Thursday, 12th December 2024

Vishweshwar Bhat Column: ರಾಜಕಾರಣಿ ಎಂದು ಕರೆಯಲು ಮನಸ್ಸಾಗದ ಒಬ್ಬ ಸ್ಟೇಟ್ಸ್‌ʼಮನ್‌ ಕುರಿತು

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ನಾನು ‘ವಿಜಯ ಕರ್ನಾಟಕ’ ಸಂಪಾದಕನಾಗುವುದಕ್ಕಿಂತ ಮುನ್ನ ಎಸ್ಸೆಂ ಕೃಷ್ಣ ಅವರನ್ನು ಖುದ್ದಾಗಿ ಭೇಟಿ ಆಗಿರ ಲಿಲ್ಲ. ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷವಾಗಿತ್ತು, ನಾನು ‘ವಿಜಯ ಕರ್ನಾಟಕ’ ಸಂಪಾದಕನಾಗಿ ಮೂರು ತಿಂಗಳಾಗಿತ್ತು. ಒಮ್ಮೆ ಎಸ್ಸೆಂ ಕೃಷ್ಣ, ಸ್ನೇಹಿತ ಆರ್.ಟಿ.ನಾರಾಯಣ ಮತ್ತು ನಾನು ವೆಸ್ಟ್‌ ಎಂಡ್ ಹೋಟೆಲಿನಲ್ಲಿ ರಾತ್ರಿ ಊಟಕ್ಕೆ ಸೇರಿದ್ದೆವು. ಅದೇ ನನ್ನ ಮತ್ತು ಅವರ ಮೊದಲ ಮುಲಾಕತ್.

“ಭಟ್ರೇ! ನಿಜ ಹೇಳಲಾ? ನಿಮಗೆ 55-60 ವರ್ಷ ವಯಸ್ಸಾಗಿರಬಹುದು ಅಂತ ಅಂದುಕೊಂಡಿದ್ದೆ. ನೀವು ಇಷ್ಟು ಚಿಕ್ಕ ವಯಸ್ಸಿನವರು ಎಂಬ ಕಲ್ಪನೆಯೇ ಇರಲಿಲ್ಲ. ವಯಸ್ಸಿನಲ್ಲಿ ಹಿರಿಯರಾದವರು ಸಂಪಾದಕರಾಗುತ್ತಾರೆ ಎಂಬುದು ನನ್ನ ಗ್ರಹಿಕೆ. ಅಂದ ಹಾಗೆ ನಿಮಗೆ ಈಗ ಎಷ್ಟು ವರ್ಷ ವಯಸ್ಸು?” ಎಂದು ಕೃಷ್ಣ ಕೇಳಿದರು. “ಸರ್, ನನಗೆ 32 ವರ್ಷ. ನನ್ನ ವಯಸ್ಸಿಗಿಂತ ಹೆಚ್ಚು ವರ್ಷ ವೃತ್ತಿಯಲ್ಲಿ ಅನುಭವ ಹೊಂದಿದವರನ್ನು ನೋಡಿದ ನಿಮಗೆ, ನಾನು ಕಿರಿಯನಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ.

ನಾನು ನಿಮ್ಮ ಹಾಗೆ ಯುವಕನೇ” ಎಂದು ಹೇಳಿದಾಗ ತಮ್ಮ ಬೊಚ್ಚು ಬಾಯಿ ಅಗಲಿಸಿ, ಚಾವಣಿ ನೋಡುತ್ತಾ ಜೋರಾಗಿ ನಕ್ಕಿದ್ದರು. “ಸರ್, ನಿಹಾರಿಕಾ, ಭೂಮಿಕಾ ಅಂತ ಹೇಳಿದರೆ 25-28 ವರ್ಷದ ಯುವತಿಯರ ಚಿತ್ರ ಕಣ್ಮುಂದೆ ಬರುತ್ತದೆ. ವಿಶ್ವೇಶ್ವರ ಭಟ್ಟ ಅಂತ ಹೇಳಿದರೆ 60 ವರ್ಷ ಆಸುಪಾಸಿನ ನವವೃದ್ಧನ ಪ್ರತಿಕೃತಿ ಕಣ್ಮುಂದೆ ಬರುವುದು ಸಹಜ. ನನ್ನನ್ನು ನೋಡಿದ ಅನೇಕರಿಗೆ ನಿಮಗಾದ ಅನುಭವವೇ ಆಗಿದೆ” ಎಂದು ಹೇಳಿದಾಗ, ಮತ್ತೊಮ್ಮೆ ನಮ್ಮ ನಗು ಚಾವಣಿ ತಲುಪಿತ್ತು.

ನಮ್ಮಿಬ್ಬರ ಮಾತುಕತೆ ಆರಂಭವಾಗಿದ್ದು ಹಾಗೆ. ಅಂದು ನಾವು ಮೂವರು ಲೋಕಾಭಿರಾಮ ಮಾತಾಡುತ್ತಾ, ಊಟ ಮಾಡುತ್ತಾ ಸುಮಾರು ಮೂರು ತಾಸು ಕಳೆದಿzವು. ಅವರಿಗೆ ಮೇಲಿಂದ ಮೇಲೆ ಫೋನ್ ಬರುತ್ತಿತ್ತು. “ತೀರಾ ಎಮರ್ಜೆನ್ಸಿ ಇದ್ದರೆ ಮಾತ್ರ ಕೊಡಿ, ಇಲ್ಲದಿದ್ದರೆ ಫೋನ್ ಕೊಡಬೇಡಿ” ಎಂದು ಹೇಳಿ ಹರಟೆಯಲ್ಲಿ ತಲ್ಲೀನರಾದರು.
ಕೃಷ್ಣ ಮಹಾನ್ ಹರಟೆಕೋರರೇನಲ್ಲ, ಅವರು ಮಿತಭಾಷಿಯೇ.

