Friday, 20th September 2024

ಉರಿಯೂತವನ್ನು ವಿಟಮಿನ್‌ ’ಡಿ’ ತಗ್ಗಿಸುವುದೇ ?

ವೈದ್ಯ ವೈವಿಧ್ಯ

drhsmohan@gmail.com

ದೀರ್ಘಕಾಲ ವಿಟಮಿನ್ ‘ಡಿ’ ಕಡಿಮೆಯಾದರೆ ಹಲವು ರೀತಿಯ ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ವಯಸ್ಸಾದವರಲ್ಲಿ ತೀವ್ರಸ್ವರೂಪದ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರು ಒಂದು ರೀತಿಯ ಖಿನ್ನತೆಗೆ (depression) ಒಳಗಾಗಬಹುದು.

ದೇಹದಲ್ಲಿನ ಹಲವು ಉರಿಯೂತದ ಕ್ರಿಯೆಗಳು ನಿಧಾನವಾಗಿ ಜರುಗು ತ್ತಿರುತ್ತವೆ. ಈ ಪ್ರಕ್ರಿಯೆ ನಿರಂತರ ನಡೆಯುವಾಗ ಒಂದೇ ಸಮನೆ ಉರಿಯೂತದ ಘಟಕಗಳ ಸ್ರಾವವಾಗುತ್ತಿದ್ದು, ಅದು ಆರೋಗ್ಯದ ವಿಭಿನ್ನ ಏರುಪೇರುಗಳಿಗೆ ಕಾರಣ ವಾಗುತ್ತದೆ. ದೇಹದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುವಲ್ಲಿ ವಿಟಮಿನ್ ‘ಡಿ’ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ, ಉರಿಯೂತದ ಏರುಪೇರಿನ ಮಟ್ಟದಲ್ಲಿ ಕೂಡ ವಿಟಮಿನ್ ‘ಡಿ’ ಪ್ರಭಾವ ಬೀರಬಲ್ಲದು ಎಂಬ ಅಂಶ ಇತ್ತೀಚಿನ ಕೆಲವು ಅಧ್ಯಯನಗಳಿಂದ ಗೊತ್ತಾಗಿದೆ.

ರಕ್ತದಲ್ಲಿರುವ ಸಿ ರಿಯಾಕ್ಟಿವ್ ಪ್ರೋಟೀನ್ (ಸಿಆರ್‌ಪಿ) ಜತೆಗೆ ವಿಟಮಿನ್ ‘ಡಿ’ ಮಟ್ಟವನ್ನು ತಳಕುಹಾಕಲಾಗುತ್ತಿದೆ. ಸಿಆರ್‌ಪಿ ಎಂಬುದು ದೇಹದ ಉರಿಯೂತದ ಮುಖ್ಯಸೂಚಕ. ಹಾಗಾದರೆ ದೇಹದಲ್ಲಿ ವಿಟಮಿನ್ ‘ಡಿ’ ಮಟ್ಟ ಕಡಿಮೆಯಾದಾಗ ಸಿಆರ್‌ಪಿ ಮಟ್ಟ ಜಾಸ್ತಿಯಾಗುವುದೇ ಎಂಬುದು ನಿಖರವಾಗಿ ದೃಢಪಟ್ಟಿಲ್ಲ. ಆದರೆ ಇತ್ತೀಚಿಗೆ ರ‍್ಯಾಂಡಮ್ ಆಗಿ ಕೈಗೊಂಡ ಪ್ರಯೋಗ ಪರೀಕ್ಷೆಗಳಲ್ಲಿ ಈ ಮಟ್ಟ ಜಾಸ್ತಿಯಾಗುವುದು ಎಂಬುದು ಬೆಳಕಿಗೆ ಬಂದಿದೆ.

