Monday, 16th September 2024

ತ್ರಿಮೂರ್ತಿಗಳಿಗೆ ಡಿಕೆ ಬ್ರದರ್ಸ್ ಹೇಳಿದ್ದೇನು?

ಬಿಜೆಪಿ ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್ ಮತ್ತು ಉದಯ ಗರುಡಾಚಾರ್ ಅವರು ಕೆಲ ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಈ ಭೇಟಿಯ ಸಂದರ್ಭದಲ್ಲಿ ಅವರು, ‘ನಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ, ದ್ವೇಷ ಬೇಡ’ ಅಂತ ಮನವಿ ಮಾಡಿಕೊಂಡರಂತೆ. ಅಂದ ಹಾಗೆ, ‘ಮುನಿರತ್ನ ಅವರು ಪ್ರತಿನಿಧಿಸುವ ರಾಜರಾಜೇಶ್ವರಿ ನಗರ, ಬೈರತಿ ಬಸವರಾಜ್ ಪ್ರತಿನಿಧಿಸುವ ಕೆ.ಆರ್.ಪುರಂ ಕ್ಷೇತ್ರಗಳಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ದೊಡ್ಡ ಪ್ರಮಾಣದ ಅನುದಾನ ಬಿಡುಗಡೆಯಾಗಿದೆ. ಈ ಹಣದ ಬಳಕೆ ಸರಿಯಾಗಿಲ್ಲ’ ಅಂತ ಡಿಸಿಎಂ ಡಿಕೆಶಿ ಕೊಕ್ಕೆ ಹಾಕಿ ಕುಳಿತಿದ್ದಾರೆ. ಈ ಪೈಕಿ ಮುನಿರತ್ನ ಅವರ ಮೇಲೆ ಡಿಕೆಶಿಗಿಂತ ಅವರ ಸಹೋದರ ಡಿ.ಕೆ.ಸುರೇಶ್ ಅವರಿಗೆ ಜಾಸ್ತಿ ಸಿಟ್ಟಿದೆ. ತಮ್ಮವರ ಮೇಲೆ ಈ ಹಿಂದೆ ಮುನಿರತ್ನ ವಿಪರೀತ ಕೇಸು ಹಾಕಿಸಿ ಹಿಂಸೆ ಕೊಟ್ಟಿದ್ದಾರೆ ಎಂಬುದು ಅವರ ಸಿಟ್ಟಿಗೆ ಕಾರಣವಂತೆ. ಹೀಗಾಗಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಮುನಿರತ್ನ ಅವರನ್ನು ಡಿಕೆಸು ಯಗಾದಿಗಾ  ಕಾಡಿಸತೊಡಗಿದ್ದಾರೆ.

ಹೀಗೆ ಒಂದು ಕಡೆಯಿಂದ ಡಿಕೆಶಿ, ಮತ್ತೊಂದು ಕಡೆಯಿಂದ ಡಿ.ಕೆ.ಸುರೇಶ್ ಹೊಡೆತ ಶುರುವಾಗುತ್ತಿದ್ದಂತೆಯೇ ಮುನಿರತ್ನ ಬಹಿರಂಗವಾಗಿಯೇ ನೋವು ತೋಡಿಕೊಂಡಿದ್ದರು. ಆದರೆ ಬರೀ ನೋವು ತೋರಿಸುತ್ತಾ  ಕೂತರೆ ಅದು ಉಪಶಮನವಾಗಬೇಕಲ್ಲ? ಏನಾದರೂ ಮದ್ದು ಕೊಟ್ಟರೆ ತಾನೇ ಅದು ಗುಣವಾಗುವುದು? ಹಾಗಂತಲೇ ಮುನಿರತ್ನ ಅವರು ಡಿಕೆ ಬ್ರದರ್ಸ್ ಅವರನ್ನು ಸಂಪರ್ಕಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಸಮಾನ ಮನಸ್ಕರಾದ ಬೈರತಿ ಬಸವರಾಜು ಮತ್ತು ಚಿಕ್ಕಪೇಟೆಯ ಶಾಸಕ ಉದಯ ಗರುಡಾಚಾರ್ ಜತೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಡಿ.ಕೆ. ಸುರೇಶ್ ಕೂಡಾ ಇದ್ದುದರಿಂದ ಇವರ ಜತೆ ವಿವರವಾಗಿ ಚರ್ಚೆಯಾಗಿದೆ. ಅಂತಿಮವಾಗಿ, ಇವರು ಹಾರಿಸಿದ ಬಿಳಿ ಬಾವುಟವನ್ನು ನೋಡಿ ಶಾಂತರಾದ ಡಿಕೆಶಿ ಮತ್ತು ಡಿಕೆಸು ತಮ್ಮ ಬತ್ತಳಿಕೆಯಲ್ಲಿನ ಅಸ್ತ್ರ ತೆಗೆದಿದ್ದಾರೆ.

