Thursday, 28th November 2024

ಅತ್ಯಾಚಾರಕ್ಕೂ ನಡುಗದೇ ಇದ್ದೀತೇ ಅಪ್ರಾಪ್ತ ಹಿಮಗಿರಿ ?!

ಸುಪ್ತ ಸಾಗರ

rkbhadti@gmail.com

ಸೂಕ್ಷ್ಮವಾದ ಬೆಟ್ಟ ಪ್ರದೇಶಗಳಲ್ಲಿ ಬೇಕಾಬಿಟ್ಟಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರುವುದೇ ಜೋಶಿ ಮಠ ಕುಸಿತಕ್ಕೆ ಕಾರಣ. ಸಮಣ್ಣಿನ ಅಡಿಯಿಂದ ನೀರು ಜಿನುಗುತ್ತಿದೆ, ಮೇಲ್ಮಣ್ಣು ಸವೆದು ಹೋಗಿದೆ. ಸ್ಥಳೀಯ ತೊರೆಗಳ ಸಹಜ ಹರಿವಿಗೆ ಮನುಷ್ಯ ನಿರ್ಮಿಸಿರುವ ರಚನೆಗಳು ಅಡ್ಡಿಯಾಗಿವೆ. ಹಾಗಾಗಿ, ತೊರೆಗಳು ಆಗಾಗ ದಿಕ್ಕು ಬದಲಿಸುತ್ತಿವೆ. ಧೌಲಿಗಂಗಾ, ಅಲಕ ನಂದಾ ನದಿಗಳ ಸಂಗಮ ಸ್ಥಾನವಾದ ವಿಷ್ಣುಪ್ರಯಾಗದಿಂದ ಆಗ್ನೇಯಕ್ಕಿರುವ ಇಳಿಜಾರಿನಲ್ಲಿ ಈ ಸಣ್ಣ ಪಟ್ಟಣ ಇದೆ. ಈ ಪಟ್ಟಣದಲ್ಲಿ ಮಣ್ಣು ಕುಸಿಯುವುದು ಇದು ಮೊದಲೇನೂ ಅಲ್ಲ.

ಕಣ್ಣೆದುರು ನಿಂತ ಆ ಪರ್ವತ ಸಾಲು ಅತ್ಯಂತ ಬಲಿಷ್ಠವಾಗಿರುವಂತೆ ತೋರುತ್ತದೆ. ಅದರ ಅಗಾಧ ಎತ್ತರ, ಉದ್ದಕ್ಕೂ ಮೈಚಾಚಿ ನಿಂತ ಅದರ ವಿಶಾಲ ಹರವು. ಹಸಿರು ಹೊದ್ದು ಅದು ಮಲಗಿರುವ, ಕಣ್ಮನ ಸೆಳೆಯುವ ಅದರ ಸೌಂದರ್ಯ ಎಲ್ಲವೂ ಅದನ್ನು ಭಾರತದ ಹೆಗ್ಗುರು ತಿನಂತೆಯೇ ಕಂಗೊಳಿಸುವಂತೆ ಮಾಡಿದೆ.

ಅದು ನಿಜ ಸಹ. ಉಪಖಂಡಗಳಿಂದ ಬರಬಹುದಾದ ಮಾನವ ನಿರ್ಮಿತ ದಾಳಿ ಇರಬ ಹುದು ಅಥವಾ ನಿಸರ್ಗ ನಿರ್ಮಿತ ದಾಳಿಯೇ ಆಗಿರಬಹುದು ಅದನ್ನು ತಡೆಯಬಲ್ಲಷ್ಟು ಶಕ್ತಿಶಾಲಿ ಪರ್ವತಗಳ ಸಾಲು ಅದು ಎನ್ನವುದರಲ್ಲಿ ಅನುಮಾನವಿಲ್ಲ. ಹಿಮಾಲಯಶ್ರೇಣಿಗೆ ಅಂಥದ್ದೊಂದು ಹೆಗ್ಗಳಿಕೆ ಇರುವುದು ನಿಜ. ಹತ್ತು ಮಿಲಿಯನ್ ವರ್ಷಗಳಲ್ಲಿ ಕೆಳಗಿನ ಭೂಭಾಗ ಒತ್ತರಿಸಿ ಬಂದು ಹಿಮಾಲಯ ಇಂದಿನ ಸ್ಥಿತಿಯನ್ನು ಮುಟ್ಟಿದೆ ಎನ್ನುತ್ತಾರೆ ತಜ್ಞರು.

