ಜಲಸಂರಕ್ಷಣೆ
ಮಿರ್ಲೆ ಚಂದ್ರಶೇಖರ
ಜಲಾನಯನ ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದಾಗಿ ರಾಜ್ಯದ ಅಣೆಕಟ್ಟೆಗಳು ಭಾಗಶಃ ತುಂಬಿ ಜನರಲ್ಲಿ ಆತಂಕ ಮೂಡಿಸಿದೆ. ತುಂಬಿರುವ ನೀರಿನ ಪ್ರಮಾಣದಲ್ಲಿ ಹೂಳಿನ ಪರಿಮಾಣ ಇರುವುದನ್ನು ಮರೆತುಬಿಡುತ್ತೇವೆ. ಭಾರೀ ಮಳೆ ಬೀಳುವ ಸಂದರ್ಭಗಳಲ್ಲಿ ನದಿ ಪಾತ್ರಗಳ ಇಕ್ಕೆಲಗಳಲ್ಲಿ ಹರಿಯು
ವಿಕೆಗೆ ತೊಡಕಾಗುವ ಮರಗಿಡಗಳು, ಮನೆಗಳು ಅಷ್ಟೇ ಏಕೆ ಜೀವಂತ ಪ್ರಾಣಿಪಕ್ಷಿ ಕಡೆಗೆ ಮನುಷ್ಯರನ್ನು ತನ್ನ ತೆಕ್ಕೆಗೆ ಬಾಚಿಕೊಂಡು ಸಮುದ್ರ ಕಡೆಗೆ ರೌದ್ರಾವತಾರದಲ್ಲಿ ಹರಿಯುವುದು.
ತುಂಬಿದ ನದಿಗಳನ್ನು ನೋಡುವುದಕ್ಕೆ ಭಯವಾದರೂ ಹರಿಯುವ ನೀರಿನ ಗಾಂಭೀರ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತೇವೆ. ವೇಗವಾಗಿ ಹರಿಯುವ ಹೊಸನೀರು ಮಣ್ಣು ಮಿಶ್ರಿತವಾಗಿರುವುದರಿಂದ ಕೆಂಪಾಗಿರುತ್ತದೆ, ಹರಿಯುವ ರಭಸಕ್ಕೆ ಭೂಮಿಯ ಮಣ್ಣಿನ ಪದರವನ್ನು ತನ್ನೊಂದಿಗೆ ಕೊಚ್ಚಿಕೊಂಡು ಬರುವುದರಿಂದ ನೀರಿನೊಳಗೆ ಒಂದಷ್ಟು ಭಾಗ ಮಣ್ಣು ಸಹ ಸೇರಿರುತ್ತದೆ. ಅಣೆಕಟ್ಟೆಗಳು ಇರುವಡೆ ಮಣ್ಣು ಜಲಾಶಯಗಳ ತಳದಲ್ಲಿ ಹೂಳು ರೂಪದಲ್ಲಿ ಶೇಖರವಾಗುವುದು, ಇದು ಹರಿಯುವ ನೀರಿನ ಸಹಜ ಕ್ರಿಯೆ, ಪರಿಣಾಮ ಅಣೆಕಟ್ಟೆಗಳ ಶೇಕರಣಾ ಸಾಮರ್ಥ್ಯವು ಮಳೆಗಾಲದಿಂದ ಮಳೆಗಾಲಕ್ಕೆ ಕಡಿಮೆ ಆಗುತ್ತಾ ಬರುತ್ತದೆ.
