Wednesday, 4th December 2024

ವೈದ್ಯಲೋಕದ ಸಂಶೋಧನಾ ಚೌರ್ಯ

ಹಿಂದಿರುಗಿ ನೋಡಿದಾಗ

ನಿಕೋಲಸ್ ಕಲ್ಪೆಪ್ಪರ್ ಎಂಬಾತ, ಹಿಂದೆ ‘ಕಿಂಗ್ಸ್ ಈವಿಲ್’ ಎನ್ನಲಾಗುತ್ತಿದ್ದ ಕ್ಷಯರೋಗ, ‘ದಿ ಫಾಲಿಂಗ್ ಸಿಕ್ನೆಸ್’ ಎನ್ನಲಾಗುತ್ತಿದ್ದ ಅಪಸ್ಮಾರವನ್ನು ಡಿಜಿಟಾಲಿಸ್‌ನಿಂದ ಗುಣಪಡಿಸಬಹುದು ಎಂದಿದ್ದ. ಆದರೆ ಡಿಜಿಟಾಲಿಸ್ ಇವನ್ನು ಗುಣಪಡಿಸುವ ಬದಲಿಗೆ ತೊಂದರೆ ಕೊಡುತ್ತದೆ ಎನ್ನಲಾಗುತ್ತದೆ.

ನಮ್ಮ ಪೂರ್ವಜರು ಆರಂಭಿಸಿದ ವಿವಿಧ ಚಿಕಿತ್ಸಾ ಮಾರ್ಗಗಳಲ್ಲಿ ಸಸ್ಯವೈದ್ಯಕೀಯವು ಮುಖ್ಯವಾದದ್ದು. ಆ ಕಲಿಕೆಯು ಸರಳವಾಗಿರಲಿಲ್ಲ. ಕಲಿಕಾ
ಪಥದಲ್ಲಿ ಅವರು ಅನೇಕ ತಪ್ಪುಗಳನ್ನು ಮಾಡಿದರು. ಒಂದು ಕಾಯಿಲೆಯನ್ನು ಗುಣಪಡಿಸಬಹುದು ಎಂಬ ನಿರೀಕ್ಷೆಯಲ್ಲಿ ತಪ್ಪಾದ ಸಸ್ಯಗಳನ್ನು ಬಳಸಿದರು. ಪರಿಣಾಮ, ಅನೇಕರು ಸಾವು-ನೋವು ಅನುಭವಿಸಿದರು. ರೋಗವೊಂದನ್ನು ಗುಣಪಡಿಸಬಲ್ಲ ಸಾಮರ್ಥ್ಯವಿರುವ ಸಸ್ಯವನ್ನು ಗುರುತಿಸಿದ
ಮೇಲೂ ಅವರ ಚಿಕಿತ್ಸೆ ಸುಲಭವಾಗಲಿಲ್ಲ. ಆ ಸಸ್ಯದಲ್ಲಿ ಯಾವ ಔಷಧಿಯ ಗುಣಗಳಿವೆ, ಯಾವ ಭಾಗದಲ್ಲಿವೆ, ಆ ಭಾಗವನ್ನು ಬಳಸುವುದು ಹೇಗೆ, ದಿನಕ್ಕೆಷ್ಟು ಸಲ ಎಷ್ಟು ದಿನಗಳವರೆಗೆ ಔಷಧ ಸೇವಿಸಬೇಕು, ಮಿತಿಮೀರಿ ಸೇವಿಸಿದರೆ ಯಾವೆಲ್ಲಾ ವಿಷಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅವನ್ನು
ಗುರುತಿಸುವುದು ಹೇಗೆ, ಯಾವಾಗ ಆ ಔಷಧ ಸೇವನೆಯನ್ನು ಪೂರ್ಣ ನಿಲ್ಲಿಸಬೇಕು? ಇತ್ಯಾದಿ ಪ್ರಶ್ನೆಗಳು ಅವರೆದುರು ನಿಂತಿದ್ದವು.

