ಜಾಲಾಂತರಂಗ ಅಂಕಣ: ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಸ್ಮಾರ್ಟ್ ಆಗಿರಿ
- ಡಾ. ವಿನೋದ್ ಕೃಷ್ಣ
ಇಂದು ಇಂಟರ್ನೆಟ್ (ಅಂತರ್ಜಾಲ), ಕಂಪ್ಯೂಟರ್ (ಗಣಕ ಯಂತ್ರ), ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಸ್ಮಾರ್ಟ್ ಸಾಧನಗಳಲ್ಲಿ ನಾವು ಪ್ರತಿದಿನ ಎಷ್ಟು ಸಮಯವನ್ನು ಕಳೆಯುತ್ತೇವೆ ಎಂದು ಊಹಿಸಿ.
ನಾವು ಇಂಟರ್ನೆಟ್ ಸಂವಹನ ಮಾಧ್ಯಮಗಳಾದ Google, ಇಮೇಲ್ಗಳು, ವಾಟ್ಸಪ್ (WhatsApp), ಫೇಸ್ಬುಕ್ (Facebook), ಇನ್ಸಟಗ್ರಾಮ್ (Instagram), ಯೂ ಟ್ಯೂಬ್ (YouTube), ಟಿವ್ವಿಟ್ಟರ್ (Twitter) ಇತ್ಯಾದಿಗಳನ್ನು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ಮಾಡಿದ್ದೇವೆ. ಇದೆಲ್ಲವೂ ನಮಗೆ ಇಂದು ಮೊಬೈಲಲ್ಲೇ ಲಭ್ಯ. ಜೊತೆಗೆ ವಿಧ ವಿಧವಾದ ಆಟಗಳು, ಆಕರ್ಷಿಸುವ ವಿಡಿಯೋಗಳು ನಮ್ಮ ಗಮನವನ್ನು ಯಾವಾಗಲೂ ತಮ್ಮತ್ತ ಸೆಳೆಯುತ್ತಿರುತ್ತದೆ. ಆನ್ಲೈನ್ ತರಗತಿಗಳಿಗೆ, ಮತ್ತು ಶೈಕ್ಷಣಿಕ ವಿಚಾರಗಳಿಗೆ, ಕಲಿಕೆಗೆ ಕೊಂಡ ಮೊಬೈಲ್ ದುರ್ಬಳಕೆ ಆಗಬಹುದು. ಈ ಸಂದರ್ಭದಲ್ಲಿ, ಸೈಬರ್ ಜಗತ್ತಿನ ಬಗ್ಗೆ, ಮತ್ತು ಅಲ್ಲಿ ಸುರಕ್ಷಿತವಾಗಿರಲು ನಮ್ಮ ವರ್ತನೆಯ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಜೊತೆಗೆ, ನಮ್ಮಲ್ಲಿ ಹೆಚ್ಚಿನವರಿಗೆ ಸೈಬರ್ ಸುರಕ್ಷತೆ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭದ್ರತಾ ಅಗತ್ಯಗಳ ಬಗ್ಗೆ ತಿಳಿದಿಲ್ಲ.
ಇಂಟರ್ನೆಟ್ ಒಂದು ಜಾಗತಿಕ ನೆಟ್ವರ್ಕ್. ಜಗದೆಲ್ಲಾ ಮಾಹಿತಿಗಳ ಆಗರ. ನಿಮ್ಮ ಎಲ್ಲಾ ಚಟುವಟಿಕೆಗಳು, ನೀವು ಓದುವ ವಿಷಯಗಳು, ವಾಟ್ಸಪ್, ಫೇಸ್ಬುಕ್, ಗೂಗಲ್ ಮುಂತಾದ ಆಪ್ಗಳಲ್ಲಿನ ನಿಮ್ಮ ಪೋಸ್ಟ್, ಎಲ್ಲವೂ ಇಲ್ಲಿ ಅಜರಾಮರ. ಅಂದರೆ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ಯಾವುದೇ ಮಾಹಿತಿ ಅಥವಾ ವೈಯಕ್ತಿಕ ವಿವರಗಳು ಆನ್ಲೈನ್ನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಆನ್ಲೈನ್ ಗೆ ಅಪ್ ಲೋಡ್ ಆದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸುವುದು ತುಂಬಾ ಕಷ್ಟ. ಮತ್ತು ನೀವು ನೋಡಿದ ಪ್ರತಿಯೊಂದು ವೆಬ್ ಸೈಟ್, ವಿಡಿಯೋ, ನೋಡಿದ ಯಾವುದೇ ತರಹದ ಮಾಹಿತಿ ನಿಮ್ಮ ಆನ್ಲೈನ್ ವರ್ತನೆಯನ್ನು ಯಾರಿಗಾದರೂ ತಿಳಿಸುತ್ತದೆ. ಇದನ್ನು ‘ಡಿಜಿಟಲ್ ಫುಟ್ ಪ್ರಿಂಟ’ ಎನ್ನುತ್ತಾರೆ. ಈ ಫುಟ್ ಪ್ರಿಂಟನ್ನು ಅಳಿಸುವುದು ಅಸಾಧ್ಯ. ಅದು ನಿಮ್ಮ ಬಗ್ಗೆ, ನಿಮ್ಮ ಸ್ನೇಹಿತರು, ಸಂಬಂಧಿಗಳ ಬಗ್ಗೆ, ನಿಮ್ಮ ಇಷ್ಟ ಮತ್ತು ಆಧ್ಯತೆಗಳ ಬಗ್ಗೆ ತಿಳಿಯುವ ಆಸಕ್ತರಿಗೆ ಸುಲಭವಾಗಿ ತಿಳಿಸುತ್ತದೆ.
ಸೈಬರ್ ಕ್ರೈಮ್ ಎಂದರೇನು?
ಸೈಬರ್ ಅಪರಾಧಗಳು ಕಂಪ್ಯೂಟರ್, ಇಂಟರ್ನೆಟ್ ಅಥವಾ ಮೊಬೈಲ್ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯಕ್ತಿಗಳು, ಕಂಪನಿಗಳು ಅಥವಾ ಸಂಸ್ಥೆಗಳ ವಿರುದ್ಧ ಮಾಡಬಹುದಾದ ಅಪರಾಧಗಳಾಗಿವೆ. ನ್ಯೂಸ್ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ಸೈಬರ್ ಕ್ರೈಮ್ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿರುವುದನ್ನು ನೀವು ಗಮನಿಸಿರಬಹದು.
ಈಗಂತೂ ಸೈಬರ್ ಅಪರಾಧಗಳು ಹೆಚ್ಚು ಸಂಕೀರ್ಣ ಮತ್ತು ನಿಗೂಢವಾಗುತ್ತಿದೆ. ಫೋನ್ ಸಂಖ್ಯೆ, ವಿಳಾಸ, ಛಾಯಾಚಿತ್ರಗಳು, ಬ್ಯಾಂಕ್ ವಿವರಗಳು ಮುಂತಾದ ವೈಯಕ್ತಿಕ ಮಾಹಿತಿಯನ್ನು ಹೆಚ್ಚಾಗಿ ಕದಿಯುತ್ತಿದ್ದಾರೆ. ಯಾವ ರೀತಿಯಲ್ಲೆಲ್ಲಾ ಸೈಬರ್ ಕ್ರೈಮ್ ಆಗುತ್ತದೆ ಎಂಬ ಬಗ್ಗೆ ಕಳೆದವಾರ ತಿಳಿಸಿದ್ದೆ. ಈಗ ಅದರಿಂದ ಪಾರಾಗುವುದು ಹೇಗೆ ಎನ್ನುವುದನ್ನು ತಿಳಿಯೋಣ.
ನಿಮಗೆ “ಹ್ಯಾಕರ್” ಎಂದರೆ ಯಾರು ಗೊತ್ತೇ? ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಅಥವಾ ಕಂಪೆನಿಗಳ ದೈನಂದಿನ ಕೆಲಸ ಕಾರ್ಯಗಳನ್ನು ಅಡ್ಡಿಪಡಿಸುವ ಅಥವಾ ಜನರಿಗೆ/ಕಂಪೆನಿಗೆ ಹಣಕಾಸಿನ ನಷ್ಟ ಅಥವಾ ಅಪಖ್ಯಾತಿಯನ್ನು ಉಂಟುಮಾಡುವವರಿಗೆ ಹ್ಯಾಕರ್ ಎನ್ನುತ್ತಾರೆ. ಹ್ಯಾಕರ್ ಗಳು ಮಾಲ್ವೇರ್ ಗಳನ್ನು ಬಳಸಿ ನಿಮ್ಮ ಮೊಬೈಲ್ ಒಳಗೆ ಪ್ರವೇಶಿಸಬಹುದು. ಅದು ಹೇಗೆ ಗೊತ್ತಾ? ಮುಂದೆ ಓದುತ್ತಾ ಹೋಗಿ.
ಹ್ಯಾಕರ್ ಗಳು ವಿವಿಧ ರೀತಿಯ ಮಾಲ್ವೇರ್ ಗಳನ್ನು ಬಳಸುತ್ತಾರೆ. ಮಾಲ್ವೇರ್ ಎಂದರೆ ನೀವೇನಾದರೂ ಅಪಾಯಕಾರಿ ಲಿಂಕ್ ಅಥವಾ ಇಮೇಲ್ ಅನ್ನು ಕ್ಲಿಕ್ ಮಾಡಿದ್ರೆ ನಿಮ್ಮ ಸಿಸ್ಟಂ (ಮೊಬೈಲ್ ಅಥವಾ ಕಂಪ್ಯೂಟರ್) ನಲ್ಲಿ ಇನ್ಸ್ಟಾಲ್ ಆಗುವ ದುರುದ್ದೇಶಪೂರಿತ ಸಾಫ್ಟ್ವೇರ್. ಅದು ವೈರಸ್ ಆಗಿರಬಹುದು, ವರ್ಮ್ ಗಳಾಗಿರಬಹುದು, ಟ್ರೋಜನ್ ಹಾರ್ಸ್ ಗಳಾಗಿರಬಹುದು, ರೇನ್ಸಮ್ವೇರ್ ಆಗಿರಬಹುದು.
ಹ್ಯಾಕರ್ ಗಳು ಸಾಮಾನ್ಯವಾಗಿ ಇಮೇಲ್ ಸ್ಪೂಫಿಂಗ್ ಅಥವಾ SMS ಸ್ಫೂಫಿಂಗ್ ಮಾಡ್ತಾರೆ. ವಿಶ್ವಾಸಾರ್ಹ ಇಮೇಲ್ ಐಡಿಯಿಂದ ನಿಮಗೆ ಇಮೇಲ್ಗಳನ್ನು ಕಳುಹಿಸುವುದು. ನೀವು ಅದನ್ನು ತೆರೆದಾಗ ಅದರಲ್ಲಿನ ಮಾಲ್ವೇರ್ ನಿಮ್ಮ ಫೋನಿನೊಳಗೆ ಕೂರುತ್ತದೆ. ಅದು ಹ್ಯಾಕರ್ ಗಳಿಗೆ ನಿಮ್ಮ ಮೊಬೈಲ್ನ ಹಿತ್ತಲ ಬಾಗಿಲು ತೆರೆಯುತ್ತದೆ. ಸರ್ಕಾರಿ ಕಛೇರಿಯಿಂದ, ಕೆಲಸಮಾಡುವ ಆಫೀಸಿನಿಂದ, ಮಕ್ಕಳು ಕಲಿಯುತ್ತಿರುವ ಶಾಲೆಯಿಂದ SMS ಬರಬಹುದು. ಅದರಲ್ಲಿ ಒಂದು ಲಿಂಕ್ ಕೊಟ್ಟು ನೀವು ಅದನ್ನು ಕ್ಲಿಕ್ ಮಾಡಲೇ ಬೇಕೆನ್ನುವಂತಹ ಮೆಸೇಜ್ ಬಂದಿರಬಹುದು. ಕ್ಲಿಕ್ ಮಾಡಿದ್ರಿ ಅಂದರೆ ತೊಂದರೆಗೊಳಗಾಗಬಹುದಾದ ಸಾಧ್ಯತೆ ಹೆಚ್ಚು. “ಕ್ಲಿಕ್ಕಿಸಿದರೆ ಕೆಟ್ಟ” ಎನ್ನುವುದು ಸೈಬರ್ ಜಗತ್ತಿನ ಹೊಸ ಗಾದೆ. ಜಗತ್ತಿನಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮೊಬೈಲ್ ಸಾಧನಗಳು ಫಿಶಿಂಗ್ ದಾಳಿಗೆ ಒಳಗಾಗಿ ಪಾಸ್ವರ್ಡ್, ವೈಯಕ್ತಿಕ ಮಾಹಿತಿ, ಫೋಟೊ, ವಿಡಿಯೊಗಳನ್ನು ಜಗತ್ತಿಗೆ ತೆರೆದಿಟ್ಟಿವೆ.
ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್ವೇರ್, ಫಿಶರ್ ಗಳು, ಅಶ್ಲೀಲ ವೆಬ್ಸೈಟ್ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಮಕ್ಕಳೂ ಸರಿಯಾದ ಮಾಹಿತಿ ತಿಳಿದುಕೊಂಡು ಕಲಿಕೆಗೆ ಪೂರಕವಾಗಿ ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.
ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತಾ ಜಾಗರೂಕರಾಗಿದ್ದರೆ, ನೀವು ಸೈಬರ್ ಅಪರಾಧಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
ಸುರಕ್ಷಿತವಾಗಿ ಮೊಬೈಲ್ ಬಳಸಲು ಹನ್ನೆರಡು ಸೂತ್ರಗಳು:
- ಪಿನ್ಗಳು ಮತ್ತು ಪಾಸ್ವರ್ಡ್ಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಫೋನ್ಗೆ ಅನಧಿಕೃತ ಪ್ರವೇಶವನ್ನು ತಡೆಯಲು, ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳುವಾದಾಗ ರಕ್ಷಣೆಯ ಮೊದಲ ಸಾಲಿನಂತೆ (first line of defence) ನಿಮ್ಮ ಫೋನ್ನ ಮುಖಪುಟದಲ್ಲಿ ಪಾಸ್ವರ್ಡ್ ಅಥವಾ ವೈಯಕ್ತಿಕ ಗುರುತಿನ ಸಂಖ್ಯೆಯನ್ನು (ಪಿನ್) ಹೊಂದಿಸಿ. ನಿಮ್ಮ ಪ್ರತಿಯೊಂದು ಪ್ರಮುಖ ಲಾಗ್-ಇನ್ಗಳಿಗೆ (ಇಮೇಲ್, ಬ್ಯಾಂಕಿಂಗ್, ವೈಯಕ್ತಿಕ ಸೈಟ್ಗಳು, ಇತ್ಯಾದಿ) ಬೇರೆ ಪಾಸ್ವರ್ಡ್ ಬಳಸಿ. ನಿಮ್ಮ ಫೋನ್ ನಿಷ್ಕ್ರಿಯವಾಗಿರುವಾಗ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುವಂತೆ ನಿಮ್ಮ ಫೋನಿನಲ್ಲಿ ಸಂಯೋಜಿಸಿಕೊಳ್ಳಿ.
- ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತಗೊಳಿಸಿ. ನಿಮ್ಮ ಫೋನ್ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡೇಟಾವನ್ನು ನೀವು ಬ್ಯಾಕಪ್ ಮಾಡಬೇಕು – ಉದಾಹರಣೆಗೆ ನಿಮ್ಮ ಸಂಪರ್ಕಗಳು, ಡಾಕ್ಯುಮೆಂಟ್ಗಳು ಮತ್ತು ಫೋಟೋಗಳು. ಈ ಫೈಲ್ಗಳನ್ನು ನಿಮ್ಮ ಕಂಪ್ಯೂಟರ್ನಲ್ಲಿ, ತೆಗೆಯುವ ಶೇಖರಣಾ ಕಾರ್ಡ್ನಲ್ಲಿ ಅಥವಾ ಕ್ಲೌಡ್ನಲ್ಲಿ ಸಂಗ್ರಹಿಸಬಹುದು. ನಿಮ್ಮ ಫೋನ್ ಕಳೆದುಹೋದರೆ, ಕದ್ದಿದ್ದರೆ ಅಥವಾ ಅಳಿಸಿದರೆ ಅದನ್ನು ಅನುಕೂಲಕರವಾಗಿ ಮರುಸ್ಥಾಪಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.
- ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್ಗಳನ್ನು ಸ್ಥಾಪಿಸಿ. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೊದಲು, ಅಪ್ಲಿಕೇಶನ್ ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಂಶೋಧನೆ ನಡೆಸಿ. ಅಪ್ಲಿಕೇಶನ್ನ ನ್ಯಾಯಸಮ್ಮತತೆಯನ್ನು ಪರಿಶೀಲಿಸುವುದು ಇಂತಹ ವಿಷಯಗಳನ್ನು ಒಳಗೊಂಡಿರಬಹುದು: ವಿಮರ್ಶೆಗಳನ್ನು ಪರಿಶೀಲಿಸುವುದು, ಅಪ್ಲಿಕೇಶನ್ ಸ್ಟೋರ್ನ ಕಾನೂನುಬದ್ಧತೆಯನ್ನು ದೃಢೀಕರಿಸುವುದು ಮತ್ತು ಸ್ಥಿರತೆಯನ್ನು ದೃಢೀಕರಿಸಲು ಅಪ್ಲಿಕೇಶನ್ ಪ್ರಾಯೋಜಕರ ಅಧಿಕೃತ ವೆಬ್ಸೈಟ್ ಅನ್ನು ಅಪ್ಲಿಕೇಶನ್ ಸ್ಟೋರ್ ಲಿಂಕ್ನೊಂದಿಗೆ ಹೋಲಿಸುವುದು. ವಿಶ್ವಾಸಾರ್ಹವಲ್ಲದ ಮೂಲಗಳಿಂದ ಅನೇಕ ಅಪ್ಲಿಕೇಶನ್ಗಳು ಮಾಲ್ವೇರ್ ಅನ್ನು ಒಳಗೊಂಡಿರುತ್ತವೆ, ಅದು ಒಮ್ಮೆ ಸ್ಥಾಪಿಸಿದರೆ ಮಾಹಿತಿಯನ್ನು ಕದಿಯಬಹುದು, ವೈರಸ್ಗಳನ್ನು ಸ್ಥಾಪಿಸಬಹುದು ಮತ್ತು ನಿಮ್ಮ ಫೋನ್ನ ವಿಷಯಗಳಿಗೆ ಹಾನಿಯನ್ನು ಉಂಟುಮಾಡಬಹುದು. ನಿಮ್ಮ ಫೋನ್ನಲ್ಲಿ ಯಾವುದೇ ಭದ್ರತಾ ಅಪಾಯಗಳು ಅಸ್ತಿತ್ವದಲ್ಲಿದ್ದರೆ ನಿಮಗೆ ಎಚ್ಚರಿಕೆ ನೀಡುವ ಅಪ್ಲಿಕೇಶನ್ಗಳು ಸಹ ಇವೆ.
- ಅಪ್ಲಿಕೇಶನ್ ಅನುಮತಿಗಳನ್ನು ಸ್ವೀಕರಿಸುವ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಫೋನ್ನಲ್ಲಿನ ವೈಯಕ್ತಿಕ ಮಾಹಿತಿಗೆ ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುವ ಬಗ್ಗೆ ಅಥವಾ ನಿಮ್ಮ ಫೋನ್ನಲ್ಲಿ ಕಾರ್ಯಗಳನ್ನು ನಿರ್ವಹಿಸಲು ಅಪ್ಲಿಕೇಶನ್ಗೆ ಪ್ರವೇಶವನ್ನು ಅನುಮತಿಸುವ ಬಗ್ಗೆ ನೀವು ಜಾಗರೂಕರಾಗಿರಬೇಕು. ಸ್ಥಾಪಿಸುವ ಮೊದಲು ಪ್ರತಿ ಅಪ್ಲಿಕೇಶನ್ನ ಗೌಪ್ಯತೆ ಸೆಟ್ಟಿಂಗ್ಗಳನ್ನು ಸಹ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.
- ಉಪಯೋಗಿಸದ ಆಪ್ ಗಳನ್ನು ತೆಗೆದು ಹಾಕಿ. ಉಪಯೋಗಿಸುವ ಆಪ್ ಗಳ ಅಗತ್ಯವಿಲ್ಲದ ವೈಶಿಷ್ಟ್ಯಗಳನ್ನು (ಫೀಚರ್ಸ್) ಆಫ್ ಮಾಡಿ.
- ನಿಮ್ಮ ಮೊಬೈಲ್ ನ ಆಪರೇಟಿಂಗ್ ಸಿಸ್ಟಮ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಮೊಬೈಲ್ ಸುರಕ್ಷತೆಗೆ ಸರಿಯಾದ ಆಂಟಿವೈರಸ್ ಸಾಫ್ಟ್ ವೇರ್ ಬಳಸಿರಿ.
- ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆಯೇ ನಿಮ್ಮ ಆನ್ಲೈನ್ ಉಪಸ್ಥಿತಿಯನ್ನು ಸುರಕ್ಷಿತಗೊಳಿಸಿ: ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀವು ಸರಿಯಾದ ಸೆಟ್ಟಿಂಗ್ಗಳನ್ನು ಆಯ್ಕೆ ಮಾಡದಿದ್ದರೆ, ಪೋಸ್ಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮಗೆ ತಿಳಿಯದೆ ಇತರರು ವೀಕ್ಷಿಸಬಹುದು, ಡೌನ್ಲೋಡ್ ಮಾಡಬಹುದು ಮತ್ತು ಬಳಸಬಹುದು.
- ವೀಡಿಯೊ ಚಾಟ್ ಮತ್ತು ವೀಡಿಯೊ ಕರೆಗಳಲ್ಲಿ ನಿಮ್ಮ ಗೋಚರಿಸುವಿಕೆಯ ಬಗ್ಗೆ ಗಮನವಿರಲಿ: ಸಾಮಾಜಿಕ ಮಾಧ್ಯಮ ಸೈಟ್ಗಳಲ್ಲಿನ ನಿಮ್ಮ ವೀಡಿಯೊ ಚಾಟ್ಗಳನ್ನು ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ರೆಕಾರ್ಡ್ ಮಾಡಬಹುದು. ಖಾಸಗಿಯಾಗಿರಬೇಕಾದ ವೀಡಿಯೊ ಚಾಟ್ಗಳನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಗುಂಪುಗಳು ಮತ್ತು ವೆಬ್ಸೈಟ್ಗಳಲ್ಲಿ ಹಂಚಿಕೊಳ್ಳಲಾಗಿದೆ. ಅಪರಿಚಿತರಿಂದ ಚಾಟ್ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.
- ಸೂಕ್ಷ್ಮ ವೈಯಕ್ತಿಕ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆಯಲು ಸ್ಮಾರ್ಟ್ಫೋನ್ ಬಳಸಬೇಡಿ: ಹೆಚ್ಚಿನ ಸ್ಮಾರ್ಟ್ಫೋನ್ಗಳು ಇಂಟರ್ನೆಟ್ ಮತ್ತು ಕ್ಲೌಡ್ ಸ್ಟೋರೇಜ್ಗೆ ಸಂಪರ್ಕ ಹೊಂದಿರುತ್ತದೆ. ಕ್ಲೌಡ್ನೊಂದಿಗೆ ಸಂಪರ್ಕಗೊಂಡಿರುವ ಸ್ಮಾರ್ಟ್ಫೋನ್ ಬಳಸಿ ಚಿತ್ರ ಅಥವಾ ವೀಡಿಯೊವನ್ನು ಕ್ಲಿಕ್ ಮಾಡಿದ್ದರೆ/ರೆಕಾರ್ಡ್ ಮಾಡಿದ್ದರೆ, ಅದು ಸ್ವಯಂಚಾಲಿತವಾಗಿ ಕ್ಲೌಡ್ನಲ್ಲಿ ಸೇವ್ ಆಗಬಹುದು. ಬಳಕೆದಾರರು ತಮ್ಮ ಫೋನ್ನಿಂದ ತಮ್ಮ ಫೋಟೋಗಳು ಅಥವಾ ವೀಡಿಯೊಗಳನ್ನು ಅಳಿಸಿದರೂ ಸಹ, ಅದೇ ಫೋಟೋ ಅಥವಾ ವೀಡಿಯೊವನ್ನು ಕ್ಲೌಡ್ ಖಾತೆಯಿಂದ ಅಥವಾ ಅದೇ ಖಾತೆಯನ್ನು ಬಳಸಿಕೊಂಡು ಕ್ಲೌಡ್ಗೆ ಸಂಪರ್ಕಗೊಂಡಿರುವ ಯಾವುದೇ ಇತರ ಸಾಧನ/ಪಿಸಿಯಿಂದ ಮರುಪಡೆಯಬಹುದು.
- ಸೈಬರ್ ಹಿಂಬಾಲಿಸುವಿಕೆಯಿಂದ (stalking) ನಿಮ್ಮನ್ನು ರಕ್ಷಿಸಿಕೊಳ್ಳಿ: ನಿಮ್ಮಿಂದ ನಿರಾಸಕ್ತಿಯ ಸ್ಪಷ್ಟ ಸೂಚನೆಯ ಹೊರತಾಗಿಯೂ ಸೈಬರ್ ಹಿಂಬಾಲಕರು ನಿಮ್ಮ ಮೇಲೆ ಪದೇ ಪದೇ ಆಸಕ್ತಿಯನ್ನು ತೋರಿಸುತ್ತಾರೆ. ಅವರು ಹಿಂಬಾಲಿಸಲು ಇಂಟರ್ನೆಟ್, ಇಮೇಲ್, ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಂವಹನವನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮ ಸೈಟ್ಗಳು, ಮೊಬೈಲ್ ಸಾಧನಗಳು ಇತ್ಯಾದಿಗಳಿಗೆ ಸ್ಥಳ ಸೇವೆಗಳನ್ನು(location) ನಿಷ್ಕ್ರಿಯಗೊಳಿಸಿ. ನಿಮ್ಮ ವೈಯಕ್ತಿಕ ಮಾಹಿತಿಯಾದ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಛಾಯಾಚಿತ್ರಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಡೆಯಿರಿ. ನೀವು ಸೈಬರ್ ಹಿಂಬಾಲಿಕೆಗೆ ಸಿಕ್ಕಿದ್ದೀರಿ ಎಂದು ನೀವು ಭಾವಿಸಿದರೆ, ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯ ಪಡೆಯಿರಿ.
- ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಎಚ್ಚರದಿಂದಿರಿ- ಎಲ್ಲಾ ಖಾತೆಗಳು ನಿಜವಲ್ಲ ಮತ್ತು ಖಾತೆಗಳಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ನಿಜವಲ್ಲ. ಅಪರಿಚಿತರಿಂದ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.
- ಸೇವೆ/ದುರಸ್ತಿ/ಮಾರಾಟ ಅಥವಾ ರಿಚಾರ್ಜ್ ಗೆ ನಿಮ್ಮ ಮೊಬೈಲ್ ಸಾಧನಗಳನ್ನು ನೀಡುವಾಗ ಜಾಗರೂಕರಾಗಿರಿ.
ಯಾವುದೇ ರೀತಿಯ ವಂಚನೆಗೀಡಾದಲ್ಲಿ 1930ಕ್ಕೆ ಕರೆ ಮಾಡಿ ನಿಮ್ಮ ದೂರನ್ನು ದಾಖಲಿಸಿ. ಅಥವಾ www.cybercrime.gov.in ಜಾಲತಾಣದಲ್ಲಿಯೂ ನಿಮ್ಮ ದೂರನ್ನು ದಾಖಲಿಸಬಹದು. ನಿಮ್ಮ ಜಾಗರೂಕತೆಯಲ್ಲಿ ನೀವಿದ್ದು ಮೊಬೈಲನ್ನು ಸರಿಯಾದ ರೀತಿಯಲ್ಲಿ ಜ್ಞಾನಾರ್ಜನೆಗೆ ಬಳಸಿದರೆ ತೊಂದರೆಗೀಡಾಗುವುದಿಲ್ಲ. ಜಾಣರಾಗಿ, ಜಾಗರೂಕರಾಗಿರಿ.