Thursday, 28th November 2024

ಮೂಗು ತೂರಿಸಲು ರಾಜಕಾರಣಿಗಳೇನು ಸರ್ವಜ್ಞರಾ ?

ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್‌

ವಿನೇಶ್ ಪೋಗಟ್ ಅನರ್ಹತೆಗೆ, ಆಕೆ ತಮ್ಮ ತೂಕವನ್ನು ನಿರ್ವಹಿಸಲಾಗದ್ದೇ ಕಾರಣವಾಯಿತು. ಆದರೆ ಅದಕ್ಕೆ ಪಿತೂರಿಯ ಬಣ್ಣ ಬಳಿಯಲು, ಮೋದಿ ಸರಕಾರದ ವಿರುದ್ಧದ ಪೋಗಟ್ ಪ್ರತಿಭಟನೆಯನ್ನು ನೆಪವಾಗಿಟ್ಟುಕೊಂಡು ಈ ಅಚಾತುರ್ಯಕ್ಕೆ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕೆಲವರು ಯತ್ನಿಸುತ್ತಿದ್ದಾರೆ.

ಕುಸ್ತಿಪಟು ವಿನೇಶ್ ಪೋಗಟ್ ಅವರು ಸ್ಪರ್ಧೆ ಮಾಡಿದ್ದ ೫೦ ಕೆ.ಜಿ. ವಿಭಾಗದಲ್ಲಿ ಅವರ ತೂಕವು ನೂರು ಗ್ರಾಂ ಹೆಚ್ಚಾಗಿದ್ದ ಕಾರಣ ಫೈನಲ್ ಪಂದ್ಯ ದಲ್ಲಿ ಭಾಗವಹಿಸಲು ಅವರನ್ನು ಅನರ್ಹಗೊಳಿಸಲಾಯಿತು. ಪೋಗಟ್ ಅವರು ವಿಶ್ವದ ನಂ.೧ ಯುಯಿ ಸಸಾಕಿ ಅವರನ್ನು ಸೋಲಿಸಿ, ನಂತರ ಕ್ಯೂಬಾದ ಗುಜ್‌ಮಾನ್‌ರವರನ್ನು ಪರಾಭವಗೊಳಿಸಿ ಫೈನಲ್ ತಲುಪಿದಾಗ ಭಾರತಕ್ಕೆ ಚಿನ್ನದ ಪದಕದ ಆಸೆ ಗರಿಗೆದರಿತು. ಆದರೆ ಅನಿರೀಕ್ಷಿತ ಬೆಳವಣಿಗೆಯು ೧೪೦ ಕೋಟಿ ಭಾರತೀಯರ ಚಿನ್ನದ ಕನಸನ್ನು ನುಚ್ಚುನೂರಾಗಿಸಿತು.

ತೂಕದ ಸಮಸ್ಯೆಯಿಂದಾಗಿ ಪೋಗಟ್ ಅವರು ಪಂದ್ಯದಿಂದ ಅನರ್ಹರಾದ ಕೂಡಲೇ ಭಾರತದಲ್ಲಿ ರಾಜಕೀಯ ಪ್ರೇರಿತ ಟೀಕೆ-ಟಿಪ್ಪಣಿಗಳು ಸ್ಪೋಟ ಗೊಂಡವು. ವಿನೇಶ್ ಪೋಗಟ್‌ರವರು ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್‌ರವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ, ಅವರನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆಗಿಳಿದು ಹೋರಾಟ ಮಾಡಿದ್ದರು.

