Thursday, 28th November 2024

ಪರಿವರ್ತನೆಯ ಹರಿಕಾರ ಅರಸು

ಸಂಸ್ಮರಣೆ

ಕೆ.ವಿ.ವಾಸು

ಜೀತದಾಳುಗಳ ವಿಮುಕ್ತಿಗಾಗಿ ಸಾಕಷ್ಟು ಶ್ರಮಿಸಿದ, ‘ಉಳುವವನಿಗೇ ಭೂಮಿ’ ಎಂಬ ಕ್ರಾಂತಿಕಾರಕ ಘೋಷಣೆಯೊಂದಿಗೆ ಕರ್ನಾಟಕದ ಮನೆಮಾತಾದ ಹಾಗೂ ಶೋಷಿತ ವರ್ಗಗಳ ದನಿಯಾದ ಹೆಗ್ಗಳಿಕೆ ದೇವರಾಜ ಅರಸರದ್ದು.

ಕರ್ನಾಟಕ ರಾಜ್ಯವನ್ನು ಆಳಿದ ಧೀಮಂತ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ದಿವಂಗತ ಡಿ.ದೇವರಾಜ ಅರಸು ಅವರ ಜನ್ಮದಿನವಾದ ಇಂದು (ಆಗಸ್ಟ್ ೨೦) ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ್ಯೋತ್ತರ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೇವರಾಜ ಅರಸುರವರ ಆಳ್ವಿಕೆ
ಹಲವಾರು ಕಾರಣಗಳಿಂದಾಗಿ ಅವಿಸ್ಮರಣೀಯವಾಗಿದೆ.

ಭೂಸುಧಾರಣೆ ಕಾಯ್ದೆಯನ್ನು ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತಂದ ಕೀರ್ತಿ ದೇವರಾಜ ಅರಸುರವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ‘ಹಾವನೂರು ಆಯೋಗ’ ರಚಿಸಿದ ಅರಸರು, ಬಡಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದರು. ಅದೇ ರೀತಿ, ಜೀತದಾಳುಗಳ ವಿಮುಕ್ತಿಗಾಗಿ ಅರಸರು ಸಾಕಷ್ಟು ಶ್ರಮಿಸಿದರು. ‘ಉಳುವವನಿಗೇ ಭೂಮಿ’ ಎಂಬ ಕ್ರಾಂತಿಕಾರಕ ಘೋಷಣೆಯೊಂದಿಗೆ ಕರ್ನಾಟಕದ ಮನೆಮಾತಾದರು. ಶೋಷಿತ ವರ್ಗಗಳ ದನಿಯಾದರು.

ರೈತಾಪಿ ವರ್ಗದ, ಕೃಷಿ ಕಾರ್ಮಿಕರ ಆಶಾಜ್ಯೋತಿಯಾದರು. ಹೀಗಾಗಿ ಅರಸುರ ವರನ್ನು ‘ಸಾಮಾಜಿಕ ಪರಿವರ್ತನೆಯ ಹರಿಕಾರ’ ಎಂದು ಕರೆಯ ಲಾಗುತ್ತದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕುಗ್ರಾಮವಾದ ಕಲ್ಲಹಳ್ಳಿಯಲ್ಲಿ ೨೦.೮.೧೯೧೫ ರಂದು ಜನಿಸಿದ ದೇವರಾಜ ಅರಸು ಅವರಿಗೆ ರಾಜ ಮನೆತನದ ನಂಟಿದ್ದರೂ ಅದಕ್ಕೇ ಅಂಟಿ ಕೊಳ್ಳದೆ ಜನರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇದು ಅವರ ಜನಪರ ಧೋರಣೆಯ ಪ್ರತೀಕವಾಗಿದೆ.

ಕರ್ನಾಟಕ ರಾಜ್ಯ ವನ್ನು ಎರಡು ಬಾರಿ ಆಳಿದ (೧೯೭೨-೭೭ ಮತ್ತು ೧೯೭೮-೮೦) ಅರಸು ತಮ್ಮ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗಗಳ ಶ್ರೇಯಸ್ಸಿ ಗಾಗಿ ದುಡಿದರು. ದಿವಂಗತ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ನೆಚ್ಚಿನ ಬಂಟನಾಗಿದ್ದ ಅವರು, ಇಂದಿರಾರ ಆಶೀರ್ವಾದದಿಂದ ೧೯೭೨ರಲ್ಲಿ ಪ್ರಪ್ರಥಮವಾಗಿ ರಾಜ್ಯದ ಮುಖ್ಯಮಂತ್ರಿಯಾದರೂ, ಮುಂದೆ ತಮ್ಮದೇ ವರ್ಚಸ್ಸನ್ನು ಬೆಳೆಸಿಕೊಂಡು ‘ಗುರುವನ್ನು ಮೀರಿಸಿದ ಶಿಷ್ಯ’ ಎನ್ನುವ ರೀತಿ ಯಲ್ಲಿ ಆಳೆತ್ತರಕ್ಕೆ ಬೆಳೆದಿದ್ದು ಗತ ಇತಿಹಾಸ. ಅರಸುರವರ ಸಂಪುಟದಲ್ಲಿ ಆಗ ಹುಚ್ಚ ಮಾಸ್ತಿಗೌಡ, ಎಚ್.ಎಂ.ಚನ್ನಬಸಪ್ಪ ಮುಂತಾದ ನಾಯಕ ರಿದ್ದು, ರಾಜ್ಯಕ್ಕೆ ದಕ್ಷ ಆಡಳಿತ ನೀಡಿದರು.

