Wednesday, 27th November 2024

Dr Ravindra Nidoni column: ರೈಲು ಸಂಪರ್ಕದ ವಿಷಯದಲ್ಲಿ ಕ್ರಾಂತಿಯಾಗಬೇಕಿದೆ

deepavali special trains

ಪ್ರಗತಿಪಥ

ಡಾ.ರವೀಂದ್ರ ನಿಡೋಣಿ

ಯಾವುದೇ ಒಂದು ನಗರ, ಜಿಲ್ಲೆ ಅಥವಾ ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ, ಕೈಗಾರಿಕೆಗಳು ಬರಬೇಕಾದರೆ
ಆ ಜಿಲ್ಲೆಗಳಲ್ಲಿ ಮೊದಲು ಸಂಪರ್ಕ ಕ್ರಾಂತಿಗಳಾಗಬೇಕು. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಕರ್ನಾಟಕ ವೆಂದರೆ ‘ಬೆಂಗಳೂರು’ ಎನ್ನುವಂಥ ಭಾವನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಲು ರಾಜಧಾನಿ ಬೆಂಗಳೂರಿಗೆ ಇರುವ ‘ಸಂಪರ್ಕ’ವೂ ಒಂದು ಕಾರಣ. ಇಂಥ ಸಂಪರ್ಕ ರಾಜ್ಯದ ಇತರೆ ಭಾಗಗಳಿಗೂ ವಿಸ್ತರಣೆಯಾದರೆ, ಸಾವಿರಾರು ಮಂದಿ ಯುವಕರು ತಮ್ಮೂರಲ್ಲಿಯೇ ಬದುಕು ಕಟ್ಟಿಕೊಳ್ಳಬಹುದು.

ರಾಜ್ಯದ ಮಟ್ಟಿಗೆ ನೋಡಿದರೆ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳು ಐತಿಹಾಸಿಕ, ಸಾಂಸ್ಕೃತಿಕ ಹಾಗೂ
ಆರ್ಥಿಕವಾಗಿ ಸಮೃದ್ಧವಾಗಿದ್ದರೂ ಎಲ್ಲೋ ಒಂದು ಕಡೆ ಅಭಿವೃದ್ಧಿಯಲ್ಲಿ, ಕೈಗಾರಿಕೆಗಳನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿವೆ ಎಂದರೆ ತಪ್ಪಾಗುವುದಿಲ್ಲ. ಹಾಗೆ ನೋಡಿದರೆ, ವಿಜಯಪುರದ ಗೋಲಗುಮ್ಮಟ ವಿಶ್ವ ಪ್ರಸಿದ್ಧಿ ಹೊಂದಿದೆ. ಗೋಲಗುಮ್ಮಟ ಮಾತ್ರವಲ್ಲದೇ ಹತ್ತು ಹಲವು ಆಕರ್ಷಕ ಸ್ಮಾರಕಗಳಿಂದ ಅದು ಪ್ರಸಿದ್ಧಿ ಪಡೆದಿದೆ. ಇನ್ನು ಬಾಗಲ ಕೋಟೆ, ಬಾದಾಮಿ ಗುಹೆ ಮತ್ತು ಯುನೆಸ್ಕೊ ಪಾರಂಪರಿಕ ತಾಣದ ಪಟ್ಟಿಯಲ್ಲಿರುವ ಪಟ್ಟದಕಲ್ಲು ಸೇರಿದಂತೆ ಹಲವು ಸ್ಥಳಗಳಿಂದ ಪ್ರಸಿದ್ಧಿಯಾಗಿರುವುದರಿಂದ, ಪ್ರವಾಸಿಗರನ್ನು ಸೆಳೆಯುತ್ತಿದೆ.