ಮೊದಲು ಅಸ್ತ್ರ ತೆಗೆದ ಡಿ.ಕೆ.ಸುರೇಶ್, ‘ರೀ ಮುನಿರತ್ನ, ನಿಮ್ಮ ಮೇಲಿನ ಕಂಪ್ಲೇಂಟುಗಳನ್ನು ಮರೆಯುತ್ತೇವೆ. ನಾವೇ ಕೊಟ್ಟ ದೂರನ್ನೂ ಹಿಂದೆ ಪಡೆಯುತ್ತೇವೆ. ಆದರೆ ಅದಕ್ಕಾಗಿ ನೀವೊಂದು ಕೆಲಸ ಮಾಡಬೇಕು ಕಣ್ರೀ’ ಎಂದರಂತೆ. ‘ಅದೇನು ಹೇಳ್ರಣ್ಣ ಮಾಡುತ್ತೇನೆ’ ಅಂತ ಮುನಿರತ್ನ ಹೇಳಿದಾಗ, ‘ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದುಬಿಡಿ. ನಿಮ್ಮ ರಾಜೀನಾಮೆಯಿಂದ ತೆರವಾಗುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಅವರನ್ನು ಗೆಲ್ಲಿಸಿಕೊಂಡು ಬನ್ನಿ’ ಎಂದರು. ಯಾವಾಗ ಅವರು ಈ ಮಾತು ಹೇಳಿದರೋ, ಮುನಿರತ್ನ ಮೌನವಾಗಿದ್ದಾರೆ. ಆದರೆ ಮಾತು ಮುಂದುವರಿಸಿದ ಡಿ.ಕೆ.ಸುರೇಶ್, ‘ನೀವು ಕುಸುಮಾ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎಂದ ಮಾತ್ರಕ್ಕೆ ನಾವು ನಿಮಗೆ ಕೈ ಕೊಡುತ್ತೇವೆ ಅಂತಲ್ಲ. ನೀವು ಈ ಕೆಲಸ ಮಾಡಿದ್ದಕ್ಕೆ ಪ್ರತಿಯಾಗಿ ನಿಮ್ಮನ್ನು ಎಮ್ಮೆಲ್ಸಿ ಮಾಡಿಸುತ್ತೇವೆ’ ಎಂದಿದ್ದಾರೆ. ಇದಾದ ನಂತರ ಫೀಲ್ಡಿಗಿಳಿದ ಡಿ.ಕೆ.ಶಿವಕುಮಾರ್ ಅವರು ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಅವರಿಗೆ ತಗಲಿಕೊಂಡಿದ್ದಾರೆ. ‘ರೀ ಬಸವರಾಜ್, ನೀವು ಕಾಂಗ್ರೆಸ್ ಪಕ್ಷಕ್ಕೆ ಬರಲು ನಮ್ಮದೇನೂ ತಕರಾರಿಲ್ಲ, ಆದರೆ ನೀವು ಪಕ್ಷಕ್ಕೆ ಬರುವ ವಿಷಯದಲ್ಲಿ ಸಿಎಂ ಸಿದ್ರಾಮಯ್ಯ ಅವರಿಗೇಕೋ ಸಹಮತ ಇದ್ದಂತೆ ಕಾಣುತ್ತಿಲ್ಲ. ಯಾವ ಕಾರಣಕ್ಕೂ ಆ ಡಾಕ್ಟರ್ ಇದಾರಲ್ಲ? ಅವರು ಮತ್ತು ಬೈರತಿ ಬಸವರಾಜ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳೋದು ಬೇಡ ಅನ್ನುತ್ತಲೇ ಇದ್ದಾರೆ. ಅವರು ನಿಮ್ಮ ಮೇಲೇಕೆ ಈ ಥರ ಸಿಟ್ಟು ಮಾಡಿಕೊಂಡಿದ್ದಾರೋ ನನಗಂತೂ ಗೊತ್ತಿಲ್ಲ. ಅವರ ಮತ್ತು ನಿಮ್ಮ ಮಧ್ಯೆ ಏನು ನಡೆದಿದೆಯೋ? ಅದು ನಿಮ್ಮಿಬ್ಬರಿಗೆ ಮಾತ್ರ ಗೊತ್ತು. ಆದರೆ ಈ ಸಂದರ್ಭದಲ್ಲಿ ನಾನು ನಿಮಗೊಂದು ಸಲಹೆ ಕೊಡುತ್ತೇನೆ. ಅದೆಂದರೆ ನಮ್ಮ ಸೋಷಿಯಲ್ ವೆಲ್  ಫೇರ್ ಮಿನಿಸ್ಟರ್ ಎಚ್.