Wednesday, 13th November 2024

vishweshwar bhat column: ಯಾರಿಗೆ ಆಗಲಿ, ಕುಳಿತು ಕೈಕುಲುಕಬಾರದು. ಕೈಕುಲುಕುವಾಗ ಎದ್ದು ನಿಲ್ಲಬೇಕು!

vishweshwar bhat column

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@gmail.com

ವ್ಯಕ್ತಿಗೆ ಹಣ, ಅಂತಸ್ತು, ಕೀರ್ತಿ, ಸ್ಥಾನಮಾನ ಬಂದಾಗ ಆತನ ವರ್ತನೆ ಬದಲಾಗುತ್ತದೆ.ಆತ ಇದ್ದಕ್ಕಿದ್ದಂತೆ ಉಪದೇಶ ಕೊಡಲು ಆರಂಭಿಸುತ್ತಾನೆ. ತಾನು ಹೇಗೆ ಹಣ ಮಾಡಿದೆ, ಜೀವನದಲ್ಲಿ ಮೇಲೆ ಬಂದೆ ಎಂದು ಭಾಷಣ ಬಿಗಿಯಲು ಶುರು ಮಾಡುತ್ತಾನೆ. ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಲಾರಂಭಿಸುತ್ತಾನೆ. ತನ್ನ ಮಾತುಗಳೆಲ್ಲ ಅಮರವಾಣಿಯಂತೆ ಕೇಳಿಸಬೇಕು ಎಂದು ಆಶಿಸುತ್ತಾನೆ. ಇದ್ದಕ್ಕಿದ್ದಂತೆ ಆತನ ಸುತ್ತ ಎಂದೂ ಕಾಣಿಸಿಕೊಳ್ಳದವರು ಆವರಿಸಿಕೊಳ್ಳುತ್ತಾರೆ. ಯಶಸ್ಸು, ಪ್ರಸಿದ್ಧಿ, ಪ್ರಚಾರ ಆತನನ್ನು ಬದಲಿಸಿಬಿಡುತ್ತವೆ.
ಆದರೆ ಇತ್ತೀಚೆಗೆ ನಿಧನರಾದ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಹಾಗಿರಲಿಲ್ಲವಂತೆ. ನಿವೃತ್ತ ಐಎಎಸ್ ಅಧಿಕಾರಿ ಥಾಮಸ್ ಮ್ಯಾಥ್ಯು ಅವರು ಬರೆದ Ratan Tata : A Life ಎಂಬ ಪುಸ್ತಕದಲ್ಲಿ ರತನ್ ಅವರ ಸರಳ ಜೀವನದ ಬಗ್ಗೆ ಬಹಳ ಸ್ವಾರಸ್ಯವಾಗಿ ಬರೆದಿದ್ದಾರೆ. ರತನ್ ಬಯಸಿದ್ದರೆ ಜಗತ್ತಿನ ಯಾವ ದೇಶದದ ಅತ್ಯಂತ ಬೆಲೆಬಾಳುವ ಜಾಗದಲ್ಲಿ, ಐಷಾರಾಮಿ ಬಂಗಲೆ, ಮಹಲನ್ನು ಕಟ್ಟಬಹುದಿತ್ತು, ಖರೀದಿಸಬಹುದಿತ್ತು. ಅತಿ ಬೆಲೆ ಬಾಳುವ ವಾಚು,ಕಾರು ಹೊಂದಬಹುದಿತ್ತು. ಶಾಪಿಂಗ್ ಗೆ ಪ್ಯಾರಿಸ್, ಲಂಡನ್ ಗೆ ಹೋಗಬಹುದಿತ್ತು. ಸ್ವಂತ ಹಡಗು, ವಿಮಾನವನ್ನು ಇಟ್ಟುಕೊಳ್ಳಬಹುದಿತ್ತು.
ಆದರೆ ರತನ್ ಇಂಥ ಷೋಕಿಗಳಿಂದ ದೂರವೇ ಇದ್ದರು. ಅವರಿಗೆ ಸ್ನೇಹಿತರು ಚೆಕ್ಸ್ (ಚೌಕಡಿ) ಶರ್ಟ್ ಅಥವಾ ಶರ್ಟ್ ಬಟ್ಟೆ ಉಡುಗೊರೆಯಾಗಿ ಕೊಟ್ಟರೆ, ದಿನವಿಡೀ ಖುಷಿಯಿಂದ ಇರುತ್ತಿದ್ದರು. ಅವರು ಸೂಟ್ ಧರಿಸದೇ ಇದ್ದಾಗ ಚೌಕಡಿ ಅಂಗಿಯಲ್ಲಿ ಕಾಣಿಸಿಕೊಳ್ಳುವುದನ್ನು ಇಷ್ಟಪಡುತ್ತಿದ್ದರು. ರತನ್ ಟಾಟಾ ಇಂಥ ಸಾಮಾನ್ಯ ಹೋಟೆಲಿನಲ್ಲಿ ಉಳಿದುಕೊಳ್ಳುತ್ತಾರಾ ಎಂದು ಜನ ಮಾತಾಡಿಕೊಳ್ಳುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಈ ಕಾರಣದಿಂದ ಮತ್ತು ಸುರಕ್ಷತೆ ದೃಷ್ಟಿಯಿಂದ ಅವರು ಕೆಲವೊಮ್ಮೆ ಸ್ಟಾರ್ ಹೊಟೇಲುಗಳಲ್ಲಿ ಉಳಿದುಕೊಳ್ಳುತ್ತಿದ್ದರು. ‘ನನಗೆ ಎಲ್ಲಿಯೇ ಮಲಗಿದರೂ ಚೆನ್ನಾಗಿ ನಿದ್ದೆ ಬರುತ್ತದೆ’ ಎಂದು ಅವರು ಹೇಳುತ್ತಿದ್ದರು.