ಇದರೊಂದಿಗೆ ಎರಡೂ ಜಿಲ್ಲೆಗಳು ಸಿಮೆಂಟ್ ಉದ್ಯಮಗಳು, ಸಕ್ಕರೆ ಬೆಳೆ, ಆಹಾರ ಸಂಸ್ಕರಣೆ ಮತ್ತು ಬೆಳೆಯುತ್ತಿರುವ ವೈನ್ ಉದ್ಯಮಗಳಿಗೆ ಕೇಂದ್ರವಾಗಿದ್ದು, ಆರ್ಥಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಎಲ್ಲದರ ಹೊರತಾಗಿಯೂ ಈ ಎರಡು ಜಿಲ್ಲೆಗಳಿಗೆ ರೈಲುಗಳ ಬರ ಈಗಲೂ ಮುಂದುವರಿದಿರುವುದು ಶ್ರೀಮಂತ ಜಿಲ್ಲೆಗಳ ಅಭಿವೃದ್ಧಿಗೆ ತೊಡಕಾಗಿದೆ ಎಂದರೆ ತಪ್ಪಾಗುವುದಿಲ್ಲ.

ವಿಜಯಪುರ ಹಾಗೂ ಬಾಗಲಕೋಟೆಗೆ ರೈಲು ಸಂಪರ್ಕವನ್ನು ನೀಡಲಾಗಿದೆ. ಆದರೆ ನೀಡಿರುವ ಪ್ರಮಾಣವನ್ನು ಸೂಕ್ಷ್ಮ ವಾಗಿ ಗಮನಿಸಬೇಕಿದೆ. ಈ ಎರಡು ಜಿಲ್ಲೆಗಳಿಂದ ಪ್ರತಿವರ್ಷ ಸಾವಿರಾರು ಯುವಕರು ಕೆಲಸಗಳನ್ನು ಅರಸಿ, ಬೆಂಗಳೂರಿನತ್ತ ಬರುತ್ತಾರೆ. ಆದರೆ ಈ ರೀತಿ ಬಂದು ಹೋಗುವ ಜನರಿಗೆ ರೈಲಿನ ಸಂಪರ್ಕದಲ್ಲಿ ಮಾತ್ರ ಹೇಳಿ ಕೊಳ್ಳುವಷ್ಟು ಸೌಲಭ್ಯಗಳಿಲ್ಲ, ಅಂದರೆ ಸಾಕಷ್ಟು ಸಂಖ್ಯೆಯ ರೈಲುಗಳಿಲ್ಲ. ಅದರಲ್ಲಿಯೂ ‘ವೇಗ’ದ ರೈಲಿನ ಬರ ಈ ಜಿಲ್ಲೆಗೆ ಬಹುದೊಡ್ಡ ಸಮಸ್ಯೆಯಾಗಿದೆ.

ಉದಾಹರಣೆಗೆ ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆಗಿರುವ ರೈಲು ಸಂಪರ್ಕ ಹಾಗೂ ನೆರೆ ಜಿಲ್ಲೆಗಳಿಗಿರುವ
ರೈಲುಗಳ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಬೆಂಗಳೂರು-ವಿಜಯಪುರದ ನಡುವೆ ನಿತ್ಯ ಮೂರು ರೈಲು
ಗಳು ಸಂಚರಿಸಿದರೆ, ವಿಜಯಪುರದಿಂದ ಬೆಂಗಳೂರಿಗೂ ಮೂರು ರೈಲುಗಳಿವೆ. ಈ ರೈಲುಗಳ ಸರಾಸರಿ ವೇಗ ಗಂಟೆಗೆ 44 ಕಿ.ಮೀ. ಇನ್ನು ಬೆಂಗಳೂರಿನಿಂದ ಬಾಗಲಕೋಟೆಗೆ ಮೂರು ರೈಲುಗಳು ನಿತ್ಯ ಸರಾಸರಿ 42 ಕಿ.ಮೀ ವೇಗದಲ್ಲಿ ಸಂಚರಿಸಿದರೆ, ಬಾಗಲಕೋಟೆಯಿಂದ ಬೆಂಗಳೂರಿಗೆ ಸಾಗುವ ಮೂರು ರೈಲುಗಳು ೪೯ ಕಿ.ಮೀ. ವೇಗದಲ್ಲಿ ಸಂಚರಿಸು ತ್ತವೆ.

