Friday, 22nd November 2024

ಹಿಟ್ಲರ್ ಮಾತನ್ನೇ ಆಡಿದ ಉದಯನಿಧಿ!

ಹಿಟ್ಲರ್ ಯೆಹೂದಿಗಳ ಮಾರಣಹೋಮಕ್ಕೂ ಮುನ್ನ, ಉದಯನಿಧಿ ಆಡಿದ ಮಾತುಗಳನ್ನೇ ಆಡಿದ್ದ. ಅವನಂತೆಯೇ ಸನಾತನ ಧರ್ಮವನ್ನು ಮಾರಣಾಂತಿಕ ರೋಗಗಳಿಗೆ ಹೋಲಿಸಿರುವ ಉದಯನಿಧಿ, ಕೊನೆಗೆ ‘ಸನಾತನ ಧರ್ಮವನ್ನು ನಿರ್ಮೂಲನಗೊಳಿಸಬೇಕು’ ಎಂದಿದ್ದಾರೆ.

ಭಾರತದ ಮೇಲೆ ದಾಳಿಮಾಡಿ ಸನಾತನ ಹಿಂದೂ ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸಿದ ಪರದೇಶಿ ದಾಳಿಕೋರರು ಒಬ್ಬಿಬ್ಬರಲ್ಲ. ದೂರದ ಅಫ್ಘಾನಿಸ್ತಾನದಿಂದ ಬಂದಿದ್ದ ಇಸ್ಲಾಮಿಕ್ ದಾಳಿಕೋರರು ೩ ಶತಮಾನಗಳ ಕಾಲ ಭಾರತದ ಸನಾತನ ಸಂಸ್ಕೃತಿಯ ಕುರುಹುಗಳನ್ನು ನಾಶಪಡಿಸಲು ಯತ್ನಿಸಿದ್ದರು. ನಂತರ ಬಂದ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಈ ದಾಳಿಕೋರರ ನಡೆಯನ್ನು ಅನುಸರಿಸಲಿಲ್ಲ;
ಬದಲಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಭಾರತೀಯರ ಮೇಲೆ ಹೇರುವ ಮೂಲಕ, ಸನಾತನ ಸಂಸ್ಕೃತಿಯ ನಾಶಕ್ಕೆ ಕೈಹಾಕಿದ್ದರು. ಸಾವಿರಾರು ವರ್ಷಗಳ ಹಿಂದಿನ ಸನಾತನ ಶಿಕ್ಷಣ ಪದ್ಧತಿಯನ್ನು ಮರೆಮಾಚಲೆಂದು ಪಾಶ್ಚಾತ್ಯ ಶಿಕ್ಷಣ ಪದ್ಧತಿಗಳನ್ನು ತಮ್ಮ ಒಡೆದು ಆಳುವ ನೀತಿಯಲ್ಲಿ ಜಾರಿಗೆ ತಂದರು. ಭಾರತದ ಮೇಲೆ ತಾವು ಹೇರಿದ ವಸಾಹತುಶಾಹಿ ಆಡಳಿತವನ್ನು ಸಮರ್ಥಿಸಿಕೊಳ್ಳಲೆಂದು ‘ಆರ್ಯ’ ಮತ್ತು ‘ದ್ರಾವಿಡ’ ಎಂಬ ಸುಳ್ಳು ಸಿದ್ಧಾಂತವನ್ನು ಸೃಷ್ಟಿಸಿದರು. ಇಷ್ಟಾಗಿಯೂ ಅವರಿಗೆ ಸನಾತನ ಸಂಸ್ಕೃತಿಯನ್ನು ನಾಶಪಡಿಸಲಾಗಲಿಲ್ಲ. ಆದರೆ ಇಡೀ ಜಗತ್ತು ಸನಾತನ ಧರ್ಮವನ್ನು ಸ್ವೀಕರಿಸಿ ಇದರ ಆಚರಣೆಗಳನ್ನು ಅಳವಡಿಸಿಕೊಳ್ಳುತ್ತಿದೆ.

