SBI Manager: ಕನ್ನಡ ಮಾತಾಡಲ್ಲ ಎಂದಿದ್ದ ಎಸ್‌ಬಿಐ ಮ್ಯಾನೇಜರ್ ಕನ್ನಡದಲ್ಲೇ ಕ್ಷಮೆಯಾಚನೆ; ವರ್ಗಾವಣೆ ಕ್ರಮಕ್ಕೆ ಸಿಎಂ ಶ್ಲಾಘನೆ
SBI Manager: ಕರ್ನಾಟಕದಲ್ಲಿ ಎಂದಿಗೂ ನಾನು ಕನ್ನಡ ಮಾತನಾಡುವುದೇ ಇಲ್ಲ ಎಂದು ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್ ಲೇಡಿ ಮ್ಯಾನೇಜರ್ ದರ್ಪ ತೋರಿದ್ದರು. ಇದೀಗ ಅಧಿಕಾರಿ ಕ್ಷಮೆ ಕೇಳಿರುವ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ. ಮತ್ತೊಂದೆಡೆ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಬೆಂಗಳೂರು: ಕನ್ನಡ ಮಾತನಾಡಲ್ಲ, ಇದು ಇಂಡಿಯಾ. ನಾನು ಹಿಂದಿಯನ್ನೇ ಮಾತನಾಡುವುದು ಎಂದು ಉಡಾಫೆಯಾಗಿ ಮಾತನಾಡಿದ್ದ ಚಂದಾಪುರದ ಸೂರ್ಯಸಿಟಿಯ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ (SBI Manager) ಇದೀಗ, ಕನ್ನಡದಲ್ಲೇ ಕ್ಷಮೆಯಾಚಿಸಿದ್ದಾರೆ. ನಾನೆಂದಿಗೂ ಕನ್ನಡ ಮಾತನಾಡಲ್ಲ ಎಂದು ಬ್ಯಾಂಕ್ ಅಧಿಕಾರಿ ಮಾತನಾಡಿದ್ದ ವಿಡಿಯೋಗೆ ಕನ್ನಡ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅಧಿಕಾರಿ ಕ್ಷಮೆ ಕೋರಿದ್ದಾರೆ. ಮತ್ತೊಂದೆಡೆ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಬ್ಯಾಂಕ್ ಮ್ಯಾನೇಜರ್ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಎಸ್‌ಬಿಐ ಕ್ರಮ ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.
ʼಕರ್ನಾಟಕದಲ್ಲಿ ಎಂದಿಗೂ ನಾನು ಕನ್ನಡ ಮಾತನಾಡುವುದೇ ಇಲ್ಲʼ ಎಂದು ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್ ಲೇಡಿ ಮ್ಯಾನೇಜರ್ ದರ್ಪ ತೋರಿದ್ದರು. ಇದೀಗ ಅಧಿಕಾರಿ ಕ್ಷಮೆ ಕೇಳಿರುವ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ. ಆದರೆ ಲೇಡಿ ಮ್ಯಾನೇಜರ್ ಕಾಟಾಚಾರಕ್ಕೆ ಕ್ಷಮೆ ಕೇಳಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಮಹಿಳೆ ಯಾವುದೇ ಪಶ್ಚಾತಾಪವಿಲ್ಲದೆ ನಗುತ್ತಾ ಕ್ಷಮೆ ಕೇಳಿರುವುದು ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ಮೂಲಕ ಕ್ಷಮೆ ಕೇಳಿರುವ ಬ್ಯಾಂಕ್ ಮ್ಯಾನೇಜರ್, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ, ನಾನು ಕನ್ನಡದಲ್ಲೇ ವ್ಯವಹರಿಸಲು ಅನುಕೂಲ ಮಾಡಿಕೊಡುತ್ತೇನೆ, ಪ್ರಯತ್ನಿಸುತ್ತೇನೆ ಎಂದು ನಗುತ್ತಾ ಕ್ಷಮೆ ಕೇಳಿದ್ದಾರೆ. ಆದರೆ, ಅವರ ಮುಖದಲ್ಲಿ ತಾನು ಮಾಡಿರುವ ತಪ್ಪಿನ ಬಗ್ಗೆ ಪಶ್ಚಾತಾಪವೇ ಇಲ್ಲ. ನಗುತ್ತಾ ಕೇಳಿರುವುದು ಅದೆಂತಹ ಕ್ಷಮೆ? ಮೇಲಿನವರ ಒತ್ತಾಯಕ್ಕಷ್ಟೇ ಆ ಮಹಿಳೆ ಕ್ಷಮೆ ಕೇಳಿದ್ದಾರೆ. ಈ ರೀತಿಯ ಕ್ಷಮೆ ನಮಗೆ ಬೇಕಾಗಿಲ್ಲ. ಎಸ್‌ಬಿಐ ಖುದ್ದಾಗಿ ಈ ಬಗ್ಗೆ ಪತ್ರದ ಮೂಲಕ ಕ್ಷಮೆ ಕೇಳಬೇಕು. ಈ ಮಹಿಳೆಯನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
These Hindians have not learnt anything from Pahalgam.
— 👑Che_Krishna🇮🇳💛❤️ (@CheKrishnaCk_) May 21, 2025
Terrorists were asking for religion and These Hindians are asking to Speak Hindi in Karnataka.
