Monday, 25th November 2024

Vinay Khan Column: ನೆಹರು ನೀತಿಯಿಂದ ಓಂ ಶಾಂತಿ, ಶಾಂತಿ, ಶಾಂತಿಃ…

ಬುಲೆಟ್‌ ಪ್ರೂಫ್‌

ವಿನಯ್‌ ಖಾನ್

ಪ್ರಪಂಚದ ಯಾವ ಪ್ರಾಣಿಯೂ ತನ್ನ ಬಲೆಯನ್ನು ಕಂಡುಕೊಂಡಿಲ್ಲ. ಇಲಿ ತನಗಾಗಿ ಬೋನನ್ನು ಕಂಡು ಹಿಡಿಯ ಲಿಲ್ಲ. ಆದರೆ, ಮನುಷ್ಯ ಮಾತ್ರ ತನ್ನನ್ನೇ ತಾನು ಕೊಂದುಕೊಳ್ಳಲು ಆಯುಧ, ಪರಮಾಣು ಬಾಂಬ್‌ಗಳನ್ನು ಸೃಷ್ಟಿಸಿ ಕೊಂಡಿದ್ದಾನೆ’ ಎಂಬ ಮಾತಿದೆ. ಆ ಮಾತು ಆಗಾಗ ನಿಜವೂ ಆಗುತ್ತಿದೆ. ವಿಶ್ವಯುದ್ಧ 1,2 ರ ನಂತರ ಈಗ ವಿಶ್ವಯುದ್ಧ ಮೂರರ ಮಾತು ಕೇಳಿಬರುತ್ತಿದೆ. ವಿಶ್ವಯುದ್ಧ 2ರ ನಂತರ ಹುಟ್ಟಿದ ವಿಶ್ವಸಂಸ್ಥೆ ಈಗ ನಾಮ್‌ಕೇ ವಾಸ್ಥೆಯಾಗಿಯೇ ಉಳಿದಿದೆ. ಇನ್ನೂ ವಿಶ್ವದ ಸೂಪರ್‌ಪವರ್ ನೇಷನ್ ಎನ್ನಿಸಿಕೊಂಡಿರುವ ದೇಶಗಳು ಹೊಸ ವಿಶ್ವಯುದ್ಧಕ್ಕೆ ಹೊಸ ಬಟ್ಟೆ ಹಾಕಿ ತಯಾರಾಗುತ್ತಿದ್ದಾರೆ.

ಒಂದು ಯುದ್ಧ ಒಂದೇ ದಿನ ನಡೆಯದಿದ್ದರೂ ಹಲವಾರು ವಿಚಾರ, ಸಂಗತಿಗಳು ಸೇರಿಕೊಂಡು ಹಲವು ರಾಷ್ಟ್ರಗಳ ನಡುವೆ ತಮ್ಮ ಶಕ್ತಿ-ಸಾಮರ್ಥ್ಯ ವಿಶ್ವದ ಮುಂದೆ ಪ್ರದರ್ಶಿಸಲು ನಿಲ್ಲುತ್ತವೆ; ಕೊನೆಗೆ ಎಷ್ಟೋ ಜನರ ಸಾವು, ಆಸ್ತಿ ಪಾಸ್ತಿಗಳ ಹಾನಿಯಿಂದ ಯುದ್ಧವೂ ನಿಲ್ಲುತ್ತದೆ. ಈಗ ವಿಶ್ವಯುದ್ಧ 3ರ ಮಾತು ಕೇಳಿ ಬರುತ್ತಿದೆ. ಕಳೆದ ವರ್ಷದಿಂದ ಇಸ್ರೇಲ್‌ನ ಜತೆ ಕೆಲವು Non State Actors ಗಳ ಜತೆ ಯುದ್ಧ ನಡೆಯುತ್ತಲೇ ಇದೆ. ಹಾಗೆ ಪ್ಯಾಲಿಸ್ತೇನ್‌ನಲ್ಲಿ 42 ಸಾವಿರಕ್ಕೂ ಹೆಚ್ಚು ಜನರ ಮಾರಣ ಹೋಮವೂ ಆಗಿದೆ. ಹಾಗೇ ಇಸ್ರೇಲ್ ಲೆಬನಾನ್‌ನ ಹೆಜ್ಬುಲ್ಲಾದ ಜತೆ ಯುದ್ಧ ನಡೆಸಿದ್ದ ಸಮಯದಲ್ಲಿ ಇರಾನ್‌ನಿಂದ ಭರ್ಜರಿ ಕ್ಷಿಪಣಿದಾಳಿಯೂ ಆಯಿತು. ಅದರಿಂದ ಇಸ್ರೇಲ್‌ನ ಹೆಚ್ಚು ಜನ ಪ್ರಾಣಬಿಟ್ಟರು. ಹಾಗೇ ನಡೆಯುತ್ತಿದ್ದ ಯುದ್ಧದಲ್ಲಿ ಇಡೀ ವಿಶ್ವದ ಹಲವು ರಾಷ್ಟ್ರಗಳು ತಲೆಕೆಡಿಸಿಕೊಂಡಿದ್ದರೆ, ಇರಾನ್ ದಾಳಿಯ ನಂತರ ಹಲವಾರು ದೇಶಗಳು ಇಸ್ರೇಲ್‌ಗೆ ಹಲವು ರಾಷ್ಟ್ರಗಳು ಇರಾನ್‌ಗೆ ತಮ್ಮ ಬೆಂಬಲ ತೋರಿಸಲು ಶುರು ಮಾಡಿದವು.