ತಾವೇ ಕೈಯಾರೆ ಸೃಷ್ಟಿಸಿಕೊಂಡ ಇಮೇಜ್ ಅವರನ್ನು ಹಾಗೆ ಮಾಡಿಬಿಟ್ಟಿತ್ತು. ಆದರೆ ಹರಟೆ, ತಿಳಿಹಾಸ್ಯ,
ವಿಡಂಬನೆ, ಹಾಸ್ಯ ಪ್ರಸಂಗಗಳನ್ನು ಅವರು ಬಹಳ ಇಷ್ಟಪಡುತ್ತಾರೆ ಎಂದು ನನಗೆ ಗೊತ್ತಾಗಿದ್ದು ಆಗಲೇ. ಕೆಲವು
ರಾಜಕಾರಣಿಗಳ ಮುಂದೆ ಜೋಕು ಹೇಳಬೇಕು, ತಮಾಷೆ ಮಾಡಬೇಕೆಂದು ಅನಿಸುವುದಿಲ್ಲ (ದೇವೇಗೌಡ, ಯಡಿಯೂರಪ್ಪನವರ ಮುಂದೆ ಜೋಕ್ ಹೇಳಲು ಸಾಧ್ಯವಾ, ಸ್ವಲ್ಪ ಯೋಚಿಸಿ).

ಆದರೆ ಕೃಷ್ಣ ಅವರ ಮುಂದೆ ಹೇಳಿದರೆ, (ಬೊಚ್ಚು) ಬಾಯಿ ತುಂಬಾ ನಗುತ್ತಿದ್ದರು, ಕೆಲವೊಮ್ಮೆ ಬಿದ್ದೂ ಬಿದ್ದು ನಗುತ್ತಿದ್ದರು. ಅದು ಕೃಷ್ಣ ಅವರೊಂದಿಗಿನ ಮೊದಲ ಭೇಟಿ ಎಂದು ನನಗೆ ಅನಿಸಲೇ ಇಲ್ಲ. ಇಬ್ಬರು ಆಪ್ತ ಸ್ನೇಹಿತರು ಬಹಳ ವರ್ಷಗಳ ನಂತರ ಭೇಟಿಯಾದ ಭಾವ ನಮ್ಮಿಬ್ಬರಲ್ಲೂ ನೆಲೆಸಿತ್ತು. ಈ ಭಾವನೆಯನ್ನು ಅವರೂ
ವ್ಯಕ್ತಪಡಿಸಿದ್ದರು.

ಆದರೆ ದಿನ ಕಳೆದಂತೆ, ನಮ್ಮಿಬ್ಬರ ಮಧ್ಯೆ ವಿಶ್ವಾಸವೇನೋ ಹಾಗೇ ಇತ್ತು, ಆದರೆ ನಗು ಮಾಯವಾಗಿತ್ತು. ಇದಕ್ಕೆ ಕಾರಣ ಪತ್ರಿಕೆಯ ಧೋರಣೆ. ನಾವು ಕೃಷ್ಣ ಅವರ ಕೆಲವು ನಿರ್ಧಾರಗಳನ್ನು ನೇರಾನೇರ ಟೀಕಿಸಿದಾಗ ಸಹಜವಾಗಿ
ಅವರಿಗೆ ಬೇಸರ ತರಿಸಿತ್ತು. ‘ವಿಜಯ ಕರ್ನಾಟಕ’ದ ಯಶಸ್ಸಿಗೆ ನಾವು ಕೃಷ್ಣ ಸರಕಾರದ ಧೋರಣೆಗಳನ್ನು ಕಟುವಾಗಿ ಟೀಕಿಸುತ್ತಿದ್ದುದು ಸಹ ಕಾರಣವಾಗಿತ್ತು.

ಏಕೆಂದರೆ, ಬೇರೆ ಯಾವ ಪತ್ರಿಕೆಗಳೂ ಸರಕಾರವನ್ನು ಟೀಕಿಸುತ್ತಿರಲಿಲ್ಲ. ಆ ದಿನಗಳಲ್ಲಿ 24 ಗಂಟೆ ನ್ಯೂಸ್ ಚಾನೆಲ್ಲುಗಳ ಭರಾಟೆಯೂ ಇದ್ದಿರಲಿಲ್ಲ. ಅದರಲ್ಲೂ ಛಾಪಾ ಕಾಗದ ಹಗರಣ ಉತ್ತುಂಗಕ್ಕೇರಿದಾಗ, ಮುಖ್ಯಮಂತ್ರಿ ಕೃಷ್ಣ ಅವರಿಗೆ ನೇರವಾಗಿ ಮುಖಪುಟದಲ್ಲಿ ‘ಏನಂತೀರಿ ಕೃಷ್ಣ?’ ಶೀರ್ಷಿಕೆಯಡಿಯಲ್ಲಿ ನಿತ್ಯವೂ ಪ್ರಕಟಿಸುತ್ತಿದ್ದ ಐದು ಪ್ರಶ್ನೆಗಳು ಅವರಿಗೆ ತೀವ್ರ ಕಸಿವಿಸಿ ಮತ್ತು ಮುಜುಗರವನ್ನುಂಟು ಮಾಡಿದ್ದವು. ಸುಮಾರು ನೂರಕ್ಕೂ ಹೆಚ್ಚು ಪ್ರಶ್ನೆಗಳು ಅವರನ್ನು ನಿರುತ್ತರರನ್ನಾಗಿಸಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರತಿಪಕ್ಷಗಳು ಗಂಟುಬಿದ್ದಿ ದ್ದವು.