ರಾಜಸ್ಥಾನದ ಅರಾವಳಿ ಪರ್ವತ ಸಾಲು ಇದಕ್ಕಿಂತ ಒಂದು ಬಿಲಿಯನ್ ವರ್ಷಗಳಷ್ಟು ಹಳೆಯದು. ಆದರೆ ಇಂದಿಗೂ ಹಿಮಾ ಲಯದ ಬೆಳವಣಿಗೆ ನಿಂತಿಲ್ಲ. ಅದು ಇಂದಿಗೂ ಬೆಳೆಯುತ್ತಿರುವ ಹಂತದಲ್ಲೇ ಇದೆ ಎಂಬುದು ಗಮನಾರ್ಹ ಸಂಗತಿ. ‘ಪ್ರತಿ ವರ್ಷ ೫ ಸೆಂ.ಮೀ.ನಷ್ಟು ಟಿಬೆಟಿಯನ್ ಪ್ಲಾಟೊದೊಳಗೆ ಭೂಭಾಗ ಜರುಗುವುದರೊಂದಿಗೆ ಪರ್ವತವು 1.5 ಸೆಂ.ಮೀ.ನಷ್ಟು ಬೆಳೆಯು ತ್ತಿದೆ’ ಎನ್ನುತ್ತಾರೆ ಹಿಮಾಲಯದ ಭೂಗರ್ಭಶಾಸ್ತ್ರಜ್ಞ ಮತ್ತು ವಿಕೋಪ ವ್ಯವಸ್ಥಾಪನೆಯ ತರಬೇತುದಾರಾಗಿದ್ದ ಅರುಣ್ ದೀಪ್ ಆಹ್ಲುವಾಲಿಯಾ. ಈ ದೃಷ್ಟಿಯಿಂದ ನೋಡಿದರೆ ಅದಿನ್ನೂ ನಾವಂದುಕೊಂಡಷ್ಟು ದೃಢವಾಗಿ ನಿಂತಿಲ್ಲ.

ಇಂಥ ಬೆಳೆಯುವ ಕೂಸಿನ ಮೇಲೆ ನಾವು ಬಿಟ್ಟಿರುವ ಬಾರಕ್ಕೆ ಅದು ನಲುಗದಿದ್ದೀತೇ? ಹೀಗೆ ಅದು ನಲುಗಿದ ಪರಿಣಾಮವೇ ಉತ್ತರಾಖಂಡದ ಬೆಟ್ಟದ ಪಟ್ಟಣಗಳಲ್ಲಿ ಭೂಮಿ ಮುಳುಗಡೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಜೋಶಿಮಠದಲ್ಲಿ
ಸುತ್ತಮುತ್ತಲಿನ ಭೂಮಿ ಬಾಯ್ದೆರೆಯುತ್ತಿದೆ. ಮೊನ್ನೆಮೊನ್ನೆ ದೇವಾಲಯ ಕುಸಿದುಬಿದ್ದು, ಹತ್ತಾರು ಮನೆಗಳಲ್ಲಿ ಬಿರುಕು ಮೂಡಿದೆ. ದಶಕಗಳ ಹಿಂದಿನ ರುದ್ರ ಪ್ರಳಯದ ಬಳಿಕ ಭಯದಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು,  ನಿಸರ್ಗದಲ್ಲಿನ ಸಣ್ಣದೊಂದು ಬದಲಾವಣೆಗೂ ಬೆಚ್ಚಿ ಬೀಳುತ್ತಿದ್ದಾರೆ.

ಕರ್ಣಪ್ರಯಾಗದಲ್ಲಿ ೫೦ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇವೆಲ್ಲವೂ ಹಿಮನೆಲದಲ್ಲಿ ನಡೆಯುತ್ತಿರುವ ‘ಆಧುನಿಕ ಅಭಿವೃದ್ಧಿ ಪರ್ವದ’ ಫಲ ಅಲ್ಲವೇ? ಈ ಮಾತಿಗೆ ಸಾಕಷ್ಟು ಪುರಾವೆಗಳು ಹಿಮನೆಲದ ಪರಿಸರವಾದಿಗಳು, ತಜ್ಞರಿಂದ ಕೇಳಿಬರುತ್ತಿವೆ. ಆ ನೆಲದಲ್ಲೀಗ ಅಂಥದೇ ಅಳಲುಗಳ, ವಿಷಾದದ ಮಾತುಗಳು ಅನುರಣಿಸುತ್ತವೆ. ಹಿಮಾಲಯ ನೋಡಲು ಎತ್ತರೆತ್ತರಕ್ಕೆ, ಮುಗಿಲು ಚುಂಬಿಸುವಂತೆ ಕಂಡರೂ ಅದರ ಎತ್ತರಕ್ಕೆ ತಕ್ಕಂತೆ ಸ್ಥಿರತೆ ಇಲ್ಲ.