ನೀರು ಎಲ್ಲಿ ಇರುತ್ತೋ ಅಲ್ಲಿ ಹೂಳಿನ ಗೋಳು ತಪ್ಪಿದ್ದಲ್ಲ. ಹೂಳನ್ನು ನೀರು ನುಂಗುವ ಬಕಾಸುರನೆಂದು ಕರೆಯಬಹುದು. ನೀರಾವರಿ ನಾಲೆಗಳು, ನೀರನ್ನು ಶೇಖರಿಸಿಡುವ ಅಣೆಕಟ್ಟೆಗಳು, ಕೆರೆಕಟ್ಟೆಗಳು, ಕೊನೆಗೆ ನಮ್ಮಮನೆಗಳ ಓವರ್‌ಹೆಡ್ ಟ್ಯಾಂಕ್ ಕೂಡ ಹೂಳಿನಿಂದಾಗಿ ಶುದ್ದತೆಗೆ, ಹರಿಯುವಿಕೆಗೆ ಹಾಗೂ ಸಾಮರ್ಥ್ಯಕ್ಕೆ ಧಕ್ಕೆ ಉಂಟು ಮಾಡುವುದು. ನಾಲೆಗಳಲ್ಲಿ ಏರಿಗಳ ಮೇಲೆ ಉಕ್ಕುವಷ್ಟು ನೀರನ್ನು ಹರಿಸಿದರೂ ಕೊನೆಯ ಭಾಗಕ್ಕೆ ತಲುಪಿಸುವುದು ಕಷ್ಟವಾಗಿದೆ, ಕಾರಣ ನಾಲೆಗಳಲ್ಲಿ ತುಂಬಿರುವ ಹೂಳು.
ಭಾರತದಲ್ಲಿ ಸುಮಾರು ೫೨೦೦ಕ್ಕಿಂತಲೂ ಹೆಚ್ಚು ಭಾರಿ ಮತ್ತು ಮಧ್ಯಮ ಗಾತ್ರದ ಅಣೆಕಟ್ಟೆಗಳು ಹಾಗೂ ಲಕ್ಷಾಂತರ ಸಣ್ಣಪುಟ್ಟ ಚೆಕ್‌ಡ್ಯಾಂಗಳು ಪಿಕಪ್‌ಗಳು ಮಳೆಯ ನೀರನ್ನು ಶೇಖರಿಸಿ ಅವಶ್ಯಕತೆಗೆ ಅನುಗುಣವಾಗಿ ಬೇಕೆಂದಾಗ ಉಪಯೋಗಿಸಿಕೊಳ್ಳಲು ನಿರ್ಮಿಸಲಾಗಿದೆ. ಅಣೆಕಟ್ಟೆಗಳನ್ನು ನಿರ್ಮಿಸಿಕೊಂಡಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ನೀರನ್ನು ಶೇಖರಿಸಿ
ಡಲು ಸಾಕಷ್ಟು ಅಣೆಕಟ್ಟೆಗಳು ಇದ್ದರೂ ಬೇಸಿಗೆ ಬಂತೆಂದರೆ ಜಲಾಶಯಗಳು ಬರಿದಾಗಿ ವ್ಯವಸಾಯಕ್ಕಿರಲಿ ನಗರಗಳಿಗೆ ಕುಡಿಯುವ ನೀರಿಗೂ ಕೊರತೆಯಾಗುವುದು.
