Friday, 20th September 2024

ಆಮೆಯ ಕೊರಳಿಗೆ ಚಿಪ್, ಕ್ಯಾಮೆರಾ ಕಟ್ಟಿ ಕುಳಿತ ಆತ ನೋಡಿದ್ದೇನು ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@me.com

ಕ್ಲಬ್‌ಹೌಸಿನಲ್ಲಿ ಆಸಕ್ತ ಮನಸ್ಸಿನವರೆಲ್ಲ ಒಂದೆಡೆ ಸೇರಿ ಚರ್ಚಿಸುತ್ತಿದ್ದಾರೆ. ಹಲವಾರು ಕ್ಲಬ್‌ಗಳು, ವೇದಿಕೆಗಳು ಹುಟ್ಟಿಕೊಳ್ಳುತ್ತಿವೆ. ಸಣ್ಣ ಸಣ್ಣ ಗುಂಪುಗಳಲ್ಲಿ ಆಸಕ್ತಕಾರ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿವೆ. ಮೊನ್ನೆ ರಾತ್ರಿ ಕೆಲವು ಜನ ಸೇರಿ ಉತ್ತರ ಕನ್ನಡದ ಪರಿಸರವನ್ನು ಉಳಿಸಿಕೊಂಡು ಪ್ರವಾಸೋದ್ಯಮವನ್ನು ಉತ್ತಮಪಡಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಮಾತಾಡುತ್ತಿದ್ದರು. ಆ ಚರ್ಚೆಯಲ್ಲಿ ಮೂಡಿ ಬಂದ ಅಂಶಗಳು ನಿಜಕ್ಕೂ ಉಪಯುಕ್ತವಾಗಿದ್ದವು.

ಆಮೆ ಪ್ರಿಯರೆಲ್ಲ ಸೇರಿ,  Friends of Tirtle ಎಂಬ ಕ್ಲಬ್ ರಚಿಸಿಕೊಂಡಿದ್ದಾರೆ. ಅಲ್ಲಿ ಬರೀ ಆಮೆಗಳ ಬಗ್ಗೆಯೇ ಚರ್ಚೆ ನಡೆಯುತ್ತಿರುತ್ತದೆ. ಜಗತ್ತಿನ ಆಮೆ ಪ್ರಿಯರು, ಅವುಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಿದವರೆಲ್ಲ ತಮ್ಮ ತಮ್ಮ ವಿಚಾರಗಳನ್ನು ಹೇಳಿ ಹೋಗುತ್ತಿದ್ದಾರೆ. ಆಮೆಯ ಕೊರಳಿಗೆ ಚಿಪ್ ಮತ್ತು ಕೆಮರಾ ಕಟ್ಟಿ, ಅದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಸಂಶೋಧಕರೊಬ್ಬರು, ಆಮೆಯ ವೃತ್ತಾಂತವನ್ನು ಬಣ್ಣಿಸಿದ ಪರಿ ಬಹಳ ರೋಚಕವಾಗಿತ್ತು. ಈ ಭೂಮಿಯ ಮೇಲೆ ಅತ್ಯಂತ ಸಂಯಮಶೀಲ ಪ್ರಾಣಿಯೆಂದರೆ ಆಮೆಗಳಂತೆ. ಅವು ಯಾರ ತಂಟೆಗೂ ಹೋಗುವುದಿಲ್ಲ.

ತಮ್ಮ ತಂಟೆಗೆ ಬರುವವರ ಜತೆ ತಗಾದೆ ತೆಗೆಯುವುದಿಲ್ಲ. ಈ ಭೂಮಿ ಮೇಲೆ ಹುಟ್ಟಿದ ಐವತ್ತು ಆಮೆ ಮರಿಗಳಲ್ಲಿ ಬದುಕುಳಿಯುವುದು ಕೇವಲ ಐದಾರು ಮಾತ್ರ.
ಉಳಿದವುಗಳನ್ನು ಬೇರೆ ಬೇರೆ ಜಲಚರಗಳು, ಕಡಲ ಪಕ್ಷಿಗಳು ತಿಂದು ಹಾಕುತ್ತವೆ. ಹಾವುಗಳಿಗೂ ಆಮೆ ಮೊಟ್ಟೆಗಳೆಂದರೆ ಪಂಚಪ್ರಾಣ. ನಲವತ್ತು – ಐವತ್ತು ಮರಿಗಳನ್ನು ಹಾಕಿದ ತಾಯಿ ಆಮೆ, ತನ್ನ ಮುಂದೆ ಅವೆಲ್ಲವುಗಳನ್ನು ಬೇರೆಯ ಪ್ರಾಣಿಗಳು ತಿಂದು ಹಾಕುವುದನ್ನು ನೋಡುತ್ತಾ ಅಸಹಾಯಕವಾಗಿ ನೋಡುತ್ತಾ
ಕುಳಿತಿರುತ್ತದೆ. ಆದರೆ ಅವುಗಳ ಜತೆ ಕಾದಾಟಕ್ಕೆ ಹೋಗುವುದಿಲ್ಲ. ಅದು ಮೊಟ್ಟೆಗಳನ್ನು ಹುಡುಗಿಸಿಡಲು ಪ್ರಯತ್ನಿಸುತ್ತದೆ.

ಆದರೆ ತಿನ್ನಲು ಬಂದ ಬೇರೆ ಪ್ರಾಣಿ-ಪಕ್ಷಿಗಳ ಜತೆ ಕಾದಾಟಕ್ಕೆ ಹೋಗುವುದಿಲ್ಲ. ಅದು ಅದರಿಂದ ಸಾಧ್ಯವೂ ಇಲ್ಲ. ಮೊಟ್ಟೆಗಳಿಂದ ಹೊರಬಂದ ಮರಿಗಳನ್ನೂ ಬೇರೆ ಪ್ರಾಣಿಗಳು ತಿನ್ನುವಾಗಂತೂ, ತಾಯಿ ಆಮೆ ಚಡಪಡಿಸುತ್ತದೆ. ಆದರೆ ಅದರಿಂದ ಯಾವ ಪ್ರತಿರೋಧವೂ ಇರುವುದಿಲ್ಲ. ಹಾಗೆಂದು ತಾಯಿ ಸಂವೇದನೆ
ಅದರಲ್ಲಿ ಇಲ್ಲವಾ? ಈ ಎಲ್ಲಾ ಸಂಗತಿಗಳ ಬಗ್ಗೆ ಆ ಸಂಶೋಧಕ ವಿವರಿಸುತ್ತಿದ್ದ. ಇನ್ನೊಮ್ಮೆ ಈ ಕತೆಗಳನ್ನು ವಿವರವಾಗಿ ಹೇಳುತ್ತೇನೆ.