ಆದರೆ ೧೯೭೮ರಲ್ಲಿ ಸಂಭವಿಸಿದ ಕೆಲ ರಾಜಕೀಯ ಬೆಳವಣಿಗೆಗಳಿಂದಾಗಿ ದೇವರಾಜ ಅರಸು ಹಾಗೂ ಇಂದಿರಾರ ನಡುವೆ ವಿರಸ ತಲೆದೋರಿತು. ಒಂದು ಕಾಲದಲ್ಲಿ ತಮ್ಮ ಆಜ್ಞೆಯನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದ ಅರಸು, ತಮ್ಮ ಮುಂದೆ ತೊಡೆತಟ್ಟಿ ನಿಲ್ಲುವ ಉದ್ಧಟತನ ಪ್ರದರ್ಶಿಸಿದ್ದರಿಂದ ಇಂದಿರಾ ಗಾಂಧಿಯವರು ಸಹಜವಾಗಿಯೇ ಕೆರಳಿ ಕೆಂಡವಾದರು. ೧೯೭೮ರಲ್ಲಿ ಕೆ.ಎಚ್.ಪಾಟೀಲ್ ಹಾಗೂ ದೇವರಾಜ ಅರಸುರವರ ಮಧ್ಯೆ ವಿರಸ ಉಂಟಾಯಿತು.

ಮುಂದೆ ಇದೇ ವರ್ಷದಲ್ಲಿ ಮೂಲಕಾಂಗ್ರೆಸ್ ಒಡೆದು ‘ರೆಡ್ಡಿ ಕಾಂಗ್ರೆಸ್’ ಹಾಗೂ ‘ಇಂದಿರಾ ಕಾಂಗ್ರೆಸ್’ ಅಸ್ತಿತ್ವಕ್ಕೆ ಬಂದವು. ಆದರೆ ಇಂದಿರಾ ಮತ್ತು
ಅರಸರ ಬಾಂಧವ್ಯ ಬಹಳ ಕಾಲ ಉಳಿಯಲಿಲ್ಲ. ಇವರಿಬ್ಬರ ನಡುವೆ ರಾಜಕೀಯ ವಿರಸ ಉಂಟಾಗಲು ಕೆಪಿಸಿಸಿ ಅಧ್ಯಕ್ಷಸ್ಥಾನ ಮುಖ್ಯ ಕಾರಣವಾಯಿತು. ಮುಖ್ಯಮಂತ್ರಿ ಸ್ಥಾನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದ ಅರಸುರವರಿಗೆ ಅಧ್ಯಕ್ಷ ಸ್ಥಾನವನ್ನು ತೆರವುಗೊಳಿಸುವಂತೆ ಇಂದಿರಾ ಸೂಚಿಸಿ ದರು. ಆದರೆ ಅರಸು ಇದಕ್ಕೆ ಸೊಪ್ಪುಹಾಕದೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಜಾಸತ್ತಾತ್ಮಕ ವಿಧಾನದಲ್ಲೇ ನಡೆಯಬೇಕೆಂದು ಪಟ್ಟುಹಿಡಿದರು.

೧೯೭೯ರ ಜೂನ್ ೧೫ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ದೆಹಲಿಯಲ್ಲಿ ಸಭೆ ಸೇರಿ ದೇವರಾಜ ಅರಸು ನೇತೃತ್ವದ ಕೆಪಿಸಿಸಿಯನ್ನು ವಿಸರ್ಜಿಸಿತು. ೧೦ ಮಂದಿ ಸದಸ್ಯರ ‘ಅಡ್‌ಹಾಕ್’ ಅಮಿತಿ ರಚಿಸಿ, ಎಸ್. ಬಂಗಾರಪ್ಪನವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಅಲ್ಲದೆ ಜೂನ್ ೨೪ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತೆ ಸಭೆ ಸೇರಿ ದೇವರಾಜ ಅರಸು ಅವರನ್ನು ೬ ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿತು. ಇದಕ್ಕೆ ತಿರುಗೇಟು ನೀಡಿದ
ಅರಸು ತಮ್ಮ ನೇತೃತ್ವದ ಪಕ್ಷವನ್ನು ‘ಕರ್ನಾಟಕ ಕಾಂಗ್ರೆಸ್’ ಎಂದು ಕರೆಯಲು ತೀರ್ಮಾನಿಸಿದರು.