ಜತೆಗೆ ಹಿಮಾಲಯವು ಮುಂಗಾರು ಮಾರುತಗಳನ್ನು ತಡೆದು ನಿಲ್ಲಿಸಿ ನಿರಂತರ ಮಳೆ ಸುರಿಸುವಂತೆ ಆದೇಶ ನೀಡುತ್ತಲೇ ಇರುತ್ತದೆ. ಹೀಗಾಗಿ ಪ್ರಪಂಚದೆಲ್ಲೆಡೆಗಿಂತ ಅಧಿಕ ಮಳೆ ಸುರಿಯುತ್ತಿರುತ್ತದೆ. ಮಾತ್ರವಲ್ಲ ಶಿಖರದ ಮೇಲಿನ ಭಾಗದಲ್ಲಿ ಹಿಮ ಪಾತವೂ ಸಂಭವಿಸುತ್ತಲೇ ಇರುತ್ತದೆ. ಇವೆರಡರ ಪರಿಣಾಮ ಕಣಿವೆಗುಂಟ ಪುಟ್ಟಪುಟ್ಟ ಝರಿಗಳು, ತೊರೆಗಳು ಅಸಂಖ್ಯ
ಸೃಷ್ಟಿಯಾಗಿವೆ. ಇವೇ ಕಣಿವೆಯ ಪ್ರಮುಖ ನದಿಗಳನ್ನು ಮೈದುಂಬಿಸಿ ಒತ್ತಡವನ್ನು ತರುತ್ತವೆ.

ಹೀಗಾಗಿ ಇಲ್ಲಿ ಮೃದುವಾದ ಚಲನೆಗಳೇ ಇಲ್ಲ. ಮೂರು ರಭಸದ ನದಿಗಳಾದ ಇಂಡಸ್, ಗಂಗಾ, ಯಾಂಗ್ ಟ್ಸೆ ಪರ್ವತದ ಒಡಲಲ್ಲೇ ಹುಟ್ಟುತ್ತವೆ. ಈ ದೃಷ್ಟಿಯಿಂದಲೂ ಇದು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಪುಟ್ಟ ಪುಟ್ಟ ಭೂಕಂಪನಗಳು ನಿಯಮಿತ ವಾಗಿ ಸಂಭವಿಸುತ್ತಲೇ ಇರುತ್ತವೆ. ಈ ನೈಸರ್ಗಿಕ ಚಟುವಟಿಕೆಗಳ ಜತೆಗೇ ಬೃಹತ್ ಜನಸಂಖ್ಯೆಯ ಒತ್ತಡ ಬೆಟ್ಟಗಳಲ್ಲಿ ಮತ್ತು ಗಿರಿಶ್ರೇಣಿಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಅದನ್ನು ತಾಳಿಕೊಳ್ಳುವ ಶಕ್ತಿ ಆಂತರಂಗಿಕವಾಗಿ ದುರ್ಬಲವಾಗಿರುವ ಪರ್ವತಕ್ಕೆ ಇಲ್ಲ.

‘ಹಿಮಾಲಯವನ್ನು ಇತರೆ ಯಾವುದೇ ಭೂಭಾಗಕ್ಕಿಂತ ಪ್ರತ್ಯೇಕಿಸಿ ನೋಡಬೇಕಿದೆ’ ಎನ್ನುತ್ತಾರೆ ದಿಲ್ಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ನಿರ್ದೇಶಕಿ ಸುನಿತಾ ನಾರಾಯಣ್. ಹೌದು, ಹಿಮಾಲಯದ ಪ್ರದೇಶಕ್ಕೆ ಪ್ರತ್ಯೇಕ ನಿಯಮಗಳು ಬೇಕೇ ಬೇಕು. ಅದನ್ನು ದೇಶದ ಇತರೆಲ್ಲ ಭೂಭಾಗಗಳನ್ನು ನೋಡುವಂತೆ ನೋಡಲಿಕ್ಕಾಗುವದೇ ಇಲ್ಲ. ದುರದೃಷ್ಟವಶಾತ್ ಇದನ್ನು ನಾವು ಅರಿತಿಲ್ಲ.
ದೇಶದೆಲ್ಲೆಡೆಯಲ್ಲಿನ ಭೂಭಾಗದಂತೆಯೇ ಹಿಮಾಲಯವನ್ನೂ ನಾವು ಪರಿಗಣಿಸುತ್ತೇವೆ. ಎಲ್ಲೆಡೆ ನಡೆಸುವ ದಾಳಿಯನ್ನೇ ನಾವು ಹಿಮಶಿಖರಗಳ ಮೇಲೂ ನಡೆಸುತ್ತೇವೆ.

