Thursday, 28th November 2024

ತನುವ ತಂಪಾಗಿಸುವ ಕಡಲ ತಡಿಯ ನೀರು

ಸುಪ್ತ ಸಾಗರ

rkbhadti@gmail.com

ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ, ನೀರಿನ ಮೂಲಗಳಿಲ್ಲದ ಹಾಗೂ ಅಂತರ್ಜಲವೇ ಇಲ್ಲದ ಬಹರೈನ್, ಕತಾರ್‌ ನಂಥ ರಾಷ್ಟ್ರಗಳು ಸಮುದ್ರದ ನೀರನ್ನೇ ನಿರ್ಲವಣೀಕರಣ (ಡಿಸ್ಯಾಲಿನೇಷನ್) ಪ್ರಕ್ರಿಯೆ ಮೂಲಕ ನೀರನ್ನು ಶುದ್ಧೀಕರಿಸಿ ಬಳಸುತ್ತಿವೆ. ಇಡೀ ಶುದ್ಧೀಕರಣ ಪ್ರಕ್ರಿಯೆ ಸಮುದ್ರದಲ್ಲೇ ನಡೆಯುವುದು ಇನೊಂದು ವಿಶೇಷ.

ಸಮುದ್ರವೆಂದರೆ ಅದರ ಅಗಾಧ ಆಳ-ವಿಸ್ತಾರ, ಮೇಲೆದ್ದು ಅಬ್ಬರಿಸುವ ದೈತ್ಯ ಅಲೆಗಳು, ಮೈಲುಗಳವರೆಗೆ ಕೇಳುವ ಬೋರ್ಗರೆತ, ದಂಟೆಗುಂಟ ರಾಶಿರಾಶಿ ಬಿದ್ದ ಮರಳ ದಿನ್ನೆಗಳು, ಚರ್ಮವನ್ನು ಚುರುಗುಟ್ಟಿಸುವ ಬಿಸಿಲು, ಮೈಗಂಟಿ ಕೊಳ್ಳುವ ಉಪ್ಪುಪ್ಪು ನೀರು, ಮೂಗಿಗೆ ರಾಚುವ ಮೀನಿನ ವಾಸನೆ… ಒಟ್ಟಾರೆ ನಮ್ಮಲ್ಲಿನ ಸಮುದ್ರ ದಂಡೆಯ ಚಿತ್ರಣ ತುಸು ರೌದ್ರವೇ.

ಇದೇ ಸಂದರ್ಭದಲ್ಲಿ ತಳ ಕಾಣುವಷ್ಟು ತಿಳಿಯಾದ ನೀಲ ನೀರು, ಹೆಚ್ಚೆಂದರೆ ಸೊಂಟದವರೆಗೆ ನೀರು ಬರುವ ಆಳ. ಗಾಳಿಗೆ ತಕ್ಕಂತೆ ಹೆಚ್ಚೇನೂ ಅಬ್ಬರಿಸದ ತಿಳಿ ತೆರೆಗಳು. ಬಿಸಿಲಿದ್ದರೂ ಮೈ ಕಮರಿಸದ ಸೌಮ್ಯಭಾವ. ತೆರೆಗಳ ಮೇಲಿಂದ ಬೀಸಿ ಬರುವ ತಂಗಾಳಿ. ಇದ್ದೂ ಇಲ್ಲದಂತಿರುವ ಮೆಲುದನಿ. ಬೊಗಸೆಯಲ್ಲಿ ಮೊಗೆದು ಕುಡಿದರಷ್ಟೇ ಅರಿವಿಗೆ ಬರುವ ಉಪ್ಪಿನ ರುಚಿ. ಈಚಿನ ತೀರದಲ್ಲಿ ನಿಂತರೆ ಕಾಣುವ ಆಚೆ ತೀರ, ಇಲ್ಲವೇ ಜಲರಾಶಿಯ ಮೇಲೆ ಸಾಗಿ ಹೋಗುವ -ಓವರ್‌ನ ಮೇಲೆ ಚಲಿಸುವ ವಾಹನಗಳು…ಯಾವುದೋ ಬೃಹತ್ ಸರೋವರವನ್ನು ಬಣ್ಣಿಸುತ್ತಿದ್ದೇನೆಂದುಕೊಳ್ಳಬೇಡಿ.

