ಸಂಗತ
ವಿಜಯ್ ದರಡಾ
ಅಮೆರಿಕಕ್ಕೆ ಡೊನಾಲ್ಡ್ ಟ್ರಂಪ್ ಆದರೂ ಅಧ್ಯಕ್ಷರಾಗಲಿ ಅಥವಾ ಕಮಲಾ ಹ್ಯಾರಿಸ್ ಆದರೂ ಅಧ್ಯಕ್ಷರಾಗಲಿ, ಅವರ ಆದ್ಯತೆ ಅಮೆರಿಕ ವಾಗಿರುತ್ತದೆಯೇ ಹೊರತು ಬೇರಾವುದೇ ದೇಶವಲ್ಲ. ಆದರೂ ಇಡೀ ಜಗತ್ತು ಏಕೆ ಅಮೆರಿಕದ ಚುನಾವಣೆಯನ್ನು ಇಷ್ಟೊಂದು ಕುತೂಹಲ ದಿಂದ ನೋಡುತ್ತದೆ? ಅದರಿಂದ ನಮ್ಮ ದೇಶಕ್ಕೆ ಏನಾಗಬೇಕಿದೆ?
‘ಬೇ ಗಾನಿ ಶಾದಿ ಮೇ ಅಬ್ದುಲ್ಲಾ ದೀವಾನಾ!’ ಎಂಬ ಸಿನಿಮಾ ಹಾಡು ಕೇಳಿದ್ದೀರಲ್ಲವೇ? ‘ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ’ ಹಿಂದಿ ಚಿತ್ರದ ಹಾಡಿದು. ‘ಯಾರದ್ದೋ ಮದುವೆಯಲ್ಲಿ ಅಬ್ದುಲ್ಲಾ ಹುಚ್ಚೆದ್ದು ಕುಣಿದ’ ಎಂಬರ್ಥದ ಈ ಹಾಡು ತುಂಬಾ ಜನಪ್ರಿಯವಾಗಿದೆ. ನಾನೇಕೆ ಇದನ್ನು ಈಗ ನೆನಪಿಸಿ ಕೊಳ್ಳುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು.
ಅದಕ್ಕೆ ಕಾರಣ ಅಮೆರಿಕದ ಅಧ್ಯಕ್ಷೀಯ ಚುನಾವಣೆ. ಈ ಸಲ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರಲು ಆರಂಭವಾದ ದಿನದಿಂದಲೂ ನನ್ನ ತಲೆಗೆ ಈ ಹಾಡು ಪದೇಪದೇ ಬಂದು ಅಟಕಾಯಿಸಿಕೊಳ್ಳುತ್ತಿದೆ. ‘ಯಾರದ್ದೋ ವ್ಯವಹಾರದ ಬಗ್ಗೆ ಜಗತ್ತೇಕೆ ಈ ಪರಿ ತಲೆಕೆಡಿಸಿಕೊಳ್ಳುತ್ತಿದೆ? ಅಮೆರಿಕದ ಚುನಾವಣೆಯನ್ನು ಕಟ್ಟಿಕೊಂಡು ನಮಗೇನಾಗಬೇಕು?’ ಸಾಮಾನ್ಯವಾಗಿ ಯಾವುದೇ ದೇಶದಲ್ಲಿ ಚುನಾವಣೆ
ನಡೆದರೂ ಅದನ್ನು ಅಕ್ಕಪಕ್ಕದ ದೇಶಗಳು ಬಹಳ ಹತ್ತಿರದಿಂದ ಗಮನಿಸುತ್ತವೆ. ಹಾಗೆಯೇ, ಆ ದೇಶದ ಜತೆಗೆ ಹೆಚ್ಚು ವ್ಯಾವಹಾರಿಕ ಸಂಬಂಧ ಹೊಂದಿ ರುವ ದೇಶಗಳು ಅಥವಾ ಸಂಕೀರ್ಣ ಸಂಬಂಧ ಹೊಂದಿರುವ ದೇಶಗಳು ಕೂಡ ಅಲ್ಲಿನ ಚುನಾವಣೆಯಲ್ಲಿ ಏನಾಗುತ್ತಿದೆ ಎಂಬುದನ್ನು ಕುತೂಹಲದಿಂದ ನೋಡುತ್ತಿರುತ್ತವೆ.