ಈಗಾಗಲೇ ಅಮೆರಿಕ ಇರಾನ್‌ಗೆ ಧಮ್ಕಿಯನ್ನೂ ಹಾಕಿದೆ. ಇಷ್ಟು ಕಾಲ ಆಗಾಗ ಇರಾನ್‌ನ ಜಮಕರನ್ ಮಸೀದಿ ಮೇಲೆ ಕೆಂಪು ಧ್ವಜವನ್ನು ಹಾರಿಸಿ ಯುದ್ಧದ ಪೌರುಷವನ್ನು ತೋರಿಸಿದರೂ, ಇರಾನ್ ನೇರವಾಗಿ ಯುದ್ಧಕ್ಕೆ ಹೋಗುತ್ತಿರಲಿಲ್ಲ. ಆದರೆ, ಅದರ Proxy Groups ಗಳಾದ ಹಮಾಸ್, ಹೆಜ್ಬುಲ್ಲಾ, ಹೌಥಿ ಭಯೋತ್ಪಾದಕ ಗುಂಪುಗಳನ್ನು ಇಸ್ರೇಲ್‌ನ ಮೇಲೆ ಛೂ ಬಿಟ್ಟು, ತನಗೆ ಏನೂ ಗೊತ್ತೇ ಇಲ್ಲವೇನೋ ಎಂಬಂತೆ ಸುಮ್ಮನಿದ್ದು
ಬಿಡುತ್ತಿತ್ತು. ಆದರೆ, ಇರಾನ್ ಇಸ್ರೇಲ್‌ನ ಮೇಲೆ ನೇರ ದಾಳಿ ಮಾಡಿದ ತಕ್ಷಣವೇ ವಿಶ್ವಸಂಸ್ಥೆ ಸೇರಿದಂತೆ ಹಲವಾರು ದೊಡ್ಡ ದೊಡ್ಡ ರಾಷ್ಟ್ರಗಳು ತಲೆ ಕೆಡಿಸಿಕೊಂಡಿದ್ದಾವೆ. ‘ಇದೇ ಮೊದಲ ಬಾರಿಗೆ ಇರಾನ್ ಇಸ್ರೇಲ್ ಮೇಲೆ ಕಾಲುಕೆದರಿ ಬಂದಿದೆ. ಈ ಸಮಯವನ್ನು ಉಪಯೋಗಿಸಿಕೊಂಡು ಇರಾನ್ ಅನ್ನು Fatally Cripple (ಮಾರಣಂತಿಕವಾಗಿ ಅಂಗವಿಕಲ) ಮಾಡ ಬೇಕು’ ಎಂದು ಇಸ್ರೇಲ್‌ನ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. ಇದೆಲ್ಲದರ ಜತೆಗೆ ಮೂರನೇ ವಿಶ್ವಯುದ್ಧವೂ ಆಗಬಹುದೆಂಬ ಮಾತುಗಳು ಮತ್ತೊಮ್ಮೆ ಕೇಳಲು ಶುರುವಾಗುತ್ತಿದೆ.