ಒಂದು ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಮುಖಾಮುಖಿಯಾದರೂ, ಕೃಷ್ಣ ಅವರು ಮುಖ ತಿರುಗಿಸಿ
ನಡೆದಿದ್ದು ಕಂಡು ನನ್ನ ಬಗ್ಗೆ ಅವರೊಳಗಿನ ಉರಿಯುವ ಕೋಪಕುಂಡ ಅದೆಷ್ಟು ತೀಕ್ಷ್ಣವಾಗಿದೆ ಎಂಬುದನ್ನು ನಾನು ಊಹಿಸಿದ್ದೆ. ಅಂಬೇಡ್ಕರ್ ಭವನದಲ್ಲಿ ನಡೆದ ಮಾಧ್ಯಮ ಅಕಾಡೆಮಿ ಕಾರ್ಯಕ್ರಮದಲ್ಲಿ, “ವಿಜಯ ಕರ್ನಾಟಕ ಪತ್ರಿಕೆ ನಿಮ್ಮ ಬಗ್ಗೆ ಸತತವಾಗಿ ಬರೆಯುತ್ತಿದೆಯಲ್ಲ?” ಎಂದು ಪತ್ರಕರ್ತರು ಕೇಳಿದಾಗ, “ಹೌದಾ? ನನಗೆ ಗೊತ್ತಿಲ್ಲ ವಲ್ಲ… ಆ ಹೆಸರಿನ ಪತ್ರಿಕೆ ಇದೆಯಾ?” ಎಂದು ಥೇಟು ತಮ್ಮದೇ ಧಾಟಿಯಲ್ಲಿ, ಎದುರಾಳಿಯನ್ನು ತಿವಿಯುವಂತೆ ಪ್ರತಿಕ್ರಿಯಿಸಿದ್ದರು.

ಇದರಿಂದ ನಮ್ಮ ‘ಬೌನ್ಸರ್’ ಇನ್ನೂ ಹೆಚ್ಚಾಯಿತು. ‘ವಿಜಯ ಕರ್ನಾಟಕ’ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ ಎಂದು ಅವರಿಗೆ ಅನಿಸಿತ್ತು. ಅದನ್ನು ಅವರು ನಮಗಿಬ್ಬರಿಗೂ ಆತ್ಮೀಯರಾದ ಆರ್.ಟಿ.ನಾರಾಯಣರ ಮುಂದೆ ವ್ಯಕ್ತಪಡಿಸಿ ದ್ದರು. ‘ಆರ್‌ಟಿಎನ್’ ಕಾಫಿಗೆ-ತಿಂಡಿಗೆ ಕರೆಯುತ್ತಿದ್ದರು. ಆದರೆ ಈ ವಿಷಯವನ್ನು ಪ್ರಸ್ತಾಪಿಸುತ್ತಿರಲಿಲ್ಲ. ಕೃಷ್ಣ ಸಂಪುಟದ ಎಲ್ಲ ಮಂತ್ರಿಗಳ ವಿರುದ್ಧ ನಾವು ‘ದಂಡ-ಪಿಂಡಗಳು’ ಸರಣಿಯನ್ನು ಆರಂಭಿಸಿದಾಗಲೂ ಅವರು ವ್ಯಗ್ರರಾಗಿದ್ದರು. ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾವಿಬ್ಬರೂ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತರೂ, ಆರಂಭದ ಹಸ್ತಲಾಘವ ಬಿಟ್ಟರೆ ಮಾತಿಲ್ಲ, ಕತೆಯಿಲ್ಲ. ಮುಖ್ಯಮಂತ್ರಿ ಪಕ್ಕದಲ್ಲಿ ಕುಳಿತಿದ್ದರೆ ಸುಮ್ಮನಿರುವ ಜಾಯಮಾನ ನನ್ನದಲ್ಲ. ಆದರೆ ಅಂದು ಕೃಷ್ಣ ಅವರ ಕುದಿಮೌನ ನನ್ನನ್ನು ಸುಮ್ಮನಿರಿಸಿತ್ತು.