ಕರ್ನಾಟಕದ ೧೫೫ ಕಾಂಗ್ರೆಸ್ ಶಾಸಕರ ಪೈಕಿ ೧೪೦ ಮಂದಿ ಅರಸುರವರನ್ನು ಬೆಂಬಲಿಸಿದರು. ಆದರೆ ೧೯೮೦ರಲ್ಲಿ ನಡೆದ ಲೋಕಸಭಾ ಚುನಾವಣೆ ಯಲ್ಲಿ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ (ಯು) ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಇದರ ಪರಿಣಾಮವಾಗಿ ಕಾಂಗ್ರೆಸ್ಸಿನ ಬಹುತೇಕ ಶಾಸಕರು ಇಂದಿರಾ ಗಾಂಧಿಯವರೆಡೆಗೆ ತಮ್ಮ ನಿಷ್ಠೆ ಬದಲಾಯಿಸಿದರು. ಇಂದಿರಾರ ನೆಚ್ಚಿನ ಬಂಟರಾಗಿದ್ದ ಆರ್.ಗುಂಡೂರಾವ್ ಅವರು ೧೨.೧.೧೯೮೦ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕರ್ನಾಟಕ ರಾಜ್ಯದಲ್ಲಿ ‘ಅರಸು ಶಕೆ’ ಮುಕ್ತಾಯಗೊಂಡಿತು. ಇಂದಿರಾ ಮತ್ತು ಅರಸರ ವಿರಸ ಮತ್ತೆ ಪ್ರಕೋಪಕ್ಕೆ ಹೋಯಿತು. ಒಂದು ಕಡೆ ಅಧಿಕಾರ ಕಳೆದುಕೊಂಡು ಏಕಾಂಗಿಯಾಗಿದ್ದ ಅರಸುರವರನ್ನು ‘ಸರ್ಪಸುತ್ತು’ ಕಾಯಿಲೆ
ಕಾಡಲು ಪ್ರಾರಂಭಿಸಿತು.

ಇದರಿಂದಾಗಿ ತೀವ್ರ ಅನಾರೋಗ್ಯಕ್ಕೆ ಗುರಿಯಾದ ಅರಸುರವರನ್ನು ಸೌಜನ್ಯಕ್ಕಾದರೂ ಭೇಟಿಮಾಡಲು ಇಂದಿರಾ ಗಾಂಧಿ ಬರಲಿಲ್ಲ. ಮುಂದೆ ೧೯೮೨ರ ಜೂನ್‌ನಲ್ಲಿ ಅರಸರು ನಿಧನರಾದಾಗಲೂ ಅವರ ಪಾರ್ಥಿವ ಶರೀರವನ್ನು ನೋಡಲೂ ಇಂದಿರಾ ಬರಲಿಲ್ಲ. ಅದಾದ ಎರಡೇ ವರ್ಷಗಳಲ್ಲಿ ಇಂದಿರಾ ತಮ್ಮ ಅಂಗರಕ್ಷಕರಿಂದಲೇ ಕೊಲ್ಲಲ್ಪಟ್ಟರು (೩೧.೧೦.೧೯೮೪).

ಈ ರೀತಿ ದೇವರಾಜ ಅರಸರು ಕರ್ನಾಟಕದ ಓರ್ವ ಧೀಮಂತ ಮುಖ್ಯಮಂತ್ರಿಯಾಗಿ ಬಾನೆತ್ತರಕ್ಕೆ ಚಿಮ್ಮಿದರೂ ಕೊನೆಗೆ ದುರಂತ ನಾಯಕನಾಗಿ ಮೂಲೆ ಗುಂಪಾದರು. ಆದರೂ ತಮ್ಮ ಅಧಿಕಾರಾವಧಿಯಲ್ಲಿ ಅವರು ಕೈಗೊಂಡ ಕ್ರಾಂತಿಕಾರಕ ಯೋಜನೆಗಳು ಇಂದಿಗೂ ಬೇರೆ ಬೇರೆ ಹೆಸರುಗಳಲ್ಲಿ ಜೀವಂತ ವಾಗಿವೆ. ಅರಸರು ಬಹುಮುಖ್ಯ ವಾಗಿ ದೀನದಲಿತರ ಮತ್ತು ಶೋಷಿತ ವರ್ಗದ ಜನರ ಕಲ್ಯಾಣಕ್ಕಾಗಿ ಕೈಗೊಂಡ ಕಾರ್ಯಕ್ರಮಗಳು ಹಾಗೂ ಅವರು ಜಾರಿಗೆ ತಂದ ಭೂಸುಧಾರಣೆ ಕಾಯ್ದೆ, ಬಡತನದ ನಿರ್ಮೂಲನೆಗಾಗಿ ಕೈಗೊಂಡ ‘ಗರೀಬಿ ಹಠಾವೊ’ ಕಾರ್ಯ ಕ್ರಮಗಳು ಅರಸುರವರ ಹೆಸರನ್ನು ಚಿರಸ್ಥಾಯಿಗೊಳಿಸಿವೆ. ಇಂಥ ‘ದೊಡ್ಡಬುದ್ಧಿ’ ದೇವರಾಜ ಅರಸು ಇಂದು ನಮ್ಮೊಡನೆ ಇಲ್ಲವಾದರೂ, ಅವರ ನೆನಪು ಅಮರವಾಗಿದೆ.

(ಲೇಖಕರು ವಕೀಲರು)