ಸಾವಿರಾರು ವರ್ಷಗಳ ಹಿಂದಿನ ಯೋಗಪದ್ಧತಿಯು ಇಂದು ಜಗತ್ತಿನ ಮೂಲೆ ಮೂಲೆಗಳನ್ನು ತಲುಪಿದೆ. ಪಾಶ್ಚಾತ್ಯರ ವೈದ್ಯಪದ್ಧತಿಗೆ ಸಿಕ್ಕಷ್ಟೇ ಮನ್ನಣೆಯು, ಯೋಗ ಮತ್ತು ಆಯುರ್ವೇದ ಪದ್ಧತಿಗೂ ಸಿಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಇಸ್ಲಾಮಿಕ್ ರಾಷ್ಟ್ರಗಳೂ ಆಚರಿಸುತ್ತಿವೆ. ನಾಸ್ತಿಕವಾದಿಗಳಿಂದಾಗಿ ಎಡಚರರ ರಾಷ್ಟ್ರವಾಗಿದ್ದ ರಷ್ಯಾದ ಜನರು, ಸನಾತನ ಧರ್ಮವನ್ನು ಸ್ವೀಕರಿಸಿ ಜ್ಯೋತಿಷ ಹೇಳುವ ಮಟ್ಟಕ್ಕೆ
ಬೆಳೆದಿದ್ದಾರೆ. ಮೆಕ್ಕಾ ಮತ್ತು ಮದೀನಾ ಮುಸಲ್ಮಾನರ ಪವಿತ್ರ ಯಾತ್ರಾಸ್ಥಳವಾಗಿದ್ದರೆ, ಜೆರುಸಲೇಮ್ ಕ್ರೈಸ್ತರ ಪವಿತ್ರ ಸ್ಥಳ. ಆದರೆ ಒಂದಿಡೀ ಭಾರತವೇ ಸನಾತನ ಧರ್ಮದ ಪುಣ್ಯಸ್ಥಳ. ಭಾರತವನ್ನು ಪಾಶ್ಚಿಮಾತ್ಯರು ‘ಇಂಡಿಯ’ ಎಂಬ ಹೆಸರಿನಿಂದ ಕರೆದರೆ, ಅರಬ್ಬರ ನಾಡಿನಿಂದ ಬಂದಿದ್ದ ದಾಳಿಕೋರರು ‘ಹಿಂದೂಸ್ತಾನ್’ ಎಂದು ಕರೆದಿದ್ದರು. ಬ್ರಿಟಿಷರ ಆಡಳಿತಾವಧಿಯಲ್ಲಿ ನಡೆದ ಹೆಚ್ಚಿನ ಮತಾಂತರಕ್ಕೆ ಬಲಿಪಶುವಾದ ರಾಜ್ಯ ತಮಿಳುನಾಡು. ತಮಿಳಿನ ಶ್ರೇಷ್ಠಕವಿ ತಿರುವಳ್ಳುವರ್ ಅವರನ್ನೇ ಕ್ರೈಸ್ತರ ಪಾದ್ರಿ ಸಂತ ಥಾಮಸ್‌ನ ಅನುಯಾಯಿ ಎನ್ನುವ ಮಟ್ಟದ ಸುಳ್ಳನ್ನು ಮಿಷನರಿಗಳು ತಮಿಳರ ತಲೆಯಲ್ಲಿ ತುಂಬಿದ್ದರು. ‘ಹಿಂದೂ ಧರ್ಮದ ವೇದಗಳ ಮೂಲ ಕ್ರೈಸ್ತಧರ್ಮ’ ಎಂಬ ಹಸಿಸುಳ್ಳನ್ನು ಮಿಷನರಿಗಳು ಹೇಳಿದ್ದರು. ಕನ್ಯಾಕುಮಾರಿ ಜಿಲ್ಲೆಯಲ್ಲಿ ‘ವೇತ ಕೋಯಲ್’ಗಳನ್ನು ಇಂದಿಗೂ ಕಾಣಬಹುದು. ಹಿಂದೂ ಧರ್ಮದಲ್ಲಿದ್ದ ಕೆಲವೊಂದು ಅನಿಷ್ಟ
ಪದ್ಧತಿಗಳನ್ನೇ ಅಸವನ್ನಾಗಿಸಿಕೊಂಡ ಮಿಷನರಿಗಳು, ದಲಿತರನ್ನು ತಮ್ಮೆಡೆಗೆ ಸೆಳೆದು ಮತಾಂತರ ಮಾಡಿದ್ದರು.