ಈ ಮಧ್ಯೆ ಕೃಷ್ಣ ಅವರು ಆಯ್ದ ಕೆಲವು ಸಂಪಾದಕರಿಗೆ ಮತ್ತು ಮುಖ್ಯ ವರದಿಗಾರರಿಗೆ ಬಿಡಿಎ ನಿವೇಶನ ನೀಡಲು
ಮುಂದಾದರು. ಕೃಷ್ಣ ಆಪ್ತರೊಬ್ಬರು ನನ್ನನ್ನು ಭೇಟಿ ಮಾಡಿ, “ಸಾಹೇಬ್ರು ಕಳಿಸಿದ್ದಾರೆ, ನೀವು ಈ ಫಾರ್ಮಿಗೆ ಒಂದು ಸಹಿ ಹಾಕಿ ಕೊಡಿ. ನಿಮಗೊಂದು ನಿವೇಶನ ಮಂಜೂರು ಮಾಡಲು ಹೇಳಿದ್ದಾರೆ” ಎಂದು ಹೇಳಿದರು. ನಾನು ಅದನ್ನು ನಯವಾಗಿ ತಿರಸ್ಕರಿಸಿದೆ. ‘ವಿಜಯ ಕರ್ನಾಟಕ’ದ ಅಂದಿನ ಮುಖ್ಯ ವರದಿಗಾರರಿಗೂ ನಿವೇಶನ ಕೊಡುವ ಭರವಸೆ ನೀಡಲಾಗಿತ್ತು. ನಾನು ಅವರಿಗೆ, “ಒಂದೋ ನೀವು ನಿಮ್ಮ ನೌಕರಿಯನ್ನು ಇಟ್ಟುಕೊಳ್ಳಬಹುದು, ಇಲ್ಲವೇ ಸೈಟನ್ನು ಇಟ್ಟುಕೊಳ್ಳಬಹುದು” ಎಂದೆ. ಅವರು ಸೈಟನ್ನು ಇಟ್ಟುಕೊಂಡರು. ಆ ಕಾರಣಕ್ಕೆ ಅವರು ಕೆಲಸ ಕಳೆದುಕೊಂಡರು.

ಅದೇ ಬೇರೆ ಕತೆ, ಇರಲಿ. 2004ರ ಚುನಾವಣೆಯಲ್ಲಿ ಎಸ್ಸೆಂ ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ದಯನೀಯ ಸೋಲು ಅನುಭವಿಸಿತು. ಹತಾಶ ರಾಗಿ ಅವರು ದೇವೇಗೌಡರ ಬೆಂಬಲವನ್ನು ಯಾಚಿಸಿದ್ದರು. ಆ ಸೋಲಿನ ಕಹಿನೋವು ಕೆಲ ತಿಂಗಳು ಅವರನ್ನು ತೀವ್ರ ಘಾಸಿಗೊಳಿಸಿತ್ತು. ನಂತರ ಏಕಾಏಕಿ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಗೊಂಡರು. ಒಂದು ದಿನ ನನ್ನ ಜನ್ಮದಿನದಂದು ಬೆಳಗ್ಗೆ ಅನಿರೀಕ್ಷಿತವಾಗಿ ಮಹಾರಾಷ್ಟ್ರದ ರಾಜಭವನದಿಂದ ಫೋನ್ ಬಂದಿತು.

ಅತ್ತ ಕಡೆಯಿಂದ ರಾಜ್ಯಪಾಲ ಕೃಷ್ಣ ಮಾತಾಡುತ್ತಿದ್ದರು. ಜನ್ಮದಿನದಂದು ಶುಭ ಹಾರೈಸಿ, ಉಭಯಕುಶಲೋಪರಿ ವಿಚಾರಿಸಿದರು. ಕೊನೆಯಲ್ಲಿ, “ನೀವು ನನ್ನ ಅತಿಥಿಯಾಗಿ ಇಲ್ಲಿಗೆ ಬರಬೇಕು” ಎಂದು ಹೇಳಿದರು. ನಾನು ಅವರಿಂದ ಆ ಕರೆ ಮತ್ತು ಆಹ್ವಾನವನ್ನು ನಿರೀಕ್ಷಿಸಿರಲಿಲ್ಲ. ನನಗೆ ಸಂತೋಷವಾಯಿತು. ನಮ್ಮಿಬ್ಬರ ನಡುವಿನ ತಪ್ಪಿದ ಹಳಿ ಸರಿಯಾಗಿ, ಪುನಃ ಸುಗಮ ಸಂಚಾರಕ್ಕೆ ತೆರೆದುಕೊಂಡಿತು ಎಂದು ಭಾವಿಸಿದೆ. ಅದಾಗಿ ಆರು ತಿಂಗಳ ಬಳಿಕ, ಮಂತ್ರಾ ಲಯದ ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿಯವರು ನನ್ನನ್ನು ಸಂಪರ್ಕಿಸಿ, “ನಾವು ರಾಜಭವನಕ್ಕೆ ಹೋದಾಗ, ಅದೂ ಇದೂ ಮಾತಾಡುವಾಗ ಕೃಷ್ಣ ಅವರು ನಿಮ್ಮನ್ನು ನೆನಪಿಸಿಕೊಂಡರು” ಎಂದು ಹೇಳಿದರು.