ಚಿನ್ನ ಗೆಲ್ಲುವ ಹೊಸ್ತಿಲಲ್ಲಿ ವಿನೇಶ್ ಪೋಗಟ್ ಅವರಿಗೆ ಒದಗಿದ ಅನರ್ಹತೆಯು ಮೋದಿ ವಿರೋಧಿಗಳಿಗೆ ಸರಕಾರದ ವಿರುದ್ಧ ಷಡ್ಯಂತ್ರದ ಆರೋಪ ಮಾಡಿ ವಾಗ್ದಾಳಿ ನಡೆಸುವ ಸುವರ್ಣಾವಕಾಶವನ್ನು ತಂದುಕೊಟ್ಟಿತು. ವಿನೇಶ್ ಪೋಗಟ್ ಅವರಿಗೆ ತೂಕದ ಸಮಸ್ಯೆಯು ಹೊಸದೇನಲ್ಲ. ೨೦೧೬ರ ರಿಯೋ (ಬ್ರೆಜಿಲ್) ಒಲಿಂಪಿಕ್ಸ್‌ನಲ್ಲಿ ಆಕೆ ಸ್ಪರ್ಧಿಸಬೇಕಿದ್ದ ೪೮ ಕೆ.ಜಿ. ವಿಭಾಗದಲ್ಲಿ ೪೦೦ ಗ್ರಾಂ ತೂಕ ಹೆಚ್ಚಾಗಿದ್ದ ಕಾರಣ ಅನರ್ಹಗೊಂಡಿದ್ದರು. ಅದೇ ಒಲಿಂಪಿಕ್ಸ್ ನಲ್ಲಿ ಭಾರತದ ಇತರ ಸ್ಪರ್ಧಿಗಳಾದ ಬಬಿತಾ, ಅನಿತಾ, ನವಜೋತ್ ಕೌರ್ ಮತ್ತು ಜ್ಯೋತಿಯವರು ಕೂಡ ಅನರ್ಹಗೊಂಡಿದ್ದರು. ೨೦೨೦ರ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪೋಗಟ್ ಸ್ಪರ್ಧಿಸಿದ್ದು ೫೩ ಕೆ.ಜಿ. ವಿಭಾಗದಲ್ಲಿ; ಆ ತೂಕವನ್ನು ನಿರ್ವಹಿಸಲೂ ಪೋಗಟ್ ಪರದಾಡಬೇಕಾ ಯಿತು ಎಂದು ‘ಸ್ಪೋರ್ಟ್ಸ್ ಸ್ಟಾರ್’ ವರದಿಗಾರ ಜೊನಾಥನ್ ಸೆಲ್ವರಾಜ್ ಹೇಳಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಪೋಗಟ್ ನಡೆಸಿದ ಸತತ ಹೋರಾಟವು ಅವರ ಕ್ರೀಡಾಸಿದ್ಧತೆಯ ಮೇಲೆ ಪರಿಣಾಮ ಬೀರಿತ್ತು. ಒಲಿಂಪಿಕ್ಸ್ ಆಯ್ಕೆಯ ಟ್ರಯಲ್ಸ್‌ ನಲ್ಲಿ ೫೩ ಕೆ.ಜಿ. ವಿಭಾಗದಲ್ಲಿ ಅಂತಿಮ್ ಪಂಘಲ್‌ರವರು ಅರ್ಹತೆ ಪಡೆದರು. ವಿಶ್ವ ಕುಸ್ತಿ ಫೆಡರೇಷನ್ ನಿಯಮಾವಳಿಯ ಪ್ರಕಾರ ಒಬ್ಬ ಸ್ಪರ್ಧಿಗೆ ಎರಡು ವಿಭಾಗದ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ; ಆದರೆ ಈ ನಿಯಮವನ್ನು ಸಡಿಲಿಸಿ ವಿನೇಶ್ ಪೋಗಟ್‌ರವರಿಗೆ ೫೦
ಕೆ.ಜಿ. ಟ್ರಯಲ್ಸ್‌ನಲ್ಲಿಯೂ ಅವಕಾಶ ಕೊಡಲಾಯಿತು. ೫೩ ಕೆ.ಜಿ. ತೂಕದ ವಿನೇಶ್, ೫೦ ಕೆ.ಜಿ. ತೂಕದ ಶಿವಾನಿ ಎದುರು ೧೦-೬ರಿಂದ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ವಿಶ್ವ ಕುಸ್ತಿ ಪೊಲೀಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ೨೬ ವರ್ಷದ ಶಿವಾನಿ ತಮಗಿಂತ ಹಿರಿಯ ಸ್ಪರ್ಧಿಯೆದುರು ಸೋತು ಒಲಿಂಪಿಕ್ಸ್ ಅವಕಾಶ
ದಿಂದ ವಂಚಿತರಾದರು. ವಿನೇಶ್ ಪೋಗಟ್‌ರವರ ಒಲಿಂಪಿಕ್ಸ್ ಸಿದ್ಧತೆಗೆ ಯಾವ ಕೊರತೆಯಿರಲಿಲ್ಲ. ಪೋಗಟ್ ಬೇಡಿಕೆಯಂತೆ ಕ್ರೀಡಾ ಇಲಾಖೆಯು
ಅವರ ತರಬೇತಿಗೆ ಬುಡಾಪೆಸ್ಟ್‌ನಲ್ಲಿ ವ್ಯವಸ್ಥೆ ಮಾಡಿತ್ತು. ಬಯಸಿದ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳ ಸೌಲಭ್ಯವನ್ನು ನೀಡಲಾಗಿತ್ತು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಪೋಗಟ್ ಅವರು ಮಂಗಳವಾರ ಆಡಿದ ಮೂರು ಪಂದ್ಯದ ಮೊದಲು ಅವರ ತೂಕವು ೪೯.೯ ಕೆ.ಜಿ.ಯಷ್ಟಿತ್ತು.
ಪಂದ್ಯದ ತರುವಾಯ ಈ ತೂಕ ೫೨.೭ ಕೆ.ಜಿ.ಗೆ ಹೆಚ್ಚಳವಾಯಿತು. ಮರುದಿನ ಬೆಳಗ್ಗೆಯ ತೂಕ ಪರೀಕ್ಷೆಯ ವೇಳೆಗೆ ತಮ್ಮ ತೂಕವನ್ನು ೫೦ ಕೆ.ಜಿ.ಗೆ ಇಳಿಸಲು ಅವರು ರಾತ್ರಿಯೆಲ್ಲಾ ಸೌನಾ ಮತ್ತು ಸ್ಟೀಮ್ ಬಾತ್ ತೆಗೆದುಕೊಂಡರು, ಆರು ಗಂಟೆಗಳ ಕಾಲ ಟ್ರೆಡ್‌ಮಿಲ್ ಮಾಡಿದರು. ತಲೆಗೂದಲನ್ನು
ಕತ್ತರಿಸಿಕೊಂಡಿದ್ದರ ಜತೆಗೆ ದೇಹದಿಂದ ರಕ್ತವನ್ನೂ ಎಳೆದು ತಮ್ಮ ತೂಕವನ್ನು ೫೦ ಕೆ.ಜಿ.ಗೆ ಇಳಿಸಿಕೊಳ್ಳಲು ಹರಸಾಹಸ ಮಾಡಿದ್ದರು ಎಂದು ಭಾರತೀಯ ಒಲಿಂಪಿಕ್ ತಂಡದ ಮುಖ್ಯ ವೈದ್ಯಾಧಿಕಾರಿ ಡಾ. ದಿನ್ ಶಾ ಪರ್ದಿವಾಲಾ ವಿವರಿಸಿದ್ದಾರೆ.

