ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಅಮೆರಿಕದ ಅಧ್ಯಕ್ಷರಾದವರಿಗೆ ಅಡ್ಡಹೆಸರು (nickname) ಸಾಮಾನ್ಯ. ಕೆಲವು ಅಡ್ಡ ಹೆಸರುಗಳನ್ನು ಅವರ ಸ್ನೇಹಿತರು, ಆಪ್ತರು ಇಟ್ಟರೆ, ಇನ್ನು
ಕೆಲವನ್ನು ಪತ್ರಿಕೆಗಳ ಶೀರ್ಷಿಕೆ ಬರಹಗಾರರು ಇಟ್ಟಿದ್ದು. ಹೆಸರು ಉದ್ದವಾಗಿ, ಅದು ಶೀರ್ಷಿಕೆಯಲ್ಲಿ ಕುಳಿತುಕೊಳ್ಳದ್ದರಿಂದ ಮತ್ತು ಚುಟುಕಾಗಿ ಬರೆಯುವುದು ಅನಿವಾರ್ಯವಾಗಿದ್ದರಿಂದ ಈ ಅಡ್ಡ ಹೆಸರುಗಳು ಚಾಲ್ತಿಗೆ ಬಂದಿರಬಹುದು. ಜೇಮ್ಸ್ ಅರ್ಲ್ ಕಾರ್ಟರ್ ಅಂದರೆ ತಕ್ಷಣ ಎಲ್ಲರಿಗೂ ಗೊತ್ತಾಗಲಿಕ್ಕಿಲ್ಲ.
ಅದೇ ‘ಜಿಮ್ಮಿ ಕಾರ್ಟರ್’ ಅಂದ್ರೆ ಎಲ್ಲರಿಗೂ ಗೊತ್ತು. ಜೇಮ್ಸ್ ಕಾರ್ಟರ್ ಅಮೆರಿಕದ ಅಧ್ಯಕ್ಷರಾದ ಬಳಿಕ ಜಿಮ್ಮಿ ಆದರು. ಪ್ರಾಯಶಃ ಅವರೇ ಮೊದಲಿರಬೇಕು, ತಮ್ಮ ಅಡ್ಡಹೆಸರನ್ನು ಅಧಿಕೃತ ಹೆಸರನ್ನಾಗಿ ಇಟ್ಟುಕೊಂಡವರು. ಅವರನ್ನು ಜೇಮ್ಸ್ ಕಾರ್ಟರ್ ಎಂದು ಕರೆದವರು ಯಾರೂ ಇರಲಿಕ್ಕಿಲ್ಲ. ಮೂಲತಃ ಕಾರ್ಟರ್ ಶೇಂಗಾ ಬೆಳೆಗಾರ. ಹೀಗಾಗಿ ಇವರನ್ನು ‘ಪೀನಟ್ ಫಾರ್ಮರ್’ ಎಂದೂ ಕರೆಯುತ್ತಿದ್ದರು. ಒಮ್ಮೆ ‘ನ್ಯೂಯಾರ್ಕ್ ಟೈಮ್ಸ್’ ಕಾರ್ಟರ್ ಅವರನ್ನು ಶೀರ್ಷಿಕೆಯಲ್ಲಿ ‘ದಿ ಪೀನಟ್ ಫಾರ್ಮರ್’ ಎಂದು ಕರೆದಿತ್ತು. ಕೊನೆಗೆ ಅದೇ ಅಡ್ಡಹೆಸರು ಆಗಾಗ ಪ್ರಸ್ತಾಪವಾಗು ತ್ತಿತ್ತು.
ಅಮೆರಿಕದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಹೆಸರನ್ನು ಕೇಳಿರಬಹುದು. ವಿಲ್ಸನ್ ವೈಶಿಷ್ಟ್ಯವೆಂದರೆ, ಅವರಿಗೆ ಸ್ಪೀಚ್ ರೈಟರ್ಸ್ (ಭಾಷಣ ಬರೆದುಕೊಡುವವರು) ಇರಲಿಲ್ಲ. ಆಶು ಭಾಷಣ ಮಾಡುವುದರಲ್ಲಿ ಅವರು ನಿಷ್ಣಾತರಾಗಿದ್ದರು. ಅಲ್ಲದೇ, ಮಾತಿಗೆ ನಿಂತರೆ, ಬೇಗನೆ ಮುಗಿಸು ತ್ತಿರಲಿಲ್ಲ. ವಿಲ್ಸನ್ ಸಿದ್ಧಪಡಿಸಿದ ಭಾಷಣ ಓದಿದರೇ ಒಳ್ಳೆಯದಿತ್ತು, ಕಾರಣ ಅದು ಎಲ್ಲಾ ಮುಗಿಯುತ್ತದೆ ಎಂಬ ಭರವಸೆಯಾದರೂ ಇರುತ್ತಿತ್ತು. ಆದರೆ ಈಗ ಹಾಗಲ್ಲ, ಅದು ಯಾವಾಗ ಮುಗಿಯುವುದೋ ಎಂದು ಜನ ಲಘುವಾಗಿ ಮಾತಾಡಿಕೊಳ್ಳುತ್ತಿದ್ದರು. ಅವರು ತಮ್ಮ ಭಾಷಣದಲ್ಲಿ ಆಕರ್ಷಕ ನುಡಿಗಟ್ಟುಗಳನ್ನು ಬಳಸುತ್ತಿದ್ದರು. ಹೀಗಾಗಿ ಅವರನ್ನು The Phrasemaker ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದರು.
