಗುತ್ತದೆ. ಅದು ಮುಂದಿನ ನಮ್ಮ ಪ್ರವಾಸಕ್ಕೆ ಅನುಕೂಲವಾಗುತ್ತದೆ.

ಇದೆಲ್ಲ ಪ್ರವಾಸಿಗರ ಲೆಕ್ಕವಾಯಿತು. ಆದರೆ ಮಂತ್ರಿಗಳು ಹೇಳಿದಂತೆಯೇ, ಇಂಥ ಬಸ್ ವ್ಯವಸ್ಥೆ ಯಿಂದ ಸರಕಾರಕ್ಕೆ ನಷ್ಟವಾಯಿತು ಎನ್ನುವ ಮಾತನ್ನು ನಂಬಲು ಸಾಧ್ಯವಿಲ್ಲ. ಇದರಲ್ಲಿ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಅಷ್ಟಕ್ಕೂ ಇದು ಪ್ರವಾಸಿಗರಿಗೆ ಪುಕ್ಕಟೆಯಾಗಿ ಒದಗಿಸಿಕೊಡುವ ವ್ಯವಸ್ಥೆಯೂ ಅಲ್ಲ. ಇದಕ್ಕಾಗಿ ಒಂದು ಮೊತ್ತವನ್ನು ನಿಗದಿಪಡಿಸಲಾಗಿರುತ್ತದೆ. ಆದ್ದರಿಂದ ವಾಹನಕ್ಕೆ ಬೇಕಾದ ಇಂಧನ, ವಾಹನ ಚಾಲಕರಿಗೆ ಹಾಗೂ ಮಾಹಿತಿ ನೀಡುವ ವ್ಯಕ್ತಿಗೆ ಸಂಬಳವನ್ನು ಹೇಗೋ ಹೊಂದಿಸಬಹುದು ಎಂದೆನಿಸುತ್ತದೆ. ಸರಿ, ಬಸ್‌ನಲ್ಲಿ ನಷ್ಟ ವಾಗುತ್ತದೆ ಎಂಬ ವಾದವನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳೋಣ. ಆದರೆ ಪ್ರವಾಸೋದ್ಯಮ ಎನ್ನುವುದು ಒಂದು ವಿಭಾಗಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.

ಬಸ್ ವ್ಯವಸ್ಥೆಯಲ್ಲಿ ನಷ್ಟವಾದರೂ ಬೇರೆ ಬೇರೆ ಪ್ರವಾಸಿ ತಾಣಗಳ ಪ್ರವೇಶ ದರ ಇರುತ್ತದೆ. ಅದು ಈ ನಷ್ಟವನ್ನು ಭರಿಸುತ್ತದೆ. ಮೂಲಭೂತ ಸೌಕರ್ಯವನ್ನು ಒದಗಿಸಿ ಕೊಟ್ಟಷ್ಟೂ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತದೆ. ಒಂದು ಪ್ರವಾಸಿ ತಾಣ ಅಭಿವೃದ್ಧಿ ಹೊಂದಿತು ಎಂದರೆ ಅದರ ಸುತ್ತ-ಮುತ್ತ ಅನೇಕ ಉದ್ಯಮಗಳು ತಲೆ ಎತ್ತುತ್ತವೆ. ಉದಾಹರಣೆಗೆ ಹೋಟೆಲ್ ಉದ್ಯಮವನ್ನೇ ತೆಗೆದುಕೊಳ್ಳಿ, ಒಂದು ಊರಿನಲ್ಲಿ ಒಂದು ಹೋಟೆಲ್ ತಲೆಯೆತ್ತಿ ನಿಂತರೆ, ಅದರೊಂದಿಗೆ ಟಿಶ್ಯೂ ಪೇಪರ್‌ನಿಂದ ಹಿಡಿದು ಟಾಯ್ಲೆಟ್ ಕ್ಲೀನರ್‌ವರೆಗೆ, ಲಾಂಡ್ರಿಯಿಂದ ಹಿಡಿದು
ಟ್ಯಾಕ್ಸಿಯವರೆಗೆ, ಕಿರಾಣಿಯಿಂದ ಹಿಡಿದು ಗಿರಣಿಯವರೆಗೆ, ಹಾಲಿನಿಂದ ಹಿಡಿದು ಹೂವಿನವರೆಗಿನ ವ್ಯಾಪಾರ ಅಭಿವೃದ್ಧಿಯಾಗುತ್ತದೆ. ಅಲ್ಲಿಗೆ ಕೇವಲ ಒಂದು ಪ್ರವಾಸಿ ತಾಣವಷ್ಟೇ ಅಲ್ಲ, ಆ ಊರು ಅಥವಾ ಪಟ್ಟಣ ಅಥವಾ ನಗರ ಅಭಿವೃದ್ಧಿಯಾಗುತ್ತದೆ. ದುಬೈ ಇದಕ್ಕೆ ಉತ್ತಮವಾದ ಉದಾಹರಣೆ.