ವಿನೇಶ್ ಪೋಗಟ್ ಅವರ ಅನರ್ಹತೆಗೆ, ತಮ್ಮ ತೂಕವನ್ನು ನಿರ್ವಹಿಸಲು ಆಕೆಗೆ ಸಾಧ್ಯವಾಗದ್ದೇ ಕಾರಣವಾಯಿತು. ಆದರೆ ಅದಕ್ಕೆ ಪಿತೂರಿಯ ಬಣ್ಣ ಬಳಿಯಲು ಇನ್ನಿಲ್ಲದ ಪ್ರಯತ್ನ ಮಾಡಲಾಗುತ್ತಿದೆ. ಪೋಗಟ್ ರವರು ಮೂರನೆಯ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡುತ್ತಿದ್ದವರು, ತೂಕದ ಸಮಸ್ಯೆಯ ಬಗ್ಗೆ ಚೆನ್ನಾಗಿ ಅರಿತಿದ್ದವರು. ಆದರೆ ಬಿಜೆಪಿಯ ವಿರೋಧಿಗಳು, ಮೋದಿ ಸರಕಾರದ ವಿರುದ್ಧದ ಪೋಗಟ್ ಅವರ ಪ್ರತಿಭಟನೆಯನ್ನು ನೆಪವಾಗಿಟ್ಟು ಕೊಂಡು ಈಗ ನಡೆದಿರುವ ಅಚಾತುರ್ಯಕ್ಕೆ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ತೊಡಗಿದ್ದಾರೆ.

ಕೆಲವೇ ತಿಂಗಳಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯು ನಡೆಯಲಿದ್ದು, ಅದೇ ರಾಜ್ಯಕ್ಕೆ ಸೇರಿರುವ ಪೋಗಟ್‌ರವರ ಅನರ್ಹತೆಯ ಪ್ರಕರಣವನ್ನು ಈ ವೇಳೆ ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವುದು ಈ ಕಸರತ್ತಿನ ಹಿಂದಿರುವ ಹುನ್ನಾರವಷ್ಟೇ. ಕಾಂಗ್ರೆಸ್ ನಾಯಕ ಸುರ್ಜೆವಾಲಾ ಅವರು
‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ, ‘ಒಂದು ದಿನದಲ್ಲಿ ಮೂರು ಪಂದ್ಯವಾಡಿ ಜಯಿಸಿದವಳ ದೇಹತೂಕವು ಮರುದಿನ ೧೦೦ ಗ್ರಾಂನಷ್ಟು ಹೇಗೆ
ಹೆಚ್ಚಾಗುತ್ತದೆ? ಇದೊಂದು ಷಡ್ಯಂತ್ರ’ ಎಂದು ಆರೋಪಿಸಿದರು. ಹೀಗೆ ಪೋಗಟ್ ಅವರ ಅನರ್ಹತೆಯನ್ನು, ಆಕೆ ಮೋದಿ ಸರಕಾರದ ವಿರುದ್ಧ ಕೈಗೊಂಡಿದ್ದ ಹೋರಾಟಕ್ಕೆ ತಳಕುಹಾಕಲು ಯತ್ನಿಸಿದರು.

ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿಯವರು, ‘ಪೋಗಟ್ ಅನರ್ಹತೆಯ ಹಿಂದಿನ ಪಿತೂರಿ ಬಯಲಿಗೆ ಬರಬೇಕೆಂದರೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು. ಇವರಿಬ್ಬರು ಹೀಗೆ ಹೇಳಿಕೆ ನೀಡುವ ಮುನ್ನ ಅಲ್ಲಿ ನಡೆದ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಇಲ್ಲದೆ, ತಜ್ಞರ ಬಳಿ ಸಮಾಲೋಚನೆ ಮಾಡದೆ, ಕೇವಲ ಸರಕಾರಕ್ಕೆ ಮಸಿಬಳಿಯುವ ದುರುದ್ದೇಶ ದಿಂದ ಹೀಗೆ ಟೀಕಿಸಿದ್ದಾರೆ.