ಅಲ್ಲಿ ಯಾರು ಗೆದ್ದರೆ ನಮ್ಮ ದೇಶಕ್ಕೆ ಹೆಚ್ಚು ಅನುಕೂಲ ಎಂಬ ಬಗ್ಗೆ ತಮ್ಮದೇ ಆದ ಲೆಕ್ಕಾಚಾರ ಹಾಕುತ್ತವೆ. ಅದರಲ್ಲೇನೂ ವಿಶೇಷವಿಲ್ಲ. ಆದರೆ, ಅಮೆರಿಕದಲ್ಲಿ ಚುನಾವಣೆ ಬಂತು ಅಂದರೆ ಇಡೀ ಜಗತ್ತು ಆ ಕಡೆ ತಿರುಗಿ ಕುಳಿತುಕೊಳ್ಳುತ್ತದೆ. ಆ ದೇಶ ಈ ದೇಶ ಅಂತಲ್ಲ, ಜಗತ್ತಿನ ಪ್ರತಿಯೊಂದು ದೇಶವೂ ಅಮೆರಿಕದ ಚುನಾವಣೆಯನ್ನು ಕುತೂಹಲದಿಂದ ಗಮನಿಸುತ್ತದೆ. ಏಕೆಂದರೆ ಜಗತ್ತಿನಲ್ಲಿರುವ ಪ್ರತಿಯೊಂದು ದೇಶದ ಮೇಲೂ ಪ್ರಭಾವ
ಬೀರುವ ಏಕೈಕ ದೇಶ ಅಮೆರಿಕ. ಅಮೆರಿಕದ ಜತೆಗೆ ಒಂದಲ್ಲ ಒಂದು ರೀತಿಯಲ್ಲಿ ವ್ಯವಹಾರ ಮಾಡದ ದೇಶವೇ ಭೂಮಿಯ ಮೇಲೆ ಇಲ್ಲ. ಅಮೆರಿಕವು ಪೂರ್ವದ ತುತ್ತತುದಿಯಿಂದ ಪಶ್ಚಿಮದ ತುದಿಯವರೆಗೆ, ಉತ್ತರ ಧ್ರುವದಿಂದ ಹಿಡಿದು ದಕ್ಷಿಣ ಧ್ರುವದವರೆಗೆ, ಈ ಭೂಮಂಡಲದ ಪ್ರತಿ ಮೂಲೆಯ ಮೇಲೂ ತನ್ನದೇ ಆದ ಪ್ರಭಾವ ಹೊಂದಿದೆ.
ಹೀಗಾಗಿ ಅಮೆರಿಕದಲ್ಲಿ ರಾಜಕೀಯ ಆಡಳಿತ ಬದಲಾಗುತ್ತದೆ ಅಥವಾ ಅಧ್ಯಕ್ಷರು ಬದಲಾಗುತ್ತಾರೆ ಎಂದಾದಾಗ ಎಲ್ಲ ದೇಶಗಳೂ ಅದನ್ನು ಗಮನಿಸು ವುದು ಸಹಜವೇ. ಹಾಗಿದ್ದರೆ, ಏಕೆ ಅಮೆರಿಕದ ನಿರ್ಧಾರಗಳು ಜಗತ್ತಿನ ಮೇಲೆ ಅಷ್ಟೊಂದು ಪ್ರಭಾವ ಬೀರುತ್ತವೆ? ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಅಫ್ಘಾನಿಸ್ತಾನದಲ್ಲಿ ಯುದ್ಧ ಮಾಡಿದ್ದು ನಿಮಗೆ ನೆನಪಿರಬಹುದು. ಆದರೆ ಜೋ ಬೈಡೆನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಅಫ್ಘಾನಿಸ್ತಾನದಿಂದ ತಮ್ಮ ದೇಶದ ಸೇನೆಯನ್ನು ತರಾತುರಿಯಲ್ಲಿ ವಾಪಸ್ ಕರೆಸಿಕೊಂಡುಬಿಟ್ಟರು.