Respect State Languages. Don't act like Te®®orists trying to impose Hindi/urdu.#stopHindiImposition #Kannada https://t.co/uLks2Nzi3Z
ಬ್ಯಾಂಕ್ ಮ್ಯಾನೇಜರ್ ನಡತೆ ಸ್ವೀಕಾರಾರ್ಹವಲ್ಲ: ಸಿಎಂ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಅವರ ನಡತೆ ಸ್ವೀಕಾರಾರ್ಹವಲ್ಲ, ಇಂತಹ ವರ್ತನೆ ಖಂಡನೀಯ. ಅವರನ್ನು ತಕ್ಷಣವೇ ವರ್ಗಾಯಿಸಿ ಕ್ರಮ ತೆಗೆದುಕೊಂಡ ಎಸ್‌ಬಿಐ ಕ್ರಮ ಶ್ಲಾಘನೀಯವಾಗಿದೆ. ಇಂತಹ ಘಟನೆ ಮರುಕಳಿಸಬಾರದು. ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಗೌರವದಿಂದ ನಡೆಸಿಕೊಳ್ಳಬೇಕು, ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಹಣಕಾಸು ಸಚಿವರು ಮತ್ತು ಹಣಕಾಸು ಸೇವೆಗಳ ಇಲಾಖೆ ಕ್ರಮ ಕೈಗೊಂಡು ಭಾಷೆ ಮತ್ತು ಸಂಸ್ಕೃತಿಯ ಸೂಕ್ಷ್ಮತೆಯನ್ನು ಬ್ಯಾಂಕ್ ಸಿಬ್ಬಂದಿ ಅರ್ಥಮಾಡಿಕೊಳ್ಳಲು ಎಲ್ಲಾ ಸಿಬ್ಬಂದಿಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆ ಬಗ್ಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
The behaviour of the SBI Branch Manager in Surya Nagara, Anekal Taluk refusing to speak in Kannada & English and showing disregard to citizens, is strongly condemnable.
— Siddaramaiah (@siddaramaiah) May 21, 2025
We appreciate SBI’s swift action in transferring the official. The matter may now be treated as closed.…
ಏನಿದು ಘಟನೆ?
ಕರ್ನಾಟಕದ ಜನತೆಯ ಆತ್ಮಗೌರವಕ್ಕೆ ಧಕ್ಕೆ ತರುವಂತೆ ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಮ್ಯಾನೇಜರ್, ಕನ್ನಡದಲ್ಲಿ ವ್ಯವಹರಿಸಲು ಸ್ಪಷ್ಟವಾಗಿ ನಿರಾಕರಿಸಿ, "ನಾನು ಕನ್ನಡ ಮಾತನಾಡುವುದಿಲ್ಲ ಹಿಂದಿಯಲ್ಲೇ ಮಾತನಾಡುತ್ತೇನೆ" ಎಂದು ಉದ್ದಟತನದಿಂದ ವರ್ತಿಸಿರುವ ಘಟನೆ ನಡೆದಿತ್ತು. ಇಂತಹ ಘಟನೆಗಳು ಕೇವಲ ಚಂದಾಪುರಕ್ಕೆ ಸೀಮಿತವಾಗಿಲ್ಲ, ರಾಜ್ಯದಾದ್ಯಂತ ಎಸ್ಬಿಐ ಶಾಖೆಗಳಲ್ಲಿ ಕನ್ನಡ ಬಾರದ ಕನ್ನಡಿಗರ ಭಾಷೆಯನ್ನು ಅಗೌರವಿಸುವ ಸಿಬ್ಬಂದಿಯಿಂದ ಗ್ರಾಹಕರು ತೀವ್ರ ತೊಂದರೆಗೊಳಗಾಗುತ್ತಿದ್ದಾರೆ. ಈ ಘಟನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಕರೆ ನೀಡಿತ್ತು.
ಈ ಸುದ್ದಿಯನ್ನೂ ಓದಿ | Kannada news: ʼಕನ್ನಡ ಮಾತಾಡೋದೇ ಇಲ್ಲʼ ಎಂದ ಎಸ್‌ಬಿಐ ಅಧಿಕಾರಿ, ಕನ್ನಡಿಗರ ಆಕ್ರೋಶ
ಚಂದಾಪುರದ ಸೂರ್ಯಸಿಟಿಯ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತಾಡಲ್ಲ ಎಂದು ಉಡಾಫೆ ವರ್ತನೆ ತೋರಿದ್ದರು. ಕನ್ನಡಿಗರನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದರು. ಕನ್ನಡ ಮಾತಾಡು ಎಂದ ಗ್ರಾಹಕನಿಗೆ ಹಿಂದಿ ಮಾತಾಡ್ತೇನೆ, ನಾನು ಕನ್ನಡ ಮಾತನಾಡಲ್ಲ ಎಂದು ಉಡಾಫೆ ಉತ್ತರ ನೀಡಿದ್ದರು. ಕನ್ನಡ ಮಾತನಾಡಿ ಎಂದಿದ್ದಕ್ಕೆ ಇದು ಇಂಡಿಯಾ ನಾನು ಹಿಂದಿಯನ್ನೇ ಮಾತನಾಡುತ್ತೇನೆ ಎಂದು ಬ್ಯಾಂಕ್ ಮ್ಯಾನೇಜರ್ ಉಡಾಫೆಯಾಗಿ ಮಾತನಾಡಿರುವ ವಿಡಿಯೋವನ್ನು ಗ್ರಾಹಕರು ಚಿತ್ರೀಕರಿಸಿ ಅದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.