ಪಾಪ, ಹಸುಳೆ ಹಿಮಪರ್ವತ! ಅದನ್ನು ತಾಳಿಕೊಳ್ಳಬೇಕಾದರೂ ಹೇಗೆ? ಇತ್ತೀಚಿನ ಮೇಘಸೋಟ ಮತ್ತು ನೀರಲೆಗಳ ಹೊಡೆತ ದಂಥವು ಅಪರೂಪಕ್ಕೊಮ್ಮೆ ಸಂಭವಿಸಿದರೂ, ಹಿಮಾಲಯಕ್ಕೆ ತನ್ನದೇ ಆದ ನಿಯಮಿತವಾದ ಸಂಕಷ್ಟ ಎದುರಾಗುತ್ತಲೇ
ಇದೆ. ಅದಕ್ಕಾಗಿ ದೇಶ, ದೇಶವಾಸಿಗಳು ಯಾವಾಗಲೂ ಸಿದ್ಧವಾಗಿರಬೇಕು, ಹೆಡ್‌ಲೈಡ್‌ಗೆ ಸಿಕ್ಕಿದ ಜಿಂಕೆಯಂತೆ ಹುಚ್ಚಾಪಟ್ಟೆ ವರ್ತನೆ ಖಂಡಿತಾ ಹಿಮಾಲಯದ ಮಟ್ಟಿಗೆ ಸರಿಯಲ್ಲ.

ಇತ್ತೀಚಿನ ದಿನಗಳಲ್ಲಿ ಹಿಮಾಲಯ ಸಣ್ಣಪುಟ್ಟ ಮೇಘಸ್ಫೋಟಗಳನ್ನು ಕಂಡಿದೆ, ಇದರಿಂದುಂಟಾದ ಪ್ರವಾಹಗಳು ಲಡಾಖ್‌ ನಂಥ ಪ್ರದೇಶದಲ್ಲಿ ಹಾವಳಿ ಎಬ್ಬಿಸಿವೆ. ಸಿಕ್ಕಿಮ್‌ನಲ್ಲಿ ಒಂದು ಭಾರಿ ಭೂಕಂಪವೂ ಸಂಭವಿಸಿದೆ. ಇವೆರಡೂ ಜೀವ ಮತ್ತು ಆಸ್ತಿಗೆ ಅಪಾರ ನಷ್ಟ ಉಂಟುಮಾಡಿವೆ.

ಹಿಮಾಲಯ ಪರಿಸರದ ಅಧ್ಯಯನ ನಡೆಸುತ್ತಿರುವ ಅನಿಲ್ ಜೋಶಿ ಅವರ ಪ್ರಕಾರ, ‘ಹಿಮಾಲಯದ ಶಿಖರಗಳಲ್ಲಿ ಭಾರಿ ಮಳೆ
ಉಂಟಾಗುವ ಕುರಿತು ಮುನ್ಸೂಚನೆ ನೀಡಲಾಗಿತ್ತು.’ ಅದರಿಂದ ಆ ಭಾಗ ಅಪಾಯಕ್ಕೆ ಸಿಲುಕಬಲ್ಲ ಸೂಚನೆಯೂ ಇತ್ತು. ಆದರೂ ಸರಕಾರ ಎಚ್ಚೆತ್ತಿಲ್ಲ ಏಕೆ ಎಂಬುದು ಪ್ರಶ್ನೆ. ಹಿಮಾಲಯದ ದೇವಾಲಯ ನಗರ ಕೇದಾರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ೩ ಸಾವಿರಕ್ಕಿಂತ ಹೆಚ್ಚು ಯಾತ್ರಾರ್ಥಿಗಳನ್ನು ಹೊತ್ತು ನಿಲ್ಲುವ ಸಾಮರ್ಥ್ಯವನ್ನು ಅದು ಹೊಂದಿಲ್ಲ. ಹಾಗಿರು ವಾಗ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಜನಸಂಖ್ಯೆಯ ಪ್ರಮಾಣವನ್ನು ಅದು ಒಂದೇ ಸೀಸನ್‌ನಲ್ಲಿ ತಡೆಯುವುದಾದರೂ ಹೇಗೆ? ಕನಿಷ್ಠಪಕ್ಷ ಮಳೆಗಾಲದಲ್ಲಾದರೂ ಕೆಲವು ನಿಯಮಗಳನ್ನು ಹೇರುವ ಅಗತ್ಯವಿಲ್ಲವೇ? ಸ್ವತಃ ಟೂರ್ ಪ್ಯಾಕೇಜ್ ಉದ್ಯಮವನ್ನು ನಡೆಸುತ್ತಿರುವ ಹೃಷಿಕೇಶದ ಕಮಲ್ ಪಟೇಲ್ ಹೇಳುವ ಪ್ರಕಾರ, ಈ ಭಾಗದ ಸಮಗ್ರ ಪ್ರವಾಸೋದ್ಯಮ (ಯಮುನೋತ್ರಿ, ಗಂಗೋತ್ರಿ, ಬದ್ರಿನಾಥ್, ಕೇದಾರನಾಥ್) ಖಾಸಗಿ ಟೂರ್ ಆಪರೇಟರ್‌ಗಳ ಹಿಡಿತದಲ್ಲಿದೆ.

ಅವರದ್ದೊಂದು ಬೃಹತ್ ಲಾಬಿ. ಅವರು ಸೀಸನ್ ಮುಗಿಯುವ ಮೊದಲು ಸಾಧ್ಯವಾಗುವಷ್ಟು ಯಾತ್ರಾರ್ಥಿಗಳ ಗುಂಪುಗಳನ್ನು ಟಾರ್ಗೆಟ್ ಮಾಡುತ್ತಾರೆ. ಪಶ್ಚಿಮ ಮತ್ತು ದಕ್ಷಿಣ ಭಾರತದಿಂದ ದೂರದ ಯಾತ್ರಾರ್ಥಿಗಳು ಬರುತ್ತಾರೆ. ಇವರಿಗೆ ಟೂರ್
ಅಪರೇಟರ್‌ನ ನೆರವು ಬೇಕೇ ಬೇಕು. ಹೀಗಾಗಿ ಸೀಸನ್‌ನಲ್ಲಿ ಯಾವುದೇ ಕಾರಣಕ್ಕೂ ಸರಕಾರ ಚಾರ್‌ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸದಂತೆ ಸರಕಾರದ ಮೇಲೆ ಒತ್ತಡ ತರುತ್ತಾರೆ. ಸರಕಾರವೂ ಅವರ ಕಪಿಮುಷ್ಟಿಯಲ್ಲಿದೆ.

ಕಳೆದ ವರ್ಷ ೭ ರಿಂದ ೮ ದಶಲಕ್ಷ ಯಾತ್ರಾರ್ಥಿಗಳು ಕೇದಾರ ಬದರಿಗೆ ಭೇಟಿ ನೀಡಿದ್ದಾರೆಂದು ಊಹಿಸಲಾಗಿದೆ. ಇವರಿಗೆ
ತಕ್ಕಂತೆ ಹೆಚ್ಚೆಚ್ಚು ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ವಾಹನಗಳ ಓಡಾಟವೂ ತೀವ್ರ ಹೆಚ್ಚಿದೆ. ಜತೆಗೆ ಹಾಗೆ ಬರುವ ವಾಹನಗಳು ಪರ್ವತ ಸ್ಥಳದಲ್ಲಿ ಎಲ್ಲೆಂದರಲ್ಲಿ ಅಡಾದಿಡ್ಡಿ ಪಾರ್ಕ್ ಮಾಡಿ ಕೃತಕ ಒತ್ತಡವನ್ನು ನಿರ್ಮಿಸುತ್ತದೆ. ಇದನ್ನೆಲ್ಲ ಬಡಪಾಯಿ ಹಿಮಾಲಯ ಸಹಿಸುವುದೆಂತು? ಸ್ಥಳೀಯರ ಪ್ರಕಾರ, ಹಿಮಾಲಯ ಭಾಗದಲ್ಲಿ ಅಭಿವೃದ್ಧಿ (?) ಯೋಜನೆ ಗಳ ಚಟುವಟಿಗೆಗಳನ್ನೂ ನಿಲ್ಲಿಸುವ ಜಾಣ್ಮೆಯನ್ನು ಮೆರೆಯಬೇಕಿತ್ತು.

ಬದಲಾಗಿ ಬೃಹತ್ ಒಡ್ಡುಗಳ ನಿರ್ಮಾಣಕ್ಕಾಗಿ ಪರ್ವತದ ಒಡಲಲ್ಲಿ ಸಿಡಿತಲೆಗಳ ಬಳಕೆ ನಿರಂತವಾಗಿ ಮುಂದುವರಿದೇ ಇದೆ. ತಪೋವನದ ಸುತ್ತಮುತ್ತಲು ನಡೆಯುತ್ತಿರುವ ಎನ್‌ಟಿಪಿಸಿ ಸುರಂಗದ ಕಾಮಗಾರಿಯಿಂದಾಗಿ ಜೋಶಿಮಠದ ಮನೋಹರ್
ಬಾಗ್, ಸಿಂಗ್ಧರ್, ಜೆಪಿ, ಮಾರ್ವಾರಿ, ಸುನೀಲ್ ಗಾಂವ್ , ವಿಷ್ಣು ಪ್ರಯಾಗ, ರವಿಗ್ರಾಮ, ಗಾಂಧಿನಗರ ಮೊದಲಾದ ಪ್ರದೇಶಗಳು ಪೀಡಿತವಾಗಿವೆ. ಸುಮಾರು 50000 ಜನಸಂಖ್ಯೆಯೊಂದಿಗೆ, ಕರ್ಣಪ್ರಯಾಗವು ಸಮುದ್ರ ಮಟ್ಟದಿಂದ 860 ಮೀಟರ್ ಎತ್ತರ ದಲ್ಲಿದೆ. ಜೋಶಿಮಠವು 1890 ಮೀಟರ್ ಎತ್ತರದಲ್ಲಿದೆ.