ಇಪ್ಪತ್ತು ವರ್ಷಗಳಲ್ಲಿ ಏನೆ ಆಯಿತೆಂದರೆ… 
ಇಷ್ಟೆ ಬದಲಾವಣೆ ಹೇಗಾಯಿತು, ಅದೂ ಕಳೆದ ಇಪ್ಪತ್ತು-ಇಪ್ಪತ್ತೈದು ವರ್ಷಗಳಲ್ಲಿ? ಆಶ್ಚರ್ಯವಾಗುತ್ತದೆ. ಕಳೆದ ನೂರು- ನೂರೈವತ್ತು ವರ್ಷಗಳಲ್ಲಿ ಆಗದಷ್ಟು ಬದಲಾವಣೆಗಳು, ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಆಗಿದೆ ಅಂದರೆ ಈ ಬದಲಾವಣೆಯ ಗತಿ ಅದೆಷ್ಟು ತೀವ್ರವಾಗಿರಬಹುದು ಅಂತ ಊಹಿಸಬಹುದು. ನಾನು ಚಿಕ್ಕವನಾಗಿದ್ದಾಗ, ಎರಡೇ ಎರಡು ಬ್ರಾಂಡಿನ ಕಾರುಗಳಿದ್ದವು. ಅಂಬಾಸಿಡರ್ ಬಿಟ್ಟರೆ ಫಿಯೆಟ್ ಅರ್ಥಾತ್ ಪ್ರೀಮಿಯರ್ ಪದ್ಮಿನಿ. ಸ್ಕೂಟರುಗಳಲ್ಲಿ ಬಜಾಜ್ ಚೇತಕ್ ಹಾಗೂ ಲ್ಯಾಂಬ್ರೆಟಾ. ಹಿಂದಿ ಸಿನಿಮಾಗಳಲ್ಲಿ ನಾಯಕ ನಟನಾದವನು ರಸ್ತೆ ಮೇಲೆ ಹಡಗು ಚಲಿಸಿದರೆ ಹೇಗೆ ಕಾಣುವುದೋ ಅಂಥ ಪ್ಲೀಮೌಥ್
ಕಾರನ್ನು ಬಳಸುತ್ತಿದ್ದ. ಉಳಿದಂತೆ ಶಾಸಕ್ಕೆ, ಬಳಕೆಗೆ ಅಂಬಾಸಿಡರ್ ಮತ್ತು ಫಿಯೆಟ್.

ಆದರೆ ಈಗ ಏನಿಲ್ಲವೆಂದರೂ ಕನಿಷ್ಠ ೨೦೦ ಮಾಡೆಲ್ಲುಗಳ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯ. ಒಂದೂಕಾಲು ಲಕ್ಷ ರುಪಾಯಿಯ ನ್ಯಾನೋ ಕಾರಿನಿಂದ ಐದು ಕೋಟಿ ಬೆಲೆ ಬಾಳುವ ರೋಲ್ಸ್ ರೊಯ್ಸ್ ಕಾರಿನ ತನಕ ಯಾವ ಬ್ರಾಂಡ್ ಕೇಳಿ, ಆ ಎಲ್ಲ ಬ್ರಾಂಡುಗಳ ಕಾರುಗಳು ಸಿಗುತ್ತವೆ. ಎಲ್ಲ ಬಜೆಟ್ಟಿನ, ಎಲ್ಲ ಅಭಿರುಚಿಯ, ಎಲ್ಲ ಸ್ತರದ ಜನರಿಗೂ ಅಚ್ಚುಮೆಚ್ಚಿನ ಕಾರುಗಳು ಬಂದಿವೆ. ನಿಮಗೆ ಬ್ರಾಂಡ್ ನಿಷ್ಠೆ ಇಲ್ಲದಿದ್ದರೆ ಯಾವ ಕಂಪನಿ ಕಾರನ್ನು ಖರೀದಿಸಬೇಕು ಎಂದು ಗಲಿಬಿಲಿಯಾಗ ಬಹುದು. ‘ಪ್ರಾಬ್ಲಮ್ ಆಫ್ ಪ್ಲೆಂಟಿ’ ಅಂತಾರಲ್ಲ, ನಾವು ಅಂಥ ಜಮಾನದಲ್ಲಿದ್ದೇವೆ.