ಈ ಎಲ್ಲಕ್ಕೂ ಅವರು ಮತ್ತೆ ಮತ್ತೆ ತಪ್ಪು-ಒಪ್ಪುಗಳ (ಟ್ರಯಲ್ ಆಂಡ್ ಎರರ್) ಪ್ರಯೋಗವನ್ನು ಮಾಡಿ, ನಿಗದಿತ ಸಸ್ಯೌಷಧವನ್ನು ಪರಿಣಾಮಕಾರಿ
ಯಾಗಿ, ಸುರಕ್ಷಿತವಾಗಿ ಪ್ರಯೋಗಿಸುವ ಕಲೆಯನ್ನು ಕೊನೆಗೂ ಕೈಗೂಡಿಸಿಕೊಂಡರು. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಡಿಜಿಟಾಲಿಸ್’ ಎಂಬ ಔಷಧ ವನ್ನೊಳಗೊಂಡ ‘ಡಿಜಿಟಾಲಿಸ್ ಪರ್ಪ್ಯೂರ’ ಎಂಬ ಸಸ್ಯ. ಮಿದುಳು, ಹೃದಯ, ಶ್ವಾಸಕೋಶ, ಯಕೃತ್ತು ಮತ್ತು ಮೂತ್ರಪಿಂಡಗಳು ನಮ್ಮ ದೇಹದ ಜೀವಾಧಾರಕ ಅಂಗಗಳು. ನಾವು ಆರೋಗ್ಯವಾಗಿರಬೇಕಾದರೆ ಈ ಐದೂ ಸಕ್ಷಮವಾಗಿದ್ದು ದೈನಂದಿನ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿರ ಬೇಕು.

ಇವುಗಳಲ್ಲಿ ಯಾವುದಾದರೊಂದು ಅಂಗ ಈ ನಿಟ್ಟಿನಲ್ಲಿ ವಿಫಲವಾದರೆ ಉಳಿದವುಗಳ ಮೇಲೆ ಅದರ ನೇರ ಪರಿಣಾಮವಾಗುತ್ತದೆ. ಹೃದಯ ಕವಾಟ ಗಳಲ್ಲಿ ದೋಷವಿದ್ದಾಗ, ಹೃದಯದ ಸ್ನಾಯು ದುರ್ಬಲವಾಗಿದ್ದಾಗ, ಹೃದಯಗತಿಯನ್ನು ನಿಯಂತ್ರಿಸುವ ವಿದ್ಯುತ್ ವ್ಯವಸ್ಥೆ ಸಮರ್ಪಕ ವಾಗಿಲ್ಲ ದಿದ್ದಾಗ ಹೃದಯವು ವಿ-ಲವಾಗಬಹುದು. ಮದ್ಯವ್ಯಸನಿಗಳು, ಕ್ಷಯರೋಗಿಗಳು, ಗಂಭೀರ ಯಕೃತ್ ರೋಗ ಪೀಡಿತರಲ್ಲಿ, ಮೂತ್ರಪಿಂಡಗಳು ವಿಫಲ ವಾಗುತ್ತಿರುವವರಲ್ಲಿ ದೇಹದಲ್ಲಿನ ನೀರು ಕಾಲ ಕಾಲಕ್ಕೆ ಸರಿಯಾಗಿ ವಿಸರ್ಜನೆಯಾಗದೆ ನೀರಿನ ಸಂಗ್ರಹ ಹೆಚ್ಚಾಗುತ್ತದೆ.

ಹೃದಯದಲ್ಲಿ ನೀರು ತುಂಬಿದಾಗ ಅದು ಸಮರ್ಪಕವಾಗಿ ಮಿಡಿಯಲಾರದು. ಶ್ವಾಸಕೋಶಗಳಲ್ಲಿ ನೀರು ತುಂಬಿದಾಗ ಉಸಿರಾಟ ಕಷ್ಟವಾಗಬಹುದು. ಉದರದಲ್ಲಿ ನೀರುತುಂಬಿದಾಗ ಮುಂದೆ ಹೆಜ್ಜೆಯಿಡುವುದೇ ಕಷ್ಟವಾಗಬಹುದು. ಮುಖ, ಪಾದ, ಮೈ ಊದಿಕೊಳ್ಳಬಹುದು. ಈ ಸ್ಥಿತಿಯನ್ನು ‘ಡ್ರಾಪ್ಸಿ’ ಎನ್ನುತ್ತಿದ್ದರು. ಇದನ್ನು ಕನ್ನಡದಲ್ಲಿ ‘ಜಲೋದರ’ ಅಥವಾ ‘ಶೋಭೆ’ ಎನ್ನಬಹುದು. ಇಂಥ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆಯಿರಲಿಲ್ಲ. ಇಂಥ ಸಂದಿಗ್ಧ ಘಟ್ಟದಲ್ಲಿ ವಿಲಿಯಂ ವಿದರಿಂಗ್ ಎಂಬ ಇಂಗ್ಲಿಷ್ ಸಸ್ಯವಿಜ್ಞಾನಿ, ಭೂಗರ್ಭವಿಜ್ಞಾನಿ, ರಸಾಯನ ವಿಜ್ಞಾನಿ, ಸಂಶೋಧಕ ಮತ್ತು ವೈದ್ಯ ಡಿಜಿಟಾಲಿಸ್ ಪರ್ಪ್ಯೂರ ಎಂಬ ಸಸ್ಯದ ಮಹತ್ವವನ್ನು ಕಂಡು, ಮೇಲೆ ವಿವರಿಸಿದ ತುಂಬಿದ ಮೈನೀರನ್ನು ಹೊರಹರಿಸುವ ಪರಿಣಾಮಕಾರಿ ಚಿಕಿತ್ಸೆ ಯನ್ನು ರೂಪಿಸಿದ.