ನಾನು ಅದೇ ದಿನ ಅವರನ್ನು ಸಂಪರ್ಕಿಸಿದೆ. ಕೃಷ್ಣ ಫೋನಿನಲ್ಲಿ, “ಕರ್ನಾಟಕದಲ್ಲಿ ಏನು ನಡೀತಾ ಇದೆ?” ಎಂದು ಕೇಳಿದರು. ನಾನು ಮಾತಾಡಲು ಶುರುವಿಡುತ್ತಿದ್ದಂತೆ, “ಇವೆಲ್ಲ -ನಿನಲ್ಲಿ ಬೇಡ, ಇಲ್ಲಿಗೆ ಬನ್ನಿ. ಎರಡು ದಿನ ನನ್ನ
ಅತಿಥಿಯಾಗಿ ರಾಜಭವನದಲ್ಲಿ ಇರಿ. ಇಲ್ಲಿ ಎಲ್ಲ ಮಾತಾಡೋಣ, ಬನ್ನಿ” ಎಂದು ಹೇಳಿದರು. ಅದಾಗಿ ಒಂದು ವಾರ
ದಲ್ಲಿ ನಾನು ಅವರ ಗೆ ಆಗಿ ರಾಜಭವನದಲ್ಲಿದ್ದೆ. ಆ ಎರಡು ದಿನ ನಾವು ರಾಜಭವನದ ಚಾವಣಿಯನ್ನು ನೋಡಿ,
ಎಷ್ಟು ಸಲ ನಕ್ಕಿzವೋ ನಮಗೇ ಗೊತ್ತು.

ಪತ್ರಿಕೆಯಲ್ಲಿ ನಾವು ಅವರ ವಿರುದ್ಧ ಬರೆದ ಯಾವ ಸಾಲುಗಳನ್ನೂ ಕೃಷ್ಣ ಮನಸ್ಸಿನಲ್ಲಿ ಇಟ್ಟುಕೊಂಡಿರಲಿಲ್ಲ. ನನ್ನ ಮನಸ್ಸಿನಲ್ಲಿ ಅವರಿಗೆ ವಿಶೇಷ ಸ್ಥಾನವನ್ನು ನಾನು ಕೊಟ್ಟಿದ್ದು ಆಗಲೇ. “ನೀವು ಪತ್ರಿಕೆಯನ್ನು ಬಹಳ ಚೆಂದವಾಗಿ ರೂಪಿಸಿದಿರಿ. ನಾನು ಕುತೂಹಲದಿಂದ ನಿಮ್ಮ ಪತ್ರಿಕೆಯನ್ನು ಎದುರು ನೋಡುತ್ತಿದ್ದೆ. ನೀವು, ತ್ಯಾಗರಾಜ ಮತ್ತು ಪ್ರತಾಪ ಸಿಂಹ ಬರೆಯುತ್ತಿದ್ದುದನ್ನು ಓದುತ್ತಿದ್ದೆ” ಎಂದು ಅವರು ಆಗ ಹೇಳಿದ್ದರು.

ಆ ಎರಡು ದಿನ ಅವರೊಂದಿಗೆ ಕಳೆದ ಕ್ಷಣಗಳನ್ನು ನಾನು ಮರೆಯುವಂತಿಲ್ಲ. ಅನಂತರ ನಾವಿಬ್ಬರೂ ಹಲವು ಸಂದರ್ಭಗಳಲ್ಲಿ ಆ ಭೇಟಿಯನ್ನು ನೆನಪಿಸಿಕೊಂಡಿದ್ದುಂಟು. 4 ವರ್ಷಗಳ ಕಾಲ ರಾಜಭವನದಲ್ಲಿದ್ದಾಗ ಅವರು
ತಿಂಗಳಿಗೆ ಒಂದೆರಡು ಬಾರಿ ತಪ್ಪದೇ ಫೋನ್ ಮಾಡುತ್ತಿದ್ದರು.

“ಭಟ್ರೇ, ಕರ್ನಾಟಕದಲ್ಲಿ ಏನು ನಡೀತಾ ಇದೆ” ಎಂದು ಮಾತಿಗೆ ಅಡಿಯಿಡುತ್ತಿದ್ದರು. ಮುಂದಿನ ಅರ್ಧ ಗಂಟೆ
ಸರಿದಿದ್ದು ನಮಗೆ ಗೊತ್ತಾಗುತ್ತಿರಲಿಲ್ಲ. 2009ರಲ್ಲಿ ಒಂದು ದಿನ ಡಾ.ಮನಮೋಹನ್ ಸಿಂಗ್ ಸಂಪುಟದಲ್ಲಿ ಕೃಷ್ಣ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾದಾಗ ಎಲ್ಲರಿಗೂ ಅಚ್ಚರಿ. ಸ್ವತಃ ಕೃಷ್ಣ ಅವರೂ ಒಂದು ದಿನ ತಾವು ಈ ದೇಶದ ವಿದೇಶಾಂಗ ಸಚಿವರಾಗಬಹುದು ಎಂದು ಅಂದುಕೊಂಡಿರಲಿಲ್ಲವೇನೋ. ಪ್ರಧಾನಿಯವರು ಇಷ್ಟಪಟ್ಟು ತಮ್ಮ ಬಳಿಯೇ ಇಟ್ಟುಕೊಳ್ಳುವ ಖಾತೆ ಅದು.

ಬೇರೆಲ್ಲ ಖಾತೆಗಳನ್ನು ಯಾರು ಬೇಕಾದರೂ ನಿರ್ವಹಿಸಬಹುದು, ಆದರೆ ವಿದೇಶಾಂಗ ಖಾತೆ ಹಾಗಲ್ಲ. ಅದಕ್ಕೆ ವಿಶೇಷ ವರ್ಚಸ್ಸು, ವ್ಯಕ್ತಿತ್ವ, ಘನತೆ ಉಳ್ಳವರು ಬೇಕು. ನಿಸ್ಸಂದೇಹವಾಗಿ ಆ ಹುದ್ದೆಗೆ ಕೃಷ್ಣ ಅರ್ಹರಾಗಿದ್ದರು. ಅವರ ವ್ಯಕ್ತಿತ್ವ, ಸ್ವಭಾವ, ಗುಣ, ಅಭಿರುಚಿಗೆ ಅದು ಹೇಳಿ ಮಾಡಿಸಿದ ಖಾತೆಯಾಗಿತ್ತು.