ಅದರ ಜತೆಗೆ ರಷ್ಯಾ ಹಾಗೂ ಉಕ್ರೇನ್‌ನ ನಡುವೆಯೂ ಯುದ್ಧ ಕೆಂಡ ಬಿಸಿಯಾಗಿಯೇ ಇದೆ. ಅದರಲ್ಲೂ ಇಸ್ರೇಲ್‌ನ
ರೀತಿಯಲ್ಲೇ ವಿವಿಧ ದೇಶಗಳು ತಮ್ಮತಮ್ಮ ಸ್ನೇಹಿತನನ್ನು ಬೆಂಬಲಿಸುತ್ತಲೇ ಇದೆ. ಇಸ್ರೇಲ್ ಹಾಗೂ ಉಕ್ರೇನ್‌ನ ಪರವಾಗಿ ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಕೆನಡಾ, ಜರ್ಮನಿ, ಪೋಲ್ಯಾಂಡ್, ಲಿಥುನಿಯಾ ದೇಶಗಳು ಬೆಂಬಲಿಸಿದರೆ. ಅದರ ವಿರುದ್ಧವಾಗಿ ಸಿರಿಯಾ, ಇರಾಕ್, ಚೀನಾ, ಉತ್ತರ ಕೋರಿಯಾ ನಂಥ ಇನ್ನೂ ಹಲವಾರು ದೇಶಗಳು ರಷ್ಯಾ, ಇರಾನ್‌ನನ್ನು ಬೆಂಬಲಿಸುತ್ತಿವೆ. ಈ ಪ್ಯಾಟರ್ನ್ ನೋಡಿದರೆ, ಒಂದು ಸರಳವಾಗಿ ಗೊತ್ತಾಗುವು ದೆನೆಂದರೆ, ಈ ಕೆಲವು ದೇಶಗಳ ಜತೆಯಲ್ಲಿ ದೊಡ್ಡದೊಡ್ಡ ದೇಶಗಳೂ ಯುದ್ಧಕ್ಕೆ ಸಿದ್ಧವಾಗುತ್ತಿದೆ. ಅಪ್ಪಿತಪ್ಪಿ, ಯಾವುದಾದರೂ ದೇಶಕ್ಕೆ ಸಹಾಯ ಬೇಕಾದರೆ, ಅದರ ಬೆಂಬಲವನ್ನು ನೀಡುತ್ತಿರುವ ದೇಶಗಳು ಸಂಪೂರ್ಣವಾಗಿ ತಮ್ಮಲ್ಲಿನ ಶಸ್ತ್ರಾಸ್ತ್ರ, ಮಿಲಿಟರಿ ಬೆಂಬಲವನ್ನು ನೀಡಲು ಸಿದ್ಧವಿದೆ.

ಈಗಾಗಲೇ ಅಮೆರಿಕ ಇಸ್ರೇಲ್ ಪರವಾಗಿ ತನ್ನ ಸೈನ್ಯವನ್ನು ಶಸ್ತ್ರಾಸ್ತ್ರವನ್ನು ಸಿದ್ಧಪಡಿಸಿಕೊಂಡು ಇಟ್ಟುಕೊಂಡಿದೆ. ಅದರ ಜತೆಗೆ, ಇಸ್ರೇಲ್‌ಗೆ 3.5 ಬಿಲಿಯನ್‌ನಷ್ಟು ಮಿಲಿಟರಿ ನೆರವನ್ನೂ ಘೋಷಿಸಿದೆ. ಮತ್ತು ರಷ್ಯಾ ಉಕ್ರೇನ್‌ನ ಮೇಲೆ ಯುದ್ಧ ಶುರು ಮಾಡಿದಾಗಿನಿಂದ ಇಲ್ಲಿಯವರೆಗೂ 61.3 ಬಿಲಿಯನ್ ಡಾಲರ್‌ನಷ್ಟು ಮಿಲಿಟರಿ ನೆರವನ್ನೂ ಕೊಟ್ಟಿದೆ. ಅದರ ಜತೆಗೆ ಪಾಶ್ಚಾತ್ಯ ದೇಶಗಳೂ 380 ಬಿಲಿಯನ್ ಡಾಲರ್‌ನಷ್ಟು ಮಿಲಿಟರಿ ನೆರವನ್ನೂ ನೀಡಿದ್ದಾರೆ. ಅದಲ್ಲದೇ, ಚೀನಾ ರಷ್ಯಾ, ಇರಾನ್‌ಗೆ ಹಿಂದಿನಿಂದ ಬೆಂಬಲಿಸುತ್ತಿರುವುದು ಹೋಸತೇನಲ್ಲ, ರಷ್ಯಾಗೆ ಚೀನಾ ಭಾರೀ ಶಸ್ತ್ರಾಸ್ತ್ರದ ನೆರವನ್ನು ನೀಡಿದೆ ಎಂದು ಅಮೆರಿಕ ಆರೋಪವೂ ಮಾಡಿದೆ.