ವಿಲ್ಸನ್ ಅವರಿಗೆ ಕೊರೆಯುವ ಚಟವಿತ್ತು. ಯಾರಾದರೂ ಅವರನ್ನು ಭೇಟಿಮಾಡಲು ಹೋದರೆ, ನಿಗದಿತ ಸಮಯಕ್ಕೆ ಮುಗಿಯುತ್ತಿರಲಿಲ್ಲ. ಬೇಗನೆ ಅವರ ಮಾತು ಮುಗಿಯುತ್ತಿರಲಿಲ್ಲ. ಹೀಗಾಗಿ ಅವರನ್ನು ‘ದಿ ಸ್ಕೂಲ್ ಮಾಸ್ಟರ್’ ಎಂದೂ ಕರೆಯುತ್ತಿದ್ದರು. ಕೆನಡಿ ಹತ್ಯೆಯ ನಂತರ ಅಧ್ಯಕ್ಷನಾದ ಲಿಂಡನ್ ಬೈನ್ಸ್ ಜಾನ್ಸನ್ ಆತ್ಮರತಿಯಲ್ಲಿ ಎತ್ತಿದ ಕೈ. ತನ್ನ ಬಗ್ಗೆ ಬೇರೆಯವರು ಹೊಗಳದಿದ್ದರೆ ಆ ಕೆಲಸವನ್ನು ತಾನೇ ಮಾಡುತ್ತಿದ್ದ. ಹೀಗಾಗಿ ಅವನಿಗೆ ಲಿಂಡನ್ ಬಿ.ಜಾನ್ಸನ್ ಎಂದು ಕರೆಯುವ ಬದಲು ‘ಲಿಂಡನ್ ಬುಲ್ಶಿಟ್ ಜಾನ್ಸನ್’ ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದರು.
ಜಾನ್ಸನ್ಗೆ ವೈಟ್ಹೌಸ್ ಸುತ್ತಮುತ್ತ ಲೈಟ್ ಗಳನ್ನೂ ಉರಿಸುವುದು ಆಗುತ್ತಿರಲಿಲ್ಲ. ಅನವಶ್ಯಕವಾಗಿ ದೀಪಗಳನ್ನು ಉರಿಸಿ ಹಣ ಪೋಲು ಮಾಡುತ್ತೀರಿ ಎಂದು ರೇಗುತ್ತಿದ್ದ. ಅಷ್ಟೇ ಅಲ್ಲ, ಅನಗತ್ಯವಾದ ಲೈಟುಗಳನ್ನು ಆರಿಸುವಂತೆ ಸಿಬ್ಬಂದಿಗೆ ಹೇಳುತ್ತಿದ್ದ. ಇದರಿಂದ ಅವನಿಗೆ ‘ಲೈಟ್-ಬಲ್ಬ್ ಲಿಂಡನ್’ ಎಂಬ ಅಡ್ಡ ಹೆಸರು ಬಂದಿತು.
ಹೀಗಾದರೆ ಏನಾಗುತ್ತಿತ್ತು?
ಆಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅಥವಾ ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಒಂದು ವೇಳೆ ಭಾರತದಲ್ಲಿ ಕಾರು ತಯಾರಿಸಲು ನಿರ್ಧರಿಸಿದ್ದರೆ ಏನು ಮಾಡುತ್ತಿದ್ದರು? ಕಾರು ತಯಾರಿಸುವ ಮುನ್ನ ಅವರು ರಸ್ತೆ ನಿರ್ಮಿಸುತ್ತಿದ್ದರು. ಉತ್ತಮವಾದ ರಸ್ತೆಗಳನ್ನು ನಿರ್ಮಿಸದೇ, ಎಷ್ಟೇ ಒಳ್ಳೆಯ ಕಾರುಗಳನ್ನು ನಿರ್ಮಿಸಿದರೂ ಪ್ರಯೋಜನ ಇಲ್ಲ. ಬೆಂಗಳೂರಿನಲ್ಲಿ ದುಬಾರಿ ವೆಚ್ಚದ ಲಂಬೋರ್ಗಿನಿ, ಫೆರಾರಿ ಕಾರುಗಳನ್ನು ಡ್ರೈವ್ ಮಾಡಲು ಸಾಧ್ಯವೇ ಇಲ್ಲ. ಕಾರಣ ಇಲ್ಲಿನ ರಸ್ತೆ ಉಬ್ಬುಗಳು (Road Hump) ಆ ಕಾರುಗಳ ತಳಕ್ಕೆ ಬಡಿಯುತ್ತವೆ. ಬಹುತೇಕ ಸೆಡಾನ್ ಕಾರುಗಳ ಕತೆಯೂ ಇದೇ. ಅದೆಷ್ಟೇ ಆಧುನಿಕ ಕಾರುಗಳನ್ನು ತಯಾರಿಸಿದರೂ, ರಸ್ತೆಯೇ ಸರಿ ಇಲ್ಲ ಅಂದರೆ, ಐಷಾರಾಮಿ ಕಾರುಗಳನ್ನು ನಿರ್ಮಿಸಿದ ಉದ್ದೇಶವೇ ವಿಫಲವಾದಂತೆ.