ಅಫ್ಘಾನಿಸ್ತಾನ ಏನು ಬೇಕಾದರೂ ಮಾಡಿಕೊಳ್ಳಲಿ, ಅದು ಅಲ್ಲಿನ ಜನರ ಹಣೆಬರಹ ಎಂದು ಬೈಡೆನ್ ತಮ್ಮ ದೇಶದ ಸೇನೆಗೆ ವಾಪಸ್ ಬರಲು ಸೂಚಿಸಿ ದರು. ನಂತರ ಅಫ್ಘಾನಿಸ್ತಾನವೆಂಬ ಇಡೀ ದೇಶದ ಆಡಳಿತವೇ ತಾಲಿಬಾನ್ ಉಗ್ರರ ಕೈಗೆ ಹೋಯಿತು! ಅಮೆರಿಕದ ಒಂದು ನಿರ್ಧಾರ ಹೇಗೆ ಜಗತ್ತಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ಹೇಳುವ ಇಂತಹ ಸಾಕಷ್ಟು ಉದಾಹರಣೆಗಳಿವೆ. ಈ ಕಾರಣಕ್ಕಾಗಿಯೇ ಜಗತ್ತು ಅಮೆರಿಕದ ಚುನಾವಣೆಯನ್ನು ಕುತೂಹಲದಿಂದ ಗಮನಿಸುತ್ತದೆ. ಅಲ್ಲಿ ಸರಕಾರ ಬದಲಾದಂತೆ ವಿದೇಶಾಂಗ ನೀತಿಯಲ್ಲೂ ಬಹಳ ದೊಡ್ಡ ಬದಲಾವಣೆ ಗಳಾಗುತ್ತವೆ.
ಇದೇ ಕಾರಣಕ್ಕೆ ಈ ಬಾರಿ ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೋ ಅಥವಾ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಗೆಲ್ಲುತ್ತಾರೋ ಎಂಬ ಬಗ್ಗೆ ಜಗತ್ತಿನಾದ್ಯಂತ ಕುತೂಹಲ ಗರಿಗೆದರಿದೆ! ಕಮಲಾ ಹ್ಯಾರಿಸ್ ಇನ್ನೂ ಡೆಮಾಕ್ರೆಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯೆಂದು ಘೋಷಣೆ ಆಗಿಲ್ಲವಾದರೂ, ಅವರೇ ಅಭ್ಯರ್ಥಿ ಯಾಗುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ. ಅವರೇ ಚುನಾವಣೆಯಲ್ಲಿ ಗೆದ್ದರೆ ಕಮಲಾ ಹ್ಯಾರಿಸ್ ಅಮೆರಿಕದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆಯಾಗುತ್ತಾರೆ. ಜಗತ್ತಿನ ಅತ್ಯಂತ ಸುಶಿಕ್ಷಿತ, ಅತ್ಯಂತ ಶ್ರೀಮಂತ, ಅತ್ಯಂತ ಪ್ರಭಾವಿ ಹಾಗೂ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ದೇಶದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಇತಿಹಾಸವನ್ನು ಅವರು ನಿರ್ಮಿಸುತ್ತಾರೆ!