ದುಬೈನಲ್ಲಿ ಏನಿದೆ, ಏನಿಲ್ಲ ಎಂದು ಕೇಳಿದರೆ, ಮರಳುಗಾಡು ಮತ್ತು ತೈಲ ಬಿಟ್ಟು ಏನೂ ಇಲ್ಲ, ಆದರೆ ಎಲ್ಲವೂ ಇದೆ ಎನ್ನಬಹುದು. ತನ್ನಲ್ಲಿರುವ ಮರುಭೂಮಿಯ ಮರಳಿನ ರಾಶಿಯನ್ನೇ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದ ಕೀರ್ತಿ ಏನಾದರೂ ಇದ್ದರೆ ಅದು ದುಬೈಗೆ ಸೇರಬೇಕು. ದುಬೈನಲ್ಲಿ ತೈಲ ದೊರೆತರೂ ದುಬೈ ಹೆಸರಾದದ್ದು ಮಾತ್ರ ಪ್ರವಾಸೋದ್ಯಮಕ್ಕೆ. ಅದಕ್ಕೆ
ಕಾರಣ ಅಲ್ಲಿಯ ರಾಜನ ಅಥವಾ ಸರಕಾರದ ದೂರದರ್ಶಿತ್ವ. ದುಬೈಗೆ ಹೋದ ಪ್ರವಾಸಿಗನಿಗೆ ಏನನ್ನೂ ಹುಡುಕುವ ಕೆಲಸ ಇಲ್ಲ. ಎಲ್ಲ ಪ್ರವಾಸಿ ತಾಣದ ಮಾಹಿತಿಗಳು ಸುಲಭವಾಗಿ ದೊರೆಯುತ್ತವೆ. ಅಷ್ಟಕ್ಕೂ ದುಬೈನಲ್ಲಿರುವ ಬಹುತೇಕ ಪ್ರವಾಸಿ ತಾಣಗಳು ಕೃತಕವಾದದ್ದು.