ಇತ್ತೀಚಿನ ಮತ್ತೊಂದು ಅಧ್ಯಯನದಲ್ಲಿ ಸಂಶೋಧಕರು ಸಿಆರ್‌ಪಿ ಮಟ್ಟದ ಮೇಲೆ ‘ಡಿ’ ವಿಟಮಿನ್‌ನ ಪ್ರಭಾವ ಇದೆಯೇ ಎಂದು ತಿಳಿಯಲು ಪ್ರಯತ್ನಿಸಿದರು. ದೇಹದ ಹೆಚ್ಚಿನ ಸಿಆರ್‌ಪಿ ಮಟ್ಟಕ್ಕೂ ವಿಟಮಿನ್ ‘ಡಿ’ ಪ್ರಮಾಣ ಕಡಿಮೆ ಇರುವುದಕ್ಕೂ ನೇರ ವಾದ ಸಂಬಂಧವಿದೆ ಎಂದು ಅವರು ಈ ಅಧ್ಯಯನದ ಕೊನೆಯಲ್ಲಿ ವರದಿ ಮಾಡುತ್ತಾರೆ. ಹಾಗಾಗಿ, ಉರಿಯೂತದ ಕಾಯಿಲೆ ಗಳಿಗೆ ಈಡಾಗುವ ವ್ಯಕ್ತಿಗಳ ವಿಷಯದಲ್ಲಿ ವಿಟಮಿನ್ ‘ಡಿ’ ಉತ್ತಮ ಸೂಚಕವಾಗಬಲ್ಲದು.

ದೇಹದಲ್ಲಿ ವಿಟಮಿನ್ ‘ಡಿ’ ಮಟ್ಟವನ್ನು ಹೆಚ್ಚಿಸುವುದರಿಂದ ಟೈಪ್-೧ ಡಯಾಬಿಟಿಸ್, ಮಲ್ಟಿಪಲ್ ಸ್ಲೀರೋಸಿಸ್ ರೀತಿಯ ‘ಆಟೋ ಇಮ್ಯೂನ್’ ಕಾಯಿಲೆಗಳು ಅಂತಹ ವ್ಯಕ್ತಿಗೆ ಬರುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಹಾಗೆಯೇ ಟೈಪ್-೨
ಡಯಾಬಿಟಿಸ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಯಂಥ ಇನ್ನಿತರ ಉರಿಯೂತದ ಕಾಯಿಲೆಗಳು ಬರುವ ಸಂಭವವೂ ಕಡಿಮೆಯಾಗುತ್ತದೆ ಎಂದು ಬಾಸ್ಟನ್ ವಿಶ್ವವಿದ್ಯಾಲಯದ ಮೆಡಿಸಿನ್ ಪ್ರೊಫೆಸರ್ ಡಾ. ಮೈಕೆಲ್ ಎಫ್. ಹೋಲಿಕ್
ಅಭಿಪ್ರಾಯ ಪಡುತ್ತಾರೆ.

ಇತ್ತೀಚೆಗೆ ‘ವೈಟಲ್ ಟ್ರಯಲ್’ ಎಂಬ ಇನ್ನೊಂದು ಅಧ್ಯಯನ ಕೈಗೊಳ್ಳಲಾಯಿತು. ಪ್ರತಿದಿನ ೨೦೦೦ ಅಂತಾರಾಷ್ಟ್ರೀಯ ಯುನಿಟ್‌ನಷ್ಟು ವಿಟಮಿನ್ ‘ಡಿ’ಯನ್ನು ೫ ವರ್ಷಗಳವರೆಗೆ ನಿರಂತರವಾಗಿ ಸೇವಿಸಿದವರಲ್ಲಿ ಎಲ್ಲ ‘ಆಟೋಇಮ್ಯೂನ್’
ಕಾಯಿಲೆಗಳು ಬರುವ ಸಾಧ್ಯತೆ ಶೇ. ೨೨ರಷ್ಟು ಕಡಿಮೆಯಾಗುತ್ತದೆ ಎನ್ನುತ್ತದೆ ಈ ಅಧ್ಯಯನ. ‘ಇಂಟರ್ ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿ ಯಾಲಜಿ’ ವೈದ್ಯಕೀಯ ನಿಯತಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದೆ.
ಈ ಅಧ್ಯಯನದಲ್ಲಿ, ಪರಸ್ಪರ ಸಂಬಂಧಿಗಳಲ್ಲದ ೨,೯೪,೯೭೦ ಜನರ ಮಾಹಿತಿಯನ್ನು ಯು.ಕೆ. ಬಯೋ ಬ್ಯಾಂಕ್‌ನ ಆನ್ಸೆಸ್ಟ್ರಿಯಿಂದ ಸಂಶೋಧಕರು ಪರೀಕ್ಷಿಸಿದರು. ಇವರು ರಕ್ತದ ೨೫-ಹೈಡ್ರಾಕ್ಸಿ ವಿಟಮಿನ್ ‘ಡಿ’ ಅಥವಾ ೨೫(OH) ಈ ಮಟ್ಟವನ್ನು (ಇದು ‘ಡಿ’ ವಿಟಮಿನ್‌ನ ಒಪ್ಪಿತ ಅಳತೆ), ಹಾಗೆಯೇ ಸಿಆರ್‌ಪಿ ಮಟ್ಟ ಮತ್ತು ಜೆನೆಟಿಕ್ ಡೇಟಾ- ಇವುಗಳನ್ನು ಪರಿಶೀಲಿಸಿದರು.