ಸಹಜವಾಗಿಯೇ ಭಾರತೀಯರ ಕುತೂಹಲ ಏನಿರುತ್ತದೆಯೆಂದರೆ, ಅಮೆರಿಕಕ್ಕೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದರೆ ನಮಗೆ ಒಳ್ಳೆಯದೋ ಅಥವಾ ಕಮಲಾ ಹ್ಯಾರಿಸ್ ಅಧ್ಯಕ್ಷರಾದರೆ ಒಳ್ಳೆಯದೋ? ಅದನ್ನೇ ಈಗ ಚರ್ಚಿಸೋಣ. ನಾವು ಭಾರತೀಯರು ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತೇವೆ. ಸಂಬಂಧಿಕರ ಜತೆಗೆ ಭಾವನಾತ್ಮಕ ನಂಟು ಹೊಂದಿರುತ್ತವೆ. ಭಾರತೀಯ ನಂಟು ಹೊಂದಿರುವ ರಿಷಿ ಸುನಕ್ ಬ್ರಿಟನ್‌ನಿಗೆ ಪ್ರಧಾನಿಯಾದಾಗ ನಾವು ಎಷ್ಟೊಂದು ಸಂಭ್ರಮಿಸಿದ್ದೇವಲ್ಲವೇ? ಹಾಗೆಯೇ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಯಾಗುತ್ತಿದ್ದಾರೆ ಎಂಬ ಸುದ್ದಿ ಬಂದಾಗಲೂ ಅಷ್ಟೇ ಸಂಭ್ರಮಿಸಿದ್ದೇವೆ.
ತಮಿಳುನಾಡಿನ ಚೆನ್ನೈನಿಂದ ೩೦೦ ಕಿ.ಮೀ. ದೂರವಿರುವ ತುಲಸೇಂದ್ರಪುರಂನಲ್ಲಿ ಈ ಸುದ್ದಿ ಕೇಳಿ ಜನರು ಕುಣಿದಾಡಿದ್ದರು. ಏಕೆಂದರೆ ಅದು ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಅವರ ಹುಟ್ಟೂರು. ಇದೇ ಊರಿನಿಂದ ಶ್ಯಾಮಲಾ ಅಮೆರಿಕಕ್ಕೆ ಹೋಗಿದ್ದರು. ಹಾಗಂತ ಕಮಲಾ ಹ್ಯಾರಿಸ್ ಹೃದಯದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನವೇನಾದರೂ ಇದೆಯೇ? ನನ್ನ ಪ್ರಕಾರ ಅಂಥದ್ದೇನೂ ಇಲ್ಲ. ಅವರ ತಂದೆ ಜಮೈಕಾದವರು. ಆದರೆ ಕಮಲಾ ಭಾರತದ ಬಗ್ಗೆಯಾಗಲೀ, ಜಮೈಕಾ ಬಗ್ಗೆಯಾಗಲೀ ಯಾವತ್ತೂ ವಿಶೇಷ ಕುತೂಹಲ ಅಥವಾ ಭಾವನಾತ್ಮಕ ಆಕರ್ಷಣೆಯನ್ನು ತೋರಿದ್ದಿಲ್ಲ.
ಹಾಗೆ ನೋಡಿದರೆ ಅವರು ಪದೇಪದೇ ಭಾರತವಿರೋಧಿ ನಿಲುವನ್ನೇ ತೋರಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು
ಹಿಂಪಡೆಯಲು ಭಾರತ ಸರಕಾರ ೨೦೧೯ರಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿದಾಗ ಕಮಲಾ ವಿರೋಧಿಸಿದ್ದರು. ‘ಕಾಶ್ಮೀರಿಗಳ ಜತೆಗೆ ನಾವಿದ್ದೇವೆ ಎಂಬುದನ್ನು ನೆನಪಿಸಲು ಬಯಸುತ್ತೇನೆ. ನೀವು ಏಕಾಂಗಿಯಲ್ಲ. ನಿಮ್ಮ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದ್ದೇವೆ’ ಎಂದು ಕಮಲಾ ಬಹಿರಂಗವಾಗಿಯೇ ಹೇಳಿದ್ದರು.