ಬರೀ ಆರೋಪ ಅಂದ ಮಾತ್ರಕ್ಕೆ, ಚೀನಾ ಮಾಡೇ ಇಲ್ಲವೇನೋ ಎಂದುಕೊಳ್ಳುವ ಹಾಗಿಲ್ಲ. ಇನ್ನು, ಅಮೆರಿಕದ ರಾಷ್ಟ್ರಾಧ್ಯಕ್ಷ ಚುನಾವಣೆಗಳಲ್ಲೂ ವಿಶ್ವ ಯುದ್ಧ ಮೂರರ ಬಗ್ಗೆ ನಾಯಕರು ಮಾತನಾಡತೊಡಗಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ‘ಈಗ ಯುದ್ಧ, ಅಥವಾ ಯುದ್ಧದ ಬೆದರಿಕೆಯಂತೂ ಎಲ್ಲೆಡೆ ಹೆಚ್ಚುತ್ತಿದೆ. ಮತ್ತು ಇಬ್ಬರು ಅಸಮರ್ಥರು ಅಮೆರಿಕವನ್ನು ನಡೆಸುತ್ತಿದ್ದಾರೆ,.. ಅದು ಈಗ ವಿಶ್ವಯುದ್ಧ 3ರ ಅಂಚಿಗೆ ತೆಗೆದುಕೊಂಡು ಹೋಗಿದೆ’ ಎಂದರೆ. ಅದೇ ಪಕ್ಷದ ನಾಯಕಿ, ತುಳಸಿ ಗಬ್ಬಾರ್ಡ್ ‘ ಕಮಲಾ ಹ್ಯಾರಿಸ್‌ಗೆ ಹಾಕುವ ಒಂದು ಮತ, ಪರಮಾಣು ಯುದ್ಧಕ್ಕೆ ಹಾಕುವ ಮತ ಇದ್ದಂತೆ’ ಎಂದು ನೇರಾನೇರಾ ಪರಮಾಣು ದಾಳಿಯ ಬಗ್ಗೆಯೇ ಮಾತನಾಡುತ್ತಾರೆ. ಬರೀ ಅಷ್ಟೇ ಅಲ್ಲ!

ಈ ಎಲ್ಲ ಬೆಳವಣಿಗೆಗಳ ಜತೆ, ಕೆಲದಿನಗಳ ಹಿಂದೆ, ಇರಾನ್ ಇಸ್ರೇಲ್‌ನ ಮೇಲೆ ದಾಳಿ ಮಾಡಿದಾಗ ಟ್ವಿಟರ್ (ಎಕ್ಸ್) ನಲ್ಲಿ World War 3 ಎಂಬ ಪೋಸ್ಟ್‌ಗಳು 5 ಘಂಟೆಗಳ ಕಾಲ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಅವತ್ತು ಅಷ್ಟೇ ಸಮಯದಲ್ಲಿ ಭಾರತದಿಂದ World War 3 ವಿಷಯದ ಮೇಲೆ 2 ಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳು ಎಕ್ಸ್‌ನಲ್ಲಿ ಹರಿಬಿಟ್ಟಿ ದ್ದರು. ಈ ಯಾವ ಯುದ್ಧವೂ ಭಾರತಕ್ಕೆ ಸಂಬಂಧ ಪಡದಿದ್ದರೂ, ವಿಶ್ವಯುದ್ಧ ಮೂರರ ಪ್ರೇಕ್ಷಕನಾಗಲು ಕಾಯುತ್ತಿದ್ದಾರೆ. ಆದರೆ, ಅದು ಕ್ರಿಕೆಟ್ ಫುಟ್‌ಬಾಲ್ ನಂತಹ ಆಟ ಅಲ್ಲ ಎನ್ನುವುದು ನಮ್ಮವರಿಗೆ ತಿಳಿಯಬೇಕು. ಇನ್ನೂ ಯುದ್ಧ ಆದರೆ, ದೇಶಗಳ ಮೇಲೆ ಜೂಜು ಕಟ್ಟಿ ಆಟಾಡಲೂ ಜನ ಸಿದ್ಧರಾಗಿರಬಹುದು.