ಕರ್ಣಪ್ರಯಾಗವು ಜೋಶಿಮಠದಿಂದ ೮೦ ಕಿ.ಮೀ ದೂರದಲ್ಲಿದೆ. ಬಹುಗುಣ ನಗರ, ಸಿಎಂಪಿ ಬ್ಯಾಂಡ್ ಮತ್ತು ಕರ್ಣಪ್ರಯಾಗದ ಸಬ್ಜಿ ಮಂಡಿಯ ಮೇಲ್ಭಾಗದಲ್ಲಿ ವಾಸಿಸುವ ೫೦ ಕ್ಕೂ ಹೆಚ್ಚು ಕುಟುಂಬಗಳು ಇದೀಗ ತೀವ್ರ ಮುಳುಗಡೆಯ ಆತಂಕದಲ್ಲಿವೆ. ಇಲ್ಲಿ ಮನೆಗಳ ಗೋಡೆ, ಅಂಗಳದಲ್ಲಿ ಬಿರುಕು ಬಿಟ್ಟಿರುವ ಮನೆಗಳ ಚಾವಣಿಗಳು ಅನಾಹುತದ ಮುನ್ಸೂಚನೆ ನೀಡುತ್ತಿವೆ. ಪಂಕಜ್ ದಿಮ್ರಿ, ಉಮೇಶ್ ರಟೂರಿ, ಬಿಪಿ ಸತಿ, ರಾಕೇಶ್ ಖಂಡೂರಿ, ಹರೇಂದ್ರ ಬಿಷ್ಟ್, ರವಿದತ್ ಸತಿ, ದರ್ವಾನ್ ಸಿಂಗ್, ದಿಗಂಬರ್ ಸಿಂಗ್ ಮತ್ತು ಗಬ್ಬರ್ ಸಿಂಗ್ ಸೇರಿದಂತೆ ೨೫ ಮನೆಗಳು ಬಿರುಕು ಬಿಟ್ಟಿವೆ.

ಸೂಕ್ಷ್ಮವಾದ ಬೆಟ್ಟ ಪ್ರದೇಶಗಳಲ್ಲಿ ಬೇಕಾಬಿಟ್ಟಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರುವುದೇ ಜೋಶಿ ಮಠ ಕುಸಿತಕ್ಕೆ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ಸಮಣ್ಣಿನ ಅಡಿಯಿಂದ ನೀರು ಜಿನುಗುತ್ತಿದೆ, ಮೇಲ್ಮಣ್ಣು ಸವೆದು ಹೋಗಿದೆ. ಸ್ಥಳೀಯ ತೊರೆಗಳ ಸಹಜ ಹರಿವಿಗೆ ಮನುಷ್ಯ ನಿರ್ಮಿಸಿರುವ ರಚನೆಗಳು ಅಡ್ಡಿಯಾಗಿವೆ. ಹಾಗಾಗಿ, ತೊರೆಗಳು ಆಗಾಗ ದಿಕ್ಕು ಬದಲಿಸುತ್ತಿವೆ.
ಧೌಲಿಗಂಗಾ ಮತ್ತು ಅಲಕನಂದಾ ನದಿಗಳ ಸಂಗಮ ಸ್ಥಾನವಾದ ವಿಷ್ಣುಪ್ರಯಾಗದಿಂದ ಆಗ್ನೇಯಕ್ಕಿರುವ ಇಳಿಜಾರಿನಲ್ಲಿ ಈ ಸಣ್ಣ ಪಟ್ಟಣ ಇದೆ. ಈ ಪಟ್ಟಣದಲ್ಲಿ ಮಣ್ಣು ಕುಸಿಯುವುದು ಇದು ಮೊದಲೇನೂ ಅಲ್ಲ.