ಕರ್ನಾಟಕದಲ್ಲಿನ ಕೆಲವು ಅಣೆಕಟ್ಟೆಗಳಲ್ಲಿ ತುಂಬಿರುವ ಹೂಳಿನ ಪ್ರಮಾಣವನ್ನು ಮತ್ತು ಇದರಿಂದ ನೀರಿನ ಶೇಖರಣೆಯಲ್ಲಿ ಆಗಿರುವ ಕುಂಠಿತವನ್ನು ತಿಳಿಯೋಣ. ನದಿ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಮತ್ತು ನಿಯಂತ್ರಿಸಲು ಇರುವ ಅಧಿಕೃತ ಸಂಸ್ಥೆಯಾದ ಭಾರತ ಸರಕಾರದ ಕೇಂದ್ರ ಜಲ ಆಯೋಗದ ಅಡಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಅಂಗಸಂಸ್ಥೆಗಳು ಪರ್ಯಾವೇಕ್ಷಣೆ ಮಾಡಿ ೨೦೧೫ರಲ್ಲಿ ಜಲ ಆಯೋಗವು ಪ್ರಕಟಿಸಿರುವ ವರದಿಯಲ್ಲಿ ಕರ್ನಾಟಕ ರಾಜ್ಯದ ಕೃಷ್ಣ ರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ, ಬಸವಸಾಗರ, ಆಲಮಟ್ಟಿ, ಭದ್ರಾ, ಮಲಪ್ರಭ, ತುಂಗಭದ್ರ,
ಲಿಂಗನಮಕ್ಕಿ ಮತ್ತು ಘಟಪ್ರಭ ಜಲಾಶಯಗಳಲ್ಲಿ ತುಂಬಿರುವ ಹೂಳಿನ ಪರಿಮಾಣದ ಕುರಿತು ನಮೂದಿಸಲಾಗಿದೆ.
ಇಲ್ಲಿ ಮೈಸೂರು, ಮಂಡ್ಯ ಮತ್ತು ಬೆಂಗಳೂರು ನಗರ ಗಳಿಗೆ ಸಂಬಂಧಿಸಿದಂತೆ ಕಾವೇರಿ ಕಣಿವೆಯಲ್ಲಿ ಬರುವ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ಅಂಕಿಅಂಶಗಳನ್ನು ನೀಡುತ್ತೇನೆ. ಏಕೆಂದರೆ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದಿಂದ ಕಣಿವೆ ಭಾಗದ ಜನರು ಕೊರತೆ ಆದಾಗಲೆಲ್ಲ ನ್ಯಾಯಕ್ಕಾಗಿ ಚಳವಳಿ ನಡೆಸುವುದು ಸಹಜ ಪ್ರಕ್ರಿಯೆ ಆಗಿದೆ. ಇದು ಶಾಶ್ವತವಾಗಿ ಬಗೆಹರಿಯುವ ನಿಟ್ಟಿನಲ್ಲಿ
ಪರಿಹಾರ ಕಂಡುಕೊಳ್ಳಬೇಕಾಗಿದೆ, ಆಗುತ್ತದೆಯೇ? ಆಗುವುದಕ್ಕಿಂತ ಆಗದಿರುವುದೇ ಬಲಿಷ್ಠವಾಗಿದೆ.
ಕಾರಣ ರಾಜಕೀಯ ಇಚ್ಛಾಶಕ್ತಿ, ಮೇಕೆದಾಟು ಯೋಜನೆ ಅನುಷ್ಠಾನವಾದರೆ ಬಗೆಹರಿಯುವುದಿಲ್ಲವೇ? ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ೧೯೩೨ರಲ್ಲಿ ಮೊದಲ ಬಾರಿಗೆ ನೀರು ತುಂಬಿದಾಗ ಇದ್ದ ಶೇಖರಣಾ ಸಾಮರ್ಥ್ಯ ೧೪೦೦.೩೧ ಮಿ.ಕ್ಯೂಮೀ. (೪೯.೫೦ ಟಿಎಂಸಿ) ೨೦೦೯ ರಲ್ಲಿ ನಡೆದ ಸರ್ವೆಯಂತೆ ೧೩೦೬.೪೦ ಮಿ.ಕ್ಯೂಮೀ. (೪೬.೧೪ ಟಿಎಂಸಿ) ಗೆ ಇಳಿದಿದೆ ಅಂದರೆ ೩.೩೬ ಟಿಎಂಸಿ ಯಷ್ಟು ಶೇಖರಣಾ ಸಾಮರ್ಥ್ಯ ಕಡಿಮೆ ಆಗಿದೆ. ಕಬಿನಿ ಅಣೆಕಟ್ಟೆ
ಯಲ್ಲಿ ೧೯೭೪ರಲ್ಲಿ ಮೊದಲ ಬಾರಿಗೆ ನೀರು ತುಂಬಿದಾಗ ಇದ್ದ ಶೇಖರಣಾ ಸಾಮರ್ಥ್ಯ ೫೫೨.೬೩ ಮಿ.ಕ್ಯೂಮೀ. (೧೯.೫೨ ಟಿಎಂಸಿ) ೨೦೧೦ ರಲ್ಲಿ ನಡೆದ ಸರ್ವೆಯಂತೆ ೫೨೯.೫೭ ಮಿ.ಕ್ಯೂಮೀ. (೧೮.೭೦ ಟಿಎಂಸಿ) ಗೆ ಇಳಿದಿದೆ ಅಂದರೆ ೦.೮೨ ಟಿಎಂಸಿ ಯಷ್ಟು ಶೇಖರಣಾ ಸಾಮರ್ಥ್ಯ ಕಡಿಮೆ ಆಗಿದೆ.