ಹಿಂದೂಧರ್ಮದಲ್ಲಿದ್ದಂಥ ಭೇದಭಾವದ ಬಗ್ಗೆ ಅಸಮಾಧಾನವಿದ್ದರೂ ಬಾಬಾಸಾಹೇಬ್ ಅಂಬೇಡ್ಕರರು ಕ್ರೈಸ್ತಧರ್ಮಕ್ಕೆ ಮತಾಂತರವಾಗಲಿಲ್ಲ. ಕಾರಣ, ಸ್ವಾತಂತ್ರ್ಯಾ ನಂತರ ಭಾರತವು ಮತ್ತೊಂದು ‘ಈಸ್ಟ್ ಇಂಡಿಯಾ ಕಂಪನಿ’ ಆಗಬಾರದೆಂಬ ಅವರ ದೂರದೃಷ್ಟಿ. ಆದರೆ, ಸ್ವಾತಂತ್ರ್ಯಾ ನಂತರವೂ ಭಾರತದಲ್ಲಿನ ಹಿಂದೂಗಳನ್ನು ಮತಾಂತರಿಸುವ ಪ್ರಕ್ರಿಯೆಗೆ ಪಾಶ್ಚಾತ್ಯ ದೇಶಗಳಿಂದ ಸಾವಿರಾರು ಕೋಟಿ ಹಣ ಹರಿದುಬರುತ್ತಿದೆ. ಸನಾತನ ಸಂಸ್ಕೃತಿಯನ್ನು ನಾಶಪಡಿಸ ಬೇಕೆಂಬ ಮಿಷನರಿಗಳ ಷಡ್ಯಂತ್ರ ಇಂದು ನಿನ್ನೆಯದಲ್ಲ. ತಮಿಳುನಾಡಿನಲ್ಲಿ ಮಿಷನರಿಗಳಿಗೆ ಹೆಚ್ಚು ಬೆಂಬಲ ಸೂಚಿಸಿ ಮತಾಂತರ ಪ್ರಮಾಣವನ್ನು ಹೆಚ್ಚಿಸಿದ ಕೀರ್ತಿ ದ್ರಾವಿಡ ಪಕ್ಷಕ್ಕೆ ಸಲ್ಲಬೇಕು! ಸನಾತನ ಧರ್ಮದಲ್ಲಿದ್ದಂಥ ಅನಿಷ್ಟ ಪದ್ಧತಿಗಳನ್ನು ಬಹಿರಂಗವಾಗಿ ಖಂಡಿಸಿ ಹೋಗಲಾಡಿಸಿದ್ದು ಹಿಂದೂಗಳೇ ಹೊರತು ಇತರ ಧರ್ಮದವರಲ್ಲ. ಆದರೆ ದ್ರಾವಿಡ ಪಕ್ಷದ ನಾಯಕರು ಕ್ರೈಸ್ತಧರ್ಮದಲ್ಲಿರುವ ಅನಿಷ್ಟ ಪದ್ಧತಿಗಳ ಬಗ್ಗೆ ದನಿಯೆತ್ತುವುದಿಲ್ಲ, ಪ್ರೊಟೆಸ್ಟೆಂಟ್ ಮತ್ತು ಕ್ಯಾಥೊಲಿಕ್ ಕ್ರೈಸ್ತರ ನಡುವಿನ ಅಸಮಾನತೆಯ ಬಗ್ಗೆ ಮಾತಾಡುವುದಿಲ್ಲ. ಪ್ರೊಟೆಸ್ಟೆಂಟ್‌ಗಳನ್ನು ಕ್ಯಾಥೊಲಿಕರು ಹೀನಾಯವಾಗಿ ನೋಡುತ್ತಾರೆ. ಚರ್ಚುಗಳಲ್ಲಿ ಮೊದಲ ಪ್ರವೇಶ ಕ್ಯಾಥೊಲಿಕರಿಗೆ, ನಂತರವಷ್ಟೇ ಪ್ರೊಟೆಸ್ಟೆಂಟರು ಕಾಲಿಡಬೇಕು. ಸನಾತನ ಧರ್ಮದಿಂದ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡವರು
ಪ್ರೊಟೆಸ್ಟೆಂಟ್‌ಗಳಾಗೇ ಉಳಿಯುತ್ತಾರೆ. ಸನಾತನ ಧರ್ಮದಲ್ಲಿನ ದೇಗುಲಗಳಲ್ಲಿನ ಅಸಮಾನತೆಯ ಬಗ್ಗೆ ಮಾತಾಡುವವರು, ಮಿಷನರಿಗಳು ನೀಡುವ ಎಂಜಲುಕಾಸಿನ ಆಸೆಗೆ ಕ್ರೈಸ್ತಧರ್ಮದಲ್ಲಿನ ಅಸಮಾನತೆಯ ವಿರುದ್ಧ ದನಿಯೆ ತ್ತುವುದಿಲ್ಲ.

ಹಿಂದೂ ಧರ್ಮದಲ್ಲಿ ನೂರಾರು ವರ್ಷಗಳ ಹಿಂದೆ, ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಚಾಲ್ತಿಯಲ್ಲಿದ್ದ ಅನಿಷ್ಟ ಆಚರಣೆಗಳ ಬಗ್ಗೆ ಇಂದು ಉಲ್ಲೇಖಿಸುವ ಕರುಣಾನಿಧಿ ವಂಶಸ್ಥರು, ಇಸ್ಲಾಂ ಧರ್ಮದಲ್ಲಿ ಇಂದಿಗೂ
ಜೀವಂತವಾಗಿರುವ ‘ಹೆಣ್ಣು ಮಕ್ಕಳ ಸ್ವಾತಂತ್ರ್ಯ ಕಸಿದುಕೊಳ್ಳುವ’ ವಿಚಾರಗಳ ಬಗ್ಗೆ ಮಾತಾಡುವುದಿಲ್ಲ. ಇಸ್ಲಾಂ ಧರ್ಮದಲ್ಲಿ ಹೆಣ್ಣು ಮಕ್ಕಳು ಧರಿಸುವ ಬುರ್ಖಾ ಒಂದು ಅನಿಷ್ಟ ಪದ್ಧತಿ ಎಂದಿದ್ದರು ಬಾಬಾಸಾಹೇಬರು ಇಸ್ಲಾಂ ಧರ್ಮದಲ್ಲಿರುವ ಬಹುಪತ್ನಿತ್ವದ ಬಗ್ಗೆ ದನಿಯೆತ್ತಲು ತಾಕತ್ತಿಲ್ಲದ ಕರುಣಾನಿಧಿ ವಂಶಸ್ಥರು, ಮೂರು ಬಾರಿ ‘ತಲಾಕ್’ ಹೇಳಿ ಅನಾಯಾಸವಾಗಿ ವಿಚ್ಛೇದನ ನೀಡಿ ಹೆಣ್ಣಿನ ಬಾಳನ್ನು ಹಾಳುಮಾಡುವ ಕಾನೂನನ್ನು ಬೆಂಬಲಿಸುವವರು, ಸನಾತನ ಧರ್ಮದ ನಾಶದ ಬಗ್ಗೆ ಮಾತಾಡುತ್ತಾರೆ! ತುಂಬಿದ ಸಭೆಯಲ್ಲಿ ದುಶ್ಯಾಸನನು ದ್ರೌಪದಿಯ ಸೀರೆ ಎಳೆದು ಅವಮಾನಿಸಿದಂತೆ, ತಮಿಳುನಾಡಿನ ವಿಧಾನಸಭೆಯಲ್ಲಿ ಜಯಲಲಿತಾರ ಸೀರೆಯನ್ನು ಎಳೆದಾಡಿದ ದುಷ್ಟ ಡಿಎಂಕೆ ಪಕ್ಷದವರು ಸನಾತನ ಧರ್ಮದಲ್ಲಿನ ಸ್ತ್ರೀ-ವಿರೋಧಿ ಆಚರಣೆಗಳ ಬಗ್ಗೆ ಚರ್ಚಿಸುತ್ತಾರೆ! ದಲಿತರ ಹೆಸರಲ್ಲೇ ರಾಜಕೀಯ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು, ಕಳೆದ ೭೬ ವರ್ಷದಲ್ಲಿ ಸುಮಾರು ೬೦ ವರ್ಷಗಳ ಕಾಲ ಅಧಿಕಾರದಲ್ಲಿದ್ದವು. ಇಷ್ಟಾಗಿಯೂ ಅವು ದಲಿತರಿಗೆ ಮಾಡಿದ್ದಾದರೂ ಏನು? ಕಾಂಗ್ರೆಸ್ ಮತ್ತದರ  ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಕ್ರೈಸ್ತಧರ್ಮಕ್ಕೆ ಅತಿಹೆಚ್ಚು ಮತಾಂತರಗಳಾಗಿವೆ.

