ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
ಸುಮಾರು 25 ವರ್ಷಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಅವರ ಜತೆಗೆ ಉಸ್ತಾದ್ ಝಾಕಿರ್ ಹುಸೇನ್ ವೇದಿಕೆಗೆ ಬಂದರು, ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆಯಾಯಿತು. ಕಾರ್ಯಕ್ರಮ ಶುರುವಾಗಿ ಝಾಕಿರ್ ತಮ್ಮ ಕೈಚಳಕದ ಸಣ್ಣ ಝಲಕ್ ತೋರಿಸಿದ್ದೇ ತಡ, ಪ್ರೇಕ್ಷಕರಿಂದ ಮೆಚ್ಚುಗೆ ಚಪ್ಪಾಳೆಯ ಜತೆಗೆ ಶಿಳ್ಳೆಯೂ ಸೇರಿಕೊಂಡಿತ್ತು.
ಕೂಡಲೇ ತಬಲಾ ವಾದನ ನಿಲ್ಲಿಸಿದ ಝಾಕಿರ್ ಮೈಕ್ ಎತ್ತಿಕೊಂಡು, ಸರಸ್ವತಿಯ ಕುರಿತಾದ ‘ಯಾಕುಂದೇಂದು ತುಷಾರ ಹಾರ ಧವಲಾ’ ಎಂಬ ಶ್ಲೋಕ ವನ್ನು ಶುದ್ಧವಾಗಿ ಹೇಳುತ್ತಾ, “ನೋಡೀ, ನಾವು ಕಲಾವಿದರು. ಇಲ್ಲಿ ತಾಯಿ ಸರಸ್ವತಿಯ ಪೂಜೆಯಲ್ಲಿ ತೊಡಗಿದ್ದೇವೆ. ಈ ಭಕ್ತಿ ಸಮರ್ಪಣೆಯ ಭಾಗೀದಾರರಾದ ನೀವು ಶಿಳ್ಳೆ ಹೊಡೆಯುವುದು ಅಶಿಸ್ತಾಗುತ್ತದೆ, ನಮ್ಮ ಪೂಜೆಗೆ ಅಡ್ಡಿಯಾಗುತ್ತದೆ.
ದಯವಿಟ್ಟು ಹಾಗೆ ಮಾಡಬೇಡಿ” ಎಂದು ಕೈಮುಗಿದು, ಕಛೇರಿಯ ಕುರಿತಾದ ತಮ್ಮ ಭಾವನೆಯೇನು ಎಂಬುದನ್ನು
ಸೌಜನ್ಯದಿಂದ ಮನವರಿಕೆ ಮಾಡಿಕೊಟ್ಟರು. ತರುವಾಯದಲ್ಲಿ ಚಪ್ಪಾಳೆಯ ಸದ್ದಷ್ಟೇ ಕೇಳಿಸಿತೇ ವಿನಾ, ಶಿಳ್ಳೆಯಲ್ಲ…
ತಮ್ಮ ಕಲೆಯನ್ನು ‘ಆದರಿಸುವ’ ಕಲಾವಿದರು ಬಹಳವಿದ್ದಾರೆ; ಆದರೆ ತಮ್ಮ ಕಲಾಪ್ರಸ್ತುತಿಯನ್ನು ಪೂಜೆಯಂತೆ
‘ಆರಾಽಸುವ’ ಉಸ್ತಾದ್ ಝಾಕಿರ್ ಹುಸೇನ್‌ರಂಥವರು ವಿರಳಾತಿ ವಿರಳ.