ಹಾರಂಗಿ ಅಣೆಕಟ್ಟೆಯಲ್ಲಿ ೧೯೮೨ರಲ್ಲಿ ಮೊದಲ ಬಾರಿಗೆ ನೀರು ತುಂಬಿದಾಗ ಇದ್ದ ಶೇಖರಣಾ ಸಾಮರ್ಥ್ಯ ೨೪೦.೬೯ ಮಿ.ಕ್ಯೂಮೀ. (೮.೫೦ ಟಿಎಂಸಿ) ೨೦೦೯ ರಲ್ಲಿನಡೆದ ಸರ್ವೆಯಂತೆ ೨೧೭.೧೨ ಮಿ.ಕ್ಯೂಮೀ. (೭.೬೭ ಟಿಎಂಸಿ) ಗೆ ಇಳಿದಿದೆ ಅಂದರೆ ೦.೮೩ ಟಿಎಂಸಿ ಯಷ್ಟು ಶೇಖರಣಾ ಸಾಮರ್ಥ್ಯ ಕಡಿಮೆ ಆಗಿದೆ. ಹೇಮಾವತಿ ಅಣೆಕಟ್ಟೆಯಲ್ಲಿ ೧೯೭೯ರಲ್ಲಿ ಮೊದಲ ಬಾರಿಗೆ ನೀರು ತುಂಬಿದಾಗ ಇದ್ದ ಶೇಖರಣಾ ಸಾಮರ್ಥ್ಯ ೧೦೫೦.೬೩ ಮಿ.ಕ್ಯೂಮೀ. (೩೭.೧೧ ಟಿಎಂಸಿ) ೨೦೦೯ರಲ್ಲಿ ನಡೆದ ಸರ್ವೇಯಂತೆ ೯೭೪.೫೦ ಮಿ.ಕ್ಯೂಮೀ. (೩೪.೪೨ ಟಿಎಂಸಿ)ಗೆ ಇಳಿದಿದೆ ಅಂದರೆ ೨.೬೯ ಟಿಎಂಸಿಯಷ್ಟು ಶೇಖರಣಾ ಸಾಮರ್ಥ್ಯ ಕಡಿಮೆ ಆಗಿದೆ.