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷ ಅಧಿಕಾರಕ್ಕೆ ಬಂದ ನಂತರ ಮತಾಂತರ ಮತ್ತಷ್ಟು ಹೆಚ್ಚಾಗಿದೆ. ದಲಿತರ ಹೆಸರಿನಲ್ಲಿ ಸಾವಿರಾರು ಕೋಟಿ ರು. ತೆರಿಗೆ ಹಣವನ್ನು ಲೂಟಿ ಮಾಡಿದ್ದು ದ್ರಾವಿಡ ಪಕ್ಷ. ಸನಾತನ ಧರ್ಮವನ್ನು ಏಡ್ಸ್ ರೋಗಕ್ಕೆ ಹೋಲಿಸಿರುವ ಎ.ರಾಜಾ ಅವರು, ೨ ಲಕ್ಷ ಕೋಟಿ ರು. ಮೊತ್ತದ ೨ಜಿ ಸ್ಪೆಕ್ಟ್ರಮ್ ಹಗರಣದ ಪ್ರಮುಖ ಆರೋಪಿ. ೨ ವರ್ಷ ಜೈಲಿನಲ್ಲಿದ್ದ ಈ ಮಹಾನುಭಾವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ! ಮಾತುಮಾತಿಗೂ ಬಾಬಾಸಾಹೇಬರ ಹೆಸರನ್ನು ಮುನ್ನೆಲೆಗೆ ತರುವ ಕಾಂಗ್ರೆಸ್ ಪಕ್ಷ, ಬಾಬಾಸಾಹೇಬರಿಗೆ ಮಾಡಿದಷ್ಟು ಅನ್ಯಾಯವನ್ನು ಮತ್ತಾರಿಗೂ ಮಾಡಿಲ್ಲ. ವಿದೇಶಿ ಸಂವಿಧಾನ ತಜ್ಞರನ್ನು ಬಳಸಿಕೊಂಡು ಸಂವಿಧಾನ ರಚಿಸಲು ಸಿದ್ಧರಾಗಿದ್ದ ನೆಹರು, ಸಂವಿಧಾನ ರಚನಾ ಸಮಿತಿಯಲ್ಲಿ ಬಾಬಾಸಾಹೇಬರಿಗೆ ಜಾಗವನ್ನೇ ನೀಡಿರಲಿಲ್ಲ. ಮಹಾತ್ಮ ಗಾಂಧಿಯವರ ಸಲಹೆಯ ಮೇರೆಗೆ ಅವರನ್ನು ಈ ಪ್ರಕ್ರಿಯೆಯಲ್ಲಿ ಸೇರಿಸಲಾಯಿತು. ತಮ್ಮ ಆಶಯಗಳಿಗೆ ವಿರುದ್ಧವಾಗಿದ್ದ ಹಲವು ನಿಬಂಧನೆಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆಯೆಂದು ಸ್ವತಃ ಬಾಬಾಸಾಹೇಬರೇ ಹೇಳಿದ್ದಾರೆ. ಇಷ್ಟಾದ ನಂತರವೂ ಬಾಬಾಸಾಹೇಬರನ್ನು ಕಾಡಿದ ಕಾಂಗ್ರೆಸಿಗರು, ಅವರ ಜತೆಯಲ್ಲಿದ್ದವರನ್ನೇ ಚುನಾವಣೆಯಲ್ಲಿ ವಿರುದ್ಧವಾಗಿ ನಿಲ್ಲಿಸಿ ಬಾಬಾಸಾಹೇಬರನ್ನು ಸೋಲಿಸಿದ್ದರು. ಬಾಬಾಸಾಹೇಬರಂಥ ದಲಿತ ನಾಯಕರು ಸಂಸತ್ ಪ್ರವೇಶಿಸುವುದು ಕಾಂಗ್ರೆಸಿಗರಿಗೆ ಇಷ್ಟವಿರಲಿಲ್ಲ.