ಆದರೆ…. ವಿಶ್ವಗುರು ಭಾರತ, ನಮ್ಮ ದೇಶದ ಪ್ರಧಾನಿ ಮೋದಿ ಈಗ ಮಾಡುತ್ತಿರುವುದಾದರೂ ಏನು? ಕೆಲದಿನಗಳ ಹಿಂದೆ ಮೋದಿ ರಷ್ಯಾಗೆ ತಮ್ಮ ಪ್ರಯಾಣವನ್ನು ಬೆಳೆಸಿದ್ದರು. ಅದಾದ ನಂತರ ಉಕ್ರೇನ್‌ಗೂ ಹೋಗಿ ಹಲವಾರು
ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು. ಮೋದಿಯವರ ಈ ನಡೆಗೆ ವಿಶ್ವದ ಹಲವಾರು ನಾಯಕರೂ ಶಹಭಾಶ್‌ ಗಿರಿಯನ್ನು ಕೊಟ್ಟಿದ್ದರು. ಯುಕೆ ಈ ಪ್ರಯಾಣದ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತಕ್ಕೂ ಸ್ಥಾನ ನೀಡಬೇಕು ಎಂದರೆ, ಅಮೆರಿಕದ ಜೋಬೈಡೆನ್ ವಿಶ್ವಶಾಂತಿ ಕಾಪಾಡುವಲ್ಲಿ ಭಾರತ ಪ್ರಯತ್ನ ಪಡುತ್ತಿದೆ ಎಂದು ಹೇಳಿದರು.

ಅದರ ಜತೆಗೆ ಭಾರತದ ಅಜಿತ್ ದೋವಲ್ ಸಹ ರಷ್ಯಾದ ವ್ಲಾದಿಮಿರ್ ಪುಟಿನ್‌ರನ್ನು ಭೇಟಿಯಾಗಿ ಯುಕ್ರೇನ್‌ನ ಜತೆ ಸಂಧಾನ ಮಾಡಿಕೊಳ್ಳಿ ಎನ್ನುವ ಮಾತನ್ನೂ ಹೇಳಿದ್ದರು. ಅದೇ ರೀತಿ ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ನರೇಂದ್ರ ಮೋದಿ ಬೆಂಜಮಿನ್ ನೆತನ್ಯಾಹುಗೆ ಕರೆ ಮಾಡಿ, ಯುದ್ಧವನ್ನು ಮತ್ತಷ್ಟು ಉಲ್ಬಣಿಸಬೇಡಿ, ಶಾಂತಿಯನ್ನು ಕಾಪಾಡಿಕೊಳ್ಳಿ ಎಂಬಮಾತನ್ನು ಹೇಳಿದ್ದರು. ಅದಕ್ಕೂ ಮುಂಚೆ ಮೋದಿ ಅಮೆರಿಕದ ಪ್ರವಾಸದಲ್ಲಿ ದ್ದಾಗ ಯುಕ್ರೇನ್‌ನ ವ್ಲಾದಿಮೀರ್ ಜೆಲೆನ್‌ಸ್ಕಿ, ಹಾಗೂ ಪ್ಯಾಲೇಸ್ತೀನ್‌ನ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಜೊತೆಗೂ ಮಾತನಾಡಿ, ಶಾಂತಿ ಮಾತುಕತೆ ನಡೆಸಿ ಯುದ್ಧವಷ್ಟೇ ಪರಿಹಾರವಲ್ಲ ಎಂಬ ಕಿವಿಮಾತನ್ನು ಹೇಳಿದ್ದರು.