ಮೇಲಿನ ನಾಲ್ಕು ಅಣೆಕಟ್ಟೆಗಳಿಂದ ಒಟ್ಟು ೭.೭೦ ಟಿಎಂಸಿ ಯಷ್ಟು ಹೂಳು ತುಂಬಿರುವುದರಿಂದ ಅಷ್ಟು ಪ್ರಮಾಣದ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆ ಆಗಿದೆ. ಒಟ್ಟಾರೆ ಶೇಕಡ ೬.೭೨ ರಷ್ಟು ಕಡಿಮೆ ಆಗಿರುವುದು ಕಂಡು ಬರುತ್ತದೆ. ನಾಲ್ಕು ಜಲಾಶಯಗಳಲ್ಲಿ ೨೦೨೨ರ ಅಂತ್ಯಕ್ಕೆ ಸುಮಾರು ೧೫.೦೦ ಟಿಎಂಸಿಗಿಂತಲೂ ಹೆಚ್ಚು ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆ ಆಗಿರುವ ಸಾಧ್ಯತೆ ಇದೆ. ಈ ಸಮಸ್ಯೆ ಪ್ರಪಂಚದಲ್ಲಿರುವ ಎಲ್ಲ ಅಣೆಕಟ್ಟೆಗಳಲ್ಲೂ
ಇರುವಂಥದ್ದೆ. ತುಂಬಿರುವ ಹೂಳನ್ನು ಹೊರತೆಗೆದು, ಸಮಸ್ಯೆಯನ್ನು ಒಂದು ಹಂತದವರೆಗೆ ಕಾವೇರಿ ಕಣಿವೆಯ ಅಣೆಕಟ್ಟೆಗಳಲ್ಲಿ ನಿಯಂತ್ರಿಸಿ ಕೊಂಡರೆ ಬೇಸಿಗೆ ಬೆಳೆಗೆ ಹಾಗೂ ಮೈಸೂರು ಮತ್ತು ಬೆಂಗಳೂರು ನಗರಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರೆತೆ ಬರದಂತೆ ನೋಡಿಕೊಳ್ಳ ಬಹುದು.
ಪ್ರತಿ ವರ್ಷ ಉಂಟಾಗುವ ನೀರಿನ ಹಾಹಾಕಾರವನ್ನು ನೀಗಿಸಬೇಕಾದರೆ ಮಳೆಗಾಲದಲ್ಲಿ ವ್ಯರ್ಥವಾಗಿ ನೀರು ಹರಿದು ಸಮುದ್ರ ಸೇರದಂತೆ ತಡೆದು ನಿಲ್ಲಿಸಬೇಕು. ನೀರನ್ನು ಹೆಚ್ಚು ಪ್ರಮಾಣದಲ್ಲಿ ನಿಲ್ಲಿಸಲು ನಮ್ಮಲ್ಲಿ ಈಗಿರುವ ಅಣೆಕಟ್ಟೆಗಳ ಶೇಖರಣಾ ಸಾಮರ್ಥ್ಯವನ್ನು ಮೂಲ ಸಾಮರ್ಥ್ಯಕ್ಕೆ ವೈಜ್ಞಾನಿಕವಾಗಿ ಪುನರ್ ಸ್ಥಾಪಿಸಿಕೊಳ್ಳಬೇಕು ಹಾಗು ಹೂಳು ಜಲಾಶಯ ಸೇರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಲಾನಯನ ಪ್ರದೇಶದಲ್ಲಿ ಕಾಡುಗಳನ್ನು ಬೆಳೆಸುವುದರಿಂದ ಮಣ್ಣಿನ ಸವಕಳಿ ಕಡಿಮೆಯಾಗಿ ನೆಲದ ಮೇಲ್ಪದರ ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುವು ದಿಲ್ಲ.