ಅವರ ಮಾತಿನ ವೈಖರಿ, ಭಾಷೆ, ಪದಗಳ ಆಯ್ಕೆ, ವೇಷ-ಭೂಷಣ, ಹಾವ-ಭಾವಗಳೆಲ್ಲ ರಾಜತಾಂತ್ರಿಕ ವ್ಯವಹಾರಗಳ
ನಿರ್ವಹಣೆಗೆ ರೆಡಿಮೇಡ್ ಖಡಕ್ ಬಟ್ಟೆಯಂತಿತ್ತು. ನನಗೆ ಅವರೊಂದಿಗೆ ಪಾಕಿಸ್ತಾನ, ಇಸ್ರೇಲ್ ಮತ್ತು ಚೀನಾಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. 10-12 ಜನ ಕುಳಿತುಕೊಳ್ಳುವ ಪುಟ್ಟ ವಿಶೇಷ ವಿಮಾನ. ಏಳೆಂಟು ಗಂಟೆ ವಿಮಾನ ಪ್ರಯಾಣ. ನಾನೊಬ್ಬನೇ ಕನ್ನಡ ಪತ್ರಕರ್ತ. ಆ ಅವಧಿಯಲ್ಲಿ ಕೃಷ್ಣ ಅವರ ಜತೆ ಮುಕ್ತವಾಗಿ ಹರಟೆ ಹೊಡೆಯುವ, ಅವರ ಅನುಭವಗಳಿಗೆ ಕಿವಿಯಾಗುವ, ನೂರಾರು ಪ್ರಸಂಗಗಳನ್ನು ಕೇಳುವ ಅವಕಾಶ ಸಿಕ್ಕಿತ್ತು.

ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ದೂರದಿಂದ ನೋಡುವುದಕ್ಕೂ, ಅವರ ಮಾತುಗಳನ್ನು ಹಾಗೆ ಕೇಳುವು ದಕ್ಕೂ, ಖಾಸಗಿಯಾಗಿ ಭೇಟಿಯಾಗುವುದಕ್ಕೂ, ಜತೆಯಲ್ಲಿಯೇ ಪ್ರವಾಸ ಮಾಡುವುದಕ್ಕೂ, ಒಟ್ಟಿಗೆ ಕಾಲ ಕಳೆಯುವು ದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ವಿದೇಶ ಪ್ರವಾಸದ ಅವಧಿಯಲ್ಲಿ ನನಗೆ ಸಿಕ್ಕಿದ, ನಾನು ನೋಡಿದ ಕೃಷ್ಣ ಅವರೇ ಬೇರೆ. ಈ ಕೃಷ್ಣ, ಆ ಕೃಷ್ಣ ಅಲ್ಲ. ಆ ಕೃಷ್ಣ, ಈ ಕೃಷ್ಣ ಅಲ್ಲ.

ಇಸ್ರೇಲಿನ ರಕ್ಷಣಾ ಸಚಿವ ಮತ್ತು ಪ್ರಧಾನಿಯಾಗಿದ್ದ ಸಿಮೋನ್ ಪೆರೇಸ್ ಅಂದು ಆ ದೇಶದ ಅಧ್ಯಕ್ಷರಾಗಿದ್ದರು.
ಅತಿಯಾದ ಭದ್ರತೆಯಿರುವ ಅವರ ನಿವಾಸದಲ್ಲಿ ಕೃಷ್ಣ ಅವರ ಭೇಟಿ ಮತ್ತು ಅವರ ಗೌರವಾರ್ಥ ಭೋಜನಕೂಟ ಏರ್ಪಾಡಾಗಿತ್ತು. ಪೆರೇಸ್ ಅವರು ಕೃಷ್ಣ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಮೊದಲ ಹದಿನೈದು ನಿಮಿಷ, ಉಭಯ ದೇಶಗಳ ಸಂಬಂಧದ ಬಗ್ಗೆ ಸಾದ್ಯಂತವಾಗಿ ವಿವರಿಸಿದರು.

ಕೃಷ್ಣ ವ್ಯಕ್ತಿತ್ವವನ್ನೂ ಪ್ರಶಂಸಿಸಿದರು. ಅದು ಮುಕ್ತ ಮಾತುಕತೆಯಾಗಿತ್ತು. ಅವರ ಮಾತಿನ ನಂತರ ಪೆರೇಸ್
ಪಕ್ಕದಲ್ಲಿಯೇ ಕುಳಿತ ಕೃಷ್ಣ ಏನು ಹೇಳಬಹುದು ಎಂಬ ಬಗ್ಗೆ ನನಗೆ ಅತೀವ ಕುತೂಹಲವಿತ್ತು. ನಾನು ಆ ಕ್ಷಣ ಗಳಿಗಾಗಿಯೇ ಎದುರು ನೋಡುತ್ತಿದ್ದೆ.