ಸಿ.ಮಹದೇವಪ್ಪ ಇದಾರಲ್ಲ? ಅವರ ಜತೆ ನೀವು ಮಾತನಾಡಿ. ಅವರ ಸಹಕಾರವಿದ್ದರೆ ನಿಮ್ಮ ಮತ್ತು ಸಿಎಂ ನಡುವಿನ ಭಿನ್ನಾಭಿಪ್ರಾಯ ನಿವಾರಣೆಯಾಗಬಹುದು.

ಅದೇನಾದರೂ ಆದರೆ ನೀವು ಕಾಂಗ್ರೆಸ್ಸಿಗೆ ಬರಲು ಯಾವ ಅಡ್ಡಿಯೂ ಇಲ್ಲ’ ಎಂದಿದ್ದಾರೆ. ಇನ್ನು ಉದಯ ಗರುಡಾಚಾರ್ ವಿಷಯದಲ್ಲಿ ಡಿಕೆಶಿ ಮತ್ತು ಡಿ.ಕೆ.ಸುರೇಶ್ ಇಬ್ಬರಿಗೂ ತಕರಾರಿಲ್ಲ. ಯಾಕೆಂದರೆ ಗರುಡಾಚಾರ್ ನಮ್ಮ ಪಕ್ಷಕ್ಕೆ ಬರಲಿ ಅಂತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿರುವುದರಿಂದ, ನಿಮ್ಮದೇನೂ ಪ್ರಾಬ್ಲಮ್ಮೇ ಇಲ್ಲ ಅಂದ ಡಿಕೆಶಿ ಅದೇ ಉದಯ ಗರುಡಾಚಾರ್ ಅವರ ಕಾರಿನಲ್ಲಿ
ಕುಳಿತು ಅವತ್ತು ಅಲ್ಲಿಂದ ಹೊರಟರಂತೆ. ಅಂದ ಹಾಗೆ, ಈ ಎಪಿಸೋಡು ಯಾವ್ಯಾವ ತಿರುವು ಪಡೆದು ಯಾವ ಹಂತ ತಲುಪಿದೆಯೋ ಗೊತ್ತಿಲ್ಲ. ಆದರೆ ಬಿಜೆಪಿಯ ಹಲ ಶಾಸಕರು ಕೈಹಿಡಿಯಲು ಸಜ್ಜಾಗುತ್ತಿರುವುದು ಮಾತ್ರ ನಿಜ. ಬಿಜೆಪಿಗೆ ‘ಹೊಂದಾಣಿಕೆ’ಯ ಕಾಟ ಇನ್ನು, ಕರ್ನಾಟಕದಲ್ಲಿ ಪಕ್ಷದ ಶಾಸಕಾಂಗ ನಾಯಕನಿಲ್ಲದೆ ಶತದಿನೋತ್ಸವ ಆಚರಿಸಿರುವ ಬಿಜೆಪಿಗೆ ಈಗ ಹೊಂದಾಣಿಕೆಯ ಕಾಟ ಶುರುವಾಗಿದೆ. ಅಂದ ಹಾಗೆ, ರಾಜ್ಯ
ವಿಧಾನಸಭೆಯ ಚುನಾವಣೆ  ಫಲಿತಾಂಶ ಮೇ ೧೩ಕ್ಕೆ ಪ್ರಕಟವಾಯಿತಲ್ಲ? ಇದಾಗಿ ನೂರು ದಿನ ಕಳೆದರೂ ಬಿಜೆಪಿಯ ಶಾಸಕಾಂಗ ನಾಯಕ ಯಾರು ಅಂತ ತೀರ್ಮಾನವಾಗಿಲ್ಲ. ಯಡಿಯೂರಪ್ಪ ಅವರಿಂದ ಹಿಡಿದು
ಬಸವರಾಜ ಬೊಮ್ಮಾಯಿ ಅವರ ತನಕ ಹಲವರು ದಿಲ್ಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೂ ಆಗಿದೆ.

ಆದರೆ ಯಾರೇನೇ ಮಾಡಿದರೂ ಕರ್ನಾಟಕ ಘಟಕದ ವಿಷಯದಲ್ಲಿ ಬಿಜೆಪಿ ವರಿಷ್ಠರಿಗೆ ಆಸಕ್ತಿಯೇ ಬರುತ್ತಿಲ್ಲ. ಅರ್ಹತೆಯ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಟರ್ ಎಂಬ ಭಾವನೆ
ಇದೆಯಾದರೂ, ಅವರ ಹಿಂದೆ ಯಡಿಯೂರಪ್ಪ ಇರುವುದು ವರಿಷ್ಠರಿಗೆ ಇಷ್ಟವಾಗುತ್ತಿಲ್ಲ. ಇದಕ್ಕೆ ಕಾರಣ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟುಗಳ ಜತೆ ಯಡಿಯೂರಪ್ಪ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬ ದೂರು ಪದೇ ಪದೆ ಅವರಿಗೆ ತಲುಪುತ್ತಿರುವುದು. ವರುಣಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಯಡಿಯೂರಪ್ಪ ಅವರೇ ಸುಪಾರಿ ಕೊಟ್ಟು ಸೋಲಿಸಿದರು ಅಂತ ಬಂದ ದೂರು ಅಮಿತ್ ಶಾ ಅವರಿಗೆ ಕೋಪ ಬರುವಂತೆ ಮಾಡಿದೆ. ಅಂದ ಹಾಗೆ, ಚುನಾವಣೆಗೂ ಮುಂಚೆ ಬೆಂಗಳೂರಿನ ವಿಜಯನಗರದಲ್ಲಿರುವ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅಮಿತ್ ಶಾ, ‘ನೀವು ಭವಿಷ್ಯದ ಸಿಎಂ ಕ್ಯಾಂಡಿಡೇಟ್’ ಅಂತ ಪ್ರಾಮಿಸ್ ಮಾಡಿದ್ದರಂತೆ. ಇದಾದ ನಂತರ ಚುನಾವಣೆಯ ಸಂದರ್ಭದಲ್ಲಿ ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಅಂತ ಹೋದ ಅಮಿತ್ ಶಾ ಇದನ್ನೇ ಸೂಚ್ಯವಾಗಿ ಹೇಳಿದ್ದರು. ಅವರು ಹಾಗೆ ಹೇಳಿದ ಸಂದರ್ಭದಲ್ಲಿ ವೇದಿಕೆಯಲ್ಲೇ ಇದ್ದ ಯಡಿಯೂರಪ್ಪ ಚಡಪಡಿಸತೊಡಗಿದರಂತೆ. ‘ನಾನು ಅರ್ಜೆಂಟಾಗಿ ನನ್ನ ತವರುಜಿಲ್ಲೆ ಶಿವಮೊಗ್ಗಕ್ಕೆ ಹೋಗಬೇಕು’ ಎನ್ನತೊಡಗಿದರಂತೆ. ಆದರೆ ಈ ರೀತಿ ಹೇಳಿ ಹೊರಟವರು ಮೈಸೂರಿನ ಪ್ರೆಸಿಡೆಂಟ್ ಹೋಟೆಲಿನಲ್ಲಿ ಉಳಿದು ತಮ್ಮ ಆಪ್ತರನ್ನೆಲ್ಲ ಕರೆಸಿ ಸಭೆ ಮಾಡಿದ್ದಾರೆ. ಅಷ್ಟೇ ಅಲ್ಲ, ಸೋಮಣ್ಣ ಗೆಲ್ಲದಂತೆ ನೋಡಿಕೊಳ್ಳಬೇಕು ಅಂತ ಸುಪಾರಿ ಕೊಟ್ಟಿದ್ದಾರೆ. ಇದಾದ ನಂತರ ವರುಣಾ ಕ್ಷೇತ್ರದಲ್ಲಿ ಕನಿಷ್ಠ ೨೫,೦೦೦ ಲಿಂಗಾಯತ ಮತಗಳು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ವಿರುದ್ಧ ಚಲಾವಣೆಯಾಗಿ ಅವರು ಸೋಲುವಂತೆ ಮಾಡಿತು ಎಂಬುದು ಅಮಿತ್ ಶಾ ಅವರಿಗೆ ತಲುಪಿದ ಕಂಪ್ಲೇಂಟು.

ಇದು ಮುಂದುವರಿದು, ಕಾಂಗ್ರೆಸ್ಸಿನ ೨೪ ಕ್ಯಾಂಡಿಡೇಟುಗಳನ್ನು ತೆರೆಯ ಹಿಂದಿನಿಂದ ಯಡಿಯೂರಪ್ಪ ಬೆಂಬಲಿಸಿದರು. ಈ ಪೈಕಿ ೧೯ ಮಂದಿ ಗೆಲುವು ಸಾಧಿಸಿದರು ಎಂಬಲ್ಲಿಯವರೆಗೆ ತಲುಪಿದೆ. ಪರಿಣಾಮ? ಏಕಕಾಲಕ್ಕೆ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನೂ ನಂಬುತ್ತಿಲ್ಲ, ಇಲ್ಲಿನ ಪ್ರಾಕ್ಟಿಕಾಲಿಟಿಯನ್ನು ಹೇಳದ ಸಂತೋಷ್ ಅವರನ್ನೂ ನಂಬುತ್ತಿಲ್ಲ. ಈ ಮಧ್ಯೆ ಕರ್ನಾಟಕದಲ್ಲಿನ ಫೀಡ್‌ಬ್ಯಾಕ್‌ಗಾಗಿ ಇವರಿಬ್ಬರನ್ನೂ ನಂಬದ ಮೋದಿ-ಅಮಿತ್ ಶಾ ಜೋಡಿ ಬೇರೆ ಮೂಲದಿಂದ ಫೀಡ್ ಬ್ಯಾಕ್ ಪಡೆಯುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ಹದಿನೇಳರಿಂದ ಇಪ್ಪತ್ತು ಸೀಟು ಗೆಲ್ಲುತ್ತದೆ. ಹೀಗಾಗಿ ಮುಂದಿನ ಹೆಜ್ಜೆ ಇಡಲು ಇನ್ನಷ್ಟು ಕಾಲ ಕಾದುನೋಡುವುದು ಒಳ್ಳೆಯದು ಎಂದು ಈ ಮೂಲಗಳು ಹೇಳಿವೆಯಂತೆ. ಪರಿಣಾಮ? ರಾಜ್ಯ ಬಿಜೆಪಿಗೆ ಟಾನಿಕ್ ನೀಡುವ ವಿಷಯದಲ್ಲಿ ಮೋದಿ- ಅಮಿತ್ ಶಾ ಜೋಡಿಗೆ ಆಸಕ್ತಿಯೇ ಇಲ್ಲ. ಅಶೋಕ್ ವಿರುದ್ಧ ಫಿಟ್ಟಿಂಗ್ ಇಟ್ಟರು ಈ ಮಧ್ಯೆ, ಮಾಜಿ ಕಂದಾಯ ಸಚಿವ, ಬಿಜೆಪಿ ನಾಯಕ ಆರ್.ಅಶೋಕ್ ತುಂಬಾ ಬೇಸರದಲ್ಲಿದ್ದಾರೆ. ಇದಕ್ಕೆ ಕಾರಣವಾಗಿರುವುದು ಇತ್ತೀಚಿನ ಅವರ ದೆಹಲಿ ಭೇಟಿ. ಈ ಭೇಟಿಯ ಸಂದರ್ಭದಲ್ಲಿ ಅವರು ಪಕ್ಷದ ‘ಐರನ್‌ಮ್ಯಾನ್’ ಅಮಿತ್ ಶಾ ಅವರನ್ನು ನೋಡಲು ಬಯಸಿದ್ದರು. ಆದರೆ ಅಶೋಕ್ ಅವರನ್ನು ಭೇಟಿಮಾಡಲು ಅಮಿತ್ ಶಾ ನಿರಾಕರಿಸಿದರಂತೆ. ಬೆಂಗಳೂರಿನ ಹಲವು ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಕ್ಯಾಂಡಿಡೇಟುಗಳು ಸೋಲಲು ಕಾರಣರಾದ ಪಕ್ಷದ ಹಲವು ನಾಯಕರಲ್ಲಿ ಅಶೋಕ್ ಕೂಡಾ ಒಬ್ಬರು ಅಂತ ಯಾರೋ ಅಮಿತ್ ಶಾ ಬಳಿ ಫಿಟ್ಟಿಂಗ್ ಇಟ್ಟಿದ್ದು ಇದಕ್ಕೆ ಕಾರಣ. ಯಾವಾಗ ಅಮಿತ್ ಶಾ ತಮ್ಮನ್ನು ಭೇಟಿಮಾಡಲು ನಿರಾಕರಿಸಿದರೋ, ಇದರಿಂದ ಅಶೋಕ್ ತುಂಬ ಬೇಸರ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿಗೆ ವಾಪಸ್ ಬಂದವರು ಪಕ್ಷದ ಚಟುವಟಿಕೆಗಳಲ್ಲಿ ತುಂಬ ಕಾಣಿಸಿಕೊಳ್ಳದೆ ಮೌನವಾಗಿದ್ದಾರೆ.

ಈ ಸಂದರ್ಭದಲ್ಲಿ ಲೋಕಲ್ ಲೀಡರ್ ಒಬ್ಬರು, ‘ಯಾಕೆ ಸರ್ ಪಕ್ಷದ ಕೆಲಸಗಳಲ್ಲಿ ನೀವು ಆಸಕ್ತಿ ತೋರಿಸುತ್ತಿಲ್ಲ?’ ಅಂತ ಕೇಳಿದ್ದಾರೆ. ಅದಕ್ಕೆ ಅಶೋಕ್ ಅವರು, ‘ಅಯ್ಯೋ ಎಷ್ಟು ಮಾಡಿದ್ರೂ ಅಷ್ಟೇ ಬಿಡಪ್ಪ’ ಅಂತ ನಿರಾಸಕ್ತಿ ತೋರಿದ್ದಾರೆ. ಅವರು ತೋರಿದ ಈ ನಿರಾಸಕ್ತಿಯೇ ಪುನಃ ದಿಲ್ಲಿಗೆ ಅಪ್‌ಡೇಟ್ ಆಗಿದೆ. ಯಾವಾಗ ಈ ಅಪ್‌ಡೇಟ್ ಆಯಿತೋ, ಅಮಿತ್ ಶಾ ಮತ್ತೆ ಸಿಟ್ಟಿಗೆದ್ದಿದ್ದಾರೆ. ಮುಂದೇನಾಗುತ್ತದೋ ಏನು ಕತೆಯೋ? ಆದರೆ ಇದರಿಂದ  ಅಶೋಕ್ ಅವರಂತೂ ಬೇಸತ್ತು ಹೋಗಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.

Leave a Reply

Your email address will not be published. Required fields are marked *