ಈತನ ಸಂಶೋಧನೆಯ ಫಲವಾಗಿ ದೊರೆತ ಡಿಜಿಟಾಲಿಸ್ ಔಷಧ, ಆಧುನಿಕ ವೈದ್ಯಚಿಕಿತ್ಸಾ ಪದ್ಧತಿಯಲ್ಲಿ ಇಂದಿಗೂ ಬಳಕೆಯಲ್ಲಿರುವ ಪ್ರಮುಖ ಔಷಧವಾಗಿದೆ. ‘ಡಿಜಿಟಾಲಿಸ್’ ಎಂಬ ಕುಲಕ್ಕೆ ಸೇರಿದ, ‘ಫಾಕ್ಸ್‌ಗ್ಲೋವ್’ ಎಂಬ ಸರ್ವಸಾಮಾನ್ಯ ಹೆಸರಿನ ಹೂವು ಪ್ರಧಾನವಾಗಿ ಯುರೋಪ್, ಪಶ್ಚಿಮ ಏಷ್ಯಾ ಮತ್ತು ವಾಯವ್ಯ ಆಫ್ರಿಕ ಖಂಡಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದರಲ್ಲಿ ಸುಮಾರು ೨೦ ಪ್ರಭೇದಗಳಿವೆ. ನಮ್ಮಲ್ಲಿ ಸ್ವಾಭಾವಿಕವಾಗಿ
ಬೆಳೆಯದ ಈ ಗಿಡಕ್ಕೆ ನಮ್ಮದೇ ಆದ ಹೆಸರಿಲ್ಲ. ಇದರ ಹೂವು ಗಂಟೆಯನ್ನು ಹೋಲುವುದರಿಂದ, ಕನ್ನಡದಲ್ಲಿ ‘ಘಂಟಾ ಪುಷ್ಪಿ’ ಎನ್ನುವ ಪ್ರಯತ್ನವು ನಡೆದಿದೆ.

ಅಲಂಕಾರಿಕ ಪುಷ್ಪವಾಗಿ ಜನಪ್ರಿಯವಾಗಿರುವ ಘಂಟಾಪುಷ್ಪಿ, ಅಚ್ಚಬಿಳಿ ಬಣ್ಣದಿಂದ ಹಿಡಿದು, ಗುಲಾಬಿ, ಊದಾ ಅಥವಾ ಕೆನ್ನೀಲಿ ಬಣ್ಣದವರೆಗೆ ಹಲವು ಬಣ್ಣಗಳಲ್ಲಿ ನಳನಳಿಸುತ್ತದೆ. ವೈದ್ಯಕೀಯವಾಗಿ ‘ಡಿಜಿಟಾಲಿಸ್ ಪರ್ಪ್ಯೂರ’ ಮತ್ತು ‘ಡಿಜಿಟಾಲಿಸ್ ಲನಾಟ’ ಮುಖ್ಯವಾದವು. ಲ್ಯಾಟಿನ್ ಭಾಷೆಯ ಡಿಜಿಟಸ್ ಎಂಬ ಶಬ್ದ ‘ಡಿಜಿಟಾಲಿಸ್ ’ಗೆ ಮೂಲ. ಡಿಜಿಟಸ್ ಎಂದರೆ ಬೆರಳು ಎಂದರ್ಥ. ಲಿಯೋಹಾರ್ಟ್ ಫಾಕ್ಸ್ ಎಂಬ ಜರ್ಮನ್ ಸಸ್ಯವಿಜ್ಞಾನಿ-ವೈದ್ಯ ಈ ಗಿಡವನ್ನು ಗುರುತಿಸಿ ಡಿಜಿಟಾಲಿಸ್ ಎಂಬ ಹೆಸರಿತ್ತ.