ಹೀಗಾಗಿ ಸ್ಟೀವ್ ಜಾಬ್ಸ್ ಮತ್ತು ಎಲಾನ್ ಮಸ್ಕ್ ಮೊದಲು ತಮ್ಮ ಕಾರುಗಳಿಗೆ ತಕ್ಕುದಾದ ರಸ್ತೆಗಳನ್ನು ನಿರ್ಮಿಸಿದ ಬಳಿಕ, ಕಾರು ತಯಾರಿಸಲು ಆರಂಭಿಸುತ್ತಿದ್ದರು. ಅದು ಸರಿಯಾದ ಕ್ರಮವೂ ಹೌದು. ಸುಮಾರು ೩೦ ವರ್ಷಗಳ ಹಿಂದೆ, ಮಾರುತಿ ಕಾರು ತಯಾರಿಕೆ ಕಂಪನಿ ತನ್ನ ಬೇರೆ ಬೇರೆ ಮಾಡೆಲ್ಗಳನ್ನು ಬಿಡುಗಡೆ ಮಾಡುವ ಮುನ್ನ, ಸರ್ವೀಸ್ ಸೆಂಟರುಗಳನ್ನು ಸ್ಥಾಪಿಸಿತು. ಹಿಮಾಲಯ ದಂಥ ಗುಡ್ಡಗಾಡು ಪ್ರದೇಶಗಳಲ್ಲೂ ಸರ್ವೀಸ್ ಸೆಂಟರುಗಳಿವೆ ಎಂದು ಜಾಹೀರು ಮಾಡಿತು. ಆ ಕಾರು ಜನಸಾಮಾನ್ಯರನ್ನು ತಲುಪಲು ಅದು ಸಹಾಯಕವಾಯಿತು. ಒಂದು ವೇಳೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ಕುದುರೆ ಸಾಕಿದ್ದರೆ (ಸ್ಟಡ್ ಫಾರ್ಮರ್) ಏನಾಗುತ್ತಿತ್ತು? ಆತ ಹೇಳಿಕೇಳಿ ಬಂಡವಾಳ
ಹೂಡಿಕೆ ಪರಿಣತ. ಆತ ತನ್ನ ಕುದುರೆಗಳಿಗೆ ತನಗೆ ಗೊತ್ತಿರುವ ಆ ಕಲೆಯನ್ನು ಕಲಿಸುತ್ತಿದ್ದ. ಆಗ ಮೋಟಾರು, ವಾಹನ, ಕಾರು ತಯಾರಿಕೆ ಕಂಪನಿಗಳೇ ಇರುತ್ತಿರಲಿಲ್ಲ. ಅವನ ಕುದುರೆಗಳೇ ಈ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಿದ್ದವು.
ಒಂದು ವೇಳೆ ಗಾಂಧೀಜಿ ಅವರು ಕಾರು ತಯಾರಿಸಿದ್ದರೆ ಆ ಕಾರು ಹೇಗಿರುತ್ತಿತ್ತು? ಆ ಕಾರಿಗೆ ಸೀಟು, ಸ್ಟಿಯರಿಂಗ್, ಬ್ರೇಕ್ ಬಿಟ್ಟರೆ ಏನೂ ಇರುತ್ತಿರಲಿಲ್ಲ. ಆಕ್ಸಿಲೇಟರ್ ಸಹ ಇರುತ್ತಿರಲಿಲ್ಲ. ಇಂಧನ ಉಳಿಸಲು, ಸದಾ ತಮ್ಮ ಜತೆ ಇರುವ ಬೆಂಬಲಿಗರಿಗೆ ಕಾರನ್ನು ತಳ್ಳುವಂತೆ ಹೇಳು ತ್ತಿದ್ದರು! ಜಿಯೋ ಕಂಪನಿಯ ಮುಕೇಶ್ ಅಂಬಾನಿ ಸಿನಿಮಾ ಥಿಯೇಟರ್ ಆರಂಭಿಸಿದರೆ ಹೇಗಿರುತ್ತದೆ. ಆ ಥಿಯೇಟರ್ಗೆ ಟಿಕೆಟ್ ಇಲ್ಲದೇ ಯಾರು ಬೇಕಾದರೂ ಪುಕ್ಕಟೆಯಾಗಿ ಹೋಗಬಹುದು. ಆದರೆ, ಸಿನಿಮಾ ನೋಡಿ ಹೊರಬರುವಾಗ ಹಣ ನೀಡಿ ಬರಬೇಕು! ಅದಕ್ಕಾಗಿಯೇ ಹೇಳೋದು ಯಾರು ಏನು ಮಾಡಬೇಕೋ ಅದನ್ನೇ ಮಾಡ ಬೇಕು. ಇಲ್ಲದಿದ್ದರೆ ಈ ಎಲ್ಲಾ ವ್ಯತ್ಯಾಸಗಳಾಗುತ್ತವೆ.
ಧಿಬಿರುದು-ಬಾವಲಿ
ಉನ್ನತ ಸ್ಥಾನಗಳಿಗೆ ಹೋದವರ ಯೋಚನೆಗಳೂ ಉನ್ನತವೇ ಆಗಿರುತ್ತವೆ ಎನ್ನಲಾಗುವುದಿಲ್ಲ. ಉಗಾಂಡದ ಅಧ್ಯಕ್ಷನಾಗಿದ್ದ ಇದಿ ಅಮೀನನ ಹೆಸರನ್ನು ನೀವು ಕೇಳಿರಬಹುದು. 1971ರಲ್ಲಿ ಆತ ಅಧ್ಯಕ್ಷ ಮಿಲ್ಟನ್ ಓಬೋಟೆ ಸರಕಾರವನ್ನು ಕಿತ್ತೆಸೆದು ಅಧ್ಯಕ್ಷ ಪದವಿಗೇರಿದ. ಹಿಂದಿನ ಸರಕಾರವನ್ನು ಪದಚ್ಯುತಗೊಳಿಸಿದ್ದಕ್ಕಾಗಿ, ಸರ್ವಸೇನಾ ಪಡೆಗಳ ಅತ್ಯುಚ್ಚ ಸೇನಾಧಿಪತಿ ಎಂಬ ಬಿರುದನ್ನು ತನಗೆ ತಾನೇ ಕೊಟ್ಟುಕೊಂಡ. ಐದು ವರ್ಷಗಳ ನಂತರ, ಬ್ರಿಟನ್ ಸರಕಾರ ಉಗಾಂಡ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತು. ತಾನು ಬ್ರಿಟನ್ ಅನ್ನು ಪರಾಭವಗೊಳಿಸಿದೆ ಎಂದು ಘೋಷಿಸಿಕೊಂಡ. ಅದರ ನೆನಪಿಗಾಗಿ ‘ಬ್ರಿಟಿಷ್ ಸರಕಾರ ಗೆದ್ದ ವೀರ ಸೇನಾನಿ’ ಎಂಬ ಬಿರುದನ್ನು ತನಗೆ
ದಯಪಾಲಿಸಿಕೊಂಡ.