ಸ್ನೇಹಶೀಲ ವ್ಯಕ್ತಿತ್ವ ಹೊಂದಿರುವ ಯಾವ ವ್ಯಕ್ತಿಯೂ ಇನ್ನೊಂದು ದೇಶದ ಆಂತರಿಕ ವ್ಯವಹಾರದ ಬಗ್ಗೆ ಹೀಗೆ ಮಾತನಾಡುವುದಿಲ್ಲ. ಇನ್ನೊಂದು
ಘಟನೆ ನೆನಪಿಸಲು ಬಯಸುತ್ತೇನೆ. ೨೦೨೧ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಕಮಲಾ ಹ್ಯಾರಿಸ್ ಅಲ್ಲಿನ ಉಪಾಧ್ಯಕ್ಷೆ. ಹೀಗಾಗಿ ಮೋದಿಯವರು ಕಮಲಾಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಆದರೆ ಅದಕ್ಕೆ ಪ್ರತಿಯಾಗಿ ಆಕೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು! ೨೦೨೩ರಲ್ಲಿ ಮತ್ತೆ ಮೋದಿ ಅಮೆರಿಕಕ್ಕೆ ಹೋಗಿದ್ದರು. ಆಗಲೂ ಆಕೆ ಉಪಾಧ್ಯಕ್ಷೆ.
ಮೋದಿ ಬಹಿರಂಗವಾಗಿಯೇ ಅವರ ವ್ಯಕ್ತಿತ್ವವನ್ನು ಸಾಕಷ್ಟು ಹೊಗಳಿದರು. ಆದರೂ ಕಮಲಾ ಭಾರತದ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಲಿಲ್ಲ. ಇಷ್ಟಕ್ಕೂ ಕಮಲಾ ಅಮೆರಿಕದ ಉಪಾಧ್ಯಕ್ಷೆಯಾದ ನಂತರ ಯಾವತ್ತೂ ಭಾರತದ ಬಗ್ಗೆ ತನಗೆ ಒಲವಿರುವುದಾಗಿ ತೋರಿಸಿಕೊಂಡಿಲ್ಲ! ಹಾಗೆಯೇ, ಭಾರತ ಮತ್ತು ಅಮೆರಿಕದ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಬಗ್ಗೆ ಯಾವ ಆಸಕ್ತಿಯನ್ನೂ ಆಕೆ ತೋರಿಸಿಲ್ಲ. ಹಾಗಿದ್ದರೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದರೆ ಭಾರತ-ಅಮೆರಿಕದ ಸಂಬಂಧ ಏನಾಗುತ್ತದೆ ಎಂಬುದನ್ನು ನೋಡೋಣ. ಸಾಮಾನ್ಯವಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ತುಂಬಾ ಗಟ್ಟಿಯಾದ ವೈಯಕ್ತಿಕ ಸಂಬಂಧ ಹೊಂದಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದಾರೆ.
೨೦೨೦ರ ಫೆಬ್ರವರಿಯಲ್ಲಿ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ಗುಜರಾತ್‌ನಲ್ಲಿ ಅವರ ಸ್ವಾಗತಕ್ಕೆ ಅದ್ದೂರಿ ಸಮಾರಂಭ ಆಯೋಜಿಸಲಾಗಿತ್ತು. ಅದಕ್ಕೂ ಮುನ್ನ ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮ ನಿಮಗೆ ನೆನಪಿರಬಹುದು. ಆ ಕಾರ್ಯಕ್ರಮಕ್ಕೆ ಸ್ವತಃ ಟ್ರಂಪ್ ಆಗಮಿಸಿದ್ದರು. ಇತ್ತೀಚೆಗೆ ಅಮೆರಿಕದಲ್ಲಿ ಟ್ರಂಪ್ ಮೇಲೆ ಚುನಾವಣಾ ಪ್ರಚಾರದ ವೇಳೆ ಗುಂಡಿನ ದಾಳಿ ನಡೆದಾಗ ಅದನ್ನು ಖಂಡಿಸಿದ ಜಾಗತಿಕ ನಾಯಕರ ಪೈಕಿ ಮೋದಿ ಮೊದಲಿಗರ ಸಾಲಿನಲ್ಲಿದ್ದರು. ಟ್ರಂಪ್‌ಗೆ ಚೀನಾವನ್ನು ಕಂಡರೆ ಆಗುವುದಿಲ್ಲ. ತಮ್ಮ ಚೀನಾವಿರೋಽ ನೀತಿಯಲ್ಲಿ ಭಾರತ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂಬುದು ಟ್ರಂಪ್‌ಗೆ ತಿಳಿದಿದೆ.