ಫಾಕ್ಸ್‌ಗ್ಲೋವ್ ಎಂಬ ಜನಪ್ರಿಯ ಹೆಸರಿಗೆ ಕಾರಣ ಒಂದು ಜಾನ ಪದ ನಂಬಿಕೆ. ನರಿಗಳು ತಮ್ಮ ಕಾಲುಗಳಿಗೆ ಗವಸು ತೊಟ್ಟು ನಡೆವ ಕಾರಣ, ಕಾಲುಗಳ ಶಬ್ದ ಕೇಳುವುದಿಲ್ಲ ಎನ್ನುವ ಕಥೆ. ಕೆಲವೆಡೆ ಇದಕ್ಕೆ ‘ವಿಚ್ಸ್ ಗ್ಲೋವ್’, ಮಾಟಗಾತಿಯ ಕೈಗವಸು ಎಂಬರ್ಥದ ಹೆಸರು ಬರಲು ಕಾರಣ ಅದರ ವಿಷಲಕ್ಷಣ.
ಭೂಮಿ ಮೇಲಿನ ಪ್ರತಿ ಸಸ್ಯಕ್ಕೂ ಒಂದಲ್ಲ ಒಂದು ವೈದ್ಯಕೀಯ ಉಪಯೋಗವಿರುತ್ತದೆ ಎಂಬ ನಂಬಿಕೆ ನಮ್ಮದು. ಹಾಗಾಗಿ ನಮ್ಮ ಪೂರ್ವಜರು ಡಿಜಿಟಾಲಿಸ್ ಸಸ್ಯದಲ್ಲೂ ವೈದ್ಯಕೀಯ ಗುಣಲಕ್ಷಣಗಳಿರಬೇಕೆಂದು ಇದನ್ನು ಹಲವು ಚಿಕಿತ್ಸೆಗಳಲ್ಲಿ ಪ್ರಯೋಗಿಸಿದರು. ನಿಕೋಲಸ್ ಕಲ್ಪೆಪ್ಪರ್
ಎಂಬ ಇಂಗ್ಲಿಷ್ ವೈದ್ಯ ೧೬೫೨ರಲ್ಲಿ ಬರೆದ ‘ದಿ ಇಂಗ್ಲಿಷ್ ಫಿಸಿಷಿಯನ್’ ಎಂಬ ಮೂಲಿಕಾ ಚಿಕಿತ್ಸಾ ಗ್ರಂಥದಲ್ಲಿ, ‘ಡಿಜಿಟಾಲಿಸ್ ಹೊಸ ಮತ್ತು ಹಳೆಯ ಗಾಯಗಳನ್ನು ಗುಣಪಡಿಸುತ್ತದೆ’ ಎಂದ. ಇದನ್ನು ಭೇದಿಕಾರಕವಾಗಿ, ಅಂದು ‘ಕಿಂಗ್ಸ್ ಈವಿಲ್’ ಎನ್ನಲಾಗುತ್ತಿದ್ದ ಕ್ಷಯರೋಗವನ್ನು ಹಾಗೂ ‘ದಿ
ಫಾಲಿಂಗ್ ಸಿಕ್ನೆಸ್’ ಎನ್ನಲಾಗುತ್ತಿದ್ದ ಅಪಸ್ಮಾರವನ್ನು ಡಿಜಿಟಾಲಿಸ್‌ನಿಂದ ಗುಣಪಡಿಸಬಹುದೆಂದು ದಾಖಲಿಸಿದ.

ಆದರೆ ಡಿಜಿಟಾಲಿಸ್ ಈ ಅನಾರೋಗ್ಯಗಳನ್ನು ಕಿಂಚಿತ್ತೂ ಗುಣಪಡಿಸಲಾರದು, ಬದಲಿಗೆ ಸಾಕಷ್ಟು ತೊಂದರೆ ಕೊಡುತ್ತದೆ ಎಂಬುದು ನಮಗಿಂದು ತಿಳಿದಿದೆ. ಇಂಗ್ಲೆಂಡಿನ ಶ್ರೋಪ್‌ಷೈರ್ ಎಂಬಲ್ಲಿ ಮಾರ್ಚ್ ೧೭, ೧೭೪೧ರಲ್ಲಿ ಜನಿಸಿದ ವಿಲಿಯಂ ವಿದರಿಂಗ್, ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯಶಿಕ್ಷಣವನ್ನು ಪೂರೈಸಿದ. ಅಸ್ತಮಾ ಪೀಡಿತ ೫೦ ವರ್ಷದ ವ್ಯಕ್ತಿಯೊಬ್ಬನಿಗೆ ಡಿಜಿಟಾಲಿಸ್ ಸಸ್ಯದ ಕಷಾಯವನ್ನು ಈತ ನೀಡಿದ. ಕಷಾಯ ಸೇವಿಸಿದ ಮೇಲೆ, ಮೂತ್ರವಿಸರ್ಜನೆ ಅಧಿಕವಾಗಿ ಮೈಯಲ್ಲಿ ಸಂಗ್ರಹವಾಗಿದ್ದ ಸಾಕಷ್ಟು ನೀರಿನಂಶ ಹೊರಹರಿದು ಅವನು ಸುಲಭವಾಗಿ ಉಸಿರಾಡುವಂತಾಯಿತು.