ಒಮ್ಮೆ ಸ್ನೇಹಿತರೊಬ್ಬರು ರತನ್ ಟಾಟಾ ಅವರಿಗೆ ‘ಅಂಬಾನಿ ಮಗ ಹತ್ತು ಕೋಟಿ ರುಪಾಯಿ ವಾಚನ್ನು ಕಟ್ಟುತ್ತಾರಂತೆ. ನೀವೇಕೆ ಐದು ಸಾವಿರ ವಾಚನ್ನು ಕಟ್ಟಿದ್ದೀರಲ್ಲಾ?’ ಎಂದು ಕೇಳಿದರಂತೆ. ಅದಕ್ಕೆ ರತನ್, ‘ಅದರಲ್ಲಿ ತೋರಿಸುವ ಸಮಯಕ್ಕೂ, ನನ್ನ ವಾಚಿನ ಸಮಯಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಎರಡೂ ಒಂದೇ. ಆ ವಾಚಿನಲ್ಲಿ ತೋರಿಸುವ ಸಮಯ ನನ್ನ ವಾಚಿಗಿಂತ ಅಮೂಲ್ಯವಾಗಿದ್ದರೆ ಹೇಳಿ, ನಾನು ನಾಳೆಯಿಂದ ಅದೇ ವಾಚನ್ನು ಕಟ್ಟುತ್ತೇನೆ’ ಎಂದು ಹೇಳಿದ್ದರು.
ಒಮ್ಮೆ ರತನ್ ಪರಿಚಿತರೊಬ್ಬರು ಅವರಿಗೆ, ‘ನಿಮ್ಮ ಶ್ರೀಮಂತಿಕೆಗೆ ಹೋಲಿಸಿದರೆ, ನೀವು ಅತ್ಯಂತ ಸರಳ ಜೀವನ ನಡೆಸುತ್ತಿದ್ದೀರಿ. ನಿಮಗೆ ಜೀವನದಲ್ಲಿ ಉತ್ತಮ ಸಂಗತಿಗಳನ್ನು ಹೊಂದಲು ಆಸೆ ಇಲ್ಲವಾ?’ ಎಂದು ಕೇಳಿದಾಗ, ‘ನಾನು ಹೇಗೇ ಇದ್ದರೂ ವ್ಯತ್ಯಾಸವೇನಿಲ್ಲ. ನಾನು ಹತ್ತು ಲಕ್ಷ ರುಪಾಯಿ ಬೆಲೆ ಬಾಳುವ ಕೋಟ್ ಧರಿಸಿದರೆ, ಟಾಟಾ ಗೆ ಹತ್ತು ಲಕ್ಷ ಯಾವ ಲೆಕ್ಕ ಅಂತಾರೆ. ನಾಲ್ಕು ಸಾವಿರ ರುಪಾಯಿ ಬೆಲೆಯ ಸಾಮಾನ್ಯ ಕೋಟ್ ಧರಿಸಿದರೆ, ರತನ್ ಟಾಟಾ ಧರಿಸಿದ ಕೋಟ್ ಗೆ ಎಷ್ಟು ಬೆಲೆ ಇರಬಹದು, ಏನಿಲ್ಲವೆಂದರೂ ಹತ್ತು ಲಕ್ಷ ರುಪಾಯಿ ಇರಬಹುದು ಅಂತಾರೆ. ಹೀಗಿರುವಾಗ ನಾನು ನಾಲ್ಕು ಸಾವಿರ ರೂಪಾಯಿ ಬೆಲೆಯ ಕೋಟ್ ಧರಿಸುವುದೇ ಒಳ್ಳೆಯದಲ್ಲವೇ?’ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದರು.
ಒಮ್ಮೆ ರತನ್ ಟಾಟಾ ನ್ಯೂಯಾರ್ಕಿಗೆ ಹೋಗಿದ್ದರು. ಅವರ ಜತೆ ಬಿಜಿನೆಸ್ ಸಂಬಂಧವುಳ್ಳ ಅಮೆರಿಕದ ದೊಡ್ಡ ಉದ್ಯಮಿಯೊಬ್ಬರು, ದಿನಕ್ಕೆ ನಾಲ್ಕು ಲಕ್ಷ ರುಪಾಯಿ ರೇಟಿನ ಹೋಟೆಲಿನಲ್ಲಿ ಭವ್ಯ ಕೋಣೆಯನ್ನು ಕಾದಿರಿಸಿದ್ದರು.