ನದಿಪಾತ್ರಗಳಲ್ಲಿ ಮತ್ತು ಜಲಾನಯನ ಪ್ರದೇಶಗಳಲ್ಲಿ ಉಳುಮೆ ಮಾಡುವುದರಲ್ಲಿ ಸುಧಾರಣೆ ತರಬೇಕು. ಆಧುನಿಕ ಯಂತ್ರಗಳಿಂದ ಜಲಾಶಯದಲ್ಲಿ ಹೂಳು ತಳ ಸೇರದಂತೆ ನೀರಿನೊಂದಿಗೆ ಬೆರೆಸುವ ಕ್ರಿಯೆಯಲ್ಲಿ ನದಿ ಮತ್ತು ನಾಲೆಗಳ ಮುಖಾಂತರ ಕಳುಹಿಸುವುದು. ಸಾರ್ವಜನಿಕರು ಅನುಪಯುಕ್ತ ವಸ್ತುಗಳನ್ನು, ತ್ಯಾಜ್ಯ ಹಾಗೂ ಅಗೆದ ಮಣ್ಣು ಇತ್ಯಾದಿಗಳನ್ನು ಹಳ್ಳಕೊಳ್ಳ, ನದಿಗಳಿಗೆ ಹಾಕದಂತೆ ಕ್ರಮವಹಿಸುವುದು, ನದಿಯ ದಂಡೆಗಳಲ್ಲಿ
ಮರಗಳನ್ನು ಬೆಳೆಸಿ ಭದ್ರಪಡಿಸುವುದು ಮತ್ತು ಹಳ್ಳಗಳಲ್ಲಿ ಹಾಗೂ ನದಿಯ ಉದ್ದಕ್ಕೂ ಚೆಕ್‌ಡ್ಯಾಂಗಳನ್ನು ಕಟ್ಟುವುದರಿಂದ ಹೂಳನ್ನು ಅಲ್ಲಲ್ಲೇ ತಡೆದು ಜಲಾಶಯ ಸೇರದಂತೆ ನಿಯಂತ್ರಿಸುವುದು, ಚೆಕ್‌ಡ್ಯಾಂಗಳಲ್ಲಿ ಶೇಖರವಾಗುವ ನೀರು ಬೇಸಿಗೆಯಲ್ಲಿ ಸಮೀಪದ ಹಳ್ಳಿಗಳಿಗೆ ಮತ್ತು ಪ್ರಾಣಿಪಕ್ಷಿ ಗಳಿಗೆ ಕುಡಿಯುವ ನೀರಿಗೆ ಉಪಯೋಗ ಆಗುವುದಲ್ಲದೆ, ಅಂತರ್ಜಲ ವೃದ್ದಿಗೆ ಸಹಕಾರಿಯಾಗುವುದು.
ಈ ನಿಟ್ಟಿನಲ್ಲಿ ಸ್ವತಃ ನನ್ನ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ಬರಪೀಡಿತ ತಾಲೂಕುಗಳಾದ ಶಿರಾ ಮತ್ತು ಪಾವಗಡಗಳಲ್ಲಿ ಮೂವತ್ತಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ಆರು ವರ್ಷಗಳ ಹಿಂದೆ ನಿರ್ಮಿಸಲಾಯಿತು. ಈ ಚೆಕ್ ಡ್ಯಾಂಗಳು ಇಂದಿಗೂ ಚಿಕ್ಕಪುಟ್ಟ ಮಳೆಗೂ ತುಂಬಿ ಅಂತರ್ಜಲ ವೃದ್ಧಿ ಆಗುತ್ತಿರುವುದಲ್ಲದೆ ಪ್ರಾಣಿಪಕ್ಷಿಗಳಿಗೆ ಕುಡಿಯುವ ನೀರಿಗೆ ಸಹಕಾರಿಯಾಗುತ್ತಿವೆ. ನದಿ ಪಾತ್ರಗಳು ಹಾಗೂ ಜಲಾಶಯಗಳ ಅಭಿವೃದ್ಧಿಯ ಬಗ್ಗೆ ಸಮರೋ ಪಾದಿಯಲ್ಲಿ ತಜ್ಞರ ಸಲಹೆಗಳನ್ನು ಪರಿಗಣಿಸಿ ಕಾರ್ಯೋನ್ಮುಖವಾಗಲು ಸಾರ್ವಜನಿಕವಾಗಿ ಹಾಗೂ ಸರಕಾರದ ಮಟ್ಟದಲ್ಲಿ ಚಿಂತನೆಯ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ ಮುಂದೆ ಮೈದುಂಬಿ ಹರಿಯುತ್ತಿದ್ದ ನದಿಗಳು ಗುಪ್ತ ನದಿಗಳಾಗಿ ಜಲಾಶಯಗಳು ಹೂಳಿನಿಂದ ಭರ್ತಿಯಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವವು ನಂತರ ಅವುಗಳ ಇರುವಿಕೆಯನ್ನು ಸಂಶೋಧಿಸಬೇಕಾಗಬಹುದು.