ಒಂದು ದಿನ ಇದಿ ಅಮೀನ್ಗೆ ಏನನಿಸಿತೋ ಏನೋ? ತನ್ನ ಅಧಿಕಾರಿಗಳನ್ನು ಕರೆದು, ತನ್ನನ್ನು ಇನ್ನು ಮುಂದೆ ಅಧಿಕೃತವಾಗಿ ‘His Excellency, President for Life, Field Marshal Al Hadji Doctor Idi Amin Dada, VC, DSO, MC, Lord of All the Beasts of the Earth and Fishes of the Seas and Conqueror of the British Empire in Africa in General and Uganda in Particular ’ ಎಂದು ಕರೆಯುವಂತೆ ಆದೇಶ ಹೊರಡಿಸಿದ. ಭೂಮಿಯ ಮೇಲಿರುವ ಎಲ್ಲ ಮೃಗಗಳು ಮತ್ತು ಸಮುದ್ರದಲ್ಲಿರುವ ಜಲಚರಗಳಿಗೂ ತಾನೇ ಅಧಿಪತಿ ಎಂದು ಘೋಷಿಸಿಕೊಂಡ. ಇದಿ ಅಮೀನ್ ಅನ್ನು ಈ ವಿಶೇಷಣಗಳಿಂದಲೇ ಸಂಬೋಧಿಸಬೇಕಾಗಿತ್ತು. ಅಧಿಕೃತ ಕಾರ್ಯಕ್ರಮಗಳಲ್ಲಿ ಅವನ ಹೆಸರು ಹೇಳುವಾಗಲೆಲ್ಲ, ಅವನ ಈ ‘ಅಲಂಕಾರ’ಗಳನ್ನು ಉದ್ಧರಿಸಬೇಕಿತ್ತು. ಈ ಬಿರುದುಗಳನ್ನು ಹೇಳುವಾಗ ಆತ ಸುತ್ತಮುತ್ತ ನೋಡುತ್ತಾ, ಮುಸಿಮುಸಿ ನಗುತ್ತಿದ್ದ.
ಇದಿ ಅಮೀನ್ನ ಬಿರುದು ಖಯಾಲಿ ಬಗ್ಗೆ ಹೇಳಿದಾಗ ನನಗೆ ನೆನಪಾಗುವ ಮತ್ತೊಬ್ಬ ಆಫ್ರಿಕನ್ ನಾಯಕನೆಂದರೆ, ಜಿಂಬಾಬ್ವೆ
ಅಧ್ಯಕ್ಷನಾಗಿದ್ದ ರಾಬರ್ಟ್ ಮುಗಾಬೆ. ಆತ 1987ರಿಂದ 2017ರವರೆಗೆ 30 ವರ್ಷಗಳವರೆಗೆ ಆ ದೇಶದ ಅಧ್ಯಕ್ಷನಾಗಿದ್ದ. ನಂತರ ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಆತನನ್ನು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು. ಆತನಿಗೂ ಆತ್ಮರತಿಯಲ್ಲಿ ಅತೀವ ಆನಂದ.
ಮುಗಾಬೆಯನ್ನುಅಧಿಕೃತ ಕಾರ್ಯಕ್ರಮಗಳಲ್ಲಿ ‘His Excellency, The President, Robert Gabriel Mugabe and Commander-in-Chief of the Zimbabwe Defence Forces, Patron of War Veterans, First Secretary of the Party and Chancellor of State Universities. Supreme Leader, First Citizen of the Nation, Honorary Black Belt and Professor of Diplomacy
’ ಎಂದು ಕರೆಯಬೇಕಿತ್ತು. ಒಮ್ಮೆ ವಿದೇಶಿ ಗಣ್ಯರು ಆಗಮಿಸಿದಾಗ ಅಽಕೃತ ಔತಣಕೂಟದಲ್ಲಿ ಅಧಿಕಾರಿಯೊಬ್ಬ, Honorary Black Belt ಎಂದು ಹೇಳಲು ಮರೆತಿದ್ದಕ್ಕೆ ಅವನನ್ನು ಕೆಲಸದಿಂದ ಕಿತ್ತು ಹಾಕಿದ್ದ. ಈ ಬಿರುದುಗಳನ್ನು ಶಿಷ್ಟಾಚಾರ ಅಧಿಕಾರಿಗಳು ಕಂಠಪಾಠ ಮಾಡಬೇಕಿತ್ತು.