ಸರಾಸರಿ ೨೫ (OH) ಈ ಪ್ರಮಾಣ- ೫೦ ಞಟ್ಝ /ಔ ಆದರೆ ಶೇ. ೧೧.೭ ಜನರು ೨೫ ಞಟ್ಝ/ಔ- ಈ ರೀತಿ ತ್ರೆಷೋಲ್ಡಗಿಂತ ಕಡಿಮೆ ಮಟ್ಟ ಹೊಂದಿದ್ದರು. ಹಾಗೆಯೇ ಈ ಅಭ್ಯರ್ಥಿಗಳ ಆರೋಗ್ಯ ಮತ್ತು ಜೀವನಶೈಲಿಯ ಮಾಹಿತಿಗಳನ್ನು ಕಲೆ ಹಾಕಲಾಯಿತು. ನಂತರ ಬಂದ ಎಲ್ಲ ಮಾಹಿತಿ ಆಧರಿಸಿ ವಿಟಮಿನ್ ‘ಡಿ’ ಮಟ್ಟ ಯಾರಲ್ಲಿ ಕಡಿಮೆ ಇದೆ ಅವರಲ್ಲಿ ಸಿಆರ್‌ಪಿ ಮಟ್ಟ ಜಾಸ್ತಿ ಇರುವುದನ್ನು ಕಂಡುಕೊಂಡರು.

ಹಾಗೆಯೇ ಇವರುಗಳ ವಿಟಮಿನ್ ‘ಡಿ’ ಮಟ್ಟವನ್ನು ವಿವಿಧ ಕ್ರಮಗಳಿಂದ ಹೆಚ್ಚಿಸುವುದರಿಂದ ಉರಿಯೂತದ ತೀವ್ರತೆಯನ್ನು ಬಹಳಷ್ಟು ಕಡಿಮೆ ಮಾಡಬಹುದು; ಈಗಿನ ಈ ಫಲಿತಾಂಶ ಹಿಂದಿನ ಒಪ್ಪಿತವಾದ ತ್ರೆಷೋಲ್ಡ ಪರಿಣಾಮವನ್ನು ಪುಷ್ಟೀಕರಿಸು ತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಆಗ ಗೊತ್ತಾದ ಅಂಶ- ವಿಟಮಿನ್ ‘ಡಿ’ ಕಡಿಮೆ ಇರುವುದನ್ನು ಸರಿಪಡಿಸಿದರೆ ದೇಹದಲ್ಲಿ ಜರುಗುವ ಎಷ್ಟೋ ಕಡಿಮೆ ಪ್ರಮಾಣದ ಉರಿಯೂತಗಳನ್ನು ಬಹಳಷ್ಟು ಕಡಿಮೆ ಮಾಡಬಹುದು, ಹಾಗೆಯೇ ಉರಿಯೂತದಿಂದ ಉಂಟಾಗುವ ಕಾಯಿಲೆಗಳನ್ನು ನಿಯಂತ್ರಿಸಬಹುದು.