ಗುಡಾಣದ ಹೊಟ್ಟೆ ಕರಗಿತು. ೧೦ ದಿನಗಳ ಚಿಕಿತ್ಸೆಯ ನಂತರ ಕಳೆದುಹೋಗಿದ್ದ ಹಸಿವು ಮರುಕಳಿಸಿತು. ಅಂದು ‘ಡ್ರಾಪ್ಸಿ’ ಎನ್ನಲಾಗುತ್ತಿದ್ದ ಕಾಲಿನ ಊತ ಈ ಡಿಜಿಟಾಲಿಸ್ ಚಿಕಿತ್ಸೆಯಿಂದ ‘ಗುಣಮುಖ’ವಾಗಲಾರಂಭಿಸಿತು. ಮೈಯಲ್ಲಿ ಅಸಹಜವಾಗಿ ಸಂಗ್ರಹವಾಗಿರುವ ನೀರಿನಂಶವನ್ನು ಡಿಜಿಟಾಲಿಸ್ ಮೂಲಕ ತಗ್ಗಿಸಬಹುದು ಎಂಬುದು ವಿದರಿಂಗ್‌ಗೆ ಹೇಗೆ ತಿಳಿಯಿತು ಎಂಬ ಬಗ್ಗೆ ಒಂದು ದಂತಕಥೆಯಿದೆ. ಶ್ರೋಪ್‌ಷೈರಿನಲ್ಲಿ ‘ಮದರ್ ಹಟ್ಟನ್’ ಎಂಬ
ಅಡಗೂಲಜ್ಜಿಯಿದ್ದಳಂತೆ. ನಾರುಬೇರಿನ ಮನೆಮದ್ದು ನೀಡುತ್ತಿದ್ದ ಈಕೆ ಶೋಭೆಯನ್ನು ಗುಣಪಡಿಸಲು ೨೦ ಮೂಲಿಕೆಗಳಿದ್ದ ಔಷಧವನ್ನು ತಯಾರಿಸು ತ್ತಿದ್ದಳು. ಅದನ್ನು ಸೇವಿಸಿದವರ ಶರೀರದ ಊತ ತಗ್ಗುತ್ತಿತ್ತು.

ಈಕೆಯನ್ನು ಭೇಟಿಯಾದ ವಿದರಿಂಗ್ ಆ ಮೂಲಿಕೆಗಳ ಮಾಹಿತಿ ಸಂಗ್ರಹಿಸಿ, ಅವುಗಳಲ್ಲಿ ಡಿಜಿಟಾಲಿಸ್ ಪ್ರಧಾನವಾದದ್ದು ಎಂದು ಗುರುತಿಸಿದ. ಡಿಜಿಟಾಲಿಸ್ಸನ್ನು ಆಯ್ಕೆ ಮಾಡಿಕೊಂಡು ಅದರ ಕಷಾಯದ ಪರಿಣಾಮವನ್ನು ಸ್ವತಂತ್ರವಾಗಿ ಅಧ್ಯಯನ ಮಾಡಿದ. ಆಧುನಿಕ ವೈದ್ಯವಿಜ್ಞಾನದ ಮಹೌಷಧಗಳಲ್ಲಿ ಒಂದಾದ ಡಿಜಿಟಾಲಿಸ್ಸನ್ನು ಕಂಡುಹಿಡಿಯಲು ನೆರವಾದ. ಹೀಗೆ ದಂತಕಥೆ ಮುಂದುವರಿಯುತ್ತದೆ. ಈಗ ಅನೇಕ ವೈದ್ಯ ಇತಿಹಾಸ ಕಾರರು ಈ ಕಥೆಯಲ್ಲಿ ಹುರುಳಿಲ್ಲ ಎನ್ನುವುದುಂಟು. ಮುಂದೆ ಪಾರ್ಕ್-ಡೇವಿಸ್ ಕಂಪನಿ ಡಿಜಿಟಾಲಿಸ್ ಔಷಧವನ್ನು ತಯಾರಿಸಿ ಮಾರಾಟ ಮಾಡಿತು.