ಪೋಗಟ್ ಪತಿ, ತರಬೇತುದಾರ ಮತ್ತು ಡಯಟಿಷಿಯನ್ ಅವರೊಂದಿಗೇ ಇದ್ದರು. ಅವರೆಲ್ಲರ ಪ್ರಯತ್ನದ ನಂತರವೂ ಹೆಚ್ಚಾದ ತೂಕವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಮೂರು ಪಂದ್ಯವಾಡಿದ ನಂತರ ಆಕೆಯ ತೂಕ ೧.೭ ಕೆ.ಜಿ. ಹೆಚ್ಚಾಗಿದೆ. ಇದು ಸಹಜವಾದ ಕ್ರಿಯೆ ಎಂದು ಸ್ವತಃ ಅವರ ಅಕ್ಕ ಬಬಿತಾ ಪೋಗಟ್ ಹೇಳಿದ್ದಾರೆ. ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ನಿಯಮಾವಳಿಗಳನ್ನು ರಾಜಿ ಇಲ್ಲದೆ ಜಾರಿಗೊಳಿಸುತ್ತಾರೆ. ಇಲ್ಲಿಯವರೆಗಿನ ಒಲಿಂಪಿಕ್ಸ್ ಇತಿಹಾಸದಲ್ಲಿ ೧೫೦ಕ್ಕೂ ಹೆಚ್ಚು ಜನರು ಅನರ್ಹತೆ ಎದುರಿಸಿದ್ದಾರೆ. ೧೯೮೮ರ ಸೋಲ್ ಒಲಿಂಪಿಕ್ಸ್‌ನಲ್ಲಿ ಕೆನಡಾದ ಅಥ್ಲೀಟ್ ಬೆನ್ ಜಾನ್ಸನ್
ಅವರು ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ೯.೭೯ ಸೆಕೆಂಡಿನಲ್ಲಿ ಆ ಅಂತರವನ್ನು ಕ್ರಮಿಸಿ ವಿಶ್ವದಾಖಲೆ ಬರೆದರು; ಆದರೆ ಅವರ ಮೂತ್ರಪರೀಕ್ಷೆ
ಮಾಡಿದಾಗ ಉದ್ದೀಪನ ಮದ್ದು ಸೇವನೆ ಮಾಡಿದ್ದು ಪತ್ತೆಯಾಗಿ ಅವರ ಪದಕವನ್ನು ಹಿಂಪಡೆಯಲಾಯಿತು.

೨೦೨೪ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೇ, ಇಟಲಿಯ ಸ್ಪರ್ಧಿ ಎಮಾನ್ಯುಯೆಲ್ ಲಿಝಿ ಅವರು ತೂಕದ ಕಾರಣಕ್ಕೆ ೫೦ ಕೆ.ಜಿ. ವಿಭಾಗದಲ್ಲಿ ಅನರ್ಹರಾದರು. ಹೀಗೆ ತಮ್ಮ ಸ್ಪರ್ಧಿಗಳು ಅನರ್ಹಗೊಂಡಾಗ ಕೆನಡಾದವರಿಗಾಗಲೀ, ಇಟಲಿಯವರಿಗಾಗಲೀ ಯಾವ ಪಿತೂರಿಯೂ ಕಾಣಲಿಲ್ಲ!

ತೂಕ ಹೆಚ್ಚಾಗಿದೆಯೆಂದು ಸ್ಪರ್ಧೆಯಿಂದ ಹಿಂದೆ ಸರಿಯಬಹುದಿತ್ತಾ? ತೂಕದ ಆಧಾರದ ಮೇಲೆ ಸ್ಪರ್ಧಿಸುವ ಸ್ಪರ್ಧಿಗಳು ಪಂದ್ಯದಲ್ಲಿ ಭಾಗವಹಿಸುವ
ಮುನ್ನ ತೂಕದ ಪರೀಕ್ಷೆ ಕಡ್ಡಾಯವಾಗಿರುತ್ತದೆ. ತೂಕ ಹೆಚ್ಚಾಯಿತೆಂದು ತಪ್ಪಿಸಿದರೆ ಗೆಲುವು ರದ್ದುಮಾಡಿ ಕೊನೆಯ ಸ್ಥಾನಕ್ಕೆ ದೂಡುತ್ತಾರೆ. ‘ನೂರು ಗ್ರಾಂ ಹೆಚ್ಚಾಗಿದ್ದಕ್ಕೆ ಅನರ್ಹಗೊಳಿಸಿರುವುದು ತಪ್ಪು, ಮೋದಿಯವರು ಮಧ್ಯ ಪ್ರವೇಶಿಸಿ ಇದನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಲಾಗುತ್ತಿದೆ. ಕ್ರೀಡಾ ಫೆಡರೇಷನ್‌ಗಳು ತಮ್ಮ ಸಂವಿಧಾನದ ಮೇಲೆಯೇ ಕಾರ್ಯನಿರ್ವಹಿಸುವುದು.

