ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರನ್ನು ಪ್ರಶ್ನಿಸುವ ಅಥವಾ ಜಾರಿಯಾಗಿರುವ ಕಾನೂನನ್ನು ಮಾರ್ಪಡಿಸುವ ಇಲ್ಲವೇ, ಆಗಬೇಕಿರುವ ಕೆಲಸಗಳನ್ನು ಆಗ್ರಹಪೂರ್ವಕವಾಗಿ ಮಾಡಿಸಿಕೊಳ್ಳುವ ಅಧಿಕಾರ ಪ್ರತಿಯೊಬ್ಬ ಪ್ರಜೆಗೂ ಇದೆ.
ಸರಕಾರವನ್ನು ಎಚ್ಚರಿಸುವ ಅಥವಾ ಪ್ರಶ್ನಿಸುವುದಕ್ಕೆ ಹಲವು ಮಾರ್ಗಗಳಿದ್ದು, ಅವುಗಳಲ್ಲಿ ಪ್ರತಿಭಟನೆ, ಧರಣಿಯೂ ಒಂದು. ಆದರೆ ಇತ್ತೀಚಿನ ಧರಣಿಗಳು ‘ಪಾವಿತ್ರ್ಯ’ವನ್ನು ಕಳೆದುಕೊಳ್ಳುತ್ತಿವೆಯೇ ಎನ್ನುವ ಅನುಮಾನಗಳು ಶುರುವಾಗುತ್ತಿವೆ. ಹಾಗೇ ನೋಡಿದರೆ, ಭಾರತ ಇತಿಹಾಸದಲ್ಲಿ ಧರಣಿ, ಪ್ರತಿಭಟನೆ, ಮುಷ್ಕರ ಹಾಗೂ ಬಂದ್ಗಳಿಗೆ ತನ್ನದೇಯಾದ ಸ್ಥಾನವಿದೆ.
ಬ್ರಿಟೀಷರನ್ನು ದೇಶದಿಂದ ಓಡಿಸಲು ಸ್ವಾತಂತ್ರ್ಯ ಹೋರಾಟಗಾರರು ಬಳಸಿಕೊಂಡ ಏಕೈಕ ಮಾರ್ಗವೇ ಧರಣಿ. ಸ್ವಾತಂತ್ರ್ಯ ನಂತರವೂ ಅಂದಿನ ಕಾಲಘಟ್ಟಕ್ಕೆ ತಕ್ಕಂತೆ ಹಲವು ಹೋರಾಟಗಳು ನಡೆದಿವೆ. ಆದರೆ ಇತ್ತೀಚಿನ ದಿನದಲ್ಲಿ, ಅದರಲ್ಲಿಯೂ ಕಳೆದೊಂದು 15 ದಿನದ ಅವಧಿಯಲ್ಲಿ ನಡೆದ ಬಂದ್ ಅಥವಾ ಪ್ರತಿಭಟನೆಗಳಿಗೆ ಮಹತ್ವ ಸಿಗಲಿಲ್ಲವೇ ಎನ್ನುವ ಪ್ರಶ್ನೆಗಳು ಶುರು ವಾಗಿದೆ.
ಅದರಲ್ಲಿಯೂ ಸ್ವಾತಂತ್ರ್ಯ ಬಳಿಕ ದೇಶದಲ್ಲಿ ರೈತರ ಹೋರಾಟಕ್ಕೆ ಜನರು ಸದಾ ಜತೆ ಇರುತ್ತಿದ್ದವು. ಕರ್ನಾಟಕ ಹಾಗೂ ಭಾರತದಲ್ಲಿ ನಡೆದಿರುವ ಬಹುತೇಕ ರೈತರ ಹೋರಾಟಕ್ಕೆ ಹೆಚ್ಚು ಅಪಸ್ವರ ಕೇಳಿಬಂದಿರಲಿಲ್ಲ. ಇದರೊಂದಿಗೆ ರೈತ ಸಂಘಟನೆ ಗಳು ಬಂದ್ಗೆ ಕರೆ ನೀಡಿವೆ ಎಂದರೆ, ಅಂದು ಖಚಿತವಾಗಿ ಬಂದ್ ಎನ್ನುವ ಲೆಕ್ಕಾಚಾರವಿತ್ತು. ಆದರೆ ಕೇಂದ್ರ ಸರಕಾರದ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಧರಣಿಗೆ ಕೆಲ ಸಂಘಟನೆಗಳು ಹಾಗೂ ಬಹುತೇಕ ಪಕ್ಷಗಳು ಬೆಂಬಲ ಸೂಚಿಸಿದ್ದರೂ,
ಭಾರತ್ ಬಂದ್ ವಿಷಯ ಬಂದಾಗ ಬಹುತೇಕ ರಾಜ್ಯಗಳಲ್ಲಿ
ಪೂರ್ಣ ಪ್ರಮಾಣದ ಸಹಕಾರ ಸಿಗಲಿಲ್ಲ. ಕೇಂದ್ರ ಸರಕಾರ ಹಾಗೂ ಹಲವು ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವುದರಿಂದ, ಭಾರತ ಬಂದ್ ಯಶಸ್ವಿಯಾಗಲು ಬಿಡಲಿಲ್ಲ ಎನ್ನುವ ವಾದವನ್ನು ಒಪ್ಪಬಹುದು. ಆದರೆ ಸರಕಾರದ ಮಾತನ್ನು ಮೀರಿ ಈ ಹಿಂದೆ ಅನೇಕ ಬಂದ್ಗಳು ಯಶಸ್ವಿಯಾಗಿರುವ ಉದಾಹರಣೆ ನಮ್ಮ ಮುಂದಿದೆ. ಈ ಬಾರಿ ಮಾತ್ರ ವಿಫಲವಾಗಲು ಕಾರಣ, ‘ಏನು ಸಾಧಿಸಲು ಹೊರಟಿದ್ದಾರೆ’ ಎನ್ನುವ ಬಗ್ಗೆ clarity ಇಲ್ಲ. ಇದರಿಂದ ಜನರಿಗೂ ಬೆಂಬಲಿಸಬೇಕೋ ಬೇಡವೋ ಎನ್ನುವ ಗೊಂದಲ ದಲ್ಲಿದ್ದಾರೆ.
ಇದರೊಂದಿಗೆ ಈ ವರ್ಷ ಕರೋನಾದಿಂದ ನಲುಗಿರುವ ಸಮಯದಲ್ಲಿ ಪುನಃ ಬಂದ್ ಎನ್ನುವ ಕಾರಣಕ್ಕೆ, ವ್ಯಾಪಾರ ವಹಿವಾಟು ಮುಚ್ಚಿದರೆ ಇಷ್ಟು ದಿನದ ನಷ್ಟದೊಂದಿಗೆ ಮತ್ತೊಂದು ಹೊಡೆತ ಎನ್ನುವ ಆತಂಕದಲ್ಲಿ ಅನೇಕರಿದ್ದಾರೆ. ಆದ್ದರಿಂದಲೇ ಭಾರತ್ ಬಂದ್ ವಿಷಯದಲ್ಲಿ ಬಹುತೇಕ ವ್ಯಾಪಾರ ಸಂಘಟನೆಗಳು ‘ನೈತಿಕ ಬೆಂಬಲ’ ಎನ್ನುವ ಮೂಲಕ ಹಿಂದಕ್ಕೆ ಸರಿದದ್ದು. ಅಂದ ಮಾತ್ರಕ್ಕೆ, ದೆಹಲಿಯಲ್ಲಿ ಪಂಜಾಬ್ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಿ, ಹಿಂದಕ್ಕೆ ಕಳುಹಿಸುವಲ್ಲಿಯೂ ಸರಕಾರ ಯಶಸ್ವಿಯಾಗಿಲ್ಲ. ಒಂದು ಹಂತದಲ್ಲಿ ಪಂಜಾಬ್ ರೈತರ ಧರಣಿಯನ್ನು ಕೇಂದ್ರ ಸರಕಾರ ನಿರ್ಲಕ್ಷ್ಯ ತೋರಿತ್ತು.
ಕೇಂದ್ರದ ಆ ಅಸಡ್ಡೆ ಧೋರಣೆ, ಕೇವಲ ಧರಣಿಯಲ್ಲಿದ್ದ ರೈತರು ಮಾತ್ರವಲ್ಲದೇ ಅವರಿಗೆ ಬೆಂಬಲಿಸಬೇಕು ಎನ್ನುವ ಧ್ವನಿಗಳಿಗೂ ಕಿಚ್ಚಿ ಹತ್ತಿಸಿತ್ತು. ಆದ್ದರಿಂದಲೇ, ಕೃಷಿ ಕಾರ್ಯದರ್ಶಿ ಸಂಧಾನದಿಂದ ಶುರುವಾದ ‘ಸಂಧಾನ ಕಾರ್ಯ’ ಕೇಂದ್ರ ಗೃಹ ಸಚಿವ
ಅಮಿತ್ ಶಾವರೆಗೆ ಬಂದು ತಲುಪಿತ್ತು. ರಾಜಕೀಯದಲ್ಲಿ ಎದುರಾದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿದ್ದ ಶಾ ಅವರಿಗೆ, ಪ್ರತಿಭಟನೆಯನ್ನು, ಕಾವನ್ನು ಕಡಿಮೆ ಮಾಡಲು ಅಥವಾ ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಪಂಜಾಬಿ ರೈತರು ದೆಹಲಿಯಲ್ಲಿ ಮಾಡಿದ ಪ್ರತಿಭಟನೆ ಒಂದು ಹಂತಕ್ಕೆ ಯಶಸ್ವಿಯಾದರೂ, ಅದೇ ಮಾದರಿಯಲ್ಲಿ ಕೋಡಿಹಳ್ಳಿ
ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಯಾವುದೇ ಕಿಮ್ಮತ್ತು ಸಿಗಲಿಲ್ಲ. ಅಲ್ಲಿನ ರೈತರ ಪ್ರತಿಭಟನೆ ಸಿಕ್ಕ ಮಾನ್ಯತೆ, ಕೋಡಿಹಳ್ಳಿ ಅವರ ನೇತೃತ್ವದ ಪ್ರತಿಭಟನಕಾರರಿಗೆ ಏಕೆ ಸಿಗಲಿಲ್ಲ ಎನ್ನುವ ಬಗ್ಗೆಯೂ ಯೋಚಿಸಬೇಕಿದೆ. ಎಂ.ಡಿ. ನಂಜುಂಡ ಸ್ವಾಮಿ ಅವರ ನೇತೃತ್ವದಲ್ಲಿದ್ದ ಕರ್ನಾಟಕ ರೈತ ಸಂಘಟನೆ ವೇಳೆ ‘ಹಸಿರು ಶಾಲು’ ತೊಟ್ಟವರು ಧರಣಿಗೆ ಬಂದರೆ ಇಡೀ
ಸರಕಾರ ಸ್ಥಳಕ್ಕೆ ಬರುವಂತ ವಾತಾವರಣವಿತ್ತು.
ಆದರೆ ಇತ್ತೀಚಿನ ಹಲವು ರೈತ ಮುಖಂಡರು ರೈತರ ಹಿತಕ್ಕಿಂತ ವೈಯಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಅಥವಾ ಕೆಲವೊಮ್ಮೆ ‘ಪ್ರಯೋಜಿತ ಧರಣಿ’ಗಳು ಹೆಚ್ಚಾಗುತ್ತಿದ್ದಂತೆ, ಇತ್ತ ರೈತ ಸಂಘಟನೆಗಳ sanctity ಸಹ ಕಡಿಮೆಯಾಗುತ್ತಾ ಸಾಗಿದೆ.
ಇನ್ನು ಕಳೆದೊಂದು ವಾರದಿಂದ ರೈತರ ಪ್ರತಿಭಟನೆಯ ಜತೆಜತೆ ಮತ್ತೆರೆಡು ಪ್ರತಿಭಟನೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಒಂದು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಹಾಗೂ ಸಾರಿಗೆ ನೌಕರರ ಅನಿರ್ದಿಷ್ಠಾವಧಿ ಮುಷ್ಕರ ಕೈಗೊಂಡಿದ್ದು.
ಮೊದಲಿಗೆ ಕನ್ನಡ ಪರ ಸಂಘಟನೆಗಳ ಬಂದ್ ವಿಷಯದ ಬಗ್ಗೆ ಹೇಳುವುದಾದರೆ, ಮರಾಠ ಅಭಿವೃದ್ಧಿ ಪ್ರಾಧಿಕಾರ
ಆರಂಭಿಸಿದ್ದಕ್ಕಾಗಿ ಮಾಡಿದ ಪ್ರತಿಭಟನೆ. ಸಹಜವಾಗಿ ಭಾಷೆ, ರಾಜ್ಯ, ಗಡಿ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆದ ಯಾವುದೇ ಬಂದ್ ಅಥವಾ ಪ್ರತಿಭಟನೆ ವಿಫಲವಾಗಿದ್ದನ್ನು ನಾವು ನೋಡಿಲ್ಲ. ಆದರೆ ಈ ಬಾರಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೀಡಿದ್ದ ಬಂದ್ನ ವಿಷಯ ಭಾರಿ ಸೂಕ್ಷ್ಮ ಹಾಗೂ ಭಾಷೆ, ನಾಡು ನುಡಿಗೆ ಪೂರಕವಾಗಿದ್ದಾದರೂ, ಬಹುತೇಕರು ವಾಟಾಳ್ ಅವರ ಕರ್ನಾಟಕ ಬಂದ್ಗೆ ಬೆಂಬಲಿಸಲಿಲ್ಲ.
ಇದಕ್ಕೆ ಕಾರಣವೇನು ಎಂದು ನೋಡಿದರೆ, ಈ ಹಿಂದೆ ವಾಟಾಳ್ ಹಾಗೂ ಹಲವು ಕನ್ನಡ ಪರ ಸಂಘಟನೆಗಳು ಬಂದ್ ಹೆಸರಲ್ಲಿ ಮಾಡಿದ ಕೆಲಸಗಳು. ಕನ್ನಡ ನಾಡು ನುಡಿಗೆ ಹೋರಾಟ ಮಾಡುವುದಕ್ಕಿಂತ ಹೆಚ್ಚಾಗಿ, ಈ ಬಂದ್, ಧರಣಿ, ಪ್ರತಿಭಟನೆಗಳಿಂದ
ತಮಗಾಗುವ ಲಾಭವೇನು ಎನ್ನುವ ಲೆಕ್ಕಾಚಾರದಲ್ಲಿಯೇ ಬಂದ್ಗೆ ಕರೆ ನೀಡಲಾಗುತ್ತಿತ್ತು. ಈ ರೀತಿಯ ನಡೆಯಿಂದ ವಾಟಾಳ್ ನಾಗರಾಜ್ ಪ್ರತಿಭಟನೆಗೆ ಇರುತ್ತಿದ್ದ ಪಾವಿತ್ರ್ಯತೆ ಕುಗ್ಗಿ ಹೋಯಿತು.
ಆದ್ದರಿಂದಲೇ ಮರಾಠ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮ ಆರಂಭಿಸಿದ್ದಕ್ಕೆ ಬಿಜೆಪಿಯಲ್ಲಿಯೇ ಭಾರಿ ವಿರೋಧ ವ್ಯಕ್ತವಾಗಿ ದ್ದರೂ, ಕರ್ನಾಟಕ ಬಂದ್ಗೆ ಮಾತ್ರ ಸೂಕ್ತ ರೀತಿಯಲ್ಲಿ ಬೆಂಬಲ ಸಿಗಲಿಲ್ಲ. ಆದರೆ ಕರೋನಾ ಬಳಿಕ ನಡೆದ ಪ್ರತಿಭಟನೆ ಅಥವಾ
ಮುಷ್ಕರದಲ್ಲಿ ಬಿಗಿಪಟ್ಟು ಸಾಽಸಿದ್ದು ಎಂದರೆ ಕಳೆದ ನಾಲ್ಕೈದು ದಿನದಿಂದ ನಡೆದ ಸಾರಿಗೆ ನೌಕರರ ಪ್ರತಿಭಟನೆ. ಈ ಮುಷ್ಕರದ ಬೇಡಿಕೆಯಾಗಿದ್ದು, ‘ನಿಗಮ ಮಂಡಳಿಯ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು’ ಎನ್ನುವುದಾಗಿತ್ತು. ಆದರೆ ಈ ಬೇಡಿಕೆ ನಿಜಕ್ಕೂ ಕಾರ್ಯ ಸಾಧುವೇ? ಎನ್ನುವ ಬಗ್ಗೆ ಯೋಚಿಸಬೇಕು.
ಇನ್ನು ಕಾನೂನಾತ್ಮಕವಾಗಿ ನೋಡುವುದಾದರೆ, ಕಳೆದ ಅಧಿವೇಶನದಲ್ಲಿಯೇ ಯಾವುದಾದರೂ ನಿಗಮ ಮಂಡಳಿ ಮುಚ್ಚಿ
ಹೋದರೆ, ಅವರನ್ನು ಸರಕಾರಿ ಇಲಾಖೆಗೆ ಶಿಫ್ಟ್ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಇದೀಗ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಲು ಸರಕಾರ ಒಪ್ಪಿದರೆ, ಬಾಕಿ ಯಿರುವ ನೂರಾರು ನಿಗಮ ಮಂಡಳಿಗಳ ನೌಕರರು ಇದೇ ಹಾದಿ ತುಳಿಯುವುದರಲ್ಲಿ ಅನುಮಾನವಿಲ್ಲ. ಕರೋನಾ ಬಿಕ್ಕಟ್ಟು ಇಲ್ಲದಿದ್ದರೂ, ಸಾರಿಗೆ ಇಲಾಖೆ ನೌಕರರ ಈ ಆಗ್ರಹವನ್ನು ಜಾರಿಗೊಳಿಸುವುದು ಯಾವುದೇ ಸರಕಾರಕ್ಕೆ ಕಷ್ಟಸಾಧ್ಯ ಎನ್ನುವು ದರನ್ನು ಮರೆಯಬಾರದು.
ಇನ್ನು ಈ ಬಾರಿ ಸಾರಿಗೆ ನೌಕರರ ಮುಷ್ಕರದ ವೇಳೆ ಕೇವಲ ಯೂನಿಯನ್ ಭಾಗವಹಿಸದೇ, ರೈತ ಸಂಘಟನೆಯ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದಾರೆ. ಕೋಡಿಹಳ್ಳಿ ಅವರು ಇದ್ದಕ್ಕಿದಂತೆ ಗೌರವಾಧ್ಯಕ್ಷರಾಗಲು ಕಾರಣವೇನು? ಸಾರಿಗೆ ಕ್ಷೇತ್ರಕ್ಕೆ ಸಂಬಂಽಸಿದಂತೆ ಕೋಡಿಹಳ್ಳಿ ಅವರಿಗೆ ಇರುವ ಅನುಭವವೇನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಸರಕಾರವನ್ನು ಬಗ್ಗುವಂತೆ ಮಾಡುವ ಇಲ್ಲವೇ, ಬೆದರಿಸುವ ತಂತ್ರದಿಂದ ಎಲ್ಲವೂ ಸಾಧ್ಯವಾಗುತ್ತದೆ ಎನ್ನುವ ಯೋಚನೆಯಿಂದ ಪ್ರತಿಭಟನಾ ನಿರತರು ಹೊರಬರಬೇಕು.
ಸರಕಾರವೂ, ನಾವು ಹೇಳಿದ್ದೇ ವೇದವಾಕ್ಯ ಎನ್ನುವ ಮನೋಭಾವದಿಂದ ಹೊರಬೇಕಾಗಿದೆ. ಹಾಗೇ ನೋಡಿದರೆ ಸುಪ್ರೀಂ ಕೋರ್ಟ್ ನೀಡಿರುವ ಒಂದು ತೀರ್ಪಿನಲ್ಲಿ ಈ ರೀತಿ ಬಲವಂತವಾಗಿ ಬಂದ್ ಮಾಡುವುದು ಅಥವಾ ಸಾರ್ವಜನಿಕರಿಗೆ ಸಮಸ್ಯೆ ಯಾಗುವ ರೀತಿ ತಿಂಗಳುಗಟ್ಟಲೆ ಪ್ರತಿಭಟನೆ ನಡೆಸುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವನ್ನು ಹೊರಹಾಕಿದೆ. ದೆಹಲಿ, ಬೆಂಗಳೂರು, ಮುಂಬೈನಂಥ ಬೃಹತ್ ನಗರಗಳಲ್ಲಿ ತಿಂಗಳುಗಟ್ಟಲೆ ಧರಣಿ ಕೂರುವುದರಿಂದ, ಬಗೆಹರಿಯಬೇಕಾದ ಸಮಸ್ಯೆ ಯೊಂದಿಗೆ, ಟ್ರಾಫಿಕ್ ಜಾಮ್ನಂಥ ಹೊಸ ಸಮಸ್ಯೆಗಳು ಉದ್ಭವ ವಾಗುತ್ತದೆ.
ಇದಕ್ಕೂ ಮೊದಲು ಕೆಲ ವರ್ಷದ ಹಿಂದೆ ಆಟದ ಮೈದಾನಗಳಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಅನೇಕರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದುಂಟು. ಹೀಗಿರುವಾಗ ತಿಂಗಳುಗಟ್ಟಲೇ ಕೂತ ಸ್ಥಳಬಿಟ್ಟು ಏಳುವುದಿಲ್ಲ ಎನ್ನುವುದು ಧೋರಣೆ ಸರಿಯೇ ಎನ್ನುವುದನ್ನು ಪ್ರಶ್ನಿಸಬೇಕಿದೆ. ಕೇಂದ್ರ ಸರಕಾರ ಕಳೆದ ವರ್ಷ ಸಿಎಎ ಹಾಗೂ ಎನ್ಆರ್ಸಿ ಕಾಯಿದೆಯನ್ನು ಜಾರಿಗೊಳಿಸಿದಾಗಲೂ, ಸರಕಾರದ ನಿರ್ಧಾರದ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿತ್ತು.
ಅದರಲ್ಲಿಯೂ ದೆಹಲಿಯ ಶಾಹೀನ್ ಬಾಗ್ನಲ್ಲಿ ತಿಂಗಳುಗಟ್ಟಲೇ ಪ್ರತಿಭಟನೆ ನಡೆಸಲಾಗಿತ್ತು. ಶಾಹೀನ್ಬಾಗ್ ರಸ್ತೆಯಲ್ಲಿ ನಡೆದ ಈ ಪ್ರತಿಭಟನೆಯಿಂದ ದೆಹಲಿಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗಬೇಕಾದರೆ, ದುಸ್ತರ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ದೇಶದಲ್ಲಿ ಕರೋನಾ ಕಾಣಿಸಿಕೊಂಡರೂ, ಶಾಹೀನ್ಬಾಗ್ನಲ್ಲಿ ಕೂತಿದ್ದವರು ಏಳಲು ಸಿದ್ಧವಾಗಿರಲಿಲ್ಲ. ಕೊನೆಗೆ ಈ ಪ್ರಕರಣ ಸುಪ್ರೀಂ ತನಕ ಹೋಗಿ, ನ್ಯಾಯಾಲಯ ಈ ರೀತಿ ಪ್ರತಿಭಟನೆ ಸೂಕ್ತವಲ್ಲ ಎನ್ನುವ ಸೂಚನೆ ನೀಡಿದ ಬಳಿಕವೇ ಧರಣಿ ನಿರತರು ಸ್ಥಳದಿಂದ ಎದ್ದದ್ದು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ್ ಅಥವಾ ಧರಣಿಗೆ ಅವಕಾಶ ನೀಡಲಾಗಿದೆ ಆದರೂ, ಒಂದು ಬಾರಿ ಬಂದ್ ಮಾಡುವು ದರಿಂದ ಆಗುವ ನಷ್ಟದ ಬಗ್ಗೆಯೂ ಯೋಚಿಸಬೇಕು. ಬೆಂಗಳೂರು ಒಂದನ್ನೇ ಲೆಕ್ಕದಲ್ಲಿಟ್ಟುಕೊಂಡು ನೋಡುವುದಾದರೆ, ಒಂದು ದಿನದ ಬಂದ್ಗೆ ಸುಮಾರು ಎಂಟರಿಂದ 9 ಸಾವಿರ ಕೋಟಿ ರು. ನಷ್ಟವಾಗುತ್ತದೆ. ಬೆಂಗಳೂರು ನಗರವೊಂದರಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ನಷ್ಟವಾಗಿದ್ದರೆ, ಇಡೀ ಕರ್ನಾಟಕ ಬಂದ್ ಮಾಡಿದರೆ, ಸರಕಾರ ಬೊಕ್ಕಸಕ್ಕೆ ಆಗಬಹುದಾದ ನಷ್ಟವನ್ನು
ಲೆಕ್ಕಹಾಕಬೇಕಿದೆ.
ಮೊನ್ನೆ ನಡೆದ ಭಾರತ್ ಬಂದ್ ಯಶಸ್ವಿಯಾಗದಿದ್ದರೂ, ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆಲ ರಾಜ್ಯಗಳಲ್ಲಿ ಬಂದ್ ಯಶಸ್ವಿಯಾಗಿದ್ದಕ್ಕೆ, ಸರಿಸುಮಾರು 32 ರಿಂದ 35 ಸಾವಿರ ಕೋಟಿ ರು. ನಷ್ಟ ವಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಇದಕ್ಕೂ ಮೊದಲು ಅನೇಕ ಬಾರಿ ಬಂದ್ ನಡೆದಾಗ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿ ರುವ ಉದಾಹರಣೆಗಳು ನಮ್ಮ ಮುಂದಿವೆ.
ಆದರೀಗ ನಷ್ಟವಾಗುವುದನ್ನು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡಬೇಕೆಂಬ ಕಾಯಿದೆ ಜಾರಿಯಾಗಿದೆ. ಆದರೆ ಅದು ನಿಜಕ್ಕೂ ಕಾರ್ಯಸಾಧುವೇ ಎನ್ನುವುದನ್ನು ಯೋಚಿಸುವುದು ಮತ್ತೊಂದು ವಿಷಯ. ಕರೋನಾ ಸೋಂಕಿನ ಪ್ರಮಾಣ ಈಗಿನ್ನು ಇಳಿಮುಖದತ್ತ ಇರುವಾಗ ಹಾಗೂ ನಷ್ಟದ ಹಾದಿಯಿಂದ ಲಾಭದತ್ತ ಉದ್ಯಮಗಳು ಹೊರಳುತ್ತಿರುವಾಗ ಬಂದ್ ಮಾಡುವುದ
ರಿಂದ ಸರಕಾರ ಹಾಗೂ ಸಾರ್ವಜನಿಕರಿಗೆ ಇಬ್ಬರಿಗೂ ನಷ್ಟ.
ಆದರಲ್ಲಿಯೂ ಕರ್ನಾಟಕದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ಕೈದು ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿದವು. ಈ ಮೂರು ಬಂದ್ಗಳು ಯಶಸ್ವಿಯಾಗಲಿಲ್ಲ. ಆದರೆ ಜನರಲ್ಲಿ ಮಾತ್ರ ಗೊಂದಲ ಮೂಡದೇ ಇರಲಿಲ್ಲ. ಕರೋನಾ ಇಳಿದು ಸಹಜ ಜೀವನದತ್ತ ಬರುತ್ತಿರುವ ಈ ಸಮಯದಲ್ಲಿ ಬಂದ್ ಮಾಡುವುದರಿಂದ, ಏನನ್ನು ಸಾಧಿಸಲು ಹೊರಟಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಅಂದ ಮಾತ್ರಕ್ಕೆ, ಎಲ್ಲದಕ್ಕೂ ಪ್ರತಿಭಟನಾಕಾರರೇ ಕಾರಣವಲ್ಲ. ಬಂದ್ ಅಥವಾ ಧರಣಿಯ ಮಾತುಗಳು ಕೇಳಿಬರುತ್ತಿದ್ದಂತೆ, ಸಂಬಂಧಪಟ್ಟ ಇಲಾಖೆ ಅಥವಾ ಸರಕಾರ ಮಧ್ಯಪ್ರವೇಶಿಸಿ ಸಂಧಾನ ಮಾಡುವ ಪ್ರಯತ್ನ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಸಾರಿಗೆ ಮುಷ್ಕರ ನಾಲ್ಕು ದಿನ ಎಳೆಯುವುದಕ್ಕೆ ಹಾಗೂ ದೆಹಲಿಯಲ್ಲಿ ರೈತರ ಪ್ರತಿಭಟನೆ 19ನೇ ದಿನ ಮುಗಿಸಿ 20ನೇ ದಿನದತ್ತ
ಹೋಗುವುದಕ್ಕೆ ಸರಕಾರ ಆರಂಭದಲ್ಲಿ ಮಾಡಿದ ನಿರ್ಲಕ್ಷ್ಯವೇ ಕಾರಣ.
ದೆಹಲಿ ರೈತರ ಪ್ರತಿಭಟನೆ ಬಗ್ಗೆ ಅನೇಕರು ಎಚ್ಚರಿಕೆ ನೀಡಿದರೂ, ಕೇಂದ್ರ ಸರಕಾರ ಈ ಪ್ರತಿಭಟನೆ ಇಷ್ಟು ದೂರ ಬರುತ್ತದೆ ಎಂದು ಲೆಕ್ಕ ಹಾಕಿರಲಿಲ್ಲ. ಅಂತಿಮವಾಗಿ ಇದೀಗ ಅಮಿತ್ ಶಾ ಮಧ್ಯಪ್ರವೇಶ ಮಾಡಿದರೂ, ಪ್ರತಿಭಟನೆ ಹಿಂಪಡೆಯುವುದಕ್ಕೆ ಆಗುವುದಿಲ್ಲ ಎನ್ನುವ ಸ್ಥಿತಿ ತಲುಪಿದೆ. ಇದೇ ರೀತಿ ಕರ್ನಾಟಕದಲ್ಲಿಯೂ ಸಾರಿಗೆ ಮುಷ್ಕರ ನಡೆಯುತ್ತಿದೆ ಎನ್ನುವುದು ಲಕ್ಷ್ಮಣ ಸವದಿ ಅಥವಾ ನಿಗಮ ಮಂಡಳಿಯ ಅಧ್ಯಕ್ಷರ ಗಮನಕ್ಕೆ ಬರುತ್ತಿದ್ದಂತೆ, ಕರೆದು ಕೂರಿಸಿ ಮಾತನಾಡಿದ್ದರೆ, ನಾಲ್ಕು ದಿನ ರಾಜ್ಯದ ಸಾರಿಗೆ ನಿಲ್ಲುತ್ತಿರಲಿಲ್ಲ.
ಆದ್ದರಿಂದ ಆಡಳಿತ ನಡೆಸುವ ಸರಕಾರಗಳು ಹಾಗೂ ಬೇಡಿಕೆ ಈಡೇರಿಕೆಗೆ ಆಗ್ರಹಿಸುವ ಪ್ರತಿಭಟನಾ ನಿರತರು ‘ಪ್ರತಿಷ್ಠೆ’ಯನ್ನು ಬದಿಗಿಡಬೇಕು. ಸರಕಾರಗಳು ಮೊಂಡುತನ ಪ್ರದರ್ಶನ ಮಾಡುತ್ತಿರುವಾಗ, ಧರಣಿ, ಬಂದ್ ಅನಿವಾರ್ಯ. ಆದರೆ ಅದನ್ನು ಬಿಟ್ಟು ಸರಕಾರವನ್ನು ಬೆದರಿಸುವುದಕ್ಕಾಗಿಯೇ ‘ಪ್ರತಿಭಟನೆ’ಯ ಅಸ್ತ್ರ ಪ್ರಯೋಗಿಸುವುದು ಒಪ್ಪುವ ಮಾರ್ಗವಲ್ಲ.