ಔಷಧಕ್ಕೆ ಪ್ರಚಾರ ನೀಡಲು ಮದರ್ ಹಟ್ಟನ್ ಕಥೆ ಕಟ್ಟಿ, ಆಕೆಯಿಂದ ವಿದರಿಂಗ್ ಮಾಹಿತಿ ಸಂಗ್ರಹಿಸುವ ವರ್ಣಚಿತ್ರವನ್ನು ರಚಿಸಿ ಮಾರುಕಟ್ಟೆಗೆ ಬಿಟ್ಟಿತು ಎನ್ನುತ್ತಾರೆ. ಡಿಜಿಟಾಲಿಸ್ ಉಪಯುಕ್ತತೆಯ ಬಗ್ಗೆ ೯ ವರ್ಷ ಅಧ್ಯಯನ ಮಾಡಿದ ವಿದರಿಂಗ್, ಬ್ರಿಟನ್ನಿನಾದ್ಯಂತ ೬೦೦೦ ಮೈಲು ಕುದುರೆ ಮೇಲೆ ಸಂಚರಿಸಿದ, ೧೫೬ ವೈದ್ಯಕೀಯ ಪ್ರಕರಣಗಳನ್ನು ಅಧ್ಯಯನ ಮಾಡಿ ಚಿಕಿತ್ಸೆ ನೀಡಿದ, ಚಿಕಿತ್ಸೆಯ ವಿವರಗಳನ್ನೆಲ್ಲ ದಾಖಲಿಸಿದ. ಕೊನೆಗೆ ‘ಆನ್
ಅಕೌಂಟ್ ಆಫ್ ದಿ ಫಾಕ್ಸ್ ಗ್ಲೋವ್ ಆಂಡ್ ಸಮ್ ಆಫ್ ದಿ ಮೆಡಿಕಲ್ ಯೂಸಸ್-ಪ್ರಾಕ್ಟಿಕಲ್ ರಿಮಾರ್ಕ್ಸ್ ಆನ್ ಡ್ರಾಪ್ಸಿ ಆಂಡ್ ಅದರ್ ಕೇಸಸ್’ ಎಂಬ ಗ್ರಂಥವನ್ನು ಬರೆದ.

ಇದರಲ್ಲಿ ಡಿಜಿಟಾಲಿಸ್ಸನ್ನು ಉಪಯೋಗಿಸಿ ‘ಅಸೈಟಿಸ್, ಅನಾಸಾರ್ಕ ಮತ್ತು ಹೈಡ್ರಾಪ್ಸ್ ಪೆಕ್ಟೋರಿಸ್’ ಕಾಯಿಲೆಗಳನ್ನು ಗುಣಪಡಿಸಬಹುದೆಂದ. ಡಿಜಿಟಾ ಲಿಸ್ ಮೂತ್ರ ಪ್ರಚೋದನಕಾರಿ ಎಂದು ಭಾವಿಸಿದ್ದ ಈತ ತನ್ನ ಅಭಿಪ್ರಾಯವನ್ನು ಬದಲಿಸಿದ. ‘ಡಿಜಿಟಾಲಿಸ್ ಹೃದಯಮಿಡಿತವನ್ನು ಪ್ರಭಾವಿಸುತ್ತದೆ, ಮಿಡಿತದ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯ ಚುರುಕಾಗಿ ಕೆಲಸ ಮಾಡುವುದರಿಂದ ಶರೀರದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ನೀರು ಹೊರಹರಿಯು ತ್ತದೆ. ಯಾವುದೇ ಔಷಽಯಲ್ಲಿ ಇಂಥ ಗುಣಲಕ್ಷಣ ನನಗೆ ಕಂಡಿಲ್ಲ’ ಎಂದ.