ರಾಜಕಾರಣದಲ್ಲಿ ವಾಜಪೇಯಿ, ಕನ್ನಡ ಸಿನಿಮಾರಂಗದಲ್ಲಿ ಡಾ.ರಾಜ್‌ಕುಮಾರ್, ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂ ಲ್ಕರ್ ಹೇಗೋ, ಭಾರತೀಯ ಉತ್ತರಾದಿ ಸಂಗೀತ ಕ್ಷೇತ್ರದಲ್ಲಿ ಝಾಕಿರ್ ಹಾಗೆ. ಅವರು ಈ ಕ್ಷೇತ್ರದಲ್ಲಿ ಕಲಾವಂತಿ ಕೆಯ ಜತೆಗೆ ಸಂಭಾವಿತತನಕ್ಕೆ ಹೆಸರಾದವರು,
ಎಲ್ಲ ಜನರಿಂದ ಪ್ರೀತಿಸಲ್ಪಟ್ಟವರು ಎಂಬುದು ನಿರ್ವಿವಾದ. ಸೌಜನ್ಯ-ವಿನಯವಂತಿಕೆಗಳ ಪ್ರತಿರೂಪವಾದ ಝಾಕಿರ್, ಸಂಗೀತವನ್ನು ಬಿಟ್ಟರೆ ಬೇರಾವುದನ್ನೂ ತಿಳಿಯದ ಮುಗ್ಧ. ಸಾಧನೆಯ ಉತ್ತುಂಗಕ್ಕೇರಿದ್ದರೂ ಸದಾ ಹೊಸದನ್ನು ಕಲಿಯುವ ಹಸಿವಿದ್ದ ಶ್ರೇಷ್ಠ ಕಲಾವಿದ ಅವರು. ಗಾಯಕರಿಗೆ ಅಥವಾ ಹಾರ್ಮೋನಿಯಂ, ಸಾರಂಗಿ
ಯಂಥ ಶೃತಿಪ್ರಧಾನ ವಾದ್ಯಗಳನ್ನು ನುಡಿಸುವ ಕಲಾವಿದರಿಗೆ ಢೋಲಕ್, ಮೃದಂಗ, ತಬಲಾಗಳಂಥ ತಾಳವಾದ್ಯ ಗಳನ್ನು ನುಡಿಸುವವರು ಸಾಥ್ ನೀಡುವಾಗ ಅವರಿಗೆ ಸಮಾನವಾಗಿ ಕೂರದೆ ಪಕ್ಕದಲ್ಲಿ ಕುಳಿತು ನುಡಿಸುತ್ತಿದ್ದುದು, ಇವರನ್ನು ‘ಸಾಥೀದಾರರು’ ಎಂದಷ್ಟೇ ಕರೆಯುತ್ತಿದ್ದುದು ವಾಡಿಕೆಯಾಗಿತ್ತು.
ಅಂಥ ಕಾಲದಲ್ಲಿ, ಗಾಯನ-ವಾದನಗಳಿಗೆ ರಾಗದ ಆಧಾರವಿದ್ದಂತೆ ತಬಲಾ ವಾದನಕ್ಕೂ ಅದರದ್ದೇ ಆದ ಶಾಸ್ತ್ರ ವಿದೆ ಎಂಬುದನ್ನು ತಮ್ಮ ‘ಸೋಲೋ’ ಕಾರ್ಯಕ್ರಮಗಳ ಮೂಲಕ ತೋರಿಸಿ, ಅದನ್ನು ವೇದಿಕೆಯ ಮಧ್ಯಭಾಗಕ್ಕೆ ತಂದು ಗೌರವ ತಂದುಕೊಟ್ಟವರಲ್ಲಿ ಝಾಕಿರ್ ಮೊದಲಿಗರಲ್ಲದಿದ್ದರೂ ಪ್ರಮುಖರು ಎನ್ನಬಹುದು.