ಆ ಕೋಣೆಯನ್ನು ಪ್ರವೇಶಿಸುತ್ತಿದ್ದಂತೆ, ಅದರ ರೇಟನ್ನು ಕೇಳಿದ ಟಾಟಾ, ‘ನನ್ನೊಬ್ಬನ ವಾಸ್ತವ್ಯಕ್ಕೆ ಇಷ್ಟು ದುಬಾರಿ ಕೋಣೆ ಬೇಡ. ನನಗೆ ದಿನಕ್ಕೆ ಇಪ್ಪತ್ತು ಸಾವಿರ ರುಪಾಯಿ (ಆ ಹೋಟೆಲಿನಲ್ಲಿರುವ ಅತಿ ಕಡಿಮೆ ಬೆಲೆಯ ರೂಮು) ರೂಮು ಸಾಕು. ನನ್ನನ್ನು ಇಷ್ಟು ದುಬಾರಿ ರೂಮಿನಲ್ಲಿ ಉಳಿಸಿದ್ದೇನೆ ಎಂದು ನನ್ನ ಅಮೆರಿಕ ಉದ್ಯಮಿ ಸ್ನೇಹಿತ ಬಡಾಯಿ ಕೊಚ್ಚಿಕೊಳ್ಳಬಹುದು. ಇದರಿಂದ ನನಗೆ ಏನೂ ಆಗುವುದಿಲ್ಲ. ನನ್ನ ಹೆಸರಿನಲ್ಲಿ ಆತ ಹೆಚ್ಚುಗಾರಿಕೆ ಪ್ರದರ್ಶಿಸವುದಕ್ಕೆ ನಾನೇಕೆ ಅವಕಾಶ ಮಾಡಿಕೊಡಲಿ?’ ಎಂದು ಸಾಮಾನ್ಯ ಕೋಣೆಗೆ ಶಿಫ್ಟ್ ಆಗಿಬಿಟ್ಟರು.
ಮನಸ್ಸು ಮಾಡಿದ್ದರೆ ಅದೇ ರೂಮಿನಲ್ಲಿ ರತನ್ ಟಾಟಾ ಜೀವನವಿಡೀ ಕಳೆಯಬಹುದಿತ್ತು. ಅಷ್ಟು ದುಬಾರಿ ರೂಮಿನಲ್ಲಿ ಉಳಿದರೂ ಅವರ ಸಂಪತ್ತು ಕರಗುತ್ತಿರಲಿಲ್ಲ. ಆದರೆ ಅವರು ಸಾಮಾನ್ಯ ರೂಮಿನಲ್ಲಿಯೇ ಕಳೆಯಲು ತೀರ್ಮಾನಿಸಿದರು. ವ್ಯವಹಾರ ಮತ್ತು ಶಿಷ್ಟಾಚಾರದ ಕಾರಣಗಳಿಂದ ಕೆಲವು ಸಹ ದುಬಾರಿ ಹೋಟೆಲಿನಲ್ಲಿ ಉಳಿಯುವುದು ಅನಿವಾರ್ಯವಾಗುತ್ತಿತ್ತು. ಅಂಥ ಸಂದರ್ಭವನ್ನು ಬಿಟ್ಟರೆ, ಅವರು ಅಷ್ಟೇನೂ ದುಬಾರಿಯಲ್ಲದ ಮಾಧ್ಯಮ ಶ್ರೇಣಿಯ ರೂಮಿನಲ್ಲಿ ಉಳಿಯುತ್ತಿದ್ದರು.
ಮನಸ್ಸು ಮಾಡಿದ್ದರೆ, ಏಕಾಂಗಿಯಾಗಿ ಮುಂಬೈ ಮನೆಯಲ್ಲಿ ಇರುವ ಬದಲು, ಹತ್ತಿರದಲ್ಲಿಯೇ ಇರುವ ತಾಜ್ ಮಹಲ್ ಹೋಟೆಲಿನಲ್ಲಿ ಅವರು ಉಳಿಯಬಹುದಿತ್ತು. ಆದರೆ ಅವರು ಅಲ್ಲಿ ಎಂದೂ ತಂಗಲಿಲ್ಲ.
ರತನ್ ಟಾಟಾ ನಿಧನರಾಗುವ ಮೂರು ವರ್ಷ ಮುನ್ನ ನಡೆದ ಪ್ರಸಂಗ. ವಯೋಸಹಜ ಅನಾರೋಗ್ಯ ಮತ್ತು ಬಳಲಿಕೆಯಿಂದ ಅವರಿಗೆ ಪದೇ ಪದೆ ಎದ್ದು ನಿಲ್ಲಲು ಆಗುತ್ತಿರಲಿಲ್ಲ. ಅವರ ಜನ್ಮದಿನದಂದು ಅವರಿಗೆ ಶುಭಾಶಯ ಹೇಳಲು ಅರವತ್ತು ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬಂದವರೆಲ್ಲರನ್ನೂ ಅವರು ಎದ್ದು ನಿಂತು ಸ್ವಾಗತಿಸಿ, ಹೂಗುಚ್ಛವನ್ನು ಸ್ವೀಕರಿಸುತ್ತಿದ್ದರು. ಮೊದಲ ಹತ್ತು ಮಂದಿ ನೀಡಿದ ಹೂಗುಚ್ಛ ಸ್ವೀಕರಿಸುವಾಗಲೂ ಅವರು ಎದ್ದು ನಿಂತರು. ಅದನ್ನು ಗಮನಿಸಿದ ಅವರ ಆಪ್ತ ಸ್ನೇಹಿತರೊಬ್ಬರು, ‘ಪ್ರತಿ ಸಲವೂ ನೀವು ಎದ್ದು ನಿಂತರೆ ಆಯಾಸವಾಗುತ್ತದೆ. ನೀವು ಕುಳಿತುಕೊಂಡೇ ಕೈಕುಲಕಿ, ಕುಳಿತೇ ಹೂಗುಚ್ಛ ಸ್ವೀಕರಿಸಿ. ಯಾರೂ ತಪ್ಪು ತಿಳಿಯುವುದಿಲ್ಲ’ ಎಂದು ಹೇಳಿದರು.
ಅದಕ್ಕೆ ಟಾಟಾ, ‘ಬೇರೆಯವರು ತಪ್ಪು ಭಾವಿಸುವುದಿಲ್ಲ, ನಿಜ. ಆದರೆ ನನಗೆ ಅದು ಸರಿ ಕಾಣುವುದಿಲ್ಲವಲ್ಲ. ಯಾರಿಗೆ ಆಗಲಿ, ಕುಳಿತು ಕೈಕುಲುಕಬಾರದು. ಕೈಕುಲುಕುವಾಗ ಎದ್ದು ನಿಲ್ಲಬೇಕು. ಅದು ಗೌರವ ಸೂಚಕ. ಹಾಗೆ ಹೂಗುಚ್ಛ ಸ್ವೀಕರಿಸುವಾಗಲೂ. ಇಲ್ಲಿ ವಯಸ್ಸು, ಬಳಲಿಕೆ, ಸುಸ್ತು ಮುಖ್ಯವಾಗುವುದಿಲ್ಲ. ಬೇರೆಯವರು ಗೌರವ ನೀಡಿದಾಗ, ನಾವೂ ಗೌರವಯುತವಾಗಿಯೇ ವರ್ತಿಸಬೇಕು. ಹೀಗಾಗಿ ನಾನು ಪ್ರತಿ ಸಲವೂ ಎದ್ದು ನಿಲ್ಲುತ್ತೇನೆ’ ಎಂದು ಹೇಳಿದರು.