ಸಮಾಜದಲ್ಲಿದ್ದ ಅಸಮಾನತೆಯ ವಿರುದ್ಧ ಹಗಲು-ರಾತ್ರಿ ಹೋರಾಡಿದ್ದ ಬಾಬಾಸಾಹೇಬರ ರಾಜಕೀಯ ಜೀವನವನ್ನೇ ಮುಗಿಸಿದ ಕಾಂಗ್ರೆಸ್ ನಾಯಕರು ದಲಿತರ ಪರ ಮೊಸಳೆ ಕಣ್ಣೀರು ಸುರಿಸುತ್ತಾರೆ. ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೆ ದುರುಳರು ಬೆಂಕಿಯಿಟ್ಟಾಗ ಕಾಂಗ್ರೆಸಿಗರು ಪ್ರತಿಭಟಿಸಲೇ ಇಲ್ಲ. ಬಸವಣ್ಣನ ತತ್ತ್ವಗಳ ಬಗ್ಗೆ ಭಾಷಣ ಮಾಡುವವರು, ಬಸವಣ್ಣನ ಲಿಂಗಾಯತ ಧರ್ಮವನ್ನೇ ಒಡೆಯಲು ನಿಂತಿದ್ದರು. ಬಸವಣ್ಣ ಜಾತಿ ಪದ್ಧತಿಯನ್ನು ಧಿಕ್ಕರಿಸಿದ್ದರೆ, ಕಾಂಗ್ರೆಸಿಗರು ಜಾತಿಪದ್ಧತಿಯನ್ನು ಪೋಷಿಸುತ್ತಿದ್ದಾರೆ. ಬಾಬಾಸಾಹೇಬರು ೧೯೨೦ರಲ್ಲಿ ಮನುಸ್ಮೃತಿಯನ್ನು ಸುಟ್ಟ ವಿಷಯವನ್ನಷ್ಟೇ ಹೇಳುವವರು,
ಅದೇ ಬಾಬಾಸಾಹೇಬರು ನಂತರದ ದಿನದಲ್ಲಿ ‘ಮನುವಿನ ಸಮಯದಲ್ಲಿ ಜಾತಿಪದ್ಧತಿ ಇರಲೇ ಇಲ್ಲ’ ಎಂದಿದ್ದನ್ನು ಮಾತ್ರ ಹೇಳುವುದಿಲ್ಲ! ಸರ್ವಾಧಿಕಾರಿ ಹಿಟ್ಲರ್ ಯೆಹೂದಿಗಳ ಮಾರಣಹೋಮ ಮಾಡುವ ಮುನ್ನ, ಉದಯನಿಧಿ ಸ್ಟಾಲಿನ್ ಆಡಿದ ಮಾತುಗಳನ್ನೇ ಆಡಿದ್ದ, ಯೆಹೂದಿಗಳನ್ನು ‘ವೈರಸ್’, ‘ಕ್ಷಯರೋಗ’, ‘ವಿಷಕಾರಿ’ ಎಂದೆಲ್ಲ ಕರೆದಿದ್ದ. ಅಂತಿಮವಾಗಿ, ಯೆಹೂದಿಗಳ ನಿರ್ನಾಮವೇ ತನ್ನ ಗುರಿಯೆಂದು ಹೇಳಿದ್ದ. ಆತನ ಮಾದರಿಯಲ್ಲೇ ಸನಾತನ ಧರ್ಮವನ್ನು ಮಾರಣಾಂತಿಕ ರೋಗಗಳಿಗೆ ಹೋಲಿಸಿರುವ ಉದಯನಿಧಿ ಸ್ಟಾಲಿನ್, ಕೊನೆಗೆ ‘ಸನಾತನ ಧರ್ಮವನ್ನು ನಿರ್ಮೂಲನಗೊಳಿಸಬೇಕು’ ಎಂಬ ಮಾತಾಡಿದ್ದಾರೆ.