ಇವರ ಕಾಲದವರೆಗೆ ತಬಲಾ ಕಛೇರಿಗಳು ಸ್ವತಂತ್ರವಾಗಿ ನಡೆಯುತ್ತಿದ್ದುದು ಕಡಿಮೆಯೇ; ಗಾಯಕರಿಗೆ/ವಾದಕರಿಗೆ ‘ಸಾಥ್’ ನೀಡುವು ದಷ್ಟೇ ಇವರ ಕೆಲಸವಾಗಿತ್ತು. ಪ್ರಧಾನ ಕಲಾವಿದರು ಅವಕಾಶ ಕೊಟ್ಟರಷ್ಟೇ ತಾಳವಾದ್ಯಗಾರರು ತಮ್ಮ ಕೈಚಳಕ ತೋರಿಸಬೇಕಾಗುತ್ತಿತ್ತು; ಇಲ್ಲದಿದ್ದರೆ ಕಾರ್ಯಕ್ರಮದುದ್ದಕ್ಕೂ ಶುದ್ಧವಾಗಿ ಒಂದು ‘ಠೇಕಾ’ ಹಿಡಿದು ಕೂರಬೇಕಾಗುತ್ತಿತ್ತು. ಇದರ ನಡುವೆಯೇ, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾ ತಮ್ಮ ಛಾಪು ಮೂಡಿಸಿದವರು ಝಾಕಿರ್. ಚರ್ಮವಾದ್ಯಗಳನ್ನು ‘ಬಾರಿಸುವುದು/ಬಡಿಯುವುದು’ ಎಂದೇ ಕರೆಯುವುದು ವಾಡಿಕೆ; ಆದರೆ ಅವನ್ನೂ ‘ನುಡಿಸಬಹುದು’ ಎಂದು ತೋರಿಸಿಕೊಟ್ಟವರು ಝಾಕಿರ್.
ಪಂಡಿತ ಭೀಮಸೇನ್ ಜೋಶಿಯವರಿಂದ ಹಿಡಿದು ಬಹುತೇಕ ಖ್ಯಾತನಾಮ ಗಾಯಕರಿಗೆ ಝಾಕಿರ್ ತಬಲಾ ಸಾಥ್ ನೀಡಿದ್ದಾರಾದರೂ, ಕೊಳಲು, ಸಂತೂರ್, ಸಿತಾರ್, ಸರೋದ್ ವಾದಕರ ಜತೆಗೂಡಿದ್ದೇ ಹೆಚ್ಚು; ವಾದ್ಯಸಂಗೀತ ದಲ್ಲಿ ತಮ್ಮ ವಿದ್ಯೆಯ ಪ್ರಸ್ತುತಿಗೆ ಅವಕಾಶ ಜಾಸ್ತಿ ಎಂಬುದೇ ಇದಕ್ಕೆ ಕಾರಣ. ತಾಳವಾದ್ಯಗಳ ‘ಸಾಥ್’ ಇಲ್ಲದೆ ವಾದ್ಯ ಸಂಗೀತವೊಂದರಿಂದಲೇ ಪ್ರೇಕ್ಷಕರನ್ನು ರಂಜಿಸುವುದು ಕಷ್ಟವೂ ಹೌದು.
ಹಾಗಾಗಿ, ಶಿವಕುಮಾರ್ ಶರ್ಮಾ, ರವಿ ಶಂಕರ್, ಹರಿಪ್ರಸಾದ್ ಚೌರಾಸಿಯಾ, ಅಮ್ಜದ್ ಅಲಿಖಾನ್ ಮುಂತಾದವರು ದೇಶ-ವಿದೇಶಗಳಲ್ಲಿನ ಕಾರ್ಯಕ್ರಮಗಳಿಗೆ ಒಪ್ಪಿಕೊಳ್ಳುವಾಗ ಝಾಕಿರ್ ಅವರ ಲಭ್ಯತೆಯನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತಿದ್ದರಂತೆ. ಅವರಿದ್ದರೆ ಕಾರ್ಯಕ್ರಮ ಯಶಸ್ವಿ, ಶ್ರೋತೃಗಳಿಗೆ ಭರಪೂರ ಮನರಂಜನೆ ಗ್ಯಾರಂಟಿ
ಎಂಬುದೇ ಇದರ ಹಿಂದಿನ ಉದ್ದೇಶವಾಗಿರುತ್ತಿತ್ತು. ನವಜಾತ ಶಿಶುವಿನ ಕಿವಿಯಲ್ಲಿ, ತಂದೆಯಾದವನು ಮೊದಲು ದೇವರ ಪ್ರಾರ್ಥನೆಯನ್ನು ಗುನುಗುವುದು ಝಾಕಿರ್ ಅವರ ಮನೆತನದಲ್ಲಿ ಸಂಪ್ರದಾಯವಾಗಿತ್ತಂತೆ.