ಇದೂ ಸಹ ಸಾಗರದ ಚಿತ್ರಣವೇ. ಒಂದೇ ವ್ಯತ್ಯಾಸ ಇಂಥ ಸಮುದ್ರ ತೀರ ಇರುವುದು ಕೊಲ್ಲಿ ದ್ವೀಪ ರಾಷ್ಟ್ರಗಳಂಚಿನಲ್ಲಿ. ನಾಲ್ಕೆಂಟು ವರ್ಷಗಳ ಹಿಂದೆ, ಹತ್ತು ವರ್ಷಗಳೇ ಕಳೆದಿರಬೇಕು, ಬಹರೈನ್, ಕುವೈತ್, ಕತಾರ್, ಸೌದಿಯ ಸಮುದ್ರ ಗಳಗುಂಟ ಓಡಾಡಿದಾಗ ಕೆಲವೊಮ್ಮೆ ನನಗೂ ಅದು ಸಮುದ್ರವೇ, ಸರೋವರವೇ ಎಂಬ ಅನುಮಾನ ಮೂಡಿದ್ದು ಸುಳ್ಳಲ್ಲ.
ಇವೆಲ್ಲವೂ ಒಂದಕ್ಕೊಂದು ಅಂಟಿಕೊಂಡೇ ಇರುವ ರಾಷ್ಟ್ರಗಳು. ಶಿರಸಿ ಮೂಲದ ಗೆಳೆಯ ಕಿರಣ್ ಉಪಾಧ್ಯಾಯ, ಮಂಗಳೂರಿನ ಆಸ್ಟಿನ್ ಸಂತೋಷ್, ಕೃಷ್ಣಭಟ್ ಸೇರಿದಂತೆ ಬಹರೇನ್‌ನಲ್ಲಿರುವ ಒಂದಷ್ಟು ಕನ್ನಡಿಗ ಗೆಳೆಯರು, ಕತಾರ್ ಪೆಟ್ರೋಲಿಯ್ಂನಲ್ಲಿದ್ದ ಬೆಳಗಾವಿ ಮೂಲದ ಹಿರಿಯ ಮಿತ್ರ ಅರವಿಂದ್‌ಪಾಟೀಲ್ ಸೇರಿದಂತೆ ಅಲ್ಲಿನ ಒಂದಷ್ಟು ಕನ್ನಡಿಗರು ಒಟ್ಟಾಗಿ ಆಹ್ವನಿಸಿದ್ದ ಮೇರೆಗೆ ಒಂದು ವಾರದ ಕೊಲ್ಲಿ ರಾಷ್ಟ್ರಗಳ ಪ್ರವಾಸಕ್ಕೆ ಹಿರಿಯ ಮಿತ್ರ ಯಶವಂತ್ ಸರದೇಶಪಾಂಡೆ ಯವರ ಜತೆಗೆ ವಿಮಾನವೇರಿದ್ದಾಗ ನನ್ನ ಕಲ್ಪನೆಗಳೇ ಬೇರೆ ಇತ್ತು.

ಮೊದಲೇ ಮರುಭೂಮಿಯ ದೇಶಗಳು. ಅಲ್ಲಿ ಬಹುಶಃ ಕುಡಿಯುವ ನೀರಿಗೂ ತತ್ವಾರವಿರಬೇಕು. ರುಚಿಯೇ ಇಲ್ಲದ ಸೌಳು ನೀರನ್ನೇ ಕುಡಿದು ಹತ್ತು ದಿನ ಬದುಕಬೇಕು. ಮಿನರಲ್‌ವಾಟರ್ ಸಿಕ್ಕರೂ ದುಬಾರಿಯಿರಬೇಕು. ಎರಡು ಮೂರು
ದಿನಕ್ಕೊಮ್ಮೆ ಸ್ನಾನ ಮಾಡಲು ಸಾಧ್ಯವಾದರೆ ಅದೇ ಹೆಚ್ಚಿರಬೇಕು. ಅದೂ ಹೋಟೆಲ್ ಗಳಲ್ಲಿ ಹಣಕೊಟ್ಟ ಸ್ನಾನಕ್ಕೆ ಬಕೆಟ್ ನೀರನ್ನು ಪಡೆಯಬೇಕಿರಬೇಕು. ಹೀಗೆಲ್ಲ ಯೋಚಿಸಿ ಅಲ್ಲಿನ ಕರೆನ್ಸಿಗೆ ನಮ್ಮ ರೂಪಾಯಿಯನ್ನು ತಾಳೆ ನೀರಿನ ಲೆಕ್ಕಾಚಾರಕ್ಕೆ
ಇಳಿದಿದ್ದೆ.

ಆದರೆ, ಅಲ್ಲಿ ಹೋಗಿಳಿದಾಗ ಕಂಡ ಚಿತ್ರಣವೇ ಬೇರಿತ್ತು. ಎಲ್ಲಿಯೂ ನೀರಿನ ಬಳಕೆಗೆ ಯಾವುದೇ ರೀತಿಯ ನಿರ್ಬಂಧ ವಿರಲಿಲ್ಲ. ಹೋಟೆಲ್‌ಗಳಲ್ಲಿ ನಲ್ಲಿ ತಿರುಗಿಸಿದರೆ ಹೇರಳ ಸ್ವಚ್ಛ ನೀರು ಸುರಿಯುತ್ತಿತ್ತು. ಬಚ್ಚಲಿನಲ್ಲಿ ಟಬ್‌ನ ತುಂಬ ಬಿಸಿ ನೀರು ಹಬೆಯಾ ಡುತ್ತಿತ್ತು. ಎಲ್ಲೆಡೆ ಧೈರ್ಯವಾಗಿ ಕುಡಿಯಬಹುದಾಗಿದ್ದ ನೀರು ಸಿಗುತ್ತಿತ್ತು. ಬೆಂಗಳೂರಿಗಿಂತಲೂ ನೀರಿನ ಸಮೃದ್ಧತೆ ಅಲ್ಲಿದ್ದಂತಿತ್ತು. ನನ್ನ ಊಹೆ-ಕಲ್ಪನೆಗಳೆಲ್ಲ ತಲೆಕೆಳಗಾಗಿತ್ತು. ಅಚ್ಚರಿಯ ಮೇಲೆ ಅಚ್ಚರಿ. ಹೇಗೆ ಸಾಧ್ಯ? ಹೆಚ್ಚೆಂದರೆ ವರ್ಷಕ್ಕೆ
200 ರಿಂದ 250 ಮಿಲಿಮೀಟರ್ ಮಳೆ ಬೀಳುವ, ಕಣ್ಣು ಹಾಯಿಸಿದಷ್ಟು ದೂರವೂ ಒಣ ಬಯಲು.

ಉದ್ದಕ್ಕೆ ಮೈ ಚಾಚಿ ಮಲಗಿರುವ ರಸ್ತೆಗಳಲ್ಲಿ ಕಣ್ಣುಗಳನ್ನು ವಂಚಿಸುವ ಬಿಸಿಲ್ಗುದುರೆ. ಹೆಚ್ಚೆಂದರೆ ಎಲ್ಲೋ, ಹತ್ತಿಪ್ಪತ್ತು ಕಿ.ಮೀ.
ಅಂತರದಲ್ಲಿ ಕಾಣುವ ಓಯಸಿಸ್‌ಗಳ ಮಡಿಲ್ಲಿ ಒಂದಷ್ಟು ಖರ್ಜೂರದ ತೋಪು. ಅದೂ ಶುದ್ಧ ನೀರಲ್ಲ. ಸಮುದ್ರದ ನೀರು ಒಳನಾಡಿನ ನೆಲಕ್ಕೆ ಜಿನುಗಿ ಹರಿದು ನಿರ್ಮಾಣವಾದ ಸವುಳು ಇಲ್ಲವೇ ಜವುಳೂ ಭೂಮಿ. ಇಂಥ ಸನ್ನಿವೇಶದಲ್ಲಿ ಅಲ್ಲಿರುವ ಅಷ್ಟೂ ಜನರಿಗೆ ಯಾವುದೇ ರೀತಿಯಲ್ಲೂ ನೀರಿನ ಕೊರತೆಯೇ ಕಾಡದಂತೆ ನಿರ್ವಹಿಸುತ್ತಿರುವ ಜಾಣ್ಮೆ ನಿಜಕ್ಕೂ ಕುತೂ ಹಲಕ್ಕೆ ಕಾರಣವಾಗಿತ್ತು.

ಗೆಳೆಯರೆದುರು ಈ ಕುತೂಹಲವನ್ನು ಬಿಚ್ಚಿಟ್ಟಾಗ ಫಕ್ಕನೆ ಗುಟ್ಟುಬಿಟ್ಟುಕೊಡದ ರೀತಿಯಲ್ಲಿ ನಕ್ಕರು. ಮರುದಿನ ನಗರ ಸಂಚಾರ ಹೊರಟಾಗ ಕಂಡದ್ದು ರಸ್ತೆಯ ಇಕ್ಕೆಲಗಳಲ್ಲೂ ನಗುತ್ತ ನಳನಳಿಸುತ್ತಿದ್ದ ಹಚ್ಚ ಹಸುರಿನ ಉದ್ಯಾವನ. ಸರಕಾರಿ ಕಚೇರಿಗಳ ಆವರಣದಲ್ಲಿ, ಅದ್ಧೂರಿ ಮಸೀದಿಗಳ ಆವರಣದ ಸುತ್ತ ಕಾಣುವ ಹುಲ್ಲುಹಾಸು. ಕೊಲ್ಲಿ ರಾಷ್ಟ್ರಗಳಲ್ಲೆಲ್ಲ ಇದೇ ದೃಶ್ಯ. ಮಳೆಯೇ ಇಲ್ಲದ ನೆಲದಲ್ಲಿ ಇದು ಹೇಗೆ ಸಾಧ್ಯ? ತುಸು, ನಿಧಾನಕ್ಕೆ ಹೂಗಿಡಗಳ ಬುಡಕ್ಕೆ ಹೋಗಿ ನಿಂತರೆ ಕಂಡೂ ಕಾಣದಂತೆ ಇಣುಕುತ್ತಿದ್ದವೂ ಪುಟ್ಟ ಕಪ್ಪು ಪೈಪುಗಳು.

ಪ್ರತಿ ಮನೆ, ಹೋಟೆಲ್, ಸರಕಾರಿ ಕಚೇರಿಗಳು, ಸಾರ್ವಜನಿಕ ಕಟ್ಟಡಗಳಿಂದ ಹೊರಬರುವ ಎಲ್ಲ ದ್ರವ ತ್ಯಾಜ್ಯವೂ
ಪರಿಷ್ಕರಣೆಗೊಳಪಟ್ಟು ಶುದ್ಧಗೊಂಡು ಉದ್ಯಾನಕ್ಕೆ ಪೂರೈಕೆಯಾಗುತ್ತಿತ್ತು. ಒಂದೇ ಒಂದು ಹನಿಯೂ, ಕೊನೆಗೆ ನಮ್ಮ ಟಾಯ್ಲೆಟ್ ನಿರು ಸಹ ವ್ಯರ್ಥವಾಗಿ ಚರಂಡಿ, ಕೊನೆಗೆ ಪಕ್ಕದಲ್ಲೇ ಇದ್ದ ಸಮುದ್ರ ಸೇರುತ್ತಿರಲಿಲ್ಲ. ಹೀಗಾಗಿ ಅಲ್ಲಿನ ಸಮುದ್ರದ ನೀರೂ ಶುದ್ಧ ಸಟಿಕ. ನಾವಲ್ಲಿ ಇದ್ದಾಗಲೇ ರಾತ್ರಿ ಒಂದಷ್ಟು ತುಂತುರು ಮಳೆಯ ಸೇಚನವಾಗಿತ್ತು. ನಮ್ಮಲ್ಲಾಗಿದ್ದರೆ ಸರಿಯಾಗಿ ರಸ್ತೆಯೂ ತೋಯ್ಯುತ್ತಿರಲಿಲ್ಲ. ಆದರೆ ಅಲ್ಲಿ ಮರುದಿನ ನೋಡಿದರೆ, ಬಯಲುಗಳೆಲ್ಲ ಕೆಸರು ಗುಂಡಿಯಾಗಿತ್ತು. ಅಷ್ಟು ಕಡಿಮೆ ಮಳೆಗೆ? ಅಲ್ಲಿನ ಮಣ್ಣಿನ ಗುಣವದು. ಒಂದು ಹನಿಯನ್ನೂ ವ್ಯರ್ಥವಾಗಿ ಹರಿದು ಸಮುದ್ರ ಸೇರಲು ಬಿಡುವುದಿಲ್ಲ. ಆ ಮಣ್ಣಿನ ಗುಣವೇ ಅಲ್ಲನ ನಿವಾಸಿಗಳಿಗೂ. ಹೀಗಾಗಿ ಅವರಿಗೆ ನೀರಿನ ಕೊರತೆ ಎಂದಿಗೂ ಕಾಣಿಸಿಲ್ಲ; ಸತ್ಯ ಅರ್ಥವಾಗಿತ್ತು.
ಮರುದಿನದ ಪಯಣ ನಿರ್ಲವಣೀಕರಣ ಘಟಕಕ್ಕೆ.

ಹೌದು, ಪಕ್ಕದಲ್ಲೇ ಮಲಗಿದ್ದ ಸಮುದ್ರದ ನೀರನ್ನು ಬೃಹತ್ ಜಾಲರಿಗಳಲ್ಲಿ ಸೋಸಿ ಶುದ್ಧೀಕರಿಸಿ ಕುಡಿಯುವ ಕಲೆ ಅವರಿಗೆ ಸಿದ್ಧಿಸಿದೆ. ಈ ಸಾಹಸಕ್ಕೆ ಅಗತ್ಯ ಬೃಹತ್ ಪ್ರಮಾಣ ವಿದ್ಯುತ್‌ನ ಅವಶ್ಯಕತೆಯನ್ನು ಅವರು ಪೂರೈಸಿಕೊಳ್ಳುವುದು ಹೇಗೆ? ಅದು ಬಹರೈನ್‌ನ ಅಲ್ ದೌರ್ ನಿರ್ಲವಣೀಕರಣ ಘಟಕ. ಇಡೀ ಘಟಕಕ್ಕೆ ಪೂರೈಕೆಯಾಗುತ್ತಿದ್ದುದು ಪರ್ಯಾಯ ಇಂಧನ ಶಕ್ತಿ. ಹೇರಳವಾಗಿರುವ ಸೌರಶಕ್ತಿ, ಪವನ ಶಕ್ತಿ ಹಾಗೂ ಭರತ ಶಕ್ತಿಗಳನ್ನೇ ಬಳಸಿಕೊಂಡು ನೀರಿನಲ್ಲಿರುವ ಲವಣಾಂಶ
ತೆಗೆದು ಶುದ್ಧ ನೀರನ್ನು ನಗರಕ್ಕೆ ಪೂರೈಸಲಾಗುತ್ತಿತ್ತು.

ಅಧಿಕವಾಗಿರುವ ಉಪ್ಪು ನೀರಿನ ಸಾಂದ್ರತೆ ಅಳೆಯಲು ಪಾಟ್ರ್ಸ್ ಆಫ್ ಮಿಲಿಯನ್ (ಪಿಒಎಂ) ಎಂಬ ಮಾಪಕವನ್ನು ಬಳಸ ಲಾಗುತ್ತದಂತೆ. ಅಲ್‌ದೌರ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ, ಅಮೆರಿಕನ್ ಥಾಮಸ್ ಇಡೀ ಘಟಕವನ್ನು ಬ್ಯಾಟರಿ ಚಾಲಿತ ವಾಹನದಲ್ಲಿ ಕುಳ್ಳಿರಿಸಿಕೊಂಡು ತೋರಿಸುತ್ತ ವಿವರಿಸುತ್ತಿದ್ದರು. ಸಾಮಾನ್ಯವಾಗಿ ನಾವೆಲ್ಲ ಕುಡಿಯುವ ನೀರು ೧೦೦೦ದಿಂದ ೩೦,೦೦೦ ಪಿಒಎಂ ಹೊಂದಿದ್ದು, ಶುದ್ಧೀಕರಿಸಿದ ನೀರು ೧೦೦೦ ಪಿಒಎಂ ಹೊಂದಿರುತ್ತದೆ. ಈ ಮೂಲಕ ಹೆಚ್ಚಿನ ಲವಣಾಂಶ ವಿರುವ ಸಮುದ್ರದ ನೀರನ್ನು ೧೦೦೦ ದಿಂದ ೩೦೦೦೦ ಪಿಒಎಂ ವರೆಗೂ ಶುದ್ಧೀಕರಿಸಲು ಸಾಧ್ಯವಿದೆ.(ಒಂದು ಅಂಶ ಗಮನಿಸಿ ನೀರಿನಲ್ಲಿ ಪಿಒಎಂ ಹೆಚ್ಚಿದಷ್ಟೂ ಅದು ಶುದ್ಧ ನೀರು ಎನಿಸಿಕೊಳ್ಳುತ್ತದೆ).

ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ, ನೀರಿನ ಮೂಲಗಳಿಲ್ಲದ ಹಾಗೂ ಅಂತರ್ಜಲವೇ ಇಲ್ಲದ ಬಹರೈನ್, ಕತಾರ್‌ ನಂಥ ರಾಷ್ಟ್ರಗಳು ಸಮುದ್ರದ ನೀರನ್ನೇ ನಿರ್ಲವಣೀಕರಣ (ಡಿಸ್ಯಾಲಿನೇಷನ್) ಪ್ರಕ್ರಿಯೆ ಮೂಲಕ ನೀರನ್ನು ಶುದ್ಧೀಕರಿಸಿ ಬಳಸುತ್ತಿವೆ. ಇಡೀ ಶುದ್ಧೀಕರಣ ಪ್ರಕ್ರಿಯೆ ಸಮುದ್ರದಲ್ಲೇ ನಡೆಯುವುದು ಇನೊಂದು ವಿಶೇಷ. ಹೀಗಾಗಿ ಇಡೀ ಘಟಕಕ್ಕೆ ಹೆಚ್ಚಿನ ಭೂಮಿಯೇ ಬೇಡ. ಸಮುದ್ರದ ನೀರನ್ನು ಅಲ್ಲೇ ಆವಿಯಾಗಿಸಿ ಅಲ್ಲೇ ಅದನ್ನು ಸಂಗ್ರಹಿಸಿ ಬೃಹತ್ ಕೊಳವೆಗಳ
ಮೂಲಕ ತಂದು ಸಂಗ್ರಹಿಸಲಾಗುತ್ತದೆ.

ಸಮುದ್ರದ ಕಿನಾರೆಗಳಲ್ಲಿ ಸ್ಥಾಪಿಸಲಾದ ಬೃಹತ್ -ನಿನ ಮೂಲಕ ಸಮುದ್ರದಲ್ಲೇ ನೀರನ್ನು ಕುದಿಸಿ ಒಂದು ಹಂತದಲ್ಲಿ ಶುದ್ದೀಕರಿಸಲಾಗುತ್ತದೆ. ಇದರಲ್ಲಿ ಅತ್ಯಂತ ಪ್ರಾಥಮಿಕ ವಿಧಾನ ರಿವರ್ಸ್ ಆಸ್ಪಾಸಿಸ್ (ಆರ್‌ಓ). ಅದು ಬಿಟ್ಟರೆ ‘ವಾಕ್ಯೂಮ್
ಡಿಸ್ಟಿಲೇಶನ್’ ಎಂಬ ಅತ್ಯಂತ ಸಾಂಪ್ರದಾಯಿಕ ನೀರು ಶುದ್ಧೀಕರಣ ವಿಧಾನ ಬಳಸಲಾಗುತ್ತದಂತೆ. ಸಮುದ್ರದ ನೀರನ್ನು ನಿರ್ದಿಷ್ಟ ಉಷ್ಣತೆಯಲ್ಲಿ ಕುದಿಸಿ ಅದರಲ್ಲಿನ ಲವಣಗಳನ್ನು ಬೇರ್ಪಡಿಸುವ ಪ್ರಕ್ರಿಯೆ ಇದು.

ಸಮುದ್ರದ ಮೇಲ್ಭಾಗ ವಾತಾವರಣದ ಒತ್ತಡವನ್ನು ಕಡಿಮೆಗೊಳಿಸಿ ಆವಿಯನ್ನು ತಂಪುಗೊಳಿಸಲಾಗುತ್ತದೆ. ಅಲ್ಲಿ ಉತ್ಪತ್ತಿ ಯಾದ ಆವಿಯನ್ನು ಪುನಃ ಸಂಗ್ರಹಿಸಿ ಮತ್ತೆ ತಂಪುಗೊಳಿಸಿ ನೀರನ್ನಾಗಿ ಸಂಗ್ರಹಿಸಲಾಗುತ್ತಿದೆ. ಇನ್ನು ಬಹು ಹಂತದ -ಸ್ ಡಿಸ್ಟಿಲೇಶನ್ ವಿಧಾನ ಗಮನಾರ್ಹ. ನೇರವಾಗಿ ಸಮುದ್ರದ ನೀರಿಗೆ ವಿವಿಧ ಹಂತಗಳಲ್ಲಿ ಶಕ್ತಿಶಾಲಿ ಬೆಳಕಿನ ಕಿರಣಗಳನ್ನು ಹಾಯಿಸಲಾಗುತ್ತದೆ. ಅದರಿಂದ ಆವಿಯಾದ ನೀರನ್ನು ಸಂಗ್ರಹಿಸಿ ಬಳಸಲಾಗುತ್ತದೆ. ಇದಲ್ಲದೇ ‘ಬಹು ಪರಿಣಾಮ ನಿರ್ಲವಣೀಕರಣ (ಮಲ್ಟಿ ಇಫೆಕ್ಟ್ ಡಿಸ್ಟಿಲೇಶನ್) ವಿಧಾನವೂ ಬಳಕೆಯಲ್ಲಿದೆ. ಪೈಪಿನ ಮೂಲಕ ಸಮುದ್ರದ ನೀರನ್ನು ಹಾಯಿಸಿ ಅದಕ್ಕೆ ಬಿಸಿಯನ್ನು ಹಾಯಿಸಲಾಗುತ್ತದೆ. ಪೈಪ್‌ಗಳ ಒಳಗೆ ಅತ್ಯಧಿಕ ಶಾಖದ ಉಗಿ ವೇಗವಾಗಿ ಹಾದಾಗ
ಆವಿಯಾದದ್ದನ್ನು ಸಂಗ್ರಹಿಸಿ ಮತ್ತೆ ಶುದ್ದೀಕರಿಸಲಾಗುತ್ತದೆ.

‘ವಾಟರ್‌ಕಂಪ್ರೇಶನ್’ ಪದ್ಧತಿಯಲ್ಲಿ ಸಮುದ್ರದ ನೀರನ್ನು ಶಕ್ತಿಶಾಲಿ ಜೆಟ್‌ಯಂತ್ರದ ಮೂಲಕ ವೇಗವಾಗಿ ಹರಿಸಿ ಆವಿಯಾಗು ವಂತೆ ಮಾಡಲಾಗುತ್ತದೆ. ಈ ಆವಿಯನ್ನೇ ಮತ್ತೆ ಮತ್ತೆ ಕುದಿಸಿ ಶುದ್ಧೀಕರಿಸಲಾಗುತ್ತದೆ. ಇನ್ನೊಂದು ಸಮುದ್ರದ ನೀರನ್ನು ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಘನೀಕರಿಸಿ ಅದರಿಂದ ಶುದ್ಧ ನೀರನ್ನು ತೆಗೆಯುವ ‘ಪ್ರೀಜ್ ಥಾವ್ ಡಿಸ್ಟಿಲೇಶನ್’ ಪದ್ಧತಿ. ಇದರಲ್ಲಿ ಸಮುದ್ರದ ನೀರಿನಿಂದ ಉಪ್ಪನ್ನೂ ಬೇರ್ಪಡಿಸಿ ತೆಗೆಯಲಾಗುತ್ತದೆ.

ಸೂರ್ಯನ ಬೆಳಕಿಗೆ ಸಮುದ್ರದ ನೀರನ್ನು ಆವಿಯಾಗುವಂತೆ ಮಾಡಿ, ಸಂಗ್ರಹಿಸಿ, ನೀರು ಹರಿಸಿ ಮತ್ತೆ ತಂಪಾಗಿಸಿ ಬಳಸುವ ವಿಧಾನವೂ ಬಳಕೆಯಲ್ಲಿದೆ. ಮೆಂಬರಿನ್‌ಗಳ ಮೂಲಕ ಸಮುದ್ರದ ನೀರನ್ನು ಸಂಗ್ರಹಿಸಿ ವಿಘಟಿಸಿ ವಿದ್ಯುತ್ ಉತ್ಪಾದಿಸಿ ಶುದ್ಧ ನೀರು, ಉಪ್ಪು ಮತ್ತು ವಿದ್ಯುತ್ ಅನ್ನು ಸಹ ಪಡೆಯುವ ‘ಎಲೆಕ್ಟ್ರೋಡಯಲಿಸಿಸ್ ರಿವರ್ಸಲ್’ ಪದ್ಧತಿ ಸಹ ನಡೆಯುತ್ತಿದೆ.

ಇಷ್ಟಾದರೂ ಸಮುದ್ರದ ಜಲಚರಗಳಿಗೆ ಒಮದಿನಿತೂ ತೊಂದರೆಯಾಗದಂತೆ ಎಚ್ಚರ ವಹಿಸುತ್ತಿರುವುದು ಇನ್ನೊಂದು ಗಮನಾರ್ಹ ಸಂಗತಿ. ಇದರಿಂದಲೇ ಸೌದಿ ಅರೇಬಿಯಾ, ಕತಾರ್, ಬಹರೈನ್, ಕುವೈತ್‌ನ ಬಳಕೆಯ ಅಗತ್ಯ ಒಟ್ಟು ನೀರಿನ ಪೈಕಿ ಶೇ.70 ನೀರನ್ನು ಪೂರೈಸಿಕೊಳ್ಳಲಾಗುತ್ತಿದೆಯಂತೆ. ಇನ್ನೂ ವಿಶೇಷವೆಂದರೆ ಜಗತ್ತಿನ ಭೂಪಟದಲ್ಲಿ ಅತ್ಯಂತ ಹಿಮ ದುಳಿದ ದೇಶಗಳೆಂದು ಗುರುತಿಸಲಾಗಿರುವ ಲಿಬಿಯಾದಂಥ ದೇಶಗಳು ನಿರ್ಲವಣೀಕರಣ ವಿಧಾನದಲ್ಲಿ ನೀರು ಪಡೆಯುತ್ತಿವೆ ಯಂತೆ.

ಮುಂದುವರಿದ ದೇಶಗಳಾದ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾ ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿವೆ. ಇಸ್ರೇಲ್ ನೀರಿನ ನಿರ್ವಹಣೆ ಮತ್ತು ತ್ಯಾಜ್ಯ ನೀರು ಮರು ಬಳಕೆಯಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿದೆ. ಇಸ್ರೇಲ್‌ನ ಹೈ- ಮತ್ತು ಟೆಲ್‌ಅವಿ ಸಮುದ್ರ ತಟದಲ್ಲಿ ಅತ್ಯಂತ ಆಧುನಿಕ ನೀರಿನ ಶುದ್ಧೀಕರಣ ಘಟಕಗಳಿದ್ದು, ಇದೀಗ ಭಾರತ ತನ್ನ ತ್ಯಾಜ್ಯ ಸಂಸ್ಕರಣೆಗಾಗಿ ಇಸ್ರೇಲ್‌ನೊಂದಿಗೆ ಒಪ್ಪಂದವೂ ಆಗಿದೆ. ಇಸ್ರೇಲ್‌ನ ಮೆಡಿಟರೇನಿಯನ್ ಸಮುದ್ರ ತಟದ
ಟೆಲ್‌ಅವಿವ್‌ನ ಹತ್ತು ಮೈಲಿ ಪ್ರದೇಶದಲ್ಲಿ ನಿರ್ಲವಣೀಕರಣ ಸ್ಥಾವರವಿದ್ದು ದೇಶದ ಒಟ್ಟು ನೀರಿನ ಅವಶ್ಯಕತೆಯ ಶೇ.20 ನೀರನು ಈ ಒಂದೇ ಘಟಕ (ಇಸ್ರೇಲ್ ಡಿಸಾಲಿನೇಶನ್‌ಎಂಟರ್‌ಪ್ರೈಸಸ್) ಪೂರೈಸುತ್ತಿದೆ.

ಅಲ್ಲಿ ಒಟ್ಟು ೬,೨೭,೦೦೦ ಕ್ಯೂಸೆಕ್ಸ್ ನೀರನ್ನು ಕೃಷಿಗೆ ಪ್ರತಿದಿನ ಬಳಸಲಾಗುತ್ತಿದ್ದು, ಆ ಪೈಕಿ ಶೇ.40 ನೀರನ್ನು ನಿರ್ಲವಣೀ ಕರಣ ವಿಧಾನದಿಂದಲೇ ಪಡೆಯಲಾಗುತ್ತಿದೆಯಂತೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ, ಸಿಂಗಾಪುರವೂ ಹಿಂದೆ ಬಿದ್ದಿಲ್ಲ. ಇನ್ನು ದುಬೈ ಅಂತೂ ಸಾಕಷ್ಟು ದಾಪುಗಾಲಿಟ್ಟು ಓಡುತ್ತಿದೆ.

ಅಲ್ಲಿನ ‘ದುಬೈ ವಿದ್ಯುತ್ ಮತ್ತು ನೀರು ಪೂರೈಕೆ ಪ್ರಾಧಿಕಾರ’ ಸ್ಥಾಪಿಸಿರುವ ‘ಜಬೆಲ್‌ಅಲಿ’ ಘಟಕದ ಮೂಲಕ ನಿತ್ಯ ೨೦-೬೦
ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು 140 ಮಿಲಿಯನ್ ಇಂಪೀರಿಯಲ್ ಗ್ಯಾಲನ್ ನೀರನ್ನು ಸಮುದ್ರದಿಂದಲೇ ಪಡೆ ಯುತ್ತಿದೆ. 2020ನೇ ವೇಳೆಗೆ ಈ ಘಟಕವು ದೇಶಕ್ಕೆ ಅಗತ್ಯ ಸಂಪೂರ್ಣ ನೀರು ಹಾಗೂ ವಿದ್ಯುತ್ ಪೂರೈಸುತ್ತದೆ ಯಂತೆ. ನಾವಿನ್ನೂ ಎಲ್ಲಿ ಇದ್ದೇವೆ ಎಂಬುದನ್ನು ನೋಡಿಕೊಳ್ಳಲು ಇದು ಸಕಾಲ ಎನಿಸುತ್ತಿಲ್ಲವೇ?