ನಿಧನರಾಗುವ ಕೆಲ ದಿನಗಳ ಮುನ್ನ ಅವರನ್ನು ಭೇಟಿಯಾಗಲು ಯಾರಾದರೂ ಹೋದಾಗ, ಎದ್ದು ನಿಂತು ಕೈಕುಲುಕುವುದು ಕಷ್ಟವಾಗುತ್ತಿತ್ತು. ಆದರೂ ಅವರು ಕೇಳುತ್ತಿರಲಿಲ್ಲ. ವೈದ್ಯರು ಹೇಳಿದರೂ ಕೇಳುತ್ತಿರಲಿಲ್ಲ. ಈ ಕಾರಣದಿಂದ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿರಲಿಲ್ಲ. ಯಾರಾದರೂ ಕುಳಿತು ಕೈಕುಲುಕಿದರೆ, ಅವರಿಗೆ ಕಿವಿಮಾತನ್ನು ಹೇಳದಿದ್ದರೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ.
ಸು,ಆರು ಇಪ್ಪತ್ತು ವರ್ಷಗಳ ಹಿಂದೆ, ಒಮ್ಮೆ ರತನ್ ಟಾಟಾ ಇಸ್ತಾನಬುಲ್ ನಲ್ಲಿರುವ ತಮ್ಮ ಸ್ನೇಹಿತರೊಬ್ಬರ ಜನ್ಮದಿನದಂದು ಅವರಿಗೆ ಇಷ್ಟವಾದ ಒಂದು ವಸ್ತುವನ್ನು ಜನ್ಮದಿನದ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದರು. ಅವರ ಸ್ನೇಹಿತರು, ಜನಪ್ರಿಯ ಮ್ಯಾಗಜಿನ್ ಗೆ ನೀಡಿದ ಸಂದರ್ಶನದಲ್ಲಿ ತಮಗೆ ನೀಲಿ ಟೈ ಅಂದ್ರೆ ಪಂಚಪ್ರಾಣ ಎಂದು ಹೇಳಿದ್ದರು. ಆ ಸಂದರ್ಶನವನ್ನು ರತನ್ ಕಾರ್ಯದರ್ಶಿ ಗಮನಕ್ಕೆ ತಂದಿದ್ದರು. ತಕ್ಷಣ ರತನ್ ತಮ್ಮ ಕಾರ್ಯದರ್ಶಿಗೆ, ‘ನನ್ನ ಸ್ನೇಹಿತನಿಗೆ ಅದನ್ನೇ ಉಡುಗೊರೆಯಾಗಿ ಕಳಿಸಿ’ ಎಂದು ಸೂಚಿಸಿದ್ದರು.
ಅದೇ ರೀತಿ ಮುಂದಿನ ಹತ್ತೊಂಬತ್ತು ವರ್ಷ, ಬೇರೆ ಬೇರೆ ಬ್ರಾಂಡಿನ ನೀಲಿ ಟೈಯನ್ನು ಕಳಿಸಿಕೊಟ್ಟಿದ್ದರು. (ನಂತರ ಅವರ ಸ್ನೇಹಿತ ತೀರಿಕೊಂಡರು) ತಮ್ಮ ಜನ್ಮದಿನ ಸಮೀಪಿಸುತ್ತಿದ್ದಂತೆ ರತನ್ ಅವರ ಸ್ನೇಹಿತ, ‘ನನಗೆ ಯಾರು ಏನು ಕಳಿಸುತ್ತಾರೋ, ಇಲ್ಲವೋ ಗೊತ್ತಿಲ್ಲ, ನನಗೆ ಅದು ಮುಖ್ಯವೂ ಅಲ್ಲ. ಆದರೆ ನನ್ನ ಆಪ್ತ ಸ್ನೇಹಿತ ರತನ್ ಟಾಟಾ ಮಾತ್ರ ನನಗಿಷ್ಟದ ನೀಲಿ ಟೈ ಕಳಿಸಲು ಮರೆಯುವುದಿಲ್ಲ. ಅವರು ಕಳಿಸಿದ ನೀಲಿ ಟೈ ಸಿಕ್ಕ ದಿನವೇ ನನ್ನ ಜನ್ಮದಿನ’ ಎಂದು ಹೇಳುತ್ತಿದ್ದರಂತೆ.
ಒಂದು ವರ್ಷ ಅವರಿಗೆ ಒಂದು ದಿನ ತಡವಾಗಿ ರತನ್ ಕಳಿಸಿದ ನೀಲಿ ಟೈ ಬಂತಂತೆ. ಅವರು ಒಂದು ದಿನ ತಡವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರಂತೆ!