ಶೈಕ್ಷಣಿಕ ಪದವಿಗಳಲ್ಲೂ ಬಿಎ, ಬಿಎಸ್ಸಿ , ಬಿಕಾಂ ಬಿಟ್ಟರೆ ಎಲ್ಎ‌ಲ್ ಬಿ ಅಭ್ಯಾಸ ಮಾಡುತ್ತಿದ್ದರು. ಬುದ್ಧಿವಂತ ವಿದ್ಯಾರ್ಥಿಗಳಿಗೆ ಮಾತ್ರ ಎಂಜಿನಿಯರಿಂಗ್ ಮತ್ತು ಮೆಡಿಕಲ. ಇದರಾಚೆ ಬೇರೆ ಕೋರ್ಸುಗಳು ಇರಲಿಲ್ಲ. ಬುದ್ಧಿವಂತ ವಿದ್ಯಾರ್ಥಿಗಳು ಸೈನ್ಸ್ ವಿಷಯ ಆರಿಸಿಕೊಳ್ಳುತ್ತಿದ್ದರು. ಆರ್ಟ್ಸ್ ತೆಗೆದುಕೊಂಡರೆ, ಅನುಮಾ ನವೇ ಬೇಡ, ಆತ ದಡ್ಡ ಅಂತಾನೆ ಅರ್ಥ. ಆ ಕಡೆ ದಡ್ಡನೂ ಅಲ್ಲ, ಈ ಕಡೆ ಬುದ್ಧಿವಂತನೂ ಅಲ್ಲದವ ಕಾಮರ್ಸ್ ವಿಷಯ ಓದುತ್ತಿದ್ದ. ಆದರೆ ಈಗ ಅವೆಲ್ಲ ಬದಲಾಗಿ ಬಿಟ್ಟಿವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ 128 ಹೊಸ ಕೋರ್ಸುಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಬರೆಯುವ ಅಭಿರುಚಿ ಇದ್ದವರು  ಸಾಹಿತಿಯೋ, ಪತ್ರಕರ್ತರೊ ಆಗುತ್ತಿದ್ದರು. ಈಗ ಪತ್ರಿಕೋದ್ಯಮ ಅಭ್ಯಾಸ ಮಾಡಿ ಬಂದರೆ ಮಾತ್ರ ಕೆಲಸ. ಕಳೆದ ಕಾಲು ಶತಮಾನದಲ್ಲಿ ಭಾರತದಂದೇ 800 ಹೊಸ ಉದ್ಯೋಗ ಪ್ರಕಾರಗಳು ಹುಟ್ಟಿಕೊಂಡಿವೆ.

ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಕೇವಲ ಮೆಹಂದಿ ಹಚ್ಚಿ ತಿಂಗಳಿಗೆ ಲಕ್ಷಾಂತರ ಸಂಪಾದಿಸುವವರಿದ್ದಾರೆ. ಹೆಂಗಸರ ಜಡೆಯನ್ನು ನೂರಾರು ವಿವಿಧ ಬಗೆಗಳಲ್ಲಿ ಹೆಣೆಯುವುದು ಹೇಗೆ ಎಂಬುದನ್ನು ಕಲಿಸುವ ಉಮಾ ಪಾಟೀಲ್ ತಿಂಗಳಿಗೆ ಏನಿಲ್ಲವೆಂದರೂ ಒಂದೂವರೆ ಲಕ್ಷ ರುಪಾಯಿ ಕಮಾಯಿಸುತ್ತಾಳೆ.
ಮೊದಲೆಲ್ಲ ಅಡುಗೆ ಪುಸ್ತಕಗಳೇ ಇರಲಿಲ್ಲ. ಹಾಗಂತ ಯಾರೂ ಹೊಸ ಹೊಸ ತಿಂಡಿ-ತಿನಿಸು, ಆಹಾರಗಳನ್ನು ಸೇವಿಸುತ್ತಿರಲಿಲ್ಲ ಎಂದಲ್ಲ. ಈಗ ಯಾವುದೇ ಪುಸ್ತಕದ ಅಂಗಡಿಗೆ ಹೋಗಿ ಅಡುಗೆ ಪುಸ್ತಕಗಳದ್ದೇ ಪ್ರತ್ಯೇಕ ವಿಭಾಗ ಕಾಣಬಹುದು. ಅಲ್ಲದೇ ಆ ಪುಸ್ತಕಗಳನ್ನು ಓದುವವರ, ಬರೆಯುವವರ ಸಂಖ್ಯೆಯೂ
ಜಾಸ್ತಿಯಾಗಿದೆ. ಅಡುಗೆ ಪುಸ್ತಗಳನ್ನು ಹೆಚ್ಚಾಗಿ ಬರೆಯುವವರು ಗಂಡಸರೇ ಆಗಿರುವುದು ವಿಶೇಷ.

ಅದೇ ರೀತಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಽಸಿದಂತೆ ಕೆಲವೇ ಕೆಲವು ಪುಸ್ತಕಗಳಿದ್ದವು. ಡೇಲ್ ಕಾರ್ನೆಗಿ ಮತ್ತು ನೆಪೋಲಿಯನ್ ಹಿಲ್ ಬರೆದ ಪುಸ್ತಕಗಳೇ ಎಲ್ಲರ ಕೈಯಲ್ಲಿ ಇರುತ್ತಿದ್ದವು. ಅದರಲ್ಲೂ ಡೇಲ್ ಕಾರ್ನೆಗಿ ಬರೆದ ಪುಸ್ತಕವನ್ನು ಓದದವರೇ ಇರಲಿಕ್ಕಿಲ್ಲ. ಕನ್ನಡದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಒಂದೂವರೆ ಸಾವಿರಕ್ಕಿಂತ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಹೊಸ ರೀತಿಯಲ್ಲಿ ಬರೆಯುವ ಬರಹಗಾರರ ದಂಡೇ ಬರುತ್ತಿದೆ. ಹಾಗಂತ ಇವರಾರೂ ವೃತ್ತಿಪರ ಲೇಖಕರಲ್ಲ.