ಆಟೋ ಇಮ್ಯೂನ್ ರಿಸ್ಕ್ ಕಡಿಮೆ ಮಾಡುವ ಬಗೆ
ಉರಿಯೂತದ ಪ್ರಮಾಣವನ್ನು ವಿಟಮಿನ್ ‘ಡಿ’ ಹೇಗೆ ಅಥವಾ ಯಾವ ವಿಧಾನದಿಂದ ನಿಯಂತ್ರಿಸುತ್ತದೆ ಎಂಬ ಪ್ರಶ್ನೆಗೆ ಈ
ಅಧ್ಯಯನದ ಮುಖ್ಯ ಸಂಶೋಧಕರಾದ ದಕ್ಷಿಣ ಆಸ್ಟ್ರೇಲಿಯಾದ ನ್ಯೂಟ್ರಿಷನಲ್ ಮತ್ತು ಜೆನೆಟಿಕ್ ಎಪಿಡೆಮಿಯಾಲಜಿಯ ಪ್ರೊಫೆಸರ್ ಡಾ. ಎಲಿನಾ ಹಿಪ್ಪೋನೆನ್ ಈ ಕೆಳಗಿನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಾಣಿಗಳ ಜೀವಕೋಶಗಳ ಪ್ರಯೋಗಗಳಲ್ಲಿ ವಿಟಮಿನ್ ‘ಡಿ’ ಹಾರ್ಮೋನು ಇಂಟರ್ ಲ್ಯೂಕಿನ್-೧೨ (IL-೧೨) ಎಂಬ
ಉರಿಯೂತದ ಸೈಟೋಕೈನ್‌ನ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಹಾಗೆಯೇ ಐಔ-೧೦ ಅಂದರೆ ಉರಿಯೂತದ ವಿರುದ್ಧದ ಸೈಟೋಕೈನ್ ೧೦ರ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿಷಯದಲ್ಲಿನ ಇನ್ನೊಬ್ಬ ತಜ್ಞವೈದ್ಯ ದಕ್ಷಿಣ ಕರೋಲಿನಾ ವಿಶ್ವವಿದ್ಯಾಲಯದ ಮಕ್ಕಳ ವಿಭಾಗದ ಪ್ರೊಫೆಸರ್ ಡಾ. ಬ್ರೂಸ್ ಹೋಲಿಸ್ ಅವರು ಈ ಅಧ್ಯಯನದಲ್ಲಿ ಭಾಗಿಯಾಗಿಲ್ಲ. ಅವರು ಕೂಡ ಮೇಲಿನ ಅಭಿಪ್ರಾಯವನ್ನು ಒಪ್ಪುತ್ತ, ಇವೆಲ್ಲ ವಿಟಮಿನ್ ‘ಡಿ’ಯ ಈಗಾಗಲೇ ಗೊತ್ತಿರುವ
ನಿಯಂತ್ರಣದ ಅಂಶಗಳು ಎಂದು ಅಭಿಪ್ರಾಯಪಡುತ್ತಾರೆ.

ಮೇಲಿನ ಎಲ್ಲ ಅಭಿಪ್ರಾಯಗಳನ್ನು ಸಂಶೋಧಕರು ಕ್ರೋಡೀಕರಿಸುತ್ತ, ವಿಟಮಿನ್ ‘ಡಿ’ ಪ್ರಮಾಣ ಕಡಿಮೆ ಇರುವವರಲ್ಲಿ ಅದರ ಪ್ರಮಾಣ ಜಾಸ್ತಿ ಮಾಡಿದರೆ ದೇಹದ ಕಡಿಮೆ ಹಂತದ ಉರಿಯೂತದ ಕ್ರಿಯೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಹಾಗೆಯೇ ಉರಿಯೂತ ದಿಂದ ಉಂಟಾಗುವ ಹಲವು ಕಾಯಿಲೆಗಳು ಬರದಿರುವಂತೆ ಮಾಡುವಲ್ಲಿ ಇದು
ಸಹಾಯವಾಗುತ್ತದೆ ಎನ್ನುತ್ತಾರೆ. ಈ ಅಧ್ಯಯನದ ಪರಿಮಿತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತ, ಸಿಆರ್‌ಪಿ ಮೇಲೆ ‘ಡಿ’
ವಿಟಮಿನ್‌ನ ಪ್ರಭಾವ ಏನು ಎಂಬುದನ್ನು ಮಾತ್ರ ಈ ಅಧ್ಯಯನವು ವಿಷದೀಕರಿಸಿದೆ.