ಆದರೆ ಪ್ರಸಿದ್ಧ ತಬಲಾ ವಾದಕರಾಗಿದ್ದ ಅವರ ತಂದೆ ಅಲ್ಲಾ ರಖಾ ಅವರು ತಬಲಾದ ‘ಬೋಲ್’ ಒಂದನ್ನು ಮಗು
ಝಾಕಿರ್‌ನ ಕಿವಿಯಲ್ಲಿ ಗುನುಗಿದ್ದರಂತೆ! “ದೇವರ ಪ್ರಾರ್ಥನೆ ಹೇಳುವುದು ಬಿಟ್ಟು ಇದೇನು ನಿಮ್ಮ ಹುಡುಗಾಟ?” ಎಂದು ಪತ್ನಿ ತಕರಾರು ತೆಗೆದಾಗ, “ನೋಡು, ನನಗೆ ತಬಲಾವೇ ದೇವರು, ಅದರ ಅಂಗವಾದ ‘ಬೋಲ್ ’ಗಳೇ ಮಂತ್ರ. ಹಾಗಾಗಿ ಮಗುವಿಗೆ ಅದನ್ನೇ ಉಪದೇಶಿಸಿದೆ” ಎಂದಿದ್ದರಂತೆ ಅಲ್ಲಾ ರಖಾ! “ತಾಳವಾದ್ಯಗಳು ಆದಿಯಲ್ಲಿ ಶಿವನ ಡಮರುವಿನಿಂದ ಹೊಮ್ಮಿದ ಶಬ್ದಗಳಾಗಿದ್ದು, ವಿದ್ಯಾಧಿದೇವತೆ ಗಣಪತಿಯು ಆ ನಾದಗಳನ್ನು ವ್ಯವಸ್ಥಿತ ಗೊಳಿಸಿ ದಾಖಲಿಸಿದ್ದಾನೆ; ಮೊದಲು ಢೋಲಕ್‌ಗೆ, ನಂತರದಲ್ಲಿ ತಬಲಾಕ್ಕೂ ಅದೇ ಪರಂಪರೆಯನ್ನು ಬಳಸ ಲಾಯಿತು” ಎಂಬುದು ಅಲ್ಲಾ ರಖಾ ಮತ್ತು ಝಾಕಿರ್ ಹುಸೇನರ ನಂಬಿಕೆಯಾಗಿತ್ತು.
ಮುಸ್ಲಿಮರಾಗಿಯೂ ಈ ವಿಷಯವನ್ನವರು ಅನೇಕ ಸಲ ಬಹಿರಂಗವಾಗಿ ಹೇಳಿದ್ದಿದೆ. ತಾಳವಾದ್ಯಗಳ ಪ್ರವರ್ತ ಕರಾದ ಸದಾಶಿವ-ಗಣೇಶರೆಂದರೆ ಅವರಿಗೆ ಎಲ್ಲಿಲ್ಲದ ಭಕ್ತಿಯಿತ್ತು. ಝಾಕಿರ್ ಹುಸೇನರಿಗೆ ತಂದೆಯೇ ಗುರು, ತಮ್ಮಂದಿರೇ ಶಿಷ್ಯರುಗಳು. ತಬಲಾವಾದನ ಕಲೆ ಅವರಿಗೆ ರಕ್ತಗತವಾಗಿ ಬಂದಿತ್ತು. ಝಾಕಿರ್ ಕಲೆಯೊಂದಿಗೇ ಹುಟ್ಟಿದವರು, ಇಂಥ ವರನ್ನೇ ‘ಅಭಿಜಾತ ಕಲಾವಿದರು’ ಎನ್ನುವುದು. 