ಈ ಎಲ್ಲ ರೈಲುಗಳು ತಮ್ಮ ಗಮ್ಯಸ್ಥಾನವನ್ನು ತಲುಪಲು ಕನಿಷ್ಠ ೧೩ರಿಂದ ೧೪ ತಾಸು ಪಡೆಯಲಿವೆ (ಮಾರ್ಗ ಮಧ್ಯೆ ಯಾವುದೇ ಸಮಸ್ಯೆಯಾಗದಿದ್ದರೆ). ಆದರೆ ಬೆಂಗಳೂರಿನಿಂದ ಕಲಬುರ್ಗಿಗೆ ೯, ರಾಯಚೂರಿಗೆ ೧೪, ಹುಬ್ಬಳ್ಳಿಗೆ ೧೪ ರೈಲುಗಳಿವೆ. ಈ ಎಲ್ಲ ರೈಲುಗಳ ಸರಾಸರಿ ವೇಗ ೬೮ರಿಂದ ೭೮ ಕಿ.ಮೀ. ಆಗಿದೆ. ಜತೆ ಗಮ್ಯಸ್ಥಾನ ತಲುಪುವ ಸಮಯವೂ ಐದರಿಂದ ಆರು ಗಂಟೆಗೆ ಸೀಮಿತವಾಗಿದೆ. ವಿಜಯಪುರ, ಬಾಗಲಕೋಟೆ ದಾಟಿ ಹೋಗಬೇಕಿರುವ ಕಲಬುರ್ಗಿಗೂ ಏಳೂವರೆ ತಾಸಿನಲ್ಲಿ ರೈಲು ತಲುಪು ತ್ತದೆ. ಆದರೆ ವಿಜಯಪುರ, ಬಾಗಲಕೋಟೆಗೆ ಮಾತ್ರ ೧೨ ತಾಸು!

ಅವಳಿ ಜಿಲ್ಲೆಗಳು ಈ ರೀತಿ ರೈಲಿನ ಕೊರತೆ ಅನುಭವಿಸುತ್ತಿರುವುದು ಇತ್ತೀಚಿನ ಸಮಸ್ಯೆ ಏನಲ್ಲ. ದಶಕಗಳಿಂದ ಸೂಕ್ತ ರೈಲು ಸಂಪರ್ಕದ ಕೊರತೆಯಿಂದಾಗಿ ಅವು ತೊಂದರೆ ಅನುಭವಿಸುತ್ತಿವೆ. ಕಚೇರಿ ನಿಮಿತ್ತ ಅಥವಾ ವೈಯಕ್ತಿಕ ಕೆಲಸಕ್ಕೆ ರಾಜಧಾನಿಗೆ ಆಗಮಿಸುವ ಅನೇಕರಿಗೆ, ಇದರಿಂದಾಗಿ ತೀವ್ರ ತೊಂದರೆಯಾಗುತ್ತಿದೆ; ಜಿಲ್ಲೆಯ ಜನರು ಹೆಚ್ಚಿನ ಅನಾನುಕೂಲ ಹಾಗೂ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತೇನಿಲ್ಲ. ಈ ಜಿಲ್ಲೆಗಳ ಪ್ರಯಾಣದ ಅವಧಿ ಹಾಗೂ ರೈಲುಗಳ ಕೊರತೆ ಯನ್ನು ನೀಗಿಸಲು ಸಾಧ್ಯವಿದೆ. ಇದಕ್ಕಾಗಿ ರೈಲ್ವೇ ಇಲಾಖೆ ಅಥವಾ ಸರಕಾರಗಳು ಹೆಚ್ಚುವರಿ ಅನುದಾನ, ಮೂಲ ಸೌಕರ್ಯ ಅಥವಾ ಕೋಟ್ಯಂತರ ರುಪಾಯಿ ಹೂಡಿಕೆ ಮಾಡಬೇಕೆಂದಿಲ್ಲ. ಬದಲಿಗೆ ಇಲ್ಲಿ ಬೇಕಿರುವುದು ನೈಋತ್ಯ ರೈಲ್ವೆ ಅಧಿಕಾರಿಗಳ ಆಸಕ್ತಿ ಮತ್ತು ರಾಜಕೀಯ ಇಚ್ಛಾಶಕ್ತಿ ಮಾತ್ರ! ಹೌದು, ಅನೇಕರಿಗೆ ಇದು ಅಚ್ಚರಿಯಾಗ ಬಹುದು.

ವಿಜಯಪುರದಿಂದ ಬಾಗಲಕೋಟೆ ಮೂಲಕ ಬೆಂಗಳೂರಿಗೆ ವಿಶೇಷ ವೇಗದ ರೈಲು ಸೇವೆಯನ್ನು ಪ್ರಾರಂಭಿಸುವ ಮೂಲಕ, ಗದಗ ಮತ್ತು ಹುಬ್ಬಳಿಯ ‘ಬಾಟಲ್‌ನೆಕ್’ಗಳನ್ನು ತಪ್ಪಿಸುವ ಮೂಲಕ, ಪ್ರಯಾಣದ ಸಮಯವನ್ನು ೧೦ ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಇಳಿಸಬಹುದು. ಈ ರೈಲುಗಳನ್ನು ಎಲ್ಲ ನಗರಗಳ ಒಳಗೆ ಪ್ರವೇಶಿಸಲು ಬಿಡದೇ, ಬೈಪಾಸ್‌ಗಳ ಮೂಲಕ ಓಡಿಸಿದರೆ, ಪ್ರಯಾಣವನ್ನು ಅತಿ ಕಡಿಮೆ ಸಮಯದಲ್ಲಿ ಮತ್ತು ವೇಗವಾಗಿ ಮಾಡಬಹುದು. ಇದನ್ನು ಮಾಡುವುದರಿಂದ, ಗದಗಕ್ಕೆ ಒಂದು ಸೂಪರ್ – ರೈಲು ಹೆಚ್ಚುವರಿಯಾಗಿ ಸಿಕ್ಕಂತಾಗು ತ್ತದೆ. ವಿಜಯಪುರ, ಬಾಗಲಕೋಟೆ, ಬಾದಾಮಿ, ಕೂಡಲಸಂಗಮ ಮತ್ತು ರಾಜ್ಯದ ರಾಜಧಾನಿಯ ನಡುವಿನ ನೇರ ಮತ್ತು ವೇಗವಾದ ಸಂಪರ್ಕವನ್ನು ಇದರಿಂದ ಒದಗಿಸಬಹುದು.

ಈ ರೀತಿಯ ಹೆಚ್ಚುವರಿ ಸೇವೆ ಆರಂಭಿಸುವುದರಿಂದ ವಿಜಯಪುರ ಮತ್ತು ಬಾಗಲಕೋಟೆಯಂಥ ಹಿಂದುಳಿದಿರುವ
ಜಿಲ್ಲೆಗಳ ಸಂಕಷ್ಟವನ್ನು ನಿವಾರಿಸಿದಂತಾಗುತ್ತದೆ. ಮಾತ್ರವಲ್ಲದೆ, ಆ ಭಾಗಗಳ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೂ ಅದು ಸಹಾಯಕವಾಗುತ್ತದೆ. ಸರಕಾರವು ಈ ನ್ಯಾಯಯುತ ಬೇಡಿಕೆ ಯನ್ನು ಗಮನಿಸಿ, ವಿಜಯಪುರ ಮತ್ತು ಬಾಗಲಕೋಟೆಯ ಜನತೆ ಹಿಂದುಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳ ಬೇಕಾಗಿದೆ.

ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ರೈಲು ನಿಲ್ದಾಣಗಳು ಕೋಟಿ ಕೋಟಿ ರು. ಹಣದ ವೆಚ್ಚದೊಂದಿಗೆ ನಿರ್ಮಾಣ ಗೊಂಡರೂ, ನೈಋತ್ಯ ರೈಲು ಮಾರ್ಗವು ಈ ಸೌಲಭ್ಯವನ್ನು ವಿಜಯಪುರ ಮತ್ತು ಬಾಗಲಕೋಟೆ ಎರಡೂ ನಗರಗಳ ವೇಗದ ರೈಲು ಸೇವೆಗಾಗಿ ಬಳಸುತ್ತಿಲ್ಲ. ಎಲ್ಲಾ ರೈಲು ವಲಯಗಳಲ್ಲಿ ಬೈಪಾಸ್ ಗಳನ್ನು ಬಳಸುವ ಮೂಲಕ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಾಗುತ್ತದೆ.