ನಂತರ ಕೃಷ್ಣ ಸರದಿ. ಪೆರೇಸ್ ಕೂಡ ಕೃಷ್ಣ ಅವರ ಮಾತುಗಳಿಗೆ ಕಾದು ಕುಳಿತಿದ್ದರು. ಕೃಷ್ಣ ಅವರು ಯಾವುದೇ
ಟಿಪ್ಪಣಿ ನೋಡದೇ, ಪೆರೇಸ್ ಅವರ ಮೇರುಸದೃಶ ವ್ಯಕ್ತಿತ್ವ, ಇಸ್ರೇಲಿನ ಮಹಿಮೆ, ಯಹೂದಿಯರ ತ್ಯಾಗ-ಬಲಿದಾನ,
ಮಣ್ಣಿನ ಗುಣ, ಉಭಯ ದೇಶಗಳ ಐತಿಹಾಸಿಕ ರಾಜತಾಂತ್ರಿಕ ಸಂಬಂಧ-ಸಂಪ್ರದಾಯ, ಮಧ್ಯಪ್ರಾಚ್ಯದಲ್ಲಿ ಇಸ್ರೇಲಿನ ಸ್ಥಾನಮಾನ, ಜಗತ್ತಿಗೆ ಆ ದೇಶದ ಕೊಡುಗೆ, ತಮ್ಮ ಭೇಟಿಯ ಉದ್ದೇಶ-ಆಶಯಗಳ ಕುರಿತು ನಿರರ್ಗಳವಾಗಿ
ಸುಮಾರು ೨೫ ನಿಮಿಷ ಮಾತಾಡಿದರು. ಬಾಯಿಪಾಠ ಮಾಡಿದ್ದರೂ, ವಾರ್ತಾವಾಚಕರಂತೆ ಓದಿದ್ದರೂ, ಅಷ್ಟು ಒಪ್ಪವಾಗಿ ಒಪ್ಪಿಸಲು ಸಾಧ್ಯವಿರಲಿಲ್ಲ.

ಅಂದು ಕೃಷ್ಣ ಎಲ್ಲರನ್ನೂ ಗೆದ್ದಿದ್ದರು. ಇಡೀ ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಅಲ್ಲಿದ್ದರು. ನಾನು ಕೃಷ್ಣ ಅವರ presentation ಗೆ ಮಾರುಹೋಗಿದ್ದೆ. ನನಗೆ ಕೃಷ್ಣ ಅವರ ಮತ್ತೊಂದು ಅವತಾರ-ದರ್ಶನ ಸಿಕ್ಕಿತ್ತು. ಕೃಷ್ಣ ಮಾತು ಮುಗಿಸಿದಾಗ, ಸ್ವತಃ ಪೆರೇಸ್ ಅವರು ಎದ್ದು ಹೋಗಿ ಭಾರತದ ವಿದೇಶಾಂಗ ಸಚಿವರನ್ನು ಆಲಂಗಿಸಿ ತಮ್ಮ ಹರ್ಷವನ್ನು ಪ್ರದರ್ಶಿಸಿದರು. ಆ ದಿನ ರಾತ್ರಿ ಕೃಷ್ಣ ತಾವು ಉಳಿದುಕೊಂಡಿದ್ದ ಜೆರುಸಲೇಮ್‌ ನಲ್ಲಿರುವ ಐತಿಹಾಸಿಕ ‘ಕಿಂಗ್ ಡೇವಿಡ್ ಹೋಟೆಲ’ನ ಸ್ವೀಟ್ ರೂಮಿಗೆ ರಾತ್ರಿ ಊಟಕ್ಕೆ ಕರೆದಿದ್ದರು. ಆಗ ಅವರು ಎರಡು ದೇಶಗಳ ಸಂಬಂಧ, ರಾಜತಾಂತ್ರಿಕ ವ್ಯವಹಾರಗಳ ಮಹತ್ವ, ರಾಜತಾಂತ್ರಿಕತೆಯ ಸವಾಲು, ಒಳಸುಳಿ,
ಮಜಲು ಗಳ ಬಗ್ಗೆ ತುಂಬಾ ಆಳವಾಗಿ ವಿವರಿಸಿದ್ದು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ.

ಅದು, ಕರ್ನಾಟಕದಲ್ಲಿ ನಾವು ನೋಡಿದ ಕೃಷ್ಣ ಇವರೇನಾ ಎಂದು ಬಾಯಿ ತೆರೆದು ಯೋಚಿಸುವಂತೆ ಮಾಡಿತ್ತು. ಇದೊಂದೇ ಅಲ್ಲ, ಚೀನಾ ಮತ್ತು ಪಾಕಿಸ್ತಾನಕ್ಕೆ ಹೋದಾಗಲೂ ಅಲ್ಲಿನ ಪಿಚ್‌ನಲ್ಲಿ ಕೃಷ್ಣ ಸೆಂಚುರಿ ಬಾರಿಸಿದ್ದರು. ಕನ್ನಡ ಮಣ್ಣಿನ ನಾಯಕನೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದು ಸಾಮಾನ್ಯ ಸಂಗತಿಯಲ್ಲ. ಒಮ್ಮೆ ಕೃಷ್ಣ ಅವರು ಒಮಾನ್ ದೇಶದ ಪ್ರವಾಸದಲ್ಲಿದ್ದರು. ಅಲ್ಲಿಂದಲೂ ನನ್ನ ಜನ್ಮದಿನದಂದು ಶುಭಾಶಯ ಹೇಳಲು ಫೋನ್ ಮಾಡಿದ್ದರು.