ಆಫ್ರಿಕಾ ಖಂಡದಲ್ಲಿ ಗ್ಯಾಂಬಿಯಾ ಎಂಬ ದೇಶವಿದೆ. ಈ ದೇಶವನ್ನು ಸುಮಾರು 21 ವರ್ಷ ಆಳಿದ ಯಾಹ್ಯಾ ಜಮ್ಮೆಹ್ಗೂ ಬಿರುದಿನ ಖಯಾಲಿ. ಅವನ ನಿಜವಾದ ಹೆಸರು ಯಾಹ್ಯಾ ಅಬ್ದುಲ್ ಅಝೀಜ್ ಜೆಮೂಸ್ ಜುನ್ ಕುಂಗ್ ಜಮ್ಮೆಹ್. ತನ್ನ ಹೆಸರನ್ನು ‘His Excellency Sheikh Professor Alhaji Doctor Yahya Abdul & Aziz Awal Jemus Junkung Jammeh Naasiru Deen Babili Mansa ’ ಎಂದೇ ಸಂಬೋಽಸಬೇಕು ಎಂದು ಆತ ಕಟ್ಟಪ್ಪಣೆ ಹೊರಡಿಸಿದ್ದ.
ಸಾಮಾನ್ಯವಾಗಿ ಬಿರುದು ಎಂಬ ಪದ ಬಳಕೆಯಾದಾಗಲೆಲ್ಲ, ಕನ್ನಡದಲ್ಲಿ ಒಂದು ಪದಪುಂಜ ಪ್ರಸ್ತಾಪವಾಗುವುದುಂಟು. ಅದೇನೆಂದರೆ ಬಿರುದು-ಬಾವಲಿ. ಈ ಆಫ್ರಿಕನ್ ನಾಯಕರು ಅಥವಾ ಸರ್ವಾಧಿಕಾರಿಗಳ ಹೆಸರಿನ ಜತೆಗೆ ಜೋತಾಡುತ್ತಿರುವ ಬಿರುದುಗಳನ್ನು ನೋಡಿದರೆ, ಬಿರುದಿನ ಜತೆಗೆ ಬಾವಲಿ ಪದ ಯಾಕೆ ಸೇರಿಕೊಂಡಿತು ಎಂಬುದು ಗೊತ್ತಾಗುತ್ತದೆ. 3-4 ವರ್ಷದ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ನಮ್ಮ ಪ್ರಧಾನಿ ಯನ್ನು ‘ನಮೋ’ ಎಂದು ಸಂಬೋಧಿಸುವುದಿಲ್ಲ, ಅವರನ್ನು ನರೇಂದ್ರ ಮೋದಿ ಎಂದು ಹೇಳುತ್ತೇನೆ ಎಂದು ಹೇಳಿದಾಗ, ಅಯಾಚಿತವಾಗಿ
ಇವೆಲ್ಲ ನೆನಪಾಯಿತು
ಗಾದೆಗಳ ಗಮ್ಮತ್ತಿದು!
ಕೆಲ ವರ್ಷದ ಹಿಂದೆ ‘ಗಾದೆಗಳ ಡೇಟ್ ಆಫ್ ಬರ್ತ್’ ಬಗ್ಗೆ ಬರೆದಿದ್ದೆ. ‘ಕೂದಲು ಕತ್ತರಿಸಿಕೊಂಡು ಬಂದ ನಂತರ ನಕ್ಷತ್ರ ಕೇಳಿ ದಂತಾಯ್ತು’ ಎಂಬ ಗಾದೆ ಸುಮಾರು 1150 ವರ್ಷಗಳಷ್ಟು ಹಿಂದಿನ ಗಾದೆ ಎಂದು ಹೇಳಿದ್ದೆ. ಹಿರಿಯೂರಿನ ಸಂಸ್ಕೃತ ವಿದ್ವಾಂಸರಾದ ಕೆ.ಶಾಮಾಚಾರರು, ಈ ಗಾದೆಮಾತಿನ ಡೇಟ್ ಆಫ್ ಬರ್ತ್ ಅನ್ನು ಶೋಧಿಸಿ ಹೇಳಿದ್ದನ್ನು ಉಲ್ಲೇಖಿಸಿದ್ದೆ. ನೃಪತುಂಗ ಕವಿ ಬರೆದ ‘ಕವಿರಾಜ ಮಾರ್ಗ’ದಲ್ಲಿ ‘ತಲೆಯಂ
ತಿರಿಯಿಸಿ ದಿವಸಮಂ ಬೆಸಗೊಳ್ವಂತೆ’ ಸಾಲಿನ ಅರ್ಥ ‘ಕೂದಲು ಕತ್ತರಿಸಿಕೊಂಡು ಬಂದ ನಂತರ ನಕ್ಷತ್ರ ಕೇಳಿದಂತಾಯ್ತು’ ಅಂತ.