ಇದೆಲ್ಲ ನೋಡಿದರೆ, ಭಾರತ ವಿಶ್ವಗುರುವಾಗಲು ಬರೀ ಶಸ್ತ್ರ, ಯುದ್ಧಗಳಿಂದಷ್ಟೇ ಅಲ್ಲ, ಶಾಂತಿಯನ್ನು ಪಸರಿಸಿ ಯೂ ಗ್ಲೋಬಲ್ ಲೀಡರ್ ಆಗಬಹುದೆಂಬ ಹೊಸ ವಿಚಾರವನ್ನು ವಿಶ್ವಕ್ಕೆ ಸಾರಿದರು. ಹಾಗೇ, ನರೇಂದ್ರ ಮೋದಿ, ಈಗ ಯಾವ ದೇಶಕ್ಕೆ ಹೋದರೂ ಅಲ್ಲಿ ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ. ಭಾರತ ವಿಶ್ವಗುರು ಆಗುವ ಸ್ಥಾನಕ್ಕೂ ಬಂದು ನಿಂತಿದೆ. ಇದಕ್ಕೆಲ್ಲ ನಾವು ಮೋದಿಗೆ ಥ್ಯಾಂಕ್ಸ್ ಹೇಳುವ ಮೊದಲು ಇದಕ್ಕೆಲ್ಲ ನಾವು ಸೆಲ್ಯೂಟ್ ಹೇಳ ಬೇಕಾಗಿದ್ದು, ಜವಾಹರ್‌ಲಾಲ್ ನೆಹರುಗೆ. ಅವರೇ ಅಲ್ಲವೇ ಅಲಿಪ್ತ ನೀತಿಯಿಂದ ದೇಶವನ್ನು ಕಟ್ಟಬಹುದು ಎಂದು ತೋರಿಸಿಕೊಟ್ಟವರು.

ಶೀತಲ ಸಮರದ ಸಮಯದಲ್ಲಿ ಸೂಪರ್‌ಪವರ್ ದೇಶಗಳು ಆಗತಾನೇ, ವಸಾಹತುಶಾಹಿಗಳಿಂದ ವಿಮೋಚನ ಪಡೆದು ಸ್ವಾತಂತ್ರದತ್ತ ಮುಖ ಮಾಡಿದ್ದ ದೇಶಗಳ ಮೇಲೆ ಒತ್ತಡ ಹೇರಲು ಶುರುಮಾಡಿದರು. ಆಗ ಆ ದೇಶಗಳಿಗೆ ಇದ್ದ ಎರಡೇ ಆಯ್ಕೆಗಳೆಂದರೆ, ಒಂದು ಅಮೆರಿಕವನ್ನು ಬೆಂಬಲಿಸುವುದು ಅಥವಾ ಯುಎಸ್‌ಎಸ್‌ಆರ್ ಅನ್ನು ಬೆಂಬಲಿಸುವುದು, ಇದೆರಡನ್ನೂ ಬೆಂಬಲಿಸದೆ ಶುರುವಾಗಿದ್ದೇ ಅಲಿಪ್ತ ನೀತಿ. ಜವಾಹರ್‌ಲಾಲ್ ನೆಹರು, ಇಂಡೋ ನೇಷ್ಯಾದ ಸುಕರ್ನೋ, ಈಜಿಪ್ಟ್‌ನ ಗಮಾಲ್ ಅಬ್ದೆಲ್ ನಸರ್ ಸೇರಿಕೊಂಡು ಅಲಿಪ್ತನೀತಿಯನು ಬೆಂಬಲಿಸಲು ಶುರುಮಾಡಿದರು.

ಅಲಿಪ್ತ ನೀತಿಯೆಂದರೆ, ಯಾವುದೇ ದೇಶವನ್ನು ಬೆಂಬಲಿಸಿದೆ ಯುದ್ಧದ ಸಮಯದಲ್ಲಿ ತಟಸ್ಥವಾಗಿರುವುದು. ಅಥವಾ ಎಲ್ಲ ಸಮಯದಲ್ಲೂ ಒಂದೇ ಸುಪರ್ ಪವರ್ ದೇಶವನ್ನು ಬೆಂಬಲಿಸದೇ ಇರುವುದು. ಈಗ ನೋಡಿ
ಅವತ್ತು ಅವರು ಶುರುಮಾಡಿದ್ದ ಈ ಅಲಿಪ್ತ ನೀತಿ ಇನ್ನೂವರೆಗೂ ಭಾರತಕ್ಕೆ ಹೊಸ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಸ್ಥಾನ ನೀಡುತ್ತಿದೆ. ನೆಹರುರನ್ನು ಅನೇಕ ಪ್ರಮಾದಗಳಿಗೆ ಕಾರಣನಾದ ನಾಯಕ ಎಂದು ಬಿಜೆಪಿ ಎಷ್ಟೇ ಬೊಟ್ಟು ಮಾಡಿದರೂ, ಹೀಗಳೆದರೂ, ನರೇಂದ್ರ ಮೋದಿ ಆಸ್ಟ್ರಿಯಾ ಪ್ರವಾಸಕ್ಕೆ ಹೋದಾಗ, ‘ನೆಹರೂ ಅವರು ವಿಶ್ವ ರಾಜನೀತಿಜ್ಞರಾಗಿ ತಮ್ಮ ವಿದೇಶಾಂಗ ನೀತಿ ಯೊಂದಿಗೆ ಅಲಿಪ್ತತೆಯಲ್ಲಿ ಆಸ್ಟ್ರಿಯಾದ ನಾಯಕರನ್ನು ಸೆಳೆದರು.