7ನೇ ವಯಸ್ಸಿಗೆ ಮೊದಲ ‘ಸೋಲೋ’ ಕಾರ್ಯಕ್ರಮ, ೧೨ನೇ ವಯಸ್ಸಿಗೆ ಮೊದಲ ಪೂರ್ಣಪ್ರಮಾಣದ ತಿರುಗಾಟ ಅವರ ಹೆಗ್ಗಳಿಕೆ. ಮುಂದಿನದ್ದೆಲ್ಲಾ ಇತಿಹಾಸ! ಅವರು ಕಾರ್ಯಕ್ರಮ ನೀಡದ ದೇಶವೇ ಇಲ್ಲವೇನೋ! ನಮ್ಮಲ್ಲೂ, ಉಡುಪಿ, ಶಿರಸಿಯಂಥ ಸಣ್ಣ ಊರಿನಲ್ಲೂ ಅವರು ಕಾರ್ಯಕ್ರಮ ನೀಡಿದ್ದಿದೆ. ಅಂತಾರಾಷ್ಟ್ರೀಯ ಮಟ್ಟದ ತಬಲಾ ವಾದಕರಾಗಿದ್ದ ಅವರು ಉದಯೋನ್ಮುಖ ಕಲಾವಿದರಿಗೂ ಸಾಥ್ ನೀಡಿದ್ದುಂಟು, ಅಹಂಕಾರ ಎಂಬುದು ಎಂದೂ ಅಡ್ಡಬರಲೇ
ಇಲ್ಲ.
“ನಾದವಿದ್ಯೆಯ ಕಲಿಕೆಯಲ್ಲಿ ಗುರುವಾದವನು ಸ್ವತಃ ಹೆಚ್ಚಿನದಾದ ಏನನ್ನೂ ಕಲಿಸುವುದಿಲ್ಲ; ಶಿಷ್ಯನಾದವನು ತನಗಿರುವ ಆಸಕ್ತಿಯ ಮೂಲಕ ಗುರುವನ್ನು ಅದಕ್ಕೆ ಪ್ರೇರೇಪಿಸಬೇಕು, ಆಗ ಮಾತ್ರವೇ ನಿಜವಾದ ಕಲಿಕೆ ಸಾಧ್ಯ” ಎಂಬುದು ಝಾಕಿರ್‌ರ ಅಭಿಪ್ರಾಯವಾಗಿತ್ತು. ಅವರು ಕೂಡ ಬೇರೆ ಬೇರೆ ವಿಧಾನಗಳಿಂದ ತಂದೆಯ ಗಮನವನ್ನು ತಮ್ಮತ್ತ ಸೆಳೆಯುವ ಮೂಲಕ ಹೆಚ್ಚಿನದನ್ನು ಕಲಿತಿದ್ದಂತೆ. ತಂದೆಯ ಕಟ್ಟುನಿಟ್ಟಿನ ನಿಗರಾನಿಯಲ್ಲಿ ಬೆಳಗ್ಗೆ 3 ಗಂಟೆಗೆ ಎದ್ದು ಅವರು ರಿಯಾಜ್ ಮಾಡಬೇಕಾಗುತ್ತಿತ್ತಂತೆ. ರಿಯಾಜ್ ವೇಳೆ ತೂಕಡಿಸಿದರೆ ಮುಖಕ್ಕೆ ತಣ್ಣೀರು ಬೀಳುತ್ತಿತ್ತಂತೆ. “ಕಲಿಕೆಯ ವಿಷಯದಲ್ಲಿ ನನಗೆ ಸ್ವಂತ ಮಗನೂ ಉಳಿದ ಶಿಷ್ಯರಂತೆಯೇ, ಕಲಿಕೆಯ ದೃಷ್ಟಿಯಿಂದ ಹಾಗೆ ಶಿಕ್ಷಿಸುವುದು ಅಗತ್ಯವಾಗಿತ್ತು; ಆದರೆ ಆಮೇಲೆ ನೋವಾಗುತ್ತಿತ್ತು” ಎನ್ನುತ್ತಿದ್ದರು ಅಲ್ಲಾ ರಖಾ.