ಒಲಿಂಪಿಕ್ಸ್ ಇತಿಹಾಸದಲ್ಲಿ ಕೈಗೊಂಡ ನಿರ್ಧಾರಗಳು ರಾಜಕೀಯ ಒತ್ತಡಕ್ಕೆ ಬದಲಾಗಿಲ್ಲ. ಆದರೂ ಕುಚೇಷ್ಟೆಯಿಂದ ಹೀಗೆ ಮನವಿ ಮಾಡುತ್ತಿದ್ದಾರೆ.
ವಿಚಿತ್ರವೆಂದರೆ, ವಿರೋಧ ಪಕ್ಷದ ಲೋಕಸಭಾ ಸದಸ್ಯರು ಕಲಾಪದಿಂದ ಸಭಾತ್ಯಾಗ ಮಾಡಿ, ಸಂಸತ್ತಿನ ಮಕರ ದ್ವಾರದ ಬಳಿ ‘ಪೋಗಟ್‌ರವರಿಗೆ
ನ್ಯಾಯ ಕೊಡಿಸಿ’ ಎಂದು ಘೋಷಣೆ ಕೂಗಿಕೊಂಡು ಪ್ರತಿಭಟಿಸಿ ತೀರಾ ಬಾಲಿಶವಾಗಿ ವರ್ತಿಸಿದರು. ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯ್ ಅವರು ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ, ‘ವಿಶ್ವಗುರು ಎಂದು ಹೇಳಿಕೊಳ್ಳುತ್ತೇವೆ, ಅದರ ಶಕ್ತಿ ಕ್ರೀಡೆಯಿಂದ ಆರಂಭವಾಗಲಿ ಮತ್ತು ರಿಲಯನ್ಸ್ ಗುಂಪಿಗೆ ನಿಮ್ಮ ಪ್ರಭಾವ ಎಷ್ಟಿದೆ ಎಂದು ತೋರಿಸಿ’ ಎಂದು ಅತ್ಯಂತ ಹಾಸ್ಯಾಸ್ಪದವಾಗಿ ಬರೆದುಕೊಂಡರು.

ಸ್ವತಃ ಕ್ರೀಡಾ ಕುಟುಂಬದಿಂದ ಬಂದಿರುವ ಇವರಿಗೆ ವಾಸ್ತವತೆಯ ಅರಿವಿದ್ದರೂ ಸರಕಾರಕ್ಕೆ ಸವಾಲೊಡ್ಡಿದರು. ೫೩ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಪೋಗಟ್‌ರವರು ಕೇಳಿಕೊಂಡರೂ ಫೆಡರೇಷನ್ ಒಪ್ಪಲಿಲ್ಲ ಎಂಬ ಅರ್ಧಸತ್ಯವನ್ನು ಹೇಳಲಾಗುತ್ತಿದೆ. ೫೩ ಕೆ.ಜಿ. ಆಯ್ಕೆಯ ಟ್ರಯಲ್ ನಲ್ಲಿ ಪೋಗಟ್ ೧೦-೦ ಅಂಕಗಳಿಂದ ಅಂಜು ಅವರಿಗೆ ಪರಾಭವಗೊಂಡು ಆಯ್ಕೆಗೆ ಅನರ್ಹರಾದರು. ಆಯ್ಕೆಯ ಟ್ರಯಲ್ಸ್‌ನಲ್ಲಿ ಗೆದ್ದವರನ್ನು
ಕೂರಿಸಿ, ಸೋತವರನ್ನು ಆಯ್ಕೆಮಾಡುವುದು ಹೇಗೆ ಸಾಧ್ಯವಾದೀತು? ಪೋಗಟ್‌ರವರ ಸಹಜತೂಕ ೫೭ ಕೆ.ಜಿ.; ಆದರೆ ಸ್ಪರ್ಧಿಸಲೇಬೇಕು ಎಂದು ಅವರೇ
ಆಯ್ಕೆಮಾಡಿಕೊಂಡಿದ್ದು ೫೦ ಕೆ.ಜಿ. ವಿಭಾಗ. ಇಂದು ವಿನೇಶ್ ಪೋಗಟ್‌ರವರನ್ನು ವಿರೋಧ ಪಕ್ಷದ ನಾಯಕರುಗಳು ಅತಿರೇಕವಾಗಿ ವೈಭವೀಕರಿಸು ತ್ತಿದ್ದಾರೆ; ಇದರ ಹಿಂದೆ, ಆಕೆಯ ಮೇಲಿನ ಅಭಿಮಾನಕ್ಕಿಂತ, ಬಿಜೆಪಿಗೆ ಮುಜುಗರ ಉಂಟುಮಾಡುವ ದುರುದ್ದೇಶವೇ ಹೆಚ್ಚು ಕಾಣುತ್ತಿದೆ.

ಪೋಗಟ್‌ರಿಗೆ ‘ಭಾರತರತ್ನ’ ಪುರಸ್ಕಾರ ನೀಡಬೇಕು, ಆಕೆಯನ್ನು ರಾಜ್ಯಸಭೆಗೆ ನಾಮಕರಣ ಮಾಡಬೇಕು ಎಂಬ ಉದಾರವಾದ ಸಲಹೆಗಳನ್ನು ಕಾಂಗ್ರೆಸ್
ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ನೀಡುತ್ತಿದ್ದಾರೆ. ಪೋಗಟ್ ಅನರ್ಹಗೊಂಡ ನಂತರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಲೋಕಸಭೆಯಲ್ಲಿ ಹೇಳಿಕೆ ನೀಡುವಾಗ, ಪೋಗಟ್ ರವರ ಒಲಿಂಪಿಕ್ ಸಿದ್ಧತೆಗೆ ಸರಕಾರ ಮಾಡಿದ ವೆಚ್ಚದ ವಿವರವನ್ನು ನೀಡಿದರು. ಇದು
ಬೇಡವಾಗಿತ್ತು.

ತಮಗೆ ಕನಿಷ್ಠಪಕ್ಷ ಬೆಳ್ಳಿ ಪದಕವನ್ನು ನೀಡಬೇಕು ಎಂದು ಪೋಗಟ್‌ರವರು ಒಲಿಂಪಿಕ್ ಸಮಿತಿಯ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಅವರ ಮನವಿ
ಯನ್ನು ಪುರಸ್ಕರಿಸುವ ಸಾಧ್ಯತೆಗಳು ಕ್ಷೀಣವಾಗಿ ದ್ದರೂ, ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂಬುದೇ ಪ್ರತಿಯೊಬ್ಬ ಭಾರತೀಯರ ಆಶಯವಾಗಿದೆ.
ರಾಜಕೀಯ ಶಕ್ತಿಗಳು ತಮ್ಮನ್ನು ತಾವು ಸರ್ವಜ್ಞರೆಂದು ಭಾವಿಸಿ, ಸ್ವಹಿತಾಸಕ್ತಿಯ ಕಾರಣಕ್ಕೆ ಅರ್ಥವಾಗದಿರುವ ವಿಷಯದಲ್ಲಿ ಅಭಿಪ್ರಾಯ
ನೀಡದಿರುವುದು ಸೂಕ್ತ. ಹಾಗಿಲ್ಲವಾದರೆ ಇವರ ರಾಜಕೀಯಪ್ರೇರಿತ ನಿಲುವುಗಳು ಕ್ರೀಡೆಯ ಬೆಳವಣಿಗೆಗೆ ಮಾರಕವಾಗುತ್ತವೆ.

(ಲೇಖಕರು ಬಿಜೆಪಿ ವಕ್ತಾರರು)