ಮದುವೆ ಕುರಿತು ಪಾವೆಂ

ಪದಗಳ ಬಗ್ಗೆ ಅಪಾರ ಆಸಕ್ತಿಯುಳ್ಳ ನನ್ನ ಸ್ನೇಹಿತರಾದ ಮಾಂಬಳ್ಳಿ ಶ್ರೀಪಾದ ಅವರಿಗೆ ಅವರ ಮದುವೆಯ ಮೂವತ್ತನೇ ವಾರ್ಷಿಕೋತ್ಸವಕ್ಕೆ ಪಾವೆಂ ಆಚಾರ್ಯರು ಬರೆದ ‘ಪದಾರ್ಥ ಚಿಂತಾಮಣಿ’ ಪುಸ್ತಕವನ್ನು ಉಡುಗೊರೆಯಾಗಿ ಕಳಿಸಿದ್ದೆ. ‘ನನಗೆ ನೀವು ಬೇರೆ ಏನನ್ನು ಕೊಟ್ಟಿದ್ದರೂ ಇಷ್ಟು ಸಂತಸವಾಗುತ್ತಿರಲಿಲ್ಲ’ ಎಂದು ಅವರು ತಮಗಾದ ಆನಂದವನ್ನು ಪತ್ರದಲ್ಲಿ ಬರೆದು ಕಳಿಸಿದ್ದರು. ಪದಪ್ರೀತಿ ಇರುವವರು ಓದಲೇಬೇಕಾದ ಪುಸ್ತಕ. ನಾನಂತೂ ಆಗಾಗ ಈ ಕೃತಿಯನ್ನು ತಿರುವಿ ಹಾಕುತ್ತಿರುತ್ತೇನೆ.
ಮಾಂಬಳ್ಳಿ ಶ್ರೀಪಾದ ಅವರು, ‘ನೀವು ಕಳಿಸಿದ ಕೃತಿಯಲ್ಲಿ ಪಾವೆಂ ಆಚಾರ್ಯರು ಮದುವೆ ಪದದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ, ಗಮನಿಸಿದ್ದೀರಾ?’ ಎಂದು ಬರೆದ್ದರು. ಅದನ್ನು ಹೈಲೈಟ್ ಮಾಡಿ ಕಳಿಸಿಕೊಟ್ಟಿದ್ದರು.
ಪಾವೆಂ ಅವರು ಮದುವೆಯ ಬಗ್ಗೆ ಹೀಗೆ ಬರೆದಿದ್ದಾರೆ – ಮದುವೆ ಎಂಬುದು ಮನುಷ್ಯಲೋಕದ ಅತ್ಯಂತ ಪುರಾತನ ಸಂಸ್ಥೆ. ಆದರೆ ಬೇರೆ ಬೇರೆ ಭಾಷೆಗಳಲ್ಲಿ ಅದನ್ನು ನಿರ್ದೇಶಿಸುವುದಕ್ಕೆ ಇರುವ ಶಬ್ದಗಳ ತಳ ಶೋಧನೆಗೆ ಇಳಿದರೆ ಆ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಬಹಳ ಸ್ವಾರಸ್ಯವಾದ ಅಂಶಗಳು ಹೊರಪಡುತ್ತವೆ.
ಕನ್ನಡದ ಮದುವೆಯ ಮೂಲಾರ್ಥವನ್ನು ಶಬ್ದಶಾಸ್ತ್ರಜ್ಞರು ಜೋಡಿಸುವಿಕೆ, ಕೂಡಿಸುವಿಕೆ ಎಂದು ತರ್ಕಿಸಿದ್ದಾರೆ. ಆ ಅರ್ಥದ ಮಡು, ಮಣ ಎಂಬ ದ್ರಾವಿಡ ಧಾತುವಿನಿಂದ ಅದು ಹುಟ್ಟಿರಬೇಕು. ತಮಿಳಿನಲ್ಲಿ ‘ಮಣಂ’, ತೆಲುಗಿನಲ್ಲಿ ‘ಮನುವು’ ಕನ್ನಡ ಮದುವೆಗೆ ಸಂವಾದಿಯಾಗಿವೆ. ತುಳುವಿನಲ್ಲಿ ‘ಮದಿಮೆ’, ಅದರಿಂದ ಮದಲಗಿತ್ತಿ (= ವಧು) ಮದವ (= ಮದುವಣಿಗ) ಇತ್ಯಾದಿ ಶಬ್ದಗಳೂ ಕವಲೊಡೆದಿವೆ.
ಸಂಸ್ಕೃತದಲ್ಲಿ ಮದುವೆಗೆ ವಿವಾಹ, ಉದ್ವಾಹ, ಪರಿಣಯ, ಪಾಣಿಗ್ರಹಣ, ಉಪಯಾಮ ಇತ್ಯಾದಿ ಶಬ್ದಗಳಿದ್ದರೂ ವಿವಾಹ ಅತಿ ಹೆಚ್ಚು ಬಳಕೆಯಲ್ಲಿದೆ. ಶಬ್ದ ವಹ್ = ಹೊತ್ತುಕೊಂಡು ಹೋಗು ಎಂಬ ಧಾತುವಿನಿಂದ ಹುಟ್ಟಿದ್ದು, ವಾಹನ ಇದರದೇ ನಾಮರೂಪ. ವೇದಕಾಲದಿಂದಲೇ ವಿವಾಹ ಮದುವೆಯನ್ನು ಸಂಕೇತಿಸುತ್ತದೆ. ಆದರೂ ಧಾತ್ವರ್ಥವನ್ನು ನೋಡಿದರೆ ಹೆಣ್ಣನ್ನು ಅಪಹರಿಸಿ ಒಯ್ದು ಮದುವೆ ಮಾಡಿಕೊಳ್ಳುವ ಬಹುಪುರಾತನ ರೂಢಿಯ ಕಡೆ ಈ ಶಬ್ದ ಬೆರಳು ತೋರಿಸುವಂತೆ ಅನಿಸುತ್ತದೆ. ಉದ್ವಾಹ ಎಂಬ ಅದರ ಇನ್ನೊಂದು ಪರ್ಯಾಯ ಪದ ಈ ಶಂಕೆಯನ್ನು ಇನ್ನೂ ಬಲಪಡಿಸುತ್ತದೆ.