ಯಾವುದೇ ಕ್ಷೇತ್ರವಿರಬಹುದು, ಯಾವುದೇ ವಸ್ತುವಿರಬಹುದು, ಗ್ರಾಹಕ ಪದಾರ್ಥಗಳಿರಬಹುದು…ಎಲ್ಲವೂ ಧಂಡಿ ಧಂಡಿ. ಅಂಗಿಯ ಬಟನ್ನುಗಳನ್ನೇ ತೆಗೆದು ಕೊಳ್ಳಿ. ಎರಡು ಲಕ್ಷ ವಿವಿಧ ರೀತಿಯ ಬಟನ್ನುಗಳಿವೆಯಂತೆ. ಬಟನ್ನುಗಳಿಲ್ಲದ ಅಂಗಿ ಮಾರುಕಟ್ಟೆಗೆ ಬಂದರೂ ಬಟನ್ ತಂತ್ರಜ್ಞಾನದಲ್ಲಿ ಆವಿಷ್ಕಾರ ಮಾತ್ರ ನಿಂತಿಲ್ಲ. ಆಶ್ಚರ್ಯವಾಗುತ್ತದೆ, ನೋಡನೋಡುತ್ತಲೇ ಕಳೆದ ಇಪ್ಪತ್ತು ವರ್ಷಗಳಲ್ಲಿ ಹೊಸ ಜಗತ್ತಿನ ಮುಂದೆ ನಿಂತಿದ್ದೇವೆ. ಕಂಪ್ಯೂಟರ್ ಎಂಜಿನಿಯರ್ ಮಮತಾ ರಮೇಶ್ ಎಂಬ ಓದುಗಳ ಬಗ್ಗೆ ಹೇಳಲೇಬೇಕು. ಪಾದರಸದಂಥ ಹೆಂಗಸು. ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳ, ಗಂಡನಿಗೂ ಒಳ್ಳೆಯ ಎಂಎನ್ಸಿಯಲ್ಲಿ ಉತ್ತಮ ನೌಕರಿ. ಆರು ವರ್ಷದ ಮುದ್ದಾದ ಗಂಡು ಮಗು. ವಿಧಿಗೆ ಅದೆಂಥ ಹಗೆತನವಿತ್ತೋ ಗೊತ್ತಿಲ್ಲ.

ಕಳೆದ ವರ್ಷ ಗಂಡ ಹಾಗೂ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಮಮತಾ ಪಾಡು ಹೇಗಾಗಿರಬಹುದೆಂಬುದನ್ನು ಕರುಳು ಸಂವೇದನೆ ಬಲ್ಲವರಿಗೆ ಅರ್ಥ ವಾಗುತ್ತದೆ. ನನಗಂತೂ ಅವಳನ್ನು ಎದುರಿಸಲು ಆಗುತ್ತಿರಲಿಲ್ಲ. ಅವಳ ಕಣ್ಣೀರು, ವೇದನೆಯ ಮುಂದೆ ನನ್ನ ಸಾಂತ್ವನದ ಮಾತುಗಳು ಹೊರಬರಲಾಗದೇ ಅರ್ಥ
ಕಳೆದುಕೊಳ್ಳುತ್ತಿದ್ದವು. ಎಷ್ಟೋ ಸಲ ಆಕೆಯನ್ನು ಭೇಟಿ ಮಾಡಿ ಹಾಗೆ ಸುಮ್ಮನೆ ವಾಪಸ್ ಬರುತ್ತಿದ್ದೆ. ಒಂದು ತಿಂಗಳ ಹಿಂದೆ ನನ್ನ ಪತ್ನಿಯೊಂದಿಗೆ ಅವಳನ್ನು ಭೇಟಿ ಮಾಡಿದಾಗ ಡಾ.ರೇಖಾ ಶೆಟ್ಟಿ ಬರೆದ The Happiness Quotient ಎಂಬ ಪುಸ್ತಕವನ್ನು ಕೊಟ್ಟು, ಈ ಅಧ್ಯಾಯವನ್ನು ಒಬ್ಬಳೇ ಓದು ಎಂದು ಹೇಳಿ ಬಂದೆ.

ಎರಡು ದಿನಗಳ ನಂತರ ಅವಳ ಫೋನ್ ಬಂತು. ‘ಬದುಕು ನಿಜಕ್ಕೂ ವಿಸ್ಮಯ ಹಾಗೂ ಸುಂದರವಾಗಿದೆ ಎಂದು ಅನಿಸುತ್ತಿದೆ. ನಾನು ನನ್ನ ಎಲ್ಲ ವೇದನೆಗಳನ್ನು ಸಕಾರಾತ್ಮಕವಾಗಿ, ಗೆಲ್ಲಲು ನಿರ್ಧರಿಸಿದ್ದೇನೆ. ನೀವು ಕೊಟ್ಟ ಪುಸ್ತಕದ ಆ ಒಂದು ಪ್ರಸಂಗ ನನ್ನ ಬದುಕಿನ ಗತಿಯನ್ನೇ ಬದಲಿಸಿತು’ ಎಂದಳು…ಒಬ್ಬ ವೃದ್ಧೆಯ ಬಾಳಿನ ನೈಜ ಘಟನೆಯದು. ಆಕೆ ತನ್ನೆದುರೇ ಮೂವರು ಮಕ್ಕಳನ್ನು ಕಳೆದುಕೊಂಡಿದ್ದಳು. ಗಂಡ ಅಪಘಾತದಲ್ಲಿ ತೀರಿಕೊಂಡಿದ್ದ. ಇದ್ದ ಒಂದು ಮನೆಯನ್ನು ಲೇವಾದೇವಿಗಾರ ಮೋಸ ಮಾಡಿ ಲಪಟಾಯಿಸಿದ್ದ. ಆಕೆಗೆ ಜೀವನದಲ್ಲಿ ಸಂತಸವೆಲ್ಲ ಬತ್ತಿ ಹೋಗುವಂಥ ದುರ್ಭರ ಬದುಕು. ಆದರೂ ಆಕೆ ಸಮಾಧಾನ,
ಸಂತಸದಿಂದ ಇದ್ದಳು. ‘ಏನಜ್ಜಿ ಎಲ್ಲ ಕಳೆದುಕೊಂಡು ಏನೂ ಆಗಿಲ್ಲದವರಂತೆ ಇದ್ದೀಯಲ್ಲ. ನಿನಗೇನೂ ಅನಿಸುವುದಿಲ್ಲವಾ?’ ಅಂತ ಅವಳನ್ನು ಯಾರೋ ಕೇಳಿದರು.