ಹಾಗೆ ನೋಡಿದರೆ, ಝಾಕಿರ್‌ರಿಗೆ ಕ್ರಿಕೆಟಿಗನಾಗಬೇಕೆಂಬ ಆಸೆಯಿತ್ತಂತೆ. ಶಾಲಾ ತಂಡದಲ್ಲಿ ಅವರು ವಿಕೆಟ್ ಕೀಪರ್
ಆಗಿದ್ದರಂತೆ. ಆದರೆ ಒಮ್ಮೆ ಬೆರಳುಮೂಳೆ ಮುರಿದಿದ್ದರಿಂದ ಅಪ್ಪನಿಂದ ಏಟು ತಂದು, ಕ್ರಿಕೆಟ್‌ನಿಂದ ಶಾಶ್ವತವಾಗಿ
ದೂರವಾಗಬೇಕಾಯಿತಂತೆ. ಒಂದೊಮ್ಮೆ ಅವರು ಕ್ರಿಕೆಟ್ ನಲ್ಲೇ ಮುಂದುವರಿದಿದ್ದರೆ, ನಮಗೆ ‘ತಬಲಾ ಮಾಂತ್ರಿಕ’
ಸಿಗುತ್ತಿರಲಿಲ್ಲವೇನೋ!
ಒಬ್ಬ ಗಾಯಕನ ಅಥವಾ ವಾದಕನ ಸಂಗೀತ ಕೇಳುಗರ ಹೃದಯವನ್ನು ತಲುಪಬೇಕೆಂದರೆ ಪರಸ್ಪರರ ನಡುವೆ
ಉತ್ತಮವಾದ ಮತ್ತು ನಿರಂತರವಾದ ಸಂಬಂಧವಿರಬೇಕಾಗುತ್ತದೆ ಎನ್ನುತ್ತಿದ್ದರು ಝಾಕಿರ್. ಅವರು ಕಾರ್ಯಕ್ರಮ
ಪೂರ್ತಿ, ಒಂದಲ್ಲಾ ಒಂದು ವಿಧದಿಂದ ಪ್ರೇಕ್ಷಕರೊಂದಿಗೆ ಸಂವಹನವನ್ನು ಹೊಂದಿಯೇ ಇರುತ್ತಿದ್ದರು. ಅವರ
ಕಾರ್ಯಕ್ರಮಗಳು ಜನರ ಹೃದಯ ಮಟ್ಟಲು ಮುಖ್ಯವಾಗಿ ಇದೇ ಕಾರಣವಿರಬಹುದು. ಒಮ್ಮೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕಾರ್ಯಕ್ರಮದ ಮಧ್ಯೆ ವಿದ್ಯುತ್ ಕೈಕೊಟ್ಟಿತು, ಆದರೆ ಝಾಕಿರ್ ಮಾತ್ರ ತಮ್ಮ ವಾದನವನ್ನು ನಿಲ್ಲಿಸಲಿಲ್ಲ. ಸಭಾಭವನದಲ್ಲಿ ಮರಳಿ ಬೆಳಕು ತುಂಬಿ, ಮುಂದಿರುವ ಮೈಕಿಗೆ ವಿದ್ಯುತ್ ಪ್ರವಹಿಸುವವರೆಗೂ ಕೇಳುಗರನ್ನು ತಮ್ಮ ಮಾಂತ್ರಿಕಶಕ್ತಿಯಿಂದ ಹಿಡಿದಿಟ್ಟುಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದರು ಝಾಕಿರ್.