ಸುಮಾರು ೫೦ ವರ್ಷಗಳ ಹಿಂದೆಯೇ ಇದು ಜನರ ಅರಿವಿಗೆ ಬಂದಿತ್ತು. 1976ರಲ್ಲಿ ಈ ಕುರಿತು ಅಧ್ಯಯನ ನಡೆಸಲು ಮಿಶ್ರಾ ಸಮಿತಿಯನ್ನು ರಾಜ್ಯ ಸರ್ಕಾರವು ನೇಮಿಸಿತ್ತು. ಇಲ್ಲಿನ ಮರಗಳನ್ನು ಮಕ್ಕಳ ರೀತಿಯಲ್ಲಿ ಪೊರೆಯಬೇಕು. ಇಲ್ಲಿನ ಬೆಟ್ಟಗಳಲ್ಲಿ ಇರುವ ಶಿಲೆಗಳನ್ನು ಅಗೆತ ಅಥವಾ ಸ್ಫೋದ ಮೂಲಕ ತೆಗೆಯಬಾರದು’ ಎಂದು ಸಮಿತಿಯು ಆಗಲೇ ಎಚ್ಚರಿಕೆ ನೀಡಿತ್ತು. ಆದರೆ ಈ ಎಚ್ಚರಿಕೆಯನ್ನು ಸರ್ಕಾರ ಅಥವಾ ಜನರು ಗಂಭೀರವಾಗಿ ಪರಿಗಣಿಸದ ಪರಿಣಾಮ ಈಗ ಗೋಚರವಾಗುತ್ತಿದೆ.
ಜೋಶಿ ಮಠದಲ್ಲಿ ಭೂ ಕುಸಿತದ ಕುರಿತು ‘ಕ್ಷಿಪ್ರ ಅಧ್ಯಯನ’ ನಡೆಸಲು ಕೇಂದ್ರವು ಸಮಿತಿಯನ್ನು ರಚಿಸಿದೆ.

ಆದರೆ ಈಗ ಇಂಥ ಅಧ್ಯಯನಗಳಿಂದ ಪ್ರಯೋಜನವಾದರೂ ಏನು? ಒಂದೊಮ್ಮೆ ಸಮಿತಿ ‘ಅಭಿವೃದ್ಧಿ’ ಕಾಮಗಾರಿ ಗಳಿಂದಾಗಿಯೇ ವಿನಾಶಕ್ಕೆ ಮುನ್ನುಡಿ ಬರೆಯಲಾಗುತ್ತಿದೆ ಎಂಬ ವಾಸ್ತವ ವರದಿಯನ್ನು ನೀಡಿದಲ್ಲಿ, ಅದನ್ನೊಪ್ಪಿ, ಕಾಮಗಾರಿ ಗಳನ್ನು ನಿಲ್ಲಿಸುವ ಮನಃಸ್ಥಿತಿಯಲ್ಲಿ ನಮ್ಮ ಅಧಿಕಾರಾರೂಢ ರಾಜಕಾರಣಿಗಳು ಇದ್ದಾರೆಯೇ? ರುದ್ರಪ್ರಯಾಗದ ಬಳಿಯ ಶ್ರೀನಗರ ಮೂಲದ ಗುತ್ತಿಗೆದಾರ ಬಬ್ಬಾನ್ ಪುಂದೀರ್ ಹೇಳುವುದನ್ನು ಕೇಳಿದರೆ ಆಕ್ರೋಶ ಕೆರಳುತ್ತದೆ.

ಗಂಗೆಯ ಉದ್ದಕ್ಕೂ ಹಲವು ಒಡ್ಡುಗಳ ನಿರ್ಮಾಣಗಳಲ್ಲಿ ಮತ್ತು ಕೇದಾರ ಕಣಿವೆಯ ರಸ್ತೆಗಳ ನಿರ್ಮಾಣದಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರ ಪ್ರಕಾರ, ಅಂಥ ನಿರ್ಮಾಣ ಕಾರ್ಯಗಳಲ್ಲಿ ಕಂಪನಿಗಳು ಹೆಚ್ಚೆಚ್ಚು ಹಣವನ್ನು ಪರಿಸರ ಸ್ನೇಹಿ ಉತ್ಪನ್ನ ಗಳನ್ನು ಸೇರಿಸುವಲ್ಲಿ, ಖರೀದಿಸುವಲ್ಲಿ ಒಲವು ತೋರಿಸುತ್ತಿಲ್ಲ. ಕೇದಾರನಾಥದ ಬಳಿಯ ಮಂದಾಕಿನಿ ನದಿಯ ಮೇಲಿರುವ ಡ್ಯಾಮ್‌ಗಾಗಿ ಅಲ್ಲಿಂದ ಪರ್ವತದವರೆಗೆ ೯ ಕಿ.ಮೀ.ವರೆಗಿನ ಸುದೀರ್ಘ ಸುರಂಗ ತೋಡುವ ಅವಶ್ಯಕತೆ ಇತ್ತು. ಸುರಂಗ ಕೊರೆ ಯುವ ಮಷಿನ್ (ಟಿವಿಎಂಫ್ ಟನಲ್ ಬೋರಿಂಗ್ ಮಷಿನ್) ಅನ್ನು ಉಪಯೋಗಿಸುವ ಬದಲಾಗಿ ಕಂಪನಿಯು ಡೈನಾಮೈಟ್ ಸಿಡಿಸಿ ತನ್ನ ಕಾರ್ಯ ಸಾಧಿಸಿತು.