ಆದ್ದರಿಂದ, ಅವರು 1953 ರಲ್ಲಿ ತಮ್ಮ ಪರವಾಗಿ ಮಧ್ಯಸ್ಥಿಕೆ ವಹಿಸಲು ಮತ್ತು ಸೋವಿಯತ್ ಒಕ್ಕೂಟಕ್ಕೆ ಮನವರಿಕೆ ಮಾಡಲು ಆಸ್ಟ್ರಿಯಾ ತನ್ನ ಸಂವಿಧಾನದಲ್ಲಿನ ನಿಬಂಧನೆಯ ಮೂಲಕ ತನ್ನ ತಟಸ್ಥತೆಯನ್ನು ಪ್ರತಿe ಮಾಡಲು ಸಿದ್ಧವಾಗಿದೆ ಎಂದು ಮನವರಿಕೆ ಮಾಡಿದರು. ಇದು ತನ್ನ ಸ್ವಾತಂತ್ರ್ಯವನ್ನು ಭದ್ರಪಡಿಸಿಕೊಳ್ಳಲು ಅನುವು ಮಾಡಿ ಕೊಡಲು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಆಸ್ಟ್ರಿಯಾವನ್ನು ತೊರೆಯಲು ಮಿತ್ರರಾಷ್ಟ್ರಗಳ ಆಕ್ರಮಣ ಪಡೆಗಳಿಗೆ ದಾರಿ ಮಾಡಿಕೊಡುತ್ತದೆ.’ ಎಂದು ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು ಮೋದಿಯವರ ಸಮ್ಮುಖದಲ್ಲಿ – ನೆಹರೂ ಅವರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ನೆನಪಿಸಿ ಕೊಂಡು ಹೇಳಿದರು.

ಚಾಚಾ ನೆಹರುರನ್ನು ಎಷ್ಟೇ ಡಮ್ಮಿ ಮಾಡಲು ಹೊರಟರೂ, ನೆಹರುರ ದೂರದೃಷ್ಟಿ, ಇಂದು ಮೋದಿಗೆ ವಿಶ್ವ ನಾಯಕ ಸ್ಥಾನ ಕೊಡುತ್ತಿದೆ ಎಂಬುದನ್ನು ಮರೆಯಬಾರದು ಮಾತ್ರ. ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇಂದು ಭಿಕಾರಿ ಹಂತಕ್ಕೆ ಬಂದು ನಿಂತಿದೆ. ಪಾಕಿಸ್ತಾನದ ನಾಯಕ ಪಾರ್ಲಿಮೆಂಟ್ ನಲ್ಲಿ ಭಾರತ ಸುಪರ್ ಪವರ್ ನೇಷನ್ ಆಗೋಕೆ ಹೊರಟಿದೆ ನಾವು ಮಾತ್ರ ಭಿಕ್ಷೆ ಬೇಡುತ್ತಿದ್ದೇವೆ ಎಂದೂ ತಮ್ಮ ದೇಶದ ನಸೀಬಿನ ಬಗ್ಗೆ ಮಾತನಾಡಿದ್ದರು.