ವಿಪರ್ಯಾಸವೆಂದರೆ, ಉದಯನಿಧಿ ತಾಯಿ ಸನಾತನ ಧರ್ಮದ ಅಪ್ಪಟ ಪರಿಪಾಲಕಿ. ಕೇರಳದ ಗುರುವಾಯೂರು ದೇವಸ್ಥಾನಕ್ಕೆ ೧೧ ಲಕ್ಷ ರು. ಮೌಲ್ಯದ ಚಿನ್ನದ ಕಿರೀಟವನ್ನು ದಾನವಾಗಿ ನೀಡಿದಾಕೆ. ಪ್ರತಿವರ್ಷವೂ ದುರ್ಗಾದೇವಿಯನ್ನು ಆರಾಧಿಸಿಕೊಂಡು ಬಂದಿರುವಾಕೆ. ಈಕೆಯ ಮಗನಿಂದ ಹಿಂದೂ ಧರ್ಮವನ್ನು ನಾಶಮಾಡಬೇಕೆಂಬ ಆಶಯ ಹೊಮ್ಮಿದೆ! ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿರುವ ಸನಾತನ ಧರ್ಮಕ್ಕೆ, ತಮಿಳುನಾಡಿನಲ್ಲಿರುವ ೩೩,೦೦೦ ದೇವಸ್ಥಾನಗಳೇ ಸಾಕ್ಷಿ. ಸನಾತನ ಧರ್ಮದ ವಿರೋಧಿಗಳು ‘ಇಂಡಿಯ’ ಎಂಬ ವಿಪಕ್ಷಗಳ ಮೈತ್ರಿಕೂಟದ ಮೂಲಕ ಒಗ್ಗಟ್ಟಾಗಿ ೨೦೨೪ರ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ದಕ್ಷಿಣ ಭಾರತವನ್ನು ಪ್ರತ್ಯೇಕ ‘ದ್ರಾವಿಡ ದೇಶ’ ಮಾಡಬೇಕೆಂದು ಹೇಳಿದ್ದ ದ್ರಾವಿಡ ಪಕ್ಷಗಳು, ಇಂದು ‘ಇಂಡಿಯ’ ಹೆಸರಲ್ಲಿ ಮತ ಕೇಳುತ್ತಿವೆ. ದೇಶವನ್ನು ಒಡೆಯುವ ಮನಸ್ಥಿತಿಯವರಿಂದ ಹಿಂದೂ ಧರ್ಮದ ಬಗ್ಗೆ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅತ್ತ ಉತ್ತರದಲ್ಲಿ ಕಾಶ್ಮೀರವನ್ನು ಪ್ರತ್ಯೇಕಿಸುವ ಹುನ್ನಾರ ಹೊಂದಿರುವ ಪ್ರಮುಖ ಭಯೋತ್ಪಾದಕರ ಜತೆ ಗುರುತಿಸಿಕೊಂಡಿರುವವರು, ‘ಇಂಡಿಯ’ ಹೆಸರಲ್ಲಿ ಮತ ಕೇಳಲು ಸಿದ್ಧರಾಗಿದ್ದಾರೆ. ಮಹಾಭಾರತ ಕಾಲದಲ್ಲಿ ಪಾಂಡವರು ಮತ್ತು ಕೌರವರ ನಡುವೆ ನಡೆದ ಯುದ್ಧವು, ಧರ್ಮ ಮತ್ತು ಅಧರ್ಮದ ನಡುವೆ ನಡೆದ ಯುದ್ಧವಾಗಿತ್ತು. ಧರ್ಮದ ಪರವಾಗಿದ್ದುದು ಐವರು ಪಾಂಡವರಷ್ಟೇ, ಆದರೂ ಕೊನೆಗೆ ಸೋಲಾಗಿದ್ದು ಅಧರ್ಮಕ್ಕೇ!