ಅದರ ಹಿಂದಿನ ನಿಖರವಾದ ತಾಂತ್ರಿಕತೆಯನ್ನು ಸ್ಪಷ್ಟೀಕರಿಸಲು ಸಾಧ್ಯವಾಗಿಲ್ಲ ಎಂದು ಪ್ರೊ. ಹಿಪ್ಪೋನೆನ್ ಅಭಿಪ್ರಾಯ ಪಡುತ್ತಾರೆ. ಇನ್ನೊಬ್ಬ ತಜ್ಞವೈದ್ಯ ಪೆನಿಸಿಲ್ವೇನಿಯಾ ವಿಶ್ವವಿದ್ಯಾಲಯದ ಡಾ.ಸೊಟಕೋಸ್ ಅವರು, ಆಟೋ ಇಮ್ಯೂನ್ ಕಾಯಿಲೆಗಳೊಂದಿಗೆ ವಿಟಮಿನ್ ‘ಡಿ’ ಯಾವ ರೀತಿಯ ಸಂಬಂಧ ಹೊಂದಿದೆ ಎಂಬುದನ್ನು ಅರಿಯಲು ಅಣುಗಳ (molec ular), ಜೀವಕೋಶದ ಮತ್ತು ಅಂಗಾಂಶದ ಮಟ್ಟದಲ್ಲಿ ಇನ್ನೂ ಹೆಚ್ಚಿನ ವಿಶ್ಲೇಷಣೆ ಬೇಕಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ವಿಟಮಿನ್ ‘ಡಿ’ ವಿವಾದ
‘ಡಿ’ ವಿಟಮಿನ್‌ನ ಹಲವು ಪರಿಣಾಮಗಳ ಬಗ್ಗೆ ಬಹಳ ಮೊದಲಿನಿಂದಲೂ ವಿವಾದವಿದೆ. ಕ್ಯಾಲಿಫೋರ್ನಿಯಾದ ಸಂತಾ ಮೋನಿಕಾದ ಸೇಂಟ್ ಜಾನ್ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ. ಡೇವಿಡ್ ಕಟ್ಲರ್ ಅವರು ‘ಡಿ’ ವಿಟಮಿನ್‌ನ ಪರಿಣಾಮಗಳು
ಯಾವಾಗಲೂ ವಿವಾದಾತ್ಮಕವೇ ಎಂದು ಅಭಿಪ್ರಾಯಪಡುತ್ತಾರೆ. ಮೂಳೆಯ ಅಂಶವನ್ನು ಹೆಚ್ಚಿಸುವ ‘ಡಿ’ ವಿಟಮಿನ್‌ನ ಗುಣವನ್ನು ಇತ್ತೀಚಿನ ದೊಡ್ಡ ಅಧ್ಯಯನದಲ್ಲಿಯೂ ಸ್ಪಷ್ಟೀಕರಿಸಲು ಸಾಧ್ಯವಾಗಿಲ್ಲ.

ಆ ಅಧ್ಯಯನದಲ್ಲಿ ೨೫೦೦೦ ಜನರನ್ನು ನಿರಂತರ ೫ ವರ್ಷಗಳವರೆಗೆ ಮಾನಿಟರ್ ಮಾಡಲಾಯಿತು. ಅವರಲ್ಲಿ ಉಂಟಾಗ ಬಹುದಾದ ಮೂಳೆ ಮುರಿತದ (Fracture) ರಿಸ್ಕ್ ಅನ್ನು ‘ಡಿ’ ವಿಟಮಿನ್‌ನಿಂದ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಹಾಗಿದ್ದಾಗ ಮೇಲೆ ತಿಳಿಸಿರುವ ಉರಿಯೂತ ಮತ್ತು ‘ಡಿ’ ವಿಟಮಿನ್‌ನ ಲಿಂಕ್ ಬಗ್ಗೆ ನಾವು ಹೆಚ್ಚು ಮಹತ್ವ ಕೊಡುವುದು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ. ಅವರ ಪ್ರಕಾರ, ಇವೆರಡಕ್ಕೆ ಸಂಬಂಧವಿದೆ ಎಂದಮಾತ್ರಕ್ಕೆ ಒಂದು ಮತ್ತೊಂದಕ್ಕೆ ಕಾರಣ ಎಂದು ಹೇಳಲು ಬರುವುದಿಲ್ಲ.