ಅವರು ವಿದೇಶಾಂಗ ಸಚಿವ ಹುದ್ದೆಯಿಂದ ನಿರ್ಗಮಿಸಿದ ಬಳಿಕವೂ, ಬೆಂಗಳೂರಿಗೆ ವಾಪಸಾದಾಗಲೂ ನಮ್ಮ ಭೇಟಿ, ಫೋನ್ ಮಾತುಕತೆ ಮುಂದುವರಿದಿತ್ತು. ಅವರು ಅರ್ಧ ಶತಮಾನದ ಕಾಂಗ್ರೆಸ್ ಸಂಬಂಧವನ್ನು ಕಡಿದುಕೊಂಡು, ಬಿಜೆಪಿಯನ್ನು ಯಾಕೆ ಸೇರಿದರೋ, ಇಂದಿಗೂ ನಿಗೂಢ ರಹಸ್ಯವೇ. ಒಂದು ದಿನ ಸದಾಶಿವನಗರದ ಅವರ ನಿವಾಸ ದಲ್ಲಿ ಈ ಬಗ್ಗೆ ಕೇಳಿದಾಗ, ಕೇಳಿದರೂ ಕೇಳಿಸಿಕೊಳ್ಳದವರಂತೆ ನಟಿಸಿದರು. “ಅದೊಂದು ದೊಡ್ಡ ಕತೆ” ಎಂದು ತೇಲಿಸಿದರು. “ಸಣ್ಣ ಕತೆಯಾಗಿ ಹೇಳಿ” ಎಂದು ಕೇಳಿದಾಗ, “ಗೊತ್ತಿರುವ ಕತೆ ಕೇಳುವುದು ನೀರಸ” ಎಂದು ಸಾಗ ಹಾಕಿದರು.

ನನಗೆ ಕೃಷ್ಣ ಅವರ ಮೌನದ ಪ್ರಭೆ ಗೊತ್ತಾಗಿದ್ದು ಅವರ ಅಳಿಯ ಮತ್ತು ಸ್ನೇಹಿತರಾದ ಸಿದ್ದಾರ್ಥ ನಿಧನರಾದಾಗ. ಅದಾಗಿ ಸುಮಾರು ಒಂದು ತಿಂಗಳ ಬಳಿಕ, ಅವರನ್ನು ನೋಡಲು ಹೋದಾಗ, ಅರ್ಧ ಗಂಟೆ ಏನೂ ಮಾತಾಡದೇ ಹಾಗೇ ಎದ್ದು ಬಂದಿದ್ದೆ. ಈ ವರ್ಷದ ಜುಲೈನಲ್ಲಿ ನನಗೆ ಲಘು ಹೃದಯಾಘಾತವಾದ ಸುದ್ದಿ ತಿಳಿದು ಕೃಷ್ಣ ಫೋನ್ ಮಾಡಿದ್ದರು.

“ಸದ್ಯದಲ್ಲಿಯೇ ನಿಮ್ಮ ಮನೆಗೆ ಬರುತ್ತೇನೆ” ಎಂದು ಹೇಳಿದ್ದರು. ಅನಂತರ ಅವರೂ ಅನಾರೋಗ್ಯಕ್ಕೊಳಗಾದರು. ನನಗೂ ಅವರನ್ನು ನೋಡಲು ಆಗಲಿಲ್ಲ. ಇಂದಿನ ರಾಜಕಾರಣ, ವ್ಯವಸ್ಥೆಯನ್ನು ನೋಡಿದಾಗ ಕೃಷ್ಣ ಅವರ ಉನ್ನತ ವ್ಯಕ್ತಿತ್ವದ ಮಹತ್ವ ಅರಿವಾಗುತ್ತದೆ. ಸಾರ್ವಜನಿಕ ಜೀವನಕ್ಕೆ ಮರ್ಯಾದೆ, ಸಜ್ಜನಿಕೆ, ಘನತೆಯನ್ನು ತಂದು ಕೊಟ್ಟ ಕೃಷ್ಣ ಎಂದೂ ಸೇಡಿನ ರಾಜಕಾರಣ ಮಾಡಲಿಲ್ಲ. ಕೆಟ್ಟ ಭಾಷೆ ಬಳಸಲಿಲ್ಲ. ಯಾವ ಸಂದರ್ಭ ದಲ್ಲೂ ಒಂದು ಮಟ್ಟಕ್ಕಿಂತ ಕೆಳಗಿಳಿದು ರಾಜಕಾರಣ ಮಾಡಲಿಲ್ಲ.

ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ಎಲ್ಲೂ ಕಪ್ಪುಚುಕ್ಕೆ ಅಂಟಿಸಿಕೊಳ್ಳಲಿಲ್ಲ. ಅವರನ್ನು ರಾಜಕಾರಣಿ ಎಂದು ಕರೆಯಲು ಮನಸ್ಸು ಬಾರದಷ್ಟು ಎತ್ತರಕ್ಕೆ ತಮ್ಮನ್ನು ಏರಿಸಿಕೊಂಡು ಅಪ್ಪಟ Statesman (ರಾಜನೀತಿಜ್ಞ, ಮುತ್ಸದ್ದಿ) ಥರ ನಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡುಬಿಟ್ಟರು.

I miss him. Always!

ಇದನ್ನೂ ಓದಿ: @vishweshwarbhat