೨೦೨೪ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೂಪುಗೊಂಡಿರುವ ವಿಪಕ್ಷಗಳ ಒಕ್ಕೂಟವನ್ನೊಮ್ಮೆ ಗಮನಿಸಿದರೆ, ಧರ್ಮ ಮತ್ತು ಅಧರ್ಮದ ನಡುವೆ ಕಲಿಯುಗದಲ್ಲೊಂದು ಯುದ್ಧ ನಡೆಯುವ ಲಕ್ಷಣಗಳು ಕಾಣುತ್ತಿವೆ. ದ್ರೌಪದಿಯ ಸೀರೆಯೆಳೆದ ದುಶ್ಯಾಸನನಂತೆ ಡಿಎಂಕೆ ಪಕ್ಷದ ಉದಯನಿಧಿ ಸ್ಟಾಲಿನ್ ಕಾಣುತ್ತಿದ್ದರೆ, ಅಧರ್ಮವನ್ನು ಪೋಷಿಸುವ ಅನೇಕ ಶಕುನಿಗಳೂ ಅಲ್ಲಿದ್ದಾರೆ. ಸಾಕಷ್ಟು ವರ್ಷಗಳ ಹಿಂದೆಯೇ ನಡೆದ ಪರದೇಶಿಗಳ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಂಡೇ ಬಂದಿರುವ ಸನಾತನ ಧರ್ಮವನ್ನು ಯಾರೂ ಸರ್ವನಾಶ ಮಾಡಲು ಸಾಧ್ಯವಿಲ್ಲ. ವಿದೇಶಿ ಪ್ರಾಯೋಜಕರು ಈ ಹಿಂದೆಯೂ ಇಂಥ ದಾಳಿ ನಡೆಸಲು ಯತ್ನಿಸಿ ಕೈಸುಟ್ಟುಕೊಂಡಿದ್ದಾರೆ. ಈಗಲೂ ಭಾರತ-ವಿರೋಧಿ ಗುಂಪುಗಳಿಗೆ ಬಿಲಿಯನ್‌ಗಟ್ಟಲೆ  ಹಣನೀಡಿ ಅಸ್ಥಿರತೆ ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ಸುಮಾರು ೨೦೦ ವರ್ಷಗಳ ಕಾಲ ತಮಿಳುನಾಡಿನಲ್ಲಿ ನಡೆದ
ಮಿಷನರಿಗಳ ಬ್ರೇನ್‌ವಾಷ್ ತಂತ್ರಕ್ಕೆ ಹುಟ್ಟಿಕೊಂಡ ಕರುಣಾನಿಧಿ ವಂಶದ ಕುಡಿ ಉದಯನಿಧಿ ಸ್ಟಾಲಿನ್ ಹೇಳಿದಾಕ್ಷಣ ಸನಾತನ ಧರ್ಮ ನಾಶವಾಗುವುದಿಲ್ಲ.