ಭಾರತದಂತೆ ನೈಸರ್ಗಿಕವಾದದ್ದಲ್ಲ. ಭಾರತ ದಲ್ಲಿ ಬೆಟ್ಟಗುಡ್ಡಗಳಿವೆ, ಸಮುದ್ರ ತಟಗಳಿವೆ, ಮರುಭೂಮಿ ಇದೆ, ಹಸಿರು, ನದಿ, ಪ್ರಪಂಚದಲ್ಲಿ ಇರಬೇಕಾದ ಬಹುತೇಕ ಎಲ್ಲವೂ ಇವೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯನ್ನೇ ತೆಗೆದುಕೊಳ್ಳಿ, ಮಲೆನಾಡು, ಕರಾವಳಿ, ಬಯಲುಸೀಮೆ ಈ ಮೂರನ್ನೂ ಹೊಂದಿದ ಉತ್ತರ ಕನ್ನಡದಲ್ಲಿ ಬೆಟ್ಟ-ಗುಡ್ಡಗಳು, ನದಿ-ಜಲಪಾತ-
ಹಿನ್ನೀರು, ಕಾಡು-ವನ್ಯಜೀವಿಗಳು, ಇತಿಹಾಸ-ದೇವಸ್ಥಾನ, ಕೃಷಿ ಎಲ್ಲವೂ ಇವೆ. ಭಾರತದಲ್ಲಿ ಇರುವಂಥದ್ದು, ಉತ್ತರ ಕನ್ನಡದಲ್ಲಿ ಇಲ್ಲವಾದದ್ದು ಎಂದರೆ ಮರಳುಗಾಡು ಮಾತ್ರ. ಆದರೂ ಪ್ರವಾಸೋದ್ಯಮದಲ್ಲಿ ಉತ್ತರ ಕನ್ನಡದ ಹೆಸರನ್ನು ಹೇಳುವವರು ಬಹಳ ಕಡಿಮೆ.

ಅದಕ್ಕೆ ಪ್ರಮುಖವಾದ ಎರಡು ಕಾರಣಗಳು, ಪ್ರಚಾರ ಮತ್ತು ಮೂಲಭೂತ ಸೌಕರ್ಯದ ಕೊರತೆ. ಉತ್ತರ ಕನ್ನಡ ಅಥವಾ ಕರ್ನಾಟಕದಲ್ಲಿ ಇರುವಂಥ ಪ್ರೇಕ್ಷಣೀಯ ಸ್ಥಳಗಳು ಅಮೆರಿಕದ ಅಥವಾ ಇನ್ಯಾವುದೇ ದೇಶದ ಇದ್ದಿದ್ದರೆ, ಅಲ್ಲಿಯ ಸರಕಾರಗಳು ಕೋಟಿ ಕೋಟಿ ದೋಚಿಬಿಡುತ್ತಿದ್ದವು. ನಾವು ವಿದೇಶದಲ್ಲಿ ಎಷ್ಟೋ ಪ್ರವಾಸಿ ತಾಣಗಳಿಗೆ ಹೋದಾಗ, ‘ಇದೇ ಜಲಪಾತ, ಇದೇ ಬೆಟ್ಟಗುಡ್ಡ, ಇದೇ ನದಿ ನಮ್ಮೂರಿನಲ್ಲಿ ಇನ್ನೂ ಚೆನ್ನಾಗಿದೆ’ ಎಂದು ಎಷ್ಟೋ ಬಾರಿ ಅಂದುಕೊಂಡಿರುತ್ತೇವೆ. ಆದರೆ ಅದರ ಹಿಂದಿನ ಕಾರಣ ನಮಗೆ ತಿಳಿದಿರುವುದಿಲ್ಲ.