ಅವರು ಇತ್ತೀಚಿನ ಕೋವಿಡ್-೧೯ರ ಉದಾಹರಣೆ ಕೊಡುತ್ತಾ, ಕೋವಿಡ್ ರೋಗಿಗಳಲ್ಲಿ ವಿಟಮಿನ್ ‘ಡಿ’ ಪ್ರಮಾಣ ಕಡಿಮೆ ಎಂದಮಾತ್ರಕ್ಕೆ ಕೋವಿಡ್-೧೯ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುವುದಿಲ್ಲ ಎನ್ನುತ್ತಾರೆ. ಇಲ್ಲಿ ಒಂದು ಅಂಶ ಗಮನಿಸಬೇಕು- ಇಂತಹ ರೋಗಿಗಳು ಕಾಯಿಲೆಯ ಕಾರಣದಿಂದ ಮನೆಯ ಒಳಗೇ ಇರುವುದರಿಂದ ಹೊರಗೆ ಹೋಗಿ
ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ. ಹಾಗಾಗಿ ವಿಟಮಿನ್ ‘ಡಿ’ ಮತ್ತೂ ಕಡಿಮೆಯಾಗುತ್ತದೆ. ಇನ್ನೊಂದು ವಿಚಾರದ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ- ವಿಟಮಿನ್ ‘ಡಿ’ ದೇಹ ದಲ್ಲಿರುವ ಕಡಿಮೆ ಪ್ರಮಾಣ ಎಂದರೆ ಯಾವ ಸಂಖ್ಯೆಯನ್ನು ನಾವು ಹೇಳಬೇಕು ಎಂಬುದರಲ್ಲಿಯೇ ಗೊಂದಲವಿದೆ.

ಇದು ರಕ್ತದಲ್ಲಿ ೨೦-೩೦ರ ಪ್ರಮಾಣದಲ್ಲಿ ಇದ್ದಾಗ ಸಹಿತ ಅದರಿಂದ ಕೆಟ್ಟ ಪರಿಣಾಮಗಳು ಕಂಡುಬಂದುದಿಲ್ಲ. ಇದು ತೀರಾ ಕಡಿಮೆ ಪ್ರಮಾಣಕ್ಕೆ ತಿರುಗಿದಾಗ ಮಕ್ಕಳಲ್ಲಿ ರಿಕೆಟ್ಸ್ ಕಾಯಿಲೆಯೂ, ವಯಸ್ಕರಲ್ಲಿ ಆಸ್ಟಿಯೋಪೋರೋಸಿಸ್ ಅಂದರೆ ಮೂಳೆಯು ಶಿಥಿಲಗೊಳ್ಳುವ ಕಾಯಿಲೆಯೂ ಉಂಟಾಗುತ್ತದೆ. ಆದರೆ ಸಣ್ಣ ಪ್ರಮಾಣ ದಲ್ಲಿ ವಿಟಮಿನ್ ‘ಡಿ’ ಕಡಿಮೆಯಾದಾಗ ಗಂಭೀರ ಕಾಯಿಲೆಗಳಾದ ದಾಖಲೆಗಳಿಲ್ಲ.

ಹಸುವಿನ ಹಾಲು, ದವಸ-ಧಾನ್ಯಗಳನ್ನು ನಿಗದಿತ ಪ್ರಮಾಣದಲ್ಲಿ ಕೊಟ್ಟರೆ ಮಕ್ಕಳಲ್ಲಿ ರಿಕೆಟ್ಸ್ ಬರುವುದನ್ನು ಸಂಪೂರ್ಣ ನಿಲ್ಲಿಸಬಹುದು. ಆದರೆ ಹೆಚ್ಚು ಪ್ರಮಾಣದ ವಿಟಮಿನ್ ‘ಡಿ’ ಕೊಡುವುದರಿಂದ ವಯಸ್ಕರಲ್ಲಿ ಮೂಳೆ ಶಿಥಿಲಗೊಳ್ಳುವುದನ್ನು
ಮತ್ತು ಮೂಳೆಮುರಿತವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಹೆಚ್ಚಿನ ಪ್ರಮಾಣದ ವಿಟಮಿನ್ ‘ಡಿ’ ಕಿಡ್ನಿಯನ್ನು ಶಿಥಿಲಗೊಳಿಸುತ್ತದೆ, ಮೂಳೆಯ ನೋವನ್ನೂ ತರುತ್ತದೆ.

ಗುಳಿಗೆಯ ರೂಪದಲ್ಲಿ ವಿಟಮಿನ್ ‘ಡಿ’ ಸೇವಿಸುವ ಮೊದಲು ರಕ್ತದಲ್ಲಿನ ಅದರ ಪ್ರಮಾಣದ ಬಗ್ಗೆ ಪರೀಕ್ಷಿಸಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಡಾ.ಹೋಲಿಸ್ ಎಂಬ ತಜ್ಞರು, ‘ವಿಟಮಿನ್ ‘ಡಿ’ ಅನ್ನು ಪ್ರತಿದಿನ ೧೦,೦೦೦ ಅಂತಾರಾಷ್ಟ್ರೀಯ ಯುನಿಟ್‌ನಷ್ಟು ನಾನು ಮತ್ತು ನನ್ನ ಇಡೀ ಕುಟುಂಬ ಕಳೆದ ೧೫ ವರ್ಷಗಳಿಂದ ಸೇವಿಸಿದ್ದೇವೆ. ಅದರಿಂದ ಯಾರಲ್ಲೂ ಕೆಟ್ಟ ಪರಿಣಾಮಗಳು ಕಂಡುಬರಲಿಲ್ಲ’ ಎಂದು ನುಡಿಯುತ್ತಾರೆ.

ಯಾರಲ್ಲಿ ವಿಟಮಿನ್ ‘ಡಿ’ ಕಡಿಮೆ ಇದೆ ಎಂದು ವಿವಿಧ ಲಕ್ಷಣಗಳಿಂದ ಕಂಡುಬಂದರೆ ಅಂತಹವರು ಅದನ್ನು ಸೂಕ್ತ ಪ್ರಮಾಣದಲ್ಲಿ ನಿಯಮಿತವಾಗಿ ದೀರ್ಘಕಾಲ ಸೇವಿಸಬೇಕು ಎಂದು ಇನ್ನೊಬ್ಬ ತಜ್ಞ ಡಾ.ಸೊಟಕೋಸ್ ಅಭಿಪ್ರಾಯ ಪಡುತ್ತಾರೆ. ಅವರ ರಕ್ತದ ಮಟ್ಟದ ಬಗ್ಗೆ ಸಂದೇಹ ಬಂದರೆ ರಕ್ತಪರೀಕ್ಷೆ ಮಾಡಿ ತಿಳಿದುಕೊಳ್ಳುವುದು ಒಳ್ಳೆಯದು.
ದೀರ್ಘಕಾಲ ವಿಟಮಿನ್ ‘ಡಿ’ ಕಡಿಮೆಯಾದರೆ ಹಲವು ರೀತಿಯ ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ವಯಸ್ಸಾದವರಲ್ಲಿ ತೀವ್ರಸ್ವರೂಪದ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕೆಲವರು ಒಂದು ರೀತಿಯ ಖಿನ್ನತೆಗೆ (depression) ಒಳಗಾಗಬಹುದು. ಕೆಲವು ಮಕ್ಕಳಲ್ಲಿ ತೀವ್ರಸ್ವರೂಪದ ಅಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ವಿವಿಧ ರೀತಿಯ ಕ್ಯಾನ್ಸರ್ ಕಾಯಿಲೆಗಳೂ ಬರಬಹುದು ಎನ್ನಲಾಗಿದೆ.
ಹಾಗಾಗಿ ವಿಟಮಿನ್ ‘ಡಿ’ ಕಡಿಮೆಯಾಗದಿರಲು ಆದಷ್ಟು ಬಿಸಿಲಿಗೆ ಒಡ್ಡಿಕೊಳ್ಳಲು ಪ್ರಯತ್ನಿಸಬೇಕು. ಜತೆಗೆ, ಕಡಿಮೆ ಪ್ರಮಾಣ ಕಂಡುಬಂದಾಗ ಸೂಕ್ತ ಪ್ರಮಾಣದ ವಿಟಮಿನ್ ‘ಡಿ’ಯನ್ನು ಬಹಳ ದೀರ್ಘಕಾಲ ಸೇವಿಸಬೇಕು.