ಆದರೆ, ನಮ್ಮದೇ ದೇಶದವರಿಗೆ ನಮ್ಮ ದೇಶದ ಬಗ್ಗೆ ಎಷ್ಟು ಹೆಮ್ಮೆ ಇದೆ? ಭಾರತ ವಿಶ್ವಗುರು ವಾಗುತ್ತಾ ಹೊರಟರೆ, ನಮ್ಮ ದೇಶದವರೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಾ? ಸಿಎಎ ಜಾರಿ ಮಾಡುತ್ತೇ ವೆಂದಾಗ, ಭಾರತದಾದ್ಯಂತ ಹೋರಾಟ, ರೈತರಿಗಾಗಿ ಕೃಷಿ ವಿಧೇಯಕ ತಿದ್ದುಪಡಿಗಾಗಿ ಮಾತನಾಡಿದರೂ ಹೋರಾಟ, ಅದರ ಹಿಂದೆ ಖಲಿಸ್ತಾನಿ ಗಳ ಕುಮ್ಮಕ್ಕು. ಇದೆಲ್ಲ ಒಟ್ಟೊಟ್ಟಿಗಿದ್ದರೂ, ಈ ದೇಶದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಲ್ಲದರಲ್ಲೂ ಜಾತಿ ಹುಡುಕುವ ಹೊಸ ಖಾಯಿಲೆ ಬಂತು, ಅದಕ್ಕಿಂತ ಮುಂಚೆ ಬೇರೆ ದೇಶದಲ್ಲಿ ಭಾರತದ ವಿರುದ್ಧ ಮಾತನಾ ಡುವ ತೀಟೆ ಶುರುವಾಗಿದೆ. ಅದಕ್ಕೂ ಮುಂಚೆ ಲಂಡನ್‌ನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಅಮೆರಿಕ ಭಾರತಕ್ಕೆ ಬಂದು ಪ್ರಜಾಪ್ರಭುತ್ವವನ್ನು ನೆಲೆಸುವಂತೆ ಮಾಡಬೇಕು.

ಎಂದಿದ್ದರು, ಅವರದ್ದೇ ಪಕ್ಷ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ ಎನ್ನುವುದನ್ನೂ ಮರೆತು ಈ ರೀತಿ ಮಾತ ನಾಡುತ್ತಿರಬಹುದು. ಏನು ಮಾಡೋಕೆ ಬರುತ್ತೆ? ಅಧಿಕಾರ ದಾಹ! ಏನೇನೋ ಇರಲಿ, ಇಡೀ ಭಾರತದ ಕಲ್ಪನೆಯೇ ಶಾಂತಿ ಅಲ್ಲವೇ? ಪ್ರಪಂಚದ ಬೇರೆ ಬೇರೆ ರಾಷ್ಟ್ರ, ಧರ್ಮಗಳು ತಮ್ಮವರಷ್ಟೇ ಚೆನ್ನಾಗಿರಲಿ ಎಂದು ಬಯಸಿದರೆ, ಭಾರತ ಮಾತ್ರ, ‘ಸರ್ವೇ ಭವಂತು ಸಖಿನಃ, ಸರ್ವೇ ಸಂತು ನಿರಾಮಯ’ ಎಂದು ಹೇಳಿದ್ದು. ಎಲ್ಲರಿಗೂ ತಾವಷ್ಟೇ ಬೇಕಾಗಿದ್ದರೆ, ಭಾರತ ಮಾತ್ರ ‘ವಸುದೈವ ಕುಟುಂಬಕಂ’ ಎಂದು ಹೇಳಿ ಇಡೀ ವಿಶ್ವ ನಮ್ಮದೇ ಕುಟುಂಬ ಎಂದು ಹೇಳಿತು.

ವಿವೇಕಾನಂದರು ಅಮೆರಿಕದ ಚಿಕ್ಯಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆಯೇ ‘ಅಮೆರಿಕ ನನ್ನ ಸಹೋದರ ಸಹೋದರಿಯರೇ’ ಎಂದು ಹೇಳಿ ಒಂದೇ ವಾಕ್ಯದಲ್ಲೇ ವಿಶ್ವದ ಗಮನ ಸೆಳೆದವರಲ್ಲವೆ? ಅದಾಗ್ಯೂ, ಯುದ್ಧದಿಂದ ಯಾವುದೇ ದೇಶಕ್ಕೂ ಲಾಭವಿಲ್ಲ, ಇದ್ದರೆ ಅದು ಹಾನಿಯೇ, ಒಂದು ದೇಶ ಗೆಲ್ಲಬಹುದು, ಮತ್ತೊಂದು ದೇಶ ಸೋಲಬಹುದು. ಆದರೆ, ಯಾವ ಬೆಲೆಗೆ? ಅತಿ ಬೇಗ ವಿಶ್ವದೆಲ್ಲೆಡೆ ಶಾಂತಿ ಬರಲಿ ಎಂದು ಕೇಳಿಕೊಳ್ಳೋಣ.. ಓಂ ಶಾಂತಿ, ಶಾಂತಿ, ಶಾಂತಿಃ