ನೃಪತುಂಗನ ಹಳೆಗನ್ನಡವನ್ನು ನಾವು ಹೊಸಗನ್ನಡಕ್ಕೆ ಬದಲಿಸಿಕೊಂಡಿದ್ದೇವೆ ಎಂದು ಶಾಮಾಚಾರರು ತಿಳಿಸಿದ್ದನ್ನು ಬರೆದಿದ್ದೆ. ಇದಕ್ಕೆ ಮೈಸೂರಿನ ಎಸ್.ಜಗನ್ನಾಥ ಎಂಬುವವರು ಪ್ರತಿಕ್ರಿಯಿಸುತ್ತಾ ಈ ಗಾದೆ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಿದ್ದು ಹೀಗೆ: ಭಟ್ರೆ, ನೀವು ನಿಮ್ಮ ಅಂಕಣದಲ್ಲಿ ಇವತ್ತು ಉದಾಹರಿಸಿದ ಗಾದೆ ಕನಿಷ್ಠಪಕ್ಷ ಕ್ರಿ.ಶ.6ನೇ ಶತಮಾನದಷ್ಟು ಹಳೆಯದು. 6ನೇ ಶತಮಾನದಲ್ಲಿದ್ದ ವಿಶಾಖದತ್ತನು ಸಂಸ್ಕೃತದಲ್ಲಿ ರಚಿಸಿದ ಮುದ್ರಾರಾಕ್ಷಸ ನಾಟಕದ 5ನೇ ಅಂಕದಲ್ಲಿ ಕ್ಷಪಣಕ ಎಂಬುವನು ಸಿದ್ಧಾರ್ಥಕನೆಂಬುವನಿಗೆ ಹೀಗೆ ಹೇಳುತ್ತಾನೆ.
‘ಮುಂಡಿv ಮುಂಡಸ್ತ್ವಂ ನಕ್ಷತ್ರಾಣಿ ಪೃಚ್ಛಸಿ’. ಇದರ ಅರ್ಥ ‘ತಲೆ ಬೋಳಿಸಿಕೊಂಡು ನೀನು ನಕ್ಷತ್ರ ಕೇಳುತ್ತಾ ಇದೀಯ’ ಅಂತ. ನಾವು ಅಂದುಕೊಂಡಿದ್ದೇ ಪರಮಸತ್ಯ ಅಲ್ಲ. ಶಾಮಾಚಾರರು ಈ ಗಾದೆ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುತ್ತಾರಾ, ಗೊತ್ತಿಲ್ಲ. ‘ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಕ್ಕಿದ ಹಾಗೆ ಅಥವಾ ಕಾಲಿಗೆ ತೊಡಕಿದ ಹಾಗೆ’ ಎಂಬ ಗಾದೆಮಾತನ್ನು ಕೇಳಿರಬಹುದು. ಕ್ರಿ.ಶ 920ರಲ್ಲಿ ರಚನೆಯಾದ ‘ವಡ್ಡಾರಾಧನೆ’ಯಲ್ಲಿ ಸಹ ಈ ಗಾದೆಯನ್ನು ಕಾಣಬಹುದು. ಆ ಕೃತಿಯಲ್ಲಿ ‘ಅರಪ ಬಳ್ಳಿ ಕಾಲ್ ತೋರ್ದತ್ತು’ ಎಂದು ಬರೆದಿದೆ. ಅರಪ ಬಳ್ಳಿ ಅಂದರೆ ಅರಸುತ್ತಿದ್ದ ಬಳ್ಳಿ , ಕಾಲ್ ತೋರ್ದತ್ತು ಅಂದರೆ ಕಾಲಿಗೆ ತೊಡಕಿದ ಹಾಗೆ ಎಂದರ್ಥ. ಅಂತೆಯೇ ರನ್ನನ ‘ಗದಾಯುದ್ಧ’ದಲ್ಲಿ ‘ಅತ್ತ ಹುಲಿ, ಇತ್ತ ದರಿ’ ಗಾದೆಯ ಪ್ರಸ್ತಾಪವಿದೆ. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಗಾದೆಯನ್ನು ಕೇಳಿದರೆ, ಗಾದೆಗಳು ವೇದ ಕಾಲಕ್ಕಿಂತ ಹಳೆಯವು ಎಂದು ಭಾವಿಸಬಹುದು.
ಚುಯಿಂಗ್ ಗಮ್ ಕುರಿತು
ಸ್ವಲ್ಪವೂ ಎಳೆಯದೇ, ಲಂಬಿಸದೇ, ಚುಯಿಂಗ್ ಗಮ್ ಇತಿಹಾಸವನ್ನು ಕೇವಲ 18 ಪುಟಗಳಲ್ಲಿ ವ್ರಿಗ್ಲೇಯ್ ಕಂಪನಿ ಹೊರತಂದಿದೆ. ಚುಯಿಂಗ್ ಗಮ್ ತಯಾರಿಕೆಯಲ್ಲಿ ಆ ಕಂಪನಿ ಲೀಡರ್. ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಚುಯಿಂಗ್ ಗಮ್ ಅನ್ನು ಜಗತ್ತಿಗೆ ಪರಿಚಯಿಸಿದ ಅಗ್ಗಳಿಕೆ ವ್ರಿಗ್ಲೇಯ್ ಕಂಪನಿಗೇ ಸಲ್ಲಬೇಕು. ಸುಮಾರು 1800ರ ವರ್ಷದಲ್ಲಿ, ಮೊದಲ ಬಾರಿಗೆ ಚುಯಿಂಗ್ ಗಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಆಗ ಅದು ಬರೀ ರಬ್ಬರ್, ಅದಕ್ಕೆ ಸ್ವಾದವಿರಲಿಲ್ಲ. ಎರಡು ನಿಮಿಷಗಳ ನಂತರ ಅದನ್ನು ಅಗೆಯಲು ಅಥವಾ ಜಗಿಯಲು ಆಗುತ್ತಿರಲಿಲ್ಲ. ನಿಧಾನವಾಗಿ ಅದರ ತಯಾರಿಕೆ ನಿಂತು ಹೋಯಿತು. ಈ ಮಧ್ಯೆ ಕೆಲವು ಕಂಪನಿಗಳು ಚುಯಿಂಗ್ ಗಮ್ ತಯಾರಿಸಿದರೂ ಅದು ಯಶಸ್ವಿ ಆಗಲಿಲ್ಲ.