ನಿಮಗೆ ತಿಳಿದಿರಲಿ, ದುಬೈನಲ್ಲಿ ಪ್ರವಾಸೋದ್ಯಮ ಆರಂಭವಾಗಿ ನಾಲ್ಕು ದಶಕ ಆಗಿದ್ದಷ್ಟೇ. ಅದಕ್ಕೂ ಮೊದಲು ದುಬೈಗೆ ಪ್ರವಾಸಕ್ಕೆಂದು ಹೋಗುತ್ತಿದ್ದವರು ತೀರಾ ಕಡಿಮೆ. ಕಳೆದ ವರ್ಷವನ್ನೇ ನೋಡಿ, ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರ ಸಂಖ್ಯೆ ಸುಮಾರು ಒಂದು ಕೋಟಿ. ಅದೇ ದುಬೈನಂಥ ಸಣ್ಣ ನಗರಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಒಂದು ಕೋಟಿ ಎಪ್ಪತೈದು ಲಕ್ಷ. ಅದರಲ್ಲಿ ಭಾರತೀಯರ ಸಂಖ್ಯೆಯೇ ಸುಮಾರು ಇಪ್ಪತ್ತು ಲಕ್ಷ! ನಾಲ್ಕು ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣವುಳ್ಳ ದುಬೈ ಪ್ರವಾಸೋದ್ಯಮದಿಂದ ತನ್ನ ದೇಶದ ಆರ್ಥಿಕತೆಗೆ ಶೇ. ೯ರಷ್ಟನ್ನು ಕೊಡುಗೆಯಾಗಿ ನೀಡುತ್ತಿದೆ. ಅದೇ ೩೩ ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, ನೈಸರ್ಗಿಕವಾಗಿ ಎಲ್ಲವನ್ನೂ ಪಡೆದ ಭಾರತದಲ್ಲಿ ಪ್ರವಾಸೋ ದ್ಯಮದಿಂದ ದೇಶದ ಆರ್ಥಿಕತೆಗೆ ಬರುವ ಕೊಡುಗೆ ಐದು ಪ್ರತಿಶತ ಮಾತ್ರ.

ಅದೂ ವೈದ್ಯಕೀಯ, ಧಾರ್ಮಿಕ, ಶೈಕ್ಷಣಿಕ ಪ್ರವಾಸೋದ್ಯಮಗಳೂ ಸೇರಿ. ಒಂದಂತೂ ಸತ್ಯ, ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಹೆಚ್ಚು ಲಾಭ ತಂದುಕೊಡುವ, ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ಕ್ಷೇತ್ರ. ಆದರೆ ಅದು ರಾತ್ರೋ-ರಾತ್ರಿ ಬೆಳೆಯುವ ಉದ್ಯಮವಲ್ಲ. ಅದಕ್ಕೆ ಪರಿಪಕ್ವವಾದ ಯೋಚನೆ, ಯೋಜನೆ, ನಿಷ್ಠೆ, ಬದ್ಧತೆ ಬೇಕು. ಪ್ರವಾಸೋದ್ಯಮದ ಮಂತ್ರಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ ಆಸಕ್ತಿ ಇರಬೇಕು. ಪ್ರವಾಸೋದ್ಯಮದ ಮಂತ್ರಿಯಾದವರು ರಾಜ್ಯದಲ್ಲಿ, ಅಥವಾ ರಾಜಕೀಯ ಕಾರಣಗಳಿಗೆ ದೆಹಲಿಗೆ ಪ್ರವಾಸ ಮಾಡಿದರೆ ಸಾಕಾಗುವುದಿಲ್ಲ. ವಿದೇಶಗಳಿಗೂ ಪ್ರವಾಸ ಮಾಡಬೇಕು. ಕಳೆದ ೪-೫ದಶಕಗಳ ಕರ್ನಾಟಕದ ಇತಿಹಾಸದಲ್ಲಿ ಪ್ರವಾಸೋದ್ಯಮದ ಮಂತ್ರಿಗಳಾದವರು ಎಷ್ಟು ಪ್ರವಾಸ ಮಾಡಿದ್ದಾರೆ, ಎಷ್ಟು ದೇಶ ಸುತ್ತಿzರೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಎಷ್ಟು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ನೋಡಿದರೆ ಅರ್ಥವಾಗುತ್ತದೆ. ಅಷ್ಟಕ್ಕೂ ಬಯಲುಸೀಮೆಯವರು ಅರಣ್ಯ, ಮಲೆನಾಡಿನವರು
ಮೀನುಗಾರಿಕೆ, ಶಾಲೆಗೇ ಹೋಗದವರು ಶಿಕ್ಷಣ, ಪ್ರವಾಸವನ್ನೇ ಮಾಡದವರು ಪ್ರವಾಸೋದ್ಯಮ ಮಂತ್ರಿಯಾದರೆ, ದೇವರೇ ಕಾಪಾಡಬೇಕು.