ಕಳೆದ ವರ್ಷಗಳಲ್ಲಿ ಬಿದ್ದ ಮಳೆಯಿಂದ ನಮ್ಮಲ್ಲಿರುವ ಅಣೆಕಟ್ಟೆಗಳಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳಲಾರದೆ ದಿನ ಒಂದರಲ್ಲೇ ೧೫ ಟಿ.ಎಂ.ಸಿ ಗಿಂತಲೂ ಹೆಚ್ಚು ನೀರನ್ನು ನದಿಗೆ ಬಿಟ್ಟಿದ್ದೇವೆ. ಕೇವಲ ಮೂರು ತಿಂಗಳಲ್ಲಿ ೧೫೦ ಟಿ.ಎಂ.ಸಿ ಪ್ರಮಾಣದ ಗಡಿ ದಾಟಿ ನೀರು ಏನೊಂದು ಉಪಯೋಗವಾಗದೆ ನದಿಯಲ್ಲಿ ಹರಿದಿರುವುದು ನಮ್ಮ ಕಣ್ಣ ಮುಂದಿದೆ. ಕಾವೇರಿ ಕಣಿವೆಯ ಜಲಾಶಯಗಳಾದ ಕೃಷ್ಣರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ಅಣೆಕಟ್ಟೆಗಳಲ್ಲಿ ಒಟ್ಟು ೧೧೪.೫೭೧ ಟಿ.ಎಂ.ಸಿ ಶೇಖರಿಸಬಹುದು ಉಪಯುಕ್ತವಾಗದ ನೀರು ೧೨.೮೩ ಟಿ.ಎಂ.ಸಿ., ಕಳೆದರೆ ಉಪಯೋಗ ಆಗುವ ನೀರು ೧೦೧.೭೪೧ ಟಿ.ಎಂ.ಸಿ.ಗಳು ಮಾತ್ರ, ಅಂದಾಜು ೧೦.೦೦ ರಿಂದ ೧೫.೦೦ ಟಿ.ಎಂ.ಸಿ. ಹೂಳನ್ನು ಕಡಿತಗೊಳಿಸಿದರೆ ಉಳಿಯುವುದೇನು? ಅಂಕಿ ಅಂಶ ಗಳ ಪ್ರಕಾರ ನಾವು ಮತ್ತಷ್ಟು ಜಲಾಶಯಗಳನ್ನು, ಪುಟ್ಟಪುಟ್ಟ ಅಣೆಕಟ್ಟೆಗಳನ್ನು ಮತ್ತು ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಶೇಖರಣಾ ಸಾಮರ್ಥ್ಯ ವನ್ನು ಹೆಚ್ಚಿಸಿಕೊಂಡರೆ ಮಾತ್ರ ಮುಂದಿನ ದಿನಗಳು ನಮಗೆ ಸುಭೀಕ್ಷ ದಿನ ಗಳಾಗುವುದು.
ಇಲ್ಲದಿದ್ದರೆ ನದಿಯಲ್ಲಿ ಪ್ರವಾಹದಿಂದಾಗುವ ಅನಾಹುತಗಳ ಜತೆಗೆ ಸಾಕಷ್ಟು ನೀರು ಲಭ್ಯವಿದ್ದರೂ ಹಿಡಿದಿಟ್ಟುಕೊಳ್ಳದಿರುವುದರಿಂದ ನೀರಿನ ಗೋಳು ನಮಗೆ ನಿರಂತರ ಹಾಗೂ ಮಂಡ್ಯದ ಅನ್ನದಾತರ ಹೋರಾಟವು ಕೂಡ ಕೊನೆ ಕಾಣದು.