ಟಿಬಿಎಂ ತುಂಬಾ ದುಬಾರಿ. ಆದರೆ ಡೈನಾಮೈಟ್ ಖರ್ಚಿಲ್ಲದ್ದು, ಇದರಿಂದಾಗಿ ಪರ್ವತದ ಮೇಲೆ ಅಡ್ಡ ಪರಿಣಾಮಗಳಾಗಿವೆ. ೯ ಕಿ.ಮೀ. ಟನಲ್ ಕೊರೆಯಲು ಐದು ಟನ್‌ಗಳಷ್ಟು ಡೈನಾಮೈಟ್ ಅಗತ್ಯ. ಶ್ರೀನಗರದಲ್ಲಿನ ಜಿವಿಕೆ ಪ್ರಾಜೆಕ್ಟ್‌ಗೂ ಸಾಕಷ್ಟು ಡೈನಾಮೈಟ್ ಬೇಕಾಗಿತ್ತು, ಆದರೆ ಸ್ಥಳೀಯರು ವಿರೋಽಸಿದರು ಎಂದು ವಿವರಿಸುತ್ತಾರವರು. ಇಂಥ ಹೊಣೆಗೇಡಿ ಕೃತ್ಯಕ್ಕೆ
ಲಕ್ಷಾಂತರ ಜೀವ ಬಲಿಯಾದದ್ದು ಸುಳ್ಳೆ? ಕೆಲ ವರ್ಷಗಳ ಹಿಂದೆ, ಯೋಜನಾ ಆಯೋಗವು ಹಿಮಾಲಯ ಪರಿಸರ ವ್ಯವಸ್ಥೆಯ ಸ್ಥಿರತೆಯ ಕುರಿತು ರಾಷ್ಟ್ರೀಯ ಮಿಶನ್ ಒಂದನ್ನು ಉದ್ದೇಶಿಸಿತ್ತು. ಅದರಲ್ಲಿ ಹಿಮಾಲಯ ಪರಿಸರ ವ್ಯವಸ್ಥೆಯ ಪ್ರತಿಯೊಂದು
ಅಂಶವನ್ನೂ ಒಳಗೊಂಡ ರೇಖಾಚಿತ್ರ ತಯಾರಿಸಲಾಗಿತ್ತು.

ಅದರಲ್ಲಿ ಸಮರ್ಪಕ ನಗರೀಕರಣವೂ ಒಂದು. ಇದಕ್ಕಾಗಿ ನಿಯಮಾವಳಿಯನ್ನೂ ತಯಾರಿಸಲಾಗಿತ್ತು. ಇದರಲ್ಲಿ ಮುನ್ಸಿಪಲ್ ಬೈಲಾ ತಿದ್ದುಪಡಿ, ಕುಸಿತದ ಪ್ರದೇಶಗಳಲ್ಲಿ ಅಥವಾ ನೈಸರ್ಗಿಕವಾಗಿ ಅಪಾಯವಿರುವ ಸ್ಥಳಗಳಲ್ಲಿ ನಿರ್ಮಾಣಕಾರ್ಯ ನಿಷೇಧ, ಇಲ್ಲಿನ ಬಿಲ್ಡಿಂಗ್ ಕೋಡ್ ಬದಲಾವಣೆ, ಸ್ಥಳೀಯರು ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳ ಬದಲಾವಣೆ, ಯಾತ್ರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸುವುದು… ಮುಂತಾದ ಶಿಫಾರಸುಗಳಿದ್ದರೂ, ಅವುಗಳನ್ನು ಸರಕಾರ ಅನುಷ್ಠಾನಗೊಳಿಸಿಲ್ಲ.

ಇದಾವುದೂ ನಮ್ಮನ್ನಾಳುವವರಿಗೆ ಬೇಕಿಲ್ಲ. ಅಲ್ಲಿ ನಡೆಯುತ್ತಿರುವುದು ಅಭಿವೃದ್ಧಿಯಲ್ಲ, ರಾಜಕೀಯ ಮೇಲಾಟ.
Read E-Paper click here