ಅದಕ್ಕೆ ಆಕೆ ಮಹಾತಾಯಿ ಏನೆಂದಳು ಗೊತ್ತಾ? ನನ್ನಂಥ ಅದೃಷ್ಟವಂತೆ ಯಾರೂ ಇಲ್ಲ ಎಂದು ಎಷ್ಟೋ ಸಲ ಅನಿಸಿದೆ. ನನ್ನ ಗಂಡ ನನಗೆ ಮುದ್ದಾದ ಮೂವರು
ಮಕ್ಕಳನ್ನು ಕೊಟ್ಟ. ನಲವತ್ತೆರಡು ವರ್ಷ ನಾವು ಒಂದೇ ದೇಹದಂತೆ ಬದುಕಿದೆವು. ಆತ ನನಗೆ ಪ್ರಪಂಚ ಪರ್ಯಟನೆ ಮಾಡಿಸಿದ. ಅವನ ಜತೆ ಇದ್ದಷ್ಟು ಹೊತ್ತು ಹೊಸಹೊಸ ಅನುಭವ. ಮಕ್ಕಳನ್ನು ಕಳೆದುಕೊಂಡಾಗ ಅವರ ನೆನಪೇ ಬಾರದಂತೆ ಇನ್ನಷ್ಟು ಪ್ರೀತಿಯನ್ನು ಕೊಟ್ಟ. ನಮ್ಮಿಬ್ಬರ ಮಧ್ಯೆ ಒಂದು ಒಪ್ಪಂದವಾಗಿತ್ತು.
ಯಾರೇ ಮೊದಲು ತೀರಿಕೊಳ್ಳಲಿ, ಮತ್ತೊಬ್ಬರು ದುಃಖಿಸಬಾರದು, ಸಂತಸದಿಂದ ಇರಬೇಕೆಂದು. ನನಗೆ ಅಷ್ಟು ವರ್ಷ ಸಾರ್ಥಕ ಜೀವನ ಸಾಗಿಸಿದ ಸಂತೃಪ್ತಿ ಯಿದೆ. ಸುಂದರ ನೆನಪುಗಳಿವೆ. ಅವುಗಳನ್ನು ನೆನಪಿಸಿಕೊಂಡರೆ ಸಾಕು ನನ್ನಂದು ಪುಳಕವಾಗುತ್ತದೆ.

ಬದುಕಿನ ವಿವಿಧ ಮುಖಗಳಿಗೆ ತೆರೆದುಕೊಳ್ಳುತ್ತೇನೆ. ನನಗೆ ಜೀವನದಲ್ಲಿ ಸಂತೃಪ್ತಿಯಿದೆ. ಬದುಕು ಇದಕ್ಕಿಂತ ಪೂರ್ಣವಾಗಿರಲು ಸಾಧ್ಯವಿಲ್ಲ. ಮಮತಾಳ ಬದುಕಿನಲ್ಲಿ ಬೆಳಕಿನ ಬೀಜಗಳು ಮೊಳಕೆಯೊಡೆಯಲು ಕಾರಣವಾಗಿದ್ದೇ ಇದು. ಬದುಕಿನಲ್ಲಿ ಸಂತಸವಾಗಿರಲು ಸಣ್ಣ ಸಣ್ಣ ಸಂಗತಿಗಳೇ ಸಾಕು. ಹಾಗೆಂದು ಸಣ್ಣಪುಟ್ಟ ಸಂಗತಿಗಳು ನಮ್ಮ ಸಂತಸಗಳನ್ನು ಕಸಿದುಕೊಳ್ಳಲು ಬಿಡಬಾರದು.

ಸರಳ ಅಂದರೆ ಸಹಜ
‘ನಮ್ಮ ಜೀವನವನ್ನು ಸರಳಗೊಳಿಸುವುದು ಹೇಗೆ?’ ಎಂಬ ಪ್ರಶ್ನೆಯನ್ನು ಯೋಗಿ ದುರ್ಲಭಜೀ ಅವರಿಗೆ ಕೇಳಿದೆ. ‘ಸರಳವಾಗಿ ಬದುಕುವುದು ಬಹಳ ಕಷ್ಟ. ಕ್ಲಿಷ್ಟವಾಗಿ ಬದುಕುವುದು ಸುಲಭ’ ಎಂದು ಹೇಳಿದರು. ‘ ಮನೆಯಲ್ಲಿ ಫರ್ನಿಚರ್ ಇಲ್ಲದಿದ್ದರೂ ಆರಾಮವಾಗಿ ಕುಳಿತುಕೊಳ್ಳಬಹುದು. ಆದರೂ ಎಲ್ಲರೂ ಮನೆ ತುಂಬಾ ದುಬಾರಿ ಫರ್ನಿಚರ್ ಇಡುವುದನ್ನೇ ಇಷ್ಟಪಡುತ್ತಾರೆ. ಮಂಚವಿಲ್ಲದಿದ್ದರೂ ಮಲಗಬಹುದು, ನಿದ್ದೆ ಬರುತ್ತದೆ. ಆದರೆ ಎಲ್ಲರ ಮನೆಯಲ್ಲೂ ಮಂಚ ಗಳಿರುತ್ತವೆ.

ನಾವೇ ನಮ್ಮ ಜೀವನವನ್ನು ಕ್ಲಿಷ್ಟಕರ ಮಾಡಿಕೊಳ್ಳುತ್ತೇವೆ. ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆಗಳನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ.’ ಎಂದು ದುರ್ಲಭಜೀ ವಿವರಿಸಿದರು. ‘ಟೈಮ್ ನೋಡಲು ನೂರು ರುಪಾಯಿ ಕೈಗಡಿಯಾರ ಸಾಕು. ಆದರೆ ಶ್ರೀಮಂತರಿಗೆ ಹತ್ತು ಲಕ್ಷ ಬೆಲೆಬಾಳ್ಳುವ ರೊಲೆಕ್ಸ್ ವಾಚ್ ಬೇಕು. ಕೋಟ್ಯಂತರ ರುಪಾಯಿ ಬೆಂಜ್, ಆಡಿ ಕಾರುಗಳು ಬೇಕು. ಒಂದು ಕಾರು ಖರೀದಿಸಿದ ಬಳಿಕ ಎರಡನೆಯದರ ಮೇಲೆ ಆಸೆಯಾಗುತ್ತದೆ. ಇದಕ್ಕೆ ಕೊನೆ ಇಲ್ಲ. ನಮ್ಮ ಬದುಕನ್ನು ವೃಥಾ ಕ್ಲಿಷ್ಟಕರಗೊಳಿಸಿಕೊಳ್ಳುತ್ತೇವೆ’ ಎಂದು ಯೋಗಿಜೀ ಹೇಳಿದ್ದು ನೂರಕ್ಕೆ ನೂರು ಸತ್ಯ.