ಮೇಲಾಗಿ, ಭಾರತ ಇಂದು ಜಗತ್ತಿನಲ್ಲೇ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭವಿಷ್ಯದ ದೈತ್ಯ ಆರ್ಥಿಕ ಶಕ್ತಿಯಾಗಿದೆ. ಹೀಗಾಗಿ, ಎಂತಹ
ಸಂದರ್ಭದಲ್ಲೇ ಆದರೂ ಟ್ರಂಪ್ ಭಾರತಕ್ಕೆ ಆದ್ಯತೆ ನೀಡಿಯೇ ನೀಡುತ್ತಾರೆ. ಹಾಗಂತ ಟ್ರಂಪ್ ಅಧ್ಯಕ್ಷರಾದರೆ ಭಾರತಕ್ಕೆ ತುಂಬಾ ಅನುಕೂಲ ವಾಗುತ್ತದೆಯೇ? ನನ್ನ ಪ್ರಕಾರ ಇಲ್ಲ. ಏಕೆಂದರೆ, ಅಮೆರಿಕಕ್ಕೆ ಯಾರೇ ಅಧ್ಯಕ್ಷರಾದರೂ ಅವರು ಸಹಜವಾಗಿಯೇ ಅಮೆರಿಕದ ಹಿತರಕ್ಷಣೆಗೇ ಮೊದಲ
ಆದ್ಯತೆ ನೀಡುತ್ತಾರೆ. ಕಮಲಾ ಆಗಲಿ ಅಥವಾ ಟ್ರಂಪ್ ಆಗಲಿ, ಅವರು ಅಮೆರಿಕದ ಹಿತಕ್ಕೆ ಏನು ಮಾಡಬೇಕೋ ಅದನ್ನೇ ಮಾಡುತ್ತಾರೆ. ಟ್ರಂಪ್ ಅವರಂತೂ ‘ಅಮೆರಿಕ ಮೊದಲು’ ಎಂಬ ಅಧಿಕೃತ ನೀತಿಯನ್ನೇ ಹೊಂದಿದ್ದಾರೆ.
ಹಿಂದಿನ ಬಾರಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೂ ಮುನ್ನ ನಡೆಸಿದ ಚುನಾವಣಾ ಪ್ರಚಾರದಲ್ಲಿ ಅಮೆರಿಕದ ಹಾರ್ಲೆ ಡೇವಿಡ್ಸನ್ ಬೈಕ್‌ಗಳಿಗೆ ಭಾರತದಲ್ಲಿ ದುಬಾರಿ ತೆರಿಗೆ ವಿಧಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಆಕ್ಷೇಪಿಸಿದ್ದರು. ಆದರೆ ಅವರ ಧ್ವನಿ ತುಂಬಾ ಕಟುವಾಗಿರಲಿಲ್ಲ. ಇನ್ನೊಂದು ಸಂಗತಿಯನ್ನು ನಾವು ಗಮನಿಸಬೇಕು. ಟ್ರಂಪ್ ತಮ್ಮ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜೆ.ಡಿ.ವೇನ್ಸ್ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಟ್ರಂಪ್ ಅಧ್ಯಕ್ಷರಾದರೆ ತನ್ನಿಂತಾನೇ ವೇನ್ಸ್ ಉಪಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ವೇನ್ಸ್ ಅವರ ಪತ್ನಿ ಉಷಾ ಭಾರತೀಯ ಮೂಲದವರು. ಹೀಗಾಗಿ, ರಿಪಬ್ಲಿಕನ್ ಪಕ್ಷದವರು ಗೆಲ್ಲಲಿ ಅಥವಾ ಡೆಮಾಕ್ರೆಟಿಕ್ ಪಕ್ಷದವರು ಗೆಲ್ಲಲಿ, ಭಾರತದ ಜತೆಗೆ ಅಮೆರಿಕದ ಹೊಸ ಸರಕಾರಕ್ಕೊಂದು ‘ಕನೆಕ್ಷನ್’ ಇದ್ದೇ ಇರುತ್ತದೆ.