1891ರಲ್ಲಿ ಮೊದಲ ಬಾರಿಗೆ ವ್ರಿಗ್ಲೇಯ್ ಕಂಪನಿ ಚುಯಿಂಗ್ ಗಮ್ ಅಗಿಯುವುದನ್ನು ಜಗತ್ತಿನ ಹೊಸ ಅಭ್ಯಾಸವಾಗಿ ಪರಿವರ್ತಿಸುವಲ್ಲಿ ಯಶಸ್ವಿ ಆಯಿತು. ಅದೇನೂ ಪವಾಡ ಮಾಡಿರಲಿಲ್ಲ. ಮೊದಲಿನ ಚುಯಿಂಗ್ ಗಮ್ಗೆ ಸ್ವಾದವನ್ನು ಸೇರಿಸಿತು. ಬೇರೆ ಬೇರೆ ಹಣ್ಣುಗಳ ಮತ್ತು ಸೂಪರ್ ಮಿಂಟ್ ಸ್ವಾದವನ್ನು ಸೇರಿಸಿತು. ಇದು ಚುಯಿಂಗ್ ಗಮ್ ಗ್ರಹಚಾರವನ್ನೇ ಬದಲಿಸಿತು. ಅದಾಗಿ ಸುಮಾರು ಐವತ್ತು ವರ್ಷಗಳ ನಂತರ, ವ್ರಿಗ್ಲೇಯ್ ಕಂಪನಿ ಚುಯಿಂಗ್ ಗಮ್ ಸೇವಿಸಿದರೆ ಬಾಯಿ ಫ್ರೆಶ್ ಆಗುತ್ತದೆ ಎಂಬ ಜಾಹೀರಾತಿನ ಮೂಲಕ ಪ್ರಚಾರ ಆರಂಭಿಸಿತು.
ಅದು ಚುಯಿಂಗ್ ಗಮ್ ಅಗಿಯುವ ಉದ್ದೇಶಕ್ಕೆ ಹೊಸ ಅರ್ಥವನ್ನು ನೀಡಿತು. ಛ್ಛ್ಟಿಛಿoe qsಟ್ಠ್ಟ ಠಿZoಠಿಛಿ ಎಂಬ ಜಾಹೀರಾತು ಚುಯಿಂಗ್ ಗಮ್ ಅಗಿಯುವುದರ ಮೂಲಕ ಬಾಯಿಯನ್ನು ಫ್ರೆಶ್ ಮತ್ತು ಶುದ್ಧವಾಗಿ ಇಟ್ಟುಕೊಳ್ಳಬಹುದು ಎಂಬ ಸಂದೇಶವನ್ನು ನೀಡಿತು. ಕಳೆದ 224 ವರ್ಷಗಳಲ್ಲಿ ಚುಯಿಂಗ್ ಗಮ್ ಉತ್ಪಾದನೆಯಲ್ಲಿ ಆದ ಸಂಶೋಧನೆ ಮತ್ತು ಅಭಿವೃದ್ಧಿ ಬಹಳ ಕಡಿಮೆ. ಆದರೆ, ಪ್ರತಿ ಸಲ ಹೊಸ ಬದಲಾವಣೆ ಮಾಡಿದಾಗ, ಅದರ ಮಾರಾಟದಲ್ಲಿ ಏರಿಕೆ ಕಂಡಿದೆ. ಚುಯಿಂಗ್ ಗಮ್ ತಿಂದರೆ ಹಸಿವು ನೀಗುವುದಿಲ್ಲ, ಹೊಟ್ಟೆ ತುಂಬುವುದಿಲ್ಲ. ಆದರೆ, ಅದನ್ನು ತಿನ್ನದಿದ್ದರೆ ಕೆಲವರಿಗೆ ಹೊಟ್ಟೆ ತುಂಬಿದರೂ ಸಮಾಧಾನವಾಗುವುದಿಲ್ಲ. ಹಾಗಂತ ಇದು ಕೆಟ್ಟ ಅಭ್ಯಾಸ ಅಲ್ಲ, ಒಳ್ಳೆಯ ಅಭ್ಯಾಸವೂ ಅಲ್ಲ.