‘ಎರಡನೆ ಬೆಂಜ್ ಕಾರನ್ನು ಖರೀದಿಸಿದವನಿಗೆ ಕೇಳಿ, ನೀನು ಖುಷಿಯಿಂದ ಇದ್ದಿಯಾ ಅಂತ. ಆತ ಮೊದಲು ಸಲ ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರು ಖರೀದಿಸಿದ್ದಾಗಲೇ ಹೆಚ್ಚು ಸಂತಸವಾಗಿತ್ತು ಅಂತಾನೆ. ಮನೆ ಮುಂದೆ ಎಷ್ಟೇ ಕಾರುಗಳನ್ನು ನಿಲ್ಲಿಸಿದರೂ ಸಮಾಧಾನವಿಲ್ಲ. ಕಾರಣ ಸಮಾಧಾನವೆನ್ನವುದು ಕಾರಿನಲ್ಲಿ ಇಲ್ಲ, ಅದು ಇರುವುದು ಮನಸ್ಸಿನಲ್ಲಿ’ ಎಂದು ಹೇಳಿದ ಯೋಗಿಜೀ, ಸರಳ ಜೀವನವನ್ನು ಅಕ್ಷರಶಃ ಪಾಲಿಸಿದ ಪುಣ್ಯಾತ್ಮನೊಬ್ಬ ಬರೆದುಕೊಂಡ
ಎಂಟು ಅಂಶಗಳನ್ನು ಕಳಿಸಿಕೊಟ್ಟರು. ಅವನ ಪ್ರಕಾರ ಸರಳ ಜೀವನ ಪಾಲಿಸುವುದೆಂದರೆ, ಅಗತ್ಯವಲ್ಲದ ಎಲ್ಲ ಸಾಮಾನು, ವಸ್ತುಗಳನ್ನು ಇಟ್ಟುಕೊಳ್ಳಬಾರದು
ಮೊಬೈಲ್‌ನಲ್ಲಿರುವ ಎಲ್ಲ ಆಪ್‌ಗಳನ್ನು ಡಿಲೀಟ್ ಮಾಡಬೇಕು.

ಮೊಬೈಲನ್ನು ಕೇವಲ ಮಾತನಾಡಲು ಮಾತ್ರ ಬಳಸಬೇಕು. ಒಂದು ವೇಳೆ ವಾಟ್ಸಪ್ ಆಪ್ ಇಟ್ಟುಕೊಂಡರೂ ದಿನದಲ್ಲಿ ಎರಡು ಸಲ ಮಾತ್ರ ನೋಡಬೇಕು. ಸಾಧ್ಯವಾದರೆ ಹತ್ತುಗಂಟೆಗೆ ಮಲಗಿ. ಆಗ ಬೆಳಗ್ಗೆ ಗಂಟೆಗೆ ಏಳಲು ಸಾಧ್ಯವಾಗುತ್ತದೆ. ನಿಮಗೆ ಸಾಧ್ಯವಾಗುವಷ್ಟೇ ಕೆಲಸ ಒಪ್ಪಿಕೊಳ್ಳಿ ಹಾಗೂ ಅವನ್ನು ಮುಗಿಸುವವರೆಗೆ ಹೊಸತನ್ನು ಒಪ್ಪಿಕೊಳ್ಳಬೇಡಿ.ಎಲ್ಲದಕ್ಕೂ ಸಮಯ ನಿಗದಿಪಡಿಸಿಕೊಳ್ಳಿ. ಸಂತಸದಿಂದ ಕಾಲ ಕಳೆಯುವುದಕ್ಕೆ, ವಿಪರೀತ ಕೆಲಸ ಮಾಡುವು ದಕ್ಕೆ ಒಂದು ಮಿತಿ ಎಂಬುದು ಇರುತ್ತದೆ. ನಿಮ್ಮ ಮೊಬೈಲ್ ನಂಬರ್ ಎಲ್ಲರ ಬಳಿಯೂ ಇದೆ ಎಂದಾದರೆ, ನೀವು ಮೊಬೈಲ್ ನಂಬರ್ ಬದಲಿಸಬೇಕಾದ ಸಮಯ ಬಂದಿದೆ ಎಂದರ್ಥ. ನೂರು ರುಪಾಯಿ ಗಳಿಸಿದರೆ ನಾಲ್ಕು ರೂಪಾಯಿ ಖರ್ಚು ಮಾಡ ಬಹುದು.

ಗಳಿಕೆಗಿಂತ ಖರ್ಚನ್ನು ಕಡಿಮೆ ಮಾಡಿದರೆ, ಸರಳ ಜೀವನ ಸಹಜವಾಗಿ ಜಾರಿಗೆ ಬರುತ್ತದೆ. ಯಾವುದೇ ವಸ್ತು ಖರೀದಿಸುವ ಮುನ್ನ ಅದರ ಅಗತ್ಯದ ಬಗ್ಗೆ ಪದೇ ಪದೆ ಪ್ರಶ್ನಿಸಿಕೊಳ್ಳಿ. ಅಗತ್ಯವೆನಿಸದೇ ಇರುವುದು ಜಂಕ್ ಎಂದೆನಿಸಿ ಕೊಳ್ಳುತ್ತದೆ. ಸರಳ ಜೀವನ ಅಂದರೆ ಕಂಜೂಸ್ ಆಗಿರುವುದಲ್ಲ. ಸರಳ ಅಂದರೆ ಅಗತ್ಯ ಬೇಕಾದಷ್ಟೇ ಇರುವುದು. ಮನೆ, ಆಫೀಸು, ಉಡುಗೆ-ತೊಡುಗೆ, ಆಹಾರ, ಆಚರಣೆ ಎಲ್ಲವೂ ಅಗತ್ಯದ ಪರಿದಿಯೊಳಗೆ ಇರಲಿ. ಅಷ್ಟಕ್ಕೂ ಸರಳ ಜೀವನ ಅಂದರೆ ಬೋಧನೆ, ಉಪದೇಶ ಅಲ್ಲ. ಅದು ಸ್ವಯಂ ಆಚರಣೆ. ಬೇರೆಯವರಿಗೆ ಸರಳ ಜೀವನ ನಡೆಸಿ ಎಂದು ಬೋಧಿಸಿದರೆ ಅದು ಸರಳ ಜೀವನ ಅಲ್ಲವಂತೆ, ಅದು ಆಡಂಬರವಂತೆ. ಅಷ್ಟಕ್ಕೂ ಸರಳ ಜೀವನ ಅಂದರೆ ಸಹಜ ಜೀವನ.