ಡಿಜಿಟಾಲಿಸ್ ಸಸ್ಯದಲ್ಲಿ ‘ಕಾರ್ಡಿಯಾಕ್ ಗ್ಲೈಕೋಸೈಡ್ಸ್’ ವರ್ಗಕ್ಕೆ ಸೇರಿದ ಹಲವು ರಾಸಾಯನಿಕಗಳಿವೆ. ಡಿಗಾಕ್ಸಿನ್, ಡಿಜಿಟಾಕ್ಸಿನ್, ಅಸಿಟೈಲ್ ಡಿಗಾಕ್ಸಿನ್, ಅಸಿಟೈಲ್ ಡಿಜಿಟಾಕ್ಸಿನ್, ಡೆಸ್ಲಾನೋಸೈಡ್, ಮೆಟಿಲ್ ಡಿಗಾಕ್ಸಿನ್, ಲನಾಟೋಸೈಡ್-ಸಿ ಇತ್ಯಾದಿ. ಇವುಗಳಲ್ಲಿ ಮುಖ್ಯವಾದದ್ದು ಡಿಗಾಕ್ಸಿನ್. ಹೃದಯ ವೈಫಲ್ಯ ಮತ್ತು ಹೃದಯ ಮಿಡಿತದ ವೈಪರೀತ್ಯವನ್ನು ತಹಬಂದಿಗೆ ತರಲು ಇದನ್ನು ಬಳಸುವುದುಂಟು. ಇದರ ವಿಶೇಷವೆಂದರೆ ಇದನ್ನು ಹಿತ-ಮಿತವಾಗಿ ಬಳಸಿದರೆ ವೈದ್ಯಕೀಯವಾಗಿ ಉಪಯುಕ್ತವಾಗುತ್ತದೆ.

ಮಿತಿಮೀರಿದರೆ ಅಹಿತಕರ ಪಾರ್ಶ್ವಪರಿಣಾಮಗಳಾಗುತ್ತವೆ. ಈ ವಿಷಯ ವಿದರಿಂಗ್‌ಗೆ ತಿಳಿದಿತ್ತು. ಹಾಗಾಗಿ ಡಿಜಿಟಾಲಿಸ್ ಕಷಾಯ ಬಳಕೆಯನ್ನು ಯಾವಾಗ ನಿಲ್ಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದ. ಇದು ಅವನ ಅಧ್ಯಯನಶೀಲತೆ, ತರ್ಕ ಮತ್ತು ಕಾಳಜಿಯ ಪ್ರತೀಕವಾಗಿದೆ. ಮೊದಲು
ರೋಗಿಗಳಿಗೆ ‘ವಾಕರಿಕೆ ಅಥವಾ ವಾಂತಿಯ ಲಕ್ಷಣಗಳು ತಲೆದೋರುವವರೆಗೆ ಇದನ್ನು ಬಳಸಬಹುದು. ವಾಕರಿಕೆಯ ಮೊದಲ ಲಕ್ಷಣ ಕಾಣುತ್ತಿದ್ದಂತೆ ನಿಲ್ಲಿಸಿಬಿಡು’ ಎಂದ. ನಂತರ ‘ವಿನಾಕಾರಣ ಭೇದಿಯಾಗಿ ಅಸ್ವಸ್ಥತೆಯ ಅನುಭವವಾದರೂ ಇದನ್ನು ನಿಲ್ಲಿಸಬೇಕು’ ಎಂದು ಮಾರ್ಗದರ್ಶನ ನೀಡಿದ.

ಡಿಜಿಟಾಲಿಸ್ ನಾಡಿಮಿಡಿತವನ್ನು ಮಂದಗೊಳಿಸುವುದನ್ನು ಗಮನಿಸಿದ. ಹಾಗಾಗಿ ೩ನೇ ಸಲ ಅವನು ‘ಮೂತ್ರವಿಸರ್ಜನೆ ಸರಾಗವಾಗಿ ಆಗುತ್ತಿರುವವರೆಗೆ ಬಳಸಬಹುದು. ವಾಕರಿಕೆ ಅಥವಾ ವಾಂತಿ ಯಾದರೆ, ಅಸ್ವಸ್ಥತೆ ಹಾಗೂ ಭೇದಿಯಾದರೆ ಇಲ್ಲವೇ ತಲೆಸುತ್ತು, ಕಣ್ಣು ಮಂಜಾಗುವುದು, ನೋಟವು ಹಳದಿ
ಅಥವಾ ಹಸಿರು ಬಣ್ಣಕ್ಕೆ ಬದಲಾಗುವುದು ಕಂಡುಬಂದರೂ ಔಷಧ ಸೇವನೆಯನ್ನು ತಕ್ಷಣ ನಿಲ್ಲಿಸಬೇಕು’ ಎಂದ. ಡಿಜಿಟಾಲಿಸ್ಸನ್ನು ಸೇವಿಸುವಾಗ ನಾಡಿಮಿಡಿತದ ಪ್ರಮಾಣ ನಿಮಿಷಕ್ಕೆ ೩೫ರಷ್ಟು ಕಡಿಮೆ ಇರುವುದನ್ನು ಗಮನಿಸಿದ. ಹಾಗೆಯೇ ಬಿಟ್ಟರೆ ಚರ್ಮ ತಣ್ಣಗಾಗಿ ಸೆಳವು ಬಂದು, ವ್ಯಕ್ತಿ
ಕೋಮಾಕ್ಕೆ ಹೋಗಿ, ಮರಣಿಸುವುದನ್ನೂ ದಾಖಲಿಸಿದ.