ಧರ್ಮಶಾಸ್ತ್ರಕಾರರು ಇಂಥ ಮದುವೆಗೆ ರಾಕ್ಷಸೀ ವಿವಾಹ ಎಂದು ಮುದ್ರೆ ಒತ್ತಿದರೂ ರಾಕ್ಷಸಧ್ವಂಸಿಯಾದ ಕೃಷ್ಣನ ಕುಲದವರಾದ ಯಾದವರಲ್ಲಿ ಇದು ಬಹು ರೂಢಿಯಾಗಿತ್ತೆಂದೂ ಪ್ರಾಯಕ್ಕೆ ಬಂದ ಯಾದವ ಹುಡುಗಿಯರು ಕೂಡ ಇಂಥ ಮದುವೆಯನ್ನೇ ಮೆಚ್ಚುತ್ತಿದ್ದರೆಂದೂ ಅರ್ಥವಾಗುತ್ತದೆ. ಶಾಸ್ತ್ರಜ್ಞರಲ್ಲಿ ಹಿರಿಯನೆನಿಸಿದ ಭೀಷ್ಮನೇ ಸ್ವಯಂವರ ಮಂಟಪದಿಂದ ಹುಡುಗಿಯರನ್ನು ಅಪಹರಿಸಿ ತಂದು ತಮ್ಮಂದಿರಿಗೆ ಮದುವೆ ಮಾಡಿದನಲ್ಲ !
ಇದರೊಡನೆ ಹೋಲಿಸಿದರೆ ಪಾಣಿಗ್ರಹಣ, ಪರಿಣಯ ಸೌಮ್ಯ ವಿಧಾನಗಳು. ಪಾಣಿ ಗ್ರಹಣವೆಂದರೆ ಕೈ ಹಿಡಿಯುವುದು. ಪರಿಣಯವೆಂದರೆ ಸುತ್ತ ಕರೆದೊಯ್ಯುವುದು. ಇವೆರಡೂ ವಿವಾಹ ವಿಧಿಯ ಅಂಗಗಳನ್ನು ಸೂಚಿಸುತ್ತವೆ. ಹೋಮದ ಬೆಂಕಿಯ ಸುತ್ತ ವರನು ವಧುವನ್ನು ಕೈ ಹಿಡಿದು ಕರೆದೊಯ್ಯುವುದು ವೈದಿಕ ಕ್ರಮ. ಅದೇ ಸಪ್ತಪದಿ, ಪರಿಣಯ.
ಇಂಗ್ಲಿಷಿನಲ್ಲಿ wedding, marriage ಎಂಬ ಪದಗಳು ಪ್ರಚಲಿತವಾಗಿವೆ. Marriage ಶಬ್ದ ಲ್ಯಾಟಿನ್ನಿನಿಂದ ಫ್ರೆಂಚ್ ಮೂಲಕ ಇಂಗ್ಲಿಷಿಗೆ ಬಂದದ್ದು. Maris, mas ಅಂದರೆ ಪುರುಷ – ಆದ್ದರಿಂದ marriageಗೆ ಗಂಡನನ್ನು ಕೂಡಿಸಿ ಕೊಡುವುದು ಎಂಬ ಬಲು ಸೌಮ್ಯ ಅರ್ಥ ಹೊರಡುತ್ತದೆ. wedding ತುಸು ಹೆಚ್ಚು ಸ್ವಾರಸ್ಯವಾದದ್ದು.
ಇದರ ಧಾತ್ವರ್ಥ ಪಣತೊಡು, ಪಂಥವಿಡು ಇತ್ಯಾದಿ. ಹೆಣ್ಣಿಗಾಗಿ ಗಂಡು ಪಣವಿಟ್ಟು ಅಂದರೆ ಜಾಮೀನು ಕೊಟ್ಟು (ಬಹುಶಃ ಅರ್ಥರೂಪದ್ದು), ಅಥವಾ ಇತರ ಉಮೇದ್ವಾರರೊಡನೆ ಮೇಲಾಟ ಹೂಡಿ ವಧುವನ್ನು ‘ಗೆದ್ದು” (ಏಲಂನಲ್ಲಿ ಗೆದ್ದಂತೆ) ತರುವುದು wedding. ಕನ್ಯಾಶುಲ್ಕ (ತೆರ)ವನ್ನೋ ಸ್ತ್ರೀಧನವನ್ನೋ (ಹೆಂಡತಿಯಾಗುವವಳಿಗೆ ಹಣ ಕೊಡುವುದು) ಕೊಟ್ಟು ಮದುವೆಯಾಗುವ ಪದ್ಧತಿಯನ್ನು ಇದು ಸೂಚಿಸುತ್ತದೆ. ನಮ್ಮ ಧರ್ಮಶಾಸ್ತ್ರಗಳು ಇದನ್ನು ಆರ್ಷ ವಿವಾಹವೆಂದು ಕರೆಯುತ್ತವೆ.