ಭಾರತದಲ್ಲಿ ಸಂಗೀತಕ್ಕಾಗಿ ಕೊಡಮಾಡುವ ಎಲ್ಲ ಪ್ರಶಸ್ತಿಗಳೂ ಅವರಿಗೆ ಸಂದಿರಲಿಕ್ಕೆ ಸಾಕು. ಮೂರೂ ‘ಪದ್ಮ ಪ್ರಶಸ್ತಿ’ ಗಳನ್ನು ಗಳಿಸಿದ ಕೆಲವೇ ಕಲಾವಿದರಲ್ಲಿ ಝಾಕಿರ್ ಕೂಡ ಒಬ್ಬರು. ಇನ್ನು 5 ‘ಗ್ರ್ಯಾಮಿ’ ಸೇರಿದಂತೆ ಅನೇಕ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ೬೬ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡೆದ 3 ಪ್ರಶಸ್ತಿಗಳು ಸೇರಿದಂತೆ ಒಟ್ಟು 5 ಗ್ರ್ಯಾಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಝಾಕಿರ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಸಂಗೀತಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ದಕ್ಕಿದ ಪ್ರಶಸ್ತಿಗಳಿಂದಾಗಿ ತಮ್ಮ ಗೌರವ ಹೆಚ್ಚಿಸಿಕೊಳ್ಳುವ ಕಲಾವಿದರು ಒಂದು ತೆರನಾದರೆ, ಪ್ರಶಸ್ತಿ ಪಡೆಯುವ
ಮೂಲಕ ಅದರ ಗೌರವವನ್ನೇ ಹೆಚ್ಚಿಸುವವರು ಇನ್ನೊಂದು ವಿಧದವರು. ಝಾಕಿರ್ ಈ ಎರಡನೇ ಬಗೆಗೆ ಸೇರುತ್ತಾರೆ
ಎಂದರೆ ಅತಿಶಯೋಕ್ತಿಯಲ್ಲ. “ಕಲಾವಿದರಿಗೆ ಕೊನೆಯಿದೆ, ಆದರೆ ಅವರು ಬೆಳೆಸಿದ ಕಲೆಗೆ ಕೊನೆಯಿರುವುದಿಲ್ಲ. ಅದು ನಿರಂತರವಾಗಿ ಪ್ರವಹಿಸುವ ನದಿಯಿದ್ದಂತೆ, ಕಾಲಕಾಲಕ್ಕೆ ಬಂದ ಕಲಾವಿದರುಗಳಿಂದ ಮಾರ್ಪಾಡು ಹೊಂದುತ್ತಾ ಕಲೆ ಬೆಳೆಯುತ್ತಲೇ ಸಾಗುತ್ತದೆ.
ಹಾಗಾಗಿ ಕಲಾವಿದರೊಬ್ಬರು ಸತ್ತಾಗ ನೋವಾಗುವುದು ಸಹಜವಾದರೂ, ಕಲೆ ಅವರೊಂದಿಗೆ ಸಾಯುವುದಿಲ್ಲ
ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಸರಿಯಾದ ದಾರಿ” ಎಂದು ಝಾಕಿರ್ ಹುಸೇನರೇ ಒಮ್ಮೆ ಹೇಳಿದ್ದರು.
“ಇಂದಿನ ಯುವ ಕಲಾವಿದರುಗಳು ಬಹಳ ಪ್ರೌಢಿಮೆ ಸಾಧಿಸುತ್ತಿದ್ದಾರೆ, ಅವರು ತಬಲಾ ನುಡಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ಅಚ್ಚರಿಯಾಗುತ್ತದೆ.