ಟೀ-ಶರ್ಟ್ ಸಾಹಿತ್ಯ
ನನಗೆ ಟೀ-ಶರ್ಟ್ ಮೇಲೆ ಬರೆದ ಬರಹ ಅಥವಾ ಸ್ಲೋಗನ್ ಗಳನ್ನು ಓದುವ ಹವ್ಯಾಸ. ಕಾರಣ ಇಷ್ಟೇ. ಅವು ಚೆನ್ನಾಗಿರುತ್ತವೆ. ಅಲ್ಲದೇ ಅದನ್ನು ಧರಿಸಿದ ವ್ಯಕ್ತಿಯ ಅಭಿರುಚಿಯನ್ನು ಅದು ತೋರಿಸುತ್ತದೆ. ಸ್ಲೋಗನ್‌ಗಳಿರುವ ಟೀ-ಶರ್ಟ್‌ಗಳನ್ನು ಖರೀದಿಸುವಾಗ, ಅದರ ಗುಣಮಟ್ಟ, ಬ್ರ್ಯಾಂಡ್‌ಗಿಂತ ಆ ಬರಹಗಳೇ ಪ್ರಧಾನ ಪಾತ್ರವಹಿಸಿರುತ್ತವೆ. ಟೀ-ಶರ್ಟ್ ಮೇಲಿನ ಬರಹಗಳು ನಿಜಕ್ಕೂ ಕ್ರಿಯೇಟಿವ್ ಆಗಿರುತ್ತವೆ. ಈ ಕಾರಣಕ್ಕೆ ಅವುಗಳನ್ನು ಓದಬೇಕೆನಿಸುತ್ತದೆ.

ಹುಡುಗಿಯರು ಧರಿಸುವ ಟೀ-ಶರ್ಟ್ ಮೇಲಿನ ಬರಹಗಳನ್ನು ಓದುವಾಗ, ಅದು ಟೀ-ಶರ್ಟ್ ಹಿಂದೆ ಬರೆದಿದ್ದೋ, ಮುಂದೆ ಬರೆದಿದ್ದೋ ಎಂಬುದು ಮುಖ್ಯ ವಾಗುತ್ತದೆ. ಹಿಂದೆ ಬರೆದಿದ್ದನ್ನು ಸುಲಭವಾಗಿ ಓದಬಹುದು. ಯಾರೂ ಗಮನಿಸಬಹುದು. ಮುಂದೆ ಬರೆದಿದ್ದನ್ನು ಓದದಿರುವುದು ಸಭ್ಯತೆಯ ಪ್ರದರ್ಶನವೂ ಹೌದು. ಇತ್ತೀಚೆಗೆ ದುಬೈ ವಿಮಾನ ನಿಲ್ದಾಣದಲ್ಲಿ ಒಬ್ಬರು ಸುಂದರವಾದ ಟೀ-ಶರ್ಟ್ ಧರಿಸಿದ್ದರು.

ಅದರ ಮೇಲೆ I am a proud Husband of a freaking awesome Girl ಎಂದು ಬರೆದಿತ್ತು. ಈ ಬರಹದ ಕೆಳಗಡೆ ಸಣ್ಣ ಅಕ್ಷರಗಳಲ್ಲಿ ಕಂಸದಲ್ಲಿ (ಬ್ರಾಕೆಟ್) (Yes, she bought me this T-shirt) ಎಂದಿತ್ತು. ಕೆಲ ದಿನಗಳ ಹಿಂದೆ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಧರಿಸಿದ ಟೀ-ಶರ್ಟ್ ಮೇಲೆ ಐ I have clean history. My husband is responsible for it ಎಂದಿತ್ತು. ಇತ್ತೀಚೆಗೆ ಬೆಂಗಳೂರಿನ ‘ಕೆಫೆ ಕಾಫಿಡೇ’ಗೆ ಹೋದಾಗ, ಮೂವತ್ತರ ಆಸುಪಾಸಿನ ಯುವಕನೊಬ್ಬ ಕಡುನೀಲಿ ಬಣ್ಣದ ಚೆಂದದ ಟೀ-ಶರ್ಟ್ ಧರಿಸಿದ್ದ.

ಹಿಂಬದಿಗೆ ‘”Programmer : An organism that turns caffeine and Pizza into software’ ಎಂದು ಬರೆದಿತ್ತು. ಅದನ್ನು ಧರಿಸಿದವ ಟೆಕ್ಕಿಯೇ ಇರಬೇಕು. ಇತ್ತೀಚೆಗೆ ನನ್ನ ಸ್ನೇಹಿತ ಕಾರ್ತಿಕ್ ವಿಶ್ವನಾಥ ಲಂಡನ್‌ನಿಂದ ನನಗೆ ಒಂದು ಟೀ-ಶರ್ಟ್ ತಂದುಕೊಟ್ಟಿದ್ದರು. ಅದರ ಮೇಲೆ  I may be wrong. But its highly unlikely ಎಂದು ಬರೆದಿತ್ತು. ‘ನೀವು ತಪ್ಪು ಮಾಡಿದ್ದೀರಿ ಎಂದು ಬೇರೆಯವರು ಆಪಾದಿಸಿದಾಗ, ಈ ಟೀ-ಶರ್ಟ್ ಧರಿಸಬಹುದು’ ಎಂದು ಹೇಳಿದರು. ಹೀಗಾಗಿ ಇದನ್ನು ಧರಿಸುವ ಅವಕಾಶವೇ ಸಿಕ್ಕಿಲ್ಲ.