ಸತ್ತವರು ಎದ್ದು ಬಂದಾಗ

ಕೆಲವು ವರ್ಷಗಳ ಹಿಂದಿನ ಪ್ರಸಂಗವಿದು. ಅಂದು ನಾನು ‘ವಿಜಯ ಕರ್ನಾಟಕ’ ಆಫೀಸಿಗೆ ಎಂದಿನಂತೆ ಬೆಳಗ್ಗೆ ಹತ್ತು ಗಂಟೆಗೆ ಆಗಮಿಸಿದಾಗ, ಸುಮಾರು ಐದಾರು ಜನ ನನ್ನ ಭೇಟಿಗೆ ಕುಳಿತಿದ್ದುದನ್ನು ನೋಡಿದೆ. ಇಂಟರ್ ಕಾಮ್ ನಲ್ಲಿ ಸೆಕ್ಯುರಿಟಿಯವ, ‘ಸಾರ್, ಧಾರವಾಡ ಸನಿಹದ ಗ್ರಾಮದಿಂದ (ಪ್ರಾಯಶಃ ಗರಗ) ನಿಮ್ಮನ್ನು ನೋಡಲು ಆರು ಮಂದಿ ಬಂದಿದ್ದಾರೆ’ ಎಂದ. ಅವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದೆ.
ಅವರೆಲ್ಲರೂ ನನ್ನ ಮುಂದೆ ಕುಳಿತರು. ಎಲ್ಲರ ಮುಖದಲ್ಲೂ ಬಿಗುಮಾನವಿತ್ತು. ಯಾರೂ ಮಾತಾಡುತ್ತಿರಲಿಲ್ಲ. ‘ಏನು ಯಜಮಾನರೇ, ಬಂದ ವಿಷಯವೇನು?’ ಎಂದು ಕೇಳಿದೆ.
ಆಗ ಎಲ್ಲರೂ ಒಂದೇ ಸಮನೆ ಏರಿದ ದನಿಯಲ್ಲಿ ಮಾತಾಡಲಾರಂಭಿಸಿದರು. ಆಗ ನಾನು, ‘ಯಾರಾದರೂ ಒಬ್ಬರು ಮಾತ್ರ ಮಾತಾಡಿ’ ಎಂದೆ.
ಅದಕ್ಕೆ ಅವರಲ್ಲೊಬ್ಬರು, ‘ನೋಡಿ ಸಾರ್, ಇವರು ನಮ್ಮೂರ ಹಿರಿಯರು. ಇವರು ನಿಧನರಾಗಿದ್ದಾರೆ ಎಂದು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದೀರಲ್ಲ. ನೀವು ನಂಬುವುದಿಲ್ಲ ಅಂತ ಅವರನ್ನು ಕರೆದುಕೊಂಡು ಬಂದಿದ್ದೇವೆ. ಇವರಿಗೆ ಎಂಬತ್ತೇಳು ವರ್ಷ ವಯಸ್ಸು. ಇವರು ಬದುಕಿದ್ದಾರೆ ಅಂತ ಖಾತ್ರಿ ಆತೇನ್ರೀ ಸರ’ ಎಂದರು.
ನನಗೆ ಪಿಚ್ಚೆನಿಸಿತು. ಆ ಕ್ಷಣ ಏನು ಮಾತಾಡಿದರೂ ಅದಕ್ಕೆ ಅರ್ಥವಿಲ್ಲ ಎಂದೆನಿಸಿಬಿಟ್ಟಿತು. ಆದರೂ ಏನಾದರೂ ಹೇಳಲೇ ಬೇಕಲ್ಲ?
‘ನಮ್ಮಿಂದ ತಪ್ಪಾಗಿದೆ. ಕ್ಷಮಾ ಇರಲಿ’ ಎಂದೆ. ‘ಹಾಗೆ ಹೇಳುವುದು ಸುಲಭ. ಆದರೆ ನಾವು ಎರಡು ದಿನಗಳಿಂದ ಊಟ-ನಿದ್ದೆ ಮಾಡಿಲ್ಲ. ಊರಿನ ಮಂದಿ ಬಹಳ ಬೇಸರ ಮಾಡಿಕೊಂಡಿದ್ದಾರೆ. ಜೀವಂತ ಇರುವವರನ್ನು ಸಾಯಿಸಿಬಿಟ್ಟಿದ್ದೀರಲ್ಲ? ಇದು ಸರೀನಾ ಸಾಹೇಬ್ರೇ?’ ಎಂದು ಒಬ್ಬೊಬ್ಬರಾಗಿ ಹೇಳಲು ಆರಂಭಿಸಿದರು.

ನಾನು ಏನೂ ಮಾತಾಡಲಿಲ್ಲ. ಎಲ್ಲರೂ ಒಂದು ರೌಂಡ್ ಮುಗಿಸಲಿ ಎಂದು ಸುಮ್ಮನಾದೆ.

‘ಇದನ್ನು ಹೇಳಲು ನೀವು ಬೆಂಗಳೂರಿಗೆ ಯಾಕೆ ಬರಬೇಕಿತ್ತು? ನನಗೆ ಫೋನ್ ಮಾಡಿ ಹೇಳಬಹುದಿತ್ತಲ್ಲ ಅಥವಾ ನಮ್ಮ ಹುಬ್ಬಳ್ಳಿ ಆಫೀಸಿಗೆ ಹೋಗಿ ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಬಹುದಿತ್ತಲ್ಲ. ಅಷ್ಟು ದೂರದಿಂದ ಯಾಕೆ ಬಂದಿರಿ.. ಛೇ .. ನಮ್ಮಿಂದ ನಿಮಗೆ ಬಹಳ ತೊಂದರೆಯಾಯಿತು. ಕ್ಷಮೆ ಇರಲಿ’ ಎಂದು ಹೇಳಿ, ದಾರಿ-ಖರ್ಚಿಗೆಂದು ಹಣ ಕೊಡಲೆಂದು ಪರ್ಸಿಗೆ ಕೈ ಹಾಕಿದೆ.

‘ಸಾರ್, ನಮಗೆ ಅದು ಮುಖ್ಯ ಅಲ್ಲ. ನಮಗೆ ನಿಮ್ಮ ಹಣ ಬೇಡ. ನೀವು ಕೊಟ್ಟರೂ ನಾವು ತೆಗೆದುಕೊಳ್ಳುವುದಿಲ್ಲ. ಇವರು ಸತ್ತಿಲ್ಲ ಎಂದು ನಿಮ್ಮ ಪತ್ರಿಕೆಯಲ್ಲಿ ಇವರ ಫೋಟೋ ಸಮೇತ ಪ್ರಕಟ ಮಾಡಿ ಪುಣ್ಯ ಕಟ್ಟಿಕೊಳ್ಳಿ ಸಾಕು’ ಎಂದು ಹೇಳಿದರು.