ಆದರೆ, ಅಮೆರಿಕದ ಸಂಸತ್ತಿನ ೫೩೫ ಸದಸ್ಯರಲ್ಲಿ ಕೇವಲ ೫ ಸದಸ್ಯರು ಮಾತ್ರ ಭಾರತೀಯ ಮೂಲದವರಿದ್ದಾರೆ. ಹಾಗಾಗಿ ಭಾರತೀಯರು ತುಂಬಾ ಭ್ರಮೆಯಲ್ಲಿ ತೇಲಾಡುವ ಅಗತ್ಯವೇನೂ ಇಲ್ಲ. ಅಮೆರಿಕದ ಆಡಳಿತ ವ್ಯವಸ್ಥೆ ಹೇಗಿದೆಯೆಂದರೆ, ಅಲ್ಲಿ ಅಧ್ಯಕ್ಷ ಯಾರಾದರೂ ಆಗಿರಲಿ, ಅವರು ತಮಗೆ
ಅನ್ನಿಸಿದ್ದನ್ನೆಲ್ಲ ಮಾಡಲು ಅವಕಾಶವಿರುವುದಿಲ್ಲ. ಅಧ್ಯಕ್ಷ ಇಡಬೇಕಾದ ಪ್ರತಿ ಹೆಜ್ಜೆ ಹಾಗೂ ಆಡಬೇಕಾದ ಪ್ರತಿಯೊಂದು ಮಾತೂ ಪೂರ್ವನಿರ್ಧರಿತ ವಾಗಿರುತ್ತದೆ. ಅದನ್ನು ಶ್ವೇತಭವನದ ತಂಡ ನಿರ್ವಹಣೆ ಮಾಡುತ್ತದೆ. ಹೀಗಾಗಿ ೭೮ ವರ್ಷದ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಲಿ ಅಥವಾ ೫೯ ವರ್ಷದ ಕಮಲಾ ಹ್ಯಾರಿಸ್ ಅಧ್ಯಕ್ಷರಾಗಲಿ, ಅಮೆರಿಕದ ಅಧ್ಯಕ್ಷರ ಕುರ್ಚಿಯ ಮೇಲೆ ಕುಳಿತ ವ್ಯಕ್ತಿ ನೂರಕ್ಕೆ ನೂರು ಅಮೆರಿಕದ ಹಿತವನ್ನೇ ಗಮನಿಸುತ್ತಾರೆಯೇ ಹೊರತು ಭಾರತದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಭಾರತದ ಜತೆಗೆ ವ್ಯವಹರಿಸುವಾಗಲೂ ತಮ್ಮ ದೇಶದ ಹಿತ ಕಾಪಾಡಿಕೊಳ್ಳಲು ಏನು ಮಾಡಬೇಕೋ ಅದನ್ನೇ ಮಾಡುತ್ತಾರೆ. ಆದ್ದರಿಂದ ಅಮೆರಿಕದಲ್ಲಿ ಚುನಾವಣೆ ನಡೆಯುತ್ತಿದೆ ಎಂದು ಭಾರತೀಯರು ಯಾರದ್ದೋ ಮದುವೆಯಲ್ಲಿ ಅಬ್ದುಲ್ಲಾ ಕುಣಿದಂತೆ ಹುಚ್ಚೆದ್ದು ಕುಣಿಯುವ ಅಗತ್ಯವಿಲ್ಲ! ಅದರ
ಬದಲಿಗೆ, ನಮ್ಮ ಸರಕಾರ ಅಮೆರಿಕದಿಂದ ಭಾರತಕ್ಕೆ ಗರಿಷ್ಠ ಲಾಭವಾಗುವಂತೆ ವ್ಯವಹರಿಸುವುದು ಹೇಗೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಅದಕ್ಕೆ ಪ್ರಚಂಡ ವಿದೇಶಾಂಗ ಮಂತ್ರಿ ಎಸ್.ಜೈಶಂಕರ್ ಇದ್ದಾರೆ ಬಿಡಿ!
(ಲೇಖಕರು : ಹಿರಿಯ ಹಿರಿಯ
ಪತ್ರಿಕೋದ್ಯಮಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ)