ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

H Anandam Shastri Column: ಅನುವಾದದ ಅಪಸವ್ಯ

ಇಂಗ್ಲಿಷಿನಿಂದ ಕನ್ನಡಕ್ಕೆ ಸಾಫ್ಟ್‌ ವೇರ್ ಅನುವಾದಿಸಿ ನೀಡುವ ಅನರ್ಥದಾಯಕ ಪದಗಳನ್ನು ಬಳಸುವ, ಸರಕಾರಿ ವಲಯದ ಹಲವು ಸಂಸ್ಥೆಗಳ ಚೋದ್ಯದ ಕುರಿತು ಈಚೆಗೆ ಪತ್ರಿಕೆಗಳಲ್ಲಿ ಪತ್ರ ಗಳು ಮತ್ತು ಲೇಖನಗಳು ಪ್ರಕಟವಾ ಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಸಾಫ್ಟ್‌ ವೇರ್ ಅನು ವಾದದ ಹೊರತಾಗಿಯೂ, ಬೇರೆ ರೀತಿಯ ಹಲವು ತಪ್ಪು ಗಳೂ ವಿವಿಧ ಸಂಸ್ಥೆಗಳಲ್ಲಿ ಲಾಗಾಯ್ತಿ ನಿಂದಲೂ ಆಗುತ್ತಿವೆ. ‘ಸರಕಾರಿ ಹೆಣ್ಣುಮಕ್ಕಳ ಹಿರಿಯ/ಕಿರಿಯ ಪ್ರಾಥಮಿಕ ಪಾಠಶಾಲೆ’ ಎಂಬ ಫಲಕಗಳನ್ನು ಈ ಹಿಂದೆ ನಾವು ನೋಡುತ್ತಿದ್ದೆವು!

ಅನುವಾದದ ಅಪಸವ್ಯ

Profile Ashok Nayak May 21, 2025 10:49 AM

ಅಭಿಮತ

ಎಚ್.ಆನಂದರಾಮ ಶಾಸ್ತ್ರೀ

ಇಂಗ್ಲಿಷಿನಿಂದ ಕನ್ನಡಕ್ಕೆ ಸಾಫ್ಟ್‌ ವೇರ್ ಅನುವಾದಿಸಿ ನೀಡುವ ಅನರ್ಥದಾಯಕ ಪದಗಳನ್ನು ಬಳಸುವ, ಸರಕಾರಿ ವಲಯದ ಹಲವು ಸಂಸ್ಥೆಗಳ ಚೋದ್ಯದ ಕುರಿತು ಈಚೆಗೆ ಪತ್ರಿಕೆಗಳಲ್ಲಿ ಪತ್ರ ಗಳು ಮತ್ತು ಲೇಖನಗಳು ಪ್ರಕಟವಾ ಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಸಾಫ್ಟ್‌ ವೇರ್ ಅನು ವಾದದ ಹೊರತಾಗಿಯೂ, ಬೇರೆ ರೀತಿಯ ಹಲವು ತಪ್ಪು ಗಳೂ ವಿವಿಧ ಸಂಸ್ಥೆಗಳಲ್ಲಿ ಲಾಗಾಯ್ತಿ ನಿಂದಲೂ ಆಗುತ್ತಿವೆ. ‘ಸರಕಾರಿ ಹೆಣ್ಣುಮಕ್ಕಳ ಹಿರಿಯ/ಕಿರಿಯ ಪ್ರಾಥಮಿಕ ಪಾಠಶಾಲೆ’ ಎಂಬ ಫಲಕಗಳನ್ನು ಈ ಹಿಂದೆ ನಾವು ನೋಡುತ್ತಿದ್ದೆವು! ಸಾಕಷ್ಟು ಜನಾಗ್ರಹದ ನಂತರ ಅವು ‘ಹೆಣ್ಣು ಮಕ್ಕಳ ಸರಕಾರಿ...ಶಾಲೆ’ ಆದವು. ಅನುವಾದದ ತಂತ್ರಾಂಶ ಹುಟ್ಟುವ ಮೊದಲೇ ಬೆಂಗಳೂರಿನ ಹೈಕೋರ್ಟ್ ಕಟ್ಟಡದ ಹಣೆಯಮೇಲೆ ‘...ಉಚ್ಛ ನ್ಯಾಯಾಲಯ’ ಎಂಬ ತಪ್ಪು ಪದ ಬಹುಕಾಲ ರಾರಾಜಿಸುತ್ತಿತ್ತು!

ಈ ಪದದೋಷ ಉಲ್ಲೇಖಿಸಿ ನಾನು ಬರೆದ ಪತ್ರವು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಕೆಲ ಸಮಯದ ನಂತರವಷ್ಟೇ ಅದು ‘..ಉಚ್ಚ ನ್ಯಾಯಾಲಯ’ ಎಂದು ಸೂಕ್ತವಾಗಿ ತಿದ್ದಲ್ಪಟ್ಟಿತು (ಆ ಸಂದರ್ಭದಲ್ಲಿ ನನ್ನ ಕಿರಿಯ ಸೋದರ ಅಲ್ಲಿ ನ್ಯಾಯಾಧೀಶನಾಗಿ ಇದ್ದುದು ಕಾಕತಾಳೀಯ!). ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿ ನಾನು ಕೆಲಸ ಮಾಡುತ್ತಿದ್ದಾಗ, ಇಂಗ್ಲಿಷ್ ಪದಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದ ಅಧಿಕಾರಿಯೋರ್ವರು ಸೂಕ್ತ ಅನುವಾದಕ್ಕಾಗಿ ಹಲವು ಸಲ ನನ್ನನ್ನು ಸಂಪರ್ಕಿಸಿದ್ದುಂಟು. ಈ 3 ಪ್ರಸಂಗಗಳನ್ನು ಏಕೆ ಹೇಳುತ್ತಿದ್ದೇನೆಂದರೆ, ಅನುವಾದದ ವಿಷಯದಲ್ಲಿ, ಸಂಬಂಧಿಸಿದ ಅಧಿಕಾರಿಗಳಿಗೆ ಜವಾಬ್ದಾರಿ, ಇಚ್ಛಾಶಕ್ತಿ ಮತ್ತು ಭಾಷಾಪ್ರೇಮ ಇವು ಮೂರೂ ಇರಬೇಕಾಗುತ್ತದೆ.

ಇದನ್ನೂ ಓದಿ: Vishweshwar Bhat Column: ಟೈಮ್ ಮ್ಯಾಗಜಿನ್‌ ಮುಖಪುಟ

ಇಲ್ಲದಿದ್ದರೆ, ಅನುವಾದಿತ ಪದವು ಅನೇಕ ಸಂದರ್ಭಗಳಲ್ಲಿ, ಸಾಫ್ಟ್‌ ವೇರ್ ಕಕ್ಕಿದ ಅಸಹ್ಯ ಆಗುತ್ತದೆ! ಮೇಲೆ ಹೇಳಿರುವ ಮೂರೂ ಗುಣಗಳನ್ನೂ ನಮ್ಮ ಸರಕಾರಿ ವಲಯದ ಅಧಿಕಾರಿಗಳು ಮೊದಲು ಬೆಳೆಸಿಕೊಳ್ಳಲಿ. ಸಾಫ್ಟ್‌ ವೇರ್ ಎಂಬುದು ಭಾಷಾಜ್ಞಾನಿ ಅಲ್ಲ ಎಂಬ ಎಚ್ಚರ ಅವರಲ್ಲಿ ಸದಾ ಜಾಗೃತವಾಗಿರಲಿ. ಇದೇ ಸಂದರ್ಭದಲ್ಲಿ ಇನ್ನೊಂದು ಮಾತು. ಬಹುತೇಕರಿಗೆ ಅರ್ಥವಾಗದ, ‘ಅಭಿಯಂತ, ಅಧೀಕ್ಷಕ, ನಿರೀಕ್ಷಕ...’ ಇಂಥ ಪದಗಳು ಸರಕಾರಿ ಫಲಕ-ಜಾಹೀರಾತು-ಪ್ರಕಟಣೆಗಳಲ್ಲಿ ಪುಖಾನುಪುಂಖವಾಗಿ ಬಳಕೆಯಾಗುತ್ತಿವೆಯಷ್ಟೆ.

ಇವುಗಳ ಬದಲು, ಕನ್ನಡವಾಗಿಯೇ ಜನಬಳಕೆಯಲ್ಲಿರುವ ಇಂಗ್ಲಿಷ್ ಮೂಲಪದಗಳನ್ನೇ ಬಳಸಿದರೆ ತಪ್ಪೇನು? ಕನ್ನಡ ಶಬ್ದಕೋಶಕ್ಕೆ ಒಂದಷ್ಟು ಪದಗಳು ಸೇರಿದಂತಾಗುತ್ತದಲ್ಲವೇ? ಅಪ್ಪಟ ಕನ್ನಡದ ಪದಗಳೇ ಬೇಕಿದ್ದರೆ, ಸಂಸ್ಕೃತ ಭಾಷೆಯನ್ನು ಅತಿಯಾಗಿ ಆಶ್ರಯಿಸದೆ, ಆಡುನುಡಿಯ ಸರಳ ಕನ್ನಡ ಪದಗಳನ್ನು ರಚಿಸಬಹುದಲ್ಲ? ಅಂಥ ಹಲವು ಪದಗಳನ್ನು ನಾನು ರಚಿಸಿ ಪ್ರಕಟಿಸಿದ್ದೇನೆ. ಕನ್ನಡ ‘ಅಭಿವೃದ್ಧಿ’ ಪ್ರಾಧಿಕಾರ, ‘ಕನ್ನಡ ಮತ್ತು ಸಂಸ್ಕೃತಿ’ ಇಲಾಖೆ, ಹಂಪಿಯ ಕನ್ನಡ ವಿಶ್ವ ‘ವಿದ್ಯಾ’ಲಯ, ಅನ್ಯಾನ್ಯ ಕಾರಣಗಳಿಗಾಗಿ ಇತ್ತೀಚೆಗೆ ಹೆಚ್ಚು ಸುದ್ದಿಮಾಡುತ್ತಿರುವ ಕನ್ನಡ ‘ಸಾಹಿತ್ಯ’ ಪರಿಷತ್ತು ಮುಂತಾದವು ಈ ಕೆಲಸ ಮಾಡಬಹುದಲ್ಲ?

(ಲೇಖಕರು ಹಿರಿಯ ಸಾಹಿತಿ)