ಅದಕ್ಕೆ ನಾನು ಸಮ್ಮತಿಸಿದೆ. ‘ನಾಳಿನ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ’ ಎಂದು ಹೇಳಿ ಅವರನ್ನು ಸಂತೈಸಿ, ಕಾಫಿ-ಬಿಸ್ಕತ್ ಕೊಟ್ಟು ಕಳುಹಿಸಿದೆ.

ತಕ್ಷಣ ನಮ್ಮ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡೆ. ಅವರು ರಾತ್ರಿ ಪಾಳೆಯದಲ್ಲಿದ್ದವರು ಮಾಡಿದ ಯಡವಟ್ಟಿನಿಂದ ಹೀಗಾಗಿದೆ ಎಂದು ಏನೋ ಸಮಜಾಯಿಶಿ ಕೊಟ್ಟರು.

ಆದದ್ದು ಆಯಿತು, ಈ ಬಗ್ಗೆ ಸ್ಪಷ್ಟನೆ ಹಾಕಿ, ಅದನ್ನು ಹುಬ್ಬಳ್ಳಿ ಆವೃತ್ತಿಯಲ್ಲಿ ಮಾತ್ರ ಪ್ರಕಟಿಸಿ ಮತ್ತು ನಾವು ಯಾರು ಸತ್ತಿದ್ದಾರೆ ಎಂದು ಪ್ರಕಟಿಸಿದ್ದೇವೋ, ಅವರ ಫೋಟೋ ಹಾಕಲು ಮರೆಯಬೇಡಿ’ ಎಂದು ಸೂಚಿಸಿದೆ. ಅದಕ್ಕೆ ಅವರು ಆಯಿತು ಎಂದರು. ಅಲ್ಲಿಗೆ ನಾನು ಆ ಪ್ರಸಂಗವನ್ನು ಮರೆತುಬಿಟ್ಟೆ.

ಮರುದಿನ ಅದೇ ಗ್ರಾಮಸ್ಥರ ಪೈಕಿ ಬಹಳ ಮಾತಾಡುತ್ತಿದ್ದ ಒಬ್ಬರು ಫೋನ್ ಮಾಡಿ, ‘ಏನ್ ಸಾರ್, ನಮ್ಮ ಊರಿನ ಹಿರಿಯರ ಸಾವಿನ ಸುದ್ದಿ ತಪ್ಪಾಗಿ ಪ್ರಕಟವಾಗಿದೆ ಎಂದು ಹೇಳಿ ವಿಷಾದ ಕೋರಿದ್ದೀರಿ, ಸರಿ. ಆದರೆ ಮತ್ತೊಂದು ಭಾನಗಡಿ ಮಾಡಿದ್ದೀರಲ್ಲ?’ ಎಂದರು.

ನನಗೆ ಧಸಕ್ಕೆಂದಿತು. ‘ಏನಾಯ್ತು ಸ್ವಾಮಿ?’ ಎಂದೆ.

‘ನಮ್ಮ ಊರಿನ ಹಿರಿಯರ ಫೋಟೋ ಇನ್ಯಾರದೋ ಸಾವಿನ ಸುದ್ದಿ ಜತೆ ಪ್ರಕಟವಾಗಿದೆಯಲ್ಲ?’ ಎಂದರು. ನನ್ನ ಬಾಯಿಂದ ಮಾತುಗಳೇ ಹೊರಡಲಿಲ್ಲ. ಸಾವಿರ ಚೇಳುಗಳು ಒಂದೇ ಸಮನೆ ಕುಟುಕಿದ ಅನುಭವ.

‘ಸ್ವಾಮೀ, ಕ್ಷಮಾ ಮಾಡ್ರಪ್ಪ ಮತ್ತೊಮ್ಮೆ’ ಎಂದೆ. ‘ಇಷ್ಟಕ್ಕೇ ಮತ್ತೆ ಬೆಂಗಳೂರಿಗೆ ಬರಬ್ಯಾಡ್ರಿ.. ನಾಳಿನ ಪತ್ರಿಕೆಯಲ್ಲಿ ಸರಿ ಮಾಡ್ತೇನೆ’ ಎಂದು ಹೇಳಿದೆ.

ಅದಕ್ಕೆ ಆತ, ‘ಸರ್, ಏನೂ ಮಾಡಬ್ಯಾಡ್ರಿ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡ್ರಿ. ಮತ್ತೆ ನೀವು ಬರೆಯೋದು.. ಅದರಲ್ಲಿ ಇನ್ನೇನೋ ಸಮಸ್ಯೆ ಆಗೋದು.. ಮತ್ತೆ ನಾವು ಬೆಂಗಳೂರಿಗೆ ಬರೋದು.. ಯಾವ್ಡೂ ಬ್ಯಾಡ ಅಂತ ಹೇಳೋಣ ಅಂತ ನಿಮಗೆ ಫೋನ್ ಹಚ್ಚೇನಿ’ ಎಂದ.

ನಾನು ‘ಉಸ್ಸಪ್ಪಾ’ ಎಂದು ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟೆ.

ಇತ್ತೀಚಿಗೆ ನಾನು, ಲಂಡನ್ ನ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸಂಪಾದಕರ ಸ್ಪಷ್ಟನೆಯನ್ನು ಓದುತ್ತಿದ್ದೆ. ಅವರು ಬರೆದಿದ್ದರು – Due to a typing error, we had published in yesterday edition that Eric Lyday was on drugs. The story should have read that Lyday was on drums. We regret the error.

ಇದನ್ನು ಓದುವಾಗ ಯಾಕೋ ಮೇಲಿನ ಪ್ರಸಂಗ ನೆನಪಾಯಿತು.