ಉದಾಹರಣೆಗೆ, ನೈಋತ್ಯ ರೈಲು ಮಾರ್ಗವು ಯಶವಂತಪುರ ಮತ್ತು ಬೆಂಗಳೂರು ಸಿಟಿ ಜಂಕ್ಷನ್‌ನಂಥ ಮುಖ್ಯ
ನಿಲ್ದಾಣಗಳನ್ನು ತಪ್ಪಿಸಿ, ತಮಿಳುನಾಡು ಕಡೆಗೆ ಹೋಗುವ ರೈಲುಗಳಿಗೆ ಬೈಪಾಸ್‌ಗಳನ್ನು ಬಳಸುತ್ತಿದೆ. ಈ ರೀತಿಯ
ಲಾಭಗಳಿದ್ದರೂ ವಿಜಯಪುರ ಮತ್ತು ಬಾಗಲಕೋಟೆ ರೈಲುಗಳಿಗಾಗಿ ಇಂಥ ಬೈಪಾಸ್ ಮಾರ್ಗಗಳನ್ನು ಅಳವಡಿ ಸಿಲ್ಲ, ಇದರಿಂದ ಈ ಪ್ರದೇಶ ವೇಗವಾದ ಮತ್ತು ಪರಿಣಾಮಕಾರಿಯಾದ ರೈಲು ಸಂಪರ್ಕವನ್ನು ಕಳೆದುಕೊಂಡಿದೆ. ಇದರಿಂದಾಗಿ ಪ್ರಾದೇಶಿಕ ಪ್ರಯಾಣದ ದಕ್ಷತೆ ಮತ್ತು ಆರ್ಥಿಕ ಅಭಿವೃದ್ಧಿ ನಿರ್ಲಕ್ಷಿಸಲ್ಪಡುತ್ತಿದೆ. ಇಂಥ ಸರಳ ಕ್ರಮಗಳೊಂದಿಗೆ ಸುಲಭವಾಗಿ ಮತ್ತು ವೇಗವಾಗಿ ರೈಲು ಸೇವೆಗಳನ್ನು ಬಿಜಾಪುರ ಮತ್ತು ಬಾಗಲಕೋಟೆ ಎರಡೂ ನಗರಗಳಿಗೆ ಒದಗಿಸಬಹುದು. ಆದರೆ ನೈಋತ್ಯ ರೈಲ್ವೇ ಹಿಂದೇಟು ಹಾಕುತ್ತಿರುವುದೇಕೆ ಎನ್ನುವ ಪ್ರಶ್ನೆಗಳು ಉದ್ಭವಿ ಸುತ್ತದೆ. ಅದರಲ್ಲಿಯೂ ಖಾಸಗಿ ಬಸ್‌ಗಳ ಲಾಬಿಗೆ ಮಣಿದು ಈ ಮಾರ್ಗ ಬಳಸುತ್ತಿಲ್ಲವೇ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆ. ಈ ಪ್ರದೇಶದ ಅಭಿವೃದ್ಧಿ ಮತ್ತು ಸಂಪರ್ಕಶೀಲತೆ ಇದರಿಂದಾಗಿ ತೀವ್ರವಾಗಿ ಹಾನಿಗೊಂಡಿದೆ.

ಮಾಫಿಯಾದ ಒತ್ತಡಕ್ಕೆ ಮಣಿಯದೇ, ಸಾರ್ವಜನಿಕ ಹಿತಾಸಕ್ತಿ ಮತ್ತು ನ್ಯಾಯವನ್ನು ಕಾಪಾಡಬೇಕು. ಎರಡೂ ನಗರಗಳಿಗೆ ನ್ಯಾಯ ಒದಗಿಸಲು ಹಾಗೂ ಅವುಗಳಿಗೆ ವೇಗವಾದ, ಪರಿಣಾಮಕಾರಿ ರೈಲು ಸಂಪರ್ಕ ಕಲ್ಪಿಸುವ ಮೂಲಕ ಜನರ ಸುಖಸಮೃದ್ಧಿಯ ಕಡೆಗೆ ಗಮನವಿಡಬೇಕಾಗಿದೆ. ಇನ್ನು ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲಿನ ವೇಗದ ಬಗ್ಗೆ ಒಮ್ಮೆ ಗಮನಿಸಲೇಬೇಕಾಗಿದೆ. ಬೆಂಗಳೂರು-ವಿಜಯಪುರ ನಡುವೆ ಸಂಚರಿಸುವ ಈ ರೈಲು ಗಮ್ಯ ಸ್ಥಾನವನ್ನು ತಲುಪಲು ೧೩ ಗಂಟೆ ೧೦ ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಅದೇ ರೈಲಿನ ವೇಗವನ್ನು ಸೆಕ್ಷನ್ ಸ್ಟೀಡ್ ಪ್ರಕಾರ ತಾಳೆ ಹಾಕಿದರೆ ಭಾರಿ ವ್ಯತ್ಯಾಸ ಬರಲಿದೆ.

