Friday, 22nd November 2024

ಬೌದ್ಧ ಧರ್ಮದ ಅವನತಿಗೆ ಕಾರಣರಾರು?

-ಗಣೇಶ್ ಭಟ್ ವಾರಾಣಸಿ

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಡಹಬ್ಬ ದಸರಾ ಪ್ರಾರಂಭವಾಗುವುದರ ಜತೆಗೆ ವಿವಾದವೂ ಶುರುವಾಗುತ್ತದೆ. ನವರಾತ್ರಿಯ ೯ ದಿವಸಗಳಲ್ಲಿ ನಾಡದೇವಿ ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡಿ
ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಹಿಂದೂಧರ್ಮದ ವೈದಿಕ ವಿಧಿವಿಧಾನಗಳ ಮೂಲಕ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯು ೯ ದಿನ ಯುದ್ಧ ನಡೆಸಿ ರಾಕ್ಷಸ ಮಹಿಷಾಸುರನನ್ನು ವರ್ಧಿಸಿದಳು ಎನ್ನುತ್ತದೆ ಪುರಾಣ. ಹೀಗಾಗಿ ೯ ದಿನವಸಗಳನ್ನು ‘ನವರಾತ್ರಿ’ ಎಂದು ಆಚರಿಸಲಾಗುತ್ತದೆ. ಶ್ರೀಮದ್ ದೇವೀ ಭಾಗವತದ ೫ನೇ ಸರ್ಗದಲ್ಲಿ ದೇವಿಯು ಮಹಿಷಾಸುರನನ್ನು ವರ್ಧಿಸುವ ಪ್ರಸಂಗವಿದೆ. ದೊಡ್ಡ ದೇವರಾಜ ಒಡೆಯರ ಕಾಲದಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನ ಮೂರ್ತಿಯನ್ನು ಸ್ಥಾಪಿಸಲಾಯಿತು. ವಿವಾದಾತ್ಮಕ ಹೇಳಿಕೆಯ ಮೂಲಕವೇ ಸುದ್ದಿಯಲ್ಲಿರುವ ಮಹೇಶ್ಚಂದ್ರ ಗುರು, ಕೆ.ಎಸ್. ಭಗವಾನ್ ಮೊದಲಾದವರು ೨೦೧೫ರಲ್ಲಿ ಪತ್ರಿಕಗೋಷ್ಠಿ ನಡೆಸಿ, ‘ಮಹಿಷ ರಾಕ್ಷಸನಲ್ಲ, ಆತ ಬೌದ್ಧ ಸನ್ಯಾಸಿಯಾಗಿದ್ದ’ ಎಂದು ಹೇಳಿಕೆ ನೀಡಿದರು. ಇವರು ೨೦೧೮ರಲ್ಲಿ ಚಾಮುಂಡಿ ಬೆಟ್ಟದ ಮಹಿಷಾಸುರನ
ಮೂರ್ತಿಯ ಬಳಿ ಪ್ರಾರ್ಥನೆ ನಡೆಸಿ ‘ಮಹಿಷ ಹಬ್ಬ’ ಅಥವಾ ‘ಮಹಿಷ ದಸರಾ’ ಎಂಬ ಆಚರಣೆಗಳನ್ನು ಆರಂಭಿಸಿದರು.

೨೦೧೯ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಶುರುವಾದ ನಂತರ ಮಹಿಷ ದಸರಾ ಆಚಣೆಗೆ ಸರಕಾರ ಅವಕಾಶ ಕೊಡಲಿಲ್ಲ. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹರು ಮಹಿಷ ದಸರಾ ಆಚರಣೆಯ ವಿರುದ್ಧ ಗಟ್ಟಿಯಾಗಿನಿಂತು ಅದನ್ನು ತಡೆಯುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ಕಾರಣ ಮಹಿಷ ದಸರಾಗೆ ಮರುಜೀವ ಬಂದಿದೆ. ಅಕ್ಟೋಬರ್ ೧೩ರಂದು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಇದನ್ನು ಆಚರಿಸಲಾಗುವುದು ಎಂದಿದ್ದಾರೆ ಮಹೇಶ್ಚಂದ್ರ ಗುರು. ಈಚೀಚೆಗೆ ಕೆಲ ಬುದ್ಧಿಜೀವಿಗಳು ಮಹಿಷ, ರಾವಣರನ್ನು ‘ಬೌದ್ಧ’ ಎಂದು ಕರೆಯುವುದು ಸಾಮಾನ್ಯವಾಗಿದೆ. ಹಿಂದೂ
ಧರ್ಮದ ಪುರಾಣಗಳ ಹೊರತಾಗಿ ಬೌದ್ಧಧರ್ಮದ ಯಾವ ಗ್ರಂಥದಲ್ಲೂ ಮಹಿಷನ ಪ್ರಸ್ತಾಪವೇ ಇಲ್ಲ. ಇನ್ನು ವಾಲ್ಮೀಕಿ ರಾಮಾಯಣದ ಪ್ರಕಾರ, ರಾವಣನು ಬ್ರಾಹ್ಮಣನಾದ ಪುಲಸ್ತ್ಯನ ಮೊಮ್ಮಗ, ವಿಶ್ರವಸ್ಸಿನ ಮಗ. ಆತ ಮಹಾನ್ ಶಿವಭಕ್ತ, ವೇದವಿದ್ವಾಂಸ. ಬೌದ್ಧಧರ್ಮದಲ್ಲಿ ‘ದಶರಥ ಜಾತಕ’ ಹೆಸರಿನಲ್ಲಿ ಒಂದು ರಾಮಾಯಣ ಕಥೆಯಿದೆ. ಇದರ ಪ್ರಕಾರ, ರಾಮನು ಬುದ್ಧನ ಹಿಂದಿನ ಜನ್ಮ. ಈ ಕಥೆಯಲ್ಲಿ ಶ್ರೀರಾಮನನ್ನು ‘ರಾಮಪಂಡಿತ ಬೋಧಿಸತ್ವ’ ಎಂದು ಕರೆಯಲಾಗಿದೆ. ಆದರೆ ಇದರಲ್ಲಿ ರಾವಣನ ಪಾತ್ರವೇ ಇಲ್ಲ. ಇಂಥ ಕಥೆಗಳನ್ನು ಕಟ್ಟುವುದರ ಹಿಂದೆ ಒಡೆದಾಳುವ ಕುಟಿಲ ತಂತ್ರವಿದೆ. ‘ಸನಾತನ ಧರ್ಮದ ಕರ್ಮಠತೆಗೆ ಬೇಸತ್ತು ಬೌದ್ಧಮತವನ್ನು ಹುಟ್ಟುಹಾಕಲಾಯಿತು; ಸನಾತನ ಧರ್ಮವು ಬೌದ್ಧಮತವನ್ನು ಭಾರತದಿಂದ ಹೊರಗೋಡಿಸಿತು’ ಎಂಬೆಲ್ಲ ಅಪಪ್ರಚಾರವನ್ನು ಕೆಲವು ಬುದ್ಧಿಜೀವಿಗಳು, ಎಡಪಂಥೀಯರು ಮಾಡುತ್ತಿದ್ದಾರೆ.

ಪಿ.ಲಂಕೇಶರು ಗೌತಮ ಬುದ್ಧನ ಬಗ್ಗೆ ಬರೆದ ‘ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ’ ಎಂಬ ಲೇಖನದ ಅಂತ್ಯದಲ್ಲಿ ‘ಸಿದ್ಧಾರ್ಥನನ್ನು ಆತನ ಕಾಣ್ಕೆಯೊಂದಿಗೇ ಹೊರಟ್ಟಿದ ಭಾರತೀಯ’ ಎಂದು ಹೇಳಿ, ಬೌದ್ಧಮತವನ್ನು ಭಾರತೀಯ ಸನಾತನ ಧರ್ಮವು ಹೊರಗಟ್ಟಿತು ಎಂದು ಸೂಚ್ಯವಾಗಿ ಹೇಳಿದ್ದರು. ಭಾರತದಲ್ಲಿ ಬೌದ್ಧಧರ್ಮದ ಅವನತಿಯಾದುದಕ್ಕೆ ಹಿಂದೂಧರ್ಮವನ್ನು ದೂಷಿಸುವ ಪ್ರಕ್ರಿಯೆ ಹೀಗೆ ಆರಂಭವಾಯಿತು. ಶೈವ, ವೈಷ್ಣವ, ಗಾಣಪತ್ಯ, ಶಾಕ್ತೇಯ ಹಾಗೂ ಸೌರ ಪಂಥಗಳು, ನಾಸ್ತಿಕ ಚಾರ್ವಾಕ, ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮೊದಲಾದ ಸಿದ್ಧಾಂತಗಳು ಸನಾತನ ಧರ್ಮದ ನೆರಳಿನಲ್ಲಿ ಉದಯಿಸಿದಂತೆಯೇ, ಬೌದ್ಧ ಮತ್ತು ಜೈನ ಮತಗಳು ಸನಾತನ ಪರಂಪರೆಯಲ್ಲಿ ಬೆಳೆದವು. ಉಪನಿಷತ್ತುಗಳು ಪ್ರತಿಪಾದಿಸಿದ ‘ಆತ್ಮತತ್ತ್ವ’ವನ್ನು ಗೌತಮ ಬುದ್ಧನೂ ಒಪ್ಪಿದ್ದ ಎಂದು ಶತಾವಧಾನಿ ಡಾ. ಆರ್. ಗಣೇಶರು ಹೇಳುತ್ತಾರೆ. ‘ಶಂಕರಚಾರ್ಯರು ಹಾಗೂ ಬುದ್ಧನ ಚಿಂತನೆಗಳಲ್ಲಿ ಅಭಿಪ್ರಾಯಭೇದ ಕಾಣಿಸಿಕೊಳ್ಳುತ್ತದೆ. ಕಾಲದಿಂದ ಕಾಲಕ್ಕೆ ಕೆಲವು ತತ್ತ್ವಗಳನ್ನು ತಿರುಚಿರುವ ಸಾಧ್ಯತೆಗಳೂ ಇವೆ. ಹಾಗೆಂದು ಎರಡೂ ಚಿಂತನೆಗಳಲ್ಲಿ ದೊಡ್ಡ ವ್ಯತ್ಯಾಸವಿದೆ ಎನ್ನುವುದು ಸರಿಯಲ್ಲ’ ಎಂದೂ ಅವರು ಹೇಳುತ್ತಾರೆ.

ಬೌದ್ಧ ಹಾಗೂ ಹಿಂದೂ ಧರ್ಮದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಹಿಂದೂ ಧರ್ಮದಲ್ಲಿರುವಂತೆಯೇ ಬೌದ್ಧ ಮತದಲ್ಲೂ ಕರ್ಮ ಸಿದ್ಧಾಂತ, ಪುನರ್ಜನ್ಮ, ಮೋಕ್ಷ, ಧ್ಯಾನ, ಯೋಗ, ಮಂತ್ರ, ಮುದ್ರೆ ಮೊದಲಾದ ಕಲ್ಪನೆಗಳಿವೆ. ಜಾತಕ ಕಥೆಗಳಲ್ಲಿ ಬುದ್ಧನು ಬೋಧಿಸತ್ವನಾಗಿ ವಿವಿಧ ಜನ್ಮಗಳನ್ನು ತಳೆಯುವುದರ ಬಗ್ಗೆ ಕಥೆಗಳಿವೆ. ಹಿಂದೂ ಧರ್ಮದಂತೆಯೇ ಬೌದ್ಧರ ಮಹಾಯಾನ ಪಂಥದಲ್ಲೂ ವಿಗ್ರಹಾರಾಧನೆಯಿದೆ.
ಶಾಕ್ಯಮುನಿ ಗೌತಮ ಬುದ್ಧ ಜನಿಸಿದ್ದು ಸನಾತನ ಧರ್ಮದ ಸೂರ್ಯವಂಶದ ಇಕ್ಷ್ವಾಕು ರಾಜವಂಶದಲ್ಲಿ. ಶ್ರೀರಾಮನು ಜನಿಸಿದ್ದೂ ಇಕ್ಷ್ವಾಕು ಕುಲದಲ್ಲೇ. ಜೈನಮತದ ಮೊದಲ ತೀರ್ಥಂಕರ ಋಷಭನಾಥದೇವ ಜನಿಸಿದ್ದೂ ಇದೇ ಕುಲದಲ್ಲಿ. ಹೀಗಿರುವಾಗ ಬುದ್ಧ ಸನಾತನಿಯಲ್ಲದಿರಲು ಹೇಗೆ ಸಾಧ್ಯ? ಆದಿ ಶಂಕರಾಚಾರ್ಯರು ಬೌದ್ಧರನ್ನು ಹತ್ಯೆಮಾಡಿದರು ಎಂಬ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ಶಂಕರಾಚಾರ್ಯರು
ದೇಶವನ್ನು ೩ ಬಾರಿ ಸುತ್ತುಹಾಕಿ ಶೈವ, ವೈಷ್ಣವ, ಶಾಕ್ತೇಯ, ಗಾಣಪ್ಯ ಮತ್ತು ಸೌರ ಎಂಬ ಪಂಥಗಳ ಸಂಘರ್ಷದಲ್ಲಿ ಹರಿದು ಹಂಚಿಹೋಗಿದ್ದ ಸನಾತನ ಧರ್ಮವನ್ನು ಒಗ್ಗೂಡಿಸಿದರು. ಈ ೫ ಪಂಥಗಳ ದೇವರನ್ನೂ ಒಟ್ಟಾಗಿರಿಸಿ ಪೂಜಿಸುವ ‘ಪಂಚಾಯತನ ಪೂಜಾವಿಧಿ’ಯನ್ನು ಅವರು ರೂಪಿಸಿದ್ದು ಈ ಉದ್ದೇಶದಿಂದಲೇ. ಸನಾತನ ಧರ್ಮದ ಕರ್ಮಸಿದ್ಧಾಂತದ ಕರ್ಮಠರ ಜತೆ ವಾದಿಸಿ ಸೋಲಿಸಿದ ಶಂಕರರು, ತಾವು ಪ್ರತಿಪಾದಿಸುತ್ತಿದ್ದ ಜ್ಞಾನ ಸಿದ್ಧಾಂತದೆಡೆಗೆ ಅವರನ್ನು ಕರೆತಂದು ಸನಾತನ ಧರ್ಮದಲ್ಲಿ ಚಾಲ್ತಿಯಲ್ಲಿದ್ದ ಪ್ರಾಣಬಲಿಯಂಥ ಹಿಂಸಾಸಹಿತ ಆರಾಧನೆಗಳನ್ನು ಕಡಿಮೆಗೊಳಿಸಿದರು. ಕುಮಾರಿಲಭಟ್ಟರ ಶಿಷ್ಯರಾದ
ಮಂಡನಮಿಶ್ರರನ್ನು ಶಂಕರರು ವಾದದ ಮೂಲಕ ಸೋಲಿಸಿ ತಮ್ಮ ಶಿಷ್ಯರಾಗಿ ಸೇರಿಸಿಕೊಳ್ಳುವುದರೊಂದಿಗೆ, ಸನಾತನ ಧರ್ಮದಲ್ಲಿ ಕರ್ಮಸಿದ್ಧಾಂತದ ಪ್ರಭಾವ ಅಳಿದು ಸುಧಾರಣೆ ಯಾಯಿತು.

ಆದರೆ ಶಂಕರರು ಬೌದ್ಧರ ಜತೆ ಯುದ್ಧ ಮಾಡಿದ್ದಕ್ಕೆ ಬಿಡಿ, ವಾದ ಮಾಡಿದ್ದಕ್ಕೂ ಇತಿಹಾಸದಲ್ಲಿ ಸಾಕ್ಷಿಗಳಿಲ್ಲ. ಹೀಗಾಗಿ ಅವರು ಬೌದ್ಧಮತವನ್ನು ನಾಶಮಾಡಿದರು ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ಇನ್ನು
ಬ್ರಾಹ್ಮಣರು ಬೌದ್ಧಮತವನ್ನು ನಾಶಮಾಡಿದರು ಎನ್ನುವ ಇನ್ನೊಂದು ಆರೋಪವಿದೆ. ಗೌತಮ ಬುದ್ಧನ ಮೊದಲ ಅನುಯಾಯಿ ಕೌಂಡಿನ್ಯ ಬ್ರಾಹ್ಮಣನಾಗಿದ್ದ. ನದೀ ಕಶ್ಯಪ, ವರವೇಲ ಕಶ್ಯಪ, ಸಾರಿಪುತ್ರ, ಮೌದ್ಗಲಾಯನ ಎಂಬ ಆತನ ಇತನ ಶಿಷ್ಯರೂ ವೇದಾಧ್ಯಯನ ಮಾಡಿದ ಬ್ರಾಹ್ಮಣರೇ ಆಗಿದ್ದರು ಎನ್ನುತ್ತಾರೆ ಆರ್.ಗಣೇಶ್. ಕ್ರಿ.ಶ. ೪-೫ನೇ ಶತಮಾನದಲ್ಲಿ ಹೂಣರು, ನಂತರದ ಕಾಲದ ಇಸ್ಲಾಮಿಕ್ ದಾಳಿಕೋರರ ಆಕ್ರಮಣವಾಗಿದ್ದು ಮತ್ತು ಬೌದ್ಧಮತವು ಸುಮಾರು ೧೮ ಪಂಥಗಳಾಗಿ ಹೋಳಾಗಿದ್ದು ಬೌದ್ಧಧರ್ಮದ ನಾಶಕ್ಕೆ ಕಾರಣವಾದವು. ಇಸ್ಲಾಮಿಕ್ ದಾಳಿಕೋರರು ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಮಧ್ಯ ಭಾರತಗಳಲ್ಲಿದ್ದ ಬೌದ್ಧಸ್ತೂಪ, ವಿಹಾರಗಳನ್ನು ನಾಶಮಾಡಿ (ನಳಂದಾ, ತಕ್ಷಶಿಲೆಯಂಥ ವಿಶ್ವವಿದ್ಯಾಲಯಗಳು ನಾಶವಾಗಿದ್ದೂ ಇವರಿಂದಲೇ), ಬೌದ್ಧರನ್ನು ಇಸ್ಲಾಮಿಗೆ ಬಲವಂತವಾಗಿ ಮತಾಂತರಿಸಿದರು, ಮತಾಂತರಕ್ಕೆ ಒಪ್ಪದವರನ್ನು ಕೊಂದರು.

ಅಫ್ಘಾನಿಸ್ತಾನದಲ್ಲಿನ ಬಾಮಿಯಾನ್ ಬುದ್ಧನ ಅಪೂರ್ವ ಬೃಹತ್ ಮೂರ್ತಿಯ ನಾಶಕ್ಕೆ ಔರಂಗಜೇಬ್ ಹಲವು ವಿಫಲಯತ್ನಗಳನ್ನು ಮಾಡಿದ್ದ. ಅಹಿಂಸೆಯ ಹೆಸರಲ್ಲಿ ಬೌದ್ಧರು ತಮ್ಮನ್ನು ತಾವು ರಕ್ಷಿಸಿಕೊಳ್ಳದವರಾಗಿದ್ದು ಮತ್ತು ಹಲವು ಪಂಥಗಳ ನಡುವಿನ ಸಂಘರ್ಷಗಳು ಭಾರತದಲ್ಲಿ ಬೌದ್ಧಧರ್ಮವನ್ನು ನಿರ್ನಾಮ ಮಾಡಿದವು. ವರ್ತಮಾನದಲ್ಲೂ ಬೌದ್ಧಮತದ ಮೇಲೆ ಆಕ್ರಮಣಗಳಾಗಿವೆ. ಟಿಬೆಟ್ ಅನ್ನು ಆಕ್ರಮಿಸಿದ ಚೀನಾ, ಬೌದ್ಧರ ಗುರು ದಲೈ ಲಾಮಾ ಮತ್ತು ಅವರ ಅನುಯಾಯಿಗಳನ್ನು ಅಲ್ಲಿಂದ ಓಡಿಸಿತು. ದಲೈ ಲಾಮಾ ಹಾಗೂ ಅವರ ೧.೫ ಲಕ್ಷದಷ್ಟು ಅನುಯಾಯಿಗಳು ಇಂದಿಗೂ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಬುದ್ಧಾನುಯಾಯಿಗಳಿದ್ದರೂ ಅಲ್ಲಿನ ಕಮ್ಯುನಿಸ್ಟ್ ಆಡಳಿತ ಅವರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡುತ್ತಿಲ್ಲ. ಈ ಧರ್ಮವು ಕಮ್ಯುನಿಸಂಗೆ ಪರ್ಯಾಯವಾಗಿ ಬೆಳೆದು ಜನರಿಗೆ ಸರಕಾರದ ಮೇಲಿನ ನಿಷ್ಠೆ ಕಡಿಮೆಯಾಗಬಹುದೆಂಬುದು ಚೀನಾ ಸರಕಾರದ ಭಯ. ವರ್ತಮಾನದಲ್ಲಿ ಜಪಾನ್, ದಕ್ಷಿಣ ಕೊರಿಯಾ ಮತ್ತು ಈಶಾನ್ಯ ಭಾರತದಲ್ಲಿ ಕ್ರೈಸ್ತಧರ್ಮದ ಕಾರಣದಿಂದಾಗಿ ಬೌದ್ಧಮತ ಕುಸಿತ ಕಂಡಿದೆ. ಇವನ್ನೆಲ್ಲ ಗಮನಿಸಿದರೆ, ಸನಾತನ ಧರ್ಮದಿಂದಾಗಿ ಭಾರತದಲ್ಲಿ ಬೌದ್ಧಮತ ನಾಶವಾಯಿತು ಎನ್ನುವುದು ಅಪಪ್ರಚಾರವೆಂದು ಅರ್ಥವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)