ಹೀಗೊಂದು ಮಾತುಕತೆ
ಗಂಡನ ಪಕ್ಕ ಕುಳಿತಿದ್ದ ಹೆಂಡತಿ, ‘ಐ ಲವ್ ಯು’ ಎಂದಳು. ಗಂಡನಿಗೆ ತುಸು ಅಚ್ಚರಿಯಾಯಿತು. ‘ಮಾತಾಡ್ತಾ ಇರೋದು ನೀನಾ ಅಥವಾ ನಿನ್ನೊಳಗೆ ಸೇರಿರುವ ವೈನಾ?’ ಎಂದು ಕೇಳಿದ. ಅದಕ್ಕೆ ಹೆಂಡತಿ ಹೇಳಿದಳು- ‘ನಾನು ನಿಮ್ಮ ಜತೆಗಲ್ಲ, ವೈನ್ ಜತೆಗೆ ಮಾತಾಡುತ್ತಿದ್ದೇನೆ’
ಪತ್ರಿಕೋದ್ಯಮ ಕುರಿತು ಪುಸ್ತಕ
ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಗಾಗ ನನಗೆ ಫೋನ್ ಮಾಡಿ, ‘ನಾವು ಯಾವ ಪುಸ್ತಕ ಓದಬೇಕು? ಪತ್ರಿಕೋದ್ಯಮಕ್ಕೆ
ಸಂಬಂಧಿಸಿದಂತೆ ಒಳ್ಳೆಯ ಪುಸ್ತಕ ಯಾವುದು? ನೀವು ಶಿಫಾರಸು ಮಾಡುವ ಪುಸ್ತಕಗಳು ಯಾವವು?’ ಎಂದು ಕೇಳುತ್ತಾರೆ. ನನಗೆ
ಇಷ್ಟವಾಗುವ ಪುಸ್ತಕಗಳು ಬೇರೆಯವರಿಗೆ ಇಷ್ಟವಾಗದೇ ಹೋಗಬಹುದು. ಆದರೂ ಕೆಲವೊಂದು ಪುಸ್ತಕಗಳನ್ನು ಎಲ್ಲರೂ
ಓದಲೇಬೇಕಾಗುತ್ತದೆ. ಅಂಥ ಪುಸ್ತಕಗಳ ಹೆಸರುಗಳನ್ನು ಅವರಿಗೆ ಹೇಳುತ್ತೇನೆ. ಅಂಥ ಒಂದು ಪುಸ್ತಕದಲ್ಲಿ -ಯ್ಡ್ ಕೆ.ಬಾಸ್ಕೆಟ್,
ಜಾಕ್ ಸೀಸರ್ಸ್ ಹಾಗೂ ಬ್ರಿಯಾನ್ ಬ್ರೂಕ್ಸ್ ಬರೆದ ‘ದಿ ಆರ್ಟ್ ಆಫ್ ಎಡಿಟಿಂಗ್’ ಕೂಡ ಒಂದು. ‘ಈ ಕೃತಿಯನ್ನು ಓದದೇ
ಪತ್ರಿಕೋದ್ಯಮ ವ್ಯಾಸಂಗ ಮಾಡುವುದು ಸಾಧ್ಯವೇ ಇಲ್ಲ’ ಎಂದು ಹಿರಿಯ ಪತ್ರಕರ್ತ ದಿವಂಗತ ಎಂ.ವಿ.ಕಾಮತ್ ಬರೆದಿದ್ದರು.
ನಾನು ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗಲೂ ಇದು ನನಗೆ ಅಚ್ಚುಮೆಚ್ಚಿನ ಕೃತಿಯಾಗಿತ್ತು.
‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾದ ಟಿ.ಜೆ.ಎಸ್.ಜಾರ್ಜ್ ಇದೇ ಹೆಸರಿನಲ್ಲಿ (ಎಡಿಟಿಂಗ್) ಒಂದು ಪುಸ್ತಕ ಬರೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ‘ಎಡಿಟಿಂಗ್’ ಬಗ್ಗೆ ಭಾರತೀಯ ಲೇಖಕ ಅಥವಾ ಪತ್ರಕರ್ತರೊಬ್ಬರು ಬರೆದ ಉತ್ತಮ ಕೃತಿಯಿದು. ಇದರಲ್ಲಿ ಬಳಸಿರುವ ಉದಾಹರಣೆಗಳು ಈಗ ಹಳೆಯದಾಗಿರಬಹುದು. ಆದರೆ, ಇದು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದೆ. ನಾನು ‘ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್’ನಲ್ಲಿ ಮೇಷ್ಟ್ರಾಗಿದ್ದಾಗ ಈ ಎರಡೂ ಪುಸ್ತಕಗಳನ್ನು ಓದುವಂತೆ ಹೇಳುತ್ತಿದ್ದೆ ವಿದ್ಯಾರ್ಥಿಗಳಿಗೆ. ಎಡಿಟಿಂಗ್ ಬಗ್ಗೆ ಇರುವ ಕೆಲವೇ ಕೆಲವು ಪುಸ್ತಕಗಳಲ್ಲಿ, ಇವೆರಡೂ ಅಗ್ರಪಂಕ್ತಿಯವು.
ನನಗೆ ಇಂದಿಗೂ ಪತ್ರಕರ್ತ ವೈಎನ್ಕೆ ಬರೆದ ‘ಇದು ಸುದ್ದಿ ಇದು ಸುದ್ದಿ’ ಆಸಕ್ತಿದಾಯಕ ಕೃತಿಯೇ. 64 ಪುಟಗಳಲ್ಲಿ ಅವರು
ಪತ್ರಿಕೋದ್ಯಮದ ಸಾರವನ್ನೇ ಹೇಳಿದ್ದಾರೆ. ನಾನು ಲಂಡನ್ನ ಥಾಮ್ಸನ್ ಫೌಂಡೇಶನ್ನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡು
ವಾಗ ವ್ಯಾಲ್ ವಿಲಿಯಮ್ಸ್ ಬರೆದ ‘ಜರ್ನಲಿಸ್ಟ್ ಕಂಪ್ಯಾನಿಯನ್’ ಕೃತಿಯನ್ನು ಬಹಳವಾಗಿ ಇಷ್ಟಪಟ್ಟಿದ್ದೆ. ಪತ್ರಿಕೋದ್ಯಮದ 35
ಅಧ್ಯಾಯಗಳನ್ನು 108 ಪುಟಗಳಲ್ಲಿ ವಿಲಿಯಮ್ಸ್ ಹೇಳಿದ್ದರು. ಪ್ರಾಯಶಃ ಪತ್ರಿಕೋದ್ಯಮವನ್ನು ಅದಕ್ಕಿಂತ ಕಡಿಮೆ ಪುಟಗಳಲ್ಲಿ
ಹೇಳುವುದು ಸಾಧ್ಯವಿಲ್ಲವೇನೋ?
ಇದನ್ನೂ ಓದಿ: @vishweshwarbhat