ವಿಜಯಪುರ ಹಾಗೂ ಬಾಗಲಕೋಟೆಯಿಂದ ಸಂಚರಿಸುವ ಎರಡೂ ಎಕ್ಸ್‌ಪ್ರೆಸ್ ರೈಲುಗಳ ವೇಗದ ಮಿತಿ ೪೪ರಿಂದ ೪೮ ಕಿ.ಮೀ. ಅಂತರದಲ್ಲಿದೆ. ಇದರೊಂದಿಗೆ ಹುಬ್ಬಳ್ಳಿ ಹಾಗೂ ಗದಗದಲ್ಲಾಗುವ ಎಂಜಿನ್ ರಿವರ್ಸಲ್ ಬಗ್ಗೆ ಉಲ್ಲೇಖಿ ಸಬೇಕು. ಯಾವುದೇ ಒಂದು ರಿವರ್ಸಲ್ ಆದರೆ ಕನಿಷ್ಠ ೪೫ ನಿಮಿಷ ಅಗತ್ಯವಿದೆ. ಇದರಿಂದ ಇತರೆ ರೈಲುಗಳ ಸಮಯದ ಮೇಲೆ ಪರಿಣಾಮವಾಗುತ್ತದೆ. ಜತೆಗೆ ಗೂಡ್ಸ್ ರೈಲುಗಳನ್ನು ಸಹ ಬೇರೆ ಬೇರೆ ಸ್ಟೇಷನ್‌ಗಳಲ್ಲಿ ನಿಲ್ಲಿಸ ಬೇಕಾಗುತ್ತದೆ. ಇದರಿಂದ ರೈಲ್ವೆಯ ಗೂಡ್ಸ್ ಗಾಡಿಗಳ ಸದ್ಬಳಕೆ ಮತ್ತು‌ ಮಾನವ ಸಂಪನ್ಮೂಲಗಳು ವ್ಯರ್ಥ ವಾಗುತ್ತವೆ. ಈಗಾಗಲೇ ಚಾಲ್ತಿಯಲ್ಲಿರುವ ಬೈಪಾಸ್‌ಗಳ ಪರಿಣಾಮಕಾರಿ ಉಪಯೋಗವಾಗದಿದ್ದರೆ ಅವುಗಳ ನಿರ್ಮಾಣದಿಂದ ಯಾರಿಗೇನು ಉಪಯೋಗ?

ಆದ್ದರಿಂದ ಇಷ್ಟ ದಿನ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಆಗಿರುವ ಅನ್ಯಾಯವನ್ನು ಈಗಾಲಾದರೂ ಸರಿಪಡಿ
ಸಬೇಕಿದೆ. ವಿಜಯಪುರದ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟ ಸಂಸದ ಪಿ.ಸಿ ಗದ್ದಿಗೌಡರ್, ವಿಜಯಪುರ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಾಗಲಕೋಟ ಶಾಸಕ ವೀರಣ್ಣ ಚರಂತಿಮಠ, ವಿಜಯಪುರ ಉಸ್ತುವಾರಿ
ಎಂ.ಬಿ ಪಾಟೀಲ್ ಅವರು ವೈಯಕ್ತಿಕ ಆಸಕ್ತಿ ವಹಿಸಿ ಈ ಸಮಸ್ಯೆ ಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ.

(ಲೇಖಕರು ಯಕೃತ್ ತಜ್ಞ ವೈದ್ಯರು
ಹಾಗೂ ಸಾಮಾಜಿಕ ಚಿಂತಕರು)