ಶಾಸ್ತ್ರೀಯ ಸಂಗೀತಕ್ಕೆ ಭಾರತದಲ್ಲಿ ಉಜ್ವಲವಾದ ಭವಿಷ್ಯವಿದೆ” ಎನ್ನುವ ಭರವಸೆಯನ್ನೂ ಝಾಕಿರ್ ಇತ್ತೀಚೆಗೆ ವ್ಯಕ್ತಪಡಿಸಿದ್ದರು. ಅದೇನೇ ಇರಲಿ, The Tabla will never sound the same again ಎಂಬ ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಮಾತು ಸತ್ಯ. ನಮ್ಮೆಲ್ಲರ ಪ್ರೀತಿಯ ಉಸ್ತಾದ್ ಝಾಕಿರ್ ಹುಸೇನ್ ಅವರು ಇಂದು ನಮ್ಮ ನಡುವೆ ಇಲ್ಲದಿರಬಹುದು, ಆದರೆ ತಬಲಾ ಎನ್ನುವ ವಾದ್ಯವನ್ನು ಸಂಗೀತದಲ್ಲಿ ಎಲ್ಲಿಯವರೆಗೆ ಬಳಸಲಾಗುತ್ತದೋ ಅಲ್ಲಿಯ ವರೆಗೆ ಅವರು ಇದ್ದೇ ಇರುತ್ತಾರೆ.
“ಯದ್ಯದ್ವಿಭೂತಿಮತ್ ಸತ್ವಂ ಶ್ರೀಮದೂರ್ಜಿತಮೇವ ವಾ | ತತ್ತದೇವಾವ ಗಚ್ಛತ್ವಂ ಮಮ ತೇಜೋಂಶ ಸಂಭವಂ”
ಎಂಬ ಗೀತೋಕ್ತಿಯಿದೆ. “ಯಾರಲ್ಲಿ ಅತ್ಯಂತ ಹೆಚ್ಚಿನ ಪ್ರತಿಭಾ ಸಂಪನ್ನತೆ ಎದ್ದು ಕಾಣುತ್ತದೆಯೋ, ಅವರು ನನ್ನ
ತೇಜಸ್ಸಿನ ಅಂಶವನ್ನು ಹೊತ್ತು ಬಂದಿರುತ್ತಾರೆ” ಎನ್ನುವುದು ಈ ಮಾತಿನ ಅರ್ಥವಾಗಿದೆ. ಝಾಕಿರ್ ಅವರಂಥ ಕಲಾ
ವಿದರು ಭಗವಂತನ ತೇಜಸ್ಸಿನ ಭಾಗವಾಗಿ ಆವಿರ್ಭವಿಸಿ, ಲೋಕರಂಜನೆ ಮಾಡಿ, ಸಾಮಾನ್ಯರ ದೈನಂದಿನ ಜೀವನ ವನ್ನು ತಮ್ಮ ಕಲಾತ್ಮಕತೆಯಿಂದ ಸಹನೀಯಗೊಳಿಸಿದ ಅಥವಾ ದಿವ್ಯ ವಾಗಿಸಿದ ಕಾರಣದಿಂದಲೇ ಇರಬೇಕು ಅವರನ್ನು ‘ದೈವೀ ಪುರುಷ’ ಅಂತ ಕರೆಯುತ್ತಿದ್ದುದು.
ಝಾಕಿರ್ ಅವರು ಒಮ್ಮೆ, “ಶಾಗಿರ್ದ್ ಬನ್‌ಕೆ ಆಯಾಥಾ, ಶಾಗಿರ್ದ್ ಬನ್‌ಕೆ ಹೀ ಜಾವೂಂಗಾ” ಅಂತ ಹೇಳಿದ್ದರು. ಶಿಷ್ಯನಾಗಿ ಬಂದಿದ್ದೆ, ಏನೋ ಸ್ವಲ್ಪ ಸಾಧನೆಯಾಗಿರಬಹುದು. ಆದರೆ ಕಲಿಯುವುದು ಇನ್ನೂ ಬಹಳವಿದೆ, ಹಾಗಾಗಿ ಶಿಷ್ಯನಾಗಿಯೇ ತೆರಳುತ್ತೇನೆ ಎನ್ನುವ ವಿನೀತಭಾವದಿಂದಲೇ ಉಸ್ತಾದ್ ಝಾಕಿರ್ ಹುಸೇನ್ ಹೊರಟು ಬಿಟ್ಟರು.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: Vinayaka M Bhatta, Amblihonda Column: ಕೆರೆಯ ನೀರಲು ಕೆರೆಗೆ ಚೆಲ್ಲುವ ಕಳಕಳಿ