ಇವೆಲ್ಲವೂ ಡಿಜಿಟಾಲಿಸ್ಸಿನ ಅಡ್ಡ ಪರಿಣಾಮಗಳು ಎನ್ನುವುದು ನಮಗೆ ತಿಳಿದಿದೆ. ಯಾವುದೇ ಆಧುನಿಕ ಪ್ರಯೋಗಾಲಯದ ನೆರವಿಲ್ಲದ ದಿನಗಳಲ್ಲಿ ವಿದರಿಂಗ್ ತನ್ನ ಅನುಭವಜನ್ಯ ತಿಳಿವಿನಿಂದ ಯಾವಾಗ ಔಷಧ ಸೇವನೆ ನಿಲ್ಲಿಸಬೇಕು ಎಂಬ ಬಗ್ಗೆ ಹೇಳುತ್ತಿದ್ದುದು ಶ್ಲಾಘನೀಯ. ವಿದರಿಂಗ್‌ನನ್ನು ಕ್ಷಯ
ಭಾದಿಸಿದ್ದರಿಂದ ೫೮ನೇ ವರ್ಷಕ್ಕೇ ಮರಣಿಸಿದ. ಡಿಜಿಟಾಲಿಸ್ಸಿಗೆ ಸಂಬಂಧಿಸಿ ಒಂದು ಶೈಕ್ಷಣಿಕ ಕೃತಿಚೌರ್ಯ ದಾಖಲಾಗಿದೆ. ಎರಾಸ್ಮಸ್ ರಾಬರ್ಟ್ ಡಾರ್ವಿನ್ ಓರ್ವ ಇಂಗ್ಲಿಷ್ ವೈದ್ಯ. ಈತನ ಮೊಮ್ಮೊಗನೇ ಜೀವವಿಕಾಸ ಸಿದ್ಧಾಂತವನ್ನು ಮಂಡಿಸಿದ ಚಾರ್ಲ್ಸ್ ಡಾರ್ವಿನ್. ಈತ ೧೭೮೫ರಲ್ಲಿ ‘ಆನ್ ಅಕೌಂಟ್ ಆಫ್ ಸಕ್ಸಸ್ ಫುಲ್ ಯೂಸ್ ಆಫ್ ಫಾಕ್ಸ್ ಗ್ಲೋವ್ ಇನ್ ಸಮ್ ಡ್ರಾಪ್ಸೀಸ್ ಆಂಡ್ ಇನ್ ಪಲ್ಮನರಿ ಕನ್ಸಂಪ್ಷನ್’ ಎಂಬ ಪ್ರಬಂಧ ಬರೆದು ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿಗೆ ಸಲ್ಲಿಸಿದ. ಈ ಘಟನೆಯು ಎರಾಸ್ಮಸ್ ಡಾರ್ವಿನ್, ಅವನ ಮಗ ರಾಬರ್ಟ್ ಡಾರ್ವಿನ್ ಹಾಗೂ ವಿದರಿಂಗ್ ನಡುವೆ ತೀವ್ರ ಘರ್ಷಣೆಗೆ ಎಡೆಮಾಡಿಕೊಟ್ಟಿತು.

ಇದು ವೈದ್ಯಕೀಯ ಕ್ಷೇತ್ರದ ಶೈಕ್ಷಣಿಕ ಕೃತಿಚೌರ್ಯಕ್ಕೆ ಒಂದು ಉದಾಹರಣೆಯಾಗಿಬಿಟ್ಟಿತು. ಹೃದಯವೈಫಲ್ಯ ಮತ್ತು ಹೃದಯ ಮಿಡಿತ ವೈಪರೀತ್ಯವನ್ನು
ನಿಗ್ರಹಿಸಲು ಬಳಸುವ ಡಿಜಿಟಾಲಿಸ್ಸನ್ನು ಮೊದಲ ಬಾರಿಗೆ ವಿದರಿಂಗ್ ಗಮನಿಸಿ ಅಧ್ಯಯನ ಮಾಡಿದ ಎನ್ನುವ ಸತ್ಯವನ್ನು ಇಂದಿನ ವಿದ್ವತ್ ಲೋಕ ಒಪ್ಪಿದೆ.