ಹಣೆ ಚಚ್ಚಿಕೊಂಡ ದೇವರು
ಯಾವುದೇ ಸುದ್ದಿಯಿರಬಹುದು, ಎರಡು ಪತ್ರಿಕೆಗಳಲ್ಲಿ ಒಂದೇ ರೀತಿ ಪ್ರಕಟವಾಗುವುದಿಲ್ಲವಂತೆ. ಒಂದೇ ಸುದ್ದಿ ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿ ಪ್ರಕಟವಾಗುತ್ತದೆ. ಇದಕ್ಕೆ ಕಾರಣ ಒಬ್ಬ ಪತ್ರಕರ್ತನಂತೆ ಮತ್ತೊಬ್ಬ ಇಲ್ಲ. ಒಬ್ಬ ಸಂಪಾದಕ ಮತ್ತೊಬ್ಬ ಸಂಪಾದಕನ ಅಭಿಪ್ರಾಯ, ನಿಲುವನ್ನು ಅನುಮೋದಿ ಸುವುದಿಲ್ಲ. ಹೀಗಾಗಿ ಎಲ್ಲ ಪತ್ರಿಕೆಯೂ ಭಿನ್ನ. ಒಂದು ದಿನ ಸ್ವತಃ ದೇವರೇ ಪತ್ರಿಕಾಗೋಷ್ಠಿ ಕರೆದನಂತೆ. ದೇವರ ಪತ್ರಿಕಾಗೋಷ್ಠಿ ಅಂದ್ರೆ ಕೇಳಬೇಕೇ? ಎಲ್ಲ ಪತ್ರಕರ್ತರು ಆಗಮಿಸುತ್ತಾರೆಂದು ದೇವರು ಅಂದುಕೊಂಡಿದ್ದನಂತೆ. ಆದರೆ ಕೇವಲ ನಾಲ್ಕು ಪತ್ರಿಕೆಗಳ ವರದಿಗಾರರು ಮಾತ್ರ ಆಗಮಿಸಿದ್ದರು.

ದೇವರಿಗೆ ಆಶ್ಚರ್ಯವಾಯಿತು. ಆತ ತನ್ನ ಪತ್ರಿಕಾಗೋಷ್ಠಿಗೆ ಎಲ್ಲ ವರದಿಗಾರರು ಕಿತ್ತೆದ್ದು ಬರುತ್ತಾರೆಂದು ನಿರೀಕ್ಷಿಸಿದ್ದ. ಆದರೆ ಬಹುತೇಕ ವರದಿಗಾರರಿಗೆ ದೇವರ ಅಸ್ತಿತ್ವದಲ್ಲೇ ನಂಬಿಕೆ ಇರಲಿಲ್ಲ. ಇನ್ನು ಕೆಲವರಿಗೆ ಯಾರೋ ತಮ್ಮನ್ನು ಫಾಲ್ ಮಾಡುತ್ತಿದ್ದಾರೆ ಎಂದೆನಿಸಿತು. ದೇವರು ಬಂದು ಪತ್ರಿಕಾಗೋಷ್ಠಿ ಮಾಡೋ ದುಂಟಾ ಎಂದು ರಾಗ ಎಳೆದರು. ಸರಿ, ದೇವರು ಆ ನಾಲ್ವರು ಪತ್ರಕರ್ತರನ್ನುದ್ದೇಶಿಸಿ, ‘ನೋಡಿ, ನಾನು ದೇವರು ಹೇಳುತ್ತಿದ್ದೇನೆ, ಇನ್ನೂ ಮೂರು ದಿನಗಳಲ್ಲಿ ಈ ಭೂಮಿ ಇರುವುದಿಲ್ಲ. ಪ್ರಳಯವಾಗುತ್ತದೆ’ ಎಂದು ಘೋಷಿಸಿದ.

ಈ ಸುದ್ದಿ ಮರುದಿನ ಪತ್ರಿಕೆಗಳಲ್ಲಿ ಹೇಗೆ ವರದಿಯಾಗುತ್ತದೆ ಎಂಬ ಬಗ್ಗೆ ಅವನಿಗೆ ಅತೀವ ಕುತೂಹಲವಿತ್ತು. ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ‘ದೇವರ ಆಟ ಇನ್ನು ಮೂರೇ ದಿನ!’ ಎಂದು ವರದಿ ಮಾಡಿತ್ತು. ‘ದಿ ಹಿಂದೂ’ ಪತ್ರಿಕೆ ‘ನಕಲಿ ದೇವರಿಂದ ಪ್ರಳಯದ ಬೂಟಾಟಿಕೆ’ ಎಂಬ ಹೆಡ್‌ಲೈನ್ ಬರೆಯಿತು. ‘ಡೆಕ್ಕನ್ ಕ್ರಾನಿಕಲ್’
ದೈನಿಕ ‘ಮೂರು ದಿನಗಳಲ್ಲಿ ಪ್ರಳಯ ಎಂಬ ದೇವರ ಹೇಳಿಕೆ ನಂಬುವುದು ಹೇಗೆ?’ ಎಂಬ ಶೀರ್ಷಿಕೆ ಬರೆಯಿತು. ‘ಟೈಮ್ಸ್ ಆಫ್ ಇಂಡಿ ಯಾ’ ಪತ್ರಿಕೆ ನಿರುದ್ವಿಗ್ನ ವಾಗಿ ‘ಇನ್ನು ಮೂರು ದಿನಗಳಲ್ಲಿ ಜಗತ್ತು ಪ್ರಳಯ. ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚು ಸಂಕಷ್ಟ’